ಗುರುವಾರ , ಮೇ 6, 2021
30 °C

ಪೋಸ್ಕೊ: ಕೆಐಎಡಿಬಿಗೆ ಕಣ್ಣು, ಹೃದಯ ಇರಬೇಕು

ಎಂ ನಾಗರಾಜ್ Updated:

ಅಕ್ಷರ ಗಾತ್ರ : | |

ಪೋಸ್ಕೊ: ಕೆಐಎಡಿಬಿಗೆ ಕಣ್ಣು, ಹೃದಯ ಇರಬೇಕು

ವಿಶ್ವದ ದೈತ್ಯ ಉಕ್ಕಿನ ಕಾರ್ಖಾನೆಯೊಂದನ್ನು ತಮ್ಮೂರಿಗೆ ಬಿಟ್ಟುಕೊಳ್ಳದೇ, ಓಡಿಸಿದ ಹಳ್ಳಿ ‘ಹಳ್ಳಿಗುಡಿ’. ಪೋಸ್ಕೊ ಎಂಬ ಉಕ್ಕಿನ ಕಾರ್ಖಾನೆಯೊಂದು ತಮ್ಮೂರಿಗೆ ಬಂದು, ತಮ್ಮ ಭೂಮಿಯನ್ನು ಬೇಡುತ್ತಿದೆ ಎಂಬುದನ್ನು ಕೇಳು ತ್ತಲೇ ಕೆರಳಿದ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಳ್ಳಿಗುಡಿ ರೈತರು, ತಮ್ಮ ನೆಲವನ್ನು ಉಳಿಸಿಕೊಳ್ಳಲು ಹೋರಾಟಕ್ಕಿಳಿದರು. ಈ ಹೋರಾಟದಲ್ಲಿ ಅವರೊಂದಿಗೆ ಧಾರ್ಮಿಕ ಮುಖಂಡರೂ ಕೈಜೋಡಿಸಿದ ಫಲವಾಗಿ ಪೋಸ್ಕೊ, ಹಳ್ಳಿಗುಡಿಯಿಂದ ಮಾತ್ರವಲ್ಲ ಕರ್ನಾಟಕದಿಂದಲೇ ಕಾಲ್ಕಿತ್ತಿದೆ.ಆದರೆ ಹೋರಾಟ ಮಾಡಿ ತಮ್ಮ ಜಮೀನು ಉಳಿಸಿಕೊಂಡ ರೈತರಿಗೆ ಮಾತ್ರ ನೆಮ್ಮದಿ ಸಿಕ್ಕಿಲ್ಲ. ಭೂಮಿ ಕಳೆದುಕೊಳ್ಳುವ ಭಯ ಅವರಲ್ಲಿ ಜೀವಂತವಾಗಿದೆ. ಅವರ ಜಮೀನಿನ ಕಾಗದ ಪತ್ರಗಳ ಮೇಲೆ ಬಿದ್ದಿರುವ ‘ಭೂಸ್ವಾಧೀನಕ್ಕೆ ಒಳಪಟ್ಟಿದೆ’ ಎಂಬ ಮೊಹರು (ಸೀಲು) ಅವರನ್ನು ಇನ್ನೂ ಅತಂತ್ರ ಸ್ಥಿತಿಯಲ್ಲಿಯೇ ಇಟ್ಟಿದೆ. ಭೂಮಿ ಮೇಲೆ ಸಾಲ ಪಡೆದು ಬೇಸಾಯ ಮಾಡಬೇಕು ಅಥವಾ ಮದುವೆ–ಮುಂಜಿಗೆ ಬಳಸಬೇಕು ಎಂದರೆ ಈ ಮೊಹರಿನಿಂದಾಗಿ ಅವರಿಗೆ ಬ್ಯಾಂಕ್‌ಗಳಿಂದ ಹಣ ಸಿಗುತ್ತಿಲ್ಲ.ರೈತರ ಇಂದಿನ ಈ ಸ್ಥಿತಿಗೆ ಅಧಿಕಾರಶಾಹಿಯ ವಿಳಂಬ ಧೋರಣೆಯೇ ಪ್ರಮುಖ ಕಾರಣ ವಾಗಿದೆ. ಇಲ್ಲದಿದ್ದರೆ ಈ ಭೂಮಿಯನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ ಎಂಬ ಅಧಿಸೂಚನೆ ಹೊರಡಿಸಲು ಎರಡು ವರ್ಷಗಳು ಬೇಕಿತ್ತೇ?  ತಪ್ಪು ಮಾಡದ ರೈತರನ್ನು ಅನಗತ್ಯ ವಾಗಿ ಸಂಕಷ್ಟಕ್ಕೆ ಸಿಲುಕಿಸಿರುವುದು ಸರಿಯೇ? ರೈತರನ್ನು ಕಂಡರೆ ಅಧಿಕಾರಿಗಳಿಗೆ ಏಕೆ ಇಷ್ಟು ಅಸಡ್ಡೆ?ರಾಜ್ಯದ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ರೈತರೇ ಮುಂದೆ ಬಂದು ಭೂಮಿ ಕೊಡುವುದಾಗಿ ಹೇಳಿದರೂ ಪೋಸ್ಕೊಗೆ ಇಲ್ಲಿ ಜಾಗ ನೀಡುವುದಿಲ್ಲ’ ಎಂದು ಘೋಷಿ ಸಿದ್ದರು. ಪೋಸ್ಕೊದೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿದ ಪತ್ರವನ್ನು ಧಾರ್ಮಿಕ ಮುಖಂಡರು, ಚಳವಳಿಗಾರರಿಗೆ ಕೊಟ್ಟಿದ್ದರು. ಪೋಸ್ಕೊ ಕೂಡ ಕರ್ನಾಟಕ ಕೈಗಾರಿಕಾ ಪ್ರದೇಶಾ ಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಭೂಸ್ವಾಧೀನ ಕ್ಕಾಗಿ ಕೊಟ್ಟಿದ್ದ ₨ 60 ಕೋಟಿಯನ್ನು ವಾಪಸ್ ಪಡೆದಿದೆ. ಆ ಮೂಲಕ ಕರ್ನಾಟಕದೊಂದಿಗಿನ ವ್ಯವಹಾರಕ್ಕೆ ಮಂಗಳವನ್ನೂ ಹಾಡಿದೆ. ಆದರೂ ರೈತರ ಜಮೀನಿನ ಕಾಗದಪತ್ರಗಳ ಮೇಲೆ ಬಿದ್ದಿರುವ ‘ಭೂಸ್ವಾಧೀನಕ್ಕೆ ಒಳಪಟ್ಟಿದೆ’ ಸೀಲು ಮಾತ್ರ ಇನ್ನೂ ಉಳಿದಿದೆ. ಭೂ ಸ್ವಾಧೀನ ಪ್ರಕ್ರಿಯೆ ಅರ್ಧಂಬರ್ಧವಾಗಿದ್ದರೂ ಪಹಣಿಯಲ್ಲಿ ಈ ಒಕ್ಕಣೆ ಬಿದ್ದಿದೆ. ಭೂಮಿಯ ಮಾಲೀಕತ್ವ ರೈತರ ಹೆಸರಿನಲ್ಲಿಯೇ ಇದೆ. ಅದೇನೂ ಬದಲಾಗಿಲ್ಲ. ಅವರು ಬೆಳೆಯನ್ನೂ ಬೆಳೆಯಬಹುದು. ಆದರೆ ಬ್ಯಾಂಕುಗಳಿಂದ ಸಾಲ  ಪಡೆಯಲಾಗದು; ಬೆಳೆಗೆ ವಿಮೆ ಮಾಡಿಸಲೂ ಆಗುವುದಿಲ್ಲ. ಕಷ್ಟ ಎಂದರೆ ಮಾರಲೂ ಆಗುವುದಿಲ್ಲ! (ಕೆಐಎಡಿಬಿ ವಿಧಿಸುವ ಷರತ್ತಿಗೆ ಒಪ್ಪಿ, ಲಿಖಿತ ಅನುಮತಿ ಪಡೆದು ಮಾರಲು ಅವಕಾಶವಿದೆ). ಅವರ ಭೂಮಿಯ ಮೇಲೆ ಅವರಿಗೆ ಹಕ್ಕಿಲ್ಲದ ಸ್ಥಿತಿ! ರೈತರ ಈ ನೋವಿನ ಬದುಕು ನಮ್ಮ ಆಳುವ ವರ್ಗಕ್ಕೆ ಕಾಣುತ್ತಲೇ ಇಲ್ಲ.ನಿಜ, ಯಾವುದೇ ರಾಜ್ಯದ ಅಭಿವೃದ್ಧಿಗೆ ಕೈಗಾರಿಕೆಗಳು ಬೇಕು. ಆದರೆ ಅದಕ್ಕಾಗಿ ಫಲವತ್ತಾದ ಅನ್ನದ ಬಟ್ಟಲನ್ನು ಕಳೆದುಕೊಳ್ಳು ವುದು ಮೂರ್ಖತನವಾಗುತ್ತದೆ. ಸಂಪೂರ್ಣ ಒಣಭೂಮಿ ಅಥವಾ ಸರ್ಕಾರಿ ಭೂಮಿಯನ್ನು ಕೈಗಾರಿಕೆ ಸ್ಥಾಪನೆಗೆ ಬಳಸಿಕೊಳ್ಳಬೇಕು. ಸಮರ್ಪಕ ಪರಿಹಾರ ಸಿಗುವುದಾದರೆ ರೈತರೂ ಅಂತಹ ಭೂಮಿ ಕೊಡಬಹುದು. ಆದರೆ ಯಾರೋ ಉದ್ಯಮಿ ಬಂದು ಇಲ್ಲಿ ಆರಂಭಿಸುವ ಕಾರ್ಖಾನೆಗೆ ತಮ್ಮ ಬದುಕನ್ನೇ ಬಿಟ್ಟುಕೊಡುವ ರೈತರ ಬಗ್ಗೆ ತೋರಬೇಕಾದ ಕನಿಕರವನ್ನು ಅಧಿಕಾರಶಾಹಿ ತೋರುತ್ತಿಲ್ಲ. ಅವರಿಗೆ ಉದ್ಯಮಿಗಳೇ ದೊಡ್ಡವ ರಾಗಿ ಕಾಣುತ್ತಾರೆ. ಅನ್ನದಾತನನ್ನು ನಿಕೃಷ್ಟವಾಗಿ ಕಾಣುವುದನ್ನು ಅಧಿಕಾರಶಾಹಿ ಇನ್ನೂ ಬಿಟ್ಟಿಲ್ಲ ಎಂಬುದಕ್ಕೆ ಹಳ್ಳಿಗುಡಿ ಪ್ರಕರಣವೇ ನಿದರ್ಶನ.ಬೆಂಗಳೂರು ನಗರದ ಸುತ್ತಮುತ್ತಲಿನ ಎಷ್ಟೆಷ್ಟೊ ಎಕರೆ ಭೂಮಿಯನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ಡಿನೋಟಿಫೈ ಮಾಡ ಲಾಯಿತು. ಆ ಅವಧಿಯಲ್ಲಿ ಡಿನೋಟಿಫೈ ಒಂದು ದೊಡ್ಡ ದಂಧೆಯಾಗಿತ್ತು. 20–25 ವರ್ಷದ ಹಿಂದೆ ಸ್ವಾಧೀನವಾಗಿದ್ದ ಭೂಮಿ ಕೂಡ ಡಿನೋ ಟಿಫೈ ಆಯಿತು. ಬೆಂಗಳೂರಿನ ಸುತ್ತಮುತ್ತಲಿನ ಭೂಮಿ ಡಿನೋಟಿಫೈಗೆ ಇಲ್ಲದ ಅಡಚಣೆ ಹಳ್ಳಿಗುಡಿಗೆ ಏಕೆ?  ಇದು ಸಂಪೂರ್ಣ ಕೃಷಿ ಭೂಮಿ ಎಂಬುದು ಕಾರಣವೋ? ಅಥವಾ ಇದು ರೈತರಿಗೇ ಸೇರುತ್ತದೆ ಎಂಬುದು ಕಾರಣವೋ? ಈ ವಿಳಂಬಕ್ಕೆ ಸರ್ಕಾರದ ಬಳಿ ನ್ಯಾಯವಾದ ಕಾರಣವೇ ಇಲ್ಲ. ಅದೂ ಹಳ್ಳಿಗುಡಿ ರೈತರ ಭೂಸ್ವಾಧೀನ ಪ್ರಕ್ರಿಯೆ ಪೂರ್ಣವೇ ಆಗಿರಲಿಲ್ಲ. ಪ್ರಾಥಮಿಕ ಅಧಿಸೂಚನೆ ಮಾತ್ರ ಆಗಿತ್ತು. ಅಂತಿಮ ಅಧಿಸೂಚನೆ ಆಗು ವುದಕ್ಕೆ ಮುನ್ನವೇ ಯೋಜನೆ ಸ್ಥಗಿತ ಗೊಂಡಿದೆ. ಸ್ವಾಧೀನ  ಪ್ರಕ್ರಿಯೆಯನ್ನು ರದ್ದು ಪಡಿಸಲಾಗಿದೆ ಎಂಬ ಅಧಿಸೂಚನೆಯನ್ನು ಹೊರ ಡಿಸಲು ಮಾತ್ರ ಎರಡು ವರ್ಷವಾದರೂ ಆಗಿಲ್ಲ. ಕೆಐಎಡಿಬಿ ಮನಸ್ಸು ಮಾಡದ್ದರೆ ಕೆಲವೇ ದಿನ ಗಳಲ್ಲಿ 3,382 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿ ಮುಗಿಸಬಹುದಿತ್ತು. ಇದಕ್ಕೆ ಕೆಐಎಡಿಬಿಗೆ ಕಣ್ಣು, ಹೃದಯ ಎರಡೂ ಇರಬೇಕಾಗಿತ್ತಷ್ಟೇ.ಈ ರೈತರ ತೊಂದರೆ ಬಗ್ಗೆ ಆಗ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, ಕಾಂಗ್ರೆಸ್‌ ಧುರೀಣ ಎಚ್.ಕೆ.ಪಾಟೀಲರು ಚಳವಳಿ ಗಾರರಿಂದ ಮಾಹಿತಿ ಪಡೆದುಕೊಂಡಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಆ ವಿಚಾರವನ್ನು ಮರೆತಿದ್ದಾರೆ. ಈ ಭಾಗದ ಚುನಾಯಿತ ಪ್ರತಿನಿಧಿಗಳೂ ಇತ್ತ ಗಮನಹರಿಸಿಲ್ಲ. ಮತ ಕೇಳಲು ಮಾತ್ರ ಹಳ್ಳಿ ಹಳ್ಳಿ ತಿರುಗುವ ರಾಜಕಾರಣಿಗಳಿಗೆ ರೈತರ ಸಂಕಷ್ಟ ಕಾಣಿಸುವುದೇ ಇಲ್ಲ. ಅವರ ಗುರಿ ಏನಿದ್ದರೂ ವಿಧಾನಸಭೆ ಪ್ರವೇಶಿಸುವುದು ಮಾತ್ರ. ರೈತರ ಸಮಸ್ಯೆ ಕಟ್ಟಿಕೊಂಡು ಅವರಿಗೇ ನಾಗಬೇಕು? ವಿಧಾನಸೌಧದ ಮಹಡಿ ಏರಲು ಮತ್ತೆ ಏಣಿ ಬೇಕಾಗುವುದು ಐದು ವರ್ಷಗಳು ಮುಗಿದ ಬಳಿಕಲ್ಲವೆ? ಅವರಿಗೆ ಬೇಕಾದುದನ್ನು ತಂದುಕೊಡಲು ಇದೇನು ಬೆಂಗಳೂರು ನಗರದ ಸುತ್ತಲಿನ ಭೂಮಿ ಡಿನೋಟಿಫೈ ವಿಷಯವೂ ಅಲ್ಲವಲ್ಲ!ರೈತರ ಸಮ್ಮತಿ ಪಡೆದು ಕೈಗಾರಿಕೆಗಳಿಗೆ ಭೂಮಿ ವಶಪಡಿಸಿಕೊಳ್ಳುವುದು ಒಳ್ಳೆಯದು. ಬಲವಂತ ದಿಂದ ಭೂಮಿ ಸ್ವಾಧೀನಪಡಿಸಿಕೊಂಡು ಬರೀ ಕೈಗಾರಿಕೆಗಳನ್ನೇ ಸ್ಥಾಪಿಸ ಹೊರಟರೆ ಮುಂದೆ ಕೋಟ್ಯಂತರ ಜನರ ತುತ್ತಿನಚೀಲ ತುಂಬುವುದು ಹೇಗೆ? ಉಳುಮೆ ಮಾಡಲು ಹೊಲವೇ ಇಲ್ಲ ಎಂದರೆ ಹೊಟ್ಟೆಗೆ ಏನು ತಿನ್ನುವುದು? ಯಾವುದೇ ಕಾರಣಕ್ಕೂ ಫಲವತ್ತಾದ ಭೂಮಿ ಮತ್ತು ನೀರಾವರಿ ಪ್ರದೇಶವನ್ನು ಕೈಗಾರಿಕೆಗಳಿಗೆ ಕೊಡ ಬಾರದು. ಜತೆಗೆ, ಸರ್ಕಾರ ಕೈಗಾರಿಕೋದ್ಯಮಿ ಗಳನ್ನು ರಾಜ್ಯಕ್ಕೆ ಆಹ್ವಾನಿಸುವ ಸಂದರ್ಭದಲ್ಲಿ ಅವರಿಗೆ ಅಗತ್ಯವಿರುವ ಭೂಮಿಯನ್ನು ಗುರುತಿಸಿ, ರೈತರು ಮತ್ತು ಆ ಉದ್ಯಮಿಗಳನ್ನು ಒಂದು ಕಡೆ ಕೂರಿಸಿ ಅವರೇ ಭೂಮಿಯ ದರ ಇತ್ಯರ್ಥ ಮಾಡಿಕೊಳ್ಳಲು ವೇದಿಕೆ ಕಲ್ಪಿಸುವುದು ಒಳಿತು. ರೈತನ ಎದೆ ಮೇಲೆ ನಿಂತು ಭೂಸ್ವಾಧೀನ ಪ್ರಕ್ರಿಯೆ ನಡೆಸುವುದನ್ನು ಸರ್ಕಾರ ಕೈಬಿಡಬೇಕು. ಆತನ ಸಮ್ಮತಿಯೊಂದಿಗೆ ಭೂಮಿಯನ್ನು ಕಾರ್ಖಾನೆ ಗಳಿಗೆ ಪಡೆದುಕೊಳ್ಳುವ ವ್ಯವಸ್ಥೆ ಜಾರಿಯಾಗ ಬೇಕು. ಉದ್ಯಮಿಗಳ ಹಿತಚಿಂತನೆ ಸರ್ಕಾರದ ಕೆಲಸವಲ್ಲ. ಕಾರ್ಖಾನೆ ಆರಂಭಿಸಬೇಕು ಎನ್ನುವ ಉದ್ಯಮಿ ಬೇಕಿದ್ದರೆ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಭೂಮಿಯನ್ನು ಮಾರುಕಟ್ಟೆ ದರದಲ್ಲಿ ಖರೀದಿಸಬೇಕು. ಈ ವಾತಾವರಣ ನಿರ್ಮಾಣವಾದರೆ ಆಗ ರೈತರಿಂದ ಪ್ರತಿರೋಧವೂ ಕಡಿಮೆಯಾಗಬಹುದು.ಹಳ್ಳಿಗುಡಿ ವಿಚಾರದಲ್ಲಿ ಸರ್ಕಾರವೂ ರೈತ ರೊಂದಿಗೆ ಸರಿಯಾಗಿ ವರ್ತಿಸಲಿಲ್ಲ. ಜತೆಗೆ ರಾಜಕೀಯವೂ ಇದರಲ್ಲಿ ಸೇರಿಕೊಂಡಿತು. ಒಂದು ಗುಂಪು  ಪೋಸ್ಕೊ ಕಾರ್ಖಾನೆ ಬೇಡ ಎಂದು ಪಟ್ಟು ಹಿಡಿದರೆ ಇನ್ನೊಂದು ಗುಂಪು ಬೇಕು ಎಂದು ಬಸ್ಸುಗಳನ್ನು ಮಾಡಿಕೊಂಡು ಬೆಂಗಳೂರಿಗೆ ತೆರಳಿ ಒತ್ತಾಯಿಸಿತ್ತು. ಆರಂಭದಲ್ಲಿ ಕೈಗಾರಿಕಾ ಸಚಿವ ಮುರುಗೇಶ ನಿರಾಣಿಯವರು, ಪೋಸ್ಕೊ ಕಂಪೆನಿ ಹಳ್ಳಿಗುಡಿಯಲ್ಲಿಯೇ ಆಗ ಬೇಕು ಎಂದು ಪಟ್ಟು ಹಿಡಿದು ಕೆಲಸ ಮಾಡಿದರು. ಅವರಲ್ಲಿ ಬಹಳ ತರಾತುರಿಯೂ ಇತ್ತು. ಹಾಗಾಗಿ, ಈ ಭೂ ಸ್ವಾಧೀನದ ಪ್ರಾಥಮಿಕ ಅಧಿಸೂಚನೆ ಹೊರಬಿದ್ದ ಕೂಡಲೇ ರೈತರಿಗೆ ಎರಡೆರಡು ಬಾರಿ ನೋಟಿಸ್ ನೀಡಲಾಗಿತ್ತು. ಸಮೀಪದ ಶಿರೂರಿನಲ್ಲಿ ಎಸ್.ಆರ್.ಗ್ರೂಪ್‌ನ ಉಕ್ಕು ಕಾರ್ಖಾನೆ ಮತ್ತು ಮೇವುಂಡಿಯ ಅನಿಲ ವಿದ್ಯುತ್ ಸ್ಥಾವರಕ್ಕೆ ಪೋಸ್ಕೊಗಿಂತ ಮೊದಲೇ ಭೂಸ್ವಾಧೀನದ ಪ್ರಾಥಮಿಕ ಅಧಿಸೂಚನೆ ಹೊರ ಬಿದ್ದಿತ್ತು. ಆದರೆ  ರೈತರಿಗೆ ಒಮ್ಮೆ ಮಾತ್ರ ನೋಟಿಸ್ ಹೋಗಿತ್ತು. ಪೋಸ್ಕೊ ವಿಚಾರದಲ್ಲಿ ಮಾತ್ರ ಏಕೆ ಅಷ್ಟೊಂದು ವಿಶೇಷ ಕಾಳಜಿ ತೋರ ಲಾಯಿತು ಎಂಬುದೂ ಈಗಲೂ ಒಗಟಾಗಿದೆ. ಅಲ್ಲದೇ, ಭೂ ಸ್ವಾಧೀನದ ಲಾಭ ಪಡೆಯಲು  ಕೆಲವರು ಬೇನಾಮಿಯಾಗಿ ಇಲ್ಲಿ ಭಾರಿ ಪ್ರಮಾಣ ದಲ್ಲಿ ಭೂಮಿ ಖರೀದಿಸಿದ್ದಾರೆ ಎಂಬ ಗುಲ್ಲು ಸಹ ವ್ಯಾಪಕವಾಗಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಸರ್ಕಾರವೂ ಆತುರ ತೋರಿತು. ಸರ್ಕಾರದ ಈ ನಡೆ ಸಂಶಯಕ್ಕೆ ಕಾರಣವಾಯಿತು.ಹಳ್ಳಿಗುಡಿ ಸೀಮೆ ಸಂಪೂರ್ಣ ಮಳೆಯಾಶ್ರಿತ ಪ್ರದೇಶ. ಆದರೆ ಕಪ್ಪು ಮಣ್ಣಿನ ಈ ಪ್ರದೇಶದಲ್ಲಿ 4–5 ಗಟ್ಟಿ ಮಳೆಯಾದರೂ ಒಳ್ಳೆ ಫಸಲು ರೈತರ ಕೈ ಸೇರುತ್ತದೆ. ಈ ಜಾಗವನ್ನು ನೋಡಿದಾಗ ಕೈಗಾರಿಕೆಗೆ ಅವಕಾಶ ನೀಡಬಹುದಿತ್ತೇನೋ ಎನಿಸುವುದು ಸಹಜ. ಆದರೆ ಸರ್ಕಾರ ಸುಮಾರು ₨ 1,800 ಕೋಟಿ  ಖರ್ಚು ಮಾಡಿ, ಈ ಭಾಗಕ್ಕೆ ನೀರಾವರಿ ಕಲ್ಪಿಸುವ ಬೃಹತ್ ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಕಾರ್ಯಗತ ಗೊಳಿಸುತ್ತಿದೆ. ಮುಂಡರಗಿ ತಾಲ್ಲೂಕಿನ ಡಂಬಳ ಹೋಬಳಿಯ ನಾನಾ ಹಳ್ಳಿಗಳು ನೀರಾವರಿಗೆ ಒಳಪಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಭೂಮಿ ಬಿಟ್ಟುಕೊಡಲು ಯಾವ ರೈತರು ಸಿದ್ಧರಿರುತ್ತಾರೆ? ಅಣೆಕಟ್ಟೆ ಕಳೆದ ವರ್ಷವೇ ಉದ್ಘಾಟನೆಯಾಗಿದೆ. ಸರ್ಕಾರಕ್ಕೆ ಇಚ್ಛಾಶಕ್ತಿ ಹಾಗೂ ಈ ಭಾಗದ ಜನಪ್ರತಿನಿಧಿಗಳಿಗೆ ಪ್ರಾಮಾಣಿಕ ಕಾಳಜಿ ಇದ್ದಿದ್ದರೆ ಬಲದಂಡೆ ನಾಲೆ ಕೆಲಸ ಈ ವೇಳೆಗೆ ಪೂರ್ಣ ಗೊಂಡು ರೈತರ ಹೊಲಕ್ಕೆ ನೀರು ಹರಿಯಬೇಕಿತ್ತು. ಅಣೆಕಟ್ಟೆ ನಿರ್ಮಿಸಿ ನೀರು ನಿಲ್ಲಿಸಿ ನೋಡಿ ಸಂಭ್ರಮಿಸುವ ಭಾಗ್ಯ ಮಾತ್ರ ಈ ಭಾಗ ದವರದ್ದಾಗಿದೆ. ಅದನ್ನು ಹೊಲಕ್ಕೆ ಹರಿಸಿ, ಸಮೃದ್ಧಿ ಕಾಣಬೇಕು ಎಂಬುದಕ್ಕೆ ಯಾರೂ ಒತ್ತು ನೀಡು ತ್ತಿಲ್ಲ. ಇದಕ್ಕೆ ಕೃಷ್ಣಾ ನದಿ ಯೋಜನೆಯೂ ಹೊರ ತಲ್ಲ. ಆಲಮಟ್ಟಿಯಲ್ಲಿ ಅಗಾಧ ಪ್ರಮಾಣದಲ್ಲಿ ನಿಲ್ಲುವ ಜಲರಾಶಿಯ ಸೌಂದರ್ಯವನ್ನು ರೈತರು ಸವಿಯಬಹುದು ಮಾತ್ರ; ಬೆಳೆಗೆ ಮತ್ತೆ ಮಳೆಯನ್ನೇ ನೋಡುತ್ತಾ ಕೂರಬೇಕು ಅಷ್ಟೆ.ಕೈಗಾರಿಕಾಭಿವೃದ್ಧಿಗೆ ಸರ್ಕಾರ ಸ್ಪಷ್ಟವಾದ ಕೈಗಾರಿಕಾ ನೀತಿ ಹೊಂದಿರಬೇಕು. ಕಾರ್ಖಾನೆಗಾಗಿ ಭೂಮಿ ಕಳೆದುಕೊಳ್ಳುವ ರೈತರ ಹಿತ ಕಾಪಾಡು ವುದಕ್ಕೆ ಆದ್ಯತೆ ನೀಡಬೇಕು. ಕಾರ್ಖಾನೆ ಆರಂಭಿಸ ಲಾಗದೆ ಕಂಪೆನಿ ಹಿಂತಿರುಗಿದರೆ ಆ ಭೂಮಿ ಮತ್ತೆ ರೈತರಿಗೆ ಸಿಗುವಂತಹ ವ್ಯವಸ್ಥೆ ಜಾರಿಯಾಗಬೇಕು. ಭೂಮಿ ಕೊಡುವ ರೈತರಿಗೆ ಮಾರುಕಟ್ಟೆ ದರ ಸಿಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಯೂ ಸರ್ಕಾರದ್ದೇ.  ಸರ್ಕಾರ ಮಾತ್ರವಲ್ಲದೆ ಉದ್ಯಮಿಗಳು ರೈತರೊಂದಿಗೆ ಮಾತನಾಡಿ ದರ ನಿಗದಿ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಬೇಕು. ಕಾರ್ಖಾನೆಗೆ ಅಗತ್ಯವಾದಷ್ಟೂ ಭೂಮಿಯನ್ನು ಮಾತ್ರ ಕೊಡಿಸಬೇಕು. ಇಲ್ಲದಿದ್ದರೆ ಹೆಚ್ಚುವರಿ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಗೆ ಕಂಪೆನಿ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅವರ ರಿಯಲ್ ಎಸ್ಟೇಟ್ ದಂಧೆಗೆ ಸರ್ಕಾರ ಏಕೆ ಭೂಮಿ ಕೊಡಬೇಕು? ರೈತ ಎಲ್ಲವನ್ನೂ ಕಳೆದುಕೊಂಡು, ಬಿಟ್ಟುಕೊಟ್ಟ ಭೂಮಿಯ ದುರುಪಯೋಗ ವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು. ಆಗ ಸರ್ಕಾರದ ಮೇಲೆ ವಿಶ್ವಾಸವೂ ಮೂಡುತ್ತದೆ. ಇಲ್ಲದಿದ್ದರೆ ಹೋರಾಟಗಳನ್ನು ತಪ್ಪಿಸಲೂ ಆಗದು; ಕಾರ್ಖಾನೆಗಳೂ ಬರುವುದಿಲ್ಲ.ನಿಮ್ಮ ಅನಿಸಿಕೆ ತಿಳಿಸಿ:

editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.