ಮಂಗಳವಾರ, ಮಾರ್ಚ್ 31, 2020
19 °C

ಮಧ್ಯಮವರ್ಗ: ಸುಲಭದ ಬಲಿಪಶು

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ದ್ವಿತೀಯ ಮಹಾಯುದ್ಧಕ್ಕೆ ಸಂಬಂಧಿಸಿದಂತೆ 1942ರಲ್ಲಿ ಬಿಡುಗಡೆಯಾಗಿದ್ದ ಅಮೆರಿಕದ ಚಿತ್ರ ‘ಕ್ಯಾಸಬ್ಲ್ಯಾಂಕಾ’ದಲ್ಲಿ ನಾಜಿಗಳ ಕೈಗೆ ಸಿಗದೆ ತಲೆತಪ್ಪಿಸಿಕೊಂಡಿದ್ದ ತನ್ನ ಪರಿಚಿತ ದಂಪತಿ ರಕ್ಷಿಸಲು ಕ್ಲಬ್‌ ಮಾಲೀಕ ರಿಕ್‌ ನಾಜಿ ಅಧಿಕಾರಿಯೊಬ್ಬನನ್ನು ಹತ್ಯೆ ಮಾಡಿರುತ್ತಾನೆ. ಭ್ರಷ್ಟ ಕ್ಯಾಪ್ಟನ್‌ ರೆನಾಲ್ಟ್‌, ರಿಕ್‌ನನ್ನು ರಕ್ಷಿಸಲು ಮುಂದಾಗಿ, ಈ ಕೊಲೆಯ ಆರೋಪವನ್ನು ಇತರ ಅಪರಾಧಿಗಳ ತಲೆಗೆ ಕಟ್ಟಲು ಮುಂದಾಗುತ್ತಾನೆ. ಆಗ ಆತ ತನ್ನ ಸಹಚರರನ್ನು ಉದ್ದೇಶಿಸಿ ಹೇಳುವ, ‘ಮಾಮೂಲಿನ ಶಂಕಿತರನ್ನು ಎಳೆದು ತನ್ನಿ’ ಎನ್ನುವ ಮಾತು ಕುಖ್ಯಾತಿ ಪಡೆದಿದೆ. ಯಾರೋ ಮಾಡುವ ತಪ್ಪಿಗೆ ಇನ್ನಾರನ್ನೋ ಬಲಿಕೊಡುವ ಇಂತಹ ಪ್ರವೃತ್ತಿ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿಯೂ ಪ್ರತಿಫಲನಗೊಂಡಿದೆ.

ನಮ್ಮ ಸರ್ಕಾರಗಳಿಗೆ ಹಣದ ಕೊರತೆ ಉದ್ಭವಿಸಿದಾಗ ಅಥವಾ ಮತದಾರರತ್ತ ಹಣ ಎಸೆಯಬೇಕಾದ ಸಂದರ್ಭಗಳು ಎದುರಾದಾಗಲ್ಲೆಲ್ಲ ಅಸಹಾಯಕ ಮಧ್ಯಮ ವರ್ಗದ

ವರನ್ನು ಅದರಲ್ಲೂ ವಿಶೇಷವಾಗಿ ವೇತನ ವರ್ಗದವರನ್ನು ಹಿಂಡಿ ಹಿಪ್ಪೆ ಮಾಡಲು ಮುಂದಾಗುತ್ತವೆ. ಅಧಿಕಾರದಲ್ಲಿ ಇರುವವರು ತಮಗೆ ಇಷ್ಟಬಂದಂತೆ ಈ ವರ್ಗದವರನ್ನು ತುಳಿಯಲು ನೋಡುತ್ತಾರೆ. ಅವರಿಗೆ ದನಿ ಇಲ್ಲ. ಪ್ರತ್ಯೇಕ ಮತಕ್ಷೇತ್ರ ಇಲ್ಲ. ಸಾಮಾನ್ಯ ಗುರುತೂ ಇಲ್ಲ. ಹೀಗಾಗಿ ಸುಲಭವಾಗಿ ಸಿಗುವ ಈ ದುಡಿಯುವ ವರ್ಗದವರ ಕತ್ತಿನಪಟ್ಟಿ ಹಿಡಿದು, ಬಂದೂಕಿನ ಹಿಂದಿನ ತುದಿಯಿಂದ ತಿವಿಯುವುದರಿಂದ ಅವರು ಅನಿವಾರ್ಯವಾಗಿ ಹೆಚ್ಚಿನ ತೆರಿಗೆ ಪಾವತಿಸಬೇಕಾಗುತ್ತದೆ. ಇದರಿಂದ ರಾಜಕೀಯವಾಗಿ ಯಾವುದೇ ವ್ಯತಿರಿಕ್ತ ಪರಿಣಾಮಗಳೂ ಉಂಟಾಗುವುದಿಲ್ಲ.

ಸದ್ಯದ ಸಂದರ್ಭದಲ್ಲಿ ನಾವು ಇದನ್ನು ‘ನೋಟು ರದ್ದು ಮಾದರಿಯ ರಾಜಕೀಯ’ ಎಂದು ಕರೆಯಬಹುದು. ಬಡವರು ಸಂಕಷ್ಟಕ್ಕೆ ಒಳಗಾದಾಗ ನಾಟಕೀಯ ನಿರ್ಧಾರಗಳನ್ನು ಕೈಗೊಂಡು ಅವರ ಮನವೊಲಿಕೆಗೆ ಹವಣಿಸಲಾಗುತ್ತದೆ. ನೋಟು ರದ್ದತಿಯಿಂದ ಶ್ರೀಮಂತರಿಗೆ ಎಷ್ಟು ಕಷ್ಟವಾಗಿದೆ ನೋಡು ಎಂದು ಬಡವರನ್ನು ನಂಬಿಸುವ ನಾಟಕ ಆಡಲಾಗುತ್ತದೆ. ಆದರೆ, ಇಂತಹ ನಿರ್ಧಾರಗಳಿಂದ ಶ್ರೀಮಂತರಿಗೆ ಯಾವುದೇ ತೊಂದರೆ ಆಗಿರುವುದಿಲ್ಲ. ಬಡವರು ಅವ್ಯವಸ್ಥೆಯಲ್ಲಿ ಶಾಶ್ವತವಾಗಿ ಬಂದಿಯಾಗಿರುತ್ತಾರೆ. ಮಧ್ಯಮ ವರ್ಗದವರನ್ನು ನೀವು ಯಾವಾಗಲಾದರೂ, ಯಾವ ಬಗೆಯಲ್ಲಾದರೂ ಘಾಸಿಗೊಳಿಸುತ್ತಿರಬಹುದು. ವರಮಾನ ಹೆಚ್ಚಿಸಿಕೊಳ್ಳಲು, ರಾಜಕೀಯವಾಗಿ ಬಳಸಿಕೊಳ್ಳಲು, ವಿನೋದ – ವಿಲಾಸದ ಉದ್ದೇಶಕ್ಕೂ ಇವರನ್ನು ದುರ್ಬಳಕೆ ಮಾಡಿಕೊಳ್ಳಬಹುದು.

ಮಾಧ್ಯಮಗಳು ಬಿತ್ತರಿಸಿದ, ಪತ್ರಿಕೆಗಳಲ್ಲಿ ಪ್ರಕಟವಾಗುವ ಬಜೆಟ್‌ ವಿವರಗಳು ಮರುದಿನವೇ ನಮ್ಮ ಮನಸ್ಸಿನಿಂದ ದೂರವಾಗುತ್ತವೆ. ಬಜೆಟ್‌ನ ಬಹುಭಾಗವು ಬಿಜೆಪಿಯ ಚುನಾವಣಾ ಪ್ರಣಾಳಿಕೆ ಜಾರಿ ಹೆಸರಿನಲ್ಲಿ 2019ರವರೆಗೆ ಚಲಾವಣೆಯಲ್ಲಿ ಇರಲಿದೆ. ಆದರೆ, ತಕ್ಷಣಕ್ಕೆ ಷೇರುಪೇಟೆ ಮತ್ತು ಬಾಂಡ್‌ಗಳ ಮಾರುಕಟ್ಟೆಯಲ್ಲಿ ಬಜೆಟ್‌ ಪ್ರಸ್ತಾವಗಳು ವ್ಯತಿರಿಕ್ತ ಪರಿಣಾಮ ಬೀರಿರುವುದು ನಮ್ಮೆಲ್ಲರ ಅನುಭವಕ್ಕೆ ಬರುತ್ತಿದೆ.

ಬಜೆಟ್‌ನಲ್ಲಿನ ಹಲವಾರು ಪ್ರಸ್ತಾವಗಳು ಷೇರುಪೇಟೆಯಲ್ಲಿ ತಲ್ಲಣ ಮೂಡಿಸಿವೆ. ಈ ಹಿಂದೆ, ಪಿ. ಚಿದಂಬರಂ ಅವರು ಮಂಡಿಸಿದ್ದ ಮೂರು ಬಜೆಟ್‌ಗಳೂ ಷೇರುಪೇಟೆಯ ನೆಮ್ಮದಿ ಕದಡುವ ಪ್ರಸ್ತಾವಗಳನ್ನು ಒಳಗೊಂಡಿದ್ದವು. ಬ್ಯಾಂಕ್‌ ನಗದು ವಹಿವಾಟು ತೆರಿಗೆ, ಷೇರು ವಹಿವಾಟು ತೆರಿಗೆ ಮತ್ತು ಉದ್ಯೋಗಿಗಳ ಷೇರು ಆಯ್ಕೆ ತೆರಿಗೆ ನಿಯಮಗಳನ್ನು ಸಂಪೂರ್ಣ ಬದಲು ಮಾಡುವ ಪ್ರಸ್ತಾವಗಳು ಪೇಟೆಯಲ್ಲಿ ಆತಂಕ ಮೂಡಿಸಿದ್ದವು.

ಈ ಬಾರಿಯ ಬಜೆಟ್‌, ನಿರಾಶ್ರಿತರಂತೆ ಕಾಣುವ ಮಧ್ಯಮವರ್ಗದವರ ಉಳಿತಾಯದ ಮೇಲೆ ಕೆಂಗಣ್ಣು ಬೀರಿದೆ. ಸರ್ಕಾರದ ಜಾಹೀರಾತುಗಳಿಂದಲೇ ಪ್ರಭಾವಿತರಾಗಿ ಷೇರು ಸಂಬಂಧಿತ ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ತೊಡಗಿಸಿದ ಮಧ್ಯಮ ವರ್ಗದವರು ಗಳಿಸಿದ ವರಮಾನಕ್ಕೆ ಈಗ ಕುತ್ತು ಒದಗಿದೆ. ಅಲ್ಪಾವಧಿಯಲ್ಲಿ ಇದು ಷೇರುಪೇಟೆಯ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಪೇಟೆಯ ಬಗ್ಗೆ ಹೂಡಿಕೆದಾರರಲ್ಲಿ ಮನೆ ಮಾಡಿರುವ ವಿಶ್ವಾಸಕ್ಕೂ ಧಕ್ಕೆ ಒದಗಿಸಲಿದೆ.

ಮಧ್ಯಮವರ್ಗದವರಿಗೆ ಬೇರೆ ಆಯ್ಕೆಗಳೇ ಇಲ್ಲದಂತೆ ಮಾಡಲಾಗಿದೆ. ನಾನು ಈ ಎಲ್ಲ ವಿವರಗಳನ್ನು ಸಮತೂಕದಿಂದಲೇ ವಿಶ್ಲೇಷಿಸುತ್ತಿರುವೆ. ಬಿಸಿನೆಸ್‌ ಸ್ಟ್ಯಾಂಡರ್ಡ್‌ ಲಿಮಿಟೆಡ್‌ನ ಅಧ್ಯಕ್ಷ ಟಿ. ಎನ್‌. ನಿನನ್‌ ಅವರು ದೇಶಿ ಆರ್ಥಿಕತೆ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ಗೌರವಾನ್ವಿತ ವಿಶ್ಲೇಷಕರಲ್ಲಿ ಒಬ್ಬರಾಗಿದ್ದಾರೆ. ಷೇರುಗಳಿಗೆ ಸಂಬಂಧಿಸಿದ ದೀರ್ಘಾವಧಿ ಬಂಡವಾಳ ಗಳಿಕೆ ಮೇಲೆ ತೆರಿಗೆ ವಿಧಿಸುವುದನ್ನು ಮರಳಿ ಜಾರಿಗೆ ತರಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದರು. ತಮ್ಮ ವಾರಾಂತ್ಯದ ಅಂಕಣದಲ್ಲಿ ಈ ತೆರಿಗೆ ಹೇರಿಕೆಯನ್ನು ಸಮರ್ಥಿಸಿಕೊಂಡಿದ್ದರು. ವಿತ್ತೀಯ ಕೊರತೆ ತಗ್ಗಿಸಬೇಕೆಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಬಯಸಿದ್ದರೆ, ಷೇರುಗಳ ಲಾಭದ ಮೇಲೆ ತೆರಿಗೆ ವಿಧಿಸುವುದನ್ನು ಜಾರಿಗೆ ತರುವುದನ್ನು ಹೊರತುಪಡಿಸಿದರೆ ಬೇರೆ ಆಯ್ಕೆಗಳೇ ಇಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದರು. ಈ ಸಲಹೆ ಮೌಲ್ಯಯುತವಾಗಿದೆ ಎನ್ನುವುದನ್ನು ಜೇಟ್ಲಿ ಅವರು ಗಂಭೀರವಾಗಿ ಪರಿಗಣಿಸಿದ್ದರು. ವಿತ್ತೀಯ ಕೊರತೆ ತಗ್ಗಿಸಲು ಇದು ನೆರವಾಗಲಿದೆ ಎನ್ನುವ ಆರ್ಥಿಕ ಚಿಂತನೆಯೂ ಸಮರ್ಪಕವಾಗಿತ್ತು.

ನಾನು ಇದನ್ನು ಇನ್ನೊಂದು ಬಗೆಯ ಪ್ರಯೋಜನ ರೂಪದಲ್ಲಿ ನೋಡಲು ಬಯಸಿರುವೆ. ಚುನಾವಣಾ ರಾಜಕೀಯಕ್ಕೆ ಹಣ ಹೊಂದಿಸಲು ಸರ್ಕಾರವೊಂದು ವಿತ್ತೀಯ ಪರಿಣಾಮಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ತನಗಿಷ್ಟ ಬಂದಂತೆ ಜನರ ಮೇಲೆ ತೆರಿಗೆ ವಿಧಿಸಬಹುದೇ. ನಾನು ಇಲ್ಲಿ, ಸಬ್ಸಿಡಿಗಳು ಮತ್ತು ಬಡವರ ಪರ ಕಲ್ಯಾಣ ಕಾರ್ಯಕ್ರಮಗಳಿಗೆ ಮಾಡುವ ವೆಚ್ಚಗಳನ್ನು ಆಕ್ಷೇಪಿಸುತ್ತಿಲ್ಲ. ಜನರನ್ನು ತಬ್ಬಿಬ್ಬುಗೊಳಿಸುವ ಗರಿಷ್ಠ ಮುಖ ಬೆಲೆಯ ನೋಟು ರದ್ದತಿಯಂತಹ ನಿರ್ಧಾರಗಳು ಮಾಡುವ ಅವಾಂತರಗಳಿಗೆ ಮಾತ್ರ ನನ್ನ ವಿರೋಧ ಇದೆ. ಇಡೀ ವರ್ಷದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆಯಲ್ಲಿ ಶೇ 1 ರಿಂದ ಶೇ 2ರಷ್ಟು ಸಂಪತ್ತು ನಷ್ಟಕ್ಕೆ ಕಾರಣವಾಗಿರುವುದು, ಸಣ್ಣ ಉದ್ದಿಮೆಗಳು ಬಾಗಿಲು ಹಾಕಲು ಮತ್ತು ಹಲವಾರು ಉದ್ಯೋಗ ಅವಕಾಶಗಳು ನಷ್ಟವಾಗಿರುವುದಕ್ಕೆ ನನ್ನ ವಿರೋಧ ಇದೆ.

ನಗದು ವಹಿವಾಟಿನಲ್ಲಿ ತೊಡಗಿದ್ದ ಲಕ್ಷಾಂತರ ಜನರನ್ನು ಔಪಚಾರಿಕ ಮತ್ತು ಡಿಜಿಟಲ್‌ ಬ್ಯಾಂಕಿಂಗ್‌ ವಹಿವಾಟಿಗೆ ಎಳೆದು ತರುವ, ತೆರಿಗೆದಾರರ ಸಂಖ್ಯೆ ಹೆಚ್ಚಿಸಿ, ತೆರಿಗೆ ವ್ಯಾಪ್ತಿ ಹಿಗ್ಗಿಸಿ, ತೆರಿಗೆ ವರಮಾನದ ಸಂಗ್ರಹ ಹೆಚ್ಚಿಸುವುದೂ ನೋಟು ರದ್ದತಿಯ ಮುಖ್ಯ ಉದ್ದೇಶಗಳಾಗಿವೆ ಎಂದು ಸರ್ಕಾರ ಹೇಳಿಕೊಂಡಿತ್ತು. ಒಂದೂವರೆ ವರ್ಷದ ನಂತರವೂ ಅಂತಹ ಪ್ರತಿಫಲಗಳು ಆರ್ಥಿಕತೆಯಲ್ಲಿ ಕಂಡು ಬರುತ್ತಿಲ್ಲ.

ನೋಟು ರದ್ದತಿ ನಿರ್ಧಾರದ ಉದ್ದೇಶಗಳು ಈಡೇರದಿರುವುದನ್ನು 2017–18ರ ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಿರುವುದರ ಉಪಯುಕ್ತ ಮಾಹಿತಿಯತ್ತ ಆರ್ಥಿಕ ತಜ್ಞ ಕೌಶಿಕ್‌ ಬಸು ಅವರು ಗಮನ ಸೆಳೆದಿದ್ದಾರೆ. ‘ನೋಟು ರದ್ದತಿಯ ಉದ್ದೇಶಗಳು ವಿಫಲಗೊಂಡಿರುವ ದೊಡ್ಡ ತಪ್ಪನ್ನು ಸಮೀಕ್ಷೆಯು ಒಪ್ಪಿಕೊಂಡಿದೆ. ಸದ್ಯದ ಕುಂಠಿತ ಆರ್ಥಿಕತೆಗೆ ಈ ಹಿಂದೆ ಕೈಗೊಂಡ ಇಂತಹ ಆರ್ಥಿಕ ನಿರ್ಧಾರಗಳೇ ಕಾರಣ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಷೇರು ಸಂಬಂಧಿತ ಮ್ಯೂಚುವಲ್‌ ಫಂಡ್‌ಗಳ ಹೂಡಿಕೆ ಮೇಲಿನ ಲಾಭಕ್ಕೆ ತೆರಿಗೆ ವಿಧಿಸಿ ಲಕ್ಷಾಂತರ ಜನರನ್ನು ತೆರಿಗೆ ವ್ಯಾಪ್ತಿಗೆ ತರಲಾಗುವುದು ಎಂದು ಹೇಳಿಕೊಳ್ಳುವುದು ಬರೀ ಕಟ್ಟುಕಥೆಯಾಗಲಿದೆ. ಇಲ್ಲಿ ಮತ್ತೆ ಕ್ಯಾಪ್ಟನ್‌ ರಿನಾಲ್ಟ್‌ನ ಮಾತು, ‘ ಮಾಮೂಲಿನ ಶಂಕಿತರನ್ನು ಹೆಡೆಮುರಿ ಕಟ್ಟಿ ಎಳೆದು ತನ್ನಿ’ ಎನ್ನುವುದು ನೆನಪಾಗುತ್ತದೆ. ಅಂದರೆ ಸುಲಭವಾಗಿ ಸಿಗುವ ಶಂಕಿತರ ಹಿತಾಸಕ್ತಿ ಬಲಿಕೊಡಲಾಗುತ್ತಿದೆ.

ಎರಡನೇ ವಾದ ರಾಜಕೀಯ ಸ್ವರೂಪದಲ್ಲಿ ಇದೆ. ಬಿಜೆಪಿ ಒಂದೇ ಅಲ್ಲ, ಎಲ್ಲ ಪಕ್ಷಗಳ ಸರ್ಕಾರಗಳು ಉದ್ದಕ್ಕೂ ಮಧ್ಯಮವರ್ಗದ ಜನರನ್ನು ಸುಸಂಸ್ಕೃತವಲ್ಲದ ರೀತಿಯಲ್ಲಿಯೇ ನಡೆಸಿಕೊಂಡು ಬಂದಿವೆ. ಈ ವರ್ಗ ತನ್ನ ಹಿತಾಸಕ್ತಿ ರಕ್ಷಿಸುವ ಯಾವುದೇ ಲಾಬಿ ಹೊಂದಿಲ್ಲ. ಅದರ ಬಳಿ ಚುನಾವಣಾ ಬಲವೂ ಸಾಕಷ್ಟಿಲ್ಲ.

ಈಗ ಮಂಡಿಸಿರುವ ಬಜೆಟ್‌, ಬಿಜೆಪಿಯ ಚಿಂತನಾಕ್ರಮಕ್ಕೆ ಪೂರಕವಾಗಿದೆ. ಬಡವರ ಉದ್ಧಾರಕ್ಕೆ ಕೋಟ್ಯಂತರ ರೂಪಾಯಿಗಳನ್ನು ಸುರಿಯಲಾಗುತ್ತಿದೆ. ಹೀಗಾಗಿ ಸರ್ಕಾರವು ಅವರ ಮನವೊಲಿಸಲು ಸುಲಭವಾಗಲಿದೆ. ನಿಮ್ಮೆಲ್ಲ ಸಂಕಷ್ಟಗಳನ್ನೆಲ್ಲ ಪರಿಹರಿಸಲು ಹಣದ ಹೊಳೆಯನ್ನೇ ಹರಿಸಲಾಗುತ್ತಿದೆ ಎಂದು ರೈತರಿಗೆ ಹೇಳಲಾಗುತ್ತಿದೆ. ಅವರೆಲ್ಲ ರಾಜಕೀಯ ಪಕ್ಷಗಳ ಮತ ಬ್ಯಾಂಕ್‌ ಆಗಿರುವುದರಿಂದಲೇ ಭರ್ಜರಿ ಕೊಡುಗೆಗಳನ್ನು ನೀಡಲಾಗುತ್ತಿದೆ.

ಬಿಜೆಪಿ ಮೇಲಿನ ಅಭಿಮಾನದಿಂದ ಅಧಿಕಾರಕ್ಕೆ ತಂದ ಮಧ್ಯಮ ವರ್ಗಕ್ಕೆ ಈ ಸರ್ಕಾರ ಬೇರೆಯೇ ರೂಪದಲ್ಲಿ ಪರಿಹಾರಗಳನ್ನು ಒದಗಿಸುತ್ತಿದೆ. ಯೋಗ, ಗೋವು ರಕ್ಷಣೆಯ ಆಕರ್ಷಣೆಗಳನ್ನು ಒಡ್ಡಲಾಗುತ್ತಿದೆ. ಮುಸ್ಲಿಮರು ಎದುರಿಸುತ್ತಿರುವ ತ್ರಿವಳಿ ತಲಾಖ್‌, ಹಜ್‌ ಸಬ್ಸಿಡಿ ಮತ್ತು ಲವ್‌ ಜಿಹಾದ್‌ನಂತಹ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ಜನಪ್ರಿಯ ಭಾಷಣಗಳಲ್ಲಿ ಕೆಲ ದತ್ತಾಂಶಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. 2015–16ನೇ ಅಂದಾಜುವರ್ಷದ ಪ್ರಕಾರ, ಭಾರತೀಯರಲ್ಲಿ ಕೇವಲ ಶೇ 1.7ರಷ್ಟು ಜನರಷ್ಟೇ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 130 ಕೋಟಿ ಜನಸಂಖ್ಯೆಯ ದೇಶದಲ್ಲಿ ಮಧ್ಯಮ ವರ್ಗದವರು ಅತ್ಯಧಿಕ ಸಂಖ್ಯೆಯಲ್ಲಿ ಇರುವಾಗ ಈ ಮಾಹಿತಿ ದಿಗಿಲುಗೊಳಿಸುತ್ತದೆ. ಇದನ್ನೇ ವಿಭಿನ್ನ ರೀತಿಯಲ್ಲಿ ಆಲೋಚಿಸಿದರೆ, ಕೇವಲ ಶೇ 1.7ರಷ್ಟು ಭಾರತೀಯರು ದೇಶದ ಆದಾಯ ತೆರಿಗೆಯ ಶೇ 100ರಷ್ಟನ್ನು ಪಾವತಿಸುತ್ತಿದ್ದಾರೆ ಎಂದೂ ಅರ್ಥವಾಗುವುದಿಲ್ಲವೆ. ಜನಪ್ರಿಯ ಸರ್ಕಾರವೊಂದು ಈ ಸೀಮಿತ ಸಂಖ್ಯೆಯ ಆದಾಯ ತೆರಿಗೆದಾರರನ್ನು ಗಮನಾರ್ಹವಾಗಿ ಹೆಚ್ಚಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ನೋಟು ರದ್ದತಿ ನಿರ್ಧಾರವು ಜನರ ಪಾಲಿಗೆ ಆಘಾತ ನೀಡಿತ್ತು. ಅದರ ಬೆನ್ನಲ್ಲೇ ಜಾರಿಗೆ ಬಂದ ಜಿಎಸ್‌ಟಿಯಿಂದ ತೆರಿಗೆ ಪಾವತಿದಾರರ ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಂಡಿರುವುದು ಇನ್ನೂ ಖಚಿತಪಟ್ಟಿಲ್ಲ. ತೆರಿಗೆದಾರರ ಸಂಖ್ಯೆ ಹೆಚ್ಚಿಸುವ ವಿಷಯದಲ್ಲಿ ಇದುವರೆಗಿನ ಎಲ್ಲ ಸರ್ಕಾರಗಳು ವಿಫಲಗೊಂಡಿವೆ. ಇದರಿಂದಾಗಿ, ಸಗಟಾಗಿ ತೆರಿಗೆ ತಪ್ಪಿಸುವ ಅಥವಾ ತೆರಿಗೆ ವ್ಯಾಪ್ತಿಗೆ ಬರದ ಕೋಟ್ಯಂತರ ಜನರನ್ನು ತೆರಿಗೆ ಪಾವತಿ ವ್ಯಾಪ್ತಿಗೆ ತರಲು ಸಾಧ್ಯವಾಗಿಲ್ಲ. ಹೀಗಾಗಿ ತೆರಿಗೆ ತಪ್ಪಿಸಿ ಅಡಗಿಕೊಳ್ಳಲು ಸಾಧ್ಯವಿಲ್ಲದ ಮತ್ತು ಸುಲಭವಾಗಿ ಸಿಗುವ ಮಧ್ಯಮ ವರ್ಗದವರನ್ನೇ ಸರ್ಕಾರಗಳು ಬಲಿಪಶು ಮಾಡುತ್ತಿವೆ.

ಹೀಗೆ ಮಾಡುತ್ತ ಹೋದರೆ, ವೇತನ ವರ್ಗದವರು ತಮ್ಮ ಉಳಿತಾಯವನ್ನು ತೊಡಗಿಸುವುದಾದರೂ ಎಲ್ಲಿ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಅವರ ಬಳಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ ಇಲ್ಲ. ಆಸ್ತಿ ಖರೀದಿಗೆ ಹಲವಾರು ಕಠಿಣ ನಿಬಂಧನೆಗಳಿವೆ. ಎನ್‌ಡಿಎ ಸರ್ಕಾರದ ನಾಲ್ಕು ವರ್ಷಗಳ ಅವಧಿಯಲ್ಲಿ ರಿಯಲ್‌ ಎಸ್ಟೇಟ್ ವಲಯವು ತನ್ನ ಮಹತ್ವ ಕಳೆದುಕೊಂಡಿದೆ.

ಬ್ಯಾಂಕ್‌ಗಳಲ್ಲಿನ ಉಳಿತಾಯ ಠೇವಣಿಗಳ ಮೇಲಿನ ಬಡ್ಡಿ ದರಗಳು ದಿನೇ ದಿನೇ ಕಡಿಮೆಯಾಗುತ್ತಿವೆ. ಆದರೆ, ಇದಕ್ಕೆ ಅನುಗುಣವಾಗಿ ಬ್ಯಾಂಕ್‌ಗಳು ಸಾಲಗಳ ಮೇಲಿನ ಸಮಾನ ಮಾಸಿಕ ಕಂತನ್ನು (ಇಎಂಐ) ಕಡಿಮೆ ಮಾಡುತ್ತಿಲ್ಲ. ಸರ್ಕಾರದಂತೆ ಬ್ಯಾಂಕ್‌ಗಳಲ್ಲೂ ದುರಾಸೆ ಪ್ರವೃತ್ತಿ ಕಂಡು ಬರುತ್ತಿದೆ. ದೊಡ್ಡ, ದೊಡ್ಡ ಸಾಲಗಾರರು ಸುಸ್ತಿದಾರರಾಗಿದ್ದಾರೆ. ಇದರಿಂದ ಹೆಚ್ಚಿದ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಬ್ಯಾಂಕ್‌ಗಳೂ ಮಧ್ಯಮ ವರ್ಗದವರನ್ನೇ ಸುಲಿಗೆ ಮಾಡಲು ಹೊರಟಿವೆ. ಮಧ್ಯಮ ವರ್ಗದ ಠೇವಣಿದಾರರು, ಗೃಹ, ವಾಹನ ಮತ್ತು ಶಿಕ್ಷಣ ಸಾಲ ಪಡೆದವರನ್ನು ಶೋಷಿಸುತ್ತಿವೆ. ತಮ್ಮೆಲ್ಲ ಉಳಿತಾಯವನ್ನು ಎಲ್ಲಿ ತೊಡಗಿಸಬೇಕು ಎನ್ನುವ ಗೊಂದಲ ಮಧ್ಯಮ ವರ್ಗದವರಲ್ಲಿ ಕಂಡು ಬರುತ್ತಿದೆ.

2004ರಲ್ಲಿ ಚಿದಂಬರಂ ಅವರು ಬಜೆಟ್‌ ಮಂಡಿಸಿದಾಗ ಷೇರುಪೇಟೆಯಲ್ಲಿ ಭಾರಿ ಕಂಪನ ಉಂಟಾಗಿ ಸಂವೇದಿ ಸೂಚ್ಯಂಕ ಗಮನಾರ್ಹವಾಗಿ ಕುಸಿತ ಕಂಡಿತ್ತು. ಇಂತಹ ಸಂದರ್ಭಗಳಲ್ಲಿ ಹಣಕಾಸು ಸಚಿವರು ಆಡುವ ಮಾತನ್ನೇ ಆಗ ಅವರೂ ಹೇಳಿದ್ದರು. ‘ನಾನು ರೈತರಿಗಾಗಿ ಬಜೆಟ್‌ ಸಿದ್ಧಪಡಿಸಲೋ ಅಥವಾ ಷೇರು ದಲ್ಲಾಳಿಗಳಿಗಾಗಿಯೋ’ ಎಂದು ಚಿದಂಬರಂ ಪ್ರಶ್ನಿಸಿದ್ದರು.

ಆಧುನಿಕ ಅರ್ಥ ವ್ಯವಸ್ಥೆಯಲ್ಲಿ ರೈತರು ಮತ್ತು ದಲ್ಲಾಳಿಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ರೈತರು ಮತ್ತು ಷೇರು ದಲ್ಲಾಳಿಗಳನ್ನೂ ಬಜೆಟ್‌ ಒಳಗೊಂಡಿರಬೇಕು. ಇಬ್ಬರ ಹಿತ ಕಾಯುವಂತಿರಬೇಕು ಎಂದು ನಾನು ಆ ಸಂದರ್ಭದಲ್ಲಿ ಬರೆದಿದ್ದ ಲೇಖನದಲ್ಲಿ ಪ್ರತಿಪಾದಿಸಿದ್ದೆ. ಈಗಿನ ಸಂದರ್ಭದಲ್ಲಿ ಕೃಷಿ ಮತ್ತು ಹಣಕಾಸು ಮಾರುಕಟ್ಟೆಗಳನ್ನು ಒಂದರಿಂದ ಇನ್ನೊಂದನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಹಲವು ಅನಾಹುತಗಳನ್ನು ತಡೆಯಲು ಆ ಬಜೆಟ್‌ನಲ್ಲಿ ಆನಂತರ ಹಲವಾರು ತಿದ್ದುಪಡಿಗಳನ್ನು ತರಲಾಗಿತ್ತು. ಹಾಗೆ ಮಾಡುವುದು ಅನಿವಾರ್ಯವೂ ಆಗಿತ್ತು ಈಗಲೂ ಹಾಗೆ ಮಾಡುವ ಅನಿವಾರ್ಯತೆ ಉದ್ಭವಿಸಿದೆ. ದೇಶದ ಮಧ್ಯಮ ವರ್ಗದ ಜನರಲ್ಲಿನ ಬಹುಸಂಖ್ಯಾತರು ನಗರಗಳಲ್ಲಿ ನೆಲೆಸಿದ್ದಾರೆ. ಈಗಲೂ ಅವರು ನರೇಂದ್ರ ಮೋದಿ ಸರ್ಕಾರಕ್ಕೆ ಬದ್ಧರಾಗಿದ್ದಾರೆ. ಇದು ಗುಜರಾತ್‌ ಚುನಾವಣೆಯಲ್ಲೂ ದೃಢಪಟ್ಟಿದೆ. ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ಮೋದಿ ಸರ್ಕಾರವು ಕಚ್ಚಾ ತೈಲದ ಬೆಲೆ ಕಡಿತದ ಪ್ರಯೋಜನವನ್ನು ಬಳಕೆದಾರರಿಗೆ ವರ್ಗಾಯಿಸಲು ಹಿಂದೇಟು ಹಾಕಿದೆ. ಪೆಟ್ರೋಲ್‌, ಡೀಸೆಲ್‌ಗಳ ಮೇಲೆ ಎಕ್ಸೈಜ್‌ ಸುಂಕ ಹೆಚ್ಚಿಸಿಹೊರೆ ಹೆಚ್ಚಿಸಿ ಬೊಕ್ಕಸ ಭರ್ತಿ ಮಾಡಿಕೊಳ್ಳುತ್ತಿದ್ದರೂ ಮಧ್ಯಮ ವರ್ಗದವರು ಮೋದಿ ಸರ್ಕಾರಕ್ಕೆ ನಿಷ್ಠರಾಗಿಯೇ ಉಳಿದಿದ್ದಾರೆ. ಈಗ ಅವರ ಉಳಿತಾಯದ ಮೇಲೆ ಸರ್ಕಾರ ಕಣ್ಣು ಹಾಕಿರುವುದು ಈಗಾಗಲೇ ಆಗಿರುವ ಗಾಯವನ್ನು ಹೆಚ್ಚಿಸಲಿದೆಯಷ್ಟೆ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)