ಬುಧವಾರ, ಮೇ 12, 2021
18 °C

ಮನುಷ್ಯ ರಾಕ್ಷಸನಾಗುವ ಬಗೆ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಮಹಾಭಾರತ ಹಳೆಯ ಕಥೆ ಎಂದೆನ್ನಿಸಿದರೂ ಅದರ ಅರ್ಥವ್ಯಾಪ್ತಿ ಎಂದಿಗೂ ಹಳೆಯದಾಗುವುದಿಲ್ಲ. ಅದರ ಅನೇಕ ಉಪಕಥೆಗಳು ಅದ್ಭುತ ನೀತಿಯನ್ನು ಸಾರುತ್ತವೆ. ಮಹರ್ಷಿ ವಶಿಷ್ಠರು ಜ್ಞಾನದ ತವನಿಧಿ. ಖ್ಯಾತ ಮಹಾರಾಜರಿಗೆ ಗುರುವಾಗಿ ನಿಂತು ಮುನ್ನಡೆಸಿದವರು. ಅವರಿಗೆ ನೂರು ಜನ ಮಕ್ಕಳು. ಅವರಲ್ಲಿ  ಹಿರಿಯವನ ಹೆಸರು ಶಕ್ತಿ. ಅವನು ತಂದೆಯಿಂದ ಅಪಾರ ಜ್ಞಾನವನ್ನು ಪಡೆದವನು. ಆದರೆ ತಂದೆಯ ತಾಳ್ಮೆ, ಸಂಯಮ ಅವನಿಗೆ ಒದಗಿ ಬರಲಿಲ್ಲ. ಅವನಿಗೆ ಸದಾ ಮೂಗಿನ ಮೇಲೆಯೇ ಕೋಪ. ಅದರೊಟ್ಟಿಗೆ ಮಹರ್ಷಿಗಳ ಹಿರಿಯ ಮಗ ತಾನೆಂಬ ಒಂದಿಷ್ಟು ಅಹಂಕಾರ. ಅವನನ್ನು ಮಾತನಾಡಿಸುವುದೇ ಕಷ್ಟ. ಯಾವಾಗ ಯಾರ ಮೇಲೆ ಏತಕ್ಕೆ ಕೋಪ ಮಾಡಿಕೊಳ್ಳುತ್ತಾನೆ ಎಂಬುದನ್ನು ಹೇಳುವುದು ಕಷ್ಟವಾಗಿತ್ತು. ಒಂದು ದಿನ ಶಕ್ತಿ ಒಂದು ಸುಂದರವಾದ ಕೊಳದಲ್ಲಿ ಸ್ನಾನ ಮಾಡಿ, ಸಂಧ್ಯಾವಂದನೆ ಪೂರೈಸಿ ನೀರು ಕುಡಿದು ಮನೆಯ ಕಡೆಗೆ ಬರುವಾಗ ಒಂದು ತೀರ ಇಕ್ಕಟ್ಟಾದ ಸೇತುವೆಯನ್ನು ದಾಟುತ್ತಿದ್ದ. ಅದು ತುಂಬ ಇಕ್ಕಟ್ಟಿನದ್ದು, ಒಬ್ಬರು ಮಾತ್ರ ಅದರ ಮೇಲೆ ಸಾಗಿ ದಾಟಲು ಸಾಧ್ಯ. ಇವನನಿನ್ನೂ ಹತ್ತು ಹಜ್ಜೆಯಷ್ಟೂ ಸೇತುವೆಯ ಮೇಲೆ ನಡೆದಿರಲಿಲ್ಲ. ಆಗ ಅವನಿಗೆ ಅತ್ತ ಕಡೆಯಿಂದ ಇಕ್ಷ್ವಾಕು ವಂಶದ ಚಕ್ರವರ್ತಿ ಕಲ್ಮಾಷಪಾದ ಸೇತುವೆಯ ಮೇಲೆ ಬರುತ್ತಿರುವುದು ಕಾಣಿಸಿತು. ರಾಜ ಆಗಲೇ ಮುಕ್ಕಾಲು ಭಾಗ ಸೇತುವೆಯನ್ನು ದಾಟಿದ್ದಾನೆ. ಬೇಟೆಯಾಡಿ ಬಂದು ತುಂಬ ಬಳಲಿದಂತೆ ಕಾಣುತ್ತಾನೆ. ಅವನಿಗೆ ಭಾರಿ ನೀರಡಿಕೆಯಾಗಿದ್ದಿರಬೇಕು. ಅದಕ್ಕೆಂದೇ ಅವಸರದಿಂದ ಕೊಳದ ಕಡೆಗೆ ನಡೆದಿದ್ದಾನೆ. ಕಲ್ಮಾಷಪಾದ ಅಲ್ಲಿಂದಲೇ ಕೂಗಿಕೊಂಡ, `ಋಷಿಗಳೇ ದಯವಿಟ್ಟು ಒಂದು ಕ್ಷಣ ತಡೆದುಕೊಳ್ಳಿ. ನಾನು ಸೇತುವೆಯನ್ನು ದಾಟಿ ಬಿಡುತ್ತೇನೆ. ಆಮೇಲೆ ತಾವು ಸಾಗುವಿರಂತೆ. ನಾನೀಗಾಗಲೇ ಮುಕ್ಕಾಲು ಭಾಗ ದಾಟಿ ಬಂದಿದ್ದೇನೆ.~ ಈ ಮಾತು ಶಕ್ತಿಗೆ ಇಷ್ಟವಾಗಲಿಲ್ಲ. `ಮುಕ್ಕಾಲು ಭಾಗವೋ, ಕಾಲುಭಾಗವೋ ನನಗೆ ಗೊತ್ತಿಲ್ಲ.ನಾನು ಮಾತ್ರ ಸರಿಯಲಾರೆ~ ಎಂದು ಉದ್ಧಟತನದ ಉತ್ತರ ನೀಡಿದ. ರಾಜ ಎಷ್ಟು ಕೇಳಿದರೂ ಪ್ರಯೋಜನವಾಗಲಿಲ್ಲ. ರಾಜನದೂ ರಾಜಸ ಬುದ್ಧಿ. ಅವನಿಗೆ ಹಸಿವೆ, ನೀರಡಿಕೆಯಾಗಿದೆ ಅಂದ ಮೇಲೆ ಉದ್ಧಟತನದ ಮಾತು ಅವನನ್ನು ರೇಗಿಸಿತು. ತಕ್ಷಣ ಅವನೂ ಕೋಪದಲ್ಲಿ ತನ್ನ ರಥದ ಚಾವಟಿಯನ್ನೆತ್ತಿ ಶಕ್ತಿಯ ಮೈಮೇಲೆ ಪ್ರಹಾರ ಮಾಡಿದ. ಶಕ್ತಿಯ ಕೋಪವೇನು ಕಡಿಮೆಯೇ? ತನ್ನ ತಪಃಶಕ್ತಿಯನ್ನು ಒಗ್ಗೂಡಿಸಿ, `ನೀನು ತಕ್ಷಣದಿಂದ ರಾಕ್ಷಸನಾಗು~ ಎಂದು ಶಾಪಕೊಟ್ಟ. ಮರುಕ್ಷಣ ಕಲ್ಮಾಷಪಾದ ರಾಕ್ಷಸನಾಗಿ ನಿಂತಿದ್ದ. ರಾಕ್ಷಸ ದೇಹ ಬಂದ ಮೇಲೆ ರಾಕ್ಷಸ ಸ್ವಭಾವವೂ ಬರಬೇಕಲ್ಲವೇ? ತಕ್ಷಣ ರಾಕ್ಷಸ ಈ ಶಕ್ತಿಯನ್ನು ಕೊಂದು ತಿನ್ನಲು ನುಗ್ಗಿದ. ಹೆದರಿದ ಶಕ್ತಿ ಓಡತೊಡಗಿದ. `ಹೇ ರಾಕ್ಷಸ, ನನ್ನ ತಂದೆ ಮಹರ್ಷಿ. ನನ್ನನ್ನು ಕೊಂದರೆ ಬ್ರಹ್ಮಹತ್ಯೆಯ ದೋಷ ಬರುತ್ತದೆ. ನರಕ ದೊರೆಯುತ್ತದೆ.~ ಹೀಗೆ ಹೇಳುತ್ತಲೇ ಓಡಿದ. ಆಗ ರಾಕ್ಷಸ ಹೇಳಿದ. `ನನ್ನನ್ನು ಮನುಷ್ಯನಿಂದ ರಾಕ್ಷಸನನ್ನಾಗಿ ಮಾಡಿದ್ದು ನೀನೇ ತಾನೇ? ಅದರಿಂದ ನನ್ನ ರಾಕ್ಷಸತ್ವವನ್ನು ಅನುಭವಿಸು.~ ಹೀಗೆ ಹೇಳುತ್ತಲೇ ಶಕ್ತಿಯನ್ನು ಹಿಡಿದು, ಕೊಂದು, ತಿಂದು ತೇಗಿದ. ಈ ಕಥೆ ಎಷ್ಟು ಪ್ರಸ್ತುತ ಎನ್ನಿಸುವುದಿಲ್ಲವೇ? ನಮ್ಮ ಸಮಾಜದಲ್ಲಿ ನೋಡಲು ಸಾಮಾನ್ಯರಾಗಿ, ನಿರಪಾಯರಾಗಿ ಬದುಕಿದ್ದ ಎಷ್ಟೊಂದು ಜನ ಬೆಳೆದು ರಾಕ್ಷಸರಾದದ್ದು ಹೇಗೆ? ಈ ಅಮಾಯಕರನ್ನು ಬಳಸಿಕೊಂಡು ಅವರಿಗೆ ದುಡ್ಡುಕೊಟ್ಟು, ಅಧಿಕಾರಕೊಟ್ಟು ಕೆಟ್ಟ ಕೆಲಸಕ್ಕೆ ಪ್ರೇರೇಪಣೆ ಮಾಡಿದ್ದು ಸಮಾಜದ ಕೆಲವರೇ ಅಲ್ಲವೇ? ದುಡ್ಡಿನ, ಅಧಿಕಾರದ, ದರ್ಪದ ರುಚಿ ಹತ್ತಿದ ವ್ಯಕ್ತಿ ರಾಕ್ಷಸನಾಗಿ ಬೆಳೆದದ್ದು ನಮ್ಮ ಕಣ್ಣ ಮುಂದೆಯೇ ಅಲ್ಲವೇ? ಅಂಥವರ ಹತ್ತಾರು ಚಿತ್ರಗಳು ನಮ್ಮ ಕಣ್ಣ ಮುಂದೆಯೇ ಇವೆ. ಒಬ್ಬ ಹಿಟ್ಲರ್, ಒಬ್ಬ ನೆಪೋಲಿಯನ್, ಒಸಾಮಾ ಬಿನ್ ಲಾಡೆನ್, ಭಿಂದ್ರನ್‌ವಾಲೆ ಕಣ್ಣ ಮುಂದೆ ಬರುತ್ತಾರೆ. ಈ ಹೆಸರುಗಳು ಅತ್ಯಂತ ಪ್ರಸ್ತುತವಾಗಿವೆ. ಅವರನ್ನು ರಾಕ್ಷಸರನ್ನಾಗಲು ಬಿಟ್ಟು ನಂತರ ಅವರು ರಾಕ್ಷಸರಂತೆ ನಡೆದಾಗ ಈ ಬದಲಾವಣೆಗೆ ನಾವೆಲ್ಲರೂ ಒಂದಲ್ಲ ಒಂದು ರೀತಿ ಕಾರಣರೆಂಬುದು ನೆನಪಾಗಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.