ಭಾನುವಾರ, ಫೆಬ್ರವರಿ 28, 2021
31 °C

ಮರಳಿಗೆ ಬರಗಾಲ, ಮರಳು ದೋಚಿದ್ದಕ್ಕೆ ಬರಗಾಲ

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಮರಳಿಗೆ ಬರಗಾಲ, ಮರಳು ದೋಚಿದ್ದಕ್ಕೆ ಬರಗಾಲ

ನಿಮಗಿದು ಗೊತ್ತಿತ್ತೆ? ಕೊಳ್ಳುಬಾಕರ ಸ್ವರ್ಗವೆಂದೇ ಹೆಸರಾದ ದುಬೈ ನಗರ ತನ್ನ ಕಾಂಕ್ರೀಟ್ ಕಾಡಿನ ನಿರ್ಮಾಣಕ್ಕೆ ಬೇಕಾದ ಮರಳನ್ನು ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳುತ್ತಿದೆ ಅಂತ? ಮರಳಿನ ಸಮುದ್ರದ ಮೇಲೆಯೇ ಹುತ್ತದಂತೆ ಬೆಳೆಯುತ್ತಿರುವ ಆ ನಗರವೇ ಪೃಥ್ವಿಯ ಆಚೆ ಮಗ್ಗುಲಿನಿಂದ ಮರಳನ್ನು ಸಾಗಿಸಿ ತರುತ್ತಿದೆ ಅಂದಮೇಲೆ ತಮಿಳುನಾಡು, ಕರ್ನಾಟಕದ ಉದ್ಯಮಿಗಳು ಮಲೇಷ್ಯಾದಿಂದ ಈಗ ಮರಳನ್ನು ತರಿಸುವುದು ಅಚ್ಚರಿಯೇನೂ ಅಲ್ಲ.

ಮರಳು ಎಂಬ ನಿಕೃಷ್ಟ ವಸ್ತುವಿಗೆ ಈ ಭೋಗಜಗತ್ತಿನಲ್ಲಿ ಚಿನ್ನದಷ್ಟು ಮಹತ್ವ ಬಂದಿದೆ. ಎಲ್ಲರನ್ನೂ ನಗರಗಳಿಗೆ ಎಳೆದು ತರುವ ಪ್ರಕ್ರಿಯೆ ವಿಶ್ವವ್ಯಾಪಿಯಾಗಿದೆ. ಕಟ್ಟಡ, ಸೇತುವೆ, ರಸ್ತೆ, ಕ್ರೀಡಾಂಗಣ, ವಿಮಾನ ನಿಲ್ದಾಣ, ಬಂದರು, ಅಣೆಕಟ್ಟು ನಿರ್ಮಾಣವೇ ಅತಿ ದೊಡ್ಡ ಉದ್ಯಮವಾಗಿದ್ದು ಎಲ್ಲ ಕಡೆ ಮರಳಿಗೆ ಬೇಡಿಕೆ ಹೆಚ್ಚುತ್ತಿದೆ. ಹಿಂದೆ ಚಿನ್ನದ ಅದುರಿಗಾಗಿ ಜೀವವನ್ನು ಪಣಕ್ಕಿಡುತ್ತಿದ್ದವರು ಈಗ ಚಿನ್ನದ ಬಣ್ಣದ ಮರಳಿಗಾಗಿ ಜೀವ ಮಂಡಲವನ್ನು ಛಿದ್ರ ಮಾಡುತ್ತಿದ್ದಾರೆ. ಕೆರೆಕೊಳ್ಳಗಳನ್ನು ಬತ್ತಿಸುತ್ತಿದ್ದಾರೆ, ನದಿಯ ಪಾತ್ರವನ್ನು ಮರುಭೂಮಿಯಾಗಿಸುತ್ತಿದ್ದಾರೆ. ಕಾನೂನಿನ ಕಣ್ಣಿಗೆ ಮರಳು ಎರಚುತ್ತ, ಸರ್ಕಾರಿ ಮಂದಿಗೆ ಲಂಚ-ಮಂಚದ ಆಮಿಷ ಒಡ್ಡುತ್ತ, ನೈತಿಕ ನೆಲೆಗಟ್ಟನ್ನೂ ಸಡಿಲ ಮಾಡುತ್ತಿದ್ದಾರೆ. ಪ್ರತಿಸ್ಪರ್ಧಿಗಳ ಕೊಲೆಯಂತೂ ಸರಿಯೇ; ನಿಯತ್ತಿನ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ನ್ಯಾಯವಾದಿಗಳು, ಪರಿಸರ ಹೋರಾಟಗಾರರು, ಪತ್ರಕರ್ತರು ಜೀವ ತೆರುತ್ತಿದ್ದಾರೆ. ನಮ್ಮಲ್ಲಷ್ಟೇ ಅಲ್ಲ, ಅರಬ್, ಅಮೆರಿಕಾ, ಆಫ್ರಿಕಾ, ಏಷ್ಯದ ಎಷ್ಟೊಂದು ದೇಶಗಳಲ್ಲಿ ಮರಳು ದಂಧೆ ಒಂದು ಸಾಮಾಜಿಕ ಕಾಯಿಲೆಯಾಗಿದೆ.

ಈ ಕಾಯಿಲೆಯ ಕ್ರೂರ ಮುಖವನ್ನು ನೋಡಬೇಕೆಂದಿದ್ದರೆ ಗೂಗಲ್ ನಕಾಶೆಯಲ್ಲಿ ಚೀನಾದ ಪೊಯಾಂಗ್ ಸರೋವರವನ್ನು ನೋಡಬೇಕು. ಬೆಂಗಳೂರು ನಗರಕ್ಕಿಂತ 50 ಪಟ್ಟು ದೊಡ್ಡದಿದ್ದ ಆ ಸರೋವರ (3500 ಚದರ ಕಿಲೊಮೀಟರ್ ವಿಸ್ತೀರ್ಣ; ಬೆಂಗಳೂರಿನದು 705 ಚ.ಕಿ.ಮೀ) ಕಳೆದ ವರ್ಷ ಬಹುಭಾಗ ಒಣಗಿ, ಕ್ರಿಕೆಟ್ ಮೈದಾನದಂತಾಗಿದೆ. ಅದರ ನಡುವೆ ಮರಳು ಸಾಗಣೆಯ ದೋಣಿಯೊಂದು ಚಲಿಸಲಾಗದೆ ಮರಳಿನ ಸಾಗರದಲ್ಲಿ ನಿಂತಿದೆ. ಈಚಿನ ಮಾಹಿತಿಯ ಪ್ರಕಾರ ಸರೋವರದ ಅಲ್ಲಲ್ಲಿನ ಚಿಕ್ಕ ತಗ್ಗುಗಳಲ್ಲಿ ಶೇಕಡಾ 6ರಷ್ಟು ಭಾಗದಲ್ಲಿ ಮಾತ್ರ ನೀರಿದೆ. ಮರಳು ಸಾಗಣೆ ದಂಧೆಯೇ ಚೀನಾದ ಈ ಅತಿ ದೊಡ್ಡ ಸಿಹಿನೀರ ಸರೋವರವನ್ನು ಗುಳುಂ ಮಾಡಿದೆ ಎಂದು ಲಂಡನ್ನಿನ ‘ದಿ ಗಾರ್ಡಿಯನ್’ ಪತ್ರಿಕೆ ಕಳೆದ ಫೆಬ್ರುವರಿಯಲ್ಲಿ ಪ್ರಕಟಿಸಿತ್ತು. ಪೊಯಾಂಗ್ ಎಂಬುದು ಭೂಗ್ರಹದ ಅತಿ ದೊಡ್ಡ ಮರಳು ಗಣಿಯಾಗಿದ್ದು, ಗಂಟೆಗೆ ಹತ್ತು ಸಾವಿರ ಟನ್ ಮರಳನ್ನು ಮೇಲಕ್ಕೆತ್ತಬಲ್ಲ ಅನೇಕ ಬೃಹದಾಕಾರ ಯಂತ್ರಗಳು ಅಲ್ಲಿ ಅಹೋರಾತ್ರಿ ಕೆಲಸ ಮಾಡುತ್ತವೆ. ಬಹುತೇಕ ಯಂತ್ರಗಳೆಲ್ಲ ಸರೋವರದ ಹೊರಮುಖದಲ್ಲೇ ಅಗೆತ ಮಾಡುವುದರಿಂದ ಆ ತಗ್ಗಿನ ಮೂಲಕ ನೀರೆಲ್ಲ ಬಸಿದು ಯಾಂಗತ್ಸೆ ನದಿಗೆ ಹೊರಟು ಹೋಗಿದೆ. ಮುಂದೆ ಅದು ಥ್ರೀ ಗಾರ್ಜಿಸ್ ಜಲಾಶಯಕ್ಕೆ ಹೂಳನ್ನು ಪೇರಿಸುತ್ತಿದೆ. ಪೊಯಾಂಗ್ ಸುತ್ತಲಿನ ಕೃಷಿಭೂಮಿಯ ಅಂತರ್ಜಲವೂ ಇಂಗಿದ್ದರಿಂದ ಗ್ರಾಮಸ್ಥರು ವಲಸೆ ಹೋಗಿದ್ದಾರೆ. ಪ್ರತಿವರ್ಷ ಸೈಬೀರಿಯಾ ಕಡೆಯಿಂದ ಸರೋವರಕ್ಕೆ ಬರುತ್ತಿದ್ದ ಐದು ಲಕ್ಷ ವಲಸೆ ಪಕ್ಷಿಗಳೂ ಸ್ಥಾಯೀ ಜಲಚರಗಳೂ ಏನಾದುವೊ ಗೊತ್ತಿಲ್ಲ.

ಚೀನಾದ ವಿಕಾಸ ಯೋಜನೆಗಳ ಬಕಾಸುರ ವೈಖರಿ ನೋಡಿ: ಇಡೀ ಅಮೆರಿಕ ದೇಶ ಕಳೆದ ಶತಮಾನದಲ್ಲಿ ನಿರ್ಮಾಣಕ್ಕೆ ಬಳಸಿದ್ದಕ್ಕಿಂತ ಹೆಚ್ಚು ಮರಳನ್ನು ಚೀನಾ ಕಳೆದ ಹತ್ತು ವರ್ಷಗಳಲ್ಲಿ ಬಾಚಿ ಕಾಂಕ್ರೀಟ್ ಕಾಡನ್ನು ಬೆಳೆಸಿದೆ. ಮರಳಿನ ಅಗೆತದಿಂದ ಭೂಕುಸಿತ, ರಸ್ತೆ-ಸೇತುವೆ ಕುಸಿತ, ಅಂತರ್ಜಲ ಕುಸಿತ, ನೌಕಾ ಮಾರ್ಗದ ಏರುಪೇರು ಇವೆಲ್ಲ ತೀರ ಜಾಸ್ತಿ ಆಗಿದ್ದರಿಂದ ಚೀನಾ ಸರ್ಕಾರ ನದಿಮರಳಿಗೆ ನಿಷೇಧ ಹಾಕಿತು. ದಂಧೆಯವರೆಲ್ಲ ಪೊಯಾಂಗ್ ಸರೋವರಕ್ಕೆ ನುಗ್ಗಿದರು. ಕೆನ್ಯಾ, ದಕ್ಷಿಣ ಆಫ್ರಿಕಾ, ಇಂಡೊನೇಶ್ಯ, ಮೊರೊಕ್ಕೊದಲ್ಲೂ ಅಂಥ ಘಟನೆಗಳು ನಡೆದಿವೆ. ಭಾರತದಲ್ಲೇನು ಕಡಿಮೆಯೆ? ಬೆಂಗಳೂರಿನ ಅಭಿವೃದ್ಧಿಗಾಗಿ ಮರಳು ಸಾಗಿಸಿ ಸುತ್ತಲಿನ ಮೂರು ಜಿಲ್ಲೆಗಳ ಹಳ್ಳಕೊಳ್ಳ ಬತ್ತಿವೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಮುಂಬೈಯ ಮಹಾಡ್ ಎಂಬಲ್ಲಿ ಸಾವಿತ್ರಿ ನದಿಯ ಸೇತುವೆ ಕುಸಿದು ಒಂದು ಬಸ್ ನೀರಿಗೆ ಬಿದ್ದು 29 ಜನರು ಮೃತರಾದರು. ನದಿಯಲ್ಲಿ ಅತಿಯಾಗಿ ಮರಳು ಎತ್ತಿದ್ದೇ ಸೇತುವೆ ಕುಸಿತಕ್ಕೆ ಕಾರಣ ಎಂಬುದಾಗಿ ವರದಿಯಾಗಿತ್ತು. ಮಧ್ಯಪ್ರದೇಶದಲ್ಲಿ ಮರಳು ಮಾಫಿಯಾ ವಿರುದ್ಧ ವರದಿ ಮಾಡುತ್ತಿದ್ದ ಸಂದೀಪ್ ಕೊಠಾರಿ ಎಂಬ ಯುವ ಪತ್ರಕರ್ತನನ್ನು ಸುಟ್ಟು ಕೊಂದರು. ಪೋರ್ಚುಗಾಲ್ ದೇಶದಲ್ಲಿ ಸೇತುವೆಯೊಂದು ಕುಸಿದು ಒಂದು ಬಸ್ ಮತ್ತು ಎರಡು ಕಾರುಗಳ ಸಮೇತ 70 ಜನರ ಜಲಸಮಾಧಿಯಾಗಿ ಆಗಿನ ಲೋಕೋಪಯೋಗಿ ಸಚಿವರು ರಾಜೀನಾಮೆ ಕೊಟ್ಟಿದ್ದೂ ಆಗಿದೆ. (ಅಂಥವರು ಈಗಲೂ ಇದ್ದಾರೆ!) ನಂತರದ ತನಿಖೆಯ ಪ್ರಕಾರ, ಸೇತುವೆಗೆ ಐದು ಕಿಲೊಮೀಟರ್ ಕೆಳಗೆ ಡೌರೊ ನದಿಯಲ್ಲಿ ಮರಳು ಎತ್ತಿದ್ದೇ ಈ ದುರಂತಕ್ಕೆ ಕಾರಣವಾಗಿದೆ. ಅಲ್ಲಿ ನದಿಯ ಧಾರೆಯ ತೀವ್ರತೆ ಹೆಚ್ಚಾಗಿ ಅದು ತನ್ನ ತಳವನ್ನೇ ಹಿಮ್ಮೊಗವಾಗಿ ಕೊರೆಯುತ್ತ ಸೇತುವೆಯ ತಳವನ್ನೂ ಕೊರೆದಿತ್ತು. ಕೊಲಂಬಿಯಾ ದೇಶದ ರಾಜಧಾನಿ ಬೊಗೊಟಾ ಬಳಿಯ ಒಂದು ತಗ್ಗಿನಲ್ಲಿ ನೀರಂತೂ ಇಲ್ಲ, ಅಲ್ಲಿರುವ ಮರಳನ್ನು ಯಾರೂ ಕದ್ದೊಯ್ಯದ ಹಾಗೆ ಸಶಸ್ತ್ರ ಪೊಲೀಸ್ ಕಾವಲಿರುವ ಚಿತ್ರವನ್ನು ಕಳೆದ ವರ್ಷ ಬಿಬಿಸಿ ಪ್ರಕಟಿಸಿತ್ತು.

ಈಗೊಂದು ಪ್ರಶ್ನೆ: ಜಗತ್ತಿನ ಮರುಭೂಮಿಗಳಲ್ಲಿ, ಸಮುದ್ರ ತೀರದಲ್ಲಿ ಅಷ್ಟೊಂದು ಮರಳಿನ ರಾಶಿ ಇದೆ. ಆದರೂ ಏಕೆ ನದಿಕೊಳ್ಳ, ಕೆರೆಗಳ ಮರಳೇ ಬೇಕು ಇವರಿಗೆ? ಅದನ್ನು ಅರ್ಥ ಮಾಡಿಕೊಳ್ಳಲು ತುಸು ಕೆಮಿಸ್ಟ್ರಿ, ತುಸು ಕ್ರಿಸ್ಟಲೊಗ್ರಫಿ, ತುಸು ಫಿಸಿಕ್ಸ್ ಅದರಲ್ಲೂ ಫ್ಲುಯಿಡ್ ಡೈನಮಿಕ್ಸ್ ಗೊತ್ತಿರಬೇಕು. ಮರಳುಗಾಡಿನ ಉಸುಕು ಕಣಗಳ ಗಾತ್ರ ತೀರ ಚಿಕ್ಕದು. ಕಾಂಕ್ರೀಟ್‌ಗೆ ಬೇಕಿದ್ದ ಗಟ್ಟಿತನ ಸಿಗಲಾರದು. ಇನ್ನು ಸಮುದ್ರದ ಮರಳಿನಲ್ಲಿ ಉಪ್ಪಿನಂಶ ಜಾಸ್ತಿ ಇರುತ್ತದೆ; ಕಟ್ಟಡದ ಉಕ್ಕಿನ ಕಂಬಿಗಳು ಬೇಗ ತುಕ್ಕು ಹಿಡಿದು ದುರ್ಬಲವಾಗುತ್ತವೆ. ಉಪ್ಪಿನಂಶವನ್ನು ತೊಳೆಯಲು ಸಾಕಷ್ಟು ಶುದ್ಧ ನೀರು ಸಿಗುತ್ತಿಲ್ಲ. ಮೇಲಾಗಿ ಕಡಲತೀರದ ಮರಳುಕಣಗಳ ಅಂಚುಗಳು ಸಾಕಷ್ಟು ಸವೆದಿರುತ್ತವೆ. ಸಿಮೆಂಟನ್ನು ಕಚ್ಚಿ ಕೂರುವುದಿಲ್ಲ ಎನ್ನಲಾಗುತ್ತಿದೆ. ಮರಳಿಗೆ ಬದಲಿಯಾಗಿ ಗ್ರಾನೈಟ್ ಗಣಿಗಳಲ್ಲಿ ಸಿಗುವ ಜಲ್ಲಿಕಲ್ಲಿನ ಪುಡಿಯನ್ನೇ ಕುಟ್ಟಿ ಏಕಗಾತ್ರದ ಕೃತಕ ಮರಳನ್ನು (ಎಮ್ ಸ್ಯಾಂಡ್- ಉತ್ಪಾದಿತ ಮರಳು) ತಯಾರಿಸುವ ತಂತ್ರಜ್ಞಾನ ಬಂದಿದೆ. ಅದರ ಉತ್ಪಾದನಾ ವೆಚ್ಚವೂ ನದಿಯ ಮರಳಿಗಿಂತ ಶೇಕಡಾ 30-40ರಷ್ಟು ಕಡಿಮೆ ಇದೆ. ಗಣಿಪಕ್ಕದ ಫ್ಯಾಕ್ಟರಿಯಲ್ಲಿ ಡೀಸೆಲ್ ಹೊಗೆ ವಿಪರೀತ ಬರುತ್ತದಾದರೂ ಮರಳು ಸಾಗಣೆಯಲ್ಲಿ ಅದಕ್ಕಿಂತ ಜಾಸ್ತಿ ಭೂಬಿಸಿ ಏರುತ್ತದೆ. ಒಟ್ಟಾರೆ ಹೋಲಿಕೆಯಲ್ಲಿ ಕೃತಕ ಮರಳೇ ಉತ್ತಮ ಹೌದಾದರೂ ಅದಕ್ಕೆ ಬೇಡಿಕೆ ಹೆಚ್ಚುತ್ತಿಲ್ಲ ಏಕೆಂದರೆ ‘ಕೃತಕ ಮರಳು ಒಳ್ಳೆಯದಲ್ಲ, ದೂಳೇ ಜಾಸ್ತಿ’ ಎಂದು ಕಟ್ಟಡ ಗುತ್ತಿಗೆದಾರರಿಗೆ, ಮಾಲೀಕರಿಗೆ ಬಿಂಬಿಸಲು ಮರಳುದೊರೆಗಳು ಏನೆಲ್ಲ ತಂತ್ರ ಬಳಸುತ್ತಾರೆ. ನದಿಮರಳಿನ ಧ್ವಂಸಕಾರಿ ಚರಿತ್ರೆ ಗೊತ್ತಿದ್ದ, ಪರಿಸರ ಪ್ರಜ್ಞೆ ಇದ್ದ, ಸುಶಿಕ್ಷಿತ ಸಿವಿಲ್ ಎಂಜಿನಿಯರ್, ಆರ್ಕಿಟೆಕ್ಟ್‌ಗಳು ಮಾತ್ರ ಎಮ್ ಸ್ಯಾಂಡನ್ನು ಶಿಫಾರಸು ಮಾಡುತ್ತಾರೆ. ಅಂಥವರ ಸಂಖ್ಯೆ ಹೆಚ್ಚಾಗಲೆಂದು ಆಶಿಸಬೇಕಷ್ಟೆ. ಇನ್ನು, ಬ್ರಿಟನ್ ಮಾದರಿಯಲ್ಲಿ ಹಳೇ ಕಟ್ಟಡಗಳನ್ನೇ ಕುಟ್ಟಿ ಮರಳನ್ನು ರೀಸೈಕಲ್ ಮಾಡೋಣವೆಂದರೆ ಅಂಥವು, ಅಂಥವರು ನಮ್ಮಲ್ಲೆಲ್ಲಿ?

ಮಲೇಷ್ಯಾದಿಂದ ಮರಳು ಬರುವಂತಾದರೆ ನಮ್ಮ ಪರಿಸರ ಉಳಿದೀತು ಎಂದು ಸರ್ಕಾರ ಆಶಿಸುತ್ತದೇನೊ. ಜಗತ್ತು ಹೇಗಾದರೇನು, ನಾವು ಸುಖದಲ್ಲಿದ್ದರೆ ಸಾಕು ಎಂಬ ಹಳೇ ಬ್ರಿಟಿಷ್ ಚಕ್ರಾಧಿಪತ್ಯದ ಧೋರಣೆ ಈಗ ಎಲ್ಲ ರಾಷ್ಟ್ರಗಳಲ್ಲೂ ಬೇರೂರಿದೆ. ನಮಗೆ ಮರಳು ಪೂರೈಕೆ ಮಾಡಿ ಮಲೇಷ್ಯಾ ನೆಮ್ಮದಿಯಲ್ಲಿದ್ದೀತೆ? ಅಷ್ಟೊಂದು ಮರಳಿನ ಸಂಪತ್ತು ಅಲ್ಲಿದೆಯೆ? ಅದಂತೂ ಸಾಧ್ಯವಿಲ್ಲ. ವಿಸ್ತೀರ್ಣದಲ್ಲಿ ಅದು ನಮ್ಮ ದೇಶದ ಶೇಕಡಾ 10ರಷ್ಟಿದೆ ಅಷ್ಟೆ. ಕೇರಳ, ತಮಿಳುನಾಡು ಸೇರಿಸಿದಷ್ಟು ಚಿಕ್ಕ ದೇಶ. ನಮ್ಮ ಪಶ್ಚಿಮಘಟ್ಟಗಳ ಹಾಗೆ ದಟ್ಟ ಅರಣ್ಯಗಳಿವೆ. ನಮ್ಮ ದೇಶ ತಲಾಪ್ರಜೆಯ ಆರೋಗ್ಯಕ್ಕಾಗಿ 5 ಡಾಲರ್ ವ್ಯಯಿಸಿದರೆ ಮಲೇಷ್ಯಾ 253 ಡಾಲರ್ ಹೂಡುತ್ತಿದೆ. ಶಿಕ್ಷಣಕ್ಕಾಗಿ ನಾವು ತಲಾ 57 ಡಾಲರ್ ವೆಚ್ಚ ಮಾಡಿದರೆ ಅಲ್ಲಿನ ಸರ್ಕಾರ 472 ಡಾಲರ್ ವಿನಿಯೋಗ ಮಾಡುತ್ತಿದೆ. ಹಾಗಿದ್ದರೆ ಅಲ್ಲಿನ ಸುಶಿಕ್ಷಿತ ಪ್ರಜೆಗಳು ಮರಳು ಮಾಫಿಯಾ ವಿರುದ್ಧ ಹೋರಾಡಬೇಕಿತ್ತಲ್ಲ? ಹೌದು, ಪರಿಸರದ ಬಗ್ಗೆ ಅಲ್ಲಿನವರ ಕಾಳಜಿ ಜಾಸ್ತಿ ಇದೆ. ಮರಳು ಗಣಿಗಾರಿಕೆ ವಿರುದ್ಧ ಅಲ್ಲಿ ಅನೇಕ ಪ್ರತಿಭಟನೆಗಳು ನಡೆದಿವೆ. ಕುವಾಲಾ ಮುಡಾ ಅಳಿವೆಯಲ್ಲಿ ಮರಳಿನ ಗಣಿಗಾರಿಕೆ ತಮ್ಮ ವೃತ್ತಿಗೆ ಧಕ್ಕೆ ತಂದಿದೆ ಎಂದು ಮೀನುಗಾರರು ಚಳವಳಿ ಮಾಡಿದ್ದಾರೆ. ಅಲ್ಲಿನ ಬಾತಾಂಗ್ ಬೇನಾರ್ ನದಿ ಸಂಪೂರ್ಣ ಹಳದಿ ವರ್ಣಕ್ಕೆ ತಿರುಗಿ, ಜೀವಪರಿಸರ ಧ್ವಂಸವಾಗಿದ್ದಕ್ಕೆ ಅನಿಯಂತ್ರಿತ ಮರಳು ಗಣಿಗಾರಿಕೆಯೇ ಕಾರಣ ಎಂದು ಅಲ್ಲಿನ ‘ಸಬ್ಬಾತ್ ಅಲಾಂ ಮಲೇಷ್ಯಾ’ ಸಂಘಟನೆ ಕೂಗೆಬ್ಬಿಸಿದೆ. ಅಳಿವೆಯಲ್ಲಿ ಮರಳು ತೆಗೆದರೆ ದೋಣಿಗಳ ಓಡಾಟಕ್ಕೆ ಸಲೀಸಾಗುತ್ತದೆ ಎಂದೆಲ್ಲ ಅವೈಜ್ಞಾನಿಕ ಸಬೂಬು ಕೊಡುವ ಸರ್ಕಾರಿ ಎಂಜಿನಿಯರ್‌ಗಳು ಸಖತ್ ಟೀಕೆಗೆ ಗುರಿಯಾಗಿದ್ದಾರೆ. ಆದರೆ ಮಲೇಷ್ಯಾ ಸರ್ಕಾರವೂ ಗಣಿ ಮಾಫಿಯಾಗಳ ಮುಷ್ಟಿಯಲ್ಲಿದ್ದಂತಿದೆ. ಈಚೆಗೆ ಅಲ್ಲಿನ ಬಳಕೆದಾರರ ಜಾಲತಾಣದಲ್ಲಿ ಒಂದು ತೀಕ್ಷ್ಣ ಕಾರ್ಟೂನ್ ಪ್ರಕಟವಾಗಿತ್ತು: ಉಸುಕಿನ ಗಡಿಯಾರದ (ಗಂಟೆ-ಗ್ಲಾಸ್) ಮೇಲಿನ ಭಾಗದಲ್ಲಿ ಹಳ್ಳಿ-ಹೊಲ, ಮೃಗಪಕ್ಷಿ, ಗುಡ್ಡ ಬೆಟ್ಟಗಳೆಲ್ಲ ಚಿನ್ನದ ಮರಳಿನ ರೂಪದಲ್ಲಿ ಆಲಿಕೆಯ ಮೂಲಕ ಕೆಳಕ್ಕೆ ಸೋರುತ್ತಿದೆ. ಅದು, ಕೆಳಕ್ಕೆ ಕೂತ ಡೊಳ್ಳುಭೂಪನ ಗಂಟಲಿಗೆ ನೇರವಾಗಿ ಸುರಿಯುತ್ತಿದೆ. ನಮ್ಮಲ್ಲೂ ಹೀಗೇ ತಾನೆ?

ಮೂವತ್ತು ವರ್ಷಗಳ ಹಿಂದೆ ನಮ್ಮ ಆರು ರಾಜ್ಯಗಳ ಮೂಲಕ ಪಶ್ಚಿಮಘಟ್ಟ ಉಳಿಸಿ ಹೆಸರಿನ ಜಂಬೋ ಜಾಥಾ ನಡೆದಿತ್ತು. ಡಾ. ಶಿವರಾಮ ಕಾರಂತರು ಡಿಸೆಂಬರ್ 15ರಂದು ಭಾಗಮಂಡಲದಲ್ಲಿ ಜಾಥಾ ಉದ್ದೇಶಿಸಿ, ಬಡವರ ಬಾಯಿಗೆ ಮಣ್ಣು ಸುರಿಯುವ ವಿಧ್ವಂಸಕ ವಿಕಾಸದ ವಿರುದ್ಧ ಗರ್ಜಿಸಿದ್ದರು. ಆ ಪಾದಯಾತ್ರೆಯ ನೆನಪಿಗಾಗಿ ನಾಳೆ 15ರಂದು ಮತ್ತೆ ಭಾಗಮಂಡಲದಲ್ಲಿ ನೆರೆಗೂದಲ ನಾಗರಿಕರು ಸಭೆ ಸೇರಲಿದ್ದಾರೆ. ಅಭಿವೃದ್ಧಿಯ ಮರೀಚಿಕೆಯನ್ನು ಬೆನ್ನಟ್ಟಿ ಕಾಂಕ್ರೀಟ್ ಕಾಡುಗಳನ್ನು ಸೇರಿದ ಪಶ್ಚಿಮ ಘಟ್ಟಗಳ ಯುವಕರು ‘ಮರಳಿ ಮಣ್ಣಿಗೆ’ ಬಂದಾರೆಯೆ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.