ಸೋಮವಾರ, ಮೇ 17, 2021
25 °C

ಸಿನಿಮಾ, ನಿಜ ಜೀವನವಾದ ಕಥೆ

ಎಸ್.ಆರ್. ರಾಮಕೃಷ್ಣ Updated:

ಅಕ್ಷರ ಗಾತ್ರ : | |

ಸಿನಿಮಾ, ನಿಜ ಜೀವನವಾದ ಕಥೆ

ಬೆಂಗಳೂರಿನ ಸಿನಿಮಾ ವ್ಯಾಮೊಹಿಗಳ ಬಗ್ಗೆ ಒಂದು ಟಿಪ್ಪಣಿ ಇದು. ಭಾರತೀಯ ಸಿನಿಮಾರಂಗಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ನಟನಟಿಯರು, ಸಂಗೀತಗಾರರು, ನಿರ್ದೇಶಕರ ಬಗ್ಗೆ ಎಲ್ಲೆಡೆ ಓದುತ್ತಿದ್ದೇವೆ, ಕೇಳುತ್ತಿದ್ದೇವೆ. ಆದರೆ ಕೆಲವು ಸಿನಿಮಾ ಪ್ರೇಮಿಗಳ ಕಥೆ ಸಿನಿಮಾ ತಯಾರಿಸುವವರ ಕಥೆಗಿಂತ ಸ್ವಾರಸ್ಯವಾಗಿರುತ್ತದೆ.ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ಒಂದು ಪ್ರಶ್ನೆಯನ್ನು ಕೇಳಿದ: ಕಲೆ ಜೀವನವನ್ನು ಅನುಕರಿಸುವುದೋ, ಅಥವಾ ಜೀವನವೇ ಕಲೆಯನ್ನು ಅನುಕರಿಸುವುದೋ? ಸಿನಿಮಾ ಆಕರ್ಷಣೆ ಉತ್ಕಟವಾಗಿರುವ ದಕ್ಷಿಣ ಭಾರತದಲ್ಲಿ ಜೀವನವೇ ಕಲೆಯನ್ನು ಅನುಕರಿಸುವುದು ಹೆಚ್ಚು! ಸಿನಿಮಾ ಮತ್ತು ಸಮಾಜದ ನಡುವಿನ ಸಂಬಂಧದ ಬಗ್ಗೆ ಅಕಾಡೆಮಿಕ್ ಚರ್ಚೆ ನಡೆಯುತ್ತಿರುತ್ತದೆ; ವಿದ್ವಾಂಸರು ಪುಸ್ತಕ, ಥೀಸಿಸ್ ಬರೆಯುತ್ತಿರುತ್ತಾರೆ. ಪತ್ರಕರ್ತ ಕುತೂಹಲದಿಂದ ವಸ್ತುಸ್ಥಿತಿ ಹೇಗಿರಬಹುದು ಎಂದು ಹುಡುಕ ಹೊರಟಾಗ ಕಂಡುಬಂದದ್ದು ತಮಾಷೆಯ, ಸ್ಫೂರ್ತಿಯ, ಮನಮುಟ್ಟುವ ಕಥೆಗಳು.ಚಿತ್ರ ಜಗತ್ತನ್ನು ಟಿನ್ಸೆಲ್, ಅಂದರೆ ಗಿಲೀಟು, ಎಂದು ಕರೆಯುವುದುಂಟು.  ಆದರೆ ಅದೆಷ್ಟೋ ಚಿತ್ರಗಳು ಜೀವನದ ದಿಕ್ಕನ್ನೇ ಬದಲಿಸಿರುವ ಉದಾಹರಣೆಗಳು ನಮ್ಮ ಸುತ್ತಲೂ ಇವೆ. ಇವು ದೊಡ್ಡ ನಿರ್ದೇಶಕರ, ಮಹಾನ್ ಕಲಾತ್ಮಕತೆಗೆ ಹೆಸರಾಗಿರುವ ಚಿತ್ರಗಳಲ್ಲ. ಫ್ಲಾಪ್ ಚಿತ್ರಗಳು ಕೂಡ ಜೀವನವನ್ನು ಬದಲಿಸಿರುವ ನಿದರ್ಶನಗಳು ಬೆಂಗಳೂರಿನಲ್ಲೇ ಇವೆ. ಟಾಕ್ ವಾರಪತ್ರಿಕೆಯ ವರದಿಗಾರ-ಸ್ನೇಹಿತರು ನಗರದ ಮೂಲೆಮೂಲೆಯಿಂದ ಬೆರಗು ಹುಟ್ಟಿಸುವ ಕೆಲವು ನೈಜ ಕಥೆಗಳನ್ನು ಹುಡುಕಿ ತಂದಿದ್ದಾರೆ.ವಿ. ಶಾಂತರಾಮ್ ನಿರ್ದೇಶನದ `ದೋ ಆಂಖೆ ಬಾರ ಹಾಥ್' (1957) ಚಿತ್ರ ನೋಡಿದ ಒಬ್ಬ ಜೈಲ್ ಅಧಿಕಾರಿ ಬೆಂಗಳೂರಿನ ಮೊದಲ ಬಯಲು ಸೆರೆಮನೆಯನ್ನು ತೆರೆಯಲು ಕಾರಣರಾದರು. ಇದು ನಡೆದದ್ದು 70ರ ದಶಕದಲ್ಲಿ. ಬಿ.ಸಿ.ಮಲ್ಲಯ್ಯ ಎಂಬ ಅಧಿಕಾರಿ ತೆರೆಯ ಮೇಲೆ ಕಂಡ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತರಲು ಪ್ರಯತ್ನಪಟ್ಟು ಯಶಸ್ವಿಯಾದರು. ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಚಿತ್ರವನ್ನು ತೋರಿಸಿದಾಗ ಅವರಿಗೂ ಮುಕ್ತ ಬಂದೀಖಾನೆಯ ಐಡಿಯಾ ಇಷ್ಟವಾಗಿ ಅನುಮತಿ ಕೊಟ್ಟರು. ತಕ್ಷಣವೇ ದೇವನಹಳ್ಳಿಯ ಹತ್ತಿರದ ಕೋರಮಂಗಲದಲ್ಲಿ ಭೂಮಿ ಮಂಜೂರು ಮಾಡಿದರು. ಒಂದು ಚಿತ್ರದ ಸ್ಫೂರ್ತಿಯಿಂದ ನೂರಾರು ಕೈದಿಗಳ, ಅವರನ್ನು ಕಾಯುವ ಅಧಿಕಾರಿಗಳ ಜೀವನ ಪರಿವರ್ತನೆಯಾಗಿ ಹೋಯಿತು.ಸೆರೆಮನೆಯ ಬಗ್ಗೆ ವರದಿ ಮಾಡಲು ಹೋದ ಬಸು ಮತ್ತು ಛಾಯಾಗ್ರಾಹಕ ರಮೇಶ್ ಹುಣಸೂರು ಹೇಳುವಂತೆ, ನಾಲ್ಕು ದಶಕದ ಹಿಂದೆ ಮಲ್ಲಯ್ಯನವರು ಮಾಡಿದ ಒಳ್ಳೆಯ ಕೆಲಸ ಇಂದಿಗೂ ಜೀವಂತವಾಗಿದೆ. ಸೂರಿಲ್ಲದ ಜೈಲಿನಲ್ಲಿ ಬಂದಿಗಳು ಧಾನ್ಯ, ತರಕಾರಿ ಬೆಳೆಯುತ್ತಾರೆ. ಜವಾಬ್ದಾರಿಯಿಂದ ಬದುಕುತ್ತಾರೆ.  ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸುವುದಿಲ್ಲ. ಮಲ್ಲಯ್ಯನವರ ಕಾಲದಲ್ಲಿ ತಾಯಿಯ ಅನಾರೋಗ್ಯದ ಬಗ್ಗೆ ತೀವ್ರ ಆತಂಕಕ್ಕೆ ಒಳಗಾಗಿದ್ದ ಬಂದಿಯೊಬ್ಬ ಒಮ್ಮೆ ಓಡಿ ಹೋಗಿದ್ದನಂತೆ. ಆದರೆ ಮಲ್ಲಯ್ಯನವರಿಗೆ ಎಲ್ಲಿ ನೋವಾಗುತ್ತದೋ ಎಂದು ಅರ್ಧ ರಾತ್ರಿಯಲ್ಲೇ ಬಸ್ ಇಳಿದು ಮರಳಿ ಬಂದುಬಿಟ್ಟನಂತೆ. ನಂತರ ಪೆರೋಲ್ ಮೇಲೆ ಬೈಲಹೊಂಗಲಕ್ಕೆ ಹೋಗಿ ತಾಯಿಯನ್ನು ಕಂಡಾಗ ಆಕೆ ಚೇತರಿಸಿಕೊಂಡುಬಿಟ್ಟಳಂತೆ. ಪೆರೋಲ್ ಮುಗಿಯುವ ಮುನ್ನವೇ ಅವನು ಜೈಲಿಗೆ ವಾಪಸಾದ ಪ್ರಸಂಗ ಮಲ್ಲಯ್ಯನವರ ಮನಸಿನಲ್ಲಿ ಇಂದಿಗೂ ಹಸಿರಾಗಿದೆ.ರಾಜಕುಮಾರ್ ನಟನೆಯ `ಬಂಗಾರದ ಮನುಷ್ಯ' ಚಿತ್ರವನ್ನು ನೋಡಿ ಹಲವರು ಪ್ರಭಾವಿತರಾದ ಪ್ರಸಂಗಗಳಿವೆ. ನಗರದಲ್ಲಿ ನೆಲೆಸಬೇಕೆಂದಿದ್ದ ಯುವಕರು ಹಳ್ಳಿಗೆ ಹೋಗಿ ಬೇಸಾಯ ಮಾಡುವುದು, ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಅಧಿಕ ಇಳುವರಿ ತೆಗೆಯುವುದು ಈ ಹಿಟ್ ಚಿತ್ರದ ಫಲಶ್ರುತಿ ಎಂದು ಅದರ ನಿರ್ದೇಶಕ ಸಿದ್ದಲಿಂಗಯ್ಯನವರು ಜ್ಞಾಪಿಸಿಕೊಳ್ಳುತ್ತಾರೆ.ಅಮರ ಪ್ರೀತಿಯ ದಾಂಪತ್ಯದ ಆದರ್ಶವನ್ನು ಎತ್ತಿ ಹಿಡಿಯುವ ಚಿತ್ರ `ಹಾಲು ಜೇನು'. ರಾಜಕುಮಾರ್ ಮತ್ತು ಮಾಧವಿ ನಟಿಸಿರುವ ಈ ಚಿತ್ರವನ್ನು ನೋಡಿದ ಬ್ಯಾಂಕ್ ಉದ್ಯೋಗಿ ರಾಮ್‌ಕುಮಾರ್ ಚಿತ್ರದ ನಾಯಕನಂತೆಯೇ ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಮಡದಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಪದ್ಮಶ್ರಿ ಕೂಡ ರಾಜಕುಮಾರ್ ಅಭಿಮಾನಿ.ಈ ಗಂಡ ಹೆಂಡತಿಯ ಕಥೆ ಶುರು ಆಗುವುದೂ ಸಿನಿಮಾದಿಂದಲೇ.  ಪರಸ್ಪರ ನೋಡದೆಯೇ, ರಾಜಕುಮಾರ್ ಅಭಿಮಾನಿ ಎಂಬ ಒಂದೇ ಕಾರಣಕ್ಕೆ, ಇವರಿಬ್ಬರೂ ಮದುವೆಗೆ ಒಪ್ಪಿಕೊಂಡುಬಿಟ್ಟರಂತೆ. ಮದುವೆಯ ನಂತರ ರಾಜಕುಮಾರ್ ಸಿನಿಮಾ ಬಿಡದೆ ನೋಡುತ್ತಿದ್ದರು. ಅವರ ಕಾರ್ಯಕ್ರಮವಿದ್ದರೆ ಹೋಗಿ ಕಂಡು ಮಾತಾಡಿಸಿಕೊಂಡು ಬರುತ್ತಿದ್ದರು. 23 ವರ್ಷವಿದ್ದಾಗ ಮೈಸೂರಿನ ಆಸ್ಪತ್ರೆಗೆ ಪದ್ಮಶ್ರಿ ಹೋದಾಗ ಡಾಕ್ಟರರ ಪ್ರಮಾದದಿಂದ ಆರೋಗ್ಯ ಕೆಟ್ಟುಹೋಯಿತು. ಅಂದು ಹಾಸಿಗೆ ಹಿಡಿದವರು ಇಂದಿಗೂ ಅದೇ ಅವಸ್ಥೆಯಲ್ಲಿದ್ದಾರೆ. ಆಸ್ತಮ, ಹೈಪರ್ ಟೆನ್ಶನ್ ಅಲ್ಲದೆ ಇನ್ನೂ ಹಲವು ತೊಂದರೆಗಳನ್ನು 30 ವರ್ಷದಿಂದ ಎದುರಿಸುತ್ತಿರುವ ಇವರನ್ನು ನೋಡಿಕೊಳ್ಳಲು ರಾಮ್‌ಕುಮಾರ್ ಸ್ವಯಂ ನಿವೃತ್ತಿ ತೆಗೆದುಕೊಂಡು ಮನೆಯಲ್ಲೇ ಇದ್ದಾರೆ. ರಾಜಕುಮಾರ್ ನಟಿಸಿದ ಪಾತ್ರ ತೋರಿದ ಪ್ರೀತಿಯನ್ನು ರಾಮ್ ಕುಮಾರ್ ನಿಜಜೀವನದಲ್ಲಿ ತೋರುತ್ತಿದ್ದಾರೆ. ರಾಜ್ ಕುಮಾರ್ ಅವರ ಎಲ್ಲ ಚಿತ್ರದ ಹಾಡುಗಳನ್ನು ಸಂಗ್ರಹಿಸಿದ್ದಾರೆ. ಪದ್ಮಶ್ರಿ ಅವರಿಗೆ ಆ ಹಾಡುಗಳ ಕ್ಯಾಸೆಟ್ಟು ಸೀಡಿಗಳನ್ನು ಹಾಕಿ ಖುಷಿಪಡಿಸುತ್ತಾರೆ.`ರಾಕ್ ಆನ್' ಎಂಬ ಹಿಂದಿ ಚಿತ್ರ ನೋಡಿ `ಏಕ' ಎಂಬ ಒಂದು ಬ್ಯಾಂಡ್ ಹುಟ್ಟಿಕೊಂಡಿತು. ಸಂಗೀತ ಬಿಟ್ಟು ಕಾರ್ಪೊರೇಟ್ ಸಂಸ್ಥೆಯ ಜನರಲ್ ಮ್ಯೋನೇಜರ್ ಆಗಿದ್ದ ಬೆಂಗಳೂರು ಮೂಲದ ಲೋಕೇಶ್ ಸಿನಿಮಾ ನೋಡಿ ತಮಗಿಷ್ಟವಾದ ಕ್ಷೇತ್ರಕ್ಕೆ ಮರಳಿದರಂತೆ. ಹಾಗೆಯೇ `ಆಟೊ ರಾಜ' ಎಂಬ, ಶಂಕರ್‌ನಾಗ್ ನಟಿಸಿರುವ ಕನ್ನಡ ಚಿತ್ರ ನೋಡಿದ ಕುಮಾರ್ ಎಂಬಾತ ಸಾರ್ವಜನಿಕರಿಗೆ ಸಹಾಯ ಮಾಡುವ, ಕೆಲಸದಲ್ಲಿ ಹೆಮ್ಮೆಪಡುವ ಆಟೋ ಡ್ರೈವರ್ ಆಗಿ ಮಾರ್ಪಟ್ಟಿದ್ದಾರೆ.

ಬೆಂಗಳೂರಿನ ತಮಿಳು ಚಿತ್ರ ಪ್ರೇಮಿಗಳ ಗಮ್ಮತ್ತು ಹೀಗೆಯೇ. `ಅಣ್ಣಾಮಲೈ' ಎಂಬ ರಜನೀಕಾಂತ್ ಸಿನಿಮಾ ನೋಡಿದ ಕನ್ನಡಿಗ ಜೈನ ವಿ. ಹರ್ಷ ಆ ಕಥೆಯ ಪ್ರಭಾವದಿಂದ ಶ್ರೀಮಂತಿಕೆ ಹರಿದು ಬಂದಿದೆ ಎಂದು ನಂಬುತ್ತಾರೆ. ಹರ್ಷ ಇರುವುದು ತಮಿಳರು ಹೆಚ್ಚಾಗಿರುವ ಹಳೆಯ ಏರ್ ಪೋರ್ಟ್ ಹತ್ತಿರದ ಮುರುಗೇಶಪಾಳ್ಯದಲ್ಲಿ. ಸಿಗರೇಟ್ ಮಾರುತ್ತಿದ್ದ ಅವರು ಸಿನಿಮಾ ನೋಡಿ ಸ್ಫೂರ್ತಿಗೊಂಡು ರಿಯಲ್ ಎಸ್ಟೇಟ್ ವ್ಯವಹಾರ ಮಾಡಲು ತೊಡಗಿದರಂತೆ. ಇಂದು ಅವರ ಆಫೀಸ್ ಗೋಡೆಯ ಮೇಲೆಲ್ಲ ರಜನೀಕಾಂತ್ ಫೋಟೋಗಳು. ಅಂಗಡಿಯ ಹೊರಗೆ ರಜನೀಕಾಂತ್ ಚಿತ್ರವಿರುವ ಪತಾಕೆ. ಇವರನ್ನು ವರದಿಗಾರರು ನಾಲ್ಕೈದು ಸಲ ಭೇಟಿ ಮಾಡಲು ಹೋಗಿ ವಿಫಲವಾಗಿ ಹಿಂತಿರುಗಿದ್ದರು. `ನೀವು ಸುಮ್ಮನೆ ಹೇಳುತ್ತೀರಿ, ಕೈಗೆ ಸಿಗುವುದಿಲ್ಲ,' ಎಂದು ವರದಿಗಾರ ದೂರಿದಾಗ ಹರ್ಷ ಹೇಳಿದ್ದು: `ಇಲ್ಲ, ಈ ಸಲ ಖಂಡಿತ ಸಿಗುತ್ತೇನೆ. ರಜನಿ ಪ್ರಾಮಿಸ್!' ಅಂದರೆ ಬೇರೆಯವರಿಗೆ ದೇವರು ಹೇಗೋ, ಈತನಿಗೆ ರಜನಿ ಹಾಗೆ.ಒಂದು ಸಣ್ಣ ಉಪಕಥೆ

ನನ್ನ ಚಿಕ್ಕಂದಿನಲ್ಲಿ ಟೆಂಟ್ ಸಿನಿಮಾಗಳು ಬೆಂಗಳೂರಿನಲ್ಲಿ ಹಲವು ಇದ್ದವು. ಜಯನಗರದ ನಮ್ಮ ಮನೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ದೊಡ್ಡ ಮಾವಿನ ತೋಪು ಇತ್ತು. ಅದರೊಳಗೆ `ವೀನಸ್ ಟೂರಿಂಗ್ ಟಾಕೀಸ್' ಎಂಬ ಹೆಸರಿನ ಒಂದು ಟೆಂಟ್ ಇತ್ತು. ಅಲ್ಲಿ ಹೆಚ್ಚಾಗಿ ತಮಿಳು ಚಿತ್ರ ಹಾಕುತ್ತಿದ್ದರು. ಅಪರೂಪಕ್ಕೊಂದು ಕನ್ನಡ ಸಿನಿಮಾ ಬರುತ್ತಿತ್ತು. ಅಲ್ಲಿಂದ ಒಂದೇ ಕಿಲೋ ಮೀಟರ್ ದೂರದಲ್ಲಿ, ಈಗ `ಸ್ವಾಗತ್ ಗರುಡ ಮಾಲ್' ಇರುವ ಜಾಗದಲ್ಲಿ, `ಲಕ್ಷ್ಮಿ ಟೂರಿಂಗ್ ಟಾಕೀಸ್' ಎಂಬ ಇನ್ನೊಂದು ಟೆಂಟ್ ಇತ್ತು. ಅಲ್ಲಿಯೂ ಹೆಚ್ಚಾಗಿ ತಮಿಳು ಸಿನಿಮಾ ಓಡುತ್ತಿತ್ತು. ಈ ಪ್ರದೇಶದಲ್ಲಿನ ಕನ್ನಡ ಸಿನಿಮಾ ನೋಡುಗರು ಶಾಂತಿ, ನಂದ, ಉಮಾ ಟಾಕೀಸ್‌ಗೆ ಹೋಗುತ್ತಿದ್ದರು. ಅಂದರೆ ಕನ್ನಡ ಸಿನಿಮಾ ನೋಡುವವರು ತಮಿಳು ಸಿನಿಮಾ ರಸಿಕರಿಗಿಂತ ಸ್ವಲ್ಪ ಆರ್ಥಿಕವಾಗಿ ಮೇಲಿದ್ದರು.ನಾನಿನ್ನೂ ಸ್ಕೂಲ್ ಹುಡುಗ ಆಗಿದ್ದಾಗಲೇ ತೋರುತ್ತಿದ್ದುದೇನೆಂದರೆ: ತಮಿಳರು ಸಿನಿಮಾ ಜನರನ್ನು ತುಂಬ ಹಚ್ಚಿಕೊಂಡುಬಿಟ್ಟಿದ್ದರು. ಚಿತ್ರಮಂದಿರಗಳಿಗೆ ಮೆರವಣಿಗೆಯಲ್ಲಿ ಹೋಗಿ ಕಟ್‌ಔಟ್‌ಗಳಿಗೆ ಹಾಲು ಅಭಿಷೇಕ ಮಾಡುವುದು, ಬಣ್ಣ ಬಣ್ಣದ ಸ್ಟಾರ್ ಮಾಡಿಕೊಂಡು ಚಿತ್ರಮಂದಿರದಲ್ಲಿ ಹೋಗಿ ತೂಗಿಹಾಕುವುದು, ಹೊಸಬಟ್ಟೆ ತೊಟ್ಟು `ಫಸ್ಟ್ ಡೇ ಫಸ್ಟ್ ಶೋ'ಗೆ `ಬ್ಲಾಕ್'ನಲ್ಲಿ ಟಿಕೆಟ್ ಪಡೆದು ಹೊಗುವುದು... ಇದೆಲ್ಲ ತಮಿಳು ಚಿತ್ರ ರಸಿಕರು ಹೆಚ್ಚಾಗಿ ಮಾಡುತ್ತಿದ್ದರು. ಅವರನ್ನು ಕಂಡು ಬೆಂಗಳೂರಿನ ತೆಲುಗು, ಕನ್ನಡ ಚಿತ್ರ ರಸಿಕರೂ ಪೈಪೋಟಿಗೆ ಇಳಿಯುತ್ತಿದ್ದರು. ಅದು ರಾಜಕುಮಾರ್, ವಿಷ್ಣುವರ್ಧನ್ ಅವರಂಥ ಪ್ರತಿಭೆಗಳು ಮೆರೆಯುತ್ತಿದ್ದ ಕಾಲವಾದರೂ, ತಮಿಳರಿಗಿದ್ದ ನಟ ನಟಿಯರ ಬಗೆಗಿನ ಕುರುಡು ಪ್ರೀತಿ ಕನ್ನಡಿಗರಿಗೆ ಇರಲಿಲ್ಲ. ಇದು ಬರುಬರುತ್ತಾ ಸ್ವಲ್ಪ ಬದಲಾಯಿತು.ಭಾರತೀಯ ಚಿತ್ರರಂಗಕ್ಕೆ 100 ವರ್ಷ ತುಂಬಿದೆ. ಈ ಸಂಭ್ರಮದಲ್ಲಿ ಲೇಖನಗಳು, ಟಿ.ವಿ ಕಾರ್ಯಕ್ರಮಗಳು  ಮೂಡಿಬರುತ್ತಿವೆ. ಶತಮಾನೋತ್ಸವದ ಜ್ಞಾಪಕಾರ್ಥ ಹಿಂದಿ ಉದ್ಯಮದಲ್ಲಿ ಹೆಸರು ಮಾಡಿರುವ, ಸ್ವಲ್ಪ ವಿಭಿನ್ನ ಎನಿಸಿಕೊಳ್ಳುವ ನಾಲ್ಕು ನಿರ್ದೇಶಕರು ಸೇರಿ `ಬಾಂಬೆ ಟಾಕೀಸ್' ಎಂಬ ಚಿತ್ರ  ಕೂಡ ತಯಾರಿಸಿ ಬಿಡುಗಡೆ ಮಾಡಿದ್ದಾರೆ. ಸಿಎನ್‌ಎನ್-ಐಬಿಎನ್ ನಲ್ಲಿ ಹಿಂದಿ ಚಿತ್ರ ನಿರ್ದೇಶಕ ಕರಣ್ ಜೋಹರ್ ಒಂದು ಡಾಕ್ಯುಮೆಂಟರಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಹಿಂದಿ ಚಿತ್ರರಂಗವೇ ಭಾರತದ ಚಿತ್ರರಂಗ ಎಂದು ಚಿತ್ರಿಸುತ್ತಿರುವುದರ ಬಗ್ಗೆ ಅಸಮಾಧಾನವಿದ್ದರೂ, ಉದ್ಯಮದ ದಿಗ್ಗಜರನ್ನು ಸ್ಮರಿಸುವ ಕೆಲಸ ಎಲ್ಲೆಲ್ಲೂ ನಡೆಯುತ್ತಿದೆ.ಪ್ರಪಂಚದಲ್ಲಿ ಅತಿ ಹೆಚ್ಚು ಚಿತ್ರ ತಯಾರಿಸುವ ದೇಶ ಭಾರತ. ವರ್ಷಕ್ಕೆ ಸುಮಾರು 1,200 ಚಿತ್ರ ಬಿಡುಗಡೆ ಮಾಡುವ ನಾವು ಸಿನಿಮಾ ವ್ಯಾಮೋಹಿಗಳು. ಸಿನಿಮಾ ಅಧ್ಯಯನ ಮಾಡುವ ಅಮೆರಿಕನ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಭಾರತೀಯರನ್ನು ಕೇಳುವ ಮೊದಲ ಪ್ರಶ್ನೆ ಹೀಗಿರುತ್ತದಂತೆ: `ನೀವು ಯಾಕೆ ಓವರ್ ದಿ ಟಾಪ್ ಚಿತ್ರಗಳನ್ನು ಮಾಡುತ್ತೀರಿ?' (ಅತಿಯಾಗಿ ಉತ್ಪ್ರೇಕ್ಷೆ  ಮಾಡುವುದಕ್ಕೆ ಓವರ್ ದಿ ಟಾಪ್ ಎನ್ನುತ್ತಾರೆ). ನಮ್ಮಲ್ಲಿರುವಂತೆ ಹಾಲಿವುಡ್ ಚಿತ್ರಗಳಲ್ಲಿಯೂ ಫ್ಯಾಂಟಸಿ, ಎಸ್ಕೇಪಿಸಂ ಇದ್ದರೂ, ನಮ್ಮ ಸಿನಿಮಾದ ಹಾಡು ಕುಣಿತ ಪಾಶ್ಚಾತ್ಯರಿಗೆ ವಿಚಿತ್ರವಾಗಿ ಕಾಣುತ್ತದೆ. (ಮಣಿರತ್ನಂ ಚಿತ್ರ `ರಾವಣ್' ನೋಡಿದ `ಗಾರ್ಡಿಯನ್' ಪತ್ರಿಕೆಯ ಸಿನಿಮಾ ವಿಮರ್ಶಕಿ ಅದರಲ್ಲಿನ ಹಾಡಿನ ದೃಶ್ಯಗಳನ್ನು ತುಂಬ ಲೇವಡಿ ಮಾಡಿಬಿಟ್ಟರು!)ಈಚೆಗೆ ಬಳಕೆಯಾಗುತ್ತಿರುವ ಒಂದು ಪದ `ಇನ್‌ಸ್ಪಿರೇಷನಲ್'. ಇದು `ಇನ್‌ಸ್ಪಿರಿಂಗ್' ಎಂಬ ಪದಕ್ಕಿಂತ ಸ್ವಲ್ಪ ಭಿನ್ನವಾದ ಧ್ವನಿ ಹೊಂದಿದೆ. ಸೆಲ್ಫ್- ಹೆಲ್ಪ್ ಪುಸ್ತಕಗಳ ಮಾರ್ಕೆಟಿಂಗ್ ಮಾಡುವಾಗ ಹೆಚ್ಚು ಬಳಕೆಯಾಗುವ ಈ ಪದ ಸೂಚಿಸುವುದು `ಸ್ಫೂರ್ತಿ'ಗಿಂತ `ಆಯುರಾರೋಗ್ಯ ಐಶ್ವರ್ಯ ಪ್ರಾಪ್ತಿ'ಯ ಭರವಸೆ.ಇಂಥ ಒಂದು `ಇನ್‌ಸ್ಪಿರೇಷನಲ್' ಕಥೆಯಿಂದಲೇ ಈ ವಾರದ ಅಂಕಣ ಮುಗಿಸುವೆ. ಬೆಂಗಳೂರಿನ ಡೇವಿಡ್ ರಾಜ್ `ಪುದಿಯ ಗೀತಂ' ಎಂಬ ತಮಿಳು ಚಿತ್ರ ನೋಡಿದ. ಶಾಲೆ ಮುಗಿದು ಕಾಲೇಜಿಗೆ ಸೇರಲು ಕಾತರಿಸುತ್ತಿದ್ದ. ಆತನ ತಂದೆಗೆ ಬೆಸ್ಕಾಂ ನಲ್ಲಿ ಕೆಲಸ. ಫೀಸ್ ಕಟ್ಟಲು ದುಡ್ಡಿರಲಿಲ್ಲ. ಅಂತ ಸಮಯದಲ್ಲಿ ಆಕಸ್ಮಿಕವಾಗಿ ಚಿತ್ರ ನೋಡಿದ ಡೇವಿಡ್ ತಾನೇ ಏಕೆ ಪಾರ್ಟ್ ಟೈಮ್ ಕೆಲಸ ಮಾಡಿ ದುಡ್ಡು ಸಂಪಾದಿಸಬಾರದು ಎಂದು ಯೊಚಿಸಿದ. ವಿಜಯ್ ಆ ಚಿತ್ರದ ಹೀರೋ. ಆತನ ಪಾತ್ರದಂತೆಯೇ ಆಶಾವಾದ ಬೆಳೆಸಿಕೊಂಡ ವಿಜಯ್ ಬೇಸಿಗೆಯಲ್ಲಿ ಕೆಲಸ ಮಾಡಿ ಇಡೀ ವರ್ಷಕ್ಕಾಗುವಂತೆ ಫೀಸ್ ಹಣ ಸಂಪಾದಿಸಲು ಶುರು ಮಾಡಿದ. ಕೆಲ ವರ್ಷದಲ್ಲಿ ಟೆಸ್ಕೋ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಅಕೌಂಟ್ಸ್ ಕೆಲಸ ಸಿಕ್ಕಿತು. ಅಲ್ಲಿಯೂ ಹಣ ಸಂಗ್ರಹಿಸಿ ಈಗ ಮೀಡಿಯಾ ಕೋರ್ಸ್ ಮಾಡಲು ಹೊರಟಿರುವ ಡೇವಿಡನ ಹವ್ಯಾಸ ಕಾರ್ಪೊರೇಟ್ ಚಿತ್ರ ತೆಗೆಯುವುದು. ಈಗಾಗಲೇ 12 ಕಿರು ಪ್ರಚಾರ ಚಿತ್ರಗಳನ್ನು ತೆಗೆದಿರುವ ಈತ ವಿಜಯ್ ಅಭಿಮಾನಿಗಳ ಸಂಘದ ಸದಸ್ಯ. ಮಕ್ಕಳಿಗೆ ಪುಸ್ತಕ ಹಂಚುವಂಥ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಉತ್ಸಾಹಿ.ಸಿನಿಮಾದವರನ್ನು ಕೊಂಡಾಡಿ ತಲೆಯ ಮೇಲೆ ಕೂರಿಸಿಕೊಳ್ಳುವ ಅಭ್ಯಾಸ ಹಲವರಲ್ಲಿ ಶಂಕೆ, ಆತಂಕ ಹುಟ್ಟಿಸುತ್ತದೆ. ಹೇರ್ ಸ್ಟೈಲ್, ಬಟ್ಟೆಬರೆ ವಿಷಯದಲ್ಲಿ ನಟನಟಿಯರನ್ನು ಅನುಕರಿಸುವುದು ಕ್ಷಣಿಕ. ಆದರೆ ಕೆಲವು ಸಿನಿಮಾ ವ್ಯಾಮೊಹಿಗಳಿಗೆ ಪಾತ್ರಗಳೇ ಆದರ್ಶವಾಗಿ ಬಿಡುತ್ತವೆ. ಸಿನಿಮಾ ನಟ ನಟಿಯರು ಅಂಥ ಪಾತ್ರ ಮಾಡಿ ತಮ್ಮ ಜೀವನದಲ್ಲಿ ಮುಂದೆ ಸಾಗಿಬಿಟ್ಟಿರುತ್ತಾರೆ. ಅವರಿಗೆ ಗೊತ್ತಿಲ್ಲದೆ ಅವರು ಸೃಷ್ಟಿ ಮಾಡಿದ ಮಾಯೆ ಕೆಲವರಿಗೆ ನಿರಂತರ ಸತ್ಯಗಳಾಗಿ ಪರಿಣಮಿಸಿಬಿಟ್ಟಿರುತ್ತವೆ. ನಟನಟಿಯರು, ಕಥೆ ಬರೆದವರು, ನಿರ್ದೇಶಕರು ಆದರ್ಶ ಮಾತಾಡಿ ಅದಕ್ಕೆ ವಿರುದ್ಧವಾಗಿ ಬದುಕಿದರೂ, ಚಿತ್ರಪ್ರೇಮಿಗಳು ಮಾತ್ರ ತಮಗೆ ಇಷ್ಟವಾದ ಪಾತ್ರಗಳನ್ನು ಸ್ಮರಿಸುತ್ತಲೇ ಇರುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.