ಸೋಮವಾರ, ಮೇ 17, 2021
23 °C

ಸಾವಿಗಂಜದ ಜೀವ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

 ಪ್ರೊ. ಗೋಪಾಲಕೃಷ್ಣ ಅಡಿಗರು ತಮ್ಮ ಆತ್ಮಕಥನ  ನೆನಪಿನ ಗಣಿಯಿಂದ  ಎಂಬ ಕೃತಿಯಲ್ಲಿ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾರೆ.  ಅದು ಅವರು ಪುಟ್ಟ ಹುಡುಗನಾಗಿದ್ದಾಗ ನಡೆದದ್ದು.ಅವರ ತಂದೆ ಬಡತನದಲ್ಲೇ ಬೆಳೆದವರಾದರೂ ಜೋತಿಷ್ಯದಿಂದ, ಪೌರೋಹಿತ್ಯದಿಂದ, ಪಂಚಾಂಗದಿಂದ ದುಡಿದು ಸಂಪಾದನೆ ಮಾಡಿ ಮನೆಯನ್ನು ಒಂದು ಹಂತಕ್ಕೆ ತಂದಿದ್ದವರು.  ಅವರದ್ದು ಸಾಮಾನ್ಯವಾಗಿ ನಿರ್ಲಿಪ್ತ ಸ್ವಭಾವ. ಒಂದು ಸಲ ಅವರಿಗೆ ಒಂದಷ್ಟು ಜಮೀನು ಮಾಡುವ ಆಸೆ ಹುಟ್ಟಿತು.  ತಾವಿದ್ದ ಮನೆಯಿಂದ ಐದಾರು ಮೈಲಿ ದೂರದಲ್ಲಿ  ಕಗ್ಗನ ಕಮರಿ ಎಂಬ ಜಾಗದಲ್ಲಿ  ಒಂದು ಆಸ್ತಿ ಮಾರಾಟಕ್ಕೆ ಬಂದಿತ್ತು.  ಆಗ ಅದರ ಬೆಲೆ ಸುಮಾರು ಮುನ್ನೂರೋ, ನಾನ್ನೂರೋ ಇದ್ದಿರಬೇಕು.  ಆಗ ಅದೊಂದು ದೊಡ್ಡ ಮೊತ್ತವೇ.ಈ ಜಮೀನು ಕಾಡಿನಂಚಿನಲ್ಲಿದ್ದು  ಅದರ ಕೆಳಗೇ ಹೊಳೆ ಹರಿಯುತ್ತಿತ್ತು.  ಈ ಹೊಳೆಗೆ ಅಡ್ಡಲಾಗಿ ಒಂದು ಕಟ್ಟೆ ಕಟ್ಟಿದರೆ ಜಮೀನು ನೀರಾವರಿಗೆ ಒಳಪಟ್ಟು ಹೆಚ್ಚು ಇಳುವರಿ ನೀಡಬಹುದೆಂಬ ಆಲೋಚನೆ ಬಂತು.  ಈ ಕೆಲಸ ಮಾಡಲು ಕಂಟ್ರಾಕ್ಟರ್ ಒಬ್ಬ ಪ್ರತ್ಯಕ್ಷನಾದ.  ಒಟ್ಟು ಕೆಲಸದ ಖರ್ಚು ಸಾವಿರ ರೂಪಾಯಿ.  ಅದರಲ್ಲಿ ಇನ್ನೂರು ಮೊದಲು ಕೊಟ್ಟು ಉಳಿದ ಎಂಟು ನೂರನ್ನು ಆಮೇಲೆ ಕೊಟ್ಟರೆ ಆದೀತು ಎಂದು ನಂಬಿಸಿದ.  ಅಡಿಗರ ತಂದೆ ನಂಬಿ ಕೆಲಸವನ್ನು ಒಪ್ಪಿಸಿದರು.ಆಮೇಲೆ ತಿಳಿಯಿತು ಆ ಕಂಟ್ರಾಕ್ಟರ್ ಕೇಡಿಗಳ ಪಟ್ಟಿಯಲ್ಲಿ ನಂಬರ್ ಒಂದನೇ ಬುಡನಸಾಬಿ ಎಂದು. ಸಾಹೇಬ ನಾಲ್ಕಾರು ಆಳುಗಳನ್ನು ಕರೆದುಕೊಂಡು ಏನೋ ಕೆಲಸ ಮಾಡಿದಂತೆ ಕಾಣಿಸಿಕೊಂಡ.  ನಂತರ ಅವನ ಪತ್ತೆಯೇ ಇಲ್ಲ. ಎಷ್ಟೋ ದಿನ ಹುಡುಕಾಟದ ಮೇಲೆ ಸಾಹೇಬ ಮನೆಗೆ ಬಂದು ತಕ್ಷಣ ಐದುನೂರು ರೂಪಾಯಿ ಕೊಡಬೇಕೆಂದು ತಕರಾರು ತೆಗೆದ.  ನೀವು ಕೆಲಸ ಮುಗಿದ ಮೇಲೆ ಕೊಡಿ ಎಂದಿದ್ದಿರಲ್ಲ  ಎಂದು ಕೇಳಿದರೆ  ಅದೆಲ್ಲಾ ಆಗ ಸ್ವಾಮಿ. ಇಂಥ ತರದೂದು ಬರುತ್ತದೆ ಎಂದು ನನಗೇನು ಗೊತ್ತಿತ್ತು?  ಈಗ ದುಡ್ಡು ಕೊಟ್ಟರೆ ಕೆಲಸ ಮುಗಿಸಿಕೊಡುತ್ತೇನೆ  ಎಂದು ಜೋರು ಮಾಡಿದ. ನಿರ್ವಾಹವಿಲ್ಲದೆ ಅವನು ಹೇಳಿದ ಹಾಗೆಯೇ ಮಾಡಿದ್ದಾಯಿತು.ಮರುದಿನ ಅಡಿಗರ ತಂದೆ ಸಾಹೇಬರೊಂದಿಗೆ ಜಮೀನಿನ ಕಡೆಗೆ ನಡೆದರು.  ಕಾಡು ಸ್ವಲ್ಪ ದಟ್ಟವಾದ ಮೇಲೆ ಸಾಹೇಬ ಮಾತು ಶುರುಮಾಡಿದ,  ಸ್ವಾಮೀ, ನನ್ನ ವಿಷಯ ನಿಮಗೆ ತಿಳಿದಿಲ್ಲ ಎಂದು ತೋರುತ್ತದೆ. ನಾನು ಯಾರಿಗೂ ಹೆದರುವ ಕುಳ ಅಲ್ಲ.  ನನಗೆ ವಿರೋಧ ಮಾಡಿದವರು ಬದುಕಿರುವುದೇ ಕಷ್ಟ.  ಕಂಚಿಕಾನಿನ ರಾಮಯ್ಯ ಶೆಟ್ಟರು ಕೆಲಸ ಒಪ್ಪಿಸಿ ಹಣ ಕೊಡಲು ನಿರಾಕರಿಸಿದರು.  ಏನಾಯಿತು ಗೊತ್ತಾ?  ಅವರಿಗೆ ಚೂರಿ ಹಾಕಿದೆ. ಅವರಿಗೆ ಮಾತ್ರವಲ್ಲ, ಇನ್ನೂ ಬಿಜೂರಿನ ಶ್ಯಾನುಭಾಗರು, ಹೊಸಕೋಟೆಯ ಕೃಷ್ಣಪ್ಪ ಶೆಟ್ಟರು ಇಂಥವರಿಗೆಲ್ಲ ನನ್ನ ವಿಚಾರ ಗೊತ್ತು.  ನಿಮಗೆ ಪಾಪ ಇನ್ನೂ ತಿಳಿಯದು.  ನಂತರ ಗೊತ್ತಾಗುತ್ತೆ ಬಿಡಿ  ಎಂದು ಗತ್ತಿನಿಂದ ಹೇಳಿದ.ಇದನ್ನು ಕೇಳಿ ಪುರೋಹಿತರು ಅಲ್ಲೇ ಇದ್ದ ಒಂದು ಕಲ್ಲಿನ ಮೇಲೆ ಕುಳಿತರು. ಸಾಹೇಬರೇ ನೀವು ಎಂಥವರು ಎಂದು ತಿಳಿಯಿತು.  ಚಿಂತೆಯಿಲ್ಲ, ಇತ್ತ ಬನ್ನಿ  ಎಂದು ಹೇಳಿ ತಮ್ಮ ಎದೆಯ ಮೇಲಿದ್ದ ಶಾಲನ್ನು ತೆಗೆದು ಕೆಳಗಿಟ್ಟು ಆತನನ್ನು ಗಂಭೀರ ನಿಶ್ಚಿಂತವಾದ ಮುಖಭಾವದಿಂದ ನೋಡುತ್ತ ತಮ್ಮ ಹತ್ತಿರವಿದ್ದ ಎಲೆ-ಅಡಿಕೆಯ ಚೀಲವನ್ನು ಬಿಚ್ಚಿ ಅದರಲ್ಲಿದ್ದ  ಚಾಕುವನ್ನು ಹೊರತೆಗೆದು,  ಸಾಹೇಬರೇ ಇಲ್ಲಿ ನೋಡಿ. ಇಲ್ಲಿ ನನ್ನ ಎದೆ ಇದೆ,  ಇಲ್ಲಿ ಚಾಕು ಇದೆ.  ಅದು ತುಂಬ ಹರಿತವಾಗಿದೆ   ಎಂದು ಅದನ್ನು ಕಲ್ಲಿನ ಮೇಲೆ ಚೆನ್ನಾಗಿ ಮಸೆದು,  ಸಾಹೇಬರೇ ಈ ಚಾಕು ತೆಗೆದುಕೊಂಡು ನನ್ನ ಎದೆಗೆ ಹಾಕಿ  ಎಂದು ನಿರ್ಭಯವಾಗಿ ಹೇಳಿದರಂತೆ.ಇದನ್ನು ಕಂಡ ಆ ಒಂದನೇ ನಂಬರಿನ ಸಾಹೇಬ ಒಂದು ನಿಮಿಷ ಅಲ್ಲಾಡದೆಯೇ ನಿಂತಿದ್ದು ನಂತರ ಕುಳಿತಿದ್ದ ಪುರೋಹಿತರ ಕಾಲಿಗೆ ಬಿದ್ದು,  ಸ್ವಾಮೀ, ನನ್ನನ್ನು ಮಾಫ್ ಮಾಡಿ. ನೀವು ದೊಡ್ಡವರು.  ಏನೇನೋ ಹೇಳಿಬಿಟ್ಟೆ ಕತ್ತೆ ನಾನು. ಕ್ಷಮಿಸಿ ಬಿಡಿ  ಎಂದು ಅಂಗಲಾಚಿದನಂತೆ. ಸಾವಿಗೆ ಹೆದರದಿದ್ದರೆ ಸಾಯಿಸುವವರೂ ಹೆದರುತ್ತಾರೆ  ಎಂದು ಪುರೋಹಿತರು ಹೇಳಿದರಂತೆ.  ಸಾವು ಹೆದರಿದರೂ ಬಿಡುವುದಿಲ್ಲ, ಹೆದರದಿದ್ದರೂ ಬಿಡುವುದಿಲ್ಲ.  ಆದ್ದರಿಂದ ಸಾವಿಗೆ ಹೆದರುತ್ತ ದಿನವೂ ಸಾಯುವ ಬದಲು ಬಂದಾಗ ಬರಲಿ ಎಂದು ಹೆದರದೇ ಇರುವಷ್ಟು ದಿನ ಸಂತೋಷವಾಗಿ ಬದುಕುವುದು ಮೇಲು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.