ಮಂಗಳವಾರ, ಜೂಲೈ 7, 2020
28 °C

ಭೀಮಸೇನ ಜೋಶಿ ಹಾಡಿದರೆಂದರೆ...

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಭೀಮಸೇನ ಜೋಶಿ ಹಾಡಿದರೆಂದರೆ...

ನಿರ್ಮಲ ಜಲ ಸುಳಿದಾಡಿದಂತೆ, ನೀರಿಗೆ ನೋವಾದೀತು ಎಂದು ಸುಳಿಗಾಳಿ ಅದರ ಮೇಲೆ ಮೃದುವಾಗಿ ಕೈಯಾಡಿಸಿದಂತೆ, ಒಂದೇ ಸಾರಿ ಸಮುದ್ರ ಭೋರ್ಗರೆದು ಅಲೆಗಳು ಬಂದು ತೀರಕ್ಕೆ ಅಪ್ಪಳಿಸಿದಂತೆ, ಮೋಡ ಗುಡುಗಿದಂತೆ, ಒಡೆದು ಧಾರಾಕಾರ ಮಳೆ ಸುರಿದಂತೆ, ನಂದಾದೀಪ ಉರಿದಂತೆ, ನಕ್ಷತ್ರ ಬೆಳಗಿದಂತೆ... ಭೀಮಸೇನ ಜೋಶಿ ಹಾಡುತ್ತಿದ್ದರು.ಭೀಮಸೇನರು ಬದುಕಿದ್ದಾಗ ನಾನು ಅವರ ಹಾಡು ಕೇಳಿರಲಿಲ್ಲ. ನನಗೆ ಹಾಗೂ ನನ್ನಂಥ ಅನೇಕರಿಗೆ ಆ ಭಾಗ್ಯ ಇರಲಿಲ್ಲ. ಗರುಡ ಮೂಗಿನ, ದೊಡ್ಡ ಕಿವಿಯ, ಉದ್ದ ಮುಖದ, ಭೀಮಕಾಯದ ಭೀಮಸೇನರು ಹಾಡಿದ ಒಂದೊಂದು ರಾಗ ಸ್ವತಃ ಗಾಯಕನನ್ನು ಅಲ್ಲಾಡಿಸಿದ ಹಾಗೆ ಕೇಳುಗನನ್ನೂ ಅಲ್ಲಾಡಿಸುತ್ತಿತ್ತು. ಹಾಡು ನಡೆಯುವವರೆಗೆ ಸಭಾಂಗಣದಲ್ಲಿ ನೆಲೆನಿಂತಿದ್ದ ದಿವ್ಯ ಮೌನ ನಂತರ ಚಪ್ಪಾಳೆಯಾಗುತ್ತಿತ್ತು. ಮತ್ತೊಂದು ರಾಗಕ್ಕೆ ತೆರೆದುಕೊಳ್ಳುತ್ತಿತ್ತು. ಭೀಮಸೇನರು ಮತ್ತೆ ಇನ್ನೊಂದು ರಾಗದ ಬೆನ್ನು ಹತ್ತುತ್ತಿದ್ದರು. ರಾಗದ ಜತೆಗಿನ ಅನುಸಂಧಾನದಲ್ಲಿ ಅವರ ಆರ್ತತೆ, ಉತ್ಕಟತೆ, ರಾಗದಲ್ಲಿ ಮಾಧುರ್ಯ ಕರುಣಿಸುವಂತೆ ದೇವರಲ್ಲಿ ಮೊರೆ ಇಡುವ ಪರಿ, ಕೈಯನ್ನು ಹಿಂದಕ್ಕೆ ಮುಂದಕ್ಕೆ ಆಡಿಸುತ್ತ ಅದನ್ನು ಬಣ್ಣಿಸುವ ಬಗೆ ಎಲ್ಲವೂ ಒಂದು ಅನುಪಮ ಗಂಧರ್ವ ಕಲೆ. ಭೀಮಸೇನರ ಹಾಡು ಕೇಳುತ್ತ ಕೇಳುತ್ತ ಜೀವನ ಸಾಕು ಅನಿಸುತ್ತದೆ. ಕುಮಾರ ಗಂಧರ್ವರು ತೀರಿಕೊಂಡಾಗ ಕೆ.ವಿ.ಸುಬ್ಬಣ್ಣ ‘ಪ್ರಜಾವಾಣಿ’ಗೆ ಪತ್ರ ಬರೆದು ‘ಕುಮಾರ ಗಂಧರ್ವರ ಆ ಹಾಡುಗಾರಿಕೆ ಕೇಳಿ ನನಗೆ ಜೀವನ ಸಾಕು ಅನಿಸಿತ್ತು’ ಎಂದು ಬರೆದಿದ್ದರು.ಭೀಮಸೇನ, ಮಲ್ಲಿಕಾರ್ಜುನ ಮನ್ಸೂರ, ರಾಜಗುರು ಅಂಥವರ ಹಾಡು ಕೇಳಿದಾಗಲೆಲ್ಲ ಜೀವನ ಸಾಕು ಅನಿಸುತ್ತದೆ. ಅದು ಸಾವಿನ ಬಯಕೆಯ ಗಳಿಗೆಯಲ್ಲ. ಜೀವನದ ಸಾರ್ಥಕತೆಯ ಗಳಿಗೆ. ‘ಇನ್ನು ಸಾಕು, ನಾನು ಕೇಳಬೇಕಾದುದು ಮತ್ತೇನೂ ಇಲ್ಲ’ ಅನಿಸುವ ಗಳಿಗೆಯದು. ಆದರೆ ಹಾಡುಗಾರನಿಗೆ ಹಾಗೆ ಅಲ್ಲ. ಪ್ರತಿ ರಾಗವೂ ಒಂದು ಹೊಸ ಬದುಕು, ಹೊಸ ಅನುಭವ. ನಾನು ಹಾಡಿದ್ದು ಸಾಲದು ಎಂಬ ಅರಕೆ ಒಮ್ಮೆ ಕಾಡಿದರೆ ಹಾಡುಗಾರಿಕೆ ಸಿದ್ಧಿಸಿ ಇಡೀ ದೇಹವೆಲ್ಲ ದಣಿದು ಸಂತೃಪ್ತಿ ಸಾಧಿಸಿದ ಅನುಭವ ಮತ್ತೊಮ್ಮೆ. ಹೆಣ್ಣು ಗಂಡಿನ ಸಂಗಮದ ಹಾಗೆ. ಒಮ್ಮೆ ತೃಪ್ತಿ. ಮತ್ತೊಮ್ಮೆ ಅತೃಪ್ತಿ. ಮತ್ತೆ ಅದೇ ರಾಗವನ್ನು ಹುಡುಕುತ್ತ ಅಲೆದಾಡುವುದು, ಭಗವಂತನನ್ನು, ‘ಕರುಣಿಸು’ ಎಂದು ಪ್ರಾರ್ಥಿಸುವುದು.ಇಡೀ ಜೀವನ ಹಾಡಿದರೂ, ‘ಒಂದು ರಾಗವನ್ನಾದರೂ ಸಂಪೂರ್ಣವಾಗಿ ಹಾಡಿದೆ ಅದರ ಮೇಲೆ ಪ್ರಭುತ್ವ ಸಾಧಿಸಿದೆ’ ಎಂದು ಬೀಗಲಾಗದೆ ಅಸಹಾಯಕತೆಯಲ್ಲಿ ಬೇಯುವುದು. ಎಲ್ಲ ಕಲಾವಿದರ, ಸಂಗೀತಗಾರರ, ಲೇಖಕರ ಅಳಲು ಇದು. ಸಿಕ್ಕಿತು ಎಂದು ಹಿಡಿಯಲು ಹೋಗುವುದರ ಒಳಗೆ ತಪ್ಪಿಸಿಕೊಂಡು ದೊಡ್ಡದಾಗಿ ನಿಲ್ಲುವ ಅದರ ಮುಂದೆ ಮತ್ತೆ ಬಾಗಿ ನಿಲ್ಲುವುದು, ವಿನೀತನಾಗುವುದು.ಅಂಥ ಕಲಾವಿದನ ವಿನಯದ ಮುಂದೆ ಕೇಳುಗ ಕೂಡ ವಿನೀತನಾಗುತ್ತಾನೆ. ಅವನ ಹುಡುಕಾಟದ ಜತೆಗೆ ತಾನೂ ಸೇರಿಕೊಳ್ಳುತ್ತಾನೆ. ಗಾಯಕನಿಗೆ ಸಿಕ್ಕುದು ತನಗೂ ಸಿಕ್ಕಿತು ಎಂದುಕೊಳ್ಳುತ್ತಾನೆ. ರಸಾನುಭೂತಿಯಲ್ಲಿ ಮಿಂದು ಏಳುತ್ತಾನೆ. ಹಾಡು ಮುಗಿಸಿದ ಗಾಯಕನಿಗೆ ಎದ್ದು ನಿಂತು ಚಪ್ಪಾಳೆ ತಟ್ಟಿ ತನ್ನ ಗೌರವ ಸೂಚಿಸುತ್ತಾನೆ. ನಮಗೂ ಹಾಗೆಯೇ ಆಯಿತು. ಭೀಮಸೇನರು ಈಗ ಬದುಕಿಲ್ಲ. ಆದರೆ, ಅವರ ಗಾಯನದ ವಿಡಿಯೊ ಪ್ರದರ್ಶನಕ್ಕೆ ಲೇಖಕ ಎಸ್.ದಿವಾಕರ್ ಏರ್ಪಾಡು ಮಾಡಿದ್ದರು. ಬೆಂಗಳೂರಿನ ಗಾಯನ ಸಮಾಜ ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಭರ್ತಿಯಾಗಿತ್ತು. ಭೀಮಸೇನರ ಗಾಯನ ಕೇಳದವರು, ಕೇಳಿದವರು ಸಭಾಂಗಣದಲ್ಲಿ ಸೇರಿದ್ದರು. ಜೋಶಿಯವರು ತಮ್ಮ ವಯಸ್ಸಿನ ವಿವಿಧ ಘಟ್ಟಗಳಲ್ಲಿ ಕೊಟ್ಟ ಕಾರ್ಯಕ್ರಮಗಳು ಅವು. ಭೀಮಸೇನರದು ಯೌವನದಲ್ಲಿ ಆರ್ಭಟದ ಗಾಯನ. ವೇದಿಕೆಯ ಮೇಲೆ ಗಾಯನದ ಜತೆ ಜತೆಗೆ ಅವರದು ಅದ್ಭುತ ಆಂಗಿಕ ಅಭಿನಯ.ರಾಗವನ್ನು ಬಣ್ಣಿಸುವ ಬಗೆಯೇ ಅದು? ಅಥವಾ ಹಿಡಿದುಕೊಳ್ಳುವ ಹಟವೇ? ಗಾಯಕನೊಬ್ಬ ವೇದಿಕೆಯ ಮೇಲೆ ಏಕೆ ಹಾಗೆ ಕೈ ಮಾಡುತ್ತಾನೆ? ವೇಗವಾಗಿ ಹಿಂದೆ ಮುಂದೆ ಎಳೆದಾಡುತ್ತಾನೆ? ತೀಡುತ್ತಾನೆ? ಬೆರಳುಗಳಲ್ಲಿ ಬಣ್ಣಿಸುತ್ತಾನೆ? ಹಾಡುವಾಗ ಆತ ನೋವು ಪಡುತ್ತಾನೆಯೇ? ಸಂತೋಷ ಪಡುತ್ತಾನೆಯೇ? ಅಭಿವ್ಯಕ್ತಿಸುವಾಗ ಬರಹಗಾರನ, ಕಲಾವಿದನ ಸಂಕಟವೂ ಹೀಗೆಯೇ ಇರುತ್ತದೆ ಅನಿಸುತ್ತದೆ.ಬರಹಗಾರ ಶಬ್ದಗಳಲ್ಲಿ ಹಿಡಿದು ಇಡುವ ಪ್ರಯತ್ನವನ್ನು ಮಾಡಿದರೆ ಕಲಾವಿದ ರೇಖೆಗಳಲ್ಲಿ ಹಿಡಿದು ಕೊಡಲು ಹೆಣಗುತ್ತಾನೆ. ಹಾಡುಗಾರ ಅದನ್ನು ರಾಗದಲ್ಲಿ ತೋಡಿಕೊಳ್ಳುತ್ತಾನೆ. ಬರಹಗಾರ, ಕಲಾವಿದ ಮತ್ತು ಹಾಡುಗಾರ ರಸಿಕನಿಗೆ ಉಣಬಡಿಸುವ ಅನುಭವ ಈ ಮೂವರಿಗಿಂತ ದೊಡ್ಡದಾಗಿರುತ್ತದೆಯೇ? ಅದಕ್ಕೇ ಅದನ್ನು ಹಿಡಿದುಕೊಡಲು ಆಗದೇ ಈ ಮೂವರೂ ಒದ್ದಾಡುತ್ತಾರೆಯೇ? ಸಂಕಟ ಪಡುತ್ತಾರೆಯೇ? ಸಿಕ್ಕಿತು ಎಂದಾಗ ಸಂಭ್ರಮ ಪಡುತ್ತಾರೆಯೇ? ದಣಿಯುತ್ತಾರೆಯೇ? ಅವನ ಕೈಗೆ ಸಿಕ್ಕ ಅನುಭವ ರಸಿಕನನ್ನು ಬುಡಮಟ್ಟ ಅಲ್ಲಾಡಿಸಿ ಬಿಡುತ್ತದೆಯೇ? ಭೀಮಸೇನ ಗಾಯನ, ಗಾಯನ ಸಮಾಜದಲ್ಲಿ ಸೇರಿದವರನ್ನೆಲ್ಲ ಬುಡಮಟ್ಟ ಅಲ್ಲಾಡಿಸಿದ್ದು ನಿಜ. ಸಂಗೀತ ಎಂಬುದು ಒಂದು ಗಂಧರ್ವ ಕಲೆ, ಅಪರಿಪೂರ್ಣತೆಯ ಜತೆಗಿನ ನಿರಂತರ ಹೋರಾಟ ಅದು. ಭೀಮಸೇನರಿಗೆ ಅವರ ಗುರು ಪ್ರತಿದಿನ ಒಂದೊಂದು ರಾಗ ಕಲಿಸುತ್ತಿರಲಿಲ್ಲ. ಪ್ರತಿದಿನ ಬೆಳಿಗ್ಗೆ ತೋಡಿ, ಮಧ್ಯಾಹ್ನ ಮುಲ್ತಾನ, ಸಂಜೆ ಪೂರಿಯಾ ಮತ್ತು ಮಾರವಾ, ರಾತ್ರಿ ಮಾಲಕಂಸ ಮತ್ತು ದರಬಾರಿ ರಾಗಗಳನ್ನು ಕಲಿಸುತ್ತಿದ್ದರು. ಈ ಕಲಿಕೆ ಸತತವಾಗಿ ಐದು ವರ್ಷಗಳ ಕಾಲ ನಡೆಯಿತು. ಪ್ರತಿ ದಿನವೂ ಒಂದೊಂದು ರಾಗ ಕಲಿಸುತ್ತ ಇದ್ದರೆ ಯಾವುದರ ಮೇಲೂ ಸಿದ್ಧಿ ಸಾಧಿಸದು ಎಂಬ ಕಾಳಜಿ ಗುರುವಿಗೂ ಇರುತ್ತದೆ. ಮತ್ತೆ ಮತ್ತೆ ಅದನ್ನೇ ಹೇಳಿಕೊಡುತ್ತ ಅದರಲ್ಲಿಯೇ ಸಿದ್ಧಿ ಸಾಧನೆಗೆ ಗುರು ಮಾರ್ಗದರ್ಶನ ಮಾಡುತ್ತಾನೆ. ಭೀಮಸೇನರೂ ಹಾಗೆಯೇ ಕಲಿತರು. ಪ್ರತಿ ಸಾರಿಯ ಹಾಡುಗಾರಿಕೆ ಒಂದು ಕಲಿಕೆ ಎಂದು ಕಲಿತರು. ಅದರಲ್ಲಿ ಸಿದ್ಧಿ ಸಾಧಿಸಿದರು.  ಸಮಾರಂಭದಲ್ಲಿ ಹಾಜರು ಇದ್ದ ಪಂಡಿತ ಪರಮೇಶ್ವರ ಹೆಗಡೆ ಹೇಳುತ್ತಿದ್ದರು. ‘ಭೀಮಸೇನರು ಹೆಚ್ಚು ಮಾತನಾಡುತ್ತಿರಲಿಲ್ಲ. ಪಂಡಿತ ಅಮೀರಖಾನ್‌ರ ಹಾಡುಗಳನ್ನು ಸದಾ ತಮ್ಮ ಕೊಠಡಿಯಲ್ಲಿ ಹಾಕಿಕೊಂಡು ಕೇಳುತ್ತ ಇರುತ್ತಿದ್ದರು. ಮೌನ ಅವರ ಸಾಧನೆಗೆ ನೆರವಾಗುತ್ತಿತ್ತು.’ ಮೌನದಲ್ಲಿ ಸೃಷ್ಟಿಕ್ರಿಯೆ ಉತ್ಕಟವಾಗಿರುತ್ತದೆಯೇ? ಗಾಯನ ಸಮಾಜದಲ್ಲಿಯೂ ಭೀಮಸೇನರ ಹಾಡಿನ ಉದ್ದಕ್ಕೂ ಮೌನ ಆವರಿಸಿತ್ತು. ಅತ್ತ ಪ್ರದರ್ಶನಗೊಳ್ಳುತ್ತಿದ್ದ ವಿಡಿಯೊದ ಒಳಗಿನ ಸಭೆಗಳಲ್ಲಿಯೂ ದಿವ್ಯ ಮೌನವೇ ಇತ್ತು.ನಮ್ಮ ಸದ್ದು, ನಮ್ಮ ಪಿಸುಮಾತು ಗಾಯನಕ್ಕೆ ಭಂಗ ತಂದೀತು ಎಂಬ ತಿಳಿವಳಿಕೆ ಹೇಗೆ ಬರುತ್ತದೆ? ಗಂಧರ್ವ ಕಲೆಯ ಮುಂದೆ ಮಣಿಯುವ ಬಗೆಯೇ ಅದು? ನನ್ನ ಮನಸ್ಸಿನ ಒಳಗೇ ಅನಿಸುತ್ತಿತ್ತು : ‘ಭೀಮಸೇನರ ಗಾಯನದ ಮುಂದೆ ಯಾವ ರಾಷ್ಟ್ರಪತಿ, ಯಾವ ಪ್ರಧಾನಿ ಯಾವ ಲೆಕ್ಕ?’ ಎಂದು. ದಿವಾಕರರು ತಮ್ಮ ಪುಸ್ತಕ  (ಪಂಡಿತ್ ಭೀಮಸೇನ ಜೋಶಿ-ವಸಂತ ಪ್ರಕಾಶನ-ಬೆಲೆ ರೂ.30)ದಲ್ಲಿ ಅದೇ ಮಾತುಗಳನ್ನು ಬರೆದಿದ್ದರು :‘ಇವತ್ತು ನಾವು ಬದುಕುತ್ತಿರುವ ಪ್ರಪಂಚವನ್ನು, ನಮ್ಮ ಜೀವನ ವಿಧಾನವನ್ನು, ನಮ್ಮ ಆಶೋತ್ತರಗಳನ್ನು ರೂಪಿಸಿದವರು ಚರಿತ್ರೆಯ ಮಹಾರಾಜರಲ್ಲ. ಧರ್ಮ, ತತ್ವಶಾಸ್ತ್ರ, ವಿಜ್ಞಾನ, ಅರ್ಥಶಾಸ್ತ್ರ, ಉದ್ಯಮ ಪರಿಸರ, ರಾಜಕೀಯ, ಸಮಾಜ ಸುಧಾರಣೆ ಮೊದಲಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಕೆಲವೇ ಕೆಲವು ಮಂದಿ ಮಹಾನುಭಾವರು. ಇನ್ನು ಮುಂದಿನ ಸಮಾಜ ವೈಜ್ಞಾನಿಕ ಪ್ರಯೋಗಾಲಯಗಳಲ್ಲಿಯೋ, ಕಾಯ್ದೆ ರೂಪಿಸುವ ಶಾಸನಸಭೆಗಳಲ್ಲಿಯೋ ಹುಟ್ಟಿಕೊಳ್ಳಬಹುದೇ? ಇಲ್ಲ. ಅದು ಹುಟ್ಟುವುದು ವೈಚಾರಿಕ, ವೈಜ್ಞಾನಿಕ ಕ್ಷೇತ್ರಗಳಲ್ಲಿ ಶ್ರಮಿಸುತ್ತಿರುವ ಸೃಜನಶೀಲ ಮನಸ್ಸುಗಳಲ್ಲಿ. ಅಮೆರಿಕದ ದಾರ್ಶನಿಕ ಎಮರ್ಸನ್ ಹೇಳಿದ ಹಾಗೆ ‘ವಸ್ತುವನ್ನು ಬದಲಾಯಿಸುವವನು ಶ್ರೇಷ್ಠ ವ್ಯಕ್ತಿಯಲ್ಲ. ನನ್ನ ಮನಸ್ಸಿನ ಸ್ಥಿತಿಯನ್ನು ಬದಲಾಯಿಸುವವನೇ ಶ್ರೇಷ್ಠ ವ್ಯಕ್ತಿ.’ಭೀಮಸೇನ ಜೋಶಿಯವರಂಥವರು ನಮ್ಮ ಮನಸ್ಸನ್ನು ಬದಲಾಯಿಸುವವರು. ರೂಪಿಸುವವರು. ಅದರಲ್ಲಿನ ಕಲ್ಮಶವನ್ನು ಹೋಗಲಾಡಿಸುವವರು. ವಿನಯವನ್ನು ತುಂಬುವವರು. ಭಾವುಕತೆಯನ್ನು ಸೃಷ್ಟಿಸುವವರು. ಜೀವನ ಸಾರ್ಥಕ ಎಂದು ಅನಿಸುವಂತೆ ಮಾಡುವವರು. ಭೀಮಸೇನರಂಥವರು ಕನ್ನಡ ನಾಡಿಗೆ ಸೇರಿದವರೇ? ಪುಣೆಯಲ್ಲಿಯೇ ಬಹುಕಾಲ ಕಳೆದರು ಎಂದು ಮಹಾರಾಷ್ಟ್ರಕ್ಕೆ ಸೇರಿದವರೇ? ಮತ್ತೆ ಸಮಾರಂಭದಲ್ಲಿ ಹಾಜರು ಇದ್ದ ರಾಮಚಂದ್ರ ಗುಹಾ ಹೇಳುತ್ತಿದ್ದರು.‘ವಿದೇಶದ ಯಾವುದೋ ಊರಿನ ಯಾವುದೋ ರಸ್ತೆಯ ಯಾರೋ ಒಬ್ಬ ಟ್ರಕ್ ಚಾಲಕ ಭೀಮಸೇನರ ಹಾಡು ಕೇಳುತ್ತ ಇರಬೇಕಾದರೆ ಭೀಮಸೇನರನ್ನು ಒಂದು ಊರಿಗೆ ಒಂದು ನಾಡಿಗೆ ಹೇಗೆ ಕಟ್ಟಿ ಹಾಕುವುದು?’ ಕೊಲ್ಕತ್ತೆಯಲ್ಲಿ ‘ಎನ್ನ ಪಾಲಿಸೋ ಕರುಣಾಕರ’, ಪ್ಯಾರೀಸ್‌ನಲ್ಲಿ ‘ಪಿಯಾ ಕೆ ಮಿಲನ್ ಕಿ ಆಸ್’, ನ್ಯೂಯಾರ್ಕಿನಲ್ಲಿ ‘ಜೋ ಬಜೆ ಹರಿ ಕೊ ಸದಾ’ ಕೇಳಿ ಶ್ರೋತೃ ತಲೆದೂಗುತ್ತಾನೆ ಎಂದರೆ ಏನು ಅರ್ಥ?ಆಫ್ಘಾನಿಸ್ತಾನದಲ್ಲಿ ಭೀಮಸೇನರು ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಜಪಮಣಿ ಹಿಡಿದು ಸಂಗೀತ ಕೇಳುತ್ತಿದ್ದ ಒಬ್ಬ ಮಧ್ಯವಯಸ್ಕ ಶ್ರೋತೃವಿನ ಕಣ್ಣಲ್ಲಿ ದಳ ದಳ ನೀರು ಇಳಿಯುವುದು ಏಕೆ? ಸಂಗೀತಕ್ಕೆ ಭಾಷೆ, ದೇಶದ ಗೋಡೆಯನ್ನು ಬೀಳಿಸುವ ಗುಣ ಇದೆ ಎಂದೇ ಅರ್ಥ ಅಲ್ಲವೇ?

11ನೇ ವರ್ಷಕ್ಕೇ ಮನೆ ಬಿಟ್ಟು ನಾದದೇವತೆಯ ಬೆನ್ನಟ್ಟಿ, ಗುರು ಸವಾಯಿ ಗಂಧರ್ವರ ಗುಲಾಮನಾಗಿ ಅವರ ಪ್ರೀತಿ, ತಿರಸ್ಕಾರ ಮತ್ತೆ ಪ್ರೀತಿ ಗಳಿಸಿ, ಅವಳನ್ನು ಒಲಿಸಿಕೊಂಡ ಭೀಮಸೇನ ನಮ್ಮವರು ನಿಜ. ಆದರೆ, ಅವರು ಇಡೀ ಜಗತ್ತಿಗೇ ಸೇರಿದವರು ಎಂಬುದಕ್ಕೆ ಈ ನಿದರ್ಶನಗಳೇ ಸಾಕ್ಷಿ.ಸಂಗೀತ ಸಾಧನೆಗಾಗಿ ನಿತ್ಯ ‘ಸತ್ತು ಸತ್ತು ಹುಟ್ಟಿದ’ ಇಂಥವರು ಸತ್ತ ಮೇಲೂ ನೂರ್ಕಾಲ ಬದುಕುವವರು. ಬದುಕಿದವರ ಜೀವನದಲ್ಲಿ ಸಾರ್ಥಕತೆ ತುಂಬುವವರು. ಭೀಮಸೇನ ಜೋಶಿಯವರ ಹಾಡು ಕೇಳುತ್ತಿದ್ದಾಗ ನನಗೆ ಶ್ರವಣಬೆಳಗೊಳದ ಗೊಮ್ಮಟ ನೆನಪಾದ. ಪ್ರತಿ ಸಾರಿ ಗೊಮ್ಮಟನ ಮುಂದೆ ನಿಂತಾಗಲೆಲ್ಲ ನನಗೆ ಅನಿಸಿದೆ ಇದು ಮನುಷ್ಯ ಸೃಷ್ಟಿಯೇ, ದೈವ ಸೃಷ್ಟಿಯೇ ಎಂದು. ಭೀಮಸೇನರ ಕಂಠ ಮಾಧುರ್ಯವೂ ಅದೇ ಪ್ರಶ್ನೆಯನ್ನು ಹುಟ್ಟಿಸುತ್ತದೆ.ಅದು ಮನುಷ್ಯನದೇ, ದೇವರದೇ? ಭೀಮಸೇನ ಗಾಯನ ಕೇಳಿ ಮನೆಗೆ ಓಡುತ್ತ ಓಡುತ್ತ ಬಂದೆ. ಬಂದವನೇ ಕಂಪ್ಯೂಟರ್ ಮುಂದೆ ಕುಳಿತು ಈ ಲೇಖನ ಬರೆದೆ. ನನಗೆ ಒಂದು ಸಂಗೀತ ಹೀಗೆ ಕಾಡಿದ್ದು ಇದೇ ಮೊದಲು. ಏಕೋ ಅಸ್ವಸ್ಥನಾದೆ ಅನಿಸಿತು, ಅಲ್ಲಾಡಿ ಹೋದೆ ಅನಿಸಿತು. ಭಾವುಕನಾದೆ ಅನಿಸಿತು...ಹೀಗೆ ಕಾಡಿದ ಕ್ಷಣವನ್ನು ಸೃಷ್ಟಿಸಿದ ದಿವಾಕರ್ ಮತ್ತು ಗೆಳೆಯರಿಗೆ ಸಂಗೀತದ ಬಗ್ಗೆ ಏನೇನೂ ಗೊತ್ತಿಲ್ಲದ ನನ್ನಂಥವರ ನಮಸ್ಕಾರಗಳು; ಕೃತಜ್ಞತೆಗಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.