ಶುಕ್ರವಾರ, ಮೇ 27, 2022
26 °C

ಸಾಂಸ್ಕೃತಿಕ ನಗರಿಯ ಪರಂಪರೆ ಮತ್ತು ನಂಬಿಕೆ

ಪೃಥ್ವಿ ದತ್ತ ಚಂದ್ರ ಶೋಭಿ Updated:

ಅಕ್ಷರ ಗಾತ್ರ : | |

ಸಾಂಸ್ಕೃತಿಕ ನಗರಿಯ ಪರಂಪರೆ ಮತ್ತು ನಂಬಿಕೆ

ಮೈಸೂರಿನ ಗುರುತಿನ (ಐಡೆಂಟಿಟಿಯ) ಜೊತೆಗೆ ದಸರಾದಷ್ಟು ಮತ್ತಾವ ಆಚರಣೆ, ವಿದ್ಯಮಾನ, ವ್ಯಕ್ತಿತ್ವ ಇಲ್ಲವೆ ಸಂಸ್ಥೆಗಳಾಗಲಿ ತಳಕು ಹಾಕಿಕೊಂಡಿಲ್ಲ. ಈ ಮಾತಿಗೆ ಅಪವಾದವೆಂದರೆ ಪ್ರಾಯಶಃ ಮೈಸೂರು ಅರಮನೆ ಮಾತ್ರ. ಮೈಸೂರಿನ ದಸರಾ ಆಚರಣೆಯ ಸಂದರ್ಭದಲ್ಲಿ ನಾವು ಗಮನಿಸಬೇಕಿರುವ ಕುತೂಹಲಕರವಾದ, ಒಂದು ರೀತಿಯಲ್ಲಿ ವಿಚಿತ್ರವೂ ಎನಿಸುವ ವಿಷಯವೊಂದಿದೆ.

ಭಾರತದ ಎಲ್ಲ ಪ್ರದೇಶಗಳಲ್ಲಿಯೂ ನವರಾತ್ರಿ- ವಿಜಯದಶಮಿಗಳು ಬಹುಮಟ್ಟಿಗೆ ಸಾಮುದಾಯಿಕ ಹಬ್ಬಗಳು. ಉತ್ತರ ಭಾರತದಲ್ಲಿ ನಡೆಯುವ ರಾಮಲೀಲಾದ ಪ್ರದರ್ಶನಗಳನ್ನಾಗಲಿ ಅಥವಾ ಬಂಗಾಳದ ದುರ್ಗಾಪೂಜಾ ಆಚರಣೆಯನ್ನಾಗಲಿ ಸ್ಥಳೀಯ ಸಮುದಾಯಗಳೇ ನಡೆಸುತ್ತವೆ.

ಅಂದರೆ ಮನೆಯೊಳಗಿರಲಿ ಅಥವಾ ರಸ್ತೆಗಳಲ್ಲಾಗಲಿ ಈ ಹಬ್ಬವನ್ನು ಆಚರಿಸುವಾಗ, ಈ ಹಬ್ಬಗಳ ಕೇಂದ್ರದಲ್ಲಿ ಸಾಮಾನ್ಯ ಜನರಿರುತ್ತಾರೆ. ಆದರೆ ಮೈಸೂರಿನಲ್ಲಿ ಮಾತ್ರ ದಸರಾ ಬಹುಮಟ್ಟಿಗೆ ಪ್ರಭುತ್ವದ ಹಬ್ಬವಾಗಿಯೇ ಬೆಳೆದುಬಂದಿದೆ. ಮೈಸೂರು ದಸರಾದ ಆಚರಣೆಯಲ್ಲಿ ಸಾಮಾನ್ಯ ಜನರು ಪ್ರೇಕ್ಷಕರು. ಅವರ ಭಾಗವಹಿಸುವಿಕೆ ವೀಕ್ಷಣೆಗೆ ಮಾತ್ರ ಬಹುಮಟ್ಟಿಗೆ ಸೀಮಿತವಾಗಿದೆ. ಇದು ಮೈಸೂರಿನವರು ಮತ್ತು ಹೊರಗಿನ ಪ್ರವಾಸಿಗರು ಈರ್ವರ ವಿಚಾರದಲ್ಲಿಯೂ ಸತ್ಯ.

ಹಾಗಾಗಿ ಮೈಸೂರಿನಲ್ಲಿ ದಸರಾ ನಡೆಯುವಾಗ ಪ್ರತಿದಿನದ ಜನಜೀವನ ಎಂದಿನಂತೆ ನಡೆಯುತ್ತಿರುತ್ತದೆ. ಅರಮನೆ ಮತ್ತಿತರ ಪ್ರೇಕ್ಷಣೀಯ ಸ್ಥಳಗಳ ಸುತ್ತಮುತ್ತಣ ಜನಸಂದಣಿ ಮಾತ್ರ ಊರಿನಲ್ಲಿ ವಿಶೇಷ ಆಚರಣೆಗಳು ನಡೆಯುತ್ತಿವೆ ಎನ್ನುವುದನ್ನು ಸೂಚಿಸುತ್ತದೆ.

ಇಂದು ದಸರಾವನ್ನು ನಾಡಹಬ್ಬವೆಂದು ಆಚರಿಸುತ್ತೇವೆ. ಆದರೆ ಈ ನಾಡಹಬ್ಬವೂ ಪ್ರಭುತ್ವದ ಹಬ್ಬವೇ ಹೊರತು ಸಮುದಾಯದ್ದಲ್ಲ. ಈ ಮಾತು ಸ್ಪಷ್ಟವಾಗಬೇಕೆಂದರೆ ಇಂದಿನ ದಸರಾವನ್ನು ಗಣಪತಿ ಹಬ್ಬದೊಡನೆಯೊ ಅಥವಾ ನಾನು ಮೇಲೆ ಉಲ್ಲೇಖಿಸಿರುವ ರಾಮಲೀಲಾ- ದುರ್ಗಾಪೂಜೆಗಳ ಜೊತೆಗೊ ಹೋಲಿಸಿ.

ನಾಡಹಬ್ಬದ ರೂಪುರೇಷೆಗಳನ್ನು ತೀರ್ಮಾನಿಸುವುದು ಸರ್ಕಾರದ ಅಂಗವಾಗಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿವರ್ಗ. ದಸರಾದ ಹತ್ತು ದಿನಗಳಲ್ಲಿ ವಿವಿಧ ವೇದಿಕೆಗಳಲ್ಲಿ ಇಲ್ಲವೆ ಹತ್ತನೆಯ ದಿನದ ದಸರಾ ಮೆರವಣಿಗೆಯಲ್ಲಿ ಕಲಾಪ್ರದರ್ಶನ ಮಾಡುವ ಕಲಾವಿದರು ಈ ಹಬ್ಬದಲ್ಲಿ ಸರ್ಕಾರದ ಪ್ರಾಯೋಜಕತ್ವದ ಕಾರಣದಿಂದ, ಅದರ ಮಧ್ಯಸ್ಥಿಕೆಯ ಮೂಲಕವೇ ಭಾಗವಹಿಸುತ್ತಾರೆ. ಅಂದರೆ ಯಾವ ಪ್ರದರ್ಶನಕಲೆಗಳು, ಯಾವ ಕಲಾವಿದರು ದಸರಾದಲ್ಲಿ ಅವಕಾಶ ಪಡೆಯುತ್ತಾರೆ ಎನ್ನುವುದು ಪ್ರಭುತ್ವದ ಮೇಲೆ ಅವಲಂಬಿಸಿರುತ್ತದೆಯೇ ಹೊರತು ಸಮುದಾಯದ ಮೇಲಲ್ಲ.

ರಾಜಪ್ರಭುತ್ವವಾಗಲಿ, ಪ್ರಜಾಪ್ರಭುತ್ವವಾಗಲಿ ಅಂದಿನ ಕಾಲದ ಪ್ರಭುತ್ವದ ಪ್ರತಿಫಲನವಾಗಿಯೇ ಉಳಿದುಬಂದಿರುವ ದಸರಾ ಹಬ್ಬವು ಒಂದು ಭವ್ಯವಾದ, ಪ್ರೇಕ್ಷಣೀಯ ಪ್ರದರ್ಶನವಾಗಿ ತನ್ನ ಪರಂಪರೆಯನ್ನು ಕಟ್ಟಿಕೊಂಡಿದೆ. ಮೈಸೂರು ದಸರಾವನ್ನು ‘ಪಾರಂಪರಿಕ’ ಎನ್ನುವ ಪೂರ್ವಪದವಿಲ್ಲದೆ ಯಾರೂ ಬಣ್ಣಿಸುವುದೇ ಇಲ್ಲ. ಇಂತಹ ಪಾರಂಪರಿಕ ದಸರಾದ ಐತಿಹಾಸಿಕತೆಯನ್ನು ಇಂದಿನ ಅಂಕಣದಲ್ಲಿ ಚರ್ಚಿಸುತ್ತೇನೆ.

ಮೈಸೂರಿನಲ್ಲಿ ದಸರಾದ ಆಚರಣೆಯನ್ನು ಪ್ರಾರಂಭಿಸಿದವರು ರಾಜ ಒಡೆಯರು (1553-1617). 1610ರಲ್ಲಿ ಶ್ರೀರಂಗಪಟ್ಟಣವನ್ನು ವಿಜಯನಗರದ ರಾಜಪ್ರತಿನಿಧಿಯಾಗಿದ್ದ ತಿರುಮಲನಿಂದ ವಶಪಡಿಸಿಕೊಂಡರು. ತದನಂತರದಲ್ಲಿ ಶ್ರೀರಂಗಪಟ್ಟಣಕ್ಕೆ ರಾಜಧಾನಿಯನ್ನು ವರ್ಗಾಯಿಸಿದ ರಾಜ ಒಡೆಯರು ವಿಜಯನಗರದ ಬಹುಮುಖ್ಯ ರಾಜ್ಯ ಆಚರಣೆಯಾದ (ರಾಯಲ್ ರಿಚ್ಯುಯಲ್) ನವರಾತ್ರಿ ಉತ್ಸವವನ್ನು ಪ್ರಾರಂಭಿಸಿದರು. ಈ ಎರಡೂ ಸಾಧನೆಗಳು ಮೈಸೂರು ವಿಜಯನಗರದ ಉತ್ತರಾಧಿಕಾರಿ ರಾಜ್ಯವೆಂದು ಹೆಸರು ಪಡೆಯಲು ಕಾರಣವಾಯಿತೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.

ಇಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ. ರಾಜ ಒಡೆಯರು ಮೈಸೂರು ಸಂಸ್ಥಾನವನ್ನು ಆಳಿದ ಒಡೆಯರ್ ಮನೆತನದ ಒಂಬತ್ತನೆಯ ದೊರೆ. ಅವರು ಅಧಿಕಾರಕ್ಕೆ ಬರುವ ವೇಳೆಗೆ (1578) ಒಡೆಯರ್ ದೊರೆಗಳು ಸುಮಾರು ಎರಡು ಶತಮಾನಗಳಷ್ಟು ಕಾಲ ಮೈಸೂರಿನ ಆಳ್ವಿಕೆಯನ್ನು ನಡೆಸಿದ್ದರು.

ಆದರೂ ಮೈಸೂರು ಬಹಳ ಚಿಕ್ಕ ಪಾಳೆಯಪಟ್ಟಾಗಿತ್ತು ಮತ್ತು ಅದರ ಅಧಿಕಾರ ವ್ಯಾಪ್ತಿ ಬಹುಮಟ್ಟಿಗೆ ಇಂದಿನ ಮೈಸೂರು ನಗರದ ವರ್ತುಲ ರಸ್ತೆಯೊಳಗಿನ ಪ್ರದೇಶದಲ್ಲಿ ಮಾತ್ರವಿತ್ತು. ಮೈಸೂರು ಸಂಸ್ಥಾನದ ವಿಸ್ತರಣೆಯಾದುದು ರಾಜ ಒಡೆಯರ್ ಅವರ ಕಾಲದಲ್ಲಿಯೆ. ಆದರೂ ಮುಂದಿನ ಒಂದೂವರೆ ಶತಮಾನಗಳಲ್ಲಿ ಮೈಸೂರಿನ ಭೌಗೋಳಿಕ ವ್ಯಾಪ್ತಿ ತುಂಬ ಹೆಚ್ಚಲಿಲ್ಲ ಎನ್ನುವುದು ಐತಿಹಾಸಿಕ ವಾಸ್ತವ.

ಹನ್ನೆರಡನೆಯ ದೊರೆಯಾದ ರಣಧೀರ ಕಂಠೀರವ ನರಸರಾಜ ಒಡೆಯರ್ (1638- 1659) ಮತ್ತು ಹದಿನಾಲ್ಕನೆಯ ರಾಜರಾದ ಚಿಕ್ಕದೇವರಾಜ ಒಡೆಯರ್ (1673- 1704) ಮೈಸೂರಿನ ಗಡಿಯನ್ನು ವಿಸ್ತರಿಸಿ, ಅದರ ಅಧಿಕಾರಕ್ಕೊಂದು ಭದ್ರಬುನಾದಿಯನ್ನು ಹಾಕಿದರು, ನಿಜ.

ಆದರೆ 1760 ಮತ್ತು 1770ರ ದಶಕದಲ್ಲಿ ಹೈದರಾಲಿ ಮೈಸೂರಿನ ಸರ್ವಾಧಿಕಾರಿಯಾದಾಗಲೇ ಈ ರಾಜ್ಯದ ವಿಸ್ತರಣೆಯಾದುದು ಮತ್ತು ಭಾರತದ ಬಹುಮುಖ್ಯ ಸಮಕಾಲೀನ ರಾಜಕೀಯ ಶಕ್ತಿಗಳಲ್ಲೊಂದು ಎಂಬ ಮನ್ನಣೆ ಮೈಸೂರಿಗೆ ದೊರಕಿದ್ದು. ಅವನ ಮಗ ಟಿಪ್ಪು ಸಹ ತನ್ನ ತಂದೆ ವಶಪಡಿಸಿಕೊಂಡಿದ್ದ ಪ್ರದೇಶಗಳನ್ನು ಉಳಿಸಿಕೊಳ್ಳಲು ಜೀವನಪರ್ಯಂತ ಹೆಣಗಿದನಷ್ಟೆ. ನನ್ನ ಮಾತಿನ ಅರ್ಥ ಇಷ್ಟೆ. ವಿಜಯನಗರ ಸಾಮ್ರಾಜ್ಯದ ಉತ್ತರಾಧಿಕಾರಿ ರಾಜ್ಯವಾಗಿ ಮೈಸೂರಿನ ಭವ್ಯ ರಾಜಕೀಯ ಪರಂಪರೆಯೆನ್ನುವುದು ಹೈದರನ ಕಾಲದಲ್ಲಿ ಮಾತ್ರ ನಿಜವಾಗಿತ್ತು.

ಇನ್ನು ದಸರಾದ ಆಚರಣೆಯನ್ನು ಚರ್ಚಿಸೋಣ. ವಿಜಯನಗರದ ಅರಸರ ಮೇಲ್ಪಂಕ್ತಿಯನ್ನು ಅನುಸರಿಸಿ ನವರಾತ್ರಿ ಹಬ್ಬದ ಆಚರಣೆಯನ್ನು ಪ್ರಾರಂಭಿಸಿದವರು ಮೈಸೂರಿನ ಅರಸರು ಮಾತ್ರವಲ್ಲ. ಈ ಪಟ್ಟಿಯಲ್ಲಿ ಇಕ್ಕೇರಿ ಮತ್ತು ಮದುರೆಯ ನಾಯಕರುಗಳು, ದೂರದ ಒರಿಸ್ಸಾದ ದೊರೆಗಳು ಮತ್ತಿತರರು ಸೇರಿದ್ದಾರೆ.

ಮೈಸೂರಿನ ಅರಸರು ಸಹ ದಸರಾವನ್ನು ಆಚರಿಸಿದ್ದು ತಮ್ಮ ಅಂದಿನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿಯೇ ಹೊರತು ಮೈಸೂರಿನಲ್ಲಿ ಅಲ್ಲ.

ನರಸರಾಜ ಒಡೆಯರ ಆಸ್ಥಾನದಲ್ಲಿದ್ದ ಗೋವಿಂದ ವೈದ್ಯ ಕವಿಯು ತನ್ನ ‘ಕಂಠೀರವ ನರಸರಾಜ ವಿಜಯ’ ಕಾವ್ಯದಲ್ಲಿ ಅಂದಿನ ಮಹಾನವಮಿ, ವಿಜಯದಶಮಿ ಮತ್ತು ಜಂಬೂಸವಾರಿಗಳನ್ನು ಮೂರು ಸಂಧಿಗಳಲ್ಲಿ ವರ್ಣಿಸುತ್ತಾನೆ. ಇವುಗಳ ಮೂಲಕ ಶ್ರೀರಂಗಪಟ್ಟಣದಲ್ಲಿನ ದಸರಾ ಆಚರಣೆಗಳ ಕೆಲವು ಮುಖ್ಯ ವಿವರಗಳು ನಮಗೆ ದೊರೆಯುತ್ತಿವೆ.

ದಸರಾದ ಆಚರಣೆ ಮೈಸೂರಿನಲ್ಲಿ ಪ್ರಾರಂಭವಾಗುವುದು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ, 1805ರ ನಂತರ. ಆ ನಂತರದಲ್ಲಿ ನವದಿನಗಳು ಅರಮನೆಯಲ್ಲಿ ಪೂಜಾವಿಧಿಗಳು, ಸಾರ್ವಜನಿಕರಿಗೆ ದರ್ಬಾರು, ಕವಾಯತು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಸ್ಪರ್ಧೆಗಳು ಇತ್ಯಾದಿಗಳೆಲ್ಲ ನಡೆಯುವುದಕ್ಕೆ ಐತಿಹಾಸಿಕ ದಾಖಲೆಗಳು ದೊರೆಯುತ್ತವೆ. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಶಿಸಿದ ಯುರೋಪಿಯನ್ ಅತಿಥಿಗಳಿಗಾಗಿ ಒಂದು ದಿನ ಯುರೋಪಿಯನ್ ದರ್ಬಾರ್ ಎಂದೇ 1814ರ ನಂತರ ನಿಗದಿಯಾಯಿತು.

ಇಲ್ಲಿ ಗಮನಾರ್ಹ ಅಂಶವೆಂದರೆ, ಇವೆಲ್ಲ ನಡೆಯುತ್ತಿದ್ದ ಮೈಸೂರು ನಗರವು 1831ರ ನಂತರ ರಾಜ್ಯದ ಆಡಳಿತ ಕೇಂದ್ರವಾಗಿ ಉಳಿಯಲಿಲ್ಲ, ಬೆಂಗಳೂರು ಆ ಸ್ಥಾನವನ್ನು ಪಡೆಯಿತು. ಒಡೆಯರ್ ಮನೆತನವೂ 1831ರಿಂದ 1881ರವರೆಗೆ ತನ್ನ ಅಧಿಕಾರವನ್ನು ಕಳೆದುಕೊಂಡಿತು.

ಈ ನಡುವೆ ದಸರಾದ ಆಚರಣೆ ಮೈಸೂರಿನಲ್ಲಿ ಮುಂದುವರೆದರೂ ಅಂದಿನ ಮೈಸೂರು ದಟ್ಟ ಜನವಸತಿಯಿದ್ದ, ಕೊಳಕಾದ ಮತ್ತು ಸಾಂಕ್ರಾಮಿಕ ರೋಗಗಳಿಂದ ಪದೇಪದೇ ಪೀಡಿತವಾಗುತ್ತಿದ್ದ ದೊಡ್ಡ ಹಳ್ಳಿಯಾಗಿತ್ತೇ ಹೊರತು ಇಂದಿನಂತೆ ಸ್ವಚ್ಛ, ಸುಸಜ್ಜಿತ ನಗರವಾಗಿರಲಿಲ್ಲ. 1881ರಲ್ಲಿ ರಾಜ್ಯಾಧಿಕಾರವನ್ನು ಮತ್ತೆ ಪಡೆದ ನಂತರ ಒಡೆಯರ್ ಅರಸರು ಮೈಸೂರನ್ನು ಹೊಸ ನಗರವಾಗಿಯೇ 20ನೆಯ ಶತಮಾನದಲ್ಲಿ ಕಟ್ಟಿದರು.

ಈ ಪ್ರಕ್ರಿಯೆಗೆ 1897ರಲ್ಲಿ ಮೈಸೂರು ಅರಮನೆ ಸುಟ್ಟಿದ್ದು ಸಹ ಪೂರಕವಾಗಿ ಒದಗಿಬಂದಿತು. 1903-04ರಲ್ಲಿ ಸ್ಥಾಪಿತವಾದ ನಗರ ಸುಧಾರಣಾ ವಿಶ್ವಸ್ಥ ಮಂಡಳಿಯು ಮೈಸೂರನ್ನು ಯೋಜಿತ ರೀತಿಯಲ್ಲಿ ರೂಪಿಸಿತು. 1913ರಲ್ಲಿ ಪೂರ್ಣಗೊಂಡ ಹೊಸ ಅರಮನೆಯು ಮೈಸೂರಿಗೆ ಹೊಸ ಮೆರುಗು ನೀಡಿತು. ಅಲ್ಲದೆ ದಸರಾ ಹಬ್ಬದ ಆಚರಣೆಗೂ ಭವ್ಯ ವೇದಿಕೆಯೊಂದನ್ನು ಒದಗಿಸಿತು.

ಪಾರಂಪರಿಕ ದಸರಾ ಎಂದು ನಾವು ಅಂದುಕೊಂಡಾಗ ನಮ್ಮ ಕಲ್ಪನೆಯಲ್ಲಿ ಮೂಡುವ ಚಿತ್ರಗಳು ಬಹುಮಟ್ಟಿಗೆ 1920ರ ದಶಕದಲ್ಲಿ ರೂಪುಗೊಂಡ ಆಚರಣೆಗಳು ಮತ್ತು ತಾಣಗಳು. ಆದರೆ ದಸರಾ ಕುರಿತಾಗಿ ನಮ್ಮ ಮನಸ್ಸಿನಲ್ಲಿ ಮೂಡಿರುವ ಐತಿಹಾಸಿಕ ಚಿತ್ರವೆಂದರೆ ವಿಜಯನಗರದ ಮಹಾನವಮಿ ದಿಬ್ಬದಲ್ಲಿ ಕೃಷ್ಣದೇವರಾಯನು ಆಚರಿಸುತ್ತಿದ್ದ ನವರಾತ್ರಿ ಹಬ್ಬವು 17ನೆಯ ಶತಮಾನದ ಪ್ರಾರಂಭದಿಂದಲೂ ಪಾರಂಪರಿಕ ದಸರಾ ಹಬ್ಬವಾಗಿ ಮೈಸೂರಿನಲ್ಲಿ ಇಂದಿರುವ ಭವ್ಯ ಅರಮನೆಯ ಮುಂದೆ ಇಂದು ನಡೆಯುತ್ತಿರುವಂತೆಯೇ ನಡೆಯುತ್ತ ಬಂದಿದೆ. ಪಾರಂಪರಿಕ ಎಂದರೆ ಕಾಲಾತೀತ ಎನ್ನುವ ಭಾವನೆಯನ್ನು ಹುಟ್ಟಿಸುತ್ತಿದೆ.

ನಮ್ಮ ಮನಸ್ಸಿನಲ್ಲಿ ಪರಂಪರೆಯ ಈ ಕಲ್ಪನೆ ಮೂಡಲು ಮೈಸೂರಿನ ವಾಸ್ತುಶಿಲ್ಪವೂ ಒಂದು ಕಾರಣ. ಮೈಸೂರು 20ನೆಯ ಶತಮಾನದಲ್ಲಿ ಕಟ್ಟಿದ ನಗರ. 19ನೆಯ ಶತಮಾನದ ಮೂರು ಪ್ರಮುಖ ಕಟ್ಟಡಗಳನ್ನು ಬಿಟ್ಟರೆ ಉಳಿದೆಲ್ಲ ಸಾರ್ವಜನಿಕ ಕಟ್ಟಡಗಳು ಮತ್ತು ಅರಮನೆಗಳು 1880ರ ನಂತರ ಕಟ್ಟಿದವು.

ಆದರೆ ಅವುಗಳನ್ನು ಕಟ್ಟುವಾಗ ಮೈಸೂರಿಗೆ ಒಂದು ‘ಪಾರಂಪರಿಕ ಶೈಲಿ’ಯನ್ನು ವಾಸ್ತುಶಿಲ್ಪಿಗಳು ಆವಿಷ್ಕರಿಸಿಕೊಂಡರು. ಅಂದರೆ ಮೈಸೂರಿನ ಆಧುನಿಕ ಕಟ್ಟಡಗಳು ಐತಿಹಾಸಿಕ, ಕಾಲಾತೀತ ರಚನೆಗಳು ಎನ್ನುವ ಭಾವನೆಯನ್ನು ನೋಡುಗನ ಮನಸ್ಸಿನಲ್ಲಿ ಮೂಡಿಸುವ ಉದ್ದೇಶವನ್ನು ಹೊಂದಿದ್ದವು. ಈ ಮೊದಲು ಆ ಶೈಲಿಯ ಕಟ್ಟಡಗಳಿರಲಿಲ್ಲ ಎನ್ನುವುದು ಮುಖ್ಯವಾಗಲಿಲ್ಲ. 

ಆಧುನಿಕ ಮೈಸೂರಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ದಕ್ಕಿರುವ ಹೆಗ್ಗಳಿಕೆಗಳು ಹಲವು. ಗಾಂಧಿ ಅವರಿಂದ  ಶ್ರೀಸಾಮಾನ್ಯನವರೆಗೆ ಅವರನ್ನು ಮೆಚ್ಚದವರಿಲ್ಲ. ಅವರ ಸಾಧನೆಗಳ ಪಟ್ಟಿಗೆ ಸೇರಬೇಕಿರುವ ಮತ್ತೊಂದು ಅಂಶವಿದು: ಮೈಸೂರಿನ ಪಾರಂಪರಿಕ ಸಂಸ್ಕೃತಿ ಭವ್ಯವಾದುದು, ಐತಿಹಾಸಿಕವಾದುದು ಮತ್ತು ಬಹಳ ಕಾಲದಿಂದ ಹೀಗೆಯೇ ಇತ್ತು ಎನ್ನುವ ನಂಬಿಕೆಯನ್ನು ಜನರಲ್ಲಿ ಮೂಡಿಸುವಲ್ಲಿ ನಾಲ್ವಡಿಯವರು ಮತ್ತು ಅವರ ಆಡಳಿತ ಯಶಸ್ವಿಯಾಯಿತು. ಹೀಗೆ ಆವಿಷ್ಕಾರಗೊಂಡ ಪರಂಪರೆ ನಿಜವಾಗಿಯೂ ಇದ್ದುದೇ, ವಾಸ್ತವವೇ ಎನ್ನುವ ಪ್ರಶ್ನೆಗಳು ಇತಿಹಾಸಕಾರನನ್ನು ಮಾತ್ರ ಕಾಡುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.