ಆಗ ನನಗಿನ್ನೂ ಹದಿನೇಳು ವರ್ಷ. ಹುಬ್ಬಳ್ಳಿಯ ಪತ್ರಿಕೆಯೊಂದರಲ್ಲಿ ಪ್ರೂಫ್ ರೀಡರ್ ಆಗಿ ಕೆಲಸ ಮಾಡುತ್ತಿದ್ದೆ. ಮುಂದೆ `ಪ್ರಜಾವಾಣಿ~ಯಲ್ಲಿ ಒಬ್ಬ ಕ್ರೀಡಾ ವರದಿಗಾರನಾಗುತ್ತೇನೆ ಎಂಬ ಕನಸೂ ಆಗ ಮೂಡಿರಲಿಲ್ಲ. ಆದರೆ ಕ್ರೀಡೆಯ ಬಗ್ಗೆ ಇದ್ದ ಪ್ರೀತಿ ನನ್ನನ್ನು ನೆಹರೂ ಮೈದಾನಕ್ಕೆ ಓಡಿಸಿತ್ತು.

ವೆಸ್ಟ್ಇಂಡೀಸ್ನ ರೋಹನ್ ಕನ್ಹಾಯ್, ಭಾರತದ ದಿಗ್ಗಜರಾಗಿದ್ದ ಜಿ. ಆರ್. ವಿಶ್ವನಾಥ್, ಅಜಿತ್ ವಾಡೇಕರ್, ರಮಾಕಾಂತ್ ದೇಸಾಯಿ ಅವರೊಡನೆ `ಸಿಕ್ಸರ್ ಸರದಾರ~ ಸಲೀಮ್ ದುರಾನಿ ಅವರ ಆಟ ನೋಡುವ ಉತ್ಸಾಹದಿಂದ ಹೋಗಿದ್ದ ನನಗೆ ನಿರಾಶೆಯೇನೂ ಆಗಿರಲಿಲ್ಲ.

1972 ರ ಏಪ್ರಿಲ್ 7ರಿಂದ 9 ರವರೆಗೆ ನಡೆದ ವಿಜಯ್ ಮಾಂಜ್ರೇಕರ್ ಸಹಾಯಾರ್ಥ ಪಂದ್ಯದಲ್ಲಿ ಈ ಎಲ್ಲ ಕ್ರಿಕೆಟ್ಕಲಿಗಳು ಹುಬ್ಬಳ್ಳಿ ಮಂದಿಯ ಮನಸೂರೆಗೊಂಡಿದ್ದರು. ಸಲೀಮ್ ದುರಾನಿ ಪ್ರೇಕ್ಷಕರ ಸಿಕ್ಸರ್ ಬೇಡಿಕೆಯನ್ನು ಪೂರೈಸಿದ್ದರು.

ಕಳೆದ ವಾರ ಸಲೀಮ್ ದುರಾನಿ, ಭಾರತ ಕ್ರಿಕೆಟ್ ಮಂಡಳಿ ಕೊಡುವ ಸಿ. ಕೆ. ನಾಯ್ಡು ಪ್ರಶಸ್ತಿಯನ್ನು ಸ್ವೀಕರಿಸಿದಾಗ, ಅವರು ಹುಬ್ಬಳ್ಳಿಯಲ್ಲಿ ಆಡಿದ್ದು ನೆನಪಾಯಿತು. ನಾನು ಟೆಸ್ಟ್ ಪಂದ್ಯಗಳ ವರದಿಗೆ ಹೋಗುವ ಹೊತ್ತಿಗೆ ಅವರು ಆಟದಿಂದ ನಿವೃತ್ತರಾಗಿದ್ದರು.

ಅವರನ್ನು ಎಲ್ಲೂ ಭೇಟಿಯಾಗುವ ಅವಕಾಶ ಸಿಕ್ಕಿರಲಿಲ್ಲ. ಆದರೆ 39 ವರ್ಷಗಳ ಹಿಂದಿನ ನೆನಪು ಸ್ವಲ್ಪ ಮಸುಕಾಗಿದ್ದರೂ, ಆರಡಿ ಎತ್ತರದ ಅವರ `ಹೀರೋ~ ಮುಖದಲ್ಲಿ ಕಂಡಿದ್ದ ನಗು ಪೂರ್ಣ ಮರೆತುಹೋಗಿರಲಿಲ್ಲ.

ಅವರ ಭರ್ಜರಿ ಸಿಕ್ಸರ್ಗೆ ಎದ್ದು ನಿಂತು ತಟ್ಟಿದ್ದ ಚಪ್ಪಾಳೆಯ ಖುಷಿಯಲ್ಲೇ, 1973 ರಲ್ಲಿ ಅವರು ಪರ್ವೀನ್ ಬಾಬಿ ಜೊತೆ ನಟಿಸಿದ್ದ `ಚರಿತ್ರ~ ಸಿನೇಮಾ ನೋಡಲು ಹೋಗಿದ್ದೆ. ಹೊಸ ನಟಿ ಪರ್ವೀನ್ ಬಾಬಿ ಮುದ್ದುಮುದ್ದಾಗಿ ಕಂಡಳಾದರೂ ಸಲೀಮ್ಭಾಯಿ ಚೆಲುವನಾಗಿದ್ದರೂ `ಕ್ರಿಕೆಟ್ಗಷ್ಟೇ ಹೀರೋ~ ಆಗಿದ್ದರೆ ಚೆನ್ನ ಎಂದೆನಿಸಿತ್ತು.

ಅದೇನೇ ಇರಲಿ. ಸಲೀಮ್ ಅಜೀಜ್ ದುರಾನಿ ಅವರಿಗೆ ಈಗ 76 ವರ್ಷ ವಯಸ್ಸು. ಅಫಘಾನಿಸ್ತಾನದ ಕಾಬೂಲ್ನಲ್ಲಿ ಹುಟ್ಟಿದ (ಡಿಸೆಂಬರ್ 11, 1934) ಸಲೀಮ್ಭಾಯಿ ಅರವತ್ತರ ದಶಕದ ಅತ್ಯಂತ ಜನಪ್ರಿಯ ಆಟಗಾರನಾಗಿದ್ದ ಎಂಬುದರಲ್ಲಿ ಎರಡು ಮಾತಿಲ್ಲ.

ಅವರು ಆಡಲು ಬಂದರೆ ಪ್ರೇಕ್ಷಕರೆಲ್ಲ `ಸಿಕ್ಸರ್, ಸಿಕ್ಸರ್~ ಎಂದು ಕೂಗುತ್ತಿದ್ದರು. `ಪ್ರೇಕ್ಷಕರೇ ನನ್ನ ದೇವರು~ ಎಂದು ಹೇಳುತ್ತಿದ್ದ ಅವರು ಸಿಕ್ಸರ್ ಎತ್ತಲು ತಡಮಾಡುತ್ತಿರಲಿಲ್ಲ. ಅವರು ಅತ್ಯುತ್ತಮ ಎಡಗೈ ಸ್ಪಿನ್ನರ್ ಆಗಿದ್ದರೂ ಅವರಿಗೆ ಹೆಸರು ತಂದುಕೊಟ್ಟಿದ್ದು, ಕೇಳಿದಾಗೆಲ್ಲ ಹೊಡೆಯುತ್ತಿದ್ದ ಸಿಕ್ಸರ್.

1960 ರಿಂದ 1973 ರ ವರೆಗೆ 29 ಟೆಸ್ಟ್ಗಳಲ್ಲಿ (ಈಗಿನ ಹಾಗೆ ಆಗ ಯದ್ವಾತದ್ವಾ ಪಂದ್ಯಗಳು ಇರಲಿಲ್ಲ.) ಆಡಿದ ಅವರಿಗೆ, ಜೀವಮಾನ ಸಾಧನೆಗಾಗಿ ನೀಡಲಾದ ಸಿ.ಕೆ. ನಾಯ್ಡು ಪ್ರಶಸ್ತಿ ತಡವಾಗಿ ಬಂತೇ ಎಂಬ ಭಾವನೆ ಮೂಡುತ್ತದೆ.

ಹೌದು ಎಂದೆನಿಸುತ್ತದೆ. ಪ್ರಶಸ್ತಿ ಜೊತೆ ಕೊಡಲಾದ ಹದಿನೈದು ಲಕ್ಷ ರೂಪಾಯಿಗಳು ಮುಂದಿನ ಐದು ವರ್ಷಗಳ ಕಾಲ ತಮ್ಮ ಜೀವನಕ್ಕೆ ಸಾಕು ಎಂದು ಅವರು ಹೇಳಿದ್ದನ್ನು ನೋಡಿದರೆ ಅವರ ಆರ್ಥಿಕ ಸ್ಥಿತಿ ಅಷ್ಟೊಂದು ಚೆನ್ನಾಗಿ ಇರಲಿಕ್ಕಿಲ್ಲ.

ಅವರು ಆಡುತ್ತಿದ್ದ ಸಮಯದಲ್ಲಿ ಆಟಗಾರರು ರೈಲಿನಲ್ಲೇ, ಅದೂ ಎರಡನೇ ದರ್ಜೆಯಲ್ಲಿ ಪ್ರಯಾಣ ಮಾಡುತ್ತಿದ್ದರು. ಈಗ ಆಟಗಾರರಿಗೆ ದೊರೆಯುತ್ತಿರುವ ದುಡ್ಡಿನ ಒಂದು ಭಾಗವೂ ಆಗ ಸಿಗುತ್ತಿರಲಿಲ್ಲ. ಪಂದ್ಯ ಆಡಲು ಹೋದಾಗ ಅಲ್ಲಿಯ ಜನರ ಪ್ರೀತಿಯ ಆತಿಥ್ಯವೇ ದೊಡ್ಡದಾಗಿತ್ತು.

ಇಂದಿನ ಆಟಗಾರರು ಸಾಮಾನ್ಯ ಜನರ ಜೊತೆ ಬೆರೆಯುವುದಿಲ್ಲ. ಅವರದೇನಿದ್ದರೂ ಪಂಚತಾರಾ ಹೊಟೆಲುಗಳಲ್ಲಿ ಸಿರಿವಂತರ ಜೊತೆ ಸಂಭ್ರಮ. ಹುಬ್ಬಳ್ಳಿಯಲ್ಲಿ ಆಗ ದೊಡ್ಡ ಉದ್ದಿಮೆದಾರರಾಗಿದ್ದ ಭರತ್ ಖಿಮಜಿ ಆಟಗಾರರಿಗೆ ಏರ್ಪಡಿಸಿದ್ದ ಸಂತೋಷಕೂಟದಲ್ಲಿ ಎಲ್ಲ ಆಟಗಾರರು ಜನರೊಡನೆ ಸಂತೋಷದಿಂದ ಬೆರೆತಿದ್ದರು.

ನೆಹರೂ ಮೈದಾನದಲ್ಲಿ ಪ್ರೇಕ್ಷಕರು ಬರೀ ಕಾಗದದ ಮೇಲೆ ಆಟೊಗ್ರಾಫ್ ಕೇಳಿದರೂ ಖುಷಿಯಿಂದಲೇ ಸಹಿ ಮಾಡಿದ್ದರು. ವಿಜಯ್ ಮಾಂಜ್ರೇಕರ್ಗಾಗಿ ಹೊರತರಲಾಗಿದ್ದ ಸ್ಮರಣ ಸಂಚಿಕೆಯನ್ನು (ಹತ್ತು ರೂಪಾಯಿ) ತಮ್ಮ ಬಳಿ ಕೊಳ್ಳುವ ಜನರ ಕೈಕುಲುಕಿ, ಹೆಸರು ಕೇಳಿ ಹಸ್ತಾಕ್ಷರ ಹಾಕುತ್ತಿದ್ದ ದುರಾನಿ ಎಲ್ಲರಿಗೂ ಹತ್ತಿರವಾಗಿದ್ದರು. (ಇಲ್ಲಿ ನೆನಪುಗಳನ್ನು ಕೆದಕಲು ನೆರವಾದವರು ಹುಬ್ಬಳ್ಳಿಯ ಕ್ರಿಕೆಟ್ ಗೆಳೆಯ ಪಂಕಜ್ ಮುನ್ವರ್. ಅವರೇ ದುರಾನಿ ಅವರ ಚಿತ್ರ ಕಳಿಸಿಕೊಟ್ಟರು.)

ಕ್ರಿಕೆಟ್ ಇಂದು ಬಹಳ ಬದಲಾಗಿದೆ. ಆದರೆ ಸಲೀಮ್ಭಾಯಿ ಆಗಲೇ ಈಗಿನ ಟ್ವೆಂಟಿ-20 ಆಟಗಾರರಂತೆ ಬೌಂಡರಿ, ಸಿಕ್ಸರ್ ಹೊಡೆಯುತ್ತಿದ್ದರು. ಜನರು ಅವರ ಆಟವನ್ನು ಎದುರು ನೋಡುತ್ತಿದ್ದರು. 1973ರಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ ಬಂದಾಗ ಇವರನ್ನು ತಂಡದಿಂದ ಕೈಬಿಡಲಾಗಿತ್ತು.

ಆಗ ಜನ `ದುರಾನಿ ಇಲ್ಲದಿದ್ದರೆ ಟೆಸ್ಟ್ ಇಲ್ಲ~ ಎಂದು ಪ್ರತಿಭಟಿಸಿದ್ದರು. ಆಯ್ಕೆಗಾರರು ಮರುಮಾತಿಲ್ಲದೇ ಇವರನ್ನು ಆರಿಸಬೇಕಾಯಿತು. ಮುಂಬೈನಲ್ಲಿ ಆಡಿದ ಅವರು ಜನರ ಅಪೇಕ್ಷೆಯಂತೆ ಸಿಕ್ಸರುಗಳನ್ನು ಹೊಡೆದರಾದರೂ ಅದು ತಮ್ಮ ಕೊನೆಯ ಟೆಸ್ಟ್ ಎಂಬುದು ಅವರಿಗೂ ಗೊತ್ತಿತ್ತು, ಜನರಿಗೂ ಗೊತ್ತಿತ್ತು. ಅವರು ಗುಜರಾತ್, ರಾಜಸ್ತಾನ, ಸೌರಾಷ್ಟ್ರ ತಂಡಗಳನ್ನು ರಣಜಿ ಟ್ರೋಫಿ ಮತ್ತು ಇತರ ರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರತಿನಿಧಿಸಿದ್ದರು.

ಅವರು 29 ಟೆಸ್ಟ್ಗಳಲ್ಲಿ ಒಂದೇ ಒಂದು ಶತಕ ಹೊಡೆದಿದ್ದಾರೆ. ಅದು ವೆಸ್ಟ್ಇಂಡೀಸ್ನಲ್ಲಿ ಬಂದದ್ದು ವಿಶೇಷ. ಅವರು 1961-62 ರ ಆ ಸರಣಿಯಲ್ಲಿ ಹಾಲ್ ಮತ್ತು ಗ್ರಿಫಿತ್ ಅವರ ಬೆಂಕಿಯ ಚೆಂಡಿಗೆ ಬೆದರಿರಲಿಲ್ಲ. ಪೋರ್ಟ್-ಆಫ್-ಸ್ಪೇನ್ನಲ್ಲಿ ಅವರು ಹೊಡೆದ 104 ರನ್ನುಗಳ ಆಟ ನೋಡಿದ್ದ ಸರ್. ಫ್ರಾಂಕ್ ವೊರೆಲ್, `ಅದ್ಭುತ, ಗ್ಯಾರಿ (ಸೋಬರ್ಸ್) ಅವರಷ್ಟೇ ಚೆನ್ನಾಗಿ ಚೆಂಡನ್ನು ಹುಕ್ ಮಾಡುತ್ತಾರೆ~ ಎಂದು ಹೊಗಳಿದ್ದರು.

ಇದಕ್ಕೆ ಮೊದಲು ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ ಅವರು ಭಾರತ ಎರಡು ಟೆಸ್ಟ್ಗಳನ್ನು ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಗೆಲ್ಲಿಸಿಕೊಟ್ಟಿದ್ದರು. ಕೋಲ್ಕತ್ತ ಮತ್ತು ಮದರಾಸು ಟೆಸ್ಟ್ಗಳಲ್ಲಿ ಎಂಟು ಮತ್ತು ಹತ್ತು ವಿಕೆಟ್ಗಳೊಡನೆ ಅವರು ಮಿಂಚಿದ್ದರು. ಆದರೆ ಅವರ ಚಿರಸ್ಮರಣೀಯ ಬೌಲಿಂಗ್ ಬಂದದ್ದು 1971 ರ ವಿಂಡೀಸ್ ಪ್ರವಾಸದಲ್ಲಿ.

ಪೋರ್ಟ್-ಆಫ್-ಸ್ಪೇನ್ ಟೆಸ್ಟ್ನಲ್ಲಿ ಅವರು ಸತತ ಎಸೆತಗಳಲ್ಲಿ ಕ್ಲೈವ್ ಲಾಯ್ಡ ಮತ್ತು ಗ್ಯಾರಿ ಸೋಬರ್ಸ್ ಅವರ ವಿಕೆಟ್ ಕಿತ್ತರು. ಭಾರತ ಆ ಟೆಸ್ಟ್ ಜೊತೆ ಸರಣಿಯನ್ನೂ ಗೆದ್ದು ಇತಿಹಾಸ ನಿರ್ಮಿಸಿತ್ತು. ಅದು ಅವರ ಜೀವಮಾನ ಸಾಧನೆಯೇ ಆಗಿತ್ತು. ನಲವತ್ತು ವರ್ಷಗಳ ನಂತರವಾದರೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸಲೀಮ್ ಅಜೀಜ್ ದುರಾನಿ ನೆನಪಾಯಿತು.

ಸಲೀಮ್ಭಾಯಿ ಖಂಡಿತವಾಗಿಯೂ ಭಾರತ ಕ್ರಿಕೆಟ್ನ ಒಬ್ಬ ಎತ್ತರದ ಆಟಗಾರನಾಗಿದ್ದರು. ಮುಂಬೈನಲ್ಲಿ ಸಿ. ಕೆ. ನಾಯ್ಡು ಪ್ರಶಸ್ತಿ ಸ್ವೀಕರಿಸಿದ ಚಿತ್ರ ನೋಡಿದಾಗ, 76 ರ ಇಳಿ ವಯಸ್ಸಿನಲ್ಲೂ ಅವರ ಜೀವನ ಉತ್ಸಾಹ ಕಡಿಮೆಯಾಗಿಲ್ಲ ಎಂದೆನಿಸಿತು. ಅದು ಹಾಗೆಯೇ ನೂರರ ವರೆಗೆ ಮುಂದುವರಿಯಲಿ ಎಂಬುದೇ ಹಾರೈಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.