ಗುರುವಾರ , ಮೇ 19, 2022
20 °C

ರಪೂ ನಿಸ್ತಂತು ಸಂಸಾರ

ಯು.ಬಿ. ಪವನಜ Updated:

ಅಕ್ಷರ ಗಾತ್ರ : | |

ರಪೂ ನಿಸ್ತಂತು ಸಂಸಾರ

ಣಕದಲ್ಲಿ ಆಟ ಆಡಲು ಸಾಮಾನ್ಯ ಕೀಲಿಮಣೆ, ಮೌಸ್ ಮತ್ತು ಹೆಡ್‌ಸೆಟ್‌ಗಳನ್ನು ಬಳಸಿದರೆ ಪೂರ್ತಿ ತೃಪ್ತಿ ದೊರೆಯುವುದಿಲ್ಲ. ಗೇಮಿಂಗ್ ಸಿಸ್ಟಮ್‌ಗೆ ಹೆಚ್ಚಿಗೆ ಹಣ ನೀಡಿ ಅದರ ಪೂರ್ತಿ ಪ್ರಯೋಜನ ಪಡೆಯದಿದ್ದರೆ ಏನು ಸಾಧಿಸಿದಂತಾಯಿತು? ಗಣಕದಲ್ಲಿ ಆಟ ಆಡುವಾಗ ಬಳಸಲೆಂದೇ ವಿಶೇಷ ಕೀಬೋರ್ಡ್, ಮೌಸ್, ಹೆಡ್‌ಸೆಟ್, ಜೋಯ್‌ಸ್ಟಿಕ್, ಇತ್ಯಾದಿಗಳು ಲಭ್ಯವಿವೆ.

ಈ ಮಾರುಕಟ್ಟೆಗೆ ಜಾಗತಿಕ ಮಟ್ಟದಲ್ಲಿ 2011ರಲ್ಲಿ ಪ್ರವೇಶ ಮಾಡಿದ ರಪೂ ಕಂಪೆನಿ ಹಲವು ನಿಸ್ತಂತು (ವೈರ್‌ಲೆಸ್) ಉತ್ಪನ್ನಗಳನ್ನು ತಯಾರಿಸಿದೆ. ಈಗ ಅವು ಭಾರತದಲ್ಲೂ ಲಭ್ಯವಿವೆ. ಈ ಕಂಪೆನಿಯ ಒಂದು ಪ್ರತಿ ನಿಸ್ತಂತು ಕೀಲಿಮಣೆ, ಮೌಸ್ ಮತ್ತು ಹೆಡ್‌ಸೆಟ್‌ಗಳ ವಿಮರ್ಶೆ ಈ ಬಾರಿ.

ರಪೂ ಎಚ್6060 ಬ್ಲೂಟೂತ್ ಹೆಡ್‌ಸೆಟ್

ಇದು ಹೆಸರೇ ತಿಳಿಸುವಂತೆ ಬ್ಲೂಟೂತ್ ತಂತ್ರಜ್ಞಾನವನ್ನು ಬಳಸಿ ಕೆಲಸ ಮಾಡುತ್ತದೆ. ಗಣಕ, ಟ್ಯಾಬ್ಲೆಟ್, ಮೊಬೈಲ್ ಫೋನ್, ಇತ್ಯಾದಿಗಳಲ್ಲೆಲ್ಲಾ ಬ್ಲೂಟೂತ್ ಸೌಲಭ್ಯ ಇದೆಯೋ ಅಲ್ಲೆಲ್ಲ ಇದನ್ನು ಬಳಸಬಹುದು. ಕೆಲವು ನಿಸ್ತಂತು ಹೆಡ್‌ಸೆಟ್‌ಗಳ ಜೊತೆ ಗಣಕದ ಯುಎಸ್‌ಬಿ ಕಿಂಡಿಗೆ ಜೋಡಿಸಲು ಒಂದು ಡಾಂಗಲ್ ದೊರೆಯುತ್ತದೆ.

ಅದನ್ನು ಬಳಸಿದರೆ ಮಾತ್ರ ಆ ಹೆಡ್‌ಸೆಟ್ ಕೆಲಸ ಮಾಡುತ್ತದೆ. ಈ ರಪೂ ಎಚ್6060 ಹೆಡ್‌ಸೆಟ್ ಹಾಗಲ್ಲ. ನಿಮ್ಮ ಗಣಕ ಅಥವಾ ಮೊಬೈಲ್ ಫೋನ್‌ನಲ್ಲಿ ಬ್ಲೂಟೂತ್ ಸೌಲಭ್ಯ ಇದ್ದರೆ ಸಾಕು. ಅದನ್ನು ಬ್ಲೂಟೂತ್ ಮೂಲಕ ಜೋಡಿಸಬಹುದು.

ಗುಣವೈಶಿಷ್ಟ್ಯಗಳು

ಬ್ಲೂಟೂತ್ 2.1 + ಇಡಿಆರ್, ಎಚ್‌ಎಸ್‌ಪಿ, ಎಚ್‌ಎಫ್‌ಪಿ, ಎ2ಡಿಪಿ, 10ಮೀ. ವ್ಯಾಪ್ತಿ, ಸ್ಟಿರಿಯೊ ಧ್ವನಿ, ರಿಚಾರ್ಜೇಬಲ್ ಬ್ಯಾಟರಿ,  20Hz~20KHz ಧ್ವನಿ ಕಂಪನಾಂಕ ವ್ಯಾಪ್ತಿ, 95ಆ ಧ್ವನಿ ಮತ್ತು ಶಬ್ದದ  ಅನುಪಾತ (Signal-to-noise ratio), ಸ್ಪೀಕರ್ ವ್ಯಾಸ 40ಮಿ.ಮೀ., ಸ್ಪೀಕರ್ ಇಂಪೆಡೆನ್ಸ್ 16ಟಞ 2.4 ಗಿಗಾಹರ್ಟ್ಸ್ ಕಂಪನಾಂಕದ ಬ್ಲೂಟೂತ್ ಸಂಪರ್ಕ, ಇತ್ಯಾದಿ. ಒಂದು ಮೇಲ್ದರ್ಜೆಯ ಹೆಡ್‌ಸೆಟ್‌ನ ಎಲ್ಲ ಗುಣಲಕ್ಷಣಗಳು ಇದರಲ್ಲಿವೆ.ಇದರ ತಯಾರಿಕೆಯ ಗುಣಮಟ್ಟ ಚೆನ್ನಾಗಿದೆ. ಕೈಯಲ್ಲಿ ಹಿಡಿದಾಗಿನ ಅನುಭವ ಚೆನ್ನಾಗಿದೆ. ತಲೆಯ ಮೇಲೆ ಹಾಕಲು ಉದ್ದ ಹೆಚ್ಚುಕಡಿಮೆ ಮಾಡಬಹುದಾದ ಪಟ್ಟಿ ಇದೆ. ಇದರ ಹೊರಭಾಗ ಲೋಹ ಹಾಗೂ ಒಳಭಾಗದಲ್ಲಿ ಮೆತ್ತನೆಯ ಕುಶನ್ ಇದೆ. ಆದುದರಿಂದ ತಲೆಗೆ ತೂಕ ಅಥವಾ ಕಿರಿಕಿರಿ ಅನ್ನಿಸುವುದಿಲ್ಲ. ಹೆಡ್‌ಸೆಟ್ ತುಂಬ ತೂಕವಾಗಿಲ್ಲ. ಇದರ ಸ್ಪೀಕರ್‌ಗಳು ಕಿವಿಯ ಹೊರಭಾಗ ಕುಳಿತುಕೊಳ್ಳುವಂತಹವು. ಇಂತಹ ಹೆಡ್‌ಸೆಟ್‌ಗಳಲ್ಲಿ ಸಾಮಾನ್ಯವಾಗಿ ಇವು ಒಂದು ಕಪ್ ಆಕಾರದಲ್ಲಿರುತ್ತವೆ. ಆದರೆ ಈ ಹೆಡ್‌ಸೆಟ್‌ನಲ್ಲಿ ಹಾಗಿಲ್ಲ. ಇದು ಸಪಾಟವಾಗಿದೆ.ಆದುದರಿಂದ ಇದು ಇತರೆ ಹೆಡ್‌ಸೆಟ್‌ಗಳಂತೆ ಕಿವಿಯನ್ನು ಪೂರ್ತಿ ಆವರಿಸಿಕೊಳ್ಳವುದಿಲ್ಲ. ಆದರೆ ಇದರಿಂದಾಗಿ ಆಲಿಸುವ ಕ್ರಿಯೆಗೆ ಯಾವ ತೊಂದರೆಯೂ ಇಲ್ಲ. ಹಾಗೆ ನೋಡಿದರೆ ಕಿವಿಯನ್ನು ಪೂರ್ತಿ ಮುಚ್ಚದಿರುವುದರಿಂದ ಗಂಟೆಗಟ್ಟಲೆ ಹೆಡ್‌ಸೆಟ್ ಬಳಸಿದರೆ ಯಾವ ಕಿರಿಕಿರಿ ಅನ್ನಿಸುವುದಿಲ್ಲ.ಈ ಹೆಡ್‌ಸೆಟ್‌ನ ಧ್ವನಿಯ ಗುಣಮಟ್ಟ ಚೆನ್ನಾಗಿದೆ. ಅದರಲ್ಲೂ ಅತಿ ಕಡಿಮೆ ಕಂಪನಾಂಕದ ಧ್ವನಿಯ (bass)ಪುನರುತ್ಪತ್ತಿ ಚೆನ್ನಾಗಿದೆ. ಅತಿ ಹೆಚ್ಚಿನ ಕಂಪನಾಂಕದ ಧ್ವನಿಯ (treble) ಗುಣಮಟ್ಟ ಇನ್ನೂ ಚೆನ್ನಾಗಿದ್ದರೆ ಒಳ್ಳೆಯದಿತ್ತು. ನಿಮ್ಮ ಗಣಕ ಅಥವಾ ಫೋನಿನಲ್ಲಿರುವ ಇಕ್ವಲೈಸರ್ ಬಳಸಿದರೆ ಉತ್ತಮ ಆಲಿಸುವ ಅನುಭವ ಪಡೆಯಬಹುದು. ವಾಲ್ಯೂಮ್ ಚೆನ್ನಾಗಿದೆ. ಸಾಮಾನ್ಯ ಬಳಕೆಯಲ್ಲಿ ಇದನ್ನು ಪೂರ್ತಿ ಏರಿಸುವ ಅಗತ್ಯ ಬರುವುದಿಲ್ಲ. ಎಡಕಿವಿ ಮೇಲೆ ಕುಳಿತುಕೊಳ್ಳುವ ಹೆಡ್‌ಸೆಟ್‌ನಲ್ಲಿ ಬಟನ್‌ಗಳಿವೆ. ವಾಲ್ಯೂಮ್ ಏರಿಸಲು, ಇಳಿಸಲು, ಮುಂದಿನ ಅಥವಾ ಹಿಂದಿನ ಹಾಡುಗಳಿಗೆ ಹೋಗಲು ಬಟನ್‌ಗಳಿವೆ. ಆದರೆ ಇವು ಎದ್ದು ತೋರುವ ಬಟನ್‌ಗಳಲ್ಲ. ಹೆಡ್‌ಸೆಟ್ ಕೈಯಲ್ಲಿ ಹಿಡಿದಾಗ ಆ ಜಾಗದಲ್ಲಿ ಇರುವ ಚಿತ್ರಿಕೆಗಳ (ಐಕಾನ್) ಮೂಲಕ ಅಲ್ಲಿ ಬಟನ್ ಇದೆ ಎಂದು ತಿಳಿಯಬೇಕು. ಇದರಿಂದಾಗುವ ತೊಂದರೆ ಏನೆಂದರೆ ಹೆಡ್‌ಸೆಟ್ ಕಿವಿಯ ಮೇಲೆ ಇರುವಾಗ ಈ ಬಟನ್‌ಗಳನ್ನು ಬಳಸಲು ಸ್ವಲ್ಪ ತಡಕಾಡಬೇಕಾಗುತ್ತದೆ.

ಬಟನ್ ಎಲ್ಲಿದೆ, ಎಲ್ಲಿ ಒತ್ತಬೇಕು ಎಂದು ಗೊಂದಲವಾಗುತ್ತದೆ. ಇಷ್ಟೆಲ್ಲ ಕೊಟ್ಟವರು ಎರಡು ಪ್ರಾಥಮಿಕ ಬಟನ್‌ಗಳನ್ನು ನೀಡಲು ಮರೆತಿದ್ದಾರೆ. ಅವು -ಹಾಡನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಮತ್ತು ಪುನಃ ಪ್ರಾರಭಿಸಲು (pause/play button) ಹಾಗೂ ಫೋನಿಗೆ ಜೋಡಿಸಿದ್ದಲ್ಲಿ ಕರೆ ಬಂದರೆ ಅದನ್ನು ಸ್ವೀಕರಿಸಲು ಬಟನ್ (answer button). ಬಹುಶಃ ಈ ಹೆಡ್‌ಸೆಟ್‌ನ ಹೆಚ್ಚಿನ ಬಳಕೆ ಗಣಕ ಜೊತೆ, ಫೋನ್ ಜೊತೆ ಅಲ್ಲ ಎಂದು ಅವರು ತೀರ್ಮಾನಿಸಿರಬಹುದು.ಈ ಹೆಡ್‌ಸೆಟ್ ಒಳಗೆ ರೀಚಾರ್ಜೇಬಲ್ ಬ್ಯಾಟರಿ ಇದೆ. ಪೂರ್ತಿ ಚಾರ್ಜ್ ಮಾಡಲು 3 ಗಂಟೆ ಬೇಕು. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು 16 ಗಂಟೆ ಬಳಸಬಹುದು. ಚಾರ್ಜ್ ಮಾಡಲು ಯುಎಸ್‌ಬಿ ಕೇಬಲ್ ನೀಡಿದ್ದಾರೆ. ಆದರೆ ಚಾರ್ಜರ್ ನೀಡಿಲ್ಲ. ಯಾವುದೇ ಯುಎಸ್‌ಬಿ ಚಾರ್ಜರ್ ಅಥವಾ ಗಣಕದ ಯುಎಸ್‌ಬಿ ಕಿಂಡಿ ಮೂಲಕ ಚಾರ್ಜ್ ಮಾಡಬಹುದು. ಹೆಡ್‌ಸೆಟ್ ಜೊತೆ ಕೈಪಿಡಿ (ಮಾನ್ಯುವಲ್) ನೀಡಿದ್ದಾರೆ. ಆದು ಅದು ಪೂರ್ತಿ ಪ್ರಯೋಜನಕ್ಕಿಲ್ಲ. ಅದರಲ್ಲಿ ಮುದ್ರಿಸಿದ್ದನ್ನು ಓದಲು ಜೊತೆಗೆ ಭೂತಕನ್ನಡಿ ಕೂಡ ನೀಡಿದ್ದರೆ ಚೆನ್ನಾಗಿತ್ತು.ಗಣಕದ ಜೊತೆ ಮತ್ತು ಫೋನಿನ ಜೊತೆ ಬ್ಲೂಟೂತ್ ಹೆಡ್‌ಸೆಟ್ ಹೇಗೆ ಜೋಡಿಸುವುದೆಂದು ನನಗೆ ಮೊದಲೇ ತಿಳಿದಿದ್ದುದರಿಂದ ನನಗೆ ಜೋಡಿಸಲು ಆಯಿತು. ಗೊತ್ತಿಲ್ಲದಿದ್ದವರಿಗೆ ಈ ಕೈಪಿಡಿ ಓದಿ ಸಂಪರ್ಕ ಸಾಧಿಸುವುದು ಸ್ವಲ್ಪ ಕಷ್ಟವೇ. ಇದರ ಮುಖಬೆಲೆ ರೂ.4,500. ಫ್ಲಿಪ್‌ಕಾರ್ಟ್‌ನಲ್ಲಿ ರೂ.3330 ಕ್ಕೆ ಲಭ್ಯವಿದೆ. ಕೊಡುವ ಹಣಕ್ಕೆ ಮೋಸವಿಲ್ಲ ಎನ್ನಬಹುದು.

ರಪೂ ನಿಸ್ತಂತು ಕೀಲಿಮಣೆ ಮತ್ತು ಮೌಸ್ 8900ಪಿ

ಇದು ಆಟ ಆಡಲೆಂದೇ ವಿಶೇಷವಾಗಿ ವಿನ್ಯಾಸ ಮಾಡಿದ ಕೀಲಿಮಣೆ ಮತ್ತು ಮೌಸ್. ಎರಡನ್ನೂ ಗಣಕಕ್ಕೆ ನಿಸ್ತಂತು ವಿಧಾನದಲ್ಲಿ ಜೋಡಿಸಬಹುದು. ಅದಕ್ಕೆಂದೇ ಇವುಗಳ ಜೊತೆ ಒಂದು ಯುಎಸ್‌ಬಿ ಡಾಂಗಲ್ ದೊರೆಯುತ್ತದೆ. ಅದನ್ನು ಗಣಕದ ಯುಎಸ್‌ಬಿ ಕಿಂಡಿಗೆ ಮೊದಲು ಜೋಡಿಸಬೇಕು. ನಂತರ ಕೀಲಿಮಣೆ ಮತ್ತು ಮೌಸ್ ಅನ್ನು ನಿಯಂತ್ರಣ ಫಲಕದಲ್ಲಿ (control panel) ಕೆಲವು ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಜೋಡಿಸಬಹುದು.

ಗುಣವೈಶಿಷ್ಟ್ಯಗಳು

5.8 ಗಿಗಾಹರ್ಟ್ಸ್ ಕಂಪನಾಂಕ, ಅತಿ ತೆಳ್ಳಗಿನ ವಿನ್ಯಾಸದ ಕೀಲಿಮಣೆ, ಚಾಕಲೇಟ್ ಕೀಲಿಗಳು, ಹಾಡುಗಳಿಗಾಗಿ ವಿಶೇಷ ಬಹುಮಾಧ್ಯಮ ಸ್ಪರ್ಶಸಂವೇದಿ ಕೀಲಿಗಳು, ಮೌಸ್‌ನಲ್ಲಿ ವಿಶೇಷ ಸ್ಕ್ರಾಲ್ ಚಕ್ರ, ಲೇಸರ್ ತಂತ್ರಜ್ಞಾನ, ಮೌಸ್‌ನಲ್ಲಿ ಝೂಮ್ ಬಟನ್‌ಗಳು, ಇತ್ಯಾದಿ

ಸಾಮಾನ್ಯವಾಗಿ ಎಲ್ಲ ನಿಸ್ತಂತು ಸಾಧನಗಳು 2.4 ಗಿಗಾಹರ್ಟ್ಸ್ ಕಂಪನಾಂಕದಲ್ಲಿ ಕೆಲಸ ಮಾಡುತ್ತವೆ.

ಆದರೆ ಇದು ಕೆಲಸ ಮಾಡುವುದು 5.8 ಗಿಗಾಹರ್ಟ್ಸ್ ಕಂಪನಾಂಕದಲ್ಲಿ ಆದುದರಿಂದ ಇತರೆ ಸಾಧನಗಳ ಸಂಪರ್ಕದಲ್ಲಿ ಮತ್ತು ಕೆಲಸದಲ್ಲಿ ಯಾವುದೆ ರೀತಿಯಲ್ಲಿ ತಲೆಹಾಕುವುದಿಲ್ಲ. ಕೀಲಿಮಣೆಯ ಬಳಕೆಯ ಅನುಭವ ಚೆನ್ನಾಗಿದೆ. ಹಾಡುಗಳನ್ನು ಆಲಿಸುವಾಗ ಹಿಂದಿನ, ಮುಂದಿನ ಹಾಡುಗಳಿಗೆಂದೆ ಪ್ರತ್ಯೇಕ ಸ್ಪರ್ಶಸಂವೇದಿ ಕೀಲಿಗಳನ್ನು ನೀಡಿರುವುದು ಉತ್ತಮ.

ಮೌಸ್ ಅಂತೂ ಆಟ ಆಡಲೆಂದೇ ವಿನ್ಯಾಸ ಮಾಡಿರುವಂತಹುದು. ಆಟ ಆಡಲೆಂದೇ ಪ್ರತ್ಯೇಕ ಬಟನ್‌ಗಳಿವೆ. ಅವುಗಳನ್ನು ಇತರೆ ಕೆಲಸ ಮಾಡುವಾಗಲೂ (ಉದಾ: ಸ್ಪ್ರೆಡ್‌ಶೀಟ್ ಜೊತೆ) ವಿಶಿಷ್ಟವಾಗಿ ಬಳಸಬಹುದು. ಈ ಕೀಲಿಮಣೆ ಮತ್ತು ಮೌಸ್ ಒಟ್ಟು ಸೇರಿ ಮುಖಬೆಲೆ ರೂ.7,000. 

ಗ್ಯಾಜೆಟ್ ಸಲಹೆ

ಹುಬ್ಬಳ್ಳಿಯ ಅರವಿಂದ ಬಾದಾಮಿಕರ್ ಅವರ ಪ್ರಶ್ನೆ: ನನಗೆ ಉತ್ತಮ ರೆಕಾರ್ಡಿಂಗ್ ಸೌಲಭ್ಯ ಇರುವ ಒಂದು ಎಂಪಿ3 ಪ್ಲೇಯರ್ ಕೊಳ್ಳಬೇಕು. ಯಾವುದನ್ನು ಕೊಳ್ಳಬಹುದು?

ಉ: ಕೋವೋನ್ ಸಿ2. ಇದರ ವಿಮರ್ಶೆಯನ್ನು ಹಿಂದೊಮ್ಮೆ ಇದೇ ಅಂಕಣದಲ್ಲಿ ನೀಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.