ಸೋಮವಾರ, ಏಪ್ರಿಲ್ 19, 2021
31 °C

ವಚನ ಪಯಣದಲ್ಲಿ ಸುಳಿವ ಅದ್ಭುತ ಬೆಳಕು...

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ವಚನ ಪಯಣದಲ್ಲಿ ಸುಳಿವ ಅದ್ಭುತ ಬೆಳಕು...

ಎಂಬತ್ತರ  ದಶಕದಲ್ಲಿ ಪೇಜಾವರ ವಿಶ್ವೇಶ ತೀರ್ಥರು ದಲಿತಕೇರಿಗೆ ಭೇಟಿ ನೀಡಿದ್ದು ದೊಡ್ಡ ಸುದ್ದಿಯಾಯಿತು; ಯು.ಆರ್.ಅನಂತಮೂರ್ತಿಯವರು ಅದನ್ನು ‘ಮಹತ್ವದ ವಿದ್ಯಮಾನ’ ಎಂದು ಬಣ್ಣಿಸಿದರು. ನಮ್ಮಂಥವರಿಗೆ ಇವೆರಡೂ ಅಪ್ರಾಮಾಣಿಕ ಎನ್ನಿಸಿತ್ತು.ಆಗ ಶಿವಮೊಗ್ಗದ ಕಥಾಕಮ್ಮಟವೊಂದಕ್ಕೆ ಬಂದಿದ್ದ ಅನಂತಮೂರ್ತಿಯವರಿಗೆ ‘ಸಣ್ಣಪುಟ್ಟ ಊರುಗಳಲ್ಲಿರುವ ನಮ್ಮಂಥ ಹುಡುಗರು ನಿಮ್ಮ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರುತ್ತೇವೆ; ನೀವು ನೋಡಿದರೆ ಇಂಥ ಹೇಳಿಕೆಗಳನ್ನು ಕೊಟ್ಟು ನಮ್ಮ ದಾರಿ ತಪ್ಪಿಸುತ್ತೀರಲ್ಲ?’ ಎಂದೆ. ಅನಂತಮೂರ್ತಿ ‘ಅದು ಹಾಗಲ್ಲ.ಪೇಜಾವರರ ಪ್ರಭಾವ ನನ್ನ ತಾಯಿಯಂಥ ಹಳಬರ ಮೇಲೆ ಇರುತ್ತದೆ. ಪೇಜಾವರರ ಈ ನಡೆಯಿಂದ ಅಂಥವರಿಗೆ ಅಸ್ಪೃಶ್ಯತೆ ಮಾಡಬಾರದು ಎನ್ನಿಸಬಹುದು’ ಎಂದರು. ಅವರ ಮಾತನ್ನು ಒಪ್ಪದೆ ಸುಮ್ಮನಾದೆ. ಮುಂದೆ ಅನಂತಮೂರ್ತಿಯವರಿಗೆ ಜ್ಞಾನಪೀಠ ಬಂದಾಗ ನಾನು ಮಾಡಿದ ಸಂದರ್ಶನದಲ್ಲಿ, ಧರ್ಮದ ವಕ್ತಾರರು ರಾಜಕಾರಣಿಗಳ ಜೊತೆಗೂಡಿ ಮಾಡುತ್ತಿರುವ ಹೀನ ಕೆಲಸಗಳ ಚರ್ಚೆ ಬಂತು.ಪೇಜಾವರರ ಬಗೆಗೂ ಮಾತು ಬಂತು. ಆಗ ಅನಂತಮೂರ್ತಿ ‘ಪೇಜಾವರರೂ ಈ ಬಗೆಯ ಸಣ್ಣ ರಾಜಕೀಯದಿಂದ ಮುಕ್ತರಲ್ಲ ಎನ್ನಿಸಿದೆ’ ಎಂದರು. ಅಲ್ಲಿಂದಾಚೆಗೆ ಇತ್ತೀಚಿನ ಮಡೆಸ್ನಾನ, ಎಡೆಸ್ನಾನದಂಥ ಹೀನ ಆಚರಣೆಗಳವರೆಗೂ ಪೇಜಾವರರು ಧರ್ಮದ ಹೆಸರಿನಲ್ಲಿ ಅತ್ಯಂತ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುತ್ತಿರುವುದನ್ನು ನೀವು ಗಮನಿಸಿರಬಹುದು.ಈಚೆಗೆ ಮೈಸೂರಿನಲ್ಲಿ ದಲಿತಕೇರಿಗೆ ಭೇಟಿ ನೀಡಿದೆನೆಂದು ಪಡೆದ ಪ್ರಚಾರ ಕೂಡ ಅಶ್ಲೀಲವಾಗಿತ್ತು. ‘ಕೆಳಜಾತಿಯವರ ಮನೆಗೆ ನಾನು ಹೋಗುತ್ತಿದ್ದೇನೆ’ ಎಂದು ಹೇಳಿಕೊಳ್ಳುವುದೇ ನಮ್ಮೊಳಗಿನ ಜಾತಿವಿಕಾರ ಹಾಗೇ ಉಳಿದಿರುವುದನ್ನು ಸೂಚಿಸುತ್ತದೆ.ಅದಿರಲಿ, ಮೊನ್ನೆ ತಮ್ಮ ಮಠದಲ್ಲಿರುವ ಪಂಕ್ತಿಭೇದಸಮರ್ಥಿಸಿಕೊಳ್ಳಲು ಬಸವಣ್ಣನವರೂ ಪಂಕ್ತಿಭೇದದ ಪರವಾಗಿದ್ದರು ಎಂದು ಪೇಜಾವರರು ಬಸವಣ್ಣನವರದ್ದೆಂದು ಹೇಳಲಾದ ಸಾಲೊಂದರ ಮೂಲಕ ಪ್ರಯತ್ನಿಸಿದಾಗ, ಅವರ ‘ನವ ವಚನಸಂಶೋಧನೆ’ ಕುರಿತು ಕುತೂಹಲ ಹುಟ್ಟಿತು! ಬಸವಣ್ಣ ಹಾಗೂ ಇನ್ನಿತರರ ನೂರಾರು ವಚನಗಳು ಜಾತಿಭೇದ ಮಾಡಬಾರದು ಎಂದು ಮತ್ತೆಮತ್ತೆ ಹೇಳಿದ್ದರೂ ಅವನ್ನು ಓದದ ಪೇಜಾವರರು ಯಾವುದೋ ಸಾಲನ್ನು ಭೇದಭಾವದ ಸಮರ್ಥನೆಗೆ ಬಳಸಿದ್ದು ಕ್ಷುಲ್ಲಕ ರಾಜಕೀಯವೆಂದು ಅನೇಕರಿಗೆ ಅನ್ನಿಸಿದ್ದರೆ ಅಚ್ಚರಿಯಲ್ಲ.ಇಂಥ ಮಾತನ್ನು ಬಸವಣ್ಣನವರು ಎಲ್ಲಿ ಹೇಳಿದ್ದಾರೆ ಎಂದು ಹುಡುಕಿದ ಲೇಖಕ ರಾಮಲಿಂಗಪ್ಪ ಬೇಗೂರು ‘ದೀಕ್ಷೆ’ ‘ಪ್ರಸಾದ’ ಎಂಬ ಪದಗಳಿರುವ ಏಳು ವಚನಗಳನ್ನು ಹೆಕ್ಕಿ ತೆಗೆದರು. ಅಲ್ಲೆಲ್ಲೂ ಈ ಮಾತು ಕಾಣಲಿಲ್ಲ. ಶಿವದೀಕ್ಷೆಯೆನ್ನುವುದು ಸಮಾನತೆ ಸಾಧಿಸುವ ಸಾಧನ ಎಂಬುದನ್ನು ಬಸವಣ್ಣನವರ ವಚನವೊಂದು ಸ್ಪಷ್ಟವಾಗಿ ಹೇಳುತ್ತದೆ: ‘ದಾಸಿಪುತ್ರನಾಗಲಿ, ವೇಶ್ಯಾಪುತ್ರನಾಗಲಿ/ ಶಿವದೀಕ್ಷೆಯಾದ ಬಳಿಕ ಸಾಕ್ಷಾತು ಶಿವನೆಂದು ವಂದಿಸಿ, ಪೂಜಿಸಿ, ಪಾದೋದಕ ಪ್ರಸಾದವ ಕೊಂಬುದೆ ಯೋಗ್ಯ./ ಹೀಗಲ್ಲದೆ ಉದಾಸೀನ ಮಾಡಿಬಿಡುವವರಿಗೆ/ ಪಂಚಮಹಾಪಾತಕ ನರಕ ಕಾಣಾ, ಕೂಡಲಸಂಗಮದೇವಾ.’ಆದ್ದರಿಂದಲೇ ಪೇಜಾವರರು ಉಲ್ಲೇಖಿಸಿದ ಮಾತು ಬಸವಣ್ಣನವರಲ್ಲಿ ಅಕಸ್ಮಾತ್ ಬಂದಿದ್ದರೂ ಅದನ್ನು ವಾಚ್ಯವಾಗಿ ಓದಬಾರದು; ಕಾರಣ, ಬಸವಣ್ಣನವರ ವಚನಗಳಲ್ಲಿ ‘ಶಿವದೀಕ್ಷೆ’ ಎಂಬುದು ಸಕಲ ಜಾತಿಗಳ ಜನರನ್ನೂ ಶರಣರನ್ನಾಗಿಸಿ ಎಲ್ಲರನ್ನೂ ಸಮಾನವಾಗಿಸುವ ಆಧ್ಯಾತ್ಮಿಕ ಕ್ರಿಯೆಯನ್ನು ಸೂಚಿಸುತ್ತದೆಯೇ ಹೊರತು ಪಂಕ್ತಿಭೇದದ ಪ್ರತ್ಯೇಕತೆಯನ್ನಲ್ಲ. ವಚನಯುಗದಲ್ಲಿ ಎಲ್ಲರೂ ಒಟ್ಟಿಗೆ ಉಣ್ಣುವ ವಾತಾವರಣವಿತ್ತೇ ಹೊರತು ಜಾತಿಪಂಕ್ತಿಯ ರೋಗವಿರಲಿಲ್ಲ. ‘ಮೇಲಾಗಿ ನರಕದೊಳೋಲಾಡಲಾರೆನು’ ಎಂದ ಬಸವಣ್ಣನವರ ಗುರಿ ಸಮಾನತೆಯಾಗಿತ್ತೇ ಹೊರತು ಭೇದಭಾವವಲ್ಲ.ಇಂಥ ನಿತ್ಯತೇಜದ ಬಸವಲೋಕದ ಬೆಳಕಿಗೆ ಪೇಜಾವರರು ತಡವಾಗಿಯಾದರೂ ಪ್ರವೇಶಿಸಲೆತ್ನಿಸಿರುವುದು ಒಳ್ಳೆಯದು. ವಚನ ಸಾಹಿತ್ಯದ ನಿಜಸ್ಪರ್ಶ ಪಡೆದ ಯಾರಿಗೇ ಆದರೂ ಬೌದ್ಧಿಕ-ಮಾನಸಿಕ ವಿಮೋಚನೆ ಆಗಿಯೇ ಆಗುತ್ತದೆ.ಆದ್ದರಿಂದ ಜಾತಿಭೇದ, ಲಿಂಗಭೇದ, ಅಸ್ಪೃಶ್ಯತೆಯ ನರಕಗಳನ್ನು ಇಂದಿಗೂ ಉಳಿಸಿ, ಬೆಳೆಸುತ್ತಿರುವ ಭಕ್ತಸಮೂಹಕ್ಕೆ ಪೇಜಾವರರಷ್ಟೇ ಅಲ್ಲ, ಇನ್ನಿತರ ಸ್ವಾಮಿಗಳು ಕೂಡ ಬಸವಣ್ಣನವರ ವಚನಲೋಕದ ನಿಜದರ್ಶನ ಮಾಡಿಸುವ ಅಗತ್ಯವಿದೆ ಎಂದುಕೊಳ್ಳುತ್ತಾ, ನನ್ನ ನೆಚ್ಚಿನ ಪುಸ್ತಕಗಳ ಗುಂಪಿನಲ್ಲಿರುವ ‘ವಚನ ಕಮ್ಮಟ’ (ಸಂ:ಕಿ.ರಂ.ನಾಗರಾಜ್, ಕೆ.ಮರುಳಸಿದ್ಧಪ್ಪ), ಕಲಬುರ್ಗಿಯವರು ಸಂಪಾದಿಸಿರುವ ‘ಬಸವಣ್ಣನವರ ವಚನಸಂಪುಟ’ಗಳತ್ತ ಕಣ್ಣಾಡಿಸಿದೆ.ಈ ಪುಸ್ತಕಗಳಲ್ಲಿ ಆಗಾಗ್ಗೆ ಮಾರ್ಕ್ ಮಾಡಿರುವ ನೂರಾರು ವಚನಗಳ ಸಾಲುಗಳು ಕಣ್ಣಿಗೆ ಬೀಳತೊಡಗಿದಂತೆ ವಚನಲೋಕದ ತಂಗಾಳಿ, ಕನ್ನಡ ಭಾಷೆಯ ಅದ್ಭುತ ರೂಪಗಳು, ಕಾವ್ಯಪ್ರಯೋಗಗಳು, ಆರೋಗ್ಯಕರ ನೋಟ, ವಿಮರ್ಶಾತೀಕ್ಷ್ಣತೆ ಎಂದಿನಂತೆ ಮೈಮನಸ್ಸಿನ ತುಂಬ ಮಿಂಚು ಮೂಡಿಸತೊಡಗಿದವು.‘ಗೀತಮಾತೆಂಬ ಜ್ಯೋತಿ’ಯ ಬೆಳಗಿಸಿದ ವಚನಕಾರರು ಈ ನೆಲದ ಲಿಂಗಭೇದ, ಜಾತಿಭೇದಗಳ ವಿರುದ್ಧ ತೀವ್ರಪ್ರಶ್ನೆಗಳನ್ನು ಎತ್ತಲಾರಂಭಿಸಿದ್ದರು. ಆದ್ಯ ವಚನಕಾರ ದಾಸಿಮಯ್ಯನವರೇ ‘ಮಡದಿಯ ಪ್ರಾಣಕ್ಕೆ ಮೊಲೆ-ಮುಡಿ ಇದ್ದಿತ್ತೆ?/ ಒಡೆಯರ ಪ್ರಾಣಕ್ಕೆ ಇದ್ದಿತ್ತೆ ಯಜ್ಞೋಪವೀತ?/ ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೇ ಹಿಡಿಗೋಲ? ನೀನಿಕ್ಕಿದ ತೊಡಕನೀ ಲೋಕದ/ ಜಡರೆತ್ತ ಬಲ್ಲರೈ ರಾಮನಾಥ’ ಎಂದಿದ್ದರು. ನಂತರ ಬಸವಣ್ಣ ಹಾಗೂ ಇನ್ನಿತರ ವಚನಕಾರರು ಈ ಚಿಂತನ ಪರಂಪರೆಯನ್ನು ಮುಂದುವರಿಸಿದರು.ಅಲ್ಲಮಪ್ರಭು ಏಕಕಾಲಕ್ಕೆ ಸ್ವವಿಮರ್ಶೆ- ಸಮಾಜವಿಮರ್ಶೆಗಳನ್ನು ಮಾಡುವ ಬಗೆಯನ್ನು ಕಾಣಿಸುತ್ತಿದ್ದರು; ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನ ಹುಡುಕಾಟವನ್ನು ಕೇಂದ್ರರೂಪಕವಾಗಿಟ್ಟುಕೊಂಡಂತೆ ಕಂಡರೂ ‘ವೇದಶಾಸ್ತ್ರ ಪುರಾಣಾಗಮಂಗಳೆಲ್ಲ/ ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿ ಭೋ/ ಇವ ಕುಟ್ಟಲೇಕೆ?’ ಎನ್ನುತ್ತಾ ಆ ಥರದ ಜಿಜ್ಞಾಸೆಯೇ ಕಾಲಹರಣ ಎಂದು ಸೂಚಿಸಿದರು.ಇಂಥ ಸಮತಾಸಮಾಜ ನಿರ್ಮಾಣದ ಸಾಹಿತ್ಯರಚನೆಯ ವಾತಾವರಣದಲ್ಲಿ ಬಸವಣ್ಣನವರು ‘ನೆಲನೊಂದೆ ಹೊಲಗೇರಿ-ಶಿವಾಲಯಕ್ಕೆ/ಜಲವೊಂದೆ ಶೌಚ ಮಜ್ಜನಕ್ಕೆ; ಕುಲವೊಂದೆ ತನ್ನ ತಾನರಿದವಂಗೆ’ ಎಂದು ಘೋಷಿಸಿದರು. ‘ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ/ ನಿಮ್ಮಿಂದಧಿಕ ಕೂಡಲಸಂಗಮದೇವಾ’ ಎನ್ನುತ್ತಾ, ‘ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ/ ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ/ಕೂಡಲಸಂಗಮದೇವಾ, ನಿಮ್ಮ ಮನೆಯ ಮಗನೆನಿಸಯ್ಯಾ’ ಎಂದು ಜಾತಿಪೀಡಿತ ಮನಸ್ಸುಗಳನ್ನು ಸದಾ ತಿದ್ದಲೆತ್ನಿಸಿದ್ದರು.ಇಂಥ ವಿಶಾಲನೋಟದ ವಚನ ಪರಂಪರೆಯನ್ನು ಹಿಮ್ಮೆಟ್ಟಿಸಲು ಸಂಕುಚಿತ ವೈದಿಕ ಪರಂಪರೆ ಕಳೆದ 900 ವರ್ಷಗಳಿಂದಲೂ ಬುಸುಗುಡುತ್ತಲೇ ಇದೆ. ಹಾಗೇನೂ ಇಲ್ಲವೆಂದು ತಿಪ್ಪೆ ಸಾರಿಸಲು ಈಚೆಗೆ ವಿವಿಧ ಜಾತಿಗಳ ಮಠದ ಸ್ವಾಮಿಗಳ ಸಭೆ ಸೇರಿಸಿ ಅವರನ್ನು ಒಂದು ‘ವರ್ಗ’ವಾಗಿಸುವ ರಾಜಕೀಯವೂ ನಡೆಯುತ್ತಿರುತ್ತದೆ! ಪ್ರಬಲ ಜಾತಿಗಳ ಅನೇಕ ಮಠಗಳು ಬಿಜೆಪಿಯನ್ನು ಬೆಂಬಲಿಸಿ ಆ ಮೂಲಕ ಪರೋಕ್ಷ ಆಡಳಿತ ನಡೆಸಲೆತ್ನಿಸುವುದು ಕೂಡ ಎಲ್ಲರಿಗೂ ಗೊತ್ತಿದೆ. ಇಂಥ ಅನೇಕ ಮಠಗಳು ಕಾಂಗ್ರೆಸ್ ಪ್ರಬಲವಾಗಿದ್ದಾಗ ಅದರ ಬಾಲಂಗೋಚಿಗಳಾಗಿದ್ದವು.ಸದಾ ಇಂಥ ಚಿಲ್ಲರೆ ರಾಜಕೀಯದಲ್ಲಿ ಮುಳುಗಿದ್ದರೂ ವೇದಿಕೆಯ ಮೇಲೆ ಭೋಳೆ ಸಾಮಾಜಿಕ ಪರಿವರ್ತನೆಯ ಧಾರ್ಮಿಕ ಮಾತುಗಳನ್ನು ಉದುರಿಸುವವರನ್ನು ಕಂಡರೆ, ಅಕ್ಕಮ್ಮನ ‘ಆಚಾರವಂ ಬಿಟ್ಟು ಅನಾಚಾರವಂ ಸಂಗ್ರಹಿಸಿ/ ಭಕ್ತರೊಳು ಕ್ರೋಧ, ಭ್ರಷ್ಟರೊಳು ಮೇಳ/ ಇವರು ನರಕಕ್ಕೇ ಯೋಗ್ಯರು’ ಎಂಬ ವಚನ ನೆನಪಾಗುತ್ತದೆ; ಜೊತೆಗೇ, ಅಲ್ಲಮಪ್ರಭುವಿನ ‘ಮಾತಿನ ರಂಜಕರೇನೆಂಬೆ’ ಎಂಬ ಕಟಕಿ; ‘ಓದಿನ ಹಿರಿಯರು ವೇದದ ಹಿರಿಯರು ಶಾಸ್ತ್ರದ ಹಿರಿಯರು/ ಪುರಾಣದ ಹಿರಿಯರು ವೇಷದ ಹಿರಿಯರು ಭಾಷೆಯ ಹಿರಿಯರು!/ ಇವರೆಲ್ಲರು ತಮ್ಮತಮ್ಮನೆ ಮೆರೆದುದಲ್ಲದೆ ನಿಮ್ಮ ಮೆರೆದುದಿಲ್ಲ...’ಎಂಬ ಬಸವಣ್ಣನವರ ತೀಕ್ಷ್ಣ ವಿಮರ್ಶೆಗಳೂ ಸುಳಿಯುತ್ತವೆ!ಈ ಸ್ವಾಮಿಗಳಲ್ಲಿ ಸೂಕ್ಷ್ಮತೆಯಿದ್ದರೆ ವಚನಸಾಹಿತ್ಯದ ಯಾವುದೇ ಉತ್ತಮ ಸಾಲು ಅವರನ್ನು ಎಚ್ಚರಿಸುತ್ತಿರಬಲ್ಲದು. ‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ’ ಎಂಬ ಜನಪ್ರಿಯ ವಚನವನ್ನು ಬಾಯ್ತುಂಬಾ ಉಲ್ಲೇಖಿಸುವ ಸ್ವಾಮಿಗಳಾಗಲೀ ಯಾರೇ ಆಗಲಿ, ಒಂದು ಚಣ ಅದನ್ನು ತಮಗೆ ತಾವೇ ಹೇಳಿಕೊಂಡರೆ ಸಾಕು, ತಮ್ಮ ನಡೆನುಡಿಗಳಲ್ಲಿನ ಅಂತರ ಅವರಿಗೇ ಕಾಣಬಲ್ಲದು!ತಾವೆಲ್ಲ ಧರ್ಮದ ಹೆಸರಿನಲ್ಲಿ ವಿಭಜಕ ರಾಜಕಾರಣ ಮಾಡುತ್ತಾ ‘ಅಧ್ಯಾತ್ಮ ವಿಕಾರದ ನೆತ್ತರು ಕಾರಿ’ಕೊಳ್ಳುತ್ತಿರುವುದು ಕೂಡ ಅವರ ಅರಿವಿಗೆ ಬರಬಹುದು. ಇಂಥ ಅಪೂರ್ವ ವಚನಸಾಹಿತ್ಯದ ‘ಮುತ್ತು ಮಾಣಿಕ್ಯ’ಗಳನ್ನು ಜನರಲ್ಲಿ ಬಿತ್ತದೆ, ವಚನವೊಂದರ ತಿರುಚುಓದಿನ ಮೂಲಕ ಪೇಜಾವರರು ಮಾಡಲೆತ್ನಿಸಿದ ಪಂಕ್ತಿಭೇದದ ಪಾಪಸಮರ್ಥನೆ ವಚನಸಾಹಿತ್ಯದ ಆರೋಗ್ಯಕರ ಪರಂಪರೆಗೆ ಮಾಡಿದ ಅಪಮಾನವೇ ಹೌದು.ಯಾವುದೇ ಬಗೆಯ ಸಾಹಿತ್ಯದ ಉಲ್ಲೇಖಗಳ ಮೂಲಕ ಹೀನಪದ್ಧತಿಗಳ ಸಮರ್ಥನೆ ಮಾಡುವುದು ಅತ್ಯಂತ ಅಸಹ್ಯಕರ. ಅಂಥ ಸಮರ್ಥನೆಗಳು ವಚನಗಳಲ್ಲಿದ್ದರೂ ಅವನ್ನು ತಿರಸ್ಕರಿಸಬೇಕು. ಕನ್ನಡ ವಿಚಾರವಾದದ ಪ್ರಮುಖ ಆಶಯಗಳಲ್ಲೊಂದಾದ ಜಾತಿವಿನಾಶಕ್ಕೆ ವಚನಸಾಹಿತ್ಯದಿಂದಲೂ ಪ್ರೇರಣೆ ಬಂದಿದೆ.ಇಂಥ ಪ್ರಖರ ವಿಚಾರವಾದ ತಮ್ಮ ಕಂದಾಚಾರದ ಬುಡಕ್ಕೆ ಕೊಡಲಿಪೆಟ್ಟು ಕೊಡುವುದರಿಂದಲೇ ಕಂದಾಚಾರಿಗಳು ಹಾಗೂ ಆಳುವವರು ಜೊತೆಗೂಡಿ ವಿಚಾರವಾದದ ವಿರುದ್ಧ ದಾಳಿಗಳನ್ನೂ ಸುಪಾರಿ ಕೊಲೆಗಳನ್ನೂ ಪ್ರೇರೇಪಿಸುತ್ತಾ ಬಂದಿದ್ದಾರೆ. ಮೊನ್ನೆ ‘ಉಡುಪಿ ಚಲೋ’ ಕಾರ್ಯಕ್ರಮದಲ್ಲಿ ಉಡುಪಿ ಮಠಕ್ಕೆ ಮುತ್ತಿಗೆಯ ಮಾತು ಅನಗತ್ಯವಾಗಿತ್ತು, ನಿಜ. ಆದರೆ ಈ ಮುತ್ತಿಗೆಯ ಭಾಷೆ ಪೇಜಾವರರು ಮುಂಚೂಣಿಯಲ್ಲಿದ್ದ ರಾಮಜನ್ಮಭೂಮಿ ಮುತ್ತಿಗೆಯ ಭಾಷೆಯ ಪ್ರತಿಧ್ವನಿಯೆಂಬುದನ್ನೂ ಮರೆಯಬಾರದು.ಸಾರ್ವಜನಿಕರಿಂದ ಹಾಗೂ ಸರ್ಕಾರಗಳಿಂದ ಹಣ ಪಡೆಯುವ ಯಾವುದೇ ಸಂಸ್ಥೆಯೂ ಪಂಕ್ತಿಭೇದ ಮಾಡುವುದು ಹೀನ ಅಪರಾಧ. ಪಂಕ್ತಿಭೇದದ ತಾಣಗಳನ್ನು ತಿರಸ್ಕರಿಸುವುದೇ ಆಧುನಿಕ ಸಮಾಜದ ಗುರಿಯಾಗಬೇಕು.ಧರ್ಮದ ಅಗತ್ಯವಿರುವವರು ಭೇದಭಾವ ಮಾಡುವ ದೇವರು-ದೇವಾಲಯಗಳನ್ನೇ ತಿರಸ್ಕರಿಸಿ, ಎಲ್ಲರನ್ನೂ ಒಳಗೊಳ್ಳುವ ಉದಾತ್ತ ಬೌದ್ಧಧರ್ಮದತ್ತ ಹೊರಟ ಅಂಬೇಡ್ಕರ್ ಮಾರ್ಗವನ್ನೂ ಗಮನಿಸಬಹುದು; ಅಥವಾ ವಿಶಾಲ ಆಶಯಗಳಿರುವ ಧರ್ಮಗಳನ್ನು ಮರುರೂಪಿಸುವ ಪ್ರಯತ್ನವನ್ನೂ ಮಾಡಬಹುದು. ಈಚೆಗಷ್ಟೇ ನಿಡುಮಾಮಿಡಿ ಮಠದಲ್ಲಿ  ಸ್ವವಿಮರ್ಶೆಯ ಸಮಾವೇಶ ನಡೆಯಿತು.ಅನುಭವ ಮಂಟಪದ ಪ್ರಾಮಾಣಿಕತೆಯ ಕಾವು ಈ ನೆಲದಲ್ಲಿ ಇನ್ನೂ ಅಷ್ಟಿಷ್ಟು ಉಳಿದಿದೆ ಎಂಬ ಕುರುಹು ಆ ಸ್ವಾಮಿಗಳ ಮಾತುಗಳಲ್ಲಿತ್ತು. ಈ ಬಗೆಯ ಸ್ವವಿಮರ್ಶೆಯನ್ನು ಇತರ ಧಾರ್ಮಿಕ ನಾಯಕರೂ ಮಾಡಿಕೊಳ್ಳಬೇಕೇ ಹೊರತು ಕಂದಾಚಾರಿ ಹೇಳಿಕೆಗಳ ವಿಷಬೀಜ ಬಿತ್ತನೆಯ ಕೆಲಸವನ್ನಲ್ಲ.ನಿನ್ನೆಯ ‘ಪ್ರಜಾವಾಣಿ’ಯಲ್ಲಿ ಉಡುಪಿ ಗುಡಿಸುವವರ ಪೋಸುಗಳನ್ನು ನೋಡಿದಾಗ, ಪೇಜಾವರ ಥರದವರು ಇಂಥ  ರಾಜಕೀಯದಲ್ಲಿ ಮುಳುಗುವ ಬದಲು, ವಚನಗಳ ಬೋಧನೆಯ ಮೂಲಕ ಜನರ ತಲೆಯೊಳಗಿನ ಕಸ ಹೊಡೆಯುವ ಕಾಯಕಕ್ಕೆ ಮುಂದಾಗಿದ್ದರೆ ಚೆನ್ನಾಗಿರುತ್ತಿತ್ತು ಎನ್ನಿಸಿತು. ಜೊತೆಗೆ, ಪೊರಕೆ ಹಿಡಿದು ಪೋಸು ಕೊಡುವ ಪ್ರಧಾನ ಮಂತ್ರಿಯವರೂ ಇಂಥ ವಚನಕಾಯಕವನ್ನು ಕೈಗೆತ್ತಿಕೊಳ್ಳಬೇಕೆಂದು ಕಿವಿಮಾತು ಹೇಳಿದ್ದರೆ ಪೇಜಾವರರು ನಿಜಕ್ಕೂ ಸಂತನ ಹಾದಿಗೆ ಮರಳಿದ್ದಾರೆನ್ನಬಹುದಿತ್ತು!ಕೊನೆ ಟಿಪ್ಪಣಿ:  ಮನೆಮನೆಗೆ ಬೇಕಾದ ವಚನಗನ್ನಡಿ

ವಚನ ತತ್ವಜ್ಞಾನಕ್ಕೆ ಜಗತ್ತಿನ ಶ್ರೇಷ್ಠ ತತ್ವಜ್ಞಾನಗಳ ಸಾಲಿನಲ್ಲಿ ಸ್ಥಾನವಿದೆ. ವಚನಗಳನ್ನು ಸರಿಯಾಗಿ ಓದಿದ ಹಿರಿ ಕಿರಿಯರೆಲ್ಲರೂ ಒಂದಿಷ್ಟಾದರೂ ಆರೋಗ್ಯಕರ ನೋಟ ಬೆಳೆಸಿಕೊಳ್ಳಬಲ್ಲರು. ವಿಕಾರವಾಗಿ ಕಿರುಚಿಕೊಳ್ಳುವ ರಾಜಕಾರಣಿಗಳು, ಅಧ್ಯಾಪಕರು, ಪತ್ರಕರ್ತರು, ವಕೀಲರು, ಸ್ವಾಮೀಜಿಗಳು, ಸಾಹಿತಿಗಳು, ಟೀವಿಜೀವಿಗಳು ಮುಂತಾದ ಸಾರ್ವಜನಿಕ ಜೀವಿಗಳಿಗಂತೂ ವಚನಪಯಣ ಅಷ್ಟಿಷ್ಟಾದರೂ ಅಂತರಂಗ ಪರೀಕ್ಷೆ ಮಾಡಿಕೊಂಡು ಭಾಷೆಯನ್ನು ಬಳಸುವಂತೆ ಪ್ರೇರೇಪಿಸುತ್ತಿರಬಲ್ಲದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.