ಶನಿವಾರ, ಮೇ 15, 2021
29 °C

ಬನವಾಸಿ ಅಭಿವೃದ್ಧಿಗೆ ಬೇಕು ಇಚ್ಛಾಶಕ್ತಿ!

ಎಂ ನಾಗರಾಜ್ Updated:

ಅಕ್ಷರ ಗಾತ್ರ : | |

ಬನವಾಸಿ ಅಭಿವೃದ್ಧಿಗೆ ಬೇಕು ಇಚ್ಛಾಶಕ್ತಿ!

ಕದಂಬರ ರಾಜಧಾನಿಯಾಗಿದ್ದ ಬನವಾಸಿ ಕನ್ನಡ ನಾಡಿನ ಅತ್ಯಂತ ಹಳೆಯ ಪಟ್ಟಣ. ಒಂದು ಕಾಲದಲ್ಲಿ ತಾಲ್ಲೂಕು ಕೇಂದ್ರವೂ ಆಗಿತ್ತು. ಈಗ ಗ್ರಾಮ ಪಂಚಾಯ್ತಿ ಮಟ್ಟಕ್ಕಿಳಿದಿರುವುದು ವಿಪರ್ಯಾಸವೇ ಸರಿ.ಶತಮಾನಗಳ ಕಾಲ ರಾಜಧಾನಿಯಾಗಿ ವಿಜೃಂಭಿಸಿದ್ದ ಬನವಾಸಿಯ ಇಂದಿನ ಈ ಸ್ಥಿತಿಗೆ ಅಧಿಕಾರಿಗಳ ಮತ್ತು ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸುಮಾರು ಆರು ನೂರು ವರ್ಷಗಳ ಕಾಲ ಆಳಿದ ಕದಂಬರು ಪಟ್ಟಣವನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟಿದ್ದರು. ಬನವಾಸಿ ಸಾಮ್ರಾಜ್ಯದ ಭಾಗವಾಗಿದ್ದ ಗುಡ್ನಾಪುರ ಬಳಿ ಕದಂಬ ರಾಜ ರವಿವರ್ಮನು ಕಾಮಜಿನಾಲಯ ಕಟ್ಟಿಸಿ, ಇಲ್ಲಿ 10ನೇ ಶತಮಾನದಲ್ಲಿಯೇ ‘ಮಧು ಮಹೋತ್ಸವ’ ಕಾರ್ಯಕ್ರಮವನ್ನೂ ಆರಂಭಿಸಿದ್ದ. ನಂತರ ಸೋಂದೆ ಅರಸರ ಕಾಲಕ್ಕೆ ಇದು ವಸಂತೋತ್ಸ­ವವಾಗಿ ಮಾರ್ಪಾಡಾಯಿತು. ಇದರ ಮುಂದು­ವರಿದ ಭಾಗವಾಗಿ ಈಗ ಚುನಾಯಿತ ಸರ್ಕಾರ ಕದಂಬೋತ್ಸವ ನಡೆಸುತ್ತಿದೆ.ಅದೂ 1996ರಿಂದ ಈಚೆಗೆ. ಆರಂಭ ದಿನದ ಉತ್ಸವಗಳಲ್ಲಿ ಇಲ್ಲಿಯ ಇತಿಹಾಸ, ಸಂಸ್ಕೃತಿ­ಯನ್ನು ಬಿಂಬಿಸುವ ಕೆಲಸವಾಗಿತ್ತು. ಪಂಪ, ಅಲ್ಲಮಪ್ರಭುವಿನ ರೂಪಕಗಳ ಪ್ರದರ್ಶನ­ವಾಗುತ್ತಿತ್ತು. ಕಾರ್ಯ­ಕ್ರಮ ಆಯೋಜನೆ ಅರ್ಥವತ್ತಾಗಿತ್ತು. ಇತ್ತೀಚೆಗೆ ಇದು ಒಂದು ರೀತಿಯಲ್ಲಿ ಸರ್ಕಾರಿ ಕಾರ್ಯಕ್ರಮ­ವಾಗಿರುತ್ತದೆ ಅಷ್ಟೇ. ಆ ಕಾಲದ ರಾಜರ ಆಳ್ವಿಕೆಯನ್ನು ಈ ಕಾಲದ ಪ್ರಜೆಗಳಿಂದಲೇ ಚುನಾಯಿತವಾದ ಸರ್ಕಾರದ ಕಾರ್ಯವೈಖರಿ ಜತೆ ಹೋಲಿಸಲು ಸಾಧ್ಯವೇ ಇಲ್ಲ. ವಸಂತೋತ್ಸವದಲ್ಲಿ ಒಂಬತ್ತು ದಿನಗಳ ಕಾಲ ಅದ್ದೂರಿಯ ಕಾರ್ಯಕ್ರಮಗಳು, ರಾಜೋ­ಪಚಾರ ಸೇವೆಯ ಹೆಸರಿನಲ್ಲಿ ಸಂಗೀತ, ನೃತ್ಯ, ಸಾಹಿತ್ಯ, ಕಲೆಯ ಪ್ರದರ್ಶನ ನಡೆಯುತ್ತಿತ್ತು ಎಂಬುದನ್ನು ಇತಿಹಾಸ ಹೇಳುತ್ತದೆ.ವರದಾ ನದಿಯ ದಂಡೆ ಮೇಲಿರುವ ಬನವಾಸಿಯ ಮಧುಕೇಶ್ವರ ದೇವಾಲಯದ ಅತ್ಯದ್ಭುತ ಶಿಲ್ಪಕಲೆ, ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಮಾತ್ರ ಏನೇನೂ ಸೌಲಭ್ಯಗಳಿಲ್ಲ. ಶಿಲ್ಪಕಲೆಗೆ ಮಾರುಹೋಗಿ ಅಲ್ಲಿಯೇ ಒಂದೆರಡು ದಿನ ತಂಗಿ, ಇನ್ನಷ್ಟು ಕಣ್ತುಂಬಿಕೊಳ್ಳಲು ಬಯಸುವ ಪ್ರವಾಸಿಗರಿಗೆ ಉಳಿಯಲು ವ್ಯವಸ್ಥೆ ಇಲ್ಲ. ಇರುವ ಒಂದು ಯಾತ್ರಿ ನಿವಾಸ್ ಅತಿಥಿಗೃಹದಲ್ಲಿ ಇರುವುದು ಕೇವಲ 11 ಕೋಣೆಗಳು; ಲೋಕೋಪಯೋಗಿ ಇಲಾಖೆಯ ಇನ್ನೊಂದು ಅತಿಥಿಗೃಹ ಬಿಟ್ಟರೆ ತಂಗಲು ಬೇರೊಂದು  ಸ್ಥಳ ಇಲ್ಲ. ಅಪ್ಪಿತಪ್ಪಿ ಉಳಿದರೂ ಊಟಕ್ಕೆ ಸೌಕರ್ಯವೇ ಇಲ್ಲ. ಇರುವ ಒಂದೋ ಎರಡೋ ಸಣ್ಣ ಹೋಟೆಲ್‌ಗಳಲ್ಲಿ ಕಾಫಿ, ಚಹಾ, ತಿಂಡಿ ಆಗಬಹುದು. ಅದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವುದು ಕಷ್ಟ.ದೂರದ ಊರುಗಳಿಂದ ಬರುವ ಪ್ರವಾಸಿಗರು ಇಲ್ಲಿ ಪಡುವ ಯಾತನೆ ಅಷ್ಟಿಷ್ಟಲ್ಲ. ಬುತ್ತಿ ಕಟ್ಟಿಕೊಂಡು ಬಂದರೂ ಕುಳಿತು ತಿನ್ನಲು ಸ್ಥಳವಿಲ್ಲ. ಮಧುಕೇಶ್ವರ ದೇವಾಲಯದ ಮೆಟ್ಟಿಲು ಅಥವಾ ಅದರ ಮುಂಭಾಗದ ರಸ್ತೆಯಲ್ಲಿಯೇ ಕುಳಿತು ಊಟ ಮಾಡಬೇಕು. ಸ್ವಲ್ಪ ದೂರದಲ್ಲಿರುವ ಪಂಪವನ ಉದ್ಯಾನದ ನಿರ್ವಹಣೆ ಏನೇನೂ ಚೆನ್ನಾಗಿಲ್ಲ. ಅದನ್ನು ಉದ್ಯಾನ ಎನ್ನಲೂ ಆಗದು. ಈ ಸ್ಥಿತಿಯಲ್ಲಿರುವ ಈ ಉದ್ಯಾನದಲ್ಲಿ ಕುಳಿತು ಬುತ್ತಿ ಬಿಚ್ಚಿ ತಿನ್ನಲು ಮನಸ್ಸಾದರೂ ಹೇಗೆ ಬರಲು ಸಾಧ್ಯ? ಹಾಗಾಗಿ, ಪ್ರವಾಸಿಗರು ಎಲ್ಲಕ್ಕೂ ಅನಿವಾರ್ಯವಾಗಿ ಸಮೀಪದ ಶಿರಸಿ ಅಥವಾ ಸೊರಬವನ್ನು ಆಶ್ರಯಿಸಬೇಕಾಗಿದೆ. ಇದು ಅಧಿಕಾರಿಗಳ ಮತ್ತು ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯವಲ್ಲದೇ ಮತ್ತೇನು? ಪ್ರಸಿದ್ಧ ಪ್ರವಾಸಿ ತಾಣ ಅದರಲ್ಲೂ ಇಂತಹ ಚಿಕ್ಕ ಊರನ್ನೇ ಸುಸ್ಥಿತಿಯಲ್ಲಿ ಇಡಲು ಆಗುವುದಿಲ್ಲ ಎನ್ನುವುದಾದರೆ ಸರ್ಕಾರ ಇನ್ನು ಪ್ರವಾಸೋದ್ಯಮದ ಅಭಿವೃದ್ಧಿ ಮಾಡುವು­ದಾದರೂ ಏನು?ಬನವಾಸಿಯ ಸೌಂದರ್ಯ ಕಂಡು ಮಾರುಹೋಗಿದ್ದ ಆದಿ ಕವಿ ಪಂಪ ಮನುಷ್ಯ­ನಾಗಿ ಇಲ್ಲಿ ಜನಿಸಲು ಸಾಧ್ಯವಾಗದಿದ್ದರೆ ಕೊನೆಗೆ ಒಂದು ಕೋಗಿಲೆಯೋ ಅಥವಾ ದುಂಬಿಯಾಗಿಯಾದರೂ ಹುಟ್ಟಬೇಕು ಎಂದು ಬಯಸಿದ್ದ. ಈಗಿನ ಬನವಾಸಿಯನ್ನು ನೋಡಿದರೆ ಪಂಪನೇ ಅಲ್ಲ, ಯಾರೂ ಅಂತಹ ಬಯಕೆಯನ್ನು ವ್ಯಕ್ತಪಡಿಸುವುದಿಲ್ಲ.

ಪ್ರವಾಸೋದ್ಯಮ ಇಲಾಖೆಗಾಗಿ ದೇವಸ್ಥಾನ ಸಮಿತಿ ನೀಡಿದ ಏಳು ಎಕರೆ ಜಮೀನಿನಲ್ಲಿ ಎದ್ದ ಕಟ್ಟಡ ಹಲವು ವರ್ಷವಾದರೂ ಬಳಕೆ­ಯಾಗದ ಕಾರಣ ನಂತರ ಅದನ್ನು ಕಟ್ಟಡ ಸಮೇತವಾಗಿ ಪುರಾತತ್ವ ಇಲಾಖೆ ಸುಪರ್ದಿಗೆ ನೀಡಲಾಗಿದೆ. ಆದರೆ ಈ ಇಲಾಖೆಗೂ ಅದೇಕೋ ಬನವಾಸಿ ಮೇಲೆ ಮುನಿಸು ಇರುವಂತೆ ಕಾಣುತ್ತದೆ. ಹಾಗಾಗಿಯೇ ಸುತ್ತ­ಮುತ್ತಲಿನ ಪ್ರದೇಶದಲ್ಲಿ ಉತ್ಖನನದ ವೇಳೆ ದೊರೆತ ಅನೇಕ ಭವ್ಯ ಶಿಲ್ಪಗಳನ್ನು ಮಧುಕೇಶ್ವರ ದೇವಾಲಯದ ಆವರಣದ ಕೊಠಡಿಯೊಂದರಲ್ಲಿ ಮನಸ್ಸಿಗೆ ತೋಚಿದಂತೆ ‘ಸಂರಕ್ಷಿಸಿ’ ಇಟ್ಟಿದ್ದಾರೆ. ಇವನ್ನೆಲ್ಲಾ ವಸ್ತುಸಂಗ್ರ­ಹಾ­ಲಯದಲ್ಲಿ ಒಪ್ಪ ಓರಣವಾಗಿ ಜೋಡಿಸಿ, ವಿಶೇಷ ದೀಪಗಳ ವ್ಯವಸ್ಥೆ ಮಾಡಿಸುವ ಕಾರ್ಯವಾಗಿಲ್ಲ. ಲಕ್ಕುಂಡಿಯಂ­ತಹ ಸಣ್ಣ ಊರಿನಲ್ಲಿ ಈ ಕೆಲಸ ಪುರಾತತ್ವ ಇಲಾಖೆ­ಯಿಂದ ಆಗಿದೆ. ಅದೇ ಕೆಲಸ ಬನವಾಸಿಯಲ್ಲಿ ಮಾತ್ರ ಏಕೆ ಆಗುವುದಿಲ್ಲ?ಬನವಾಸಿ ಹೇಗಿರಬೇಕು ಎಂಬ ಕನಸನ್ನು ಅದೇ ಊರಿನವರಾದ ಕೇಶವ ಅಭಿಶಂಕರ್‌ ಕಂಡಿದ್ದರು. ಕರ್ನಾಟಕ ಗೆಜೆಟಿಯರ್‌ನ ಮುಖ್ಯಸ್ಥರಾಗಿದ್ದ ಇವರು ಮುಂದಿನ 50 ವರ್ಷದ ಬನವಾಸಿ ಹೇಗಿರಬೇಕು ಎಂಬ ಯೋಜನೆಯನ್ನು ರೂಪಿಸಿ, 1982ರಲ್ಲಿಯೇ ಸರ್ಕಾರಕ್ಕೆ ಸಲ್ಲಿಸಿದ್ದರು. ಅದರಲ್ಲಿ ಕದಂಬೋತ್ಸವ ಕೂಡ ಒಂದು. ಇದೊಂದನ್ನು ಮಾತ್ರ ಸರ್ಕಾರ ಹದಿನಾಲ್ಕು ವರ್ಷಗಳ ತರುವಾಯ ಆರಂಭಿಸಿತು. ಅದಕ್ಕೆ ಹಂಪಿ ಉತ್ಸವ ಮತ್ತು ಮೈಸೂರಿನ ದಸರಾದಷ್ಟೇ ಮಾನ್ಯತೆಯನ್ನು ನೀಡಿತು. ಆದರೆ ಅಧಿಕಾರಿ­ಗಳಿಗೆ ಮಾತ್ರ ಏಕೋ ಕದಂಬೋತ್ಸವದ ಬಗ್ಗೆ ತಾತ್ಸಾರ. ಇಲ್ಲಿ ಕಾರ್ಯಕ್ರಮ ಆಯೋಜನೆ ಕುರಿತಂತೆ ನಡೆಯುವ ಸಭೆಗಳಲ್ಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಭಾಗವಹಿಸುವುದಿಲ್ಲ!

ನಿಜವಾಗಲೂ ಬನವಾಸಿಯನ್ನು ಅಭಿವೃದ್ಧಿ­ಪಡಿಸಬೇಕು ಎಂಬ ಇಚ್ಛೆ ಸರ್ಕಾರಕ್ಕಿದ್ದರೆ ಅಭಿಶಂಕರ್‌ ರೂಪಿಸಿಕೊಟ್ಟಿರುವ ಯೋಜನೆ­ಯನ್ನು ತಕ್ಷಣ ಜಾರಿಗೆ ತರಲು ಮುಂದಾ­ಗಬೇಕು. ಒಂದರ್ಥದಲ್ಲಿ ಉತ್ತರ­ಕನ್ನಡ ಜಿಲ್ಲೆಗೆ ಈಗ ಅದೃಷ್ಟವೇ ಒಲಿದುಬಂದಂತಾಗಿದೆ. ಅಲ್ಲಿನವರೇ ಆದ ಆರ್‌.ವಿ.ದೇಶಪಾಂಡೆ­ಯವರು ಪ್ರವಾಸೋ­ದ್ಯಮ ಸಚಿವರಾಗಿದ್ದಾರೆ. ಈ ಪ್ರವಾಸಿ ತಾಣ­ವನ್ನು ಅಭಿವೃದ್ಧಿಪಡಿಸಲು ಅವರಿಗೆ ಸುವರ್ಣಾ­ವಕಾಶ ಸಿಕ್ಕಿದೆ. ಜತೆಗೆ ಸವಾಲೂ ಎದುರಿಗಿದೆ. ಇದನ್ನು ಮಾಡಿ ತೋರಿಸುವ ಇಚ್ಛಾಶಕ್ತಿಯನ್ನು ಅವರು ತೋರಬೇಕು.ಈ ಭಾಗದಲ್ಲಿ ಹೊಸದಾಗಿ ಉತ್ಖನನ ನಡೆಸಬೇಕು. ಕದಂಬರ ಆಳ್ವಿಕೆಗೆ ಸಂಬಂಧಿಸಿದ ಹೆಚ್ಚಿನ ಕುರುಹುಗಳ ಶೋಧನೆಗೆ ಇದು ಅತಿ ಮುಖ್ಯವಾದುದು. ಅಲ್ಲದೇ ಬನವಾಸಿಗೆ ಎಲ್ಲ ಹೆದ್ದಾರಿಗಳ ಸಂಪರ್ಕ ಕಲ್ಪಿಸಲು ಸರ್ಕಾರ ಮುಂದಾಗಬೇಕು. ಈಗ ಶಿರಸಿಯಿಂದ ನಗರ ಸಾರಿಗೆ ಬಸ್‌ ಸೌಕರ್ಯವಿದೆ. ಇಷ್ಟೇ ಸಾಲದು, ಪ್ರವಾಸಿಗರು ಸಲೀಸಾಗಿ ಬಂದು ಹೋಗುವಂ­ತಾಗಲು ಇತರೆ ಜಿಲ್ಲಾ ಕೇಂದ್ರಗಳಿಂದಲೂ ಬಸ್‌ ಸೌಕರ್ಯ ಕಲ್ಪಿಸಬೇಕು. ಊರು ಶೈಕ್ಷಣಿಕವಾಗಿ ಹಿಂದುಳಿದಿದೆ. ಹೇಳಿಕೊಳ್ಳು­ವಂತಹ ಆಸ್ಪತ್ರೆಗಳೂ ಇಲ್ಲ. ಇವೆಲ್ಲ ಚುನಾಯಿತ ಪ್ರತಿನಿಧಿಗಳ ಕಣ್ಣಿಗೆಕಂಡಿಲ್ಲವೇ? ಶತಮಾನಗಳ ಕಾಲ ರಾಜಧಾನಿ­ಯಾಗಿದ್ದ ಊರಿಗೆ ತಾಲ್ಲೂಕು ಕೇಂದ್ರದ ಮಾನ್ಯತೆಯನ್ನು ನೀಡಲು ಸರ್ಕಾರ ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕಿದೆ. ಇದು ಈ ಊರಿನ ಹಾಗೂ ನಾಡಿನ ಗಣ್ಯರ ಒತ್ತಾಯವಾಗಿದ್ದರೂ ಸರ್ಕಾರ ಮಾತ್ರ ಗಮನ ಕೊಟ್ಟಿಲ್ಲ.ಇನ್ನು ಕಳೆದ ವಾರವಷ್ಟೇ ಕದಂಬೋತ್ಸವ ನಡೆದಿದೆ. ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚಿಸುವ

ಭರವಸೆ ನೀಡಿದ್ದಾರೆ. ಹಿಂದೆ ಬಿ.ಎಸ್‌.­ಯಡಿಯೂರಪ್ಪ ಕೂಡ ಭರವಸೆ ನೀಡಿದ್ದರು. ಆದರೆ ಕಾರ್ಯಗತ ಮಾಡಿರಲಿಲ್ಲ. ಈಗ ಸಿದ್ದರಾಮಯ್ಯ ಅವರು ನೀಡಿರುವ ಭರವಸೆ ಕೂಡ ಅದೇ ರೀತಿ ಆಗದಿರಲಿ ಎಂಬ ನಿರೀಕ್ಷೆ ಬನವಾಸಿ ಗ್ರಾಮಸ್ಥರದು. ಆ ಇಚ್ಛಾಶಕ್ತಿಯನ್ನು ಸಿದ್ದರಾಮಯ್ಯ ತೋರುವರೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.