ಭಾನುವಾರ, ಮೇ 9, 2021
18 °C

ಭವ್ಯ ನಾಗರಿಕತೆಯೊಂದರ ಭೀಕರ ಸವಾಲು

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ಭವ್ಯ ನಾಗರಿಕತೆಯೊಂದರ ಭೀಕರ ಸವಾಲು

ಒಂದೆರಡು ವರ್ಷಗಳ ಕೆಳಗೆ ಪತ್ರಿಕೆಗಳಲ್ಲಿ ಕಂಡೂ ಕಾಣದಂತೆ ಮಾಯವಾದ ಒಂದು ಪುಟ್ಟ ಸುದ್ದಿಯಲ್ಲಿ ಒಂದು ಭವ್ಯ ನಾಗರಿಕತೆಯ ದುರಂತವೇ ಅಡಗಿದ್ದನ್ನು ಅನೇಕರು ಗಮನಿಸಿರಲಿಕ್ಕಿಲ್ಲ. ಗ್ರೀಸ್ ದೇಶ ತನ್ನ ಪಾರಂಪರಿಕ ಕಟ್ಟಡಗಳನ್ನು ಒತ್ತೆಯಿಟ್ಟು, ಕುಸಿಯುತ್ತಿರುವ ತನ್ನ ದೇಶದ ಆರ್ಥಿಕತೆಯನ್ನು ಸುಧಾರಿಸಲು ಯತ್ನಿಸುತ್ತಿತ್ತು; ಆದರೆ ಆ ಕಟ್ಟಡಗಳನ್ನು ಕೊಳ್ಳಲು ಯಾವ ದೇಶವೂ ಮುಂದೆ ಬರಲಿಲ್ಲ. ಇದನ್ನು ಓದಿದಾಗ ಜಗತ್ತಿಗೆ ದುರಂತ ನಾಟಕ ಪ್ರಕಾರವನ್ನು ರೂಪಿಸಿಕೊಟ್ಟ ಗ್ರೀಕರ ನಾಡು ಈ ಶತಮಾನದಲ್ಲಿ ದುರಂತದ ಹಂತವೊಂದನ್ನು ತಲುಪಿದೆಯೆ ಎನ್ನಿಸತೊಡಗಿತು.ಈ ಸುದ್ದಿ ಪ್ರಕಟವಾದ ದಿನದಿಂದ ಇವತ್ತಿನವರೆಗೂ ಗ್ರೀಸ್‌ನ ಆರ್ಥಿಕ ಸ್ಥಿತಿ ಬಿಗಡಾಯಿಸುತ್ತಲೇ ಇದೆ.  ಸಾಲದ ಹೊರೆ ಏರುತ್ತಲೇ ಹೋಗಿದೆ. ಹಳೆಯ ಸಾಲದ ಒಂದು ಭಾಗವನ್ನು ಮನ್ನಾ ಮಾಡಿ, ಹೊಸ ಸಾಲ ಕೊಡಬೇಕೆಂದು ಗ್ರೀಸ್ ಕೇಳುತ್ತಿದೆ. ಯುರೋಪಿಯನ್ ಯೂನಿಯನ್ ಹಾಗೂ ಅಂತರರಾಷ್ಟ್ರೀಯ ಸಾಲ ಸಂಸ್ಥೆಗಳು ತಮ್ಮ ಷರತ್ತುಗಳನ್ನು ಒಪ್ಪಿದರೆ ಮಾತ್ರ ಹೊಸ ಸಾಲ ಎಂದು ಧಮಕಿ ಹಾಕುತ್ತಿವೆ. ತಾವು ಹೇಳಿದಂತೆ ಜನರ ಸಂಬಳ ಕಡಿತ, ಪೆನ್ಷನ್ ಕಡಿತ, ತೆರಿಗೆ ಹೆಚ್ಚಳ ಇತ್ಯಾದಿ ‘ಸುಧಾರಣಾ ಕ್ರಮ’ಗಳನ್ನು (ಅಂದರೆ, ಜನಕಂಟಕ ಕ್ರಮಗಳನ್ನು!) ಗ್ರೀಸ್ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಲೇ ಇವೆ. ಭಾನುವಾರ ನಡೆದ ಜನಮತಗಣನೆಯಲ್ಲಿ ಗ್ರೀಸ್ ದೇಶದ ಅರ್ಧಕ್ಕಿಂತ ಹೆಚ್ಚು ಜನ ಇದಕ್ಕೆ ‘ನೋ’ ಎಂದಿದ್ದಾರೆ.ಜಾಗತೀಕರಣದ ಹೊಡೆತ, ರಾಜಕಾರಣಿಗಳ ಭ್ರಷ್ಟಾಚಾರ, ದಿಕ್ಕೆಟ್ಟ ಹಣಕಾಸಿನ ನಿರ್ವಹಣೆಗಳಿಂದಲೂ ಕುಸಿದ ಗ್ರೀಸ್ ದೇಶಕ್ಕೆ ಕಮ್ಯುನಿಸ್ಟ್ ನಾಯಕ ಅಲೆಕ್ಸಿಸ್‌‌ ಸಿಪ್ರಾಸ್ ಕಳೆದ ಜನವರಿಯಲ್ಲಿ ಪ್ರಧಾನಮಂತ್ರಿಯಾದರು.  ಅವರು ಬರುವ ಕಾಲಕ್ಕಾಗಲೇ ಗ್ರೀಸ್‌ ದೇಶದ ಮೇಲೆ ಬಿಲಿಯನ್‌ಗಟ್ಟಲೆ ಸಾಲವಿತ್ತು. ಅಂತರರಾಷ್ಟ್ರೀಯ ಸಾಲ ಸಂಸ್ಥೆಗಳೆಂದರೆ ನಮ್ಮಲ್ಲಿ ಚಕ್ರಬಡ್ಡಿ ವಸೂಲಿ ಮಾಡುವ ಕಲ್ಲೆದೆಯ ಸಾಲಿಗರಂತೆ; ಅವರ ಬಳಿ ಯಾವ ಸಾಮಾಜಿಕ ನ್ಯಾಯದ ಮಾತುಗಳೂ ನಡೆಯುವುದಿಲ್ಲ.ಸಿಪ್ರಾಸ್ ನೇತೃತ್ವದ ಸರ್ಕಾರಕ್ಕೆ ಇದರ ಕಾವು ತೀವ್ರವಾಗಿ ತಟ್ಟತೊಡಗಿತು. ಯುರೋಪಿಯನ್ ಯೂನಿಯನ್ನಿನ ಭಾಗವಾಗಿರುವ ಫ್ರಾನ್ಸ್ ಹಾಗೂ ಜರ್ಮನಿ ಕೂಡ ಗ್ರೀಸಿನ ನೆರವಿಗೆ ಬರುತ್ತಿಲ್ಲ. ಗ್ರೀಸ್ ದೇಶದ ಈ ಸೋದರ ದೇಶಗಳ ನಿರ್ದಯತೆಯನ್ನು ಕುರಿತು ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟಿಯವರ ಮಾತನ್ನು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಸಂಪಾದಕೀಯ ಉಲ್ಲೇಖಿಸಿದೆ: ‘ಎರಡನೇ ಮಹಾಯುದ್ಧದ ನಂತರ ಸಾಲ ಮನ್ನಾದಿಂದ ಅನುಕೂಲ ಪಡೆದ ಫ್ರಾನ್ಸ್ ಮತ್ತು ಜರ್ಮನಿಗಳೇ ಇವತ್ತು ಗ್ರೀಸ್ ಮೇಲೆ ಕಠಿಣ ಷರತ್ತುಗಳನ್ನು ಹೇರಲು ಹೊರಟಿರುವುದು ಈ ಪರಿಸ್ಥಿತಿಯ ವ್ಯಂಗ್ಯ’.ಇದೆಲ್ಲದರ ಜೊತೆಗೆ, ಗ್ರೀಸ್‌ನಲ್ಲಿ ಈಗ ಎಡಪಂಥೀಯ ಸರ್ಕಾರವಿರುವುದರ ಬಗ್ಗೆ ಬಂಡವಾಳಶಾಹಿ ದೇಶಗಳ ಅಸಹನೆಯೂ ಸೇರಿಕೊಂಡಿರಬಹುದು. ಈ ಜನಮತಗಣನೆಯಲ್ಲಿ ಸೋತು ಸಿಪ್ರಾಸ್ ರಾಜೀನಾಮೆ ಕೊಡಬಹುದು ಎಂದು ಈ ದೇಶಗಳು ಎದುರು ನೋಡುತ್ತಿದ್ದಂತಿತ್ತು. ಈ ವಿದ್ಯಮಾನಗಳ ಹಿಂದಿರುವ ಕಾರಣಗಳು ಕೇವಲ ಸಾಲ ಹಾಗೂ ಸಾಲ ತೀರುವಳಿಗಳಿಗೆ ಮಾತ್ರ ಸೀಮಿತವಾದಂತಿಲ್ಲ.  ಈ ಅಂತರರಾಷ್ಟ್ರೀಯ ರಾಜಕಾರಣದ ಒಳಸುಳಿಗಳನ್ನು ಅರಿಯುವುದು ಅಷ್ಟು ಸುಲಭವಲ್ಲ.ಜನಮತಗಣನೆಯ ದಿನದ ತನಕ ಫ್ರಾನ್ಸ್ ಹಾಗೂ ಜರ್ಮನಿಗಳು ತಾವು ಸೂಚಿಸುವ ಷರತ್ತುಗಳಿಗೆ ‘ಯೆಸ್’ ಎನ್ನಿ ಎಂದು ಗ್ರೀಕರನ್ನು ಉದ್ದೇಶಿಸಿ ಪ್ರಚಾರ ಮಾಡುತ್ತಲೇ ಇದ್ದವು. ಕಳೆದ ಭಾನುವಾರ, ಗ್ರೀಸ್ ಜನಮತಗಣನೆಯ ದಿನ ಪ್ರಕಟವಾದ ಫೋಟೊ ಒಂದನ್ನು ನೆನಪಿಸಿಕೊಳ್ಳಿ:  ಅವತ್ತು ಜಗತ್ತಿನ ಎಲ್ಲ ಪತ್ರಿಕೆಗಳಿಗೂ ಟೆಲಿವಿಷನ್ ಚಾನೆಲ್ ಗಳಿಗೂ ರಿಲೀಸ್ ಮಾಡಲಾದ ಫೋಟೊ ಇದು: ಎಟಿಎಂನಿಂದ ತನ್ನ ಹೆಂಡತಿಯ ಪೆನ್ಷನ್ ಹಣ ಪಡೆಯಲು ಬಂದ ಮುದುಕನೊಬ್ಬ ಎಟಿಎಂನಲ್ಲಿ ನೂರಿಪ್ಪತ್ತು ಯುರೋ (133 ಡಾಲರ್) ಬರದೆ, ನೆಲದ ಮೇಲೆ ಬಿದ್ದು ಅಳುತ್ತಿದ್ದಾನೆ. ಸೆಕ್ಯುರಿಟಿಯವರು ಅವನನ್ನು ಸಮಾಧಾನ ಮಾಡುತ್ತಾ ಏಳಿಸುತ್ತಿದ್ದಾರೆ. ಗ್ರೀಸ್ ದೇಶ ಪ್ರಬಲ ಹಣಕಾಸು ಸಂಸ್ಥೆಗಳ ಮಾತು ಕೇಳದಿದ್ದರೆ ಈ ಮುದುಕನ ಸ್ಥಿತಿ ಎಲ್ಲರಿಗೂ ಬರುತ್ತದೆ ಎಂದು ಜನಮತಗಣನೆಯ ದಿನ ಗ್ರೀಕ್ ಮತದಾರರನ್ನು ‘ಎಚ್ಚರಿಸಲು’ ಈ ಫೋಟೊವನ್ನು ಕೆಲಬಗೆಯ ಏಜೆನ್ಸಿಗಳು ಬಿಡುಗಡೆ ಮಾಡಿರಬಹುದು ಎಂಬ ಸಂದೇಹ ನನ್ನದು.ಈ ಬೆಳವಣಿಗೆಗಳನ್ನು ನೋಡುತ್ತಾ, ಯಾಕೋ ಮತ್ತೆ ಗ್ರೀಕ್ ನಾಗರಿಕತೆಯ ಪತನಕ್ಕೇ ನನ್ನ ಮನಸ್ಸು ಮರಳುತ್ತಿತ್ತು. ಈ ಬಗ್ಗೆ ಅಲವತ್ತುಕೊಳ್ಳುತ್ತಿರುವಾಗ, ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞರಲ್ಲೊಬ್ಬರಾದ ಕನ್ನಡಿಗ ಪ್ರೊ. ಬಿಸಲಯ್ಯನವರು ‘ಬಹುದೊಡ್ಡ ನಾಗರಿಕತೆಗಳಿಗೂ ಬೆಳವಣಿಗೆ, ಸ್ಥಗಿತತೆ ಹಾಗೂ ಕೊಳೆಯುವಿಕೆಗಳು ಇರುತ್ತವಲ್ಲವೆ? ಈಜಿಪ್ಟ್ ಹಾಗೂ ಗ್ರೀಕ್ ನಾಗರಿಕತೆಗಳೆರಡೂ ಈ ಸ್ಥಿತಿಯನ್ನು ಎದುರಿಸಿವೆಯಲ್ಲವೆ?’ ಎಂದರು. ಅದು ನಿಜವೆನ್ನಿಸಿದರೂ, ಯಾಕೋ ಗ್ರೀಸ್ ದೇಶದ ಸ್ಥಿತಿಯನ್ನು ಒಪ್ಪಿಕೊಳ್ಳುವುದು ಕಷ್ಟವಾಯಿತು. ‘ಇಂಡಿಯಾಕ್ಕೂ 1991ರ ಜುಲೈನಲ್ಲಿ ಹೆಚ್ಚೂ ಕಡಿಮೆ ಇದೇ ಸ್ಥಿತಿ ಬಂದಿತ್ತು.ಯಾವ ದೇಶಗಳೂ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳೂ ಇಂಡಿಯಾಕ್ಕೆ ಸಾಲ ಕೊಡಲು ಸಿದ್ಧವಿರಲಿಲ್ಲ. ಇಂಡಿಯಾ ತನ್ನ ರಿಸರ್ವ್ ಬ್ಯಾಂಕಿನಲ್ಲಿರುವ ಚಿನ್ನವನ್ನು ವಿದೇಶಗಳಲ್ಲಿ ಒತ್ತೆಯಿಡುವ ಸಂದರ್ಭ ಬಂದಿತ್ತು. ಹಿಂದಿನ ದಶಕಗಳಲ್ಲಿ ಗ್ರೀಸ್ ತನ್ನ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಲು ಸಾಲವನ್ನೇ ನೆಚ್ಚಿದ್ದರಿಂದಲೂ ಈ ಬಿಕ್ಕಟ್ಟು ಹುಟ್ಟಿದೆ.  ಜೊತೆಗೆ ಈ ಕಾಲದ ‘ಅಭಿವೃದ್ಧಿ’ ಹಾಗೂ ‘ಬೆಳವಣಿಗೆ’ಗಳ ಎರಡು ಧ್ರುವಗಳ ನಡುವೆ ಗ್ರೀಸ್ ಸಿಕ್ಕಿಕೊಂಡಿದೆ. ಕೆಲವೇ ಕಾರ್ಪೊರೇಟ್ ಸಂಸ್ಥೆಗಳ ಆದಾಯ ಹೆಚ್ಚಿಸುವುದರ ಮೂಲಕ ಹಣಕಾಸು ಸ್ಥಿತಿಯನ್ನು ಉತ್ತಮಗೊಳಿಸುವುದು ಈ ಕಾಲದ ‘ಅಭಿವೃದ್ಧಿ’ಯ ಕಲ್ಪನೆ. ಮಾನವ ಕಲ್ಯಾಣ ಯೋಜನೆಗಳ ಮೂಲಕ ಮಾನವ ಬಂಡವಾಳ ಹೆಚ್ಚಿಸುವುದು ಬೆಳವಣಿಗೆಯ ಕಲ್ಪನೆ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ತಾವು ಹೇಳುತ್ತಿರುವ ದಯಾಹೀನ ‘ಅಭಿವೃದ್ಧಿ’ಯ ಮಾದರಿಗೆ ಗ್ರೀಸ್ ದೇಶವನ್ನು ಬಗ್ಗಿಸಲು ಪ್ರಯತ್ನಿಸುತ್ತಿವೆ’ ಎಂದು ಪ್ರೊ. ಬಿಸಲಯ್ಯ ವಿವರಿಸಿದರು.ಜಾಗತೀಕರಣ ಕಾಲದ ನಿರ್ದಯ ಹಂತವನ್ನು ಗ್ರೀಸ್ ಕೂಡ ಹಾದು ಹೋಗಬೇಕಾಗಿ ಬರಬಹುದು ಎನ್ನಿಸಿದರೂ, ಅವತ್ತು ಗ್ರೀಸ್ ತನ್ನ ಪಾರಂಪರಿಕ ಕಟ್ಟಡಗಳನ್ನು ಮಾರುವ ಸ್ಥಿತಿ ತಲುಪಿದೆ ಎಂಬ ಸುದ್ದಿ ಓದಿದಾಗ ಹುಟ್ಟಿದ್ದ ದುಗುಡ ಇವತ್ತೂ ಮುತ್ತತೊಡಗಿತು. ಕಾರಣ, ಗ್ರೀಕ್ ಸಂಸ್ಕೃತಿ ಕನ್ನಡ ಸಾಹಿತ್ಯವೂ ಸೇರಿದಂತೆ ಇಡೀ ಜಗತ್ತಿಗೆ ಅದ್ಭುತ ಕೊಡುಗೆಗಳನ್ನು ಕೊಟ್ಟಿದೆ. ಯುರೋಪಿನ ಭಾಷೆಗಳ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಹಾಗೂ ಕನ್ನಡ ಸಾಹಿತ್ಯಗಳು ಕೂಡ ಗ್ರೀಕ್ ಸಾಹಿತ್ಯಕ್ಕೆ ಋಣಿಯಾಗಿವೆ.ಕಾರ್ಲ್ ಮಾರ್ಕ್ಸ್‌ಗೆ ಪ್ರೇರಣೆ ಕೊಟ್ಟ ಕತೆಗಳಲ್ಲಿ ಗ್ರೀಕ್‌ನ ಪ್ರೊಮಿಥ್ಯೂಸ್ ಕತೆಯೂ ಒಂದು. ಮನುಷ್ಯರಿಗೆ ನೆರವಾಗಬೇಕೆಂಬುದು ಪ್ರೊಮಿಥ್ಯೂಸನ ಆಸೆ. ದೇವತೆಗಳು ಮನುಷ್ಯರಿಂದ ಬೆಂಕಿಯನ್ನು ಕದ್ದುಕೊಂಡು ಹೋದಾಗ ಪ್ರೊಮಿಥ್ಯೂಸ್ ದೇವತೆಗಳಿಗೆ ಕಾಣದಂತೆ ಬಳ್ಳಿಯ ಕಾಂಡದಲ್ಲಿ ಬೆಂಕಿಯನ್ನು ಬಚ್ಚಿಟ್ಟುಕೊಂಡು ಬಂದು ಮನುಷ್ಯರಿಗೆ ಕೊಡುತ್ತಾನೆ; ದೇವತೆಗಳಿಂದ ಶಿಕ್ಷೆ ಅನುಭವಿಸುತ್ತಾನೆ.  ‘ತನಗೆ ಎಷ್ಟೇ ಕಷ್ಟವಾದರೂ ಮನುಷ್ಯರಿಗೆ ಸಹಾಯ ಮಾಡಹೊರಟ ಪ್ರೊಮಿಥ್ಯೂಸ್ ಕತೆ ನನಗೆ ಸ್ಫೂರ್ತಿ’ಯೆಂದು ಮಾರ್ಕ್ಸ್ ಹೇಳುತ್ತಿದ್ದರು. ಇಪ್ಪತ್ತನೆಯ ಶತಮಾನದಲ್ಲಿ ಆಫ್ರಿಕಾದ ಚಿನುವ ಅಚೀಬೆ ತನ್ನ ನಾಡಿಗೆ ವಸಾಹತೀಕರಣ ತಂದ ಆಘಾತವನ್ನು ಕುರಿತು ಬರೆದ ‘ಥಿಂಗ್ಸ್ ಫಾಲ್ ಅಪಾರ್ಟ್’ ಕಾದಂಬರಿಯಲ್ಲಿ ಕಾಣುವ ದುರಂತ ಗ್ರಹಿಕೆಗಳನ್ನು ಗ್ರೀಕ್ ದುರಂತ ನಾಟಕಗಳೂ ರೂಪಿಸಿದ್ದವು. ಜಗತ್ತಿಗೆ ಸಾಕ್ರಟೀಸ್, ಪ್ಲೇಟೊ, ಅರಿಸ್ಟಾಟಲರನ್ನೂ,‘ಡೆಮಾಕ್ರೆಸಿ’ ‘ಪಾಲಿಟಿಕ್ಸ್’ ಮುಂತಾದ ಪದಗಳನ್ನೂ ಪರಿಕಲ್ಪನೆಗಳನ್ನೂ ಕೊಟ್ಟ ಗ್ರೀಸ್ ದೇಶದ ಪ್ರಜಾಪ್ರಭುತ್ವ ಮತ್ತು ರಾಜಕಾರಣ ಇಪ್ಪತ್ತೊಂದನೆಯ ಶತಮಾನದಲ್ಲಿ ಸಾಲದ ನೇಣಿಗೆ ಸಿಕ್ಕಿ ನಾಶವಾಗುವ ಹಂತಕ್ಕೆ ಬಂದಿದ್ದು ನನ್ನಲ್ಲಿ ದಿಗ್ಭ್ರಮೆ ಹುಟ್ಟಿಸುತ್ತಲೇ ಇತ್ತು.ಇಷ್ಟೆಲ್ಲದರ ನಡುವೆಯೂ ಗ್ರೀಕರು ಯುರೋಪಿಯನ್ ಯೂನಿಯನ್ನಿನ ಷರತ್ತುಗಳಿಗೆ ‘ನೋ’ ಎಂದಿದ್ದಾರೆ. ಈ ಫಲಿತಾಂಶ ಕುರಿತು ಈ ಕಾಲದ ಶ್ರೇಷ್ಠ ಅರ್ಥಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ವಿಜೇತ ಪಾಲ್ ಕ್ರುಗ್ ಮನ್ ಹೇಳುತ್ತಾರೆ: ‘ಸಾಲ ಕೊಡುವ ಸಂಸ್ಥೆಗಳು ಗ್ರೀಕರ ಸರ್ಕಾರವನ್ನೇ ಇಲ್ಲವಾಗಿಸಲು ಹಾಗೂ ತಮ್ಮ ಷರತ್ತುಗಳಿಗೆ ಗ್ರೀಕರು ಮಣಿಯುವಂತೆ ಮಾಡಲು ಒಡ್ಡಿದ ಬಗೆಬಗೆಯ ಬೆದರಿಕೆಗಳು ಹಾಗೂ ನೀಚ ಪ್ರಚಾರಗಳ ಎದುರು ಗ್ರೀಸ್ ದಿಟ್ಟವಾಗಿ ಎದ್ದು ನಿಂತಿದೆ’.ಕ್ರುಗ್ ಮನ್ ಪ್ರಕಾರ ಇದು ಯುರೋಪಿನ ಚೈತನ್ಯದ ಗೆಲುವು. ಆದರೂ ಅಂತರರಾಷ್ಟ್ರೀಯ ಸಾಲಿಗ ಸಂಸ್ಥೆಗಳನ್ನು ‘ಭಯೋತ್ಪಾದಕರು’ ಎಂದು ಟೀಕಿಸುತ್ತಿದ್ದ ಗ್ರೀಸ್ ದೇಶದ ಹಣಕಾಸು ಸಚಿವ, ಮಾರ್ಕ್ಸಿಸ್ಟ್ ಯಾನಿಸ್ ರಫಾಕಿಸ್ ಈ ಫಲಿತಾಂಶದ ನಂತರ ರಾಜೀನಾಮೆ ಕೊಟ್ಟಿದ್ದಾರೆ.  ಈಗ ಅವರ ಜಾಗಕ್ಕೆ ಮನಮೋಹನ ಸಿಂಗರಂಥ, ಅಕಡೆಮಿಕ್ ಹಿನ್ನೆಲೆಯ, ‘ಮೆತ್ತನೆಯ’ ಹಣಕಾಸು ಸಚಿವರು ಬಂದಿದ್ದಾರೆ. ಇದರಿಂದ ಸಿಪ್ರಾಸ್, ಯುರೋಪಿಯನ್ ಯೂನಿಯನ್ ದೇಶಗಳ ಜೊತೆ ಸುಗಮವಾಗಿ ವ್ಯವಹಾರ ಮಾಡುವ ಹಾದಿ ತೆರೆಯಬಲ್ಲದು ಎನ್ನುವವರಿದ್ದಾರೆ.ಆದರೆ ಯಾವುದೂ ಖಾತ್ರಿಯಿಲ್ಲ. ಗ್ರೀಕ್ ದುರಂತ ನಾಟಕದ ಚೌಕಟ್ಟು ಮತ್ತೆ ನೆನಪಿಗೆ ಬರುತ್ತದೆ. ಯಾಕೆಂದರೆ ಸಿಪ್ರಾಸ್ ಮತ್ತೆ ಯುರೋವಲಯದ ಬಡ್ಡಿಸಾಲಿಗರ ಜೊತೆಗೇ ಮಾತುಕತೆಗೆ ಕೂರಬೇಕಾಗಿದೆ.ಪ್ರೊ.ಬಿಸಲಯ್ಯನವರು ಗಮನಿಸುವಂತೆ, ‘ಸಿಪ್ರಾಸ್ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಷರತ್ತುಗಳಿಗೆ ಮಣಿದು ಈಗ ತಮಗೆ ಬೇಕಾದ ಸಾಲ ಪಡೆದರೆ, ತಮ್ಮ ಗ್ರೀಕ್ ಜನರಿಗೆ ಈಗ ಕೊಡುತ್ತಿರುವ ಹಲಬಗೆಯ ಸವಲತ್ತುಗಳನ್ನು ಕಡಿತ ಮಾಡಬೇಕಾಗುತ್ತದೆ. ಹಾಗೆ ಮಾಡಿದರೆ ಮತ್ತೆ ತಾನು ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇನೆಯೆ ಎಂಬ ಭಯ ಎಲ್ಲ ರಾಜಕಾರಣಿಗಳಂತೆ ಅವರಿಗೂ ಇರಬಹುದು’. ಅಂದರೆ, ಸಿಪ್ರಾಸ್ ಇವತ್ತು ಗ್ರೀಸ್ ದೇಶವನ್ನು ಸಂಕಟದಿಂದ ಪಾರು ಮಾಡಲು ಹೊರಟು ದುರಂತ ನಾಯಕನಾಗಲು  ಸಿದ್ಧರಿದ್ದಾರೆಯೆ? ಅಥವಾ ಸೋತರೂ ಗ್ರೀಕರ ನವಚರಿತ್ರೆಯಲ್ಲಿ ಹೀರೊ ಆಗಲಿದ್ದಾರೆಯೆ? ಅಥವಾ ಅವರು ನಿಸ್ವಾರ್ಥಿ ನಾಯಕನಾಗಿ ಹೊರಹೊಮ್ಮಿ, ಕೆಲವು ವರ್ಷ ಅವರು ಹೇಳಿದಂತೆ ಕೇಳೋಣ ಎಂದು ಗ್ರೀಕರು ಅವರು ಹೇಳಿದ್ದನ್ನು ಒಪ್ಪಲಿದ್ದಾರೆಯೆ? ಗ್ರೀಕ್ ಪುರಾಣಕತೆಯ ಸಿಸಿಫಸ್‌ಗೆ ದೇವತೆಗಳು ಒಂದು ಇಳಿಜಾರಾದ ಬೆಟ್ಟದ ಮೇಲೆ ಬಂಡೆಯನ್ನು ಇಡುವ ಶಿಕ್ಷೆ ಕೊಡುತ್ತಾರೆ. ಸಿಸಿಫಸ್ ಬೆಟ್ಟದ ನೆತ್ತಿಯ ಮೇಲೆ ಬಂಡೆಯಿಟ್ಟು ಕೆಳಗೆ ಬರುತ್ತಾನೆ. ಬಂಡೆ ಜಾರಿ ಕೆಳಗೆ ಬರುತ್ತದೆ. ಸಿಸಿಫಸ್ ಮತ್ತೆ ಆ ಬಂಡೆಯನ್ನು ಮೇಲಿಡುತ್ತಾನೆ. ಮತ್ತೆ ಅದು ಜಾರಿ ಬೀಳುತ್ತದೆ. ಉತ್ಸಾಹಿ ನಾಯಕ ಸಿಪ್ರಾಸ್ ಮಾಡ ಹೊರಟಿರುವ ಕೆಲಸ ಸಿಸಿಫಸ್ ಕೆಲಸದಂತೆ ಆಗದಿರಲಿ.ಕೊನೆ ಟಿಪ್ಪಣಿ: ಮರಳಿ ಎರಗಿದ ಪುರಾಣ ಪ್ರತಿಮೆ!

ಒಂದು ನಾಡಿನ ಪುರಾಣಗಳು ಆ ನಾಡನ್ನು ಮತ್ತೆ ಅಮರಿಕೊಳ್ಳುವ ಕ್ರಮ ವಿಚಿತ್ರವಾಗಿರಬಲ್ಲದು. ಹೋಮರ್ ‘ಇಲಿಯಡ್’ ಮಹಾಕಾವ್ಯ ಬರೆದ ನಂತರ ಅದರೊಳಗೆ ಸೇರಿಕೊಂಡ ಕತೆಗಳಲ್ಲಿ ‘ಟ್ರೋಜನ್ ಹಾರ್ಸ್’ ಕತೆಯೂ ಒಂದು. ಟ್ರೋಜನ್ನರಿಗೂ ಗ್ರೀಕರಿಗೂ ನಡೆದ ಯುದ್ಧದ ಕೊನೆಗೆ ಗ್ರೀಕರು ಅಳಿದುಳಿದ ಯೋಧರೊಂದಿಗೆ ಟ್ರಾಯ್ ನಗರದಿಂದ ತಂತಮ್ಮ ನಾಡುಗಳ ಕಡೆಗೆ ಹೊರಡುವಂತೆ ನಾಟಕ ಆಡುತ್ತಾರೆ.ಆಗ ಕಿಲಾಡಿ ಒಡಿಸ್ಯೂಸ್ ಎಪೈಯಸ್ ಎಂಬ ಯೋಧನಿಂದ ಮರದ ಕುದುರೆಯೊಂದನ್ನು ಮಾಡಿಸುತ್ತಾನೆ. ಅದರೊಳಗೆ ಅಡಗಿಕೊಂಡ ಗ್ರೀಕರು ಟ್ರೋಜನ್ನರ ಟ್ರಾಯ್ ನಗರವನ್ನು ಸುಟ್ಟು ಹಾಕುತ್ತಾರೆ. ಅಂದಿನಿಂದ ‘ಟ್ರೋಜನ್ ಹಾರ್ಸ್’ ಎಂಬುದು ಉಪಾಯದಿಂದ

ಏನನ್ನಾದರೂ ಗೆದ್ದುಕೊಳ್ಳುವುದನ್ನು ಸೂಚಿಸುವ ಪದವಾಗಿದೆ. ಮೊನ್ನೆ ಜರ್ಮನಿಯ ಅಧ್ಯಕ್ಷರಿಗೆ ಸಿಪ್ರಾಸ್ ಬರೆದ ಪತ್ರವೊಂದರಲ್ಲಿ ಕರಾರುಗಳು ಅಸ್ಪಷ್ಟವಾಗಿದ್ದವಂತೆ. ಅದಕ್ಕೆ ಜರ್ಮನಿಯ  ಅಧ್ಯಕ್ಷರ ಪ್ರತಿಕ್ರಿಯೆ: ‘ನಾವು ಈ ಟ್ರೋಜನ್ ಹಾರ್ಸ್‌ನ ಒಪ್ಪಿಕೊಳ್ಳುವುದಿಲ್ಲ!’

ಸಿಪ್ರಾಸ್ ಮುಂದೆ ಜರ್ಮನಿಗೆ ಉತ್ತರ ಕೊಡಲು ಒಡಿಸ್ಯೂಸನ  ಇನ್ನಿತರ ಉಪಾಯಗಳ ಮಾದರಿಗಳನ್ನೇ ಹುಡುಕಬೇಕಾಗುತ್ತದೋ ಏನೋ!

editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.