ಗುರುವಾರ , ಮೇ 6, 2021
22 °C

ಪಳೆಯುಳಿಕೆಗಳ ನಾಡು ಪೆರುವಿನಲ್ಲಿ

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಪಳೆಯುಳಿಕೆಗಳ ನಾಡು ಪೆರುವಿನಲ್ಲಿ

ಪೆರು ದೇಶದ ರಾಜಧಾನಿ ಲೀಮಾದಲ್ಲಿ ನಿಮ್ಮ ವಿಮಾನ ಬಂದಿಳಿದ ಕೂಡಲೇ ಒಂದು ಅಚ್ಚರಿ ನಿಮಗುಂಟಾಗುತ್ತದೆ. ಭಾರತ ದಿಂದ ಅಲ್ಲಿಗೆ ತಲುಪಲು ನೀವು ಕನಿಷ್ಠ ಇಪ್ಪತ್ತು ಗಂಟೆಗಳ ವಿಮಾನಪ್ರಯಾಣ ಮಾಡಿರುತ್ತೀರಿ. ಗಂಟೆಗಟ್ಟಲೆ ಅಟ್ಲಾಂಟಿಕ್ ಮಹಾಸಾಗರದ ಮೇಲೆ ಆಕಾಶಮಾರ್ಗ ಕ್ರಮಿಸಿರುತ್ತೀರಿ. ಹದಿನೇಳು ಸಾವಿರ ಮೈಲಿ ದೂರದ ಊರಿಗೆ ಬಂದ ಮೇಲೆ ನಿಮಗನಿಸುತ್ತದೆ ‘ಅರೆ, ನಾವು ನಮ್ಮ ದೇಶಕ್ಕೇ ಮರುಳಿದ್ದೇವೆ’ ಅಂತ. ಅಲ್ಲಿನ ಬಹುತೇಕ ಜನ ಯೂರೋಪು, ಉತ್ತರ ಅಮೆರಿ ಕಾದವರಂತೆ ಬಿಳಿಯರಲ್ಲ;

ಆಫ್ರಿಕನ್ನರಂತೆ ಕರಿ ಯರೂ ಅಲ್ಲ. ಚೀನಾ, ಜಪಾನಿನವರಂತೆ ಹಳದಿ ಮಂದಿಯೂ ಅಲ್ಲ.  ನಮ್ಮ ಹಾಗೇ ಅವರ ಮಿಶ್ರ ಬಣ್ಣ, ಭಾವಭಂಗಿಗಳು.ವಿಮಾನನಿಲ್ದಾಣದಿಂದ ಲೀಮಾದ ನಡುದಾ ಣಕ್ಕೆ ಬರುವಾಗಿನ ಸಂಚಾರವ್ಯವಸ್ಥೆ ನಮ್ಮ ಬೆಂಗಳೂರಿನ ಅಡ್ಡಾದಿಡ್ಡಿ ಸಂಚಾರವ್ಯವಸ್ಥೆಯ ಅಪ್ಪಟ ನಕಲು. ಕಿಕ್ಕಿರಿದ ರಸ್ತೆಯ ಆಜುಬಾಜಿನ ಮನೆಗಳು ಕಟ್ಟಡಗಳು ಅನಿಯಂತ್ರಿತವಾಗಿ ಬೇಕಾ ಬಿಟ್ಟಿಯಾಗಿ ಹರಡಿಕೊಂಡಿರುತ್ತವೆ. ಬಹುತೇಕ ಮನೆಗಳನ್ನು ಕಟ್ಟಿದವರು ಮಹಾನ್ ಆರಂಭ ಶೂರರು. ಅರ್ಧಂಬರ್ಧ ಕಟ್ಟಿದ ಮನೆಗಳಲ್ಲೇ ಬಹುತೇಕರು ವಸತಿ ಮಾಡಿರುವ ಹಾಗೆ ತೋರುತ್ತದೆ.ಲೀಮಾದ ನಡುದಾಣವಾದರೋ ದೆಹಲಿಯ ಪಾಷ್ ಪ್ರದೇಶಗಳ ಥರ. ಇಲ್ಲಿ ಎಲ್ಲವೂ ಸುವ್ಯ ವಸ್ಥಿತ, ಅಚ್ಚುಕಟ್ಟು. ಯೂರೋಪಿನ ಅಥವಾ ಉತ್ತರ ಅಮೆರಿಕಾದ ಯಾವುದೋ ನಗರದಲ್ಲಿ ರುವ ಹಾಗೆ. ಆದರೆ ನೀವು ಹಾದು ಬಂದ ಅವ್ಯವಸ್ಥೆ ಬೇರೆಯೇ  ಪ್ರಪಂಚದ್ದು ಅನಿಸುತ್ತಿದೆ.ಪೆರು ಮತ್ತು ಭಾರತಗಳ ರಾಜದೂತ ಸಂಬಂಧದ ಅರ್ಧಶತಮಾನವನ್ನು ಕೊಂಡಾ ಡಲು ಭಾರತದ ಉಪರಾಷ್ಟ್ರಪತಿಯವರು ಪೆರು ದೇಶಕ್ಕೆ ಅಕ್ಟೋಬರ್‌ ಕೊನೆ ವಾರದಲ್ಲಿ ಭೇಟಿ ನೀಡಿದ ಸಂದರ್ಭ . ಅದೇ ದಿನಗಳಲ್ಲಿ ಭಾರತದ ಸಂಸ್ಕೃತಿ ಮಂತ್ರಾಲಯದವರು ಭಾರತದ ಸಾಂಸ್ಕೃ ತಿಕ ಕಾರ್ಯಕ್ರಮಗಳ ಒಂದು ಕಿರು ಉತ್ಸವವನ್ನು ಆಯೋಜಿಸಿದ್ದರು. ಅದರ ಅಂಗವಾಗಿ ಪೆರು-ಭಾರತ ಸಾಹಿತ್ಯೋತ್ಸವವನ್ನೂ ಹಮ್ಮಿಕೊಂಡಿ ದ್ದರು. ಇದು ನಾನು ಪೆರುಗೆ ಹೋಗಲು ನೆಪವಾ ಗಿತ್ತು. ಆದರೆ ನನ್ನ ಮನಸ್ಸಿನಲ್ಲಿ ಇದ್ದ ಉದ್ದೇಶ ಪೆರುವಿನ ಪ್ರಾಚೀನ ಸಂಸ್ಕೃತಿಯ ಮಹಾನ್ ಸಾಧನೆಯೆಂದು ಹೇಳಲಾಗುವ ಮಾಚು ಪಿಚ್ಚೂಗೆ ಹೋಗುವುದಾಗಿತ್ತು. ಯಾಕೆಂದರೆ ನನ್ನ ಹರೆಯದಲ್ಲಿ ಆಗ ನನ್ನ ಮೆಚ್ಚಿನ ಕವಿಯಾಗಿದ್ದ ಪಾಬ್ಲೋ ನೆರೂದಾನ ಮಾಚು ಪಿಚ್ಚು ಕುರಿತ ಕವಿತೆ ನನ್ನ ಮೇಲೆ ಬಹು ದೊಡ್ಡ ಪ್ರಭಾವ ಬೀರಿತ್ತು. ಆದರೆ ಅಧಿಕೃತ ಸರ್ಕಾರಿ ಕೆಲಸಕ್ಕೆ ಹೋದದ್ದರಿಂದ ಸಮಯದ ಅಭಾವದ ಕಾರಣ ಮಾಚುಪಿಚ್ಚುವಿಗೆ ಹೋಗಲಾಗಲಿಲ್ಲ. ನನ್ನ ಬಹು ದಿನದ ಬಯಕೆ ಕೈಗೂಡಲಿಲ್ಲ. ತುಂಬಾ ನಿರಾಶೆಯಾಯಿತು.ನಾನು ಮಾಚುಪಿಚ್ಚುವಿಗೆ ಹೋಗಬೇಕೆಂದು ಹಲವು ಸಾರಿ ಗೋಳ ಸುತ್ತಿರುವ ನನ್ನ ಪ್ರಿಯ ಸೋದರಿ ಮೋನಿಕಾ ಜಿನ್‌ಗೆ ಹೇಳಿದಾಗ ಅವಳು ನನ್ನನ್ನು ಪ್ರೋತ್ಸಾಹಿಸಲಿಲ್ಲ. ಆದರೆ ಅಲ್ಲಿಗೆ ಹೋಗದ ನಿರಾಶೆಯನ್ನು ಕಡಿಮೆ ಮಾಡಿದ್ದು ಇನ್ನೊಂದು ಅಷ್ಟೇ ಅದ್ಭುತವಾದ ಪ್ರಾಚೀನ ಸಂಸ್ಕೃತಿಯ ನೆಲೆಯಾದ ಕರಾಲ್‌ಗೆ ಹೋಗಿ ಬಂದ ಅನುಭವ.ಹಾಗೆ ನೋಡಿದರೆ ಲೀಮಾದಿಂದ ಒಂದೂ ವರೆ ದಿನ ರೈಲು ದೂರವಿರುವ ಇನ್ಕಾ ಜನಾಂಗದ ಮಾಚುಪಿಚ್ಚುಗಿಂತಾ ಸಾವಿರ ವರ್ಷ ಹಳೆಯ ನಾಗರೀಕತೆಗಳ ನಿಶಾನೆಯಿರುವುದು ಲೀಮಾ ನಗರದಲ್ಲೇ. ನಗರದ ನಡುವಿನಲ್ಲಿರುವ ಫುಕಯಾಮಾ ಎನ್ನುವ ಕಡೆ ಒಂದುಸಾವಿರ ವರ್ಷ ಹಳೆಯ ನಿಶಾನೆಯಿದೆ. ಇಲ್ಲಿನ ಕಟ್ಟಡ ಗಳು ಇಟ್ಟಿಗೆಯಿಂದ ನಿರ್ಮಿತವಾಗಿದ್ದು, ಇಲ್ಲಿ ನರಬಲಿಯ ಹಲವು ಕುರುಹುಗಳಿವೆ. ಕೆಂಪುಹತ್ತಿ ಯನ್ನು ಬೆಳೆಸಿ, ಬಳಸುತ್ತಿದ್ದ ಈ ಜನಾಂಗದವರು ಸಾಗರದೇವಿಯ ಆರಾಧಕರು. ದೊಡ್ಡದೊಡ್ಡ ಪಿರಮಿಡ್ಡುಗಳನ್ನು ಕಟ್ಟಿದ್ದರು. ಪ್ರತಿಸಲ ಇನ್ನೊಂದು ಮಜಲನ್ನು ಕಟ್ಟುವ ಮೊದಲು ಹುಡುಗಿಯೊಬ್ಬಳನ್ನು ಬಲಿ ಕೊಟ್ಟು ನಿರ್ಮಾಣ ಶುರು ಮಾಡುತ್ತಿದ್ದರು. ಪೆಸಿಫಿಕ್ ಸಾಗರದ ದಂಡೆಯಲ್ಲಿರುವ ಈ ಜಾಗ ಒಂದು ಮರಳುಗಾಡಿನ ಹಾಗಿದೆ. ಮಳೆ ಸುಳಿಯುವು ದಿಲ್ಲ. ಎಂತಲೇ ಸಾವಿರವರ್ಷದ ಇಟ್ಟಿಗೆಯ ಇಮಾರತಿಗಳು ಇನ್ನೂ ನಿಂತಿವೆ.  ನಂತರ ಈ ಜನಾಂಗದವರನ್ನು ಗುಡುಗುದೇವರ ಪೂಜಕ ಜನಾಂಗದವರು ಸೋಲಿಸಿ ಮನಸೋಇಚ್ಛೆ ಕೊಲೆಸುಲಿಗೆ ಮಾಡಿದರು. ಸೋತವರು ಸುಮ್ಮನಿರಲಿಲ್ಲ. ಸಮಯಸಾಧಿಸಿ ಪ್ರತೀಕಾರ ತೆಗೆದುಕೊಂಡರು. ತಮ್ಮ ಹಲ್ಲೆಕೋರರ ಜನಾಂಗದವರ ಮಕ್ಕಳು ಕೂಸುಗಳನ್ನೂ ಬಿಡದೆ ಬಲಿ ಹಾಕಿದರು. ಇತ್ತೀಚೆಗೆ ತಾನೆ ಅಗೆಯಲಾ ಗುತ್ತಿರುವ ಈ ಜಾಗದಲ್ಲಿ ಸಾವಿರವರ್ಷ ಹಳೆಯ ಇಟ್ಟಿಗೆಗಳು ಈ ಹಿಂಸೆ-ಪ್ರತಿಹಿಂಸೆಯ ದುರಂತಕ್ಕೆ ಇಂದೂ ಮೂಕಸಾಕ್ಷಿಗಳು.ಪುರಾತತ್ವಶಾಸ್ತ್ರಜ್ಞರನ್ನು ಒಂದು ಒಗಟು ಕಾಡಿದೆ; ಸಣ್ಣಸಣ್ಣ ಗುಂಪು ಕಟ್ಟಿಕೊಂಡು ಜೀವನ ಯಾಪನ ಮಾಡುತ್ತಿದ್ದ ಮನುಷ್ಯರು ಯಾಕೆ ಹಠಾತ್ತಾಗಿ ಮಹಾನಗರಗಳನ್ನು ನಿರ್ಮಿಸತೊಡ ಗಿದರು? ಇದಕ್ಕವರು ಆಲೋಚಿಸಿದ ಉತ್ತರ:  ಅನಿರೀಕ್ಷಿತ ಹಿಂಸೆ ಮತ್ತು ಹಲ್ಲೆಗಳಿಂದ ಪಾರಾಗಲು. ತಮ್ಮಲ್ಲಿ ಅತ್ಯಂತ ಗಟ್ಟಿಗನನ್ನು ನಾಯಕನ ನ್ನಾಗಿಸಿದರು. ಜಗತ್ತಿನ ತುಂಬಾ ಹಳೆಯ ನಗರಗಳ ಅವಶೇಷಗಳಲ್ಲಿ ಮಾನವಹಿಂಸೆಯ ಪುರಾವೆಗಳು ಹೇರಳ. ಇದನ್ನೇ  ಪಾಬ್ಲೊ ನೆರೂದಾ ತನ್ನ ಮಾಚುಪಿಚ್ಚು ಕವಿತೆಯಲ್ಲಿ ಕಂಡದ್ದು:‘ನನಗಿಲ್ಲಿ ಸಿಕ್ಕಿದ್ದು ಬರೀ ಮುಖ, ಮುಖವಾಡಗಳ ಮುದ್ದೆ

ಬಿಸಾಕಿದ್ದರು ಅವನ್ನು ಟೊಳ್ಳು ಚಿನ್ನದುಂಗುರಗಳೆಂಬಂತೆ;

ಕಳಚೆಸೆದ ಅರಿವೆಗಳಂತೆ;

ಹೇಡಿ ಜನಾಂಗಗಳ ಅಳಲುಮರಗಳ ಬಿಳಿಲುಗಳನ್ನು

ಅಲುಗಾಡಿಸುತ್ತಿದ್ದ ಮಾಗಿಯ ಹೆಣ್ಣುಮಕ್ಕಳ ಒಡಲಿನಂತೆ ’ಹಿಂಸೆಯೇ ಜೀವಜಗತ್ತಿನ ಆಧಾರವೆಂಬ  ಭೌತಿಕವಾದಿ ಇತಿಹಾಸಕಾರರೂ ಪುರಾತತ್ವಶೋ ಧಕರೂ ಹಿಂಸೆಯೇ ನಗರನಿರ್ಮಾಣದ ಮೂಲ ಕಾರಣವೆಂದುಕೊಂಡಿದ್ದರು.ಆದರೆ ಪೆರುವಿನ ಅತ್ಯಂತ ಹಳೆಯ ನಾಗರಿಕತೆಯಾದ ಕರಾಲ್‌ನ ಅವಶೇಷಗಳು ಈ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದವು. ೧೯೯೪ ರಲ್ಲಿ ರುಥ್ ಶೇಡಿ ಎಂಬ ಪುರಾತತ್ವಶೋಧಕಿ ಮೊದಲಬಾರಿ ಕರಾಲ್  ಅನ್ನು ಗುರುತು ಹಿಡಿದಳು. ಮರಳುಗುಡ್ಡಗಳಂತಿದ್ದಲ್ಲಿ ಪಿರಮಿಡ್ಡು ಗಳಿವೆಯೆನಿಸಿ ವ್ಯವಸ್ಥಿತವಾಗಿ ಆ ಪ್ರದೇಶದ ಅಗೆತದ ಕೆಲಸ ಶುರು ಮಾಡಿಸಲಾಗಿ ಮರಳು ಗಾಡಿನಲ್ಲಿ ಐದುಸಾವಿರ ವರ್ಷಗಳಿಂದ ಅಡಗಿದ್ದ  ಅತ್ಯಂತ ಪ್ರಾಚೀನ ನಗರದ ಕುರುಹುಗಳು, ಕಟ್ಟಡಗಳು, ನಿರ್ಮಿತಿಗಳು ಸಿಗತೊಡಗಿದವು. ಅದರೆ ಎಷ್ಟು ಹುಡುಕಿದರೂ ಹಿಂಸೆಯ, ಯುದ್ಧದ ಅವಶೇಷಗಳು ಸಿಗಲಿಲ್ಲ. ಉತ್ತರ ಅಮೆರಿಕಾದ ಪುರಾತತ್ವಶಾಸ್ತ್ರಜ್ಞರಿಗೆ ಈ ವಿಷಯ ಗೊತ್ತಾಗಿ ದಿಗಿಲಾಗತೊಡಗಿತು. ಹಿಂಸೆಯೇ ನಗರನಿರ್ಮಾಣದ ಬುಡವೆಂಬ ಅವರ ಥಿಯರಿ ಅಲ್ಲಾಡತೊಡಗಿತ್ತು. ಅವರೂ ಕರಾಲ್‌ನಲ್ಲಿ, ಸುತ್ತ ಮುತ್ತಲ ಪ್ರದೇಶಗಳಲ್ಲಿ ಹಿಂಸೆಯ ಗುರುತುಗಳನ್ನು ತಡಕತೊಡಗಿದರು.  ಮರಳನ್ನು ಅದೆಷ್ಟು ಅಗೆದರೂ ಅವರ ಹಿಂಸಾ ಪರ ಪುರಾವೆ ದೊರಕಲಿಲ್ಲ. ಕೊನೆಗವರ ಸಿದ್ಧಾಂತ ಸೋತಿತು.ಕರಾಲ್‌ನಲ್ಲಿ ಮಡಕೆಗಳಾಗಲಿ ಲೋಹಗ ಳಾಗಲೀ ಸಿಕ್ಕಿಲ್ಲವಾಗಿ ಅದು ರೋಂ, ಗ್ರೀಸ್ ಮತ್ತು ಇಂಡಿಯಾಗಳಿಗಿಂತ ಹಳೆಯ ನಾಗರಿಕತೆ ಯೆಂದಾಯಿತು. ಲೀಮಾದಿಂದ ಮೂರು ಗಂಟೆ ಕಾರುದೂರದಲ್ಲಿರುವ ಕರಾಲ್ ಪ್ರದೇಶ ಪೆಸಿಫಿಕ್ ಸಾಗರದ ದಂಡೆಯಿಂದ ಇಪ್ಪತ್ಮೂರು ಮೈಲಿ ದೂರ. ಕರಾಲ್‌ನ ಕೇಂದ್ರಸ್ಥಾನವಾಗಿದ್ದ ಈ ಕಟ್ಟಡಗಳ ಸಮುಚ್ಚಯ ಐದು ಸಾವಿರ ವರ್ಷ ಹಳೆಯದು. ಕಾರ್ಬನ್ ಡೇಟಿಂಗ್‌ನ ಮೂಲಕ ಇದು ಸಾಬೀತಾಗಿದೆ. ಕರಾಲ್ ಸಮುಚ್ಚಯದ ಕೇಂದ್ರವಾದ ಅರವತ್ತು ಎಕರೆಗಳ ಈ ಜಾಗ ಆ ಜನಾಂಗದವರ ಪವಿತ್ರ ನಗರದಲ್ಲಿ ೩೦೦೦ ಉಚ್ಚವರ್ಗದವರು ನಿಮ್ನವರ್ಗದವರು ವಾಸಿಸು ತ್ತಿದ್ದ ಎರಡು ಬಗೆಯ ಮನೆಗಳ ಅವಶೇಷಗಳ ಜೊತೆಗೆ ಒಂದು ಪ್ರಾಚೀನ ಬಯಲು ರಂಗ ಮಂದಿರ ಮತ್ತು ಪೂಜಾಸ್ಥಾನಗಳಾಗಿದ್ದ ಹಲವು ಪಿರಮಿಡ್ಡುಗಳು ಹೊರಬಂದಿವೆ. ಪಕ್ಷಿಗಳ ಮೂಳೆಯಿಂದ ತಯಾರಿಸಿದ ಕೊಳಲುಗಳು ಈ ಜನಾಂಗದವರು ಸಂಗೀತಪ್ರಿಯರೆಂದು ತೋರಿಸಿ ದರೆ ಲೈಂಗಿಕಶಕ್ತಿಗೆ ಕುಮ್ಮಕ್ಕು ಕೊಡುವ ಕಯೋತೆ ಎಲೆಗಳು ಯಥೇಚ್ಛವಾಗಿ ದೊರಕಿರು ವುದರಿಂದ ಈ ಜನತೆ ಶೃಂಗಾರಪ್ರಿಯರೂ ಆಗಿದ್ದಿರಬಹುದು.ಅಗೆದಲ್ಲೆಲ್ಲಾ ಹತ್ತಿಬೀಜ ಗಳು ದೊರಕುವುದರಿಂದ ಆ ಜನ ಅದನ್ನೇ ಮುಖ್ಯ ಆಹಾರವನ್ನಾಗಿ ಬಳಸುತ್ತಿದ್ದಿರಬಹುದು. ಅವರ ಉಪಕರಣಗಳೆಲ್ಲಾ ಕಲ್ಲಿನವು. ನಗರದ ಚೌಕಗಳು, ಪೂಜಾಕುಂಡಗಳು ಕಂಡುಬರುತ್ತವೆ. ಕಟ್ಟಡನಿರ್ಮಿತಿಯಲ್ಲಿ ಸಂಕೀರ್ಣ  ಕೌಶಲವನ್ನು ಮೆರೆದಿರುವ ಈ ಜನಾಂಗದವರು ಸ್ಪೇನ್ ಆಕ್ರಮಣಪೂರ್ವ ಅಮೆರಿಕಾದ ಇತರರಂತೆಯೇ ಅಕ್ಷರರಹಿತರು. ತಮ್ಮ ದಾಖಲಾತಿ, ಲೆಕ್ಕಾಚಾರ ಗಳಿಗಾಗಿ ‘ಕ್ವಿಪು’ನ ಮೊರೆ ಹೊಕ್ಕಿದ್ದರು. ಬೇರೆಬೇರೆ ಬಗೆಯ ಬಣ್ಣಗಳ ಗಂಟುಗಳನುಸಾರ ಅರ್ಥ ನೀಡುವ ಈ ಏರ್ಪಾಟು ಸುಮೇರಿಯಾದ ಕ್ಯೂನಿಫಾರ್ಮ್ ಬರಹಕ್ಕೂ ಪೂರ್ವದ್ದು.ಅಗೆತ ಮುಂದುವರಿದ ಹಾಗೆ ಕರಾಲ್ ಜನಾಂದವರು ಸಾಗರತೀರದ ಜನರಿಗೆ ಹತ್ತಿ ಯನ್ನು ಕೊಟ್ಟು ಅವರಿಂದ ಮೀನುಗಳನ್ನು ಆಹಾರಕ್ಕೆ ಪಡೆಯುತ್ತಿದ್ದರೆಂದು ತಿಳಿದು ಬಂತು.  ದೂರದ ಅಮೆಜಾನ್ ನದಿ ತೀರದ ನಿವಾಸಿ ಗಳೊಂದಿಗೆ ವ್ಯಾಪಾರ ನಡೆಸುತ್ತಿದ್ದರೆನ್ನುವುದು ತಿಳಿದುಬಂತು.ಈ ಪವಿತ್ರನಗರ ಇಡೀ ಕರಾಲ್ ನಾಗರಿಕತೆಯಲ್ಲ. ಇದನ್ನು ಕೇಂದ್ರವಾಗಿಟ್ಟು ಕೊಂಡು ದೂರದೂರದ ಪ್ರದೇಶಗಳಲ್ಲಿ ಈ ಜನ ವಾಸಿಸುತ್ತಿದ್ದರು. ಪವಿತ್ರನಗರದಲ್ಲಿ ಸಮುದಾ ಯದ ಪ್ರಮುಖರು ನೆಲದಿದ್ದಹಾಗೆ ಕಾಣುತ್ತದೆ.ಸಣ್ಣಗುಂಪುಗಳಲ್ಲಿ ಅಲೆಮಾರಿ ಜೀವನ ನಡೆಸುತ್ತಿದ್ದ ಪುರಾತನರು ನಗರನಿರ್ಮಾಣಕ್ಕೆ ತೊಡಗಿದುದರ ಮೂಲಪ್ರೇರಣೆ ಹಿಂಸೆಯಾಗಲಿ ಹಿಂಸೆಯ ಭೀತಿಯಾಗಲಿ ಆಗಿರದೆ ಜೀವನ ನಡೆಸುವುದಕ್ಕೆ ಅಗತ್ಯವಾದ  ಅನುಕೂಲಗಳ ಮತ್ತು ಶಾಂತಿಯ ಬಯಕೆಗಳೆಂಬುದನ್ನು ಪ್ರಾಚೀನ ಕರಾಲ್ ಸಾಬೀತುಮಾಡಿದೆ.ಪವಿತ್ರನಗರದಲ್ಲಿ ೧೦೦೦ ವರ್ಷಗಳ ಕಾಲ ೩೦೦೦ ಜನ ವಾಸಿಸುತ್ತಿದ್ದರೆಂದು ಅಂದಾಜು. ಆದರೆ ಈ ಕೇಂದ್ರದ ಪರಿಧಿಗಳಲ್ಲಿ ನೆಲೆಸಿದ ಜನಾಂಗದವರ ಒಟ್ಟು ಸಂಖ್ಯೆ ಅದೆಷ್ಟೋ ಪಟ್ಟು ಅಧಿಕ. ಒಟ್ಟು ಹದಿನೆಂಟು ಪಟ್ಟಣ-ಗ್ರಾಮಗಳನ್ನು ಕಟ್ಟಿಕೊಂಡಿದ್ದರಂತೆ.

೧೦೦೦ ವರ್ಷ ತಲೆಯೆತ್ತಿ ನಿಂತ ಕರಾಲ್ ನಗರದ ಆಯುಷ್ಯ ಇತಿಹಾಸದ ಶಿಖರವೆಂದು ನಾವು ಭ್ರಮಿಸುವ ಆಧುನಿಕ ನಾಗರೀಕತೆಯ ಇತಿಹಾಸಕ್ಕಿಂತಾ ದೀರ್ಘ.ಆಯುಧಗಳ ತಂಟೆಗೇ ಹೋಗದ ಈ ಸಂತೃಪ್ತ ನಗರವ್ಯವಸ್ಥೆ ಮುಗಿದುದು ಹೇಗೆ? ನಂತರ ಅಕ್ಕಪಕ್ಕದ ಪ್ರಾಚೀನ ನಗರಗಳಾದ ಪುಕಯಾಮ ಮತ್ತು ಪಚಕಮಾಕ್‌ಗಳಲ್ಲಿ ಹಿಂಸೆ ಹಾಸುಹೊಕ್ಕಾದುದು ಹೇಗೆ?ಇದಕೆ ಕಾರಣಗಳನ್ನು ಎಲ್ಲಿ ಹುಡುಕೋಣ? ನಮ್ಮ ಹೊರಗಿನ ಚರಿತ್ರೆಯಲ್ಲೋ ಅಥವಾ ಚರಿತ್ರೆಯನ್ನು ನಿರ್ಮಿಸುವ ನಮ್ಮ ಒಳಚಾರಿತ್ರ್ಯದಲ್ಲೋ?ಮಾಚುಪಿಚ್ಚುವನ್ನು ಚಿಲಿದೇಶದ ನೆರೂದಾ ಹಿಂಸೆಯ ಬಣ್ಣಗಳಲ್ಲಿ ಕಂಡ; ಗಾಳಿ, ನೀರು, ನೆಲದ ಹಾದಿಗಳಲ್ಲಿ ಯಾರು ಉಳಿಸಿಕೊಳ್ಳ ಬಲ್ಲರು ತಮ್ಮ ಜೀವಗಳನ್ನು ಬಾಕು, ಕತ್ತಿ, ಈಟಿಗಳಿಲ್ಲದೆ?ಪೆರುದೇಶದ ಮಹಾಕವಿ ವಹಾಯೋ ಮಾಚುಪಿಚ್ಚುವಿನ ಬಗ್ಗೆ ಬರೆಯಲಿಲ್ಲ. ಅವನ ಕಾಲದಲ್ಲಿನ್ನೂ ಕರಾಲ್ ಸೂಪೆ ಕಣಿವೆಯ ಮರಳಿನಡಿ ಮಲಗಿತ್ತು. ಆದರೂ ತನ್ನ ನಂತರದ ಅಕರಾಲವಿಕರಾಲಹಿಂಸಾಮೂಲ ಚರಿತ್ರೆಗೆ ಅಪವಾದವಾದ ಶಾಂತಿ-ಸುಖ-ಸುವ್ಯವಸ್ಥಾಪಕರ ತಾಯಿನಗರವಾದ ಕರಾಲ್‌ನ ಕೂಡುಬಾಳಿನ ಮಾನವೀಯ ಸಂದೇಶವನ್ನು ತನ್ನೊಂದು ಕವಿತೆಯಲ್ಲಿ ಹೀಗೆ ಹೇಳಿದ:ಕೊನೇ ಯುದ್ಧ ಮುಗಿದು ಸೈನಿಕ ಸಾಯುತ್ತಿದ್ದ. ಇನ್ನೊಬ್ಬ ಬಂದ, ಹೇಳಿದ: ‘ಸಾಯ ಬೇಡ, ವಾಪಸಾಗು’ ಪಾಪ, ಸೈನಿಕ ಸಾಯುತ್ತಾ ಹೋದ. ಇಬ್ಬರು, ಮೂವರು, ಹತ್ತು, ನೂರು ಜನ ಬಂದರು, ಅಂದರು: ‘ಸಾಯ ಬೇಡ, ವಾಪಸಾಗು’ ಪಾಪ, ಸೈನಿಕ ಸಾಯುತ್ತಾ ಹೋದ. ಸಾವಿರ ಸಾವಿರ ಲಕ್ಷ ಲಕ್ಷ ಕೋಟಿ ಕೋಟಿ ಜನ ಬಂದರು, ಅಂದರು; ‘ಸಾಯ ಬೇಡ, ವಾಪಸಾಗು’ ಪಾಪ, ಸೈನಿಕ ಸಾಯುತ್ತಾ ಹೋದ. ಕೊನೆಗೆ ಎಲ್ಲರೂ ಒಟ್ಟಾಗಿ ಬಂದರು, ಅಂದರು: ‘ಸಾಯ ಬೇಡ, ವಾಪಸಾಗು.’ ಸೈನಿಕ ಮುಗುಳುನಕ್ಕ,ಎದ್ದು ನಿಂತ, ಮೊದಲು ಸಿಕ್ಕವನನ್ನು ತಬ್ಬಿಕೊಂಡ. ನಡೆಯತೊಡಗಿದ!ಪೈಪೋಟಿಯನ್ನು ವಿಕಾಸವೆಂದು, ಕ್ರೌರ್ಯವನ್ನು ಬಲವೆಂದು, ಸಂಘರ್ಷವನ್ನು ಉಸಿರೆಂದು ಬಗೆದಿರುವ ನಮ್ಮ ಕುರುಡಿಗೆ ಪೆರುವಿನ ಈ ನಿದರ್ಶನ ಮದ್ದಾಗಬಲ್ಲುದೆ?ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.