ಭಾನುವಾರ, ಜೂಲೈ 12, 2020
29 °C

ಸುಪಾರಿ ಪಡೆದವರು ಪತ್ರಕರ್ತರು, ಕೊಟ್ಟವರು ಯಾರು?

ದಿನೇಶ್ ಅಮೀನ್ ಮಟ್ಟು Updated:

ಅಕ್ಷರ ಗಾತ್ರ : | |

ಭೂಗತ ಜಗತ್ತಿನಲ್ಲಿ ಶತ್ರು ಸಂಹಾರಕ್ಕಾಗಿ ‘ಸುಪಾರಿ’ ಕೊಡುವ ಪದ್ದತಿಯಿದೆ. ಎಷ್ಟೋ ಸಂದರ್ಭಗಳಲ್ಲಿ  ‘ಸುಪಾರಿ’ ಪಡೆದು ಕೊಲೆಮಾಡುವವನಿಗೆ ಕೊಲೆಮಾಡಿಸಿದವನ ಮುಖಪರಿಚಯವೇ ಇರುವುದಿಲ್ಲ.ಪೊಲೀಸರು ಕೂಡಾ ಈ  ‘ಸುಪಾರಿ ಕಿಲ್ಲರ್’ಗಳನ್ನು ಸುಲಭದಲ್ಲಿ ಬಂಧಿಸಿ ಶಹಬಾಸ್‌ಗಿರಿ ಪಡೆದುಕೊಳ್ಳುತ್ತಾರೆ. ಕೂತ ಜಾಗದಿಂದ ಕದಲದೆ ‘ಸುಪಾರಿ’ ನೀಡುವ ಮೂಲಕವೇ  ಕಾನೂನುಬಾಹಿರವಾದ ಎಲ್ಲ ಕೃತ್ಯಗಳನ್ನು ನಡೆಸುತ್ತಾ ಅಪರಾಧ ಜಗತ್ತನ್ನು ನಿಯಂತ್ರಿಸುತ್ತಿರುವ ಡಾನ್‌ಗಳನ್ನು ಪೊಲೀಸರು ಕೂಡಾ ಮುಟ್ಟುವುದು ಅಪರೂಪ.ಭೂಗತಜಗತ್ತಿನ ವ್ಯವಹಾರ ಸಾಂಗವಾಗಿ ಮುಂದುವರಿದುಕೊಂಡು ಹೋಗುವುದು ಹೀಗೆಯೇ. ನೀರಾ ರಾಡಿಯಾ ಟೇಪ್ ಬಯಲಾದ ನಂತರ ಪತ್ರಕರ್ತರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಜನ ಕಲ್ಲು ಹೊಡೆಯುತ್ತಿರುವುದನ್ನು ಕಂಡಾಗ ಭೂಗತ ಜಗತ್ತಿನ ಹಳೆಯ ತಂತ್ರ ನೆನೆಪಾಗುತ್ತದೆ.


 


ಪತ್ರಕರ್ತರ ವಿಷಯದಲ್ಲಿ ಭ್ರಮನಿರಸನಕ್ಕೀಡಾದ ಜನಸಮೂಹದ ಆಕ್ರೋಶ ಅರ್ಥಮಾಡಿಕೊಳ್ಳುವಂತಹದ್ದು. ಆದರೆ ರಾಡಿಯನ್ನೆಲ್ಲ ಪತ್ರಕರ್ತರ ಮುಖಕ್ಕೆ ಬಳಿಯುವ ಮೂಲಕ ಇದರ ಹಿಂದಿನ ಸೂತ್ರಧಾರರನ್ನು ಜನ ಮರೆತುಬಿಡುತ್ತಿದ್ದಾರೆಯೇ? ಪತ್ರಕರ್ತರನ್ನಷ್ಟೇ ಗುರಿಯಾಗಿಟ್ಟುಕೊಂಡು ದೇಶದಾದ್ಯಂತ ನಡೆಯುತ್ತಿರುವ ವಾದ-ವಿವಾದಗಳು ಕೂಡಾ ದೊಡ್ಡ ಸಂಚಿನ ಭಾಗವಾಗಿರಬಹುದೇ?ಎ.ರಾಜಾ ಟೆಲಿಕಾಂ ಸಚಿವರಾದ ಕಾರಣದಿಂದಾಗಿ ಲಾಭವಾಗಿದ್ದು ಯಾರಿಗೆ? ಸರ್ಕಾರದ ಬೊಕ್ಕಸಕ್ಕೆ ಬರಬೇಕಾಗಿದ್ದ 1.76ಲಕ್ಷ ಕೋಟಿ ರೂಪಾಯಿ ಹಣ ಯಾರ ಜೇಬಿಗೆ ಹೋಗಿದೆ? ಇಡೀ ಪ್ರಕರಣದಲ್ಲಿ ಪತ್ರಕರ್ತರದ್ದು ‘ಸುಪಾರಿ ಕಿಲ್ಲರ್’ ಪಾತ್ರವಷ್ಟೇ ಎನ್ನುವುದು ಈಗ ಸ್ಪಷ್ಟ. ನೀರಾ ರಾಡಿಯಾ ಎನ್ನುವ ಸಾರ್ವಜನಿಕ ಸಂಪರ್ಕಾಧಿಕಾರಿ ತಮ್ಮ ಬಾಸ್‌ಗಳ ಪರವಾಗಿ ‘ಸುಪಾರಿ’ ನೀಡಿದ್ದಾರೆ.ಪತ್ರಕರ್ತರು ಅಷ್ಟೇ ನಿಷ್ಠೆಯಿಂದ ತಮಗೆ ಒಪ್ಪಿಸಿದ ಕೆಲಸಗಳನ್ನು ಮಾಡಿದ್ದಾರೆ. ಇದರಿಂದ ಅವರಿಗೆ ಸಿಕ್ಕಿದ್ದರೂ ಒಂದಷ್ಟು ಕಮಿಷನ್ ಸಿಕ್ಕಿರಬಹುದು, ದೊಡ್ಡ ಮೊತ್ತದ ಲಾಭ ಗಳಿಸಿದವರು ‘ಸುಪಾರಿ’ ನೀಡಿದ್ದ ಬಾಸ್‌ಗಳು ಮತ್ತು ರಾಜಕಾರಣಿಗಳು.ಟಾಟಾ-ಬಿರ್ಲಾಗಳನ್ನು ಬಹುಸಂಖ್ಯಾತ ಭಾರತೀಯರು ಆದರ್ಶ ಉದ್ಯಮಿಗಳೆಂದು ಗೌರವಿಸುತ್ತಾ ಬಂದವರು. ಮಹಾತ್ಮ ಗಾಂಧಿ ಜತೆಗೆ ಈ ಉದ್ಯಮಿ ಕುಟುಂಬಗಳ ಸಂಬಂಧ, ಸ್ವಾತಂತ್ರ್ಯಹೋರಾಟಕ್ಕೆ ಈ ಕುಟುಂಬ ನೀಡಿದ್ದ ಕಾಣಿಕೆ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇವರು ನಡೆಸಿಕೊಂಡು ಬಂದ ಸೇವಾಕಾರ್ಯಗಳೆಲ್ಲವೂ ಇದಕ್ಕೆ ಕಾರಣ.ಆದರೆ ನೀರಾ ರಾಡಿಯಾ ಟೇಪ್ ಮೂಲಕ ಬಯಲಾದ ಟಾಟಾ ಕುಟುಂಬದ ಈಗಿನ ವಾರಸುದಾರ ರತನ್ ಟಾಟಾ ಅವರ ಇನ್ನೊಂದು ಮುಖವೇ ಬೇರೆ. ಟಾಟಾಗಳು ಕೂಡಾ ಸಾರ್ವಜನಿಕ ಸಂಪರ್ಕ ಅಧಿಕಾರಿಗಳೆಂಬ ಛದ್ಮವೇಷದ ದಲ್ಲಾಳಿಗಳನ್ನು ನೇಮಿಸಿಕೊಂಡು ಅಧಿಕಾರ ರಾಜಕೀಯದ ಆಟ ಆಡುತ್ತಾರೆ ಎನ್ನುವುದು ಟೇಪ್‌ನಿಂದ ಅನಾವರಣಗೊಂಡಿದೆ.ನೀರಾ ರಾಡಿಯಾ ಅವರ ಇನ್ನೊಬ್ಬ ಬಾಸ್ ಮುಖೇಶ್ ಅಂಬಾನಿ ಬಗ್ಗೆ ಜನಸಮೂಹದಲ್ಲಿ ಅಂತಹ ನಿರೀಕ್ಷೆಗಳೇನಿಲ್ಲ. ‘ಲಂಚ ಕೊಟ್ಟು ಕೆಲಸ ಮಾಡಿಕೊಳ್ಳುವುದು ತಪ್ಪಲ್ಲ’ ಎನ್ನುವ ವಿವಾದಾತ್ಮಕ ವ್ಯಾಪಾರಿ ಸೂತ್ರದ ಜನಕರಾದ ಧೀರೂಬಾಯಿ ಅಂಬಾನಿ ಅವರ ಬಗ್ಗೆ ಗೊತ್ತಿದ್ದವರ್ಯಾರಿಗೂ ಅಂಬಾನಿ ಸೋದರರ ನಡವಳಿಕೆ ಅಚ್ಚರಿ ಉಂಟುಮಾಡಲಾರದು. ಆದರೆ ಟಾಟಾ?ಟಾಟಾಗಳು ಸ್ವಇಚ್ಚೆಯಿಂದ ನೀತಿಸಂಹಿತೆಯನ್ನು ತಮ್ಮ ಮೇಲೆ ಹೇರಿಕೊಂಡು ಉದ್ಯಮವನ್ನು ನಡೆಸುತ್ತಾ ಬಂದವರು. ‘ಟಾಟಾಗಳು ರಾಜಕೀಯ ಲಾಬಿಗಳನ್ನು ನಡೆಸುವುದಿಲ್ಲ ಮತ್ತು ಯಾವುದೇ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡುವುದಿಲ್ಲ’ ಎಂದು ‘ಟಾಟಾ ನೀತಿ ಸಂಹಿತೆ’ ಹೇಳುತ್ತದೆ.ಇದನ್ನು ಪಾಲಿಸಬೇಕಾದ ಅನಿವಾರ್ಯತೆಯಿಂದಾಗಿ ಟಾಟಾಗಳು ‘ಗುಂಪು ಟ್ರಸ್ಟ್’ ರಚಿಸಿಕೊಂಡಿದ್ದಾರೆ. ಟಾಟಾ ಒಡೆತನದ ಎಲ್ಲ ಉದ್ದಿಮೆಗಳು ಈ ಟ್ರಸ್ಟ್‌ಗೆ ದೇಣಿಗೆ ನೀಡುತ್ತವೆ. ಈ ಹಣವನ್ನು ಟಾಟಾಗಳು ರಾಜಕೀಯ ಪಕ್ಷಗಳಿಗೆ ಅಧಿಕೃತ ದೇಣಿಗೆ ರೂಪದಲ್ಲಿ ನೀಡುತ್ತಾರೆ. ಲಭ್ಯವಿರುವ ಮಾಹಿತಿ ಪ್ರಕಾರ 2004-05ರ ಅವಧಿಯಲ್ಲಿ ಟಾಟಾ ಉಕ್ಕು ಕಾರ್ಖಾನೆ ಮೂರುವರೆ ಕೋಟಿ ರೂಪಾಯಿಗಳನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ.ದೇಣಿಗೆ ಪಡೆದವರಲ್ಲಿ ಎಡಪಕ್ಷಗಳನ್ನು ಹೊರತುಪಡಿಸಿ ದೇಶದ ಉಳಿದೆಲ್ಲ ರಾಜಕೀಯ ಪಕ್ಷಗಳ ಹೆಸರುಗಳಿವೆ. ದೇಣಿಗೆ ನೀಡಿಕೆ ವಿಚಾರದಲ್ಲಿ ನೀತಿಸಂಹಿತೆಯನ್ನು ಉಲ್ಲಂಘಿಸುವಾಗ ಟಾಟಾಗಳು ಮುಖ ಉಳಿಸಿಕೊಳ್ಳುವ ಮಾರ್ಗವನ್ನಾದರೂ ಕಂಡುಕೊಂಡಿದ್ದಾರೆ. ಆದರೆ ರಾಜಕೀಯ ಲಾಬಿ ನಡೆಸುವುದಿಲ್ಲ ಎನ್ನುವ ನೀತಿಸಂಹಿತೆಯನ್ನು ನೀರಾ ರಾಡಿಯಾ ಟೇಪ್ ಬಯಲಾದ ನಂತರವೂ ಹೇಗೆ ಸಮರ್ಥಿಸಿಕೊಳ್ಳುತ್ತಾರೋ ಗೊತ್ತಿಲ್ಲ.ಉದ್ಯಮಿ ರತನ್‌ಟಾಟಾ ಅವರು ಖಾಸಗಿತನದ ರಕ್ಷಣೆಗಾಗಿ ಬೀದಿಗಿಳಿದು ರಂಪಮಾಡದೆ ಹೋಗಿದ್ದರೆ ಮತ್ತು ರಾಜೀವ್ ಚಂದ್ರಶೇಖರ್ ಎಂಬ ಇನ್ನೊಬ್ಬ ಉದ್ಯಮಿ ಹಾಗೂ ಸಂಸದ, ರಾಡಿಗೆ ಕಲ್ಲುಹೊಡೆಯದೆ ಹೋಗಿದ್ದರೆ ರಾಡಿಯಾ ಟೇಪ್‌ನಿಂದ ಬಯಲಾದ ಬೇರೆ ಮುಖಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿರಲಿಲ್ಲವೇನೋ? ಇಂತಹದ್ದೊಂದು ಚರ್ಚೆ ಪ್ರಾರಂಭವಾದ ಕೂಡಲೇ ನಮ್ಮಲ್ಲಿನ ಬಹಳಷ್ಟು ಉದ್ಯಮಿಗಳು ‘ಪೋನ್ ಕದ್ದಾಲಿಕೆ ವ್ಯಕ್ತಿಯ ಖಾಸಗಿತನದ ಅತಿಕ್ರಮಣ’ ಎಂದು ವ್ಯಾಖ್ಯಾನಿಸಿ ವಿರೋಧಿಸತೊಡಗಿದ್ದಾರೆ.‘ನಾವು ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳಂತೆ ಸಾರ್ವಜನಿಕ ವ್ಯಕ್ತಿಗಳಲ್ಲ, ಆದ್ದರಿಂದ ನಮ್ಮ ದೂರವಾಣಿ ಕರೆಗಳ ಕದ್ದಾಲಿಕೆ ಮಾಡುವುದು ಖಾಸಗಿತನದ ಭಂಗ’ ಎನ್ನುವುದು ಅವರ ವಾದ. ಯಾವುದು ಖಾಸಗಿ ವಿಚಾರ? ಯಾರನ್ನು ಯಾವ ಖಾತೆಗೆ ಸಚಿವರನ್ನಾಗಿ ಮಾಡಬೇಕೆಂದು ರಾಜಕೀಯ ಲಾಬಿ ನಡೆಸುವುದು, ಇದಕ್ಕಾಗಿ ದಲ್ಲಾಳಿಗಳನ್ನು ನೇಮಿಸಿಕೊಂಡು  ಅವರ ಮೂಲಕ ಪತ್ರಕರ್ತರು, ಅಧಿಕಾರಿಗಳು ಮತ್ತು ಉದ್ಯಮಗಳ ಸಂಘಟನೆಗಾರರನ್ನು ಬಳಸಿಕೊಂಡು ಆಡಳಿತಾರೂಢ ಪಕ್ಷದ ಮೇಲೆ ಒತ್ತಡ ಹೇರುವುದೇ? ಸಚಿವರ ನೇಮಕಾತಿ, ಖಾತೆಗಳ ಹಂಚಿಕೆ ಪ್ರಧಾನಿಯ ಪರಮಾಧಿಕಾರ. ಅದಕ್ಕೂ ಟಾಟಾ, ಅಂಬಾನಿಗಳಿಗೇನು ಸಂಬಂಧ? ಇಷ್ಟಕ್ಕೂ ರತನ್‌ಟಾಟಾ ಅವರು ರಾಡಿಯಾ ಟೇಪ್ ಬಗ್ಗೆ ಇಷ್ಟೊಂದು ಹೆದರುತ್ತಿರುವುದು ಯಾಕೆ?ವಿಚಿತ್ರವೆಂದರೆ ನಾವು ಸಾರ್ವಜನಿಕ ವ್ಯಕ್ತಿಗಳಲ್ಲ ಎಂದು ಬೊಬ್ಬಿಡುತ್ತಿರುವ ಉದ್ಯಮಿಗಳೆಲ್ಲರೂ ಸಾರ್ವಜನಿಕರಿಗೆ ತಮ್ಮ ಕಂಪೆನಿಗಳ ಷೇರು ಮಾರಾಟ ಮಾಡಿ ಸಂಗ್ರಹವಾದ ಬಂಡವಾಳದಿಂದ ಉದ್ಯಮ ನಡೆಸುತ್ತಿರುವವರು.ಇವರು ಶಾಸಕರು, ಸಂಸದರು, ಅಧಿಕಾರಿಗಳಂತೆ ಸಾರ್ವಜನಿಕರ ತೆರಿಗೆ ಹಣವನ್ನು ಬಳಸದೆ ಇರಬಹುದು, ಆದರೆ ಸಾರ್ವಜನಿಕರು ಕಷ್ಟಪಟ್ಟು ಗಳಿಸಿ ಉಳಿಸಿದ ಹಣವನ್ನು ಉದ್ಯಮದಲ್ಲಿ ತೊಡಗಿಸಿಕೊಂಡಿಲ್ಲವೇ? ಷೇರುಮಾರುಕಟ್ಟೆಯಲ್ಲಿ ನೋಂದಣಿಗೊಂಡ ಈ ಕಂಪೆನಿಗಳ ಅಸಲಿ ಮಾಲೀಕರು ತಾಂತ್ರಿಕವಾಗಿ ಷೇರುದಾರರೇ ಆಗಿರುತ್ತಾರೆ.ಈ ಕಂಪೆನಿಗಳು ರಾಷ್ಟ್ರೀಕೃತ ಬ್ಯಾಂಕುಗಳಿಂದ ಯಥೇಚ್ಚವಾಗಿ ಸಾಲ ಪಡೆಯುವುದರಿಂದ ಷೇರುದಾರರಲ್ಲದ ಠೇವಣಿದಾರರ ಹಣದ ಪಾಲೂ ಇರುತ್ತದೆ. ಒಂದೊಮ್ಮೆ ಕಂಪೆನಿ ದಿವಾಳಿಯಾಗಿ ಬ್ಯಾಂಕುಗಳೂ ಮುಳುಗಿದರೆ ಠೇವಣಿದಾರರ ದುಡ್ಡು ಹಿಂದಿರುಗಿಸುವ ಹೊಣೆ ಸರ್ಕಾರದ್ದೇ ಹೊರತು ಕಂಪೆನಿ ಮಾಲೀಕರದ್ದಲ್ಲ. ಯಾಕೆಂದರೆ ಬ್ಯಾಂಕುಗಳಿಂದ ಸಾಲಪಡೆದರೂ ಅದನ್ನು ವಾಪಸು ನೀಡಬೇಕಾದ ಜವಾಬ್ದಾರಿ ಕಂಪೆನಿಗಳ ಸ್ಥಾಪಕರದ್ದೂ ಅಲ್ಲ, ಷೇರುದಾರರದ್ದೂ ಅಲ್ಲ. ಅದು ಕಂಪೆನಿ ಎಂಬ ಅಮೂರ್ತ ಸಂಸ್ಥೆಯದ್ದು.ಕಂಪೆನಿಯ ಸ್ಥಾಪಕರ ಮೇಲೆ ವಿಶ್ವಾಸ ಇಟ್ಟು ಸಾರ್ವಜನಿಕರು ಷೇರು ಖರೀದಿಸಿ ಬಂಡವಾಳ ಒದಗಿಸುತ್ತಾರೆ. ಈ ರೀತಿ ಷೇರು ಮತ್ತು ಬ್ಯಾಂಕ್ ಸಾಲದ ಮೂಲಕ ಅಸ್ತಿತ್ವಕ್ಕೆ ಬಂದ ಕಂಪೆನಿಗಳ ನೆಲೆಗಟ್ಟು ಪರಸ್ಪರ ವಿಶ್ವಾಸ ಮಾತ್ರ. ನೀರಾ ರಾಡಿಯಾ ಟೇಪ್‌ಗೆ ಪತ್ರಕರ್ತರದ್ದು ಮಾತ್ರವಲ್ಲ ಉದ್ಯಮಿಗಳ ವಿಶ್ವಾಸಾರ್ಹತೆ ಕೂಡಾ ಬಲಿಯಾಗಿದೆ.ತೊಂಬತ್ತರ ದಶಕದಲ್ಲಿ ಹೊಸ ಆರ್ಥಿಕ ನೀತಿಗೆ ದೇಶ ತನ್ನನ್ನು ತೆರೆದುಕೊಂಡಾಗ ಎಲ್ಲೆಡೆ ಹಿತಾನುಭವದ ಅಲೆ ಎದ್ದಿತ್ತು. ತಮ್ಮ ತೆರಿಗೆಹಣವನ್ನು ನುಂಗಿಹಾಕುತ್ತಿರುವ ಸಾರ್ವಜನಿಕ ಕ್ಷೇತ್ರದ ರೋಗಗ್ರಸ್ತ ಉದ್ದಿಮೆಗಳ ಬಗ್ಗೆ ಜನ ರೋಸಿಹೋಗಿದ್ದ ಕಾಲ ಅದು. ಇದ್ದಕ್ಕಿದ್ದಂತೆ ಒಂದು ದಿನ ಆಗಿನ ಹಣಕಾಸು ಸಚಿವ ಡಾ.ಮನಮೋಹನ್‌ಸಿಂಗ್ ಲೈಸೆನ್ಸ್‌ರಾಜ್ ಮತ್ತು ಕೆಂಪುಪಟ್ಟಿಯ ಸಂಕೋಲೆಯಲ್ಲಿ ಬಂಧಿಯಾಗಿದ್ದ ಆರ್ಥಿಕ ಕ್ಷೇತ್ರವನ್ನು ಬಿಡುಗಡೆಗೊಳಿಸಿದ್ದರು.ರಾಜಕಾರಣಿಗಳ ಮಧ್ಯಪ್ರವೇಶ, ಲಂಚದ ಹಾವಳಿ, ಅಧಿಕಾರಿಗಳ ವಿಳಂಬ ನೀತಿ, ಪ್ರಭಾವ, ವಶೀಲಿ ಯಾವುದೂ ಇಲ್ಲದ ವಾತಾವರಣದಲ್ಲಿ ಖಾಸಗಿ ಉದ್ಯಮಗಳು ಮುಕ್ತವಾಗಿ ಬೆಳೆದವು. ಷೇರು ವಿಕ್ರಯದ ಮೂಲಕ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳನ್ನೂ ಸರ್ಕಾರ ಖಾಸಗಿ ಉದ್ಯಮಿಗಳಿಗೆ ಒಪ್ಪಿಸಿತು.ಕೋಟ್ಯಂತರ ರೂಪಾಯಿಗಳ ಲಾಭ, ಲಕ್ಷಾಂತರ ಯುವಜನರಿಗೆ ಉದ್ಯೋಗ ಮತ್ತು ಅಂತರರಾಷ್ಟ್ರೀಯ ಮಟ್ಟದ ಕೀರ್ತಿಗೆ ಕಾರಣರಾದ ಖಾಸಗಿ ಉದ್ಯಮಿಗಳು ಯುವಜನತೆಯ ಆದರ್ಶಪುರುಷರಾದರು. ಕಾರ್ಪೋರೇಟ್ ಗವರ್ನನ್ಸ್ ಎನ್ನುವುದನ್ನು ಮಾದರಿ ಆಡಳಿತ ಎನ್ನುವ ರೀತಿಯಲ್ಲಿ ಪ್ರಚಾರ ಮಾಡಲಾಯಿತು. ಈ ದೇಶವನ್ನು ಆಳಲು ರಾಜಕಾರಣಿಗಳು ನಾಲಾಯಕ್, ಕಾರ್ಪೋರೇಟ್ ಜಗತ್ತಿನ ಅಭಿಮಾನಮೂರ್ತಿಗಳಿಗೆ ಈ ಕೆಲಸ ಒಪ್ಪಿಸಬೇಕು ಎಂದು ಜನರಾಡಿಕೊಳ್ಳುವ ಮಟ್ಟಕ್ಕೆ ಉದ್ಯಮಿಗಳ ಬಗ್ಗೆ ಜನತೆಯ ಅಭಿಮಾನ ಉಕ್ಕಿ ಹರಿಯಿತು.ಇಂತಹ ಸಂದರ್ಭದಲ್ಲಿ ಮೊದಲ ಆಘಾತ ನೀಡಿದ್ದು ಅಮೆರಿಕದಲ್ಲಿ ದಿವಾಳಿಯಾದ ‘ಎನ್ರಾನ್’. ಅದಾದ ನಂತರ ಹೈದರಾಬಾದ್‌ನ ‘ಸತ್ಯಂ’ ಮುಳುಗಿತು. ಸರ್ಕಾರವೇ ಸ್ಥಾಪಿಸಿದ್ದ ‘ಸೆಬಿ’ಯ ನಿಷ್ಕ್ರಿಯತೆ, ಆಡಳಿತ ಮಂಡಳಿಯಲ್ಲಿನ ಸ್ವತಂತ್ರ ನಿರ್ದೇಶಕರ ಕುರುಡುತನ, ಲೆಕ್ಕಪತ್ರ ಪರಿಶೋಧಕರು ವೃತ್ತಿದ್ರೋಹ - ಈ ರೀತಿ ಷೇರುದಾರರ ಹಿತರಕ್ಷಣೆಗಾಗಿ ಸರ್ಕಾರ ರೂಪಿಸಿದ್ದ ವ್ಯವಸ್ಥೆಯೇ ಭ್ರಷ್ಟಗೊಂಡಿದ್ದರ ಫಲ ಸತ್ಯಂ ಹಗರಣ. ಭ್ರಷ್ಟಗೊಳಿಸಿದವರು ಯಾರೆಂದು ಬಿಡಿಸಿ ಹೇಳುವ ಅಗತ್ಯ ಇದೆಯೇ? ಹಿಂದಿನದ್ದು ಭ್ರಷ್ಟ ವ್ಯವಸ್ಥೆ ಎಂದು ದೂರುತ್ತಿದ್ದವರು ಇವರೇ ಅಲ್ಲವೇ? ಪತ್ರಕರ್ತರ ದುರ್ಬಳಕೆ ಕೂಡಾ ಆಗಿನಿಂದಲೇ ನಡೆಯುತ್ತಿದೆ.ಟಿವಿ ಸ್ಟುಡಿಯೋಗಳಲ್ಲಿ ಬಂದು ಕೂತುಕೊಳ್ಳುವ ಮಾರುಕಟ್ಟೆ ವಿಶ್ಲೇಷಕರು ಕಂಪೆನಿಯ ಶಕ್ತಿ-ದೌರ್ಬಲ್ಯಗಳ ಅಧ್ಯಯನ ನಡೆಸಿ ಸಾರ್ವಜನಿಕರಿಗೆ ನೈಜಚಿತ್ರ ನೀಡಬೇಕು. ಆದರೆ ನಡೆಯುತ್ತಿರುವುದೇ ಬೇರೆ. ‘ಸತ್ಯಂ’ ಬತ್ತಲೆಗೊಳ್ಳುವ ವರೆಗೂ ಅದರ ಮೈ ತುಂಬಾ ಬಟ್ಟೆ ಇದೆ ಎಂದೇ ಹಣಕಾಸು ಕ್ಷೇತ್ರದ ಪತ್ರಕರ್ತರು ಕೂಗಿ ಹೇಳುತ್ತಿರಲಿಲ್ಲವೇ? ಈಗ ಅದೇ ಪತ್ರಕರ್ತರು ಉದ್ಯಮಿಗಳ ಕೂಲಿಯಾಳುಗಳಂತೆ ವರ್ತಿಸುತ್ತಿದ್ದಾರೆ. ಅಂದಹಾಗೆ ಮಾಧ್ಯಮದ ಮೂಲಕ ಕೊನೆಯ ಬಾರಿ ಅನಾವರಣಗೊಂಡ ಆರ್ಥಿಕ ಹಗರಣ ಯಾವುದು?‘ಸತ್ಯಂ ವಂಚನೆ ಒಂದು ಅಪರೂಪದ ಹಗರಣ, ಇದೊಂದು ಅಪವಾದವೇ ಹೊರತು ನಿಯಮ ಅಲ್ಲ’ ಎಂದು ಅನೇಕ ಉದ್ಯಮಿಗಳು ಸಮರ್ಥಿಸಿಕೊಂಡಿದ್ದರು. ಆದರೆ ಆರ್ಥಿಕ ಉದಾರೀಕರಣದ ಯುಗದ ಪೂರ್ವದಲ್ಲಿದ್ದ ಎಲ್ಲ ರೋಗಗಳು ಆಗಲೇ ಬೇರೊಂದು ರೂಪದಲ್ಲಿ ಮರುಕಳಿಸಿದ್ದವು.ಅದರ ಮುಂದುವರಿದ ರೂಪವೇ ಈಗ ಟೆಲಿಕಾಂ ಕ್ಷೇತ್ರದ ಹಗರಣ. ಬಹುಶಃ ರೋಗಗ್ರಸ್ತ ಸರ್ಕಾರಿ ಉದ್ದಿಮೆಗಳಿಂದ ಬೊಕ್ಕಸಕ್ಕೆ ಆಗಿರುವ ಒಟ್ಟು ನಷ್ಟದ ಮೊತ್ತವನ್ನು ಮೀರಿಸಿದಂತಿದೆ ಈ ಹಗರಣದಲ್ಲಿ ಸೋರಿ ಹೋದ ಹಣ. 1.76 ಲಕ್ಷ ಕೋಟಿ ರೂಪಾಯಿ ದೇಶದ ಅಭಿವೃದ್ಧಿಗಾಗಿ ವಿನಿಯೋಗವಾಗಿದ್ದರೆ? ವಿಚಿತ್ರವೆಂದರೆ ಲೈಸೆನ್ಸ್‌ರಾಜ್‌ದಿಂದ ಉದ್ಯಮ ಕ್ಷೇತ್ರವನ್ನು ಮುಕ್ತಗೊಳಿಸಿ ಮುಕ್ತ ಆರ್ಥಿಕ ನೀತಿಯ ದಾರಿಯಲ್ಲಿ ದೇಶ ಮುನ್ನಡೆಯುವಂತೆ ಮಾಡಿದ ಡಾ.ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದ ಕಾಲದಲ್ಲಿಯೇ ಖಾಸಗಿ ಕ್ಷೇತ್ರದ ಉದ್ಯಮಿಗಳ ಭಾನಗಡಿ ಹೊರಬೀಳುತ್ತಿದೆ.ಇಷ್ಟು ಮಾತ್ರವಲ್ಲ ಕೋಟ್ಯಂತರ ರೂಪಾಯಿ ಅವ್ಯವಹಾರದ ಈಗಿನ ಹಗರಣದಲ್ಲಿ ಮನಮೋಹನ್‌ಸಿಂಗ್ ಅವರೇ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಇತಿಹಾಸದ ವ್ಯಂಗ್ಯ ಎನ್ನುವುದು ಇದಕ್ಕೆ ಅಲ್ಲವೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.