ಸೋಮವಾರ, ಮಾರ್ಚ್ 1, 2021
31 °C

ಬಸವನ ನೆನಪು: ಆರ್ದ್ರತೆ, ಆತಂಕ

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಬಸವನ ನೆನಪು: ಆರ್ದ್ರತೆ, ಆತಂಕ

ನಾನು ಜಯಂತಿಗಳನ್ನು ಆಚರಿಸುವ ಪೈಕಿ­ಯಲ್ಲ. ಬಸವ ಜಯಂತಿಯೆಂಬ ನೆನಪೂ ನನಗಿರುವುದಿಲ್ಲ. ಆ ನೆನಪು ತಂದು­ಕೊಟ್ಟ­­ವರು ಒಬ್ಬ ಫೇಸ್‌ಬುಕ್ ಗೆಳೆಯರು. ಅವರು ನನಗೆ ಬಸವಜಯಂತಿಯ ಶುಭಾಶಯ ಕಳಿಸಿ­ದ್ದರು.  ಬಹುಶಃ ನಾನು ಕರ್ನಾಟಕ ಅಥವಾ ಮಹಾ­ರಾಷ್ಟ್ರದಲ್ಲಿದ್ದಿದ್ದರೆ ಆ ದಿನ ಸರ್ಕಾರಿ ರಜೆ­ಯಾ­ಗಿ­ರುವುದರಿಂದ ಬಸವ ಜಯಂತಿ ನೆನಪಾಗುತ್ತಿತ್ತು.ಇವತ್ತು ನನ್ನ ತಾಯಿನಾಡಿನಲ್ಲಿ ಯಾರು ಯಾರು ಹೇಗೆ ಬಸವಜಯಂತಿ ಆಚರಿಸುತ್ತಿರ­ಬ­ಹುದು ಎಂದು ಕಲ್ಪಿಸಿಕೊಳ್ಳತೊಡಗಿದೆ. ಚಿತ್ರ­ದುರ್ಗದ ಕಡೆಯ ಗೆಳೆಯರೊಬ್ಬರು ‘ಈ ದಿನ ದೇವ­ಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುತ್ತೇನೆ’ ಎಂದು ಹೇಳಿದರು. ಬಹುಶಃ ಲಿಂಗಾಯತರು ಮನೆ­ಗಳಲ್ಲಿ ಹಬ್ಬದ ಅಡುಗೆ ಮಾಡಿ ಉಂಡಿ­ರ­ಬೇಕು. ಸಂಘಸಂಸ್ಥೆಗಳು ಬಸವ­ಜಯಂ­ತಿಯ ಅಂಗವಾಗಿ ಭಾಷಣ, ವಚನಗಾಯನ ಮತ್ತಿತರ ರಸಮಂಜರಿ ಕಾರ್ಯಕ್ರಮ ನಡೆಸುತ್ತಿರಬೇಕು. ಮಠ­ಗಳಲ್ಲಿ ವಿಶೇಷ ಕಾರ್ಯಕ್ರಮಗಳು ಆಗು­ತ್ತಿರ­ಬೇಕು.ದೆಹಲಿ ಕರ್ನಾಟಕ ಸಂಘದವರ ಇ–ಮೇಲ್ ಪ್ರಕಾರ ಅವರೂ ಬಸವ ಜಯಂತಿ ಭಾಷಣ ಇಟ್ಟುಕೊಂಡಿದ್ದಾರೆ. ಟಿ.ವಿ ಚಾನೆಲ್ಲುಗ­ಳಲ್ಲಿ ಬಸವಣ್ಣನನ್ನು ಕುರಿತ ಸಿನಿಮಾಗಳನ್ನು ತೋರಿಸು­ತ್ತಿ­ರಬ­ಹುದು. ಹಿಂದೆ ದಲಿತಸಂಘರ್ಷ ಸಮಿತಿ­ಯ­ವರು ಇಟ್ಟುಕೊಂಡಿದ್ದ ಬಸವಜಯಂತಿ ಕಾರ್ಯ­­ಕ್ರಮ­ಗಳಿಗೆ ಹೋಗಿ ನಾನು ಭಾಷಣ ಮಾಡಿ ಬಂದದ್ದು ನೆನಪಾಯಿತು. ಈಗ ಅವರು ಬಸವ­ಜಯಂತಿ ಆಚರಿಸುತ್ತಿದ್ದಾರೋ ಇಲ್ಲವೋ ದೂರದಿಂದ ಗೊತ್ತಾಗುತ್ತಿಲ್ಲ.ನನ್ನ ಒಳಗಿವಿಯಲ್ಲಿ ಭಾವುಕ ದನಿಯೊಂದು ಬಸ­ವಣ್ಣನವರ ಮಾನವೀಯತೆ ಬಗ್ಗೆ ಆರ್ದ್ರ­ವಾಗಿ ಉಪನ್ಯಾಸ ಮಾಡುತ್ತಿರುವುದು ಕೇಳಿಸಿತು. ಆ ದನಿ ಗುರುತು ಸಿಕ್ಕಲು ಬಹಳ ಹೊತ್ತು ಹಿಡಿ­ಯ­ಲಿಲ್ಲ. ಅದು ನನ್ನ ಬಹುದಿನದ ಮಿತ್ರ­ರಾದ ಉತ್ಕಟ ಬಸವಪ್ರಚಾರಕ ರಂಜಾನ್ ದರ್ಗಾ ಅವ­ರದು. ಈ ಭಾಷಣ ಗುಲ್ಬರ್ಗದ ಆಸುಪಾಸಿ­ನಲ್ಲಿ ನಡೆಯುತ್ತಿರಬೇಕೆಂದು ಕಲ್ಪಿಸಿಕೊಳ್ಳ­ತೊಡಗಿದೆ.ನನ್ನ ಬಾಲ್ಯದಲ್ಲಿ ಬಸವ ಜಯಂತಿ ದಿವಸ ನನ್ನ ತಾಯಿ ಬೆಂಗಳೂರಿನ ಗೀತಾ ಟಾಕೀಸು ಹತ್ತಿರದ ಸರ್ಪಭೂಷಣ ಮಠದ ಗದ್ದುಗೆಗೆ ಹೋಗಿ ಪೂಜೆ ಮಾಡಿಸಿ ಬರುತ್ತಿದ್ದರು. ನಾನೂ ಹೋಗುತ್ತಿದ್ದೆ. ಮನೆಯಲ್ಲೂ  ಬಸವಣ್ಣನವರ ಫೋಟೋಪೂಜೆ ನಡೆ­ಯುತ್ತಿತ್ತು. ಆ ಕಾಲದಲ್ಲಿ ಅದು ಸರ್ಕಾರಿ ರಜೆ ಆಗಿರಲಿಲ್ಲ. ಸ್ಕೂಲಿಗೂ ರಜೆ ಇರುತ್ತಿರಲಿಲ್ಲ. ಆದರೆ ನಾನು ಆ ದಿನ ಸ್ಕೂಲಿಗೆ ಚಕ್ಕರ್‌ ಹಾಕಿ ಮನೆಯ ವಿಶೇಷ ಅಡುಗೆಗಾಗಿ ಕಾಯುತ್ತಿದ್ದೆ. ಒಂದೊಂದು ಸಲ ಬಸವ ಜಯಂತಿ ಇದ್ದಾಗ ನಮ್ಮ­ತ್ತೆಯ ಊರಾದ ದೇವರ ಹೊಸಹಳ್ಳಿ­ಯಲ್ಲಿ ಬಸವನ ಅಂದರೆ ಎತ್ತುಗಳ ಪೂಜೆ ಮಾಡುತ್ತಿದ್ದರು.ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಎಷ್ಟೋ ಜನ ಹಳ್ಳಿಗರು ಬೆಳಿಗ್ಗೆ ಎದ್ದ ಕೂಡಲೆ ಎತ್ತನ್ನು ಕಣ್ಣಿ­ಗೊತ್ತಿಕೊಂಡು ‘ಬಸವ ಬಸವ’ ಎನ್ನುವು­ದನ್ನು ಕಂಡಿದ್ದೆ. ನಂದಿ ಮೂರ್ತಿಯ ಪೂಜಾ­ಸ್ಥಾನ­ಗಳಾದ ಬಸವಣ್ಣನ ದೇವಸ್ಥಾನ­ಗಳು ನೆನ­ಪಾ­ದವು. ಬಸವಣ್ಣನ ಗುಡಿಯ ಇಂಗ್ಲಿಷ್ ಅನು­ವಾದ ‘ಬುಲ್ ಟೆಂಪಲ್’ ಆಗಿ ಬಸವನಗುಡಿ ರಸ್ತೆಗೆ ಬುಲ್ ಟೆಂಪಲ್ ರೋಡ್ ಎಂದು ಕರೆಯಲಾಗುತ್ತಿದೆ.ಈ ಅನುವಾದದ ಮೂಲಕ ಅದೇಕೋ ಎ.ಕೆ.ರಾಮಾನುಜನ್ ಅವರು ಮಾಡಿ­ರುವ ವಚನಗಳ ಅನುವಾದ ನೆನಪಾ­ಯಿತು. ಅವರು ‘ಕೂಡಲ ಸಂಗಮ ದೇವ’ ಪದ­ವನ್ನು ‘ಲಾರ್ಡ್  ಆಫ್ ಮೀಟಿಂಗ್ ರಿವರ್ಸ್‌’  ಎಂದು ಅನುವಾದಿಸಿದ್ದಾರೆ. ಆದೇ ದಾರಿಯಲ್ಲಿ ಮುಂದೆ ಹೋಗಿ ಬಸವಣ್ಣ ಹೆಸರನ್ನು ‘ಬುಲ್‌ಬ್ರದರ್’ ಎಂದು ಮಾಡಲಿಲ್ಲವಲ್ಲ ಎಂದು ಸಮಾಧಾನದ ನಿಟ್ಟುಸಿರುಬಿಟ್ಟೆ.ಇನ್ನೂ ಮುಂದೆ ಹೋದರೆ ರಾಮಾನುಜನ್ ಹೆಸರನ್ನು ‘ಯಂಗರ್ ಬ್ರದರ್ ಆಫ್ ದ ಹ್ಯಾಂಡ್‌ಸಂ ಒನ್’ ಎಂದೂ ಶಿವಪ್ರಕಾಶ್ ಹೆಸರನ್ನು ‘ಲೈಟ್ ಆಫ್ ದಿ ಆಸ್ಪಿಷಸ್ ಒನ್’ ಎಂದೂ ಅನುವಾದಿ­ಸ­ಬೇಕಾ­ಗುತ್ತದಲ್ಲಾ ಅನಿಸಿ ನಗು ಬಂತು. ಮನ­ವೆಂಬ ಮರ್ಕಟ ತೀರಾ ತಮಾಷೆಗಿಳಿಯಿತಲ್ಲಾ ಅಂತ ವಿಷಾದವಾಗತೊಡಗಿತು. ಹಾಗೆ ನೋಡಿ­ದರೆ ಬಸವಣ್ಣ  ಬಸವವಾದಿಗಳಷ್ಟು ಗಂಭೀರ­ಪ್ಪ­ನಲ್ಲ.ಹಾಸ್ಯ, ವಿಡಂಬನೆ, ಕಟಕಿ, ಖಂಡನೆ ಬಸವ ವಚನಗಳಲ್ಲಿ ಹಾಸುಹೊಕ್ಕಾಗಿದ್ದು ಆಗಾಗ ಮಿಂಚಿ ಮರೆಯಾಗುತ್ತವೆ. ಬಸವಣ್ಣನವರ ವಚನ­ಗಳಲ್ಲಿ ಕಾವ್ಯ ಸೌಂದರ್ಯದ ಬಗ್ಗೆ ಜಿಎಸ್‌ಎಸ್‌ ಬರೆದ ಅದ್ಭುತ ಲೇಖನ ನೆನಪಾ­ಯಿತು. ವೀರರಸದ ಬಗೆ ಇನ್ನೊಬ್ಬ ವಿದ್ವಾಂಸರು ಬರೆ­ದದ್ದು ನೆನಪಾಯಿತು. ಆದರೆ ಬಸವಣ್ಣ­ನವರ ಹಾಸ್ಯದ ಬಗ್ಗೆ ಯಾರೂ ಬರೆದಿಲ್ಲವಲ್ಲ ಅನಿಸಿತು.ಇನ್ನಾದರೂ ತುಸು ಗಂಭೀರವಾಗಬೇಕೆಂದು ಕೆಲವು ದಿವಸಗಳ ಹಿಂದೆ ಹಿರಿಯ ವಿದ್ವಾಂಸರಾದ ಪ್ರೊ. ಕಲಬುರ್ಗಿಯವರು ಬರೆದು ಪ್ರಕಟಿಸಿದ್ದ ಬಸವಣ್ಣನ ಬಗ್ಗೆ ನೇರವಾಗಿ ಅಲ್ಲದಿದ್ದರೂ ಆ ವಿಷಯಕ್ಕೇ­ ಸಂಬಂಧಿಸಿದ ಲೇಖನವೊಂ­ದನ್ನು ಅಂತರ್ಜಾಲದಲ್ಲಿ ಓದಿದೆ. ಅದರಲ್ಲಿ ಅವರು ಲಿಂಗಾಯತ ಧರ್ಮ ಕರ್ನಾಟಕದ ಪ್ರಥಮ ಧರ್ಮ ಎಂದು ವಾದಿಸಿದ್ದರು. ಇದಕ್ಕೆ ಮುಂಚೆ ನನ್ನ ವಿದ್ಯಾಗುರುಗಳಾದ ಪ್ರೊ. ಹಂಪನಾ ಅವರು ಬರೆದ ಸಮರ್ಥ ಲೇಖನ­ವನ್ನೂ ಓದಿದೆ.ಬಸವಣ್ಣ ಮತ್ತವರ ವಿಚಾರಗಳು ಮತ್ತೆ ಮತ್ತೆ ಚರ್ಚೆಗೊಳಗಾಗುತ್ತಿರುವುದು ನೆನಪಾಯಿತು. ನನ್ನ ‘ಮಹಾಚೈತ್ರ’ದ ಗಲಾಟೆ, ಪಿ.ವಿ.ನಾರಾಯಣ ಅವರ ‘ಧರ್ಮಕಾರಣ’ದ ಬಗ್ಗೆ ಎದ್ದ ವಿರೋಧ, ಬಸವಣ್ಣನವರ ವಚನಗಳ ಅಂಕಿತಗಳನ್ನೇ ಹಿರಿಯರೊಬ್ಬರು ಮಾರ್ಪಡಿಸಿ­ದಾಗ ಭುಗಿಲೆದ್ದ ವಿವಾದ, ‘ಪ್ರಜಾವಾಣಿ’ಯ ಪುಟಗಳಲ್ಲಿ ಈಚೆಗೆ ನಡೆದ ವಚನಗಳ ಬಗೆಗಿನ ಪ್ರೊ. ಬಾಲಗಂಗಾಧರೋಕ್ತ ವಿಚಾರಗಳ ಚರ್ಚೆ ನೆನಪಾಯಿತು.ಬಸವಣ್ಣನವರ ಸಮಕಾಲೀನರಿಂದ ಹಿಡಿದು ಮಧ್ಯಯುಗದ ಹರಿಹರಾದಿ ಕವಿಗಳು ಜನಪದ ಬಸವಪುರಾಣ ಕರ್ತೃಗಳು ಸದ್ಯದವರೆಗಿನ ಕನ್ನಡ ಬರಹಗಾರರು ಹೇಗೆ ಹೇಗೆ ಬಸವಣ್ಣನವರನ್ನು ಕಲ್ಪಿಸಿಕೊಂಡಿದ್ದಾರೆ ಎಂದು ಆಲೋಚಿಸತೊ­ಡ­ಗಿದೆ. ಬಸವಣ್ಣನವರ ವಿಚಾರಗಳ ಬಗ್ಗೆ ವಿವಿಧ ಚಿಂತನಾಮೂಲದ ವಿದ್ವಾಂಸರು ಏನೇನು ಹೇಳಿದ್ದಾರೆ ಎಂದು ವಿಚಾರ ಮಾಡತೊಡಗಿದೆ.ಬಹುಶಃ ಎಲ್ಲ ಪ್ರಭಾವಿ ವ್ಯಕ್ತಿಗಳ ಬದುಕು, ಬರಹ, ಚಿಂತನೆ, ಕೃತಿಗಳಲ್ಲಿ ಅಪರಿಹಾರ್ಯ­ವಾದ ಏನೋ ಒಂದು ಇರುತ್ತದೆ. ಅಂತರ್ವಿ­ರೋಧ­ಗಳೂ ಇರುತ್ತವೆ. ಆದ್ದರಿಂದಲೇ ಇಂಥ ವ್ಯಕ್ತಿಗಳು, ಕೃತಿಗಳು, ವಿಚಾರಗಳು ಮತ್ತೆ ಮತ್ತೆ ಚರ್ಚೆಗೆ ಪಕ್ಕಾಗುವುದು.ಹಳೆಯವನ್ನು ಬಿಡಿ, ಆಧುನಿಕ ಕಾಲದಲ್ಲೇ ‘ಭಗವದ್ಗೀತೆ’ಗೆ ಅದೆಷ್ಟು ಪರಸ್ಪರ ಭಿನ್ನ ನೆಲೆಗಳಿಂದ ವ್ಯಾಖ್ಯಾನ ನೀಡಲಾಯಿತು? ಗಾಂಧಿ­ಯ­ವರ ಪ್ರಕಾರ ‘ಭಗವದ್ಗೀತೆ’ ಬೋಧಿ­ಸು­ವುದು ಅನಾಸಕ್ತಿ­ಯೋಗ, ಅಹಿಂಸಾವಾದ, ತಿಲಕರ ಪ್ರಕಾರ ಪೌರುಷಯುಕ್ತಕರ್ಮಯೋಗ, ಡಾಂಗೆ ಅವರ ಪ್ರಕಾರ ಸಾಮ್ಯವಾದಿ ವರ್ಗ ಸಂಘರ್ಷದ ಸಮ­ರ್ಥನೆ. ಇಷ್ಟೆಲ್ಲಾ ವಿವಿಧ ವಿವರಣೆ­ಗೊಳ­ಗಾಗುವ ಸಾಧ್ಯತೆಗಳು ಇರುವುದರಿಂದಲೇ ‘ಭಗ­ವದ್ಗೀತೆ’ ಸದಾ ಚರ್ಚೆಯಲ್ಲಿ  ಇರುತ್ತದೆ. ಷೇಕ್ಸ್‌­ಪಿಯರನಂಥ ಬಹುಚರ್ಚಿತ ಬರಹಗಾರರು, ಕಾರ್ಲ್‌­ಮಾರ್ಕ್ಸ್‌­ನಂಥ ಸಂಕೀರ್ಣ ದಾರ್ಶನಿ­ಕರು, ಗಾಂಧಿಯವರಂಥ ನಾಯಕರು ಎಲ್ಲರೂ ಈ ಕಾರಣಗಳಿಂದಲೇ ಮರುಚಿಂತನೆಗೊಳ­ಗಾಗುವುದು.ಆಧುನಿಕಪೂರ್ವ ಕೃತಿಗಳು (ಪಾಲ್ಕುರಿಕೆ ಸೋಮ­­ನಾಥ, ಹರಿಹರ) ಬಸವಣ್ಣನವರ ಏಕೋ­ನಿಷ್ಠೆಯ ಭಕ್ತಿಗೆ ಒತ್ತುಕೊಟ್ಟವು; ಆಧುನಿಕ ಕೃತಿಗಳು (ಬಿ.ಪುಟ್ಟಸ್ವಾಮಯ್ಯ, ಅನಕೃ, ಲಂಕೇಶ್, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ) ಬಸವಣ್ಣನವರ ಸಾಮಾಜಿಕತೆಗೆ ಒತ್ತು ನೀಡಿದವು. ಕೆಲವು ಸಲ ಮನೋ­ವೈಜ್ಞಾನಿಕ­ವಾ­ಗಿಯೂ ನೋಡಲಿಚ್ಛಿಸಿ­ದವು. ಬಸವಣ್ಣನನ್ನು ಕುರಿತ ವೈಚಾರಿಕ ವಿಮರ್ಶೆ ಬಸವಣ್ಣನವರು ಎಷ್ಟು ‘ಪ್ರಗತಿ­ಶೀಲ’ ಎಂಬುದರ ಸುತ್ತ ಓಡಾಡಿದೆ.ಇವು­ಗ­ಳಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ಸಾಂದರ್ಭಿಕವಾಗಿ ತೀರ್ಮಾನಿಸಬಹುದೆ ಹೊರತು ಯಾವುದನ್ನೂ ಆಖೈರೆಂದು ತಿಳಿ­ಯುವ ಹಾಗಿಲ್ಲ. ಯಾಕೆಂದರೆ ಬಸವ ವಚನ­ಗ­ಳಲ್ಲಿ ಬರೀ ಹುಂಬ ವಿಚಾರಮಂಡನೆಯಿಲ್ಲ; ಅಲ್ಲಿ ಆತಂಕಗಳ, ಆತ್ಮವಿಮರ್ಶೆಯ, ಸಂದೇಹ­ಗಳ, ಸಂಕೋಚದ, ಸ್ವಯಂನಿರಾಕರಣೆಯ ಮಾನ­ವೀಯ ಕ್ಷಣಗಳಿವೆ, ನಾಟಕೀಯ ತಿರುವುಗಳಿವೆ.ಒಂದು ಉದಾಹರಣೆಯನ್ನು ತೆಗೆದುಕೊ­ಳ್ಳೋಣ. ಬಸವಣ್ಣನವರ ವಚನಗಳಲ್ಲಿ ಬಹುತೇ­ಕರು ಯಹೂದಿ ಧರ್ಮ ಮಾದರಿಯ ಏಕ­ದೇವತೋ­ಪಾಸನೆಯ ನೆಲೆಗಳನ್ನು ಗುರುತಿಸಿ­ದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ‘ದೇವನೊಬ್ಬ, ನಾಮ ಹಲವು’ ಎಂಬ ಬಸವ ವಾಕ್ಯವಿದೆ. ಒಂದು ಕಡೆ ‘ನಾರಾಯಣನೆಂಬುವನ ಕಾಣೆ, ಗೀರಾ­ಯಣ­ನೆಂಬು­ವನ ಕಾಣೆ’ ಎಂಬ ವೈಷ್ಣವ ನಿಂದನೆ­ಯಿದೆ. ಇನ್ನೊಂದು ಕಡೆ ‘ರಾಮನ ತೋರಾ’ ಎಂಬ ರಾಮನ ಪ್ರಶಂಸೆಯ ಅಪರೂಪದ ವಚನವಿದೆ.ಹೀಗೆ ಬಹುಕುಳವಾದ ಬಸವವಚನಗಳ ಏಕ­ಸೂತ್ರತೆ ಏನೆಂದು ಹುಡುಕುವ ಪ್ರಯತ್ನಗಳು ಪೂರ್ತಿ ನಿರುಪಯುಕ್ತವೆಂದು ಹೇಳಲಾಗದು. ಆದರೆ ನಾವು ಹಾಕುವ ವಿಶ್ಲೇಷಣಾತ್ಮಕ ಮಿತಿ­ಗಳನ್ನು ಬಸವಣ್ಣ ಮೀರುತ್ತ ಇರುವುದರಿಂ­ದಲೇ ಅವನ ವಚನಗಳು ಮತ್ತೆ ಮತ್ತೆ ಹೊಸ ಚರ್ಚೆ­ಗಳಿಗೆ, ದೃಷ್ಟಿಗಳಿಗೆ ಗ್ರಾಸವಾಗುತ್ತಿರುವುದು.ಆದ್ದರಿಂದಲೋ ಏನೋ ನಾನು ‘ಮಹಾ­ಚೈತ್ರ’­ದಲ್ಲಿ ಬಸವಣ್ಣನವರನ್ನು ನೇರವಾಗಿ ಚಿತ್ರಿ­ಸಲು ಹೋಗಲೇ ಇಲ್ಲ. ಬಸವನೆಂಬ ಪಾತ್ರವನ್ನು ಇತರ ಪಾತ್ರಗಳು ತಮ್ಮ ಮೂಗಿನೆತ್ತರಕ್ಕೆ ಕಲ್ಪಿಸಿಕೊಳ್ಳುತ್ತಾರೆ, ಆ ಕಲ್ಪನೆಗಳ ನಡುವೆ ಹೇಗೆ ಸಂಘರ್ಷ­ಗಳು ಸಂದಿಗ್ಧಮಯ ಮಾನವ ಸಂದ­ರ್ಭ­ಗಳಲ್ಲಿ ಉಂಟಾಗುತ್ತವೆ ಎಂಬುದನ್ನು ಸೂಚಿ­ಸಲು ಯತ್ನಿಸಿದೆ. ಮುಂದೆ ‘ಮಂಟೇಸ್ವಾಮಿ’, ‘ಮಾದಾರಿ ಮಾದಯ್ಯ’ ನಾಟಕಗಳಲ್ಲಿ ಬಸವ­ಕಲ್ಪ­ನೆಯ ಇತರ ಹೊರಚಾಚುಗಳನ್ನು ಹುಡುಕ ಹೊರಟೆ. ಆದರೆ ಈ ದಿಸೆಯಲ್ಲಿ ನಾನಾಗಲೀ ನನ್ನ ಪ್ರತಿಭಾವಂತ ಪೂರ್ವಿಕರಾಗಲಿ ಸರೀಕರಾ­ಗಲಿ ಬೇರಿನ ತನಕ ಹೋಗಲಿಲ್ಲವೆಂಬ ಆತಂಕ ಕಾಡ­ತೊಡಗಿದೆ.ಯಾಕೆಂದರೆ ನಾವೆಲ್ಲ ಸಂದಿಗ್ಧ ಸಂದರ್ಭ­ಗಳಲ್ಲಿ ಹಲವು ಹೊರ ಮತ್ತು ಒಳ ಒತ್ತಡ­ಗಳ ನಡುವೆ ನಿಜವನ್ನು ಕೆದಕುತ್ತಿದ್ದ ಬಸವಣ್ಣ­ನ­ವರನ್ನು ಒಂದು ಅಸಂದಿಗ್ಧ ನೆಲೆಗೆ ತಂದು ನಿಲ್ಲಿಸುವ ಹುನ್ನಾರದಲ್ಲಿರುವೆವೇನೋ ಅನಿಸುತ್ತಿದೆ. ಈ ತೆರನ ಸಪಾಟೀಕರಣದ ಕಾರಣ­ಗಳೇನಿ­ರಬಹುದು?ಬಹುಶಃ ತನ್ನ ಸಂದಿಗ್ಧಗಳನ್ನು ಬಸವಣ್ಣ ಎದುರಿಸಿದ ಹಾಗೆ ನಮ್ಮ ಸಂದಿಗ್ಧಗಳನ್ನು ಎದುರಿಸುವ ದಮ್ಮು ನಮಗಿಲ್ಲ. ಬಸವಣ್ಣನಂತೆ ಆತ್ಮಶೋಧನೆ ಮಾಡಿಕೊಳ್ಳುವ ಕೆಚ್ಚು ನಮಗಿಲ್ಲ.ತಾನೇನಾಗಬೇಕೆಂಬ ಕಲ್ಪನೆ ಬಸವಣ್ಣನವರಿಗಿತ್ತು; ಆಗಿಲ್ಲದರ ಬಗ್ಗೆ ಆತಂಕವಿತ್ತು, ಅನುಮಾನವಿತ್ತು, ಖೇದವಿತ್ತು, ಪ್ರಶ್ನೆಗಳಿದ್ದವು, ಪರೀಕ್ಷೆಗಳಿದ್ದವು. ಬಸವಣ್ಣನ ಭಕ್ತಿಯನ್ನೇ ನೋಡಿ. ವಿಚಾರವಾದಿಗಳಿಗೆ ಬಸವನ ಭಕ್ತಿ ಒಂದು ಇರುಸುಮುರುಸಿನ ಅಂಶ. ಆ ಭಕ್ತಿಯಲ್ಲಿ ತಲ್ಲಣಗಳಿವೆ, ತೊಳಲಾಟಗಳಿವೆ, ತಕರಾರುಗಳಿವೆ, ಅಪಾಯಗಳಿವೆ. ಈ ಕಾರಣ­ದಿಂದಲೇ ಬಸವಣ್ಣನ ಭಕ್ತಿ ಭಕ್ತರಲ್ಲದ­ವ­ರನ್ನೂ ಕಾಡುವುದು. ಆದರೆ ಇಂದು ಭಕ್ತಿಯೆಂಬುದು- ಬಸವಭಕ್ತಿಯನ್ನೂ ಒಳ­ಗೊಂಡು ಬಹುಮಟ್ಟಿಗೆ ತೋರುಂಬ ಲಾಭ­ವಾಗಿದೆ. ಇಂದಿನ ಭಕ್ತರಿಗೆ ಬಸವಣ್ಣನ ಆರ್ದ್ರತೆ ಆತಂಕಗಳು ಬೇಕಾಗಿಲ್ಲ. ಬರೀ ಲಾಭ ಬೇಕಾಗಿದೆ.ಎಂ.ಆರ್.ಶ್ರೀ ಅವರು ಬಸವಣ್ಣನನ್ನು ಕನ್ನಡದ ಕಾಳಿದಾಸನೆಂದರು. ಕವಿಕುಲ­ಗುರು­ವಿನಂತೆ ಬಸವವಚನಗಳಲ್ಲಿಯೂ ವಿಪುಲ ಉಪ­ಮಾ­ಶಕ್ತಿಯಿರುವುದನ್ನು ಗುರುತಿಸಿ­ದರು. ಇದು ಸರಿಯೆ. ಆದರೆ  ಬಸವಣ್ಣ ಕಾಳಿದಾಸನಿಗೆ ಹತ್ತಿರವಾಗುವುದು ಇನ್ನೂ ಮುಖ್ಯವಾದ ಒಂದು ಗುಣದಲ್ಲಿ. ಅದು ಮಾನ­ವೀಯ ಆರ್ದ್ರತೆಗಳ, ಆತಂಕಗಳ, ಪರೀಕ್ಷೆಗಳ, ಅಪಾಯಗಳ ಚಿತ್ರಣದಲ್ಲಿ. ಹೀಗಿದ್ದಾ­ಗಲೇ ಭಕ್ತಿಯೂ ಕಾವ್ಯವಾಗಿ ನಮ್ಮನ್ನು ಕವಿ­ಯುತ್ತದೆ. ಇಲ್ಲದಿದ್ದರೆ ಭಕ್ತಿಯೆಂಬುದು ನೀರಸ ವಿಶ್ವಾಸವಾಗುತ್ತದೆ.ಇಂದಿನ ಸಂದಿಗ್ಧ ಸನ್ನಿವೇಶದಲ್ಲಿ ಬದುಕುತ್ತಿರುವ ನಾವು ಅದೇಕೆ ಅಸಂದಿಗ್ಧ ನಿಲುವುಗಳ ಬೇಟೆಯಾಡುತ್ತಿದ್ದೇವೆ? ಇಂದು ಭಾರತದಲ್ಲಿ ಪರಸ್ಪರ ಹಣಾಹಣಿಗೆ ನಿಂತಿರುವ ಮತೀಯವಾದಿಗಳ ಮತ್ತು  ಸೆಕ್ಯುಲರ್‌­ವಾದಿಗಳ ದನಿಗಳಲ್ಲಿ ಕಾಣುವ ಕೊರತೆಯೆಂದರೆ ಅವುಗಳ ಅಸೂಕ್ಷ್ಮತೆ, ಅಂತರಂಗ­ವಿಹೀನತೆ ಮತ್ತು ಅಸಂದಿಗ್ಧತೆ. ಕೆಲ­ವರ ಪ್ರಕಾರ ಬಸವಣ್ಣ ಮುಖ್ಯವಾಗಿ­ರುವುದು ಹೊಸ ಧರ್ಮವೊಂದನ್ನು ಸ್ಥಾಪಿಸಿದ್ದ­ರಿಂದ; ಕೆಲವರ ಪ್ರಕಾರ ಹಳೆಯ ಧರ್ಮಕ್ಕೆ ಕಾಯಕಲ್ಪ ನೀಡಿದ್ದರಿಂದ;  ಕೆಲವರ ಪ್ರಕಾರ ಪ್ರಗತಿಪರ ವಿಚಾರವಾದಿ ನೆಲೆಗಳಿಂದ; ಕೆಲವರ ಪ್ರಕಾರ ತಮ್ಮ ತಮ್ಮ ನಿಲವುಗಳ ಪೂರ್ವ­ಸೂಚನೆಯಿರುವುದರಿಂದ.ಈ ದೃಷ್ಟಿಕೋನಗಳ ಚರ್ಚೆ ಸದ್ಯಕ್ಕೆ ಬೇಡ. ಆದರೆ ನನಗನಿಸುತ್ತದೆ, ಇವೆಲ್ಲಾ ಬಸವನೆಂಬ ಕಬ್ಬಿನ ಜಲ್ಲೆಯ ಎಲೆಗಳೇ ಹೊರತು ಬುಡವಲ್ಲ. ಆ ಬುಡವೆಂದರೆ ಸೂಕ್ಷ್ಮ ಅಂತರಂಗವೊಂದು ಸಂದಿಗ್ಧ ಪರಿಸ್ಥಿತಿಯೊಂದರಲ್ಲಿ ಗರಗಸದಂತೆ ಕೊಯ್ಯುವ ಭಕ್ತಿಯ ಸಂಘರ್ಷಗಳನ್ನು ಅಧಿಕೃತವಾಗಿ ಪ್ರಾಮಾಣಿಕವಾಗಿ ಎದುರಿಸಿ, ದಾಟಲು ಪ್ರಯತ್ನಿಸಿ ಅದನ್ನು ಹೃದ್ಯವಾದ ಕನ್ನಡದಲ್ಲಿ ಅವಿಸ್ಮರಣೀಯವಾಗಿ ಕಟ್ಟಿಕೊಟ್ಟಿರುವುದರಿಂದ:ಬಲ್ಲುದೆ ನಿಮ್ಮ ಕೂಡಲಸಂಗಮದೇವ

ಕುರಿವಿಂಡು ಕಬ್ಬಿನ ಉಲಿವ ತೋಟವ ಹೊಕ್ಕು-

ತೆರನನರಿಯದೆ ತನಿರಸದ-

ಹೊರಗಣ ಎಲೆಯನೆ ಮೆಲಿದುವು !

ನಿಮ್ಮನರಿವ ಮದಕರಿಯಲ್ಲದೆ

ಕುರಿ ಬಲ್ಲುದೆ ಕೂಡಲಸಂಗಮದೇವಾ

ಆ ಮದಕರಿಯಂತೆ ನಾವು ಕಬ್ಬಿನ ಬುಡಕ್ಕೇ ಬಾಯಿ ಹಾಕುವುದು ಎಂದು?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.