ಶನಿವಾರ, ಮಾರ್ಚ್ 6, 2021
29 °C

ಯಾರಿಗೆ ಒಲಿಯುವರು ಗುಜರಾತಿನ ಆದಿವಾಸಿಗಳು?

ಡಿ. ಉಮಾಪತಿ Updated:

ಅಕ್ಷರ ಗಾತ್ರ : | |

ಯಾರಿಗೆ ಒಲಿಯುವರು ಗುಜರಾತಿನ ಆದಿವಾಸಿಗಳು?

ಗುಜರಾತಿನ 2002ರ ದಂಗೆಯ ದಿನಗಳು. ಬೃಹತ್ ಬೇವಿನ ಮರವೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದರು. ನೂರು ವರ್ಷಗಳಷ್ಟು ಹಳೆಯ ಮರ. ಹತ್ತು ದಿನಗಳ ಕಾಲ ಇಷ್ಟಿಷ್ಟಾಗಿ ಜೀವಂತ ಸುಟ್ಟು ಹೋಯಿತು. ದಾರಿಹೋಕರಿಗೆ ನೆರಳು ನೀಡುವುದ ಬಿಟ್ಟರೆ ಈ ಬೇವಿನ ಮರಕ್ಕೆ ಧರ್ಮ ಇತ್ತೇ? ಹಿಂದೂವೂ ಅಲ್ಲ, ಮುಸ್ಲಿಂ ಕೂಡ ಆಗಿರಲಿಲ್ಲ. ಅದೊಂದು ಅಪ್ಪಟ ಆದಿವಾಸಿಯಂತೆಯೇ ಅಲ್ಲವೇ? ಅದನ್ನು ಅವರು ಯಾಕಾಗಿ ಸುಟ್ಟರು? ಯಾರ ಶತ್ರುವಾಗಿತ್ತು ಆ ಬೇವಿನ ಮರ?

‘ಗುಜರಾತಿನ ಆದಿವಾಸಿಗಳನ್ನೂ ಆ ಪುರಾತನ ಬೇವಿನ ಮರದಂತೆಯೇ ನಾಶ ಮಾಡಲಾಗುತ್ತಿದೆ. ಕೋಮುವಾದಿ ರಾಜಕಾರಣದಿಂದ ದೂರವಿದ್ದ ಜನಸಮುದಾಯ ಅದು. ಹಿಂದೂ ವ್ಯಾಪಾರಿ ವರ್ಗಗಳ (ಬನಿಯಾ) ಪರವಾಗಿ, ಮುಸಲ್ಮಾನ ಲೇವಾದೇವಿಗಾರರ ವಿರುದ್ಧದ ಹುಸಿ ಯುದ್ಧದಲ್ಲಿ ಅವರನ್ನು ಹೂಡಲಾಯಿತು’ ಎನ್ನುತ್ತಾರೆ ಹಿರಿಯ ಭಾಷಾ ಶಾಸ್ತ್ರಜ್ಞ ಮತ್ತು ಬರಹಗಾರ ಗಣೇಶ ದೇವಿ.

ಗುಜರಾತಿನ ಆದಿವಾಸಿಗಳು 2002ರ ಮುಸ್ಲಿಂ ವಿರೋಧಿ ದಂಗೆಗಳಲ್ಲಿ ಪಾಲ್ಗೊಂಡಿದ್ದರು. ವಿಶೇಷವಾಗಿ ಮುಸಲ್ಮಾನರ ಆಸ್ತಿಪಾಸ್ತಿಗಳ ಲೂಟಿಗೆಂದೇ ಅವರನ್ನು ನಿಯೋಜಿಸಲಾಗಿತ್ತು.

ಚುನಾವಣೆ ಕಣದಲ್ಲಿರುವ ಗುಜರಾತಿನ ಬಲಿಷ್ಠ ಪಾಟೀದಾರ ಸಮುದಾಯವನ್ನು ಜನಸಂಖ್ಯೆಯಲ್ಲಿ ಸರಿಗಟ್ಟುವ ಮತ್ತೊಂದು ಜನಸಮುದಾಯ ಆದಿವಾಸಿಗಳದು. 90 ಲಕ್ಷದಷ್ಟಿರುವ (ಒಟ್ಟು ಜನಸಂಖ್ಯೆಯ ಶೇ 15ರಷ್ಟು)ಆದಿವಾಸಿಗಳು ಕಂಡರೂ ಕಾಣಿಸಿಕೊಳ್ಳದಂತೆ ಬದುಕಿರುವವರು. ಪರಿಶಿಷ್ಟ ಪಂಗಡಗಳಿಗೆಂದು ಗುಜರಾತಿನ 27 ವಿಧಾನಸಭಾ ಕ್ಷೇತ್ರಗಳು ಮೀಸಲು. 35 ಕ್ಷೇತ್ರಗಳಲ್ಲಿಆದಿವಾಸಿಗಳ ಮತಗಳು ನಿರ್ಣಾಯಕ. ಆದರೂ ಜನಸಂಖ್ಯೆಗೆ ತಕ್ಕ ‘ರಾಜಕೀಯ’ ಪ್ರಾತಿನಿಧ್ಯ ಅವರಿಗೆ ದಕ್ಕಿಲ್ಲ. ನಾಲ್ಕು ದಶಕಗಳ ತನ್ನ ಆಳ್ವಿಕೆಯಲ್ಲಿ ಕಾಂಗ್ರೆಸ್ ಪಕ್ಷ ಅವರನ್ನು ಅಕ್ಷರ ಬಾರದ ನಿರ್ಗತಿಕರನ್ನಾಗಿಯೇ ಇರಿಸಿತು. ಕಾಂಗ್ರೆಸ್ ವೋಟ್‌ ಬ್ಯಾಂಕ್‌ ಎಂದೇ ಬಹುಕಾಲ ಪರಿಗಣಿಸಲಾಗಿದ್ದವರ ‘ನಿಷ್ಠೆ’ ಇತ್ತೀಚಿನ ವರ್ಷಗಳಲ್ಲಿ ಕದಲಿದೆ. 27ರಲ್ಲಿ ಹನ್ನೊಂದು ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿತ್ತು.

ಜಲ- ಜಂಗಲ್- ಜಮೀನುಗಳು ಇವರ ಕೈ ತಪ್ಪಿವೆ. ಕಾರ್ಖಾನೆಗಳ ತ್ಯಾಜ್ಯದಿಂದಾಗಿ ಕೊಳವೆ ಬಾವಿಗಳ ನೀರು ಮಲಿನಗೊಂಡಿದೆ. ಕೈಸೇರುವ ಜುಜುಬಿ ಕೂಲಿಯಲ್ಲಿ ಶುದ್ಧ ಕುಡಿಯುವ ನೀರನ್ನೂ ಖರೀದಿಸಬೇಕಾದ ಪರಿಸ್ಥಿತಿ. ನಿರುದ್ಯೋಗ, ಕನಿಷ್ಠ ಕೂಲಿ ದರಗಳಿಂದ ಹೊಟ್ಟೆಪಾಡು ದುರ್ಭರವಾಗಿ ಕಾಡಿದೆ ಉದ್ಯೋಗಕ್ಕಾಗಿ ಇವರ ಪರಂಪರಾಗತ ವಾರ್ಷಿಕ ವಲಸೆ ಇನ್ನೂ ನಿಂತಿಲ್ಲ. ಆದಿವಾಸಿಗಳಲ್ಲದವರಿಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ

ಪತ್ರಗಳನ್ನು ರಾಜ್ಯ ಸರ್ಕಾರ ನೀಡತೊಡಗಿದೆ ಎಂಬ ಅಸಮಾಧಾನ ಹೊಗೆಯಾಡಿದೆ. ರಾಜ್ಯದ ಪೂರ್ವ ಸರಹದ್ದಿನ ಉದ್ದದ ಆದಿವಾಸಿ ಸೀಮೆಯಲ್ಲಿ ಪ್ರತ್ಯೇಕ ಭಿಲಿಸ್ತಾನ ರಾಜ್ಯಕ್ಕಾಗಿ ದನಿ ಎದ್ದಿದೆ.

ಶಾಂತಿಯುತ ಕಲ್ಯಾಣ ಕಾರ್ಯಗಳಿಂದ ಒಲಿಸಿಕೊಳ್ಳಲು ನೋಡಿದ ಕ್ರೈಸ್ತ ಮಿಷನರಿಗಳು ಮತ್ತು ಜೋರು ಜಬರದಸ್ತು ಬೆದರಿಕೆಯನ್ನೂ ಬಳಸಿದ ಹಿಂದೂವಾದಿಗಳ ಧರ್ಮಾಂತರ ಪ್ರಯತ್ನಗಳು ಆದಿವಾಸಿ ಸಂಸ್ಕೃತಿಯನ್ನು ನಲುಗಿಸಿವೆ. ಅಸ್ಮಿತೆಗೆ ಆಳದ ಪೆಟ್ಟು ನೀಡಿವೆ.

ವಡೋದರ, ನರ್ಮದಾ, ಪಂಚಮಹಲ್ ಸಾಬರ್ ಕಾಂಠಾ ಹಾಗೂ ಬನಸ್ ಕಾಂಠಾ ಜಿಲ್ಲೆಗಳ ಉದ್ದಕ್ಕೆ ಸಾಗುವುದು ಆದಿವಾಸಿ ಸೀಮೆ. ಈ ಎಲ್ಲ ಜಿಲ್ಲೆಗಳ ರಾಜಕೀಯ ಆರ್ಥ ವ್ಯವಸ್ಥೆಯನ್ನು ಗುಜರಾತಿನ ಇತರ ಭಾಗಗಳ ರಾಜಕೀಯ ಆರ್ಥವ್ಯವಸ್ಥೆಯ ಜೊತೆ ಬೆಸೆಯಲಾಗಿದೆ. ಆದಿವಾಸಿಗಳಲ್ಲದ ಭೂಮಾಲೀಕ, ವಾಣಿಜ್ಯ ಹಿತಾಸಕ್ತಿಗಳು, ಖಾಸಗಿ ಬಂಡವಾಳ ಹೂಡಿಕೆ, ರಾಜ್ಯ ಸರ್ಕಾರಿ ಒಡೆತನದ ಯೋಜನೆಗಳು ಈ ಸೀಮೆಯನ್ನು ಭೇದಿಸಿ ಬೇರು ಬಿಟ್ಟಿವೆ. ಪರಿಣಾಮವಾಗಿ ಆದಿವಾಸಿಗಳ ಜಮೀನುಗಳು ದೊಡ್ಡ ಪ್ರಮಾಣದಲ್ಲಿ ಪರಭಾರೆಯಾಗಿವೆ, ಅವರನ್ನು ಒಕ್ಕಲೆಬ್ಬಿಸಲಾಗಿದೆ, ಅಂಚಿಗೆ ನೂಕಲಾಗಿದೆ. ಪ್ರಭುತ್ವದ ಕ್ರೂರ ಅರಣ್ಯನೀತಿಯಿಂದಾಗಿ ಅತಂತ್ರರಾಗಿದ್ದ ಆದಿವಾಸಿಗಳನ್ನು, ಕೈಗಾರಿಕೆ- ಕೃಷಿ ನೀತಿಗಳು ಇನ್ನಷ್ಟು ಕಂಗೆಡಿಸಿದವು.

ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ವನವಾಸಿ ಕಲ್ಯಾಣ ಕೇಂದ್ರಗಳ ಮೂಲಕ ಮಧ್ಯ ಮತ್ತು ದಕ್ಷಿಣ ಗುಜರಾತಿನ ಆದಿವಾಸಿ ಸೀಮೆಯಲ್ಲಿ ಬಹು ಕಾಲದಿಂದ ಸದ್ದಿಲ್ಲದೆ ಕೆಲಸದಲ್ಲಿ ತೊಡಗಿದೆ. ಆಸ್ಪತ್ರೆಗಳು, ಶಿಶುಮಂದಿರಗಳನ್ನು ತೆರೆದಿದೆ. ಬಲಿಷ್ಠ ಪಾಟೀದಾರರು ಕಾಂಗ್ರೆಸ್ ನತ್ತ ವಾಲಿರುವುದು ಆದಿವಾಸಿಗಳನ್ನು ಆತಂಕಕ್ಕೆ ಈಡು ಮಾಡಿದೆ. 80ರ ದಶಕಗಳಲ್ಲಿ ಮೀಸಲಾತಿ ವಿರುದ್ಧ ಪಾಟೀದಾರರು ಭುಗಿಲೆಬ್ಬಿಸಿದ್ದ ಹಿಂಸಾಚಾರದ ಬಿಸಿಯನ್ನು ಆದಿವಾಸಿಗಳು ಇನ್ನೂ ಮರೆತಿಲ್ಲ. ಪಾಟೀದಾರರ ಸಿಟ್ಟನ್ನು ಎದುರಿಸಿರುವ ಬಿಜೆಪಿ, ಅವರಿಂದ ಆಗುವ ಮತಗಳ ನಷ್ಟವನ್ನು ಆದಿವಾಸಿಗಳು ಮತ್ತು ಕೆಲ ಹಿಂದುಳಿದ ವರ್ಗಗಳನ್ನು ಒಲಿಸಿಕೊಂಡು ಭರ್ತಿ ಮಾಡಿಕೊಳ್ಳಲು ಹವಣಿಸಿದೆ.

ಆದಿವಾಸಿ ವಿಕಾಸ ಗೌರವ ಯಾತ್ರೆಯನ್ನು ಬಿಜೆಪಿ ಈ ವರ್ಷದ ಆರಂಭದಲ್ಲೇ ನಡೆಸಿತ್ತು. ಹನ್ನೆರಡು ದಿನಗಳ ಯಾತ್ರೆ ಹದಿನೈದು ಜಿಲ್ಲೆಗಳ 50 ತಾಲ್ಲೂಕುಗಳಲ್ಲಿ ಸಂಚರಿಸಿತ್ತು. ಬಿಜೆಪಿ ತಲೆಯಾಳುಗಳು ಆದಿವಾಸಿಗಳ ಮನೆಯಲ್ಲಿ ಸಹಭೋಜನ ಮಾಡಿದರು. ಸಣ್ಣಪುಟ್ಟ ಅಡವಿ ಉತ್ಪನ್ನಗಳನ್ನು ಆದಾಯ ಮೂಲವಾಗಿ ಬಳಸುವ ಹಕ್ಕನ್ನು ತಮ್ಮ ಸರ್ಕಾರ ಕೊಡಮಾಡಿರುವ ವಿಷಯವನ್ನು ಮನದಟ್ಟು ಮಾಡಿಸಿ ಆದಿವಾಸಿಗಳನ್ನು ಒಲಿಸಿಕೊಳ್ಳುವುದು ಈ ಯಾತ್ರೆಯ ಉದ್ದೇಶವಾಗಿತ್ತು. ಆದರೆ 2006ರ ಅರಣ್ಯ ಹಕ್ಕು ಕಾಯಿದೆಯ ಪ್ರಕಾರ ಆದಿವಾಸಿಗಳಿಗೆ ಜಮೀನು ಹಂಚಿಕೆಯ ಮಾತನ್ನೇ ಆಡಿಲ್ಲ ಬಿಜೆಪಿ ಸರ್ಕಾರ.

ಆದಿವಾಸಿಗಳ ಪೈಕಿ ಭಿಲ್ಲರದೇ ಮೇಲುಗೈ. ಶೇ 50ರಷ್ಟಿರುವ ಇವರು ಛೋಟಾ ಪಂಚಮಹಲ್ ಜಿಲ್ಲೆಯ ಉದಯಪುರ, ರಾಜಪಿಪ್ಲಾ, ಸಾಗ್ಬಾರಾ, ರತನ್ ಮಲ್, ಬನಸ್ ಕಾಂಠಾ ಜಿಲ್ಲೆಯ ಡಾಂಟಾ ಸೀಮೆಯನ್ನು ಆಳಿದವರು. ಉಳಿದಂತೆ ಬಾರ್ಡಾ. ಕೊಕಣ, ಗಾಮಿಟ್, ವಸಾವಾ, ಗಾರಾಸಿಯಾ, ರಾಬಾರಿ, ಕುಣಬಿ, ಬಾವ್ಚಾ, ಧೋದಿಯಾ, ಹಲಪಾಟಿ ಮುಂತಾದವರು ಆದಿವಾಸಿಗಳ ಪೈಕಿ ಅಲ್ಪಸಂಖ್ಯಾತರು. ಬೆಟ್ಟ ಗುಡ್ಡಗಳು, ಗಿಡಮರಗಳು, ಪ್ರಾಣಿ ಪಕ್ಷಿಗಳು, ಮಳೆ, ಭೂತ, ಗಾಳಿ, ಅಡವಿಯನ್ನು ದೇವರೆಂದು ಪೂಜಿಸುವವರು.

ಭಿಲ್ಲರು, ಕೊಕಣಿಗಳು, ವಾರ್ಲಿಗಳು ತಮಗಿರುವ ತುಂಡು ಭೂಮಿಯಲ್ಲಿ ಬೆಳೆವ ಫಸಲು ವರ್ಷವಿಡೀ ಹೊಟ್ಟೆ ತುಂಬಿಸಲಾರದು. ವಲಸೆ ಹೋಗಿ ಅರೆ ಜೀತಪದ್ಧತಿಯಂತಹ ಸ್ಥಿತಿಗತಿಗಳಲ್ಲಿ ಕೂಲಿ ಮಾಡುತ್ತಾರೆ.

ಡಾಂಗ್ಸ್ ದಟ್ಟಡವಿ ಆದಿವಾಸಿ ಸೀಮೆಯನ್ನು ಬ್ರಿಟಿಷರು ಗೆಲ್ಲಲಾಗದೆ ಭಿಲ್ಲ ರಾಜರಿಂದ ಗುತ್ತಿಗೆ ಪಡೆದು ತೇಗದ ಮರಗಳ ಸಂಪತ್ತನ್ನು ಸೂರೆ ಹೊಡೆದರು. ಗುಜರಾತಿನ ಅತ್ಯಂತ ಸಣ್ಣ ಜಿಲ್ಲೆಯಿದು. ಭಿಲ್ಲರು ಇಲ್ಲಿನ ಮೂಲನಿವಾಸಿಗಳು. ಚೋದ್ರರು, ಗಾಮಿತ್ ಗಳು, ಕೊಟವಾಲಿಯಾಗಳು, ಕೊಕಣಿಗಳು, ವಾರ್ಲಿಗಳು ಇಲ್ಲಿಗೆ ವಲಸೆ ಬಂದ ಇತರೆ ಆದಿವಾಸಿಗಳು. ಕಾಲಾನುಕ್ರಮದಲ್ಲಿ ಎಲ್ಲರೂ ಬೆರೆತು ಸಮಾನ ಸಂಸ್ಕೃತಿ, ಭಾಷೆ, ರೀತಿ–ರಿವಾಜು, ಸಂಪ್ರದಾಯಗಳು-ನಂಬಿಕೆಗಳ ಡಾಂಗಿ ಅಸ್ಮಿತೆಯನ್ನು ಧರಿಸಿದರು.

ಆದಿವಾಸಿಗಳಿಗೆ ಹಿಂದೂ ದೀಕ್ಷೆ ನೀಡಿ ಧರ್ಮಾಂತರಗೊಳಿಸಲು ವಿಶ್ವಹಿಂದೂ ಪರಿಷತ್ ಮತ್ತು ವನವಾಸಿ ಕಲ್ಯಾಣ ಆಶ್ರಮ, ಶಬರಿ ಮತ್ತು ರಾಮನ ಪುರಾಣ ಕತೆಯ ಪುನರುಜ್ಜೀವನಗೊಳಿಸಿದವು. ಡಾಂಗ್ಸ್, ರಾಮಾಯಣದ ದಂಡಕಾರಣ್ಯವೆಂದೂ, ಸಮೀಪದ ಚಮಕ್‌ ಡೋಂಗರ್ (ಮಿಂಚುವ ಬೆಟ್ಟ)– ರಾಮನು ಶಬರಿ ನೀಡಿದ ಹಣ್ಣುಗಳನ್ನು ಸೇವಿಸಿದ ಸ್ಥಳವೆಂದೂ ಪ್ರಚಾರ ಮಾಡಿ ಶಬರಿ ದೇವಾಲಯ ಕಟ್ಟಿದವು. ನಾಸಿಕ್‌, ಹರಿದ್ವಾರ, ಅಲಹಾಬಾದ್ ಹಾಗೂ ಉಜ್ಜಯಿನಿಯಲ್ಲಿ ನಡೆಯುತ್ತ ಬಂದಿರುವ ನಾಲ್ಕು ಪರಂಪರಾಗತ ಕುಂಭ ಮೇಳಗಳ ಜೊತೆಗೆ ಐದನೆಯ ಶಬರಿ ಕುಂಭ ಮೇಳವನ್ನು 2006ರಲ್ಲಿ ಹುಟ್ಟಿ ಹಾಕಲಾಯಿತು. ಐದು ಲಕ್ಷ ಆದಿವಾಸಿಗಳನ್ನು ಈ ಮೇಳಕ್ಕೆ ಕರೆತರಲಾಯಿತು. ಕ್ರೈಸ್ತರನ್ನು ಓಡಿಸಿ ಹಿಂದೂಗಳನ್ನು ಜಾಗೃತಗೊಳಿಸುವುದು

ಈ ಐದನೆಯ ಕುಂಭಮೇಳದ ಉದ್ದೇಶವಾಗಿತ್ತು. ರಾವಣನನ್ನು ಶ್ರೀರಾಮನು ಸಂಹಾರ ಮಾಡಿದಂತೆಯೇ ವಿದೇಶಿ ಕ್ರೈಸ್ತರನ್ನು ಓಡಿಸಿ ಹಿಂದೂ ಧರ್ಮವನ್ನು ರಕ್ಷಿಸಬೇಕೆಂದು ಕರೆ ನೀಡಲಾಗಿತ್ತು. ಭಾರೀ ವೇದಿಕೆಯ ವಿಶಾಲ ಭಿತ್ತಿಯ ಮೇಲೆ ಹತ್ತು ತಲೆಯ ರಾವಣನಿಗೆ ಶ್ರೀರಾಮನು ಬಾಣ ಪ್ರಯೋಗಿಸುವ ಬೃಹತ್ ಚಿತ್ರವನ್ನು ಬರೆಯಲಾಗಿತ್ತು. ಆದಿವಾಸಿಗಳ ಅಸ್ಮಿತೆ, ಆಹಾರ ಪದ್ಧತಿ, ಉಡುಗೆ ತೊಡುಗೆ, ಸಂಸ್ಕೃತಿ, ಜೀವನವಿಧಾನಗಳ ಹೈಂದವೀಕರಣ 1998

ರಷ್ಟು ಹಿಂದೆಯೇ ಆರಂಭ ಆಗಿತ್ತು. ಸಂಘದ ಈ ಪ್ರಯತ್ನಕ್ಕೆ ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲವಿತ್ತು.

ಬೋರ್ಖಾಲ್ ದೇವ್ ಎಂಬ ಆದಿವಾಸಿ ದೇವರಿಗೆ ಸಾರಾಯಿ ಮತ್ತು ಕೋಳಿ ಮಾಂಸದ ಎಡೆ ಇಡಲಾಗುತ್ತಿತ್ತು. ಈ ದೇವರನ್ನು ಸಾರಾಯಿ ಸೇವಿಸದ ಮತ್ತು ಸಸ್ಯಾಹಾರಿ ದತ್ತ ಭಗವಾನ್ ಆಗಿ ಧರ್ಮಾಂತರಿಸಲಾಗಿದೆ. ಆದಿವಾಸಿ ರಾಜರು ಮತ್ತು ನಾಯಕರು ಆರಂಭದಲ್ಲಿ ಪ್ರತಿಭಟಿಸಿದರಾದರೂ ಆನಂತರ ತೆಪ್ಪಗಾದರು. ಸ್ಥಳೀಯ ಇತಿಹಾಸ ಪುರಾಣ ಕಥನಗಳಲ್ಲಿ ಶಬರಿಯ ಪ್ರಸ್ತಾಪವೇ ಇರಲಿಲ್ಲ. ಆಕೆಯ ಹೆಸರಿನ ಪ್ರಸ್ತಾಪ ಆದದ್ದೇ ಇತ್ತೀಚೆಗೆ. ಪ್ರವಾಸೋದ್ಯಮ ಇಲಾಖೆಯ ಸಾಹಿತ್ಯದಲ್ಲೂ ಆಕೆಯ ಕುರಿತ ಉಲ್ಲೇಖ ಇರಲಿಲ್ಲ. ಹೀಗಾಗಿ ಶಬರಿ ಈ ಸೀಮೆಗೆ ಸೇರಿದ್ದಳೇ ಎಂಬ ಬಗೆಗೆ ಸ್ಥಳೀಯರಲ್ಲಿ ಸಂದೇಹಗಳುಂಟು.

ಗುಜರಾತನ್ನು 1995ರಿಂದ ಸತತವಾಗಿ ಆಳುತ್ತಿರುವುದು ಬಿಜೆಪಿ ಸರ್ಕಾರ. ಈ 22 ವರ್ಷಗಳ ಕಾಲ ಬಿಜೆಪಿ ಸರ್ಕಾರಗಳ ಸಾಧನೆ ವೈಫಲ್ಯಗಳು ಚುನಾವಣೆ ಪ್ರಚಾರದ ಚರ್ಚೆಯ ವಿಷಯವಸ್ತು ಆಗಬೇಕು. ಇನ್ನೂ ಹಲವು ಹತ್ತು ವಿಚಾರಗಳು ಈ ಕೇಂದ್ರದ ಸುತ್ತ ಗಿರಕಿ ಹೊಡೆಯಲೂ ಬೇಕು. ತಿರುವು ಮುರುವಾದರೆ ಉಪ್ಪಿನಕಾಯಿಯೇ ಊಟ ಆದಂತೆ ಮತ್ತು ಬಾಲವು ನಾಯಿಯನ್ನು ಅಲ್ಲಾಡಿಸಿದಂತೆ.

ಗುಜರಾತಿನ ಚುನಾವಣಾ ಸಂವಾದವನ್ನು ಪ್ರಧಾನಿ ಮತ್ತು ಅವರ ಸಹೋದ್ಯೋಗಿಗಳು ಹೀಗೆ ದಾರಿ ತಪ್ಪಿಸಿ ಉಪ್ಪಿನ ಕಾಯಿಯನ್ನೇ ಊಟವೆಂದು ಬಡಿಸತೊಡಗಿದ್ದಾರೆ. ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗ, ಬಡತನದಂತಹ ಸುಡು ವಾಸ್ತವಗಳನ್ನು ಮರೆಮಾಚಿ ಜನತೆಯ ಅನುದಿನದ ಸಂಕಟಗಳನ್ನು ಚಾಪೆಯ ಕೆಳಗೆ ಸರಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಬಾಯಿಬಡುಕತನವೇ ಬಿಜೆಪಿ ಚುನಾವಣಾ ಪ್ರಚಾರದ ಬಂಡವಾಳ ಆಗಿರುವುದು ಜನತಾಂತ್ರಿಕ ಸಂವಾದ ಕ್ರಮದ ದುರಂತ.

ಇಪ್ಪತ್ತೆರಡು ವರ್ಷಗಳ ಕಾಲ ಮೋದಿ ಬ್ರ್ಯಾಂಡ್‌ನವಿಕಾಸದ ಮೂಸೆಯಲ್ಲಿ ಎರಕ ಹೊಯ್ದು ರೂಪು ತಳೆದಿರುವ ‘ಗುಜರಾತ್ ಅಭಿವೃದ್ಧಿ ಮಾದರಿ’ಯ ಹೆದ್ದಾರಿಯತ್ತ ಸಂವಾದವನ್ನು ಕೈ ಹಿಡಿದು ನಡೆಸಬೇಕಿತ್ತು ಬಿಜೆಪಿ. ಆದರೆ ಈ ಹೆದ್ದಾರಿಗೆ ಬೆನ್ನು ತಿರುಗಿಸಲಾಗಿದೆ. ಅಂಕುಡೊಂಕಿನ ತಗ್ಗು ದಿಣ್ಣೆಗಳ ಒಳದಾರಿಗಳನ್ನು ಕೆದಕಿ ಬೆದಕಲಾಗುತ್ತಿದೆ. ದೇಶದ ಮೂಲೆ ಮೂಲೆ ಸುತ್ತಿ ಭರ್ಜರಿ ಮಾರಾಟ ಮಾಡಿ ಲಾಭ ಗಿಟ್ಟಿಸಿದ ಸರಕು ಗುಜರಾತ್ ಮಾದರಿ. ಇಡೀ ದೇಶ ಖರೀದಿಸಿದ ತನ್ನದೇ ಮಾದರಿಯನ್ನು ಗುಜರಾತ್‌ ಕೈ ಚಾಚಿ ಬಾಚಿಕೊಳ್ಳಬೇಕಿತ್ತಲ್ಲವೇ? ಈ ಮಾದರಿಯ ಪಿತಾಮಹರೆಂದೇ ಆರಾಧಿಸಲಾದ ಮೋದಿಯವರು ಗುಜರಾತಿನ ಅಭಿವೃದ್ಧಿಯ ಯಶೋಗಾಥೆಯನ್ನು ಹಾಡಿ ಹರಸಬೇಕಿತ್ತಲ್ಲವೇ? ಈ ಮಾದರಿಯ ಸಮೃದ್ಧ ಫಲಗಳನ್ನು ಗುಜರಾತಿನ ಜನತೆ ಉಂಡು ತೃಪ್ತಿಯಿಂದ ತೇಗಿದ್ದೇ ನಿಜವಾಗಿದ್ದರೆ ಮೋದಿಯವರ ಪರ ದೊಡ್ಡ ಅಲೆಯೇ ಏಳಬೇಕಿತ್ತು. ಅವರ ರಾಜಕೀಯ ವಿರೋಧಿಗಳು ತರಗೆಲೆಗಳಂತೆ ಹಾರುತ್ತಿರಬೇಕಿತ್ತು. ಹಾರ್ದಿಕ್, ಅಲ್ಪೇಶ್, ಜಿಗ್ನೇಶ್ ಬಹಿರಂಗ ಸಭೆಗಳು ಜನರಿಲ್ಲದೆ ಬಣಗುಡಬೇಕಿತ್ತು. ಆದರೆ ಇಂತಹ ನೋಟಗಳು ದೂರ ದೂರದಲ್ಲೂ ಕಾಣುತ್ತಿಲ್ಲ. ತಾವು ಕಟ್ಟಿ ನಿಲ್ಲಿಸಿದ ಮಾದರಿ ಬಿಕರಿಯಾಗುತ್ತಿಲ್ಲ ಎಂದು ಪ್ರಧಾನಿ ಭಾವಿಸಿದಂತಿದೆ. ಇಲ್ಲವಾದರೆ ಔರಂಗಜೇಬ, ಮೊಘಲ್ ಸಾಮ್ರಾಜ್ಯ ಹಾಗೂ ‘ಹಜ್’ ನಂತಹ (ಬಿಜೆಪಿ ಪ್ರತಿಸ್ಪರ್ಧಿಗಳಾದ ಹಾರ್ದಿಕ್- ಅಲ್ಪೇಶ್- ಜಿಗ್ನೇಶ್ ಅವರಿಗೆ ಇಟ್ಟ ಮುಸ್ಲಿಂ ಧಾರ್ಮಿಕ ಯಾತ್ರೆಯ ಹೆಸರು), ಹಿಂದು-ಮುಸ್ಲಿಂ ಕೋಮು ಧ್ರುವೀಕರಣದ ಹಳೆಯ ಕೀಳು ಸೂತ್ರಕ್ಕೆ ಮರಳಬೇಕಿರಲಿಲ್ಲ. ಗುಜರಾತ್ ಮಾದರಿ ಥಳ ಥಳ ಹೊಳೆದಿದ್ದಲ್ಲಿ ಭೂಮಾಲೀಕ ಪಾಟೀದಾರ ಸಮುದಾಯ, ಭೂಹೀನ ಹಿಂದುಳಿದ -ದಲಿತ ವರ್ಗಗಳ ಯುವಜನರು ಉದ್ಯೋಗಾವಕಾಶಗಳನ್ನು ಬೇಡಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಬೀದಿಗೆ ಇಳಿಯುತ್ತಿರಲಿಲ್ಲ. ಶಿಕ್ಷಣ ಶುಲ್ಕಗಳು ಬಾನೆತ್ತರಕ್ಕೆ ಜಿಗಿದಿವೆಯೆಂಬ ಹತಾಶೆ ಈ ಪರಿ ಸಿಡಿಯಬೇಕಿರಲಿಲ್ಲ. ದಲಿತರ ಬದುಕು ಮೂರಾಬಟ್ಟೆಯಾಗಿ ಅವರು ತಬ್ಬಲಿಗಳಂತೆ ಬಡಿಸಿಕೊಂಡು ರೋದಿಸಬೇಕಿರಲಿಲ್ಲ. ರೈತ ಮತ್ತು ವಣಿಕ ವರ್ಗಗಳೆರಡೂ ಚಡಪಡಿಕೆಗಳಿಂದ ಬಿಡುಗಡೆಯಾಗಿ ನಿರುಮ್ಮಳವಾಗಿರಬೇಕಿತ್ತು. ಮಹಿಳೆ

ಯರು- ತಾಯಂದಿರು ರಕ್ತಹೀನತೆಯಿಂದ ನರಳ ಬೇಕಿರಲಿಲ್ಲ...

ನೆಮ್ಮದಿಯ ಬದುಕು ಕಟ್ಟಿಕೊಡದೆ, ಅಕ್ಷರಗಳ ಅರಿವನ್ನು ನೀಡದೆ ವಂಚಿಸಿದ ಕಾಂಗ್ರೆಸ್‌, ಅಸ್ಮಿತೆಯನ್ನು ಕಸಿದುಕೊಳ್ಳುತ್ತಿರುವ ಬಿಜೆಪಿಯ ನಡುವೆ ಗುಜರಾತಿನ ಆದಿವಾಸಿಗಳು ಕಳೆದು ಹೋಗುತ್ತಿದ್ದಾರೆ ಇಷ್ಟಿಷ್ಟಾಗಿ ಉರಿದು ಸತ್ತ ಬೇವಿನ ಮರದಂತೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.