ಬುಧವಾರ, ಏಪ್ರಿಲ್ 21, 2021
30 °C

ಪತ್ರಿಕೋದ್ಯಮ ಎಂದರೆ ಕಲಿಸಿದ್ದನ್ನೇ ಕಲಿಸುತ್ತ...ತಿದ್ದಿದ್ದನ್ನೇ ತಿದ್ದುತ್ತ ಇರುವುದೇ?

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಅವರ ಹೆಸರು ಗುಬ್ಬಿ ರೇವಣಾರಾಧ್ಯ. ‘ಪ್ರಜಾವಾಣಿ’ಯ ಹಳೆಯ ಓದುಗ. ಸಂಗತಿಗಳು ತಪ್ಪಾದರೆ ಕೆಂಡವಾಗುವ ಮನುಷ್ಯ. ಸಂಬಂಧಪಟ್ಟವರಿಗೆ ಫೋನ್ ಮಾಡಿ ದೂರು ಹೇಳದೇ ಇದ್ದರೆ ಅವರಿಗೆ ಸಮಾಧಾನವಿಲ್ಲ. ಮೂರು ಅಥವಾ ಮೂರುವರೆ ರೂಪಾಯಿಗೆ ಒಂದು ಪತ್ರಿಕೆ ಕೊಂಡು ಅದನ್ನು ಪೂರ್ತಿಯಾಗಿ ಓದಿ ಅದರಲ್ಲಿ ಏನಾದರೂ ತಪ್ಪು ಇದ್ದರೆ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತರಲು ಕನಿಷ್ಠ ಎರಡು ರೂಪಾಯಿಗಳನ್ನು ದೂರವಾಣಿಗಾಗಿ ಖರ್ಚು ಮಾಡಬೇಕು.ಸಂಬಂಧಪಟ್ಟವರು ಒಂದು ಸಾರಿ ಸಿಗದೇ ಇದ್ದರೆ ಅವರು ಸಿಗುವವರೆಗೂ ಮತ್ತೆ ಮತ್ತೆ ಫೋನ್ ಮಾಡುವ ಹಟ ಅವರದು. ರೇವಣಾರಾಧ್ಯರ ಫೋನ್ ಬಂದಿತ್ತು ಅಥವಾ ಬಂತು ಎಂದರೆ ಪತ್ರಿಕೆಯಲ್ಲಿ ಏನಾದರೂ ತಪ್ಪಾಗಿರಬೇಕು ಎಂದು ಗ್ಯಾರಂಟಿ. ಅವರು ಫೋನ್ ಮಾಡಿ ತಪ್ಪನ್ನು ಮಾತ್ರ ಗುರುತಿಸುವುದಿಲ್ಲ.‘ಇದು ಭಾರಿ ದೊಡ್ಡ ತಪ್ಪು.ಅದನ್ನು ಯಾರು ಮಾಡಿದ್ದಾರೋ ಅವರನ್ನು ನೇಣಿಗೆ ಹಾಕಿ’ ಎಂದೂ ತಾಕೀತು ಮಾಡುತ್ತಾರೆ! ತುಮಕೂರಿನ ಒಬ್ಬ ಓದುಗರೂ ಇದೇ ರೀತಿ ನಮಗೆ ಹೆಚ್ಚೂ ಕಡಿಮೆ  ಪತ್ರಿಕೆಯಲ್ಲಿ ಆಗಿರುವ ತಪ್ಪುಗಳನ್ನು ತೋರಿಸಿ ವಾರಕ್ಕೆ ಎರಡು ಪತ್ರ ಬರೆಯುತ್ತಿದ್ದರು. ಅವರಿಗೆ ನಾವು ಸುಧಾರಿಸುವುದಿಲ್ಲ ಅನಿಸಿತೋ ಏನೋ ಗೊತ್ತಿಲ್ಲ ಪತ್ರ ಬರೆಯುವುದನ್ನು ನಿಲ್ಲಿಸಿದರು.ಓದುಗರು ಪತ್ರ ಬರೆಯಲಿ, ಬರೆಯದೇ ಇರಲಿ ಪ್ರತಿ ಪತ್ರಿಕೆಯಲ್ಲಿ ಆಂತರಿಕವಾಗಿ ಇಂಥ ತಪ್ಪುಗಳನ್ನು ಕಂಡು ಹಿಡಿದು ತಿದ್ದುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಪ್ರತಿ ಪತ್ರಿಕೆಯಲ್ಲೂ ಒಂದು ಸ್ಟೈಲ್ ಶೀಟು ಎಂದೂ ಇರುತ್ತದೆ. ಊರಿನ, ವ್ಯಕ್ತಿಗಳ ಹೆಸರುಗಳನ್ನು ಹೇಗೆ ಬರೆಯಬೇಕು ಎಂಬ ಬಗ್ಗೆ ಅದು ಒಂದು ಕೈಗನ್ನಡಿ ಇದ್ದಂತೆ. ಸಾಮಾನ್ಯವಾದ ತಪ್ಪುಗಳನ್ನು ಪಟ್ಟಿ ಮಾಡಿ ಒಂದು ಒಪ್ಪೋಲೆಯನ್ನೂ ಸಿದ್ಧಪಡಿಸಲಾಗುತ್ತದೆ.ಪ್ರತಿದಿನದ ಮಧ್ಯಾಹ್ನದ ಸಂಪಾದಕೀಯ ಸಭೆಯ ನಂತರ ಅಂದಿನ ಪತ್ರಿಕೆಗಳಲ್ಲಿ ಆದ ತಪ್ಪುಗಳ ಪಟ್ಟಿ ಮಾಡಿ ಅದರ ಸರಿ ರೂಪವನ್ನೂ ಸಭೆಯ ನೋಟ್‌ನಲ್ಲಿ ಸೇರಿಸಲಾಗುತ್ತದೆ. ಆದರೂ ಪತ್ರಿಕೆಗಳಲ್ಲಿ ಪದೇ ಪದೇ ಅದೇ ತಪ್ಪುಗಳು ನುಸುಳುತ್ತವೆ. ನುಸುಳುತ್ತಲೇ ಇರುತ್ತವೆ.ನಾವು ಪತ್ರಿಕೆ ಸೇರಿದ್ದು 30 ವರ್ಷಗಳ ಹಿಂದೆ. ಮೊದಲ ದಿನವೋ ಎರಡನೇ ದಿನವೋ ನಮ್ಮ ಜತೆ ವೃತ್ತಿಗೆ ಸೇರಿದ ಒಬ್ಬರಿಗೆ, ‘ಸುದ್ದಿ ಮತ್ತು ಶಬ್ದ ಎರಡೂ ಅಲ್ಪ ಪ್ರಾಣ, ಮಹಾಪ್ರಾಣ ಬರೆಯಬೇಕಿಲ್ಲ’ ಎಂದು ಹೇಳಿಕೊಟ್ಟುದು ನನಗೆ ಇಂದಿಗೂ ನೆನಪು ಇದೆ.

ಆರಂಭದ ದಿನಗಳಲ್ಲಿಯೇ  ಪ್ರಜಾವಾಣಿಯಲ್ಲಿ ಗೋಸ್ಕರ, ಗೋಸುಗ, ಸಲುವಾಗಿ, ಅಲ್ಪಡು ಪ್ರಯೋಗಗಳು ಇಲ್ಲ ಎಂದೂ ಹೇಳಿಕೊಟ್ಟರು. ಅದೇ ಮಾತನ್ನು ಮುಂದಿನ ತಲೆಮಾರಿನವರಿಗೂ ನಾವು ಹೇಳಿಕೊಂಡು ಬಂದಿದ್ದೇವೆ. ಸೋಜಿಗ ಎನ್ನಬೇಕೇ, ವಿಚಿತ್ರ ಎನ್ನಬೇಕೇ ಅಥವಾ ಸಂವಹನ ಸಾಮರ್ಥ್ಯದ ಸೋಲು ಎನ್ನಬೇಕೇ ಗೊತ್ತಿಲ್ಲ.

ಮೊನ್ನೆ ಮೊನ್ನೆ ನಮ್ಮ ಪತ್ರಿಕೆಯ ಒಂದು ಸುದ್ದಿಯ ಹೆಡ್ಡಿಂಗ್‌ನಲ್ಲಿಯೇ ಗೋಸ್ಕರ ಪದ ಬಳಕೆಯಾಯಿತು. ಅದೇ ದಿನ ಕೊಳೆಗೇರಿ ಬದಲು ಕೊಳಗೇರಿಯೂ ಹೆಡ್ಡಿಂಗ್‌ನಲ್ಲಿಯೇ ಬಂತು. ತಪ್ಪು-ಒಪ್ಪು ಪದಗಳ ಫಲಕದಲ್ಲಿ ಒಪ್ಪು ರೂಪ ಇದ್ದಾಗಲೂ ತಪ್ಪು ರೂಪ ಬಳಕೆಯಾದ ಉದಾಹರಣೆಗೂ ಕೊರತೆಯಿಲ್ಲ.ಹಿಂದಿನ ಕಾಲದಲ್ಲಿ ಅಂದರೆ ನಾವು ವೃತ್ತಿಗೆ ಸೇರಿದ ಹೊಸದರಲ್ಲಿ ಮುಖ್ಯಸ್ಥರ ಸಮ್ಮುಖದಲ್ಲಿ ಎರಡೂ ಬದಿಯಲ್ಲಿ ಕಿರಿಯ ಸಿಬ್ಬಂದಿ ಕುಳಿತುಕೊಳ್ಳುತ್ತಿದ್ದರು. ಕಿರಿಯರು ಬರೆದುಕೊಟ್ಟ ಕಾಪಿಗಳನ್ನು ತಿದ್ದುತ್ತಿದ್ದ ಹಿರಿಯರು ವಾಕ್ಯ ರಚನೆಯಲ್ಲಿನ ದೋಷಗಳನ್ನು, ತಪ್ಪು ಪದ ರೂಪಗಳನ್ನು ಸರಿಪಡಿಸುತ್ತಿದ್ದರು. ಸರಿಪಡಿಸಿ ‘ಹೀಗಲ್ಲ, ಹೀಗೆ’ ಎಂದು ಹೇಳುತ್ತಿದ್ದರು.ಈಗ ನಾವೆಲ್ಲ ಕಂಪ್ಯೂಟರ್‌ಗಳ ಮುಂದೆ ಕುಳಿತುಕೊಳ್ಳುತ್ತಿದ್ದೇವೆ. ಅವು ಯಂತ್ರಗಳು.ಅವುಗಳ ಮುಂದೆ ಕುಳಿತ ನಾವೂ ಯಂತ್ರ ಗಳಾಗಿದ್ದೇವೆ. ಅಲ್ಲಿ ಜೀವಂತ ಸಂವಾದವೇ ಇಲ್ಲದಂತೆ ಆಗಿದೆ. ಆಯಾ ವಿಭಾಗದ ಮುಖ್ಯಸ್ಥರು ಮತ್ತು ಕಿರಿಯ ಸಿಬ್ಬಂದಿ ನಡುವೆ ಕಂಪ್ಯೂಟರ್‌ನಲ್ಲಿ ಬರುವ ಸುದ್ದಿಯೇ ಸೇತುವೆ. ಮನುಷ್ಯ ಸಂಬಂಧ ಹೊರಟು ಹೋಗಿದೆ.ಈಗ ಕಂಪ್ಯೂಟರ್‌ನಲ್ಲಿ ಬಂದ ಸುದ್ದಿಯ ಮೇಲೆಯೇ ತಪ್ಪುಗಳನ್ನು ಗುರುತಿಸಿ ಬರೆದವರಿಗೆ ವಾಪಸು ಕಳಿಸುವ ಪದ್ಧತಿ ಇದೆ. ಅಲ್ಲಿಯೂ ‘ಮಾನವ ಸ್ಪರ್ಶ’ ಎಂಬುದು ಇಲ್ಲ; ಕಲಿಕೆಯ ಪ್ರಕ್ರಿಯೆಯೂ ಇದ್ದಂತೆ ಕಾಣುವುದಿಲ್ಲ. ಏಕೆಂದರೆ ಇಂದು ಒಬ್ಬರಿಗೆ ‘ಮೌಢ್ಯತೆ’ ತಪ್ಪು ಎಂದು ಹೇಳಿದರೆ ಮರುದಿನ ಅವರು ‘ಭಾವೈಕ್ಯತೆ’ ಎಂದು ಬರೆಯುತ್ತಾರೆ. ನಾಡಿದ್ದು ಇನ್ನೊಬ್ಬರು ‘ಸೌಹಾರ್ದತೆ’ ಎಂದು ಬರೆಯುತ್ತಾರೆ. ಮೂರೂ ತಪ್ಪು ಎಂದು ಹೇಳಿದರೆ ಮೊದಲ ದಿನ ತಪ್ಪು ಮಾಡಿದವರೇ ಮತ್ತೆ ‘ಮೌಢ್ಯತೆ’ ಮೆರೆದಿರುತ್ತಾರೆ!ನಾವು ಚಿಕ್ಕವರಿದ್ದಾಗ ಪತ್ರಿಕೆಗಳನ್ನು ಧರ್ಮಗ್ರಂಥಗಳಂತೆ ತುಂಬ ಗಂಭೀರವಾಗಿ ಪಠಿಸುತ್ತಿದ್ದೆವು. ಪತ್ರಿಕೆಗಳಲ್ಲಿ ಬರುವ ವ್ಯಕ್ತಿಗಳ ಚಿತ್ರಗಳನ್ನು ಮನಸ್ಸಿನಲ್ಲಿ ಗುರುತು ಇಟ್ಟು ಕೊಳ್ಳುತ್ತಿದ್ದೆವು. ಆಕಾಶವಾಣಿಯಲ್ಲಿ ಸುದ್ದಿ ಕೇಳುತ್ತಿದ್ದೆವು. ಅದೇ ಆಕಾಶವಾಣಿಯಲ್ಲಿ ಬೆಳಿಗ್ಗೆ ಮತ್ತು ರಾತ್ರಿ ಬರುತ್ತಿದ್ದ ಸುದ್ದಿ ವಿಶ್ಲೇಷಣೆಯನ್ನೂ ಕೇಳುತ್ತಿದ್ದೆವು.ಪದಗಳು, ಹೆಸರುಗಳು ಕಿವಿಯ ಮೇಲೆ ಬಿದ್ದು ಮನಸ್ಸಿನಲ್ಲಿ ಅಚ್ಚು ಒತ್ತುತ್ತಿದ್ದುವು. ಈಗ ವೃತ್ತಿಗೆ ಬರುವ ಹುಡುಗರು ಪತ್ರಿಕೆಗಳನ್ನು ನಿತ್ಯ ಓದುತ್ತಾರೆಯೇ ಇಲ್ಲವೇ ಎಂಬುದು ಖಚಿತವಿಲ್ಲ. ಆಕಾಶವಾಣಿಯ ಸುದ್ದಿಯನ್ನು ಕೇಳುತ್ತಾರೆಯೇ ಇಲ್ಲವೇ ಎಂಬುದೂ ಖಚಿತವಿಲ್ಲ. ಕನ್ನಡ ವಾಹಿನಿಗಳಲ್ಲಿ ಅವರು ಸುದ್ದಿ ನೋಡುತ್ತಿರಬಹುದು. ಆದರೆ, ಅಲ್ಲಿಯೇ ಕನ್ನಡ ವಿಕಾರವಾಗಿದೆ. ಸುದ್ದಿ ಓದುವವರು ಪತ್ರಿಕೆಗಳಲ್ಲಿ ಕೆಲಸ ಮಾಡುವವರ ಮಟ್ಟದವರೇ ಆಗಿದ್ದಾರೆ. ಅವರಿಗೂ ಭಾಷೆಯ ಬಗ್ಗೆ, ಹೆಸರು ಹುದ್ದೆಗಳ ನಿಖರತೆಯ ಬಗ್ಗೆ ಕಾಳಜಿಯಿಲ್ಲ.ನಾವು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾಗಿದ್ದಾಗ ಪ್ರತಿದಿನ ಪಠ್ಯ ಪುಸ್ತಕದಲ್ಲಿನ ಒಂದು ಹಾಳೆಯ ಪಾಠವನ್ನು ‘ಶುದ್ಧಬರಹ’ ಬರೆಯುತ್ತಿದ್ದೆವು. ಅದನ್ನು ನಾವೇ ಮೂಲದ ಜತೆ ಹೋಲಿಸಿ ಆಗಿರುವ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದೆವು.ಶಾಲೆಯಲ್ಲಿಯೂ ಶಿಕ್ಷಕರು ನಿತ್ಯ ‘ಶುದ್ಧಬರಹ’ದ ‘ಮನೆಗೆಲಸ’ ಕೊಡುತ್ತಿದ್ದರು. ತಪ್ಪುಗಳನ್ನು ಅವರೂ ತಿದ್ದುತ್ತಿದ್ದರು. ಮತ್ತೆ ನಾವು ಕನಿಷ್ಠ ಅದೇ ತಪ್ಪನ್ನು ಮಾಡಿದ ನೆನಪು ಇಲ್ಲ.‘ಶುದ್ಧಬರಹ’ ಬರೆಯುವ ರೂಢಿ ಮಾಡಿಸುವುದೇ ಒಂದು ಅದ್ಭುತ ಪ್ರಯೋಗ ಎಂದು ನನಗೆ ಅನಿಸುತ್ತದೆ. ಆ ಪ್ರಯೋಗ ಈಗ ಶಾಲೆಗಳಲ್ಲಿ ಇದ್ದಂತೆ ಕಾಣುವುದಿಲ್ಲ. ಈಗ ಪತ್ರಿಕಾ ವೃತ್ತಿಗೆ ಸೇರುವ ಯುವಕರು ಅಂಥ ಪ್ರಯೋಗ ಮಾಡಿದಂತೆಯೂ ಕಾಣುವುದಿಲ್ಲ. ಏಕೆಂದರೆ ಅವರಿಗೆ ಈಗ ‘ಶುದ್ಧಬರಹ’ ಎಂದರೆ ಏನು ಎಂದು ಗೊತ್ತಿಲ್ಲ.ಈಗ ‘ಶುದ್ಧಬರಹ’ ಬರೆಯುವುದು ಅವರಿಗೆ ಅವಮಾನ ಎಂದು ಅನಿಸತೊಡಗಿದೆ. ಅವರು ಅವಮಾನ ಎಂದುಕೊಂಡರೆ ಶುದ್ಧ ಬರಹ ಬರೆಯುವುದು ಕಷ್ಟವಾಗುತ್ತದೆ.ಮಕ್ಕಳಿಗೆ ಶುದ್ಧ ಬರಹ ರೂಢಿ ಮಾಡಬೇಕು ಎಂದು ಹೇಳಲೂ ಭಯವಾಗುತ್ತದೆ.ಏಕೆಂದರೆ ಪಠ್ಯದಲ್ಲಿ ಶುದ್ಧವಾದ ಬರವಣಿಗೆ ಇದೆಯೇ ಇಲ್ಲವೇ ಎಂದು ಗೊತ್ತಿಲ್ಲ! ಇದನ್ನು ಬರೀ ಕನ್ನಡ ಭಾಷೆಯ ಸಮಸ್ಯೆ ಎಂದು ನಾನು ತಿಳಿದಿಲ್ಲ. ಎಲ್ಲ ಭಾಷೆಗೂ ಇದು ಅನ್ವಯಿಸುತ್ತದೆ. ಇದು ಪತ್ರಿಕೋದ್ಯಮದ ಸಮಸ್ಯೆ ಎಂದೂ ನಾನು ಹೇಳುತ್ತಿಲ್ಲ. ಅವರು ಯಾವ ವೃತ್ತಿಯಲ್ಲಿ ಇದ್ದರೂ ಶುದ್ಧ ಬರವಣಿಗೆ ಅಗತ್ಯ ಮತ್ತು ಅನಿವಾರ್ಯ.ವೃತ್ತಿಗೆ ಸೇರಿದ ಮೇಲೆಯೂ ನಾನು ಮತ್ತು ನನ್ನ ವಾರಿಗೆಯವರು ತಪ್ಪುಗಳನ್ನು ಮಾಡಲಿಲ್ಲ ಎಂದು ಅಲ್ಲ. ಒಂದು ಸಾರಿ ಇದು ತಪ್ಪು ರೂಪ ಎಂದು ಹೇಳಿಸಿಕೊಂಡ ಮೇಲೆ ಅದೇ ತಪ್ಪನ್ನು ಮತ್ತೆ ಮಾಡಲಿಲ್ಲ. ನಾನು ವೃತ್ತಿಗೆ ಸೇರಿದ ಹೊಸದರಲ್ಲಿ ಜನಾರ್ಧನ ಎಂದು ಬರೆದಿದ್ದೆ. ನನ್ನ ಮುಖ್ಯಸ್ಥರು ಜನಾರ್ದನ ಸಾಕು ಎಂದಿದ್ದರು.ನಂಬಿಕೆಯಾಗದೇ ನಾನು ಹೋಗಿ ಶಬ್ದಕೋಶ ನೋಡಿದ್ದೆ. ಅವರು ಹೇಳಿದ್ದು ಸರಿಯಿತ್ತು. ಮತ್ತೆ ನಾನು ಎಂದೂ ಜನಾರ್ಧನ ಎಂದು ಬರೆಯಲಿಲ್ಲ.ಹಾಗೆಂದು ಜನಾರ್ಧನ ಬರೆಯುವುದು ಈಗಲೂ ನಿಂತಿಲ್ಲ. ನಿಲ್ಲುತ್ತದೆ ಎಂದೂ ಅನಿಸುವುದಿಲ್ಲ.ನಾವು ಮಾಡುವ ತಪ್ಪುಗಳನ್ನು ಹೀಗೆ ಪಟ್ಟಿ ಮಾಡುತ್ತಲೇ ಹೋಗಬಹುದು. ಅದಕ್ಕೆ ಕೊನೆ ಎಂಬುದು ಇಲ್ಲ. ಶಬ್ದಬ್ರಹ್ಮರೇ ಅನಿಸಿದ ಪತ್ರಕರ್ತರ ಸಾಧನೆ ಅದರಲ್ಲಿ ಕಡಿಮೆಯೇನೂ ಇಲ್ಲ! ಬರೀ ಪದಪ್ರಯೋಗದಲ್ಲಿ ಮಾತ್ರ ತಪ್ಪುಗಳು ಇಲ್ಲ. ವಾಕ್ಯ ರಚನೆಯೂ ಘೋರವಾಗಿದೆ. ‘ಕಳೆದ 15 ದಿನಗಳ ಹಿಂದೆ’ ಎಂಬ ವಾಕ್ಯವನ್ನು ಹಿರಿಯ ಪತ್ರಕರ್ತರ ಲೇಖನಗಳಲ್ಲಿಯೇ ನೋಡಿದ್ದೇನೆ. ಸರಿಯಾದ ಪದಗಳು ಮನದಲ್ಲಿ ಮೂಡಿದ ಹಾಗೆ ತಪ್ಪು ಪದಪ್ರಯೋಗಗಳೂ ಮನದಲ್ಲಿ ಮೂಡಿ ನಿಂತಿರುತ್ತವೆ ಎಂದು ಅನಿಸುತ್ತದೆ. ಅದು ತಪ್ಪು ಇರಬಹುದು ಎಂಬ ಅನುಮಾನ ನಮಗೆ ಬರುವುದೇ ಇಲ್ಲವಾದ್ದರಿಂದ ಅದನ್ನು ಸರಿಪಡಿಸುವ ಪ್ರಮೇಯವೂ ಕಂಡು ಬರುವುದಿಲ್ಲ.ಎಲ್ಲ ಪತ್ರಿಕಾ ಕಚೇರಿಗಳಲ್ಲಿ ಇರುವ ‘ಕಿಟೆಲ್’, ‘ವೆಂಕಟಸುಬ್ಬಯ್ಯ’ರನ್ನು ನೋಡುವ ಅಗತ್ಯವೇ ನಮಗೆ ಬಿದ್ದಿಲ್ಲ! ಒಂದು ಸಾರಿ ಪತ್ರಕರ್ತರಾದ ಮೇಲೆ ನಮ್ಮನ್ನು ನಾವೇ ಬ್ರಹ್ಮರು ಎಂದು ಅಂದುಕೊಂಡು ಬಿಡುವುದರಿಂದ ಹೀಗೆ ಆಗುತ್ತಿರಬಹುದು.ನಾನು ಇದುವರೆಗೆ ಬರೀ ಶಬ್ದಗಳ ಅಪಪ್ರಯೋಗದ ಬಗ್ಗೆ ಮಾತ್ರ ಹೇಳಿದೆ. ಸಂಗತಿಗಳಲ್ಲಿ ಆಗುವ ತಪ್ಪುಗಳ ಬಗ್ಗೆ ಬರೆಯುತ್ತ ಹೋದರೆ ಅದು ಇನ್ನೂ ದೊಡ್ಡ ಸಮಸ್ಯೆ.ನಾನೇ ನನ್ನ ಕೆಲವು ವಾರಗಳ ಹಿಂದಿನ ಅಂಕಣದಲ್ಲಿ ಬೆಂಗಳೂರು ಸಾಹಿತ್ಯ ಸಮ್ಮೇಳನವನ್ನು 78ನೇ ಸಮ್ಮೇಳನ ಎಂದು ಬರೆದು ಬಿಟ್ಟೆ! ಅಂದು ನನಗೆ ಬೆಳಿಗ್ಗೆ ಮೊದಲು ಫೋನ್ ಮಾಡಿದವರು ಆರಾಧ್ಯರೇ! ಪತ್ರಿಕೋದ್ಯಮ ಅವಸರದ ಸಾಹಿತ್ಯ.ತಪ್ಪು ಏಕೆ ಆಯಿತು ಎಂದರೆ ಗಡಿಬಿಡಿಯಲ್ಲಿ ಬರೆದೆ ಎಂದೇ ನಾನೂ ಸೇರಿದಂತೆ ಎಲ್ಲರೂ ಹೇಳುವುದು. ಆದರೆ, ಅದು ಕ್ಷಮಾರ್ಹವಲ್ಲ. ಪತ್ರಿಕೆಯನ್ನು ಕೊಂಡು ಓದುವ ಓದುಗ ತಪ್ಪಿಲ್ಲದ ಪತ್ರಿಕೆಯನ್ನೇ ಬಯಸುತ್ತಾನೆ.ಪತ್ರಕರ್ತರು ಮಾಡಬಹುದಾದ ಕನಿಷ್ಠ ಕರ್ತವ್ಯ ಎಂದರೆ ತಪ್ಪಿಲ್ಲದ ಪತ್ರಿಕೆಯನ್ನು ಓದುಗನ ಕೈಗೆ ಕೊಡುವುದು. ಅದು ಕನಿಷ್ಠ ಕರ್ತವ್ಯ ಏಕೆ ಎಂದರೆ ಇಂದಿನ ಪತ್ರಿಕೆ ನಾಳಿನ ಇತಿಹಾಸ. ಗುಬ್ಬಿ ರೇವಣಾರಾಧ್ಯರಂಥ ಓದುಗರು ಇಂದಿನ ಪತ್ರಿಕೆಗಳಲ್ಲಿ ಮಾಹಿತಿ ತಪ್ಪು ಇರಬಾರದು ಎಂದು ಏಕೆ ಬಯಸುತ್ತಾರೆ ಎಂದರೆ ಅದು ನಾಳಿನ ಇತಿಹಾಸ ಎಂಬ ಕಾರಣಕ್ಕಾಗಿಯೇ.ತಪ್ಪು ಬರೆದವರನ್ನು ನೇಣಿಗೆ ಹಾಕಿ ಎಂದು ಅವರು ಹೇಳುವುದು ಕಠೋರ ಮಾತು ಅನಿಸಬಹುದು. ಆದರೆ, ಆ ಕಠೋರತೆಯ ಹಿಂದೆ ಇರುವ ಕಾಳಜಿ ದೊಡ್ಡದು. ಆ ನೈಜ ಕಾಳಜಿಯನ್ನು ಈಗ ವೃತ್ತಿಯಲ್ಲಿ ಇರುವ ಹುಡುಗ ಮತ್ತು ಹುಡುಗಿಯರು ಗಮನಿಸಬೇಕು. ವೃತ್ತಿಗೆ ಬರುವವರನ್ನು ತಯಾರು ಮಾಡುವ ಕಾಲೇಜು, ವಿಶ್ವವಿದ್ಯಾನಿಲಯಗಳೂ ಮನದಟ್ಟು ಮಾಡಿಕೊಳ್ಳಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.