ಶುಕ್ರವಾರ, ಜೂನ್ 18, 2021
21 °C

ಪ್ರಿಯವಾದ ಮಾತು

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ನನ್ನ ಗೆಳೆಯರೊ­ಬ್ಬರಿದ್ದಾರೆ. ಅವರಿಗೆ ತಮ್ಮ ಸ್ವಭಾವದ ಬಗ್ಗೆ ಹೆಮ್ಮೆಗಿಂತ ಅಹಂಕಾರ.  ಅವರು ಯಾವಾಗಲೂ ಹೇಳುತ್ತಾರೆ, ‘ನೋಡಿ, ನನ್ನ ಮಾತೆಂದರೆ ಒಂದೇ ಹೊಡೆತ, ಎರಡು ತುಂಡು. ನನ್ನ ಮುಂದೆ ಯಾರಿದ್ದಾರೆ ಎಂಬುದು ಮುಖ್ಯ­ವಲ್ಲ. ಯಾರಿದ್ದರೂ ನಾನು ಹೇಳುವುದು ಒಂದೇ ರೀತಿ. ಮುಖದ ಮೇಲೆ ಹೊಡೆದಂತೆ ಹೇಳಿಬಿಡುತ್ತೇನೆ.  ಅವರು ಏನು ಅಂದುಕೊಳ್ಳುತ್ತಾರೋ ಎಂದು ಭಯಪಡುವುದಿಲ್ಲ’. ಈ ತರಹ ಮಾತನಾಡುವವರು ಸಾಕಷ್ಟು ಜನ ಇದ್ದಾರೆ. ಆದರೆ, ಅವರು ಜೀವನದಲ್ಲಿ ತುಂಬ ಕಷ್ಟಪಟ್ಟಿರುವುದೂ ಸತ್ಯ.  ನಾವು ಕಪಟ ಮಾಡಬೇಕಿಲ್ಲ. ಆದರೆ, ಯಾರ ಸ್ವಭಾವ ಹೇಗೆ ಎಂದು ತಿಳಿದು ಅವರಿಗೆ ಒಪ್ಪಿತವಾಗುವಂತೆ ಮಾತನಾಡುವುದು ವಿವೇಕ. ಒಂದು ಕಾಡಿನಲ್ಲಿ ಒಂದು ವಯಸ್ಸಾದ ನರಿ ನಡೆದು ಹೋಗುತ್ತಿ­ರುವಾಗ ಬದಿಯಲ್ಲಿ ಸತ್ತು ಬಿದ್ದ ಆನೆ­ಯೊಂದನ್ನು ಕಂಡಿತು. ಅದರ ಬಾಯಿ­ಯಲ್ಲಿ ನೀರೂರಿತು. ಇನ್ನು ಒಂದು ವಾರ ಊಟದ ಚಿಂತೆಯಿಲ್ಲ ಎಂದು ಸಂತೋಷ­ಪಟ್ಟಿತು. ಹೋಗಿ ಆನೆಯ ಶರೀರವನ್ನು ಕಚ್ಚಿತು. ಮೊದಲೇ ಅದು ದಪ್ಪನಾದ ಚರ್ಮ, ಅದರೊಂದಿಗೆ ನರಿಯ ಹಲ್ಲು­ಗಳೂ ಅಲುಗಾಡುತ್ತವೆ. ಅದಕ್ಕೆ ಚರ್ಮ­ವನ್ನು ಕತ್ತರಿಸಲಾಗಲಿಲ್ಲ. ಯಾವು­ದಾ­ದರೂ ಬಲಶಾಲಿಯಾದ ಮೃಗವೊಂದು ಚರ್ಮವನ್ನು ಒಂದೆಡೆ ಕತ್ತರಿಸಿ­ಹೋದರೂ ಸಾಕು ತನಗೆ ಸಮಾರಾಧನೆ ಎಂದುಕೊಂಡು ಕಾಯತೊಡಗಿತು. ಆಗ ಅಲ್ಲಿಗೆ ಸಿಂಹವೊಂದು ಬಂದಿತು. ನರಿ ಅತ್ಯಂತ ವಿನಯದಿಂದ ಕೈಮುಗಿದು, ‘ಪ್ರಭೂ, ನಾನು ತಮಗೋಸ್ಕರವೇ ಈ ಆನೆಯ ಶರೀರವನ್ನು ಕಾಪಾಡಿಕೊಂಡು ನಿಂತಿದ್ದೇನೆ.  ತಾವು ದಯವಿಟ್ಟು ಇದನ್ನು ಸ್ವೀಕರಿಸಬೇಕು’ ಎಂದಿತು. ಇಡೀ ಆನೆ­ಯನ್ನು ಸಿಂಹ ತಿನ್ನಲಾರದು.  ಅದು ತಿಂದು ಬಿಟ್ಟಿದ್ದು ತನಗೆ ಎಷ್ಟೋ ದಿನ ಸಾಕಾದೀತು ಎಂಬುದು ನರಿಯ ಆಸೆ. ಆದರೆ ಸಿಂಹ ಗಾಂಭೀರ್ಯದಿಂದ, ‘ಧನ್ಯವಾದಗಳು. ನಿನಗೆ ಗೊತ್ತಿದೆ, ನಾನು ಎಂದೂ ಮತ್ತೊಬ್ಬರು ಕೊಂದ ಪ್ರಾಣಿ­ಯನ್ನು ತಿನ್ನುವುದಿಲ್ಲ.  ಆದ್ದರಿಂದ ಈ ಆನೆಯ ದೇಹ ನಿನಗೇ ಬಹುಮಾನ’ ಎಂದು ಹೇಳಿ ಹೊರಟು ಹೋಯಿತು.ಅರ್ಧಗಂಟೆಯಲ್ಲಿ ಅಲ್ಲಿಗೊಂದು ಚಿರತೆ ಗುರುಗುಟ್ಟುತ್ತ ಬಂದಿತು. ಅದು ಮೊದಲೇ ಉಗ್ರಪ್ರಾಣಿ. ಅದಕ್ಕೀಗ ಹಸಿ­ವೆಯೂ ಆಗಿದೆ. ಇದನ್ನು ನಿಭಾ­ಯಿಸು­ವುದು ಹೇಗೆ ಎಂದು ಒಂದು  ಕ್ಷಣ ಚಿಂತಿ­ಸಿತು. ಮರುಕ್ಷಣವೇ ಗಟ್ಟಿಯಾದ ಧ್ವನಿಯಲ್ಲಿ ಧೈರ್ಯದಿಂದ ಹೇಳಿತು, ‘ಸ್ವಾಮೀ, ನೀವು ಬಲಶಾಲಿಗಳು ನಿಜ. ಆದರೆ, ಈಗ ನೀವು ತಪ್ಪು ಸ್ಥಳದಲ್ಲಿ ತಪ್ಪು ಸಮಯದಲ್ಲಿ ಬಂದಿದ್ದೀರಿ.  ಈ ಆನೆ­ಯನ್ನು ಈಗ ತಾನೇ ಸಿಂಹ ಬೇಟೆ­ಯಾಡಿದ್ದು ಸ್ನಾನ ಮಾಡಿಬರಲು ನದಿಗೆ ಹೋಗಿದೆ. ಅದು ಬರುವವರೆಗೆ ಯಾರೂ ಮುಟ್ಟದಂತೆ ಕಾಯಲು ನನಗೆ ಹೇಳಿ ಹೋಗಿದೆ. ಅದಲ್ಲದೇ, ಸೊಕ್ಕಿಗೆ  ಬಂದ ಚಿರತೆ ಏನಾದರೂ ಹತ್ತಿರ ಬಂದರೆ ಹೇಳು ಅದನ್ನು ಉದ್ದುದ್ದ ಸೀಳಿ ಬಿಡುತ್ತೇನೆಯೆಂದು  ವಿಶೇಷ ಸಂದೇಶ­ವನ್ನು ನೀಡಿದೆ’ ಎಂದಿತು.  ಮರುಕ್ಷಣ­ದಲ್ಲಿ ಚಿರತೆ ಮಾಯವಾಯಿತು.

ನಂತರ ಅಲ್ಲಿಗೆ ಒಂದು ಹುಲಿ ಬಂದಿತು. ಆಗ ನರಿ, ‘ಸ್ವಾಮೀ, ಇದು ಸಿಂಹದ ಬೇಟೆ.  ಆದರೆ, ಸಿಂಹ ಬರಲು ಬಹುಕಾಲ ಬೇಕು. ತಾವು ಆ ಬದಿಯ ಭಾಗವನ್ನು ಬಳಸಬಹುದು’ ಎಂದಿತು.  ಹುಲಿ ಹೆದರಿಕೆಯಿಂದ ಹಿಂದೆ ಮುಂದೆ ನೋಡಿದಾಗ, ‘ಚಿಂತೆ ಬೇಡ, ನಾನು ದೂರದಲ್ಲಿದ್ದು ಸಿಂಹ ಹತ್ತಿರ ಬಂದಾಗ ಕೂಗಿ ಎಚ್ಚರಿಸುತ್ತೇನೆ. ನಿಧಾನವಾಗಿ ಊಟಮಾಡಿ’ ಎಂದಿತು.  ಹುಲಿ ಆನೆಯ ಚರ್ಮವನ್ನು ಕತ್ತರಿಸಿ ತಿನ್ನತೊಡಗಿತು.  ಐದು ನಿಮಿಷದ ನಂತರ ನರಿ, ‘ಓಡಿ, ಓಡಿ, ಸಿಂಹ ಬಂದಿತು’ ಎಂದು ಕೂಗಿತು. ಹುಲಿ ನಾಪತ್ತೆ! ನರಿಗೆ ಒಂದು ವಾರ ಊಟದ ತೊಂದರೆಯಾಗಲಿಲ್ಲ.  ಬುದ್ಧಿ­ವಂತಿಕೆಯಿಂದ ಮಾತನಾ­ಡುವುದೆಂದರೆ ಮೋಸಮಾಡುವುದಲ್ಲ.  ಅದರಂತೆ ಎಲ್ಲರ ಜೊತೆಗೂ ಒಂದೇ ರೀತಿ ಮಾತ­ನಾ­ಡುವುದೂ ಅಲ್ಲ. ಎದುರಿಗಿರುವವರ ಮನಸ್ಸಿಗೆ ನೋವಾಗದಂತೆ ಸತ್ಯವನ್ನೇ ಹೇಳುವುದು ಒಂದು ಕಲೆ.  ಈ ಕಲೆ­ಯನ್ನು ಸಾಧಿಸಿರುವವರಿಗೆ ವೈರಿಗಳಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.