ಶುಕ್ರವಾರ, ಮಾರ್ಚ್ 5, 2021
30 °C

ಮಧ್ಯಪ್ರಾಚ್ಯದಲ್ಲಿ ಪತ್ರಕರ್ತನಾಗಿರುವುದೆಂದರೆ...

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಮಧ್ಯಪ್ರಾಚ್ಯದಲ್ಲಿ ಪತ್ರಕರ್ತನಾಗಿರುವುದೆಂದರೆ...

ಅವರ  ಹೆಸರು ಸುಲೇಮಾನ್ ಖಾಲಿದಿ. ವಯಸ್ಸು 45ರ ಆಸುಪಾಸು. ಕಳೆದ 20 ವರ್ಷಗಳಿಂದ ಅಂತರರಾಷ್ಟ್ರೀಯ ರಾಯ್ಟರ್ಸ್ ಸುದ್ದಿ ಸಂಸ್ಥೆಯ ವರದಿಗಾರರಾಗಿ ಜೋರ್ಡಾನ್ ದೇಶದ ರಾಜಧಾನಿ ಅಮ್ಮಾನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಮಾಡಿದ ತಪ್ಪು ಒಂದೇ. ಜೋರ್ಡಾನ್ ಉತ್ತರದಲ್ಲಿನ ಸಿರಿಯಾ ಸಂಘರ್ಷ ವರದಿ ಮಾಡಲು ಗಡಿ ದಾಟಿದರು.ಸಿರಿಯಾದ ದಕ್ಷಿಣದಲ್ಲಿನ ದರಾ ನಗರದಲ್ಲಿ ಪ್ರಭುತ್ವದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯನ್ನು ವರದಿ ಮಾಡಿದರು. ಸಿರಿಯಾದ ಗುಪ್ತದಳದ ಅಧಿಕಾರಿಗಳು ಸುಲೇಮಾನ್ ಅವರನ್ನು ಬಂಧಿಸಿ ಒಳಗೆ ಹಾಕಿದರು. ನಾಲ್ಕು ದಿನ ಅವರಿಗೆ ಅನ್ಯ ಜಗತ್ತಿನ ಸಂಪರ್ಕ ಇರಲಿಲ್ಲ. ಆ ನಾಲ್ಕು ದಿನ ಅವರು ಅನುಭವಿಸಿದ್ದು ಜೀವಂತ ನರಕ.ಅಧಿಕಾರಿಗಳು ಸುಲೇಮಾನ್ ಅವರನ್ನು ರುದ್ರ ಭೀಕರವಾದ ಒಂದು ಕೊಠಡಿಯಲ್ಲಿ ತಳ್ಳಿದರು. ಎದುರಿಗೆ ಒಬ್ಬ ಯುವಕ ತಲೆ ಕೆಳಗಾಗಿ ನೇತು ಬಿದ್ದಿದ್ದ. ಅವನ ಬಾಯಿಯಿಂದ ಬಿಳಿ ನೊರೆ ಸುರಿಯುತ್ತಿತ್ತು. ಮೈಮೇಲೆಲ್ಲ ಬಾಸುಂಡೆ ಎದ್ದಿದ್ದುವು.ಗಾಯದಿಂದ, ನೋವಿನಿಂದ ಆತ ಮನುಷ್ಯನಂತೆ ಅಲ್ಲ, ಪ್ರಾಣಿಯಂತೆ ಗೀಳಿಡುತ್ತಿದ್ದ.ಸುಲೇಮಾನ್ ತಮ್ಮ ಜೀವನದಲ್ಲಿ ಎಂದೂ ಕಂಡಿರದ  ಇಂಥ ದೃಶ್ಯದಿಂದ ಚೇತರಿಸಿಕೊಳ್ಳುವುದಕ್ಕಿಂತ ಮೊದಲೇ ಜತೆಗಿದ್ದ ಜೇಲರ್, `ಅಲ್ಲೇನು ನೋಡುತ್ತಿ. ಬೋರಲು ಮಲಗು~ ಎಂದ. ಇವರು ಹೊಟ್ಟೆ ಕೆಳಗೆ ಮಾಡಿ ಮಲಗುತ್ತಿದ್ದಂತೆಯೇ ಇವರ ರಟ್ಟೆಗಳ ಮೇಲೆ ಕಾರಿನ ಟೈರುಗಳು ಚಲಿಸಿ ಹೋದುವು.`ಅಮೆರಿಕಾದ ಏಜೆಂಟ್ ನೀನು. ಇಲ್ಲೇನು ಮಾಡುತ್ತಿದ್ದಿ ಮಗನೇ. ಗಲಾಟೆಯನ್ನು ವರದಿ ಮಾಡಲು ಬಂದಿದ್ದೀಯಾ? ನೀನೊಬ್ಬ ನಾಯಿ. ನಮ್ಮ ದೇಶಕ್ಕೆ ಅವಮಾನ ಮಾಡುತ್ತಿದ್ದೀಯಾ...~ ಅತ್ತ ದೈಹಿಕ ಹಿಂಸೆ. ಮೇಲೆ ಬೈಗುಳದ ಸುರಿಮಳೆ...ಕಳೆದ ಒಂದು ವಾರ ನಾನು ಜೋರ್ಡಾನ್ ಪ್ರವಾಸೋದ್ಯಮ ಮಂಡಳಿಯ ಆಮಂತ್ರಣದ ಮೇರೆ ಆ ದೇಶಕ್ಕೆ ಭೇಟಿ ನೀಡಿದ್ದೆ. ಕಳೆದ ಭಾನುವಾರದ ಪತ್ರಿಕೆಯಲ್ಲಿ ಸುಲೇಮಾನ್ ನಾಲ್ಕು ದಿನ ತಾವು ಅನುಭವಿಸಿದ್ದನ್ನು `ದಿ ಜೋರ್ಡಾನ್ ಟೈಮ್ಸ~ ಪತ್ರಿಕೆಯಲ್ಲಿ ಸವಿಸ್ತಾರವಾಗಿ ಬರೆದಿದ್ದರು.ಇಡೀ ಮಧ್ಯಪ್ರಾಚ್ಯದಲ್ಲಿ ಈಗ ತಳಮಳವಿದೆ. ಲಿಬಿಯಾದಲ್ಲಿ ಗಡಾಫಿ ಆಡಳಿತ ಅಂತ್ಯಕ್ಕೆ ಬಂದಿದೆ. ಈಜಿಪ್ಟ್‌ನಲ್ಲಿ ಕ್ರಾಂತಿಯೇ ಆಗಿದೆ. ಟ್ಯುನೀಷಿಯಾ ಪತನವಾಗಿದೆ.ಸಿರಿಯಾದಲ್ಲಿ ಪ್ರಭುತ್ವದ ವಿರುದ್ಧ ಹೋರಾಟಕ್ಕೆ ಬಲ ಬರುತ್ತಿದೆ.ಇರಾಕ್ ಧ್ವಂಸವಾಗಿದೆ. ಇಸ್ರೇಲ್ ಮತ್ತು ಪ್ಯಾಲೆಸ್ಟೈನ್‌ನಲ್ಲಿ ಶಾಂತಿ ಮರೀಚಿಕೆಯಾಗಿದೆ. ಇದ್ದುದರಲ್ಲಿ ಜೋರ್ಡಾನ್ ಒಂದೇ ಉತ್ತಮ ದೇಶ.ಸಿರಿಯಾದಲ್ಲಿ ಅಧ್ಯಕ್ಷ ಬಷಾರ್ ಅಲ್ ಅಸ್ಸಾದ್  ಅವರ ಕೈಯಲ್ಲಿ ಎಲ್ಲ ಅಧಿಕಾರ ಕೇಂದ್ರೀಕೃತವಾಗಿದೆ. ಅವರು ಬಿಟ್ಟರೆ ಅವರ ಸೋದರ ಮತ್ತು ಸಹಾಯಕರ ದಬ್ಬಾಳಿಕೆ. ವಿಚಿತ್ರ ಎಂದರೆ ಅಸ್ಸಾದ್ ಆ ದೇಶದ ಅಲ್ಪಸಂಖ್ಯಾತ ಅಲವೈಟ್ ಸಮುದಾಯಕ್ಕೆ ಸೇರಿದವರು.ಕಳೆದ 50 ವರ್ಷಗಳಿಂದ ಆ ದೇಶದಲ್ಲಿ ತುರ್ತುಸ್ಥಿತಿ ಇತ್ತು. ಈಚೆಗಷ್ಟೇ ಅದನ್ನು ಸಡಿಲಿಸಲಾಗಿದೆ. ಆದರೆ, ದಬ್ಬಾಳಿಕೆ ನಿಂತಿಲ್ಲ. ಒಂದು ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಅಥವಾ ಅವರನ್ನು ಸಿರಿಯಾ ಸೈನಿಕರು ಕೊಂದು ಹಾಕಿದ್ದಾರೆ.

 

10,000 ಜನರನ್ನು ಜೈಲಿಗೆ ತಳ್ಳಲಾಗಿದೆ. ಒಂದು ತಿಂಗಳಿಂದ ನಾಪತ್ತೆಯಾಗಿದ್ದ 13 ವರ್ಷದ ಬಾಲಕನ ಮೃತ ದೇಹವನ್ನು ಕಳೆದ ವಾರವಷ್ಟೇ ಆತನ ತಂದೆತಾಯಿಗೆ ಒಪ್ಪಿಸಲಾಯಿತು. ಏಪ್ರಿಲ್ 29ರಂದು ನಡೆದ ಪ್ರತಿಭಟನೆಯಲ್ಲಿ ಆ ಹುಡುಗ ಪಾಲುಗೊಂಡಿದ್ದ. ಅವನ ದೇಹದ ಹಲವು ಕಡೆ ಗುಂಡೇಟಿನ ಗುರುತುಗಳು ಇದ್ದುವು. ಆ ಹುಡುಗನನ್ನು ಒಂದೇ ಗುಂಡಿನಿಂದ ಸಾಯಿಸಬಹುದಿದ್ದ ಪ್ರಭುತ್ವಕ್ಕೆ ಅಷ್ಟರಿಂದಲೇ ಸಮಾಧಾನ ಆದಂತೆ ಕಂಡಿರಲಿಲ್ಲ. ಸುಲೇಮಾನ್ ಖಾಲಿದಿ ಅವರಿಗೆ ವರದಿ ಮಾಡಲು ಇದಕ್ಕಿಂತ ಹೆಚ್ಚಿನ ಸಾಮಗ್ರಿ ಇನ್ನೇನು ಬೇಕಿತ್ತು? ಅವರು ಗಡಿ ದಾಟಿದರು.ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿ ಸುಲೇಮಾನ್ ಯಾರನ್ನೋ ಭೇಟಿ ಮಾಡಲು ಹೊರಟಿದ್ದರು. ಆ ವೇಳೆಗಾಗಲೇ ಅವರು ಆ ದೇಶ ಪ್ರವೇಶಿಸಿ ಹತ್ತು ದಿನಗಳಾಗಿತ್ತು. ನಿತ್ಯ ವರದಿ ಕಳುಹಿಸಿದ್ದರು. ಇವರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಮಫ್ತಿಯಲ್ಲಿ ಇದ್ದ ಇಬ್ಬರು ಬಂದು ಇವರ ಎರಡೂ ತೋಳುಗಳನ್ನು ಹಿಡಿದುಕೊಂಡರು. ಒಂದು ಕಾರಿನಲ್ಲಿ ಇವರನ್ನು ತಳ್ಳಿ ಕರೆದುಕೊಂಡು ಹೋದರು.ನರಕ ಸದೃಶವಾದ ಕತ್ತಲೆಕೋಣೆಯಲ್ಲಿ ಕೂಡಿ ಹಾಕಿದರು. `ಸಿರಿಯಾವನ್ನು ಮತ್ತೊಂದು ಲಿಬಿಯಾ ಮಾಡಲು ಹೊರಟಿದ್ದೀಯಾ ಸೂ..ಮಗನೆ. ನಿಜವನ್ನು ಬೊಗಳು.  ನೀನು ಇಲ್ಲಿ ಏಕೆ  ಬಂದಿದ್ದಿ?~ ಮತ್ತೆ ಅದೇ ಹಿಂಸೆಯ ಮಾತು.ಸುಲೇಮಾನ್ ಒಬ್ಬ ಮುಸ್ಲಿಂ. ಆದರೆ, ಸಿರಿಯಾ ದೇಶಕ್ಕೆ ಆತ ಅಮೆರಿಕಾದ ಪ್ರತಿನಿಧಿಯಂತೆ ಕಾಣುತ್ತಿದ್ದ. `ಲಿಬಿಯಾದ ಅಧ್ಯಕ್ಷನನ್ನು ಓಡಿಸಲು ಅಮೆರಿಕಾ ಪ್ರಯತ್ನ ಮಾಡುತ್ತಿರುವ ಹಾಗೆಯೇ ಸಿರಿಯಾ ದೇಶದ ಅಧ್ಯಕ್ಷನನ್ನೂ ಓಡಿಸಲು ಪ್ರಯತ್ನ ಮಾಡುತ್ತಿದೆ. ಸುಲೇಮಾನ್ ಅದರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾನೆ~ ಎಂದೇ ತನಿಖಾಧಿಕಾರಿಗಳ ಭಾವನೆ.ಸುಲೇಮಾನ್ ಅವರನ್ನು ಎಂಟು ಗಂಟೆಗಳ ಕಾಲ ವಿಚಾರಣೆ ಮಾಡಿದರು. ಬಹುತೇಕ ಅವಧಿಗೆ ಅವರ ಕಣ್ಣು ಕಟ್ಟಿ ಹಾಕಿದ್ದರು. ಕಟ್ಟಿ ಹಾಕಿದ ಕಣ್ಣುಗಳ ಹಿಂದೆ ಸುಲೇಮಾನ್ ಅವರಿಗೆ ತಮ್ಮ ಪತ್ನಿ, ಮಹಾ ಮತ್ತು ಖಾಲೆದ್ ಎಂಬ ಅವಳಿ ಮಕ್ಕಳ ಚಿತ್ರ ಸುಳಿದು ಹೋಗುತ್ತಿತ್ತು. ಅವರಿಗೆ ಸುಲೇಮಾನ್ ಎಲ್ಲಿ ಇದ್ದಾರೆ ಎಂಬ ಸುಳಿವೇ ಇರಲಿಲ್ಲ.

ಇದ್ದಕಿದ್ದಂತೆ ಸಂಪರ್ಕ ಕಡಿದು ಹೋಗಿತ್ತು.

 

ರಾಯ್ಟರ್ಸ್ ಸಂಸ್ಥೆಗೆ ಮಾತ್ರ, `ಸುಲೇಮಾನ್ ಸೂಕ್ತ ದಾಖಲೆ ಇಲ್ಲದೆ ಸಿರಿಯಾ ಪ್ರವೇಶ ಮಾಡಿದ್ದಾರೆ~ ಎಂಬ ಮಾಹಿತಿ ಹೋಗಿತ್ತು. ಸುಲೇಮಾನ್ ಹಿಂಸೆಯನ್ನು ತಡೆದುಕೊಳ್ಳಲು ತಮ್ಮ ಬಾಲ್ಯದ ನೆನಪುಗಳ ಕಡೆಗೆ ಜಾರಿ ಹೋದರು. ತಮ್ಮ ಸ್ಥೈರ್ಯವನ್ನು ಉಳಿಸಿಕೊಳ್ಳಲು ಅವರಿಗೆ ಅದು ಒಂದೇ ದಾರಿಯಾಗಿತ್ತು. ಆದರೆ, ವಿಚಾರಣೆ ಮಾಡುವವರಿಗೆ ಸುಲೇಮಾನ್ ಕೊಟ್ಟ ಯಾವ ಉತ್ತರವೂ ಸಮಾಧಾನ ತಂದಿರಲಿಲ್ಲ.`ಮಗನೇ, ನೀನು ಯಾರು ಎಂಬುದೇ ನಿನಗೆ ಮರೆತು ಹೋಗುವಂತೆ ಮಾಡುತ್ತೇವೆ. ನಿಜ ಹೇಳು. ಇಲ್ಲಿಗೆ ಏಕೆ ಬಂದೆ. ತಪ್ಪು ಒಪ್ಪಿಕೊ~. ಸುಲೇಮಾನ್ ಮತ್ತೆ ಮೌನ. ಸಿಟ್ಟಿಗೆದ್ದ ಅಧಿಕಾರಿಯಿಂದ ಸುಲೇಮಾನ್ ಕೆನ್ನೆಗೆ ರಪ್ ಎಂದು ಏಟು. ಅದು ಎಷ್ಟನೇ ಸಾರಿ ಬಿದ್ದ  ಏಟೋ? ಸುಲೇಮಾನ್‌ಗೆ ಮರೆತೇ ಹೋಗಿತ್ತು.ಇವರು ಇದ್ದ ಕೊಠಡಿಯಲ್ಲಿಯೇ ಇನ್ನೊಬ್ಬ ವ್ಯಕ್ತಿ ಇದ್ದರು. ಅವರ ಮುಖ ಮುಚ್ಚಿದ್ದರು. ಆತ ಹೇಳುತ್ತಿದ್ದ. `ನಾನು ಏನೂ ತಪ್ಪು ಮಾಡಿಲ್ಲ. ನಾನು ವಿದ್ರೋಹಿ ಅಲ್ಲ. ಚಳವಳಿಗಾರನೂ ಅಲ್ಲ. ನಾನು ಒಬ್ಬ ವ್ಯಾಪಾರಿಯಷ್ಟೇ.~ ಅವರ ಉತ್ತರವೂ ಅಧಿಕಾರಿಗಳಿಗೆ ಮನವರಿಕೆ ಆಗಲಿಲ್ಲ.ಮುಖ ಮುಚ್ಚಿಕೊಂಡಿದ್ದ ಒಬ್ಬ ಧಡಿಯ ಗೋಡೆಯ ಮೇಲಿನ ಎರಡು ವೈರ್‌ಗಳನ್ನು ತೆಗೆದುಕೊಂಡ. ಅದರಲ್ಲಿ ವಿದ್ಯುತ್ ಹರಿಯುತ್ತಿತ್ತು. ಆ ಎರಡೂ ವೈರ್‌ಗಳನ್ನು ತೆಗೆದುಕೊಂಡು ಆ `ವರ್ತಕ~ನ ತಲೆಗೆ ಇಟ್ಟ. ಕ್ರೌರ‌್ಯಕ್ಕೆ ಕೊನೆ ಇರುತ್ತದೆಯೇ? ಸುಲೇಮಾನ್ ಅವರನ್ನು ಮಣಿಸಲು ಅವರು ಇಂಥ ಕ್ರೌರ‌್ಯ ಬಳಸುತ್ತಿದ್ದರು.ಗಂಟೆಗಟ್ಟಲೇ ಕೈಗಳನ್ನು ಮೇಲೆ ಎತ್ತಿಕೊಂಡು ಗೋಡೆಗೆ ಬೆನ್ನು ಹಚ್ಚಿ ನಿಲ್ಲುವ ಶಿಕ್ಷೆಯನ್ನು ಸಲೇಮಾನ್ ಅನುಭವಿಸಿದರು. ಹತ್ತಾರು ಜನ ಅಧಿಕಾರಿಗಳು ಅವರ ಎದುರು ನಿಂತು. `ನೀನೊಬ್ಬ ನಾಯಿ~ ಎಂದು ಬೈಗುಳಗಳ ಸುರಿಮಳೆ ಸುರಿಸುತ್ತಿದ್ದರು. ಅರಬರಿಗೆ `ನಾಯಿ~ ಅತ್ಯಂತ ಅವಮಾನಕರ ಬೈಗುಳ.ಗಾಳಿ ಬೆಳಕು ಇಲ್ಲದ ಪುಟ್ಟ ನಿಯಾನ್ ದೀಪದ ಮಿಣುಕು ಬೆಳಕಿನ ಒಂದು ಕೊಠಡಿಯ ಚಾಪೆ ಮೇಲೆ ಸುಲೇಮಾನ್ ದಿನ ಕಳೆದರು. ನಾಯಿಗೆ ಹಾಕಿದಂತೆ ಒಂದು ತುಣುಕು ಬ್ರೆಡ್, ಒಂದು ಟೊಮೆಟೊ ಅಥವಾ ಆಲೂಗೆಡ್ಡೆಯನ್ನು ಕೊಠಡಿಯಲ್ಲಿ ಬಿಸಾಕುತ್ತಿದ್ದರು.`ಬೇಕಾದರೆ ತಿನ್ನು ಇಲ್ಲವಾದರೆ ಸಾಯಿ~  ಎನ್ನುವಂತೆ.ಪಕ್ಕದ ಕೊಠಡಿಗಳಲ್ಲಿ ಅದೇ ಹಿಂಸ್ರ ವಿಚಾರಣೆ. ಆಕ್ರಂದನ. ಕೂಗಾಟ, ಅರಚಾಟ. ಶೌಚಕ್ಕೆ ಹೋಗಬೇಕು ಎಂದರೆ ಗೋಡೆಯೋ, ಬಾಗಿಲೋ ತಿಳಿಯದೇ ಸುಲೇಮಾನ್ ಅದನ್ನು ಜೋರಾಗಿ ತಟ್ಟುತ್ತಿದ್ದರು. ಜೇಲರ್ ಬರುತ್ತಿದ್ದ. `ಏನು~ ಎಂದು ಕೇಳುತ್ತಿದ್ದ. ಇವರು ಶೌಚಕ್ಕೆ ಹೋಗಬೇಕು ಎಂದರೆ ಬಿಡುತ್ತಿದ್ದ. ಆದರೆ, ಅದಕ್ಕೂ ಮುಂಚೆ ಒಂದು ಗಂಟೆ ಕಾಯಿಸುತ್ತಿದ್ದ. `ನಿಸರ್ಗ ಕರೆ~ಯ ಒತ್ತಡವನ್ನು ಅನುಭವಿಸಲಿ ಎನ್ನುವಂತೆ.ಕಷ್ಟಗಳು, ಅವಮಾನಗಳು ಹೆಚ್ಚಿದಂತೆ ಸುಲೇಮಾನ್‌ಗೆ ಸಿರಿಯಾದ ಕಠೋರ ವಿದ್ಯಮಾನಗಳು ಮನಃಪಟಲದ ಮುಂದೆ ಸುಳಿಯತೊಡಗಿದುವು. ದರಾ ನಗರದ ರಸ್ತೆ ರಸ್ತೆಗಳಲ್ಲಿ ತೆರೆದ ಎದೆಗಳ ಯುವಕರು ಪ್ರಭುತ್ವದ ವಿರುದ್ಧ ಘೊಷಣೆ ಕೂಗುತ್ತ ತಮಗೆ  ಸ್ವಾತಂತ್ರ್ಯ ಬೇಕು ಎಂದು ಕೂಗುತ್ತಿದ್ದರು. ಅವರನ್ನು ನೋಡಲು ಹೆಂಗಸರು, ಮಕ್ಕಳು, ಮುದುಕರು ಬಂದು ರಸ್ತೆಯ ಅಂಚಿನಲ್ಲಿ ನಿಲ್ಲುತ್ತಿದ್ದರು.ಪ್ರತಿಭಟನಾಕಾರರನ್ನು ಭದ್ರತಾ  ಪಡೆಯವರು ನಿರ್ದಯವಾಗಿ ಥಳಿಸುತ್ತಿದ್ದರು.ಪ್ರತಿಭಟನೆ ತೀವ್ರವಾದರೆ ಗುಂಡಿಟ್ಟು ಕೊಲ್ಲುತ್ತಿದ್ದರು. ಮಾಳಿಗೆಗಳ ಮೇಲೆ ಮರೆಯಲ್ಲಿ ನಿಂತು ಗುಂಡು ಹಾರಿಸುವವರೂ ಇದ್ದರು. ಗುಂಡೇಟು ತಪ್ಪಿಸಿಕೊಳ್ಳಲು ಯುವಕರು ತಮ್ಮ ಚಪ್ಪಲಿ, ಷೂಗಳನ್ನು ರಸ್ತೆಯಲ್ಲಿಯೇ ಬಿಟ್ಟು ಜೀವ ಭಯದಿಂದ ಪರಾರಿಯಾಗುತ್ತಿದ್ದರು. ದಶಕಗಳ ದಬ್ಬಾಳಿಕೆ ನಿಲ್ಲಿಸುವುದು, ನಿವಾರಿಸುವುದು ತಮಾಷೆಯಲ್ಲ. ಹಲವರ ಬಲಿದಾನವನ್ನು ಅದು ಕೇಳುತ್ತದೆ.ಬಂಧನವನ್ನು ಬಯಸುತ್ತದೆ. ಸುಲೇಮಾನ್ ಒಬ್ಬ ಹೋರಾಟಗಾರರೇನೂ ಅಲ್ಲ. ಅವರು ಒಬ್ಬ ವರದಿಗಾರ. ಆದರೆ, ಸರ್ವಾಧಿಕಾರ ಪ್ರತಿಭಟನೆಯ ಹಾಗೆ ಸ್ವತಂತ್ರ ವರದಿಗಳನ್ನೂ ಸಹಿಸುವುದಿಲ್ಲ. ಪ್ರಭುತ್ವಕ್ಕೆ ಹಿತವಾದುದನ್ನೇ ಬರೆಯಬೇಕು ಎಂದು ಇಚ್ಛಿಸುತ್ತದೆ. ಬಹುಶಃ ಹೀಗೆ ಬಂಧಿತರಾದ ಮೊದಲ ವರದಿಗಾರನೂ ಸುಲೇಮಾನ್ ಆಗಿರಲಿಕ್ಕಿಲ್ಲ. ಸುಲೇಮಾನ್ ಇದ್ದ ಕೊಠಡಿಯ ಗೋಡೆಯ ಮೇಲೆ ಯಾರೋ ತಮ್ಮ ಉಗುರಿನಿಂದ ಬರೆದಿದ್ದರು : `ದೇವರು ಸದಾ ದಬ್ಬಾಳಿಕೆಯ ವಿರುದ್ಧ~ ಎಂದು. ಗೋಡೆಯ ಮೇಲಿನ ಬರವಣಿಗೆ ಸರ್ವಾಧಿಕಾರಿಗಳಿಗೆ ಅರ್ಥವಾಗುವುದಿಲ್ಲ.ನಾಲ್ಕು ದಿನಗಳನ್ನು ಜೈಲಿನಲ್ಲಿ ಕಳೆದ ಸುಲೇಮಾನ್ ಅವರನ್ನು ಡಮಾಸ್ಕಸ್‌ನ ಗುಪ್ತದಳದ ದೊಡ್ಡ ಕಟ್ಟಡಕ್ಕೆ ಕರೆದುಕೊಂಡು ಹೋದರು. `ಅವನ ಇಡೀ ಮೈಯನ್ನು ಶೋಧಿಸಿ~  ಎಂದು ಒಬ್ಬ ಅಧಿಕಾರಿ ಆದೇಶ ಮಾಡಿದ. ತಕ್ಷಣ ಇಬ್ಬರು ಸುಲೇಮಾನ್ ಅವರನ್ನು ತಳಮಹಡಿಗೆ ಹೆಚ್ಚೂ ಕಡಿಮೆ ಎಳೆದುಕೊಂಡು ಹೋದರು. ಬಂಧನದ ಉಳಿದ ಅವಧಿಯನ್ನು ಹೇಗೆ ಕಳೆಯಬೇಕು ಎಂದು ಸುಲೇಮಾನ್ ಯೋಚಿಸುತ್ತಿದ್ದರು.ಇದ್ದುದರಲ್ಲಿಯೇ `ನಾಗರಿಕನಂತೆ~ ಕಾಣುತ್ತಿದ್ದ  ಒಬ್ಬ ವ್ಯಕ್ತಿ `ನಿನ್ನನ್ನು ವಾಪಸು ಕಳುಹಿಸುತ್ತಿದ್ದೇವೆ~ ಎಂದ. ಸುಲೇಮಾನ್ ಅವರಿಗೆ ನಂಬಿಕೆಯೇ ಆಗಲಿಲ್ಲ. ಏಕೆಂದರೆ ಹಾಗೆ ಹೇಳಲೂ ಆತ ಎರಡು ಗಂಟೆ  ತೆಗೆದುಕೊಂಡಿದ್ದ. ಅಲ್ಲಿಯವರೆಗೆ ಕೆಟ್ಟ ಕೊಠಡಿಯಲ್ಲಿ ಅವರನ್ನು ಕೂಡಿ ಹಾಕಿದ್ದರು.

 

ಕೊನೆಗೆ ಸಿರಿಯಾ ದೇಶದ ಭದ್ರತಾ ಪಡೆಯ ನಿರ್ದೇಶಕ ಮೇಜರ್ ಜನರಲ್ ಅಲಿ ಮಮ್ಲುಕ್ ಅವರೇ ಸುಲೇಮಾನ್ ಅವರನ್ನು ಭೇಟಿ ಮಾಡಿ  ಹೇಳಿದರು : `ನಿಮ್ಮ ವರದಿ ಸಮರ್ಪಕವಾಗಿರಲಿಲ್ಲ. ಅದರಿಂದ ದೇಶದ ವರ್ಚಸ್ಸಿಗೆ ಧಕ್ಕೆಯಾಗಿದೆ (!) ಆದರೂ ನಿಮ್ಮನ್ನು ಬಿಡುಗಡೆ ಮಾಡಲಾಗುತ್ತಿದೆ.~ಜೋರ್ಡಾನ್‌ಗೆ ಬಂದ ಮೇಲೆ ಸುಲೇಮಾನ್ ಅವರಿಗೆ ಗೊತ್ತಾಯಿತು ತಮ್ಮ  ಬಿಡುಗಡೆಗೆ ತಮ್ಮ ದೇಶದ ದೊರೆ ಪ್ರಭಾವ ಬೀರಿದ್ದರು ಎಂದು. ಈಗ ಸಿರಿಯಾ ದೇಶದಲ್ಲಿ ವಿದೇಶದ ಯಾವ  ಪತ್ರಕರ್ತನಿಗೂ ಪ್ರವೇಶವಿಲ್ಲ. ಸುಲೇಮಾನ್ ತಮ್ಮ ಅನುಭವವನ್ನು ಓದುಗರ ಜತೆಗೆ ಹಂಚಿಕೊಂಡಿದ್ದಾರೆ. ಆ ದೇಶದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಕೂಗನ್ನು ಯಾರ ಜತೆಗೆ ಹಂಚಿಕೊಳ್ಳಬೇಕು?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.