ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಮೌಲ್ಯಗಳೂ ವಾಸ್ತವದ ಸ್ಥಿತಿಗತಿಯೂ

Last Updated 30 ನವೆಂಬರ್ 2015, 19:59 IST
ಅಕ್ಷರ ಗಾತ್ರ

ಭಾರತದ  ಸಂವಿಧಾನ  ಜಾರಿಗೆ ಬಂದದ್ದು 1950ರ ಜನವರಿ 26ರಿಂದ. ಆದರೆ ಇದನ್ನು 1949ರ ನವೆಂಬರ್ 26ರಂದೇ ಅಂಗೀಕರಿಸಲಾಗಿತ್ತು. ಹೀಗಾಗಿ, ಈಗ  ಸಂವಿಧಾನ ಅಂಗೀಕಾರವಾದ 66 ವರ್ಷಗಳ ನಂತರ ಮೊದಲ ಬಾರಿಗೆ  ಕಳೆದ ವಾರ ನ.26ರಂದು ಸಂವಿಧಾನ ದಿನವನ್ನು ಆಚರಿಸಿದ್ದೇವೆ.

ಸಂವಿಧಾನ ರಚನೆಯ ಮುಖ್ಯ ಉದ್ದೇಶ ಸರ್ಕಾರ ಹಾಗೂ ಅದರ ಮೂರು ಅಂಗಗಳ ಅಧಿಕಾರಬಲವನ್ನು ಮಿತಿಗೊಳಿಸುವುದು.  ಮಾನವ ಘನತೆಯನ್ನು ರಕ್ಷಿಸುವ ಮೌಲ್ಯವನ್ನು  ಸಂವಿಧಾನ ಒಳಗೊಂಡಿದೆ.  ಪ್ರಜಾಪ್ರಭುತ್ವ ಎಂಬುದು ತನ್ನಷ್ಟಕ್ಕೇ ಒಂದು ಗುರಿ ಅಥವಾ ಆದರ್ಶ ಆಗುವುದಿಲ್ಲ. ವ್ಯಕ್ತಿ ಸ್ವಾತಂತ್ರ್ಯ ಹಾಗೂ ಸರ್ಕಾರದ ಅಧಿಕಾರದ ಮಿತಿಗಳು ಸಾಂವಿಧಾನಿಕತೆಯನ್ನು ಮೆರೆಸುತ್ತವೆ ಎಂಬುದು ಮುಖ್ಯ. ರಾಷ್ಟ್ರದೊಳಗೆ ಇಂದು ನಡೆಯುತ್ತಿರುವ ಅಸಹಿಷ್ಣುತೆ ಕುರಿತಾದ ವಾಗ್ವಾದ ಸಂಸತ್ ಅನ್ನೂ ಪ್ರವೇಶಿಸಿರುವ ಸಂದರ್ಭದಲ್ಲಿ ಇದು ಮುಖ್ಯವಾದದ್ದು. ಇಂದಿರಾ ಗಾಂಧಿ ಆಡಳಿತ ಕಾಲದಲ್ಲಿ ನಿರಂಕುಶ ಪ್ರಭುತ್ವದ ರುಚಿಯನ್ನು ಕಂಡಿದ್ದನ್ನು ರಾಷ್ಟ್ರ ಮರೆಯಲಾಗದು. 

ಭಾರಿ ಬಹುಮತದಿಂದ ಅಧಿಕಾರ ಗದ್ದುಗೆಗೇರಿರುವ ಈಗಿನ ಎನ್‌ಡಿಎ ಸರ್ಕಾರ, ಬಹುಸಂಖ್ಯಾತವಾದದ ಆವೇಗಕ್ಕೆ ಸಿಲುಕಬಹುದಾದ ಅಪಾಯ, ಭಾರತದ ಸಂವಿಧಾನದ ಮೌಲ್ಯಗಳಿಗೆ ವ್ಯತಿರಿಕ್ತವಾದದ್ದು  ಎಂಬುದು ನೆನಪಲ್ಲಿರಬೇಕು. ಭಾರತದ  ಸಂವಿಧಾನ ಅತ್ಯುತ್ತಮವಾದದ್ದು ಎಂಬ ಹೆಗ್ಗಳಿಕೆ ಪಡೆದಿದೆ. ಕಳೆದ ನಾಲ್ಕು ದಶಕಗಳಲ್ಲಿ ಅನೇಕ  ಏಷ್ಯನ್ ಹಾಗೂ ಆಫ್ರಿಕನ್  ರಾಷ್ಟ್ರಗಳ ಸಂವಿಧಾನಗಳು ಭಾರತದ ಮಾದರಿಯನ್ನು ಅನುಸರಿಸಿವೆ  ಎಂಬುದು ಹೆಮ್ಮೆಯ ಸಂಗತಿ. ಆದರೆ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರು ರಾಜಕೀಯ ಸಮಾನತೆ ಹಾಗೂ ಸಾಮಾಜಿಕ ಅಸಮಾನತೆಯ ಬಗ್ಗೆ ನೀಡಿದ್ದ ಎಚ್ಚರಿಕೆಯನ್ನು ಈಗಲೂ ಮರೆಯುವಂತಿಲ್ಲ.

ಈಗ ‘ಸಂವಿಧಾನ ದಿನ’ದಂತಹ  ಆಚರಣೆಗಳು ಸಂವಿಧಾನದ ಮೇಲಿನ ಸಂವಾದವನ್ನು ಬೆಳೆಸುವವೆ? ಸಮಾಜದಲ್ಲಿನ ಅಸಮಾನತೆಯನ್ನು ಮುಚ್ಚುವವೆ? ಎಂಬುದು ಪ್ರಶ್ನೆ. ಏಕೆಂದರೆ ಸಂವಿಧಾನದ ತತ್ವಗಳು, ಮೌಲ್ಯಗಳು ಹಾಗೂ ವಾಸ್ತವದ ಪರಿಸ್ಥಿತಿಯ ಅಂತರ ಎದ್ದು ಕಾಣುತ್ತದೆ. ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ  ಸಂವಿಧಾನದ  ಕರಡನ್ನು ರಚಿಸಿದವರು ಡಾ ಅಂಬೇಡ್ಕರ್. ಹಾಗೆಯೇ ತಮ್ಮ ಮೂರು ದಶಕಗಳಿಗೂ  ಹೆಚ್ಚಿನ ರಾಜಕೀಯ ವೃತ್ತಿಯಲ್ಲಿ ಅಂಬೇಡ್ಕರ್ ಅವರು ಮಂಡಿಸಿದ ಹಲವು ರಾಜಕೀಯ ಹಾಗೂ ಸಾಮಾಜಿಕ ವಿಚಾರಗಳು  ಭಾರತದ ಚಿಂತನಾ ಕ್ರಮವನ್ನು ಬೆಳೆಸಿದವು ಎಂಬುದನ್ನು ಅಲ್ಲಗಳೆಯುವಂತಿಲ್ಲ. ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವಾಗಿ ಪರಿವರ್ತಿಸಲು ಇರುವ ಸವಾಲುಗಳನ್ನು  ಅವರು  ಒತ್ತಿ ಹೇಳಿದ್ದರು.

‘1950ರ ಜನವರಿ 26ರಂದು ನಾವು ವೈರುಧ್ಯಗಳ ಬದುಕಿಗೆ ಪ್ರವೇಶಿಸುತ್ತಿದ್ದೇವೆ. ರಾಜಕೀಯದಲ್ಲಿ ನಮಗೆ ಸಮಾನತೆ ಇದೆ. ಆದರೆ ಸಾಮಾಜಿಕ ಹಾಗೂ ಆರ್ಥಿಕ ಬದುಕಿನಲ್ಲಿ ಅಸಮಾನತೆ ಇದೆ.   ಎಲ್ಲಿಯ ತನಕ ಈ ವೈರುಧ್ಯಗಳ ಬದುಕು ಮುಂದುವರಿಸುವುದು?’ ಎಂಬ ಅವರ ಪ್ರಶ್ನೆ ಈಗಲೂ ಮುಖ್ಯವಾದುದು. ಏಕೆಂದರೆ ‘ಸಂವಿಧಾನ ದಿನ’ವನ್ನು ಆಚರಿಸಿದ ಈ ಸಂದರ್ಭದಲ್ಲೇ ಈಗಲೂ ಅನೇಕ ಕಡೆ ದೇವಾಲಯ ಪ್ರವೇಶಿಸಲು ಮಹಿಳೆಗೆ ಹಕ್ಕಿಲ್ಲದ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿದ್ದು ವಿಪರ್ಯಾಸ.  ‘ಮುಟ್ಟು’ ಮೈಲಿಗೆ ಎಂಬ ಕಾರಣದಿಂದ ಶಬರಿಮಲೆ ದೇವಾಲಯದಲ್ಲಿ ಹೆಣ್ಣಿಗೆ ಪ್ರವೇಶವಿಲ್ಲ. 

ಈ ಭಾವನೆಯನ್ನು ವಿರೋಧಿಸುವಂತಹ ‘ಹ್ಯಾಪಿ ಟು ಬ್ಲೀಡ್’  ಅಭಿಯಾನವನ್ನು ಸಾಮಾಜಿಕ ಜಾಲತಾಣದಲ್ಲಿ  ಹೆಣ್ಣುಮಕ್ಕಳು ನಡೆಸಿದರು. ನಂತರ ಮಹಾರಾಷ್ಟ್ರದ  ಅಹಮದ್ ನಗರ ಜಿಲ್ಲೆಯ  ಗ್ರಾಮವೊಂದರ  ಶನಿ ದೇವಾಲಯಕ್ಕೆ ಪೂಜೆ ಸಲ್ಲಿಸಲು ಮಹಿಳೆಯೊಬ್ಬರು   ಪ್ರವೇಶಿಸಿದ್ದಕ್ಕಾಗಿ ದೇವಾಲಯದ ಏಳು ಮಂದಿ ಭದ್ರತಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಮಹಿಳೆ ಮಾಡಿದ ಈ ಪಾಪಕಾರ್ಯಕ್ಕಾಗಿ  ಗ್ರಾಮಸ್ಥರು ದೇವಾಲಯ ಶುದ್ಧೀಕರಣ ಮಾಡಿದ್ದಾರೆ. ಮಹಿಳೆಗೆ ಸಮಾನತೆಯ ಹಕ್ಕು ನೀಡುವ ಸಂವಿಧಾನದ 14ನೇ ವಿಧಿ ಹಾಗೂ ತಾರತಮ್ಯ ಮಾಡುವುದನ್ನು ನಿಷೇಧಿಸುವ 15ನೇ ವಿಧಿ  ಈಗಲೂ ಸಾಮಾಜಿಕ ವಾಸ್ತವಗಳಾಗದಂತಹ ವೈಪರೀತ್ಯಗಳಿವು. ಹಾಗೆಯೇ ಹೆಣ್ಣುಮಗು ಹುಟ್ಟುವುದೇ ಬೇಡ  ಎಂಬ ಮನಸ್ಥಿತಿ ಇರುವುದನ್ನು ಜನಗಣತಿ ಅಂಕಿಅಂಶಗಳು ಸಾರುತ್ತಲೇ ಇವೆ.

ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಚಿಂತನೆ, ಹೋರಾಟಗಳೇ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಸ್ವಚ್ಛ ಭಾರತ ಅಭಿಯಾನ, ಜನ ಧನ ಯೋಜನೆ ಹಾಗೂ  ಬೇಟಿ ಬಚಾವೊ, ಬೇಟಿ ಪಡಾವೊ  (ಹೆಣ್ಣುಮಗು ಉಳಿಸಿ, ಹೆಣ್ಣುಮಗು ಓದಿಸಿ) ಆಂದೋಲನಗಳನ್ನು ಜಾರಿಗೆ ತರಲು ನರೇಂದ್ರ ಮೋದಿ ಅವರಿಗೆ ಸ್ಫೂರ್ತಿಯಾಗಿದೆ ಎಂಬುದನ್ನು ಸಂವಿಧಾನ ದಿನಾಚರಣೆ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್  ಹೇಳಿದ್ದಾರೆ.  ಆದರೆ ಇದು  ದಲಿತರ ಮನ ಒಲಿಸುವ ಕಾರ್ಯತಂತ್ರ. ಸಂವಿಧಾನ ಜಾರಿಗೆ ಬಂದ ದಿನವಾದ ಜನವರಿ 26ರ ಮಹತ್ವವನ್ನು  ಕಡಿಮೆ ಮಾಡುವ ಹಾಗೂ ಭಾರತದ ಮೊದಲ ಪ್ರಧಾನಿ  ನೆಹರೂ ಅವರ  ಪ್ರಾಮುಖ್ಯ ಕುಗ್ಗಿಸುವ ಯತ್ನ ಎಂಬಂತಹ ಟೀಕೆಗಳೂ ವ್ಯಕ್ತವಾಗುತ್ತಿವೆ.

ರಾಜಕೀಯ ಪಕ್ಷಗಳ ಕಾರ್ಯತಂತ್ರ ಹಾಗೂ ಪರಸ್ಪರರ ನಡುವಿನ ಈ ವಾಗ್ವಾದಗಳ ನಡುವೆ ಬರಲಿರುವ ದಿನಗಳಲ್ಲಿ ಮಹಿಳಾ ಮೀಸಲು ಮಸೂದೆಗೆ ಮುಕ್ತಿ ಸಿಗುವುದೇ? ಎಂಬುದೊಂದು ಆಶಾಕಿರಣ ಮತ್ತೆ ತೂರಿಬಂದಿದೆ. ಲಿಂಗ ಸಮಾನತೆ ಸಾಧಿಸುವುದು ದೊಡ್ಡ ಸವಾಲು ಎಂದು ಸರ್ಕಾರವೇ ಹೇಳಿದೆ. ಆದರೆ,  ಪ್ರಗತಿ ಸಾಧಿಸಲು ಸಂಸತ್ ಹಾಗೂ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲು ನೀಡದೆ ವಿಧಿ ಇಲ್ಲ  ಎಂಬುದನ್ನು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಎಂ ವೆಂಕಯ್ಯ ನಾಯ್ಡು ಒಪ್ಪಿಕೊಂಡಿದ್ದಾರೆ.

‘ಸಂವಿಧಾನ  ಅಳವಡಿಸಿಕೊಂಡು ಆರು ದಶಕಗಳಿಗೂ ಹೆಚ್ಚು ಕಾಲ ಕಳೆದಿದ್ದರೂ ಭಾರತ  ಈಗಲೂ ಶೇ 100ರಷ್ಟು ಸಾಕ್ಷರತೆ  ಸಾಧಿಸುವುದು ಸಾಧ್ಯವಾಗಿಲ್ಲ. ಹೆರಿಗೆ ಸಂದರ್ಭದಲ್ಲಿ  ಬಾಣಂತಿ, ಶಿಶು ಸಾವು ತಪ್ಪಿಸಲಾಗಿಲ್ಲ.  ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ನೀಡಿಬಿಟ್ಟರೆ ನಮ್ಮ ಕ್ಷೇತ್ರ ಕಳೆದುಕೊಳ್ಳುತ್ತೇವೆ ಎಂಬ ಭೀತಿ ನಮಗಿದೆ. ಆದರೆ ಸ್ವಹಿತಾಸಕ್ತಿ ರಕ್ಷಣೆಗಾಗಿ ಮಹಿಳೆಯರಿಗೆ ಮೀಸಲಾತಿ ಮಸೂದೆ ತಡೆಯಲಾಗದು’ ಎಂದು  ವೆಂಕಯ್ಯ ನಾಯ್ಡು ಹೇಳಿರುವುದು ಹೊಸ ಭರವಸೆ. 1996ರಷ್ಟು ಹಿಂದೆಯೇ ಸಂಸತ್ತಿನಲ್ಲಿ ಮೊದಲಬಾರಿಗೆ ಮಂಡಿಸಲೆತ್ನಿಸಿದ ಮಹಿಳಾ ಮೀಸಲು ಮಸೂದೆ ಅನಂತರವೂ ಹಲವು ಬಾರಿ ಮಂಡನೆ ನಾಟಕಗಳೊಂದಿಗೆ ನನೆಗುದಿಗೆ ಸಿಲುಕಿರುವುದು  ವಿಪರ್ಯಾಸ.

ಈ  ಪರಿಸ್ಥಿತಿಯನ್ನು 1920ರ ದಶಕದಲ್ಲಿದ್ದ ಪರಿಸ್ಥಿತಿಗೆ ಹೋಲಿಸಿ ನೋಡಿ: ಪ್ರತಿನಿಧಿ ಸರ್ಕಾರಕ್ಕಾಗಿ ಭಾರತೀಯರ ಚಳವಳಿಗೆ ಆಗಿನ ಬ್ರಿಟಿಷ್ ಸರ್ಕಾರ ಸ್ಪಂದಿಸಿತ್ತು.  ಸರ್ಕಾರದಲ್ಲಿ  ಕೆಲವು ಭಾರತೀಯರನ್ನು ಒಳಗೊಳ್ಳುವ  ಉದ್ದೇಶದಿಂದ ಸಾಂವಿಧಾನಿಕ ಸುಧಾರಣೆಗಳಿಗಾಗಿ ಪ್ರಸ್ತಾವವೊಂದನ್ನು ಸಿದ್ಧಪಡಿಸಲು 1919ರಲ್ಲಿ ಮಾಂಟೇಗ್ ಹಾಗೂ ಚೆಮ್ಸ್ ಫೋರ್ಡ್ ನೇತೃತ್ವದ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯ ಮುಂದೆ ತಂತಮ್ಮ ಪ್ರಾತಿನಿಧ್ಯದ ಅಗತ್ಯದ ವಿಚಾರಗಳನ್ನು ಅನೇಕ ಗುಂಪುಗಳು ಪ್ರತಿಪಾದಿಸಿಕೊಂಡವು. ಈ ಸಮಿತಿಯ ಬಳಿಗೆ ಮಹಿಳೆಯರ ಸಣ್ಣ ನಿಯೋಗವೊಂದನ್ನು ಸರೋಜಿನಿ ನಾಯ್ಡು ಹಾಗೂ ಮಾರ್ಗರೆಟ್ ಕಸಿನ್ಸ್  ಒಯ್ದಿದ್ದರು.

ಪುರುಷರಂತೆ ಮಹಿಳೆಯರಿಗೂ ಶಾಸನಸಭೆಗಳಲ್ಲಿ ಪ್ರಾತಿನಿಧ್ಯದ ಸಮಾನ ಹಕ್ಕುಗಳನ್ನು ಒದಗಿಸಬೇಕೆಂದು ಒತ್ತಾಯಿಸಿದ್ದರು. ಆದರೆ ಈ ಬೇಡಿಕೆ ಮೂರ್ಖತನದ್ದು ಎಂದು ಬ್ರಿಟಿಷ್ ಸರ್ಕಾರ ಭಾವಿಸಿತ್ತು. ಏಕೆಂದರೆ ಬಹುತೇಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ದೊಡ್ಡ ಹೋರಾಟಗಳೇ ನಡೆದಿದ್ದರೂ ಆಗ ಮಹಿಳೆಯರಿಗಿನ್ನೂ ಮತದಾನದ ಹಕ್ಕು ನೀಡಿರಲಿಲ್ಲ.  ಇನ್ನು ಪರ್ದಾ ಪದ್ಧತಿ  ಹಾಗೂ ಮಹಿಳಾ ಶಿಕ್ಷಣ ನಿಷೇಧ ಇರುವಂತಹ ಸಮಾಜದಲ್ಲಿ ಮಹಿಳೆಯರಿಗೆ ವೋಟು ನೀಡುವ ಹಕ್ಕಿನ ವಿಸ್ತರಣೆಯೇ ಅಪಕ್ವವಾಗುತ್ತದೆ ಎಂದು ಸೌತ್ ಬರೊ ಸಮಿತಿಯೂ ತಿಳಿಸಿತ್ತು. ಆದರೆ ಈ ಬೇಡಿಕೆಯನ್ನು ಯಥಾವತ್ತಾಗಿ ತಿರಸ್ಕರಿಸುವ ಹೊಣೆಯನ್ನು ತಮ್ಮ ಹೆಗಲಿಗೇರಿಸಿಕೊಳ್ಳುವ ಬದಲಿಗೆ ಮಹಿಳೆಯರಿಗೆ ಮತದಾನದ ಹಕ್ಕು ನೀಡಲು ಅಥವಾ ತಿರಸ್ಕರಿಸಲು ಬ್ರಿಟಿಷ್ ಸರ್ಕಾರ ಆಗಷ್ಟೇ  ಭಾರತದಲ್ಲಿ ರಚಿಸಿದ್ದ ಪ್ರಾದೇಶಿಕ  ಶಾಸನಸಭೆಗಳ  (ಪ್ರಾವಿನ್ಷಿಯಲ್ ಲೆಜಿಸ್ಲೇಚರ್) ವಿವೇಚನೆಗೇ ವಹಿಸಿತು. 

ಭಾರತೀಯರು ತೀರಾ ಹಿಂದುಳಿದವರಾಗಿರುವುದರಿಂದ ಮಹಿಳೆಯರಿಗೆ ಸಮಾನ ರಾಜಕೀಯ ಹಕ್ಕುಗಳನ್ನು ಒಪ್ಪಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬುದು ಅವರ ಆಲೋಚನೆಯಾಗಿತ್ತು. ಆದರೆ ಭಾರತದ ಪ್ರತಿಯೊಂದು ಪ್ರಾದೇಶಿಕ ಶಾಸನಸಭೆಗಳೂ ಯಾವುದೇ ಗೊಂದಲವಿಲ್ಲದೆ ಪುರುಷರೊಂದಿಗೆ ಮಹಿಳೆಯರ ಪ್ರಾತಿನಿಧ್ಯಕ್ಕೂ ಅಲ್ಪಾವಧಿಯಲ್ಲೇ ಅವಕಾಶ ನೀಡಿದ್ದು ಐತಿಹಾಸಿಕ. ಈ ಬಗ್ಗೆ ಭಾರತ ಹಾಗೂ ಬ್ರಿಟನ್‌ಗಳಲ್ಲಿ  ಮಹಿಳಾ ಮತದಾನದ ಹಕ್ಕಿನ ಹೋರಾಟಗಳಲ್ಲಿ ಸಕ್ರಿಯರಾಗಿದ್ದ  ಐರಿಷ್ ಸ್ತ್ರೀವಾದಿ ಮಾರ್ಗರೆಟ್ ಕಸಿನ್ಸ್ ಅವರು ಹೇಳಿರುವ ಮಾತುಗಳಿವು: ಇಂಗ್ಲೆಂಡ್ ಹಾಗೂ ಐರ್ ಲೆಂಡ್‌ಗಳಲ್ಲಿ ಪುರುಷ ರಾಜಕಾರಣಿಗಳ ಕ್ರೌರ್ಯ,  ಪುರುಷ ನಿಯಂತ್ರಿತ ಮಾಧ್ಯಮ ಹಾಗೂ ಅನ್ಯಾಯಗಳಿಂದ ನರಳಿದ ನನ್ನಂಥ ಮಹಿಳೆಯರಿಗೆ ಭಾರತೀಯರು ಈ ವಿಚಾರದಲ್ಲಿ ತೋರಿದ  ವಿವೇಚನೆ ಹಾಗೂ ಉದಾರತೆಯನ್ನು ಮೆಚ್ಚಿಕೊಳ್ಳುವಂತಹದ್ದಾಗಿದೆ.

ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಮಹಿಳೆಯರು ಮತದಾನದ ಹಕ್ಕು ಪಡೆದುಕೊಳ್ಳಲು ಇಡೀ ಶತಮಾನ ಹೋರಾಟ ನಡೆಸಿದ್ದಾರೆ. ಆದರೆ ಭಾರತದ ಮಹಿಳೆಯರಿಗೆ ಮತದಾನದ ಹಕ್ಕು ಏನೇನು ಕಿರಿಕಿರಿ ಇಲ್ಲದೆ  ಅಥವಾ ಹೋರಾಟ  ಇಲ್ಲದೆ ಲಭಿಸಿತು.  ರಾಜಕೀಯ ಚಟುವಟಿಕೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ  ಮಹಾತ್ಮ ಗಾಂಧಿಅವರು ವಹಿಸಿದ  ಪಾತ್ರವನ್ನು ಮರೆಯುವಂತಿಲ್ಲ. 1930ರ ದಶಕದಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪುರುಷರಿಗೆ ಸರಿಸಮನಾಗಿ ಮಹಿಳೆಯರೂ ಸತ್ಯಾಗ್ರಹ ಚಳವಳಿಯಲ್ಲಿ ಪಾಲ್ಗೊಳ್ಳಬೇಕೆಂದು ಗಾಂಧಿ ಆಗ್ರಹ ಪಡಿಸಿದ್ದರು. ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಬಂಧಿತರಾದ 30,000 ಮಂದಿಯಲ್ಲಿ 17,000 ಮಂದಿ ಮಹಿಳಾ ಕಾರ್ಯಕರ್ತರಾಗಿದ್ದರು. ಮಹಾತ್ಮ ನಾಯಕತ್ವದಡಿ ಮಹಿಳೆಯರ ಸಮಾನ ಪಾತ್ರಕ್ಕೆ ಇದು ದ್ಯೋತಕ. ‘ಸೂಕ್ತ ಪ್ರಮಾಣದ ಮಹಿಳಾ ಸದಸ್ಯರಿಲ್ಲದ ಶಾಸನಸಭೆಯನ್ನು ನಾನು ಬಹಿಷ್ಕರಿಸುತ್ತೇನೆ’ ಎಂದೂ ಗಾಂಧಿ ಹೇಳಿದ್ದರು.

ಸಂವಿಧಾನ ರಚನಾ ಸಭೆಯಲ್ಲೂ ಒಟ್ಟು  15 ಮಹಿಳಾ ಸದಸ್ಯರಿದ್ದು  ಚರ್ಚೆಗಳಲ್ಲಿ ಪಾಲ್ಗೊಂಡಿದ್ದರು ಎಂಬುದೂ ಮುಖ್ಯ. ನಮ್ಮ ಸಂವಿಧಾನ ನಿರ್ಮಾತೃಗಳ ದೂರದೃಷ್ಟಿಯಿಂದ ಸಂವಿಧಾನದಲ್ಲಿ  ಸಮಾನತೆಯ ಹಕ್ಕು  ಮಹಿಳೆಗೆ ದಕ್ಕಿದೆ. ಹೀಗಿದ್ದೂ ವೈರುಧ್ಯಗಳ ಕಥನಗಳೂ ಇವೆ. 1951ರಲ್ಲಿ ಮೊದಲ ಚುನಾವಣೆ ನಡೆದಾಗ ಆಗಿನ ಚುನಾವಣಾ ಕಮಿಷನರ್ ಸುಕುಮಾರ ಸೇನ್ ಅವರಿಗೆ ಅದು ದೊಡ್ಡ ಸವಾಲಿನ ಕೆಲಸವಾಗಿತ್ತು.  ಆಗ 17.6 ಕೋಟಿ ಮತದಾರರಲ್ಲಿ ಶೇ 85ರಷ್ಟು ಮಂದಿ ನಿರಕ್ಷರಕುಕ್ಷಿಗಳಾಗಿದ್ದರು. ಮತದಾರರ ಪಟ್ಟಿಯಿಂದ ಸುಮಾರು 2.5 ಲಕ್ಷ ಮಹಿಳೆಯರ ಹೆಸರುಗಳನ್ನು ಕಿತ್ತುಹಾಕಬೇಕಾಗಿತ್ತು. ಏಕೆಂದರೆ ತಮ್ಮ ಹೆಸರು ಬಹಿರಂಗಗೊಳಿಸಲು ಅವರು ತಿರಸ್ಕರಿಸಿದ್ದರು. ತಮ್ಮನ್ನು ಇಂತಹವರ ಪುತ್ರಿ, ಪತ್ನಿ  ಎಂದಷ್ಟೇ ಅವರು ಗುರುತಿಸಿಕೊಳ್ಳುತ್ತಿದ್ದರು. ಆಗ ರಾಷ್ಟ್ರದಲ್ಲಿ ಇದೇ ಮೊದಲ ಹಾಗೂ ಕಡೆಯದೂ ಆದ ಚುನಾವಣೆ ಆಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ನಮ್ಮ ರಾಷ್ಟ್ರ ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು, ಬೆಳೆಸಿಕೊಂಡು ಬಂದಿದೆ ಎಂಬುದೇ ಹೆಮ್ಮೆಯ ಸಂಗತಿ.

ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಕಾನೂನುಗಳೂ ರಚನೆಯಾಗಿವೆ.  ಆದರೆ ಕಾನೂನುಗಳ ಅನುಷ್ಠಾನದಲ್ಲಿ  ಆಡಳಿತ ಯಂತ್ರದ ಸಂವೇದನಾಶೂನ್ಯತೆ ಹಾಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸಂವಿಧಾನದ ಆಶಯಗಳು ನಾಗರಿಕರ ಬದುಕಿನ ಮೇಲೆ ಪ್ರಭಾವ ಬೀರುವಲ್ಲಿ ವಿಫಲವಾಗಿವೆ. ಸಮಕಾಲೀನ ಸಂದರ್ಭದಲ್ಲಿ ಸೈದ್ದಾಂತಿಕ ಸಂಘರ್ಷಗಳು  ಮಿತಿಮೀರಿವೆ. ವಿವಿಧ ಸಮುದಾಯಗಳ ನಡುವಿನ ಅಸಹಿಷ್ಣುತೆ ಹೆಚ್ಚಾಗುತ್ತಿದೆ. ಅಸಮಾನತೆ ಹೆಚ್ಚುತ್ತಿದೆ. ಮಹಿಳೆಯರ ಹಕ್ಕುಗಳ ದಮನವಾಗುತ್ತಿದೆ. ಇಂತಹ ಸಂದರ್ಭದಲ್ಲಿ  ಭಾರತದ ಸಂವಿಧಾನ ಮಾತ್ರವೇ ಎಲ್ಲರನ್ನೂ ಒಗ್ಗೂಡಿಸಬಲ್ಲುದು.  ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೆರವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT