ಭಾನುವಾರ, ಜೂನ್ 20, 2021
29 °C

ಸಂದರ್ಶನಕ್ಕೆ ಹೋಗುವವರಿಗೆ ಹೇಳಲೇಬೇಕು ಅನಿಸಿದ್ದು

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ನೌಕರಿಗಾಗಿ ಅಕ್ಷರಶಃ ನಾಯಿಯ ಹಾಗೆ ಅಲೆದ ನಮಗೆ ಸಂದರ್ಶನಕ್ಕೆ ಕರೆ ಬರುವುದೇ ಒಂದು ದೊಡ್ಡ ಸಂಗತಿಯಾಗಿತ್ತು. ಅರ್ಜಿ ಹಾಕುವುದರಲ್ಲಿಯಂತೂ ನಮ್ಮ ವಾರಿಗೆಯವರು ಎತ್ತಿದ ಕೈಯಾಗಿದ್ದರು. ಪತ್ರಿಕೆಗಳಲ್ಲಿ ಬರುವ ಎಲ್ಲ ನೌಕರಿಗಳಿಗೂ, ನಮ್ಮ ವಿದ್ಯಾರ್ಹತೆಗೆ ಹೊಂದಾಣಿಕೆ ಆಗುವಂತಿದ್ದರೆ ಅರ್ಜಿ ಹಾಕಿಯೇ ಬಿಡುತ್ತಿದ್ದೆವು.ಸಂದರ್ಶನಕ್ಕೆ ಕರೆ ಬರುತ್ತದೆ ಎಂದು ಅಂಚೆ ಕಚೇರಿಗೆ ನಿತ್ಯ ಅಲೆಯುತ್ತಿದ್ದೆವು. ಅಂಚೆಯಣ್ಣನಿಗೆ ಹೇಳಿ ಇಡುತ್ತಿದ್ದೆವು. ಸಂದರ್ಶನಕ್ಕೆ ಕರೆ ಬಂದರೆ ಅದು ಜೀವನ್ಮರಣದ ಪ್ರಶ್ನೆ ಎನ್ನುವಂತೆ ಸಿದ್ಧರಾಗುತ್ತಿದ್ದೆವು.ಕಳೆದ ವಾರ ನಾನು ಮತ್ತು ನನ್ನ ಸಂಪಾದಕರು ಎರಡು ಭಿನ್ನ ಹುದ್ದೆಗಳಿಗೆ ಸಂದರ್ಶನ ಮಾಡುತ್ತಿದ್ದಾಗ ನನ್ನ ನಿರುದ್ಯೋಗ ಜೀವನದ ಗಳಿಗೆಗಳೆಲ್ಲ ನೆನಪಾದುವು. ಈಗಿನ ಹುಡುಗ-ಹುಡುಗಿಯರು ಜೀವನದ ಉದ್ದಕ್ಕೂ ಅನ್ನ ಕೊಡುವ ಒಂದು ನೌಕರಿಗೆ ಸಂದರ್ಶನಕ್ಕೆ ಬರುವಾಗಲೂ ಏಕೆ ಸಿದ್ಧರಾಗಿರುವುದಿಲ್ಲ ಎಂದು ಚಿಂತೆಯಾಯಿತು.

 

ನೂರಾರು ಸಂದರ್ಶನ ಮಾಡಿದ ನನ್ನ ಸಂಪಾದಕರಿಗೂ ಹಾಗೆಯೇ ಅನಿಸಿತು. `ಈ ಮಕ್ಕಳಿಗೆ ಕಾಲೇಜಿನಲ್ಲಿ ಏನೂ ಹೇಳಿಕೊಡುವುದಿಲ್ಲವೇ~ ಎಂದು ಅವರು ನನ್ನನ್ನೇ ಕೇಳಿದರು.ಸಂದರ್ಶನದಲ್ಲಿ ಹೇಗೆ ಪಾಲುಗೊಳ್ಳಬೇಕು ಎಂಬ ಕುರಿತು ನೂರಾರು ಪುಸ್ತಕಗಳು ಬಂದಿರಬಹುದು. ಸಾವಿರಾರು ಲೇಖನಗಳೂ ಪ್ರಕಟವಾಗಿರಬಹುದು. ನಮ್ಮ ವಿದ್ಯಾರ್ಥಿಗಳು ಅವುಗಳನ್ನು ಗಮನಿಸುವುದಿಲ್ಲ ಎನಿಸುತ್ತದೆ.ಕನಿಷ್ಠ ಪಕ್ಷ ನಮ್ಮ ಎದುರು ಹಾಜರಾದ ಅಭ್ಯರ್ಥಿಗಳ ಪೈಕಿ ಬಹುತೇಕರಿಗೆ ಆ ಸಮಸ್ಯೆ ಇತ್ತು ಎಂದು ಅನಿಸಿತು. ಕೆಲವು ತಿಂಗಳ ಹಿಂದೆ ಪತ್ರಕರ್ತರ ನೇಮಕದ ಸಮಯದಲ್ಲಿಯೂ ನಮಗೆ ಇದೇ ಅನುಭವವಾಗಿತ್ತು. ಆಗ ಭಾವೀ ಪತ್ರಕರ್ತರಿಗೆ ಕೆಲವು ಕಿವಿ ಮಾತು ಹೇಳಿದ್ದೆ. ಪ್ರತಿ ಸಾರಿ ಇಂಥ ಸಂದರ್ಶನ ನಡೆದಾಗಲೂ ನಾನು ಹೀಗೆ ಏನಾದರೂ ಬರೆಯಬಹುದು ಎಂದು ನನ್ನ ವಾರಿಗೆಯ ಗೆಳೆಯರು ಕೀಟಲೆಯ ಮಾತು ಆಡುತ್ತಾರೆ.

 

ಅವರು ಕೀಟಲೆ ಮಾಡಿದರೂ ನಮ್ಮ ವಿದ್ಯಾರ್ಥಿಗಳ ತಿಳಿವಳಿಕೆ ಕಡಿಮೆ ಇದೆ ಎಂದು ನನಗೆ ಮತ್ತೆ ಈ ಸಾರಿಯ ಸಂದರ್ಶನದಲ್ಲಿಯೂ ಅನಿಸಿತು. ಈ ಸಾರಿಯ ಸಂದರ್ಶನದಲ್ಲಿ ನಾನು ಕಂಡ ಕೆಲವು ಸಂಗತಿಗಳನ್ನು ಕುರಿತು ಬರೆದರೆ ಯುವಕ-ಯುವತಿಯರಿಗೆ ಸುಧಾರಿಸಿಕೊಳ್ಳಲು ಅನುಕೂಲವಾದೀತು ಎಂಬ ಅನಿಸಿಕೆಯಲ್ಲಿಯೇ ಈ ಅಂಶಗಳನ್ನು ಇಲ್ಲಿ ಬರೆದಿದ್ದೇನೆ.ನೌಕರಿಯ ಸಂದರ್ಶನ ನಿಮ್ಮ ಜೀವನವನ್ನೇ ರೂಪಿಸಬಹುದು. ಒಂದು ಒಳ್ಳೆಯ ಸಂಸ್ಥೆಯಲ್ಲಿ ಕೆಲಸ ಸಿಗುವುದು ಸುಲಭವಲ್ಲ. ಸಂದರ್ಶನಕ್ಕೆ ನಿಮಗೆ ಕರೆ ಬಂದರೆ ನೀವು ಅದನ್ನು ನೌಕರಿಯಾಗಿ ಪರಿವರ್ತಿಸಿಕೊಳ್ಳಬೇಕು. ಅದಕ್ಕೆ ಬಹಳ ಕಷ್ಟಪಡಬೇಕಿಲ್ಲ.ಸಂದರ್ಶನಕ್ಕೆ ಬರುವಾಗ ನೀವು ಢಾಳವಾದ, ಕಣ್ಣಿಗೆ ರಾಚುವಂಥ ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳಬೇಡಿ. ಬಿಳಿ, ತಿಳಿ ಬಣ್ಣದ ಬಟ್ಟೆಗಳು ಯಾವಾಗಲೂ ನಿಮ್ಮ ವ್ಯಕ್ತಿತ್ವವನ್ನು ಸೌಮ್ಯವಾಗಿ ಬಿಂಬಿಸುತ್ತವೆ.ದಟ್ಟ ನೀಲಿ, ಹಸಿರು, ಕೆಂಪು ಅಥವಾ ಹಳದಿ ಬಣ್ಣದ, ಚೆಕ್ಸ್ ಇರುವ ಅಂಗಿಗಳು ಸಂದರ್ಶಕರಿಗೆ ಮೆಚ್ಚುಗೆಯಾಗದೇ ಹೋಗಬಹುದು. ಫಾರ್ಮಲ್ ಪ್ಯಾಂಟುಗಳನ್ನು ಧರಿಸಿ. ಕಾಲು ತುಂಬ ಕಿಸೆ ಇರುವ ಪ್ಯಾಂಟುಗಳು ಬೇಡ. ಸಾಧ್ಯವಾದರೆ, ಷೂಗಳನ್ನು ಚೆನ್ನಾಗಿ ಪಾಲಿಷ್ ಮಾಡಿ ಹಾಕಿಕೊಂಡು ಬನ್ನಿ. ಇಲ್ಲವಾದರೆ ಚಪ್ಪಲಿ, ಸ್ಯಾಂಡಲ್ ಹಾಕಿಕೊಂಡು ಬಂದರೆ ತಪ್ಪೇನೂ ಇಲ್ಲ. ಹವಾಯಿ ಚಪ್ಪಲಿ ಮಾತ್ರ ಹಾಕಿಕೊಂಡು ಬರಬೇಡಿ.ನಿಮ್ಮ ಬಗ್ಗೆ ಹೇಳಿಕೊಳ್ಳುವಾಗ ನಿಮ್ಮ ಊರು ಎಷ್ಟೇ ಚಿಕ್ಕದಾಗಿದ್ದರೂ, ಹಳ್ಳಿಯಾಗಿದ್ದರೂ ನಾಚಿಕೊಳ್ಳದೇ ಹೇಳಿ. ಅದು ಸಂದರ್ಶಕರಿಗೆ ಗೊತ್ತಿರಲಿಕ್ಕಿಲ್ಲ ಎಂದು ನೀವು ಅಂದುಕೊಳ್ಳುವುದು ಬೇಡ. ಹಾಗೆ ಹೇಳುವಾಗ ಅದು ಎಲ್ಲಿ ಇದೆ, ಯಾವ ತಾಲ್ಲೂಕಿನಲ್ಲಿ ಇದೆ ಎಂದು ಬೇಕಾದರೆ ಹೇಳಿರಿ.ಸುಮ್ಮನೇ ಮೈಸೂರು, ತುಮಕೂರು ಎಂದು ಹೇಳುವುದು ಬೇಡ. ನಿಮ್ಮ ಕುಟುಂಬದ ಬಗ್ಗೆ ಹೇಳುವಾಗಲೂ ನಿಮ್ಮ ತಂದೆ ತಾಯಿ ಬಡವರಾಗಿದ್ದರೆ ಹೇಳಲು ಸಂಕೋಚ ಬೇಡ. ಅವರು ಕಷ್ಟಪಡುತ್ತಿದ್ದರೆ ಅದನ್ನೂ ಹೇಳಿರಿ. ನಿಮ್ಮ ತಂದೆ ಕೂಲಿ ಮಾಡುತ್ತಿದ್ದರೆ ಹೇಳಲು ಹಿಂಜರಿಯಬೇಡಿ. ನಿಮ್ಮ ಶಿಕ್ಷಣದ ಬಗ್ಗೆ ಹೇಳುವಾಗ ಕ್ರಮವಾಗಿ ಹೇಳಿರಿ. ಮೊದಲು ನಿಮ್ಮ ಪದವಿ ಬಗ್ಗೆ ಹೇಳಿ ನಂತರ ನಿಮ್ಮ ಪ್ರಾಥಮಿಕ ಶಿಕ್ಷಣದ ಬಗ್ಗೆ ಹೇಳಬೇಡಿ.

 

ನೀವು ಮಾತೃಭಾಷೆ ಮಾಧ್ಯಮದಲ್ಲಿ ಓದಿದ್ದರೆ ಅದನ್ನು ಹೇಳಲು ನಾಚಿಕೆ ಬೇಡ. ನೀವು ಯಾವ ವರ್ಷ ಪದವಿ ಪೂರೈಸಿದಿರಿ ಎಂದು ಕೇಳಿದರೆ ತಡವರಿಸಬೇಡಿ. ಅದೂ ನಿಮಗೆ ಸರಿಯಾಗಿ ಗೊತ್ತಿಲ್ಲವೇ ಎಂದೂ ಸಂದರ್ಶಕರಿಗೆ ಅನಿಸಬಹುದು.ನೀವು ಸಂದರ್ಶನ ಕೊಡಲು ಹೋದ ಸಂಸ್ಥೆಯವರು ಅರ್ಜಿ ನಮೂನೆ ಕೊಟ್ಟು ಭರ್ತಿ ಮಾಡಲು ಹೇಳಿದರೆ ಅದನ್ನು ಸರಿಯಾಗಿ ತುಂಬಿರಿ. ಯಾವ ಕಲಮನ್ನೂ ಹಾಗೆಯೇ ಬಿಡಬೇಡಿ. ಇಂಥ ಒಂದು ನಮೂನೆ ಹಾಗೂ ನೀವು ಮೂಲದಲ್ಲಿ ಬರೆದುಕೊಟ್ಟ ಅರ್ಜಿ ಅಮೂಲ್ಯವಾದುವು. ಅಲ್ಲಿಯೇ ನಿಮ್ಮ ವ್ಯಕ್ತಿತ್ವ ಗೊತ್ತಾಗುತ್ತದೆ.ನೀವು ಬರೆಯುವ ಅರ್ಜಿ ಯಾವ ಭಾಷೆಯಲ್ಲಿ ಇರಬೇಕು ಎಂಬುದು ಬಹಳ ಮುಖ್ಯ. ಕನ್ನಡದಲ್ಲಿಯೇ ಅರ್ಜಿ ಇರಬೇಕಾದ ಕಡೆ ಹಾಗೆಯೇ ಮಾಡಿ. ಇಂಗ್ಲಿಷ್‌ನಲ್ಲಿ ಇರಬೇಕಿದ್ದರೂ ಅದನ್ನು ನೀವೇ ಬರೆಯಿರಿ. ಯಾವುದೋ ಅಂಗಡಿಯಲ್ಲಿ ಸಿಗುವ ಮುದ್ರಿತ ಅರ್ಜಿಯನ್ನು ತುಂಬಿ ಕಳುಹಿಸಬೇಡಿ.ಎಲ್ಲರ ಅರ್ಜಿಗಳೂ ಒಂದೇ ರೀತಿ ಇದ್ದರೆ ನಿಮ್ಮ ವೈಶಿಷ್ಟ್ಯವೇನು ಎಂದು ತಿಳಿಯುವುದಿಲ್ಲ. ಕೈಬರಹದ ಅರ್ಜಿಯಾಗಿದ್ದರೂ ಅದರಲ್ಲಿ ನಿಮ್ಮ ಹೆಸರು, ವಿಳಾಸ, ವಿದ್ಯಾರ್ಹತೆ, ಅನುಭವ, ನಿಮಗೇ ವಿಶಿಷ್ಟವಾದ ಸಾಧನೆಗಳು, ನಿಮ್ಮ ಸಂಪರ್ಕ ಸಂಖ್ಯೆ. ಇ-ಮೇಲ್ ವಿಳಾಸ ಇತ್ಯಾದಿ ಮಾಹಿತಿಗಳು ಇರಲಿ.

 

ನಿಮ್ಮ ವಿದ್ಯಾರ್ಹತೆ ವಿವರ ಕೊಡುವಾಗ ನೀವು ಯಾವ ಶ್ರೇಣಿಯಲ್ಲಿ ಪಾಸಾಗಿದ್ದೀರಿ ಎಂಬುದನ್ನು ತಪ್ಪದೇ ಉಲ್ಲೇಖ ಮಾಡಿರಿ. ನಿಮ್ಮ ಅಂಕಗಳು ಚೆನ್ನಾಗಿ ಇದ್ದಷ್ಟೂ ನಿಮಗೆ ನೌಕರಿ ಸಿಗುವ ಸಾಧ್ಯತೆ ಹೆಚ್ಚು.ಸಂದರ್ಶನಕ್ಕೆ ಬರುವಾಗ ನಿಮ್ಮ ವಿದ್ಯಾರ್ಹತೆಯ ನಕಲು ಪ್ರತಿಗಳ ಜತೆಗೆ ಮೂಲ ಅಂಕಪಟ್ಟಿಗಳನ್ನೂ ತೆಗೆದುಕೊಂಡು ಬನ್ನಿ. ಏನೋ ಕಾರಣ ಹೇಳಿ `ತಂದಿಲ್ಲ~ ಎನ್ನಬೇಡಿ. ಅವನ್ನು ನೀವು ಪಾಸಾದ ಕ್ರಮದಲ್ಲಿ ಜೋಡಿಸಿ ಇಡಿ. ಸಂದರ್ಶಕರು ಕೇಳಿದ ತಕ್ಷಣ ಆ ಕಡತವನ್ನು ತೆಗೆದು ಅವರ ಮುಂದೆ ಇಟ್ಟು ಅದೇ ಕ್ರಮದಲ್ಲಿ ನಿಧಾನವಾಗಿ ತೋರಿಸಿರಿ.`ಪರ್~ `ಪರ್~ ಎಂದು ಸದ್ದು ಮಾಡುತ್ತ ಫೈಲ್‌ಗಳನ್ನು ತೆರೆಯಬೇಡಿರಿ. ನೀವು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದರೆ, ಪದಕಗಳನ್ನು ಗಳಿಸಿದ್ದರೆ ಅದನ್ನೂ ಹೇಳಿರಿ. ಶೈಕ್ಷಣಿಕ ಅರ್ಹತೆ ಮಾತ್ರವಲ್ಲದೇ ಇತರ ಯಾವುದಾದರೂ ಕ್ಷೇತ್ರದಲ್ಲಿ ನಿಮಗೆ ಆಸಕ್ತಿಯಿದ್ದರೆ ಹೇಳಲು ಮರೆಯಬೇಡಿ. ಅದು ಸಂದರ್ಶಕರಲ್ಲಿ ಅಚ್ಚರಿ, ಆಸಕ್ತಿ ಮೂಡಿಸುತ್ತದೆ.ಈತ- ಈಕೆ ಬರೀ ಕಾಲೇಜಿಗೆ ಹೋಗಿಲ್ಲ, ಇತರ ಆಸಕ್ತಿಗಳನ್ನೂ ಬೆಳೆಸಿಕೊಂಡಿದ್ದಾರೆ ಎಂದು ಮೆಚ್ಚಿಕೊಳ್ಳುತ್ತಾರೆ. ಸಂಗೀತ, ಸಾಹಿತ್ಯದಂಥ ಲಲಿತ ಕಲೆಗಳು ನಿಮ್ಮ ವ್ಯಕ್ತಿತ್ವವನ್ನು ತುಂಬುತ್ತವೆ ಎಂದು ಗೊತ್ತಿರಲಿ. ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರ ಕೊಡುವಾಗ ತಡವರಿಸಬೇಡಿ. ನಿಮಗೆ ಗೊತ್ತಿರುವಷ್ಟನ್ನು ಸ್ಪಷ್ಟವಾಗಿ, ಖಚಿತವಾಗಿ ಹೇಳಿರಿ. ಸ್ಪಷ್ಟ ಸಂವಹನ ಎಂಬುದು ಬಹುದೊಡ್ಡ ಕಲೆ. ನಿಮ್ಮ ಮಾತಿನಲ್ಲಿಯೇ ನೀವು ಸಂದರ್ಶಕರನ್ನು ಮೆಚ್ಚಿಸಬಹುದು. ಸ್ಪಷ್ಟ ಮಾತು ಸ್ಪಷ್ಟ ಚಿಂತನೆಯ ಫಲ.ಉತ್ತರ ಕರ್ನಾಟಕದವರು ಮಾತನಾಡುವಾಗ ಆತುರ ಮಾಡುತ್ತಾರೆ. ವೇಗವಾಗಿ ಮಾತನಾಡುತ್ತಾರೆ ಎಂದು ಅನಿಸುತ್ತದೆ. ನಿಧಾನವಾಗಿ ಮಾತನಾಡಿರಿ. ಅಕ್ಷರಗಳನ್ನು ನುಂಗಬೇಡಿ. ನಿಮ್ಮ ಮಾತು ಅರ್ಥವಾಗದಿದ್ದರೆ ಪ್ರಯೋಜನವಿಲ್ಲ. ಸಂದರ್ಶಕರು ಕೇಳುವ ಪ್ರಶ್ನೆಗಳನ್ನು ಸರಿಯಾಗಿ ಕೇಳಿಸಿಕೊಳ್ಳಿ.ಅವರಿಗೆ ಮತ್ತೆ ಮತ್ತೆ ಪ್ರಶ್ನೆ ಪುನರಾವರ್ತಿಸುವಂತೆ ನಡೆದುಕೊಳ್ಳಬೇಡಿ. ನಿಮಗೆ ಸರಿಯಾಗಿ ಕಿವಿ ಕೇಳಿಸುವುದಿಲ್ಲ ಎನಿಸಿಬಿಡಬಹುದು! ನಿಮ್ಮ ನಡೆ ನುಡಿಯಲ್ಲಿ ನೀವು `ಸಂಘಟಿತ~ರಾಗಿದ್ದೀರಿ ಎಂದು ಗೊತ್ತುಮಾಡಿಕೊಡಿ.ಸಂದರ್ಶನಕ್ಕೆ ಬರುವ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡಿರಿ. ಆಕಳಿಸುತ್ತ ಬೇಜಾರಿನಲ್ಲಿ ಕುಳಿತುಕೊಳ್ಳಬೇಡಿ. ನೀವು ಸಂದರ್ಶನಕ್ಕೆ ಭಾರಿ ಬೇಜಾರಿನಿಂದ ಬಂದಿದ್ದೀರಿ ಎಂದು ಅನಿಸಿದರೆ ನಿಮಗೆ ಖಂಡಿತ ನೌಕರಿ ಸಿಗುವುದಿಲ್ಲ. ಸಂದರ್ಶನಕ್ಕೆ ಬಂದಾಗ `ಧೋರಣೆ~ಯಿಂದ ನಡೆದುಕೊಳ್ಳಬೇಡಿ.ಕೈಗೆ ಕೆಟ್ಟದಾಗಿ ಬಣ್ಣ ಬಣ್ಣದ ದಾರಗಳನ್ನು ಕಟ್ಟಿಕೊಳ್ಳಬೇಡಿ. ಬಟ್ಟೆಗೆ ವಿಪರೀತ ಸೆಂಟ್ ಹಾಕಿಕೊಂಡು ಬರಬೇಡಿ. ಸಂದರ್ಶನದ ಕೊಠಡಿಯಲ್ಲಿ ಅದು `ಅಸಹನೀಯ~ ಅನಿಸಬಹುದು. ಸಂದರ್ಶಕರ ಮೇಜಿನ ಮೇಲೆ ಕೈ ಇಟ್ಟು ಮಾತನಾಡಬೇಡಿ. ಅದು ಅವಿಧೇಯತೆಯಂತೆ ತೋರಬಹುದು.

 

ಕುರ್ಚಿಯಲ್ಲಿ ಕಾಲ ಮೇಲೆ ಕಾಲು ಹಾಕಿಕೊಂಡೂ ಕುಳಿತುಕೊಳ್ಳಬೇಡಿ. ನೇರವಾಗಿ ಕುಳಿತುಕೊಳ್ಳಿ, ಆದರೆ, ನಿಮ್ಮ ಭಂಗಿಯಲ್ಲಿ ವಿನಯ ಇರಲಿ. ನಿಮ್ಮ ಕನ್ನಡಕವನ್ನು ಎದೆಯ ಮೇಲಿನ ಗುಂಡಿಯಲ್ಲಿ ಸಿಕ್ಕಿಸಿಕೊಳ್ಳಬೇಡಿ. ಕಪ್ಪು ಕನ್ನಡಕವಿದ್ದರೆ ಅದನ್ನು ತೆಗೆದು ಇಟ್ಟು ಬನ್ನಿ. ಅದನ್ನು ಹಾಕಿಕೊಂಡು ಕುಳಿತುಕೊಳ್ಳುವುದಂತೂ ಶುದ್ಧ ಅವಿವೇಕ! ಅದೆಲ್ಲ ಸಂದರ್ಶಕರನ್ನು ಮೆಚ್ಚಿಸುವುದಿಲ್ಲ.ನೀವು ಹಿಂದೆ ಯಾವುದಾದರೂ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರೆ ಅಲ್ಲಿ ನಿಮಗೆ ಪ್ರಶಸ್ತಿ, ಬಹುಮಾನ ಬಂದಿದ್ದರೆ ಅದನ್ನು ತೋರಿಸಿರಿ. ನೀವು ಮಾಡಿದ ಕೆಲಸವನ್ನು ತೋರಿಸಲು ಸಾಧ್ಯವಿದ್ದರೆ ಅದನ್ನೂ ತಂದು ತೋರಿಸಿರಿ. ತೋರಿಸಬಹುದೇ ಎಂದು ಸಂದರ್ಶಕರಿಗೆ ಕೇಳಿರಿ. ಅವರು ಒಪ್ಪಬಹುದು. ಒಪ್ಪಿದರೆ ತೋರಿಸಿ.ಅದು ಅವರಿಗೆ ಮೆಚ್ಚುಗೆಯಾಗಬಹುದು. ಅದನ್ನು ಸಿ.ಡಿ ಅಥವಾ ಪೆನ್‌ಡ್ರೈವ್‌ನಲ್ಲಿ ಹಾಕಿಕೊಂಡು ಬನ್ನಿರಿ. ಅದರಲ್ಲಿ ನೀವು ತೋರಿಸಬೇಕು ಎಂದುಕೊಂಡ ಸಂಗತಿಗಳು ಮಾತ್ರ ಇರಲಿ. ಇತರೆ ನೂರೆಂಟು ಸಂಗತಿಗಳ ಜತೆಗೆ ಇದನ್ನೂ ಸೇರಿಸಬೇಡಿ. ಅಷ್ಟೆಲ್ಲ ತಾಳ್ಮೆ, ವೇಳೆ ಸಂದರ್ಶಕರಿಗೆ ಇರಬೇಕು ಎಂದು ಬಯಸುವುದು ಸರಿಯಲ್ಲ. ನಿಮಗೆ ನೌಕರಿ ಸಿಕ್ಕರೆ ನೀವು ಏನು ಮಾಡುತ್ತೀರಿ, ಹೇಗೆ ಕೆಲಸ ಮಾಡುತ್ತೀರಿ ಎಂದು ಸಂದರ್ಶಕರಿಗೆ ಹೇಳಿರಿ. ಅದನ್ನು ಬಿಟ್ಟು ನೀವು ಸಂಸ್ಥೆಯನ್ನು ಹೇಗೆ ನಡೆಸಬೇಕು ಎಂದು ಅವರಿಗೇ ಬುದ್ಧಿ ಹೇಳಲು ಹೋಗಬೇಡಿ. ಅದು ಅವರಿಗೆ ಗೊತ್ತಿಲ್ಲದೇ ಇದ್ದರೆ ಅವರು ಮಾಲೀಕರು ಆಗಲು ಸಾಧ್ಯವಿಲ್ಲ.ಅವರಿಗೆ ಗೊತ್ತಿಲ್ಲದೇ ಇರುವುದು ನಿಮಗೆ ಗೊತ್ತಿರಲು ಸಾಧ್ಯವೇ ಇಲ್ಲ. ಅದನ್ನೆಲ್ಲ ಹೇಳಲು ಹೋಗಿ ನೀವು ಅಪಹಾಸ್ಯಕ್ಕೆ ಈಡಾಗಲೂಬಹುದು. ಅದರ ಬದಲು ನಿಮಗೆ ಅವಕಾಶ ಸಿಕ್ಕರೆ ಅದನ್ನು ಹೇಗೆ ಬಳಸಿಕೊಳ್ಳುತ್ತೀರಿ ಎಂದು ಹೇಳಿದರೆ ನೀವು ನೌಕರಿಗೆ ಅರ್ಹರೋ ಅಲ್ಲವೋ ಎಂದು ಅವರಿಗೆ ತಕ್ಷಣ ಗೊತ್ತಾಗುತ್ತದೆ.ಹೇಗಿದ್ದರೂ ನಿಮ್ಮನ್ನು ಮಾಲೀಕರ ಹುದ್ದೆಗೆ ಸಂದರ್ಶನಕ್ಕೆ ಕರೆದಿರುವುದಿಲ್ಲ; ನೌಕರಿಗೆ ಕರೆದಿರುತ್ತಾರೆ ಎಂದು ಮರೆಯಬೇಡಿ! ನೀವು ನೌಕರಿಗೆ ಸೇರಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ಮುಚ್ಚಿ ಇಡಬೇಡಿ. ಒಂದು ತಿಂಗಳು ಬೇಕಾದರೆ ಹಾಗೆಯೇ ತಿಳಿಸಿ. ನೀವು ಸಂದರ್ಶಕರಿಗೆ ಅಷ್ಟು ಇಷ್ಟವಾಗಿದ್ದರೆ ಅವರು ನಿಮ್ಮನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಸಂದರ್ಶನಕ್ಕೆ ಹೋದಾಗ ನೀವು ತಿಳಿಸಿಕೊಡಬೇಕಾದುದು ಇದನ್ನೇ; ನೀವು ಒಬ್ಬ ಕಳೆದುಕೊಳ್ಳಬಾರದ ಅಭ್ಯರ್ಥಿ ಎಂದು!ನಾನು ಇಲ್ಲಿ ಹೇಳಿದ್ದೆಲ್ಲ ಚಿಕ್ಕ ಚಿಕ್ಕ ಸಂಗತಿಗಳು. ಈ ಚಿಕ್ಕ ಚಿಕ್ಕ ಸಂಗತಿಗಳೇ ನಮ್ಮ ವಿದ್ಯಾರ್ಥಿಗಳಿಗೆ ಗೊತ್ತಿಲ್ಲ ಎಂದು ಅನಿಸಿತು. ಚಿಕ್ಕ ಚಿಕ್ಕ ಸಂಗತಿಗಳನ್ನೆಲ್ಲ ಚೊಕ್ಕವಾಗಿ ಮಾಡಿದರೆ ಅದೇ ಪರಿಪೂರ್ಣತೆ ಕಡೆಗಿನ ಮೆಟ್ಟಿಲು. ಅಂಥ ಮೆಟ್ಟಿಲುಗಳನ್ನು ಒಂದೊಂದಾಗಿ ಏರಿರಿ. ಅಲ್ಲಿ ಯಶಸ್ಸು ನಿಮ್ಮ ಮುಂದೆ ತೋಳು ತೆರೆದು ನಿಂತಿರುತ್ತದೆ! 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.