ಭಾನುವಾರ, ಜೂನ್ 13, 2021
24 °C

ಸೋಲದ ಛಲ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಸೊಯ್‌ಚಿರೋ ಹೊಂಡಾ ತೆಳ್ಳಗೆ, ಕುಳ್ಳಗೆ ಇದ್ದ ಮನುಷ್ಯ. ತಾನು ನೆಪೋಲಿಯನ್ ತರಹವೇ ಎಂದು ಹೇಳಿಕೊಳ್ಳುತ್ತಿದ್ದ. ನೆಪೋಲಿಯನ್ ಅಷ್ಟು ಸಾಧನೆ ಮಾಡಿದ್ದಾದರೆ ತಾನೇಕೆ ಮಾಡಬಾರದು ಎನ್ನುತ್ತಿದ್ದ. ಅವನು ಮನೆಯಿಂದ, ತಂದೆತಾಯಿಯವರಿಂದ ದೂರವಿದ್ದು ಆರ್ಟ ಶೂಕಾಯ್ ಎಂಬ ಕಾರ್ ಗ್ಯಾರೇಜಿನಲ್ಲಿ ಕೆಲಸಮಾಡುತ್ತಿದ್ದ. ಕಾರಿನ ಪಿಸ್ಟನ್ ರಿಂಗ್‌ಗಳನ್ನು ಮಾಡುವುದರಲ್ಲಿ ಪರಿಣಿತಿ ಹೊಂದುವುದು ಅವನ ಆಸಕ್ತಿಯಾಗಿತ್ತು.

 

ಹೀಗೆ ಕೆಲಸಮಾಡುವಾಗ ಅವನಿಗೊಂದು ವಿಷಯ ಹೊಳೆಯಿತು. ತನ್ನಲ್ಲಿ ಆಸೆ ಇದೆ, ಪರಿಶ್ರಮವಿದೆ ಆದರೆ ತಾಂತ್ರಿಕ ಜ್ಞಾನವಿಲ್ಲ. ತನ್ನ ಮೂವತ್ತೈದನೆಯ ವಯಸ್ಸಿಗೆ ಎಂಜಿನಿಯರಿಂಗ್ ಕಾಲೇಜು ಸೇರಿದ. ಬೆಳಿಗ್ಗೆ ಕಾಲೇಜಿಗೆ ಹೋಗಿ ಕಲಿತು, ಮಧ್ಯಾನ್ಹ ಗ್ಯಾರೇಜಿಗೆ ಬಂದು ಕಲಿತದ್ದನ್ನು ಪ್ರಯೋಗಿಸುತ್ತಿದ್ದ. ಅವನು ಬರೀ ಕಾರುಗಳ ಎಂಜಿನ್ನಿನ ಪ್ರಯೋಗಶಾಲೆಗಳಿಗೆ ಮಾತ್ರ ಹಾಜರಿ ಹಾಕಿ ಉಳಿದ ಯಾವ ತರಗತಿಗಳಿಗೂ ಹೋಗುತ್ತಿರಲಿಲ್ಲವಾದ್ದರಿಂದ ಅವನನ್ನು ಕಾಲೇಜಿನಿಂದ ಹೊರಗೆ ಹಾಕಿದರು. ನನಗೆ ಪದವಿ ಬೇಕಿಲ್ಲ, ಜ್ಞಾನ ಸಾಕು ಎಂದು ಇವನೂ ಹೊರಗೆ ನಿರಾಳವಾಗಿ ಬಂದ.ಅವನ ಪಿಸ್ಟನ್ ತಯಾರಿಸುವ ಕಂಪನಿ ಚೆನ್ನಾಗಿ ನಡೆಯುತ್ತಿದೆ ಎನ್ನುವ ಹೊತ್ತಿಗೆ ಎರಡನೆಯ ಮಹಾಯುದ್ಧ ಪ್ರಾರಂಭವಾಯಿತು. 1944 ರಲ್ಲಿ ಅಮೆರಿಕೆಯ ಬಾಂಬ್ ದಾಳಿಯಲ್ಲಿ ಒಂದು ಕಾರ್ಖಾನೆ ನಾಶವಾಯಿತು.

 

1945 ರಲ್ಲಿ ಮಿಕಾವಾ ಪ್ರದೇಶದಲ್ಲಿ ಆದ ಭಾರೀ ಭೂಕಂಪದಲ್ಲಿ ಈತನ ಇನ್ನೊಂದು ಕಾರ್ಖಾನೆ ನಿರ್ನಾಮವಾಯಿತು. ಮುಂದೆ ಯುದ್ಧದಲ್ಲಿ ಜಪಾನ್ ದಯನೀಯ ಸೋಲು ಕಂಡಿತು. ಬಾಂಬ್ ದಾಳಿ, ಭೂಕಂಪ, ಯುದ್ಧದ ಅನಾಹುತಗಳಿಂದಾಗಿ ಜಪಾನಿನ ಹಣಕಾಸು ವ್ಯವಸ್ಥೆ ಪೂರ್ತಿ ಕುಸಿದು ಬಿದ್ದಿತ್ತು. ಹೊಂಡಾನ ಕಡೆಗೆ ಹೊಸ ಕಾರ್ಖಾನೆ ಹಾಕಲು ಹಣವಿರಲಿಲ್ಲ. ಆದರೆ ಅವನ ಜೀವನೋತ್ಸಾಹ ಕುಗ್ಗಲಿಲ್ಲ. ಮನಸ್ಸು ಹೊಸ ಅವಿಷ್ಕಾರಗಳ ಕಡೆಗೆ ತುಡಿಯಿತು. ಆತ ಗಮನಿಸಿದ, ಸಾರ್ವಜನಿಕ ಸಂಚಾರ ವ್ಯವಸ್ಥೆ ಇರಲಿಲ್ಲ,ಪೆಟ್ರೋಲ್ ಬೆಲೆ ಗಗನಕ್ಕೇರಿತ್ತು. ಜನ ಸೈಕಲನ್ನೇ ಬಳಸುತ್ತಿದ್ದರು. ಆಗ ಹೊಂಡಾ ಪುಟ್ಟ ಮೋಟಾರೊಂದನ್ನು ತಯಾರು ಮಾಡಿ ಸೈಕಲ್ಲಿಗೆ ಕೂಡ್ರಿಸಿದ. ಅದು ಭಾರೀ ಜನಪ್ರಿಯವಾುತು. ಅದಕ್ಕೆ ಮೋಟಾರ್ ಸೈಕಲ್ ಎಂದು ಹೆಸರಿಟ್ಟ ಹೊಂಡಾ.

ನಂತರ ಹೊಸ ಹೊಸ ಮೋಟಾರ್ ಸೈಕಲ್ಲುಗಳನ್ನು ನಿರ್ಮಿಸಿದ. ಒಂದಕ್ಕಿಂತ ಒಂದು ಹೊಸ, ವೇಗವಾಗಿ ಹೋಗುವ ವಾಹನಗಳವು. ಜಗತ್ತಿನಾದ್ಯಂತ ತರುಣರನ್ನು ಆರ್ಕರ್ಷಿಸಿದವು ಆದರೂ ತನ್ನ ಕಾರುಗಳನ್ನು ತಯಾರುಮಾಡುವ ಇರಾದೆಯನ್ನು ಮರೆತಿರಲಿಲ್ಲ.1962 ರಲ್ಲಿ ಕಾರು ತಯಾರಿಕೆಯನ್ನು ಪ್ರಾರಂಭಿಸಿದ. ಮೋಟಾರ್ ಸೈಕಲ್ಲಿನಲ್ಲಿ ಹೇಗೆ ಕಬ್ಬಿಣದ ಸರಪಳಿಯಿಂದ ಗಾಲಿಯನ್ನು ಎಳೆಯಲಾಗುತ್ತದೆಯೋ ಅದೇ ರೀತಿ ಕಾರನ್ನು ತಯಾರು ಮಾಡಿದ.ಬರಬರುತ್ತಾ ಕಾರಿನ ವಿನ್ಯಾಸವನ್ನು ಬದಲಿಸುತ್ತಾ ಹೊಸ ಹೊಸ ಕಾರುಗಳನ್ನು ಮಾಡಿದ. ಜಪಾನದ ಕಾರನ್ನು ಅಮೆರಿಕೆಯಲ್ಲಿ ಯಾರು ಕೊಳ್ಳುತ್ತಾರೆ ಎಂದುಕೊಳ್ಳುವ ಕಾಲದಲ್ಲಿ ಅಮೆರಿಕೆಗೆ ತನ್ನ ಕಾರುಗಳನ್ನು ಮಾರಲು ವ್ಯವಸ್ಥೆ ಮಾಡಿದ. ಮೊದಮೊದಲು ಯಾರೂ ಅವುಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನಂತರ ಅವುಗಳ ವಿನ್ಯಾಸಕ್ಕೆ, ಹೆಚ್ಚು ಮೈಲಿ ಓಡುವ ಕ್ಷಮತೆಗೆ ಜನರು ಮೆಚ್ಚಿಕೊಂಡು ಅಮೆರಿಕೆಯಲ್ಲಿ ಮಾರಾಟವಾಗುವ ಒಂದನೇ ನಂಬರಿನ ಕಾರು ಎಂದು ಹೆಸರಾಯಿತು. ಹೊಂಡಾ 1991 ರಲ್ಲಿ ತೀರಿಕೊಂಡರೂ ಹೊಂಡಾದ ಜನಪ್ರಿಯತೆ ಇಂದಿಗೂ ಕಡಿಮೆಯಾಗಿಲ್ಲ.ಇದೊಂದು ರಮ್ಯ ಗಾಥೆಯಲ್ಲವೇ? ಇದು ಅದಮ್ಯವಾದ ಸಾಧನೆಯ ಛಲದ, ಪರಿಶ್ರಮದ, ಸ್ಪಶಕ್ತಿಯಲ್ಲಿಯ ನಂಬಿಕೆಯ ಮತ್ತು ಎಂದಿಗೂ ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳದ ಮನೋಭಾವದ ಮನುಷ್ಯನೊಬ್ಬನ ಯಶೋಗಾಥೆೆ. ಬಡತನ, ಸಹಾಯಕತೆ, ನೈಸರ್ಗಿಕ ವಿಕೋಪ, ಯುದ್ಧ ಇವೆಲ್ಲವುಗಳ ನಡುವೆ ಚೆಂಡಿನಂತೆ ಪುಟಿದೆದ್ದು ದೊಡ್ಡ ಕನಸುಗಳನ್ನು ಸಾಕಾರಮಾಡುವ ಅವಿರತ ಪ್ರಯತ್ನಗಳಿಗೆ ಸೊಯ್‌ಚಿರೋ ಹೊಂಡಾ ಮುಖವಾಣಿಯಾಗುತ್ತಾನೆ, ಸಣ್ಣ ತೊಂದರೆಗಳಿಗೆ ಹೆದರಿ ಮುದುಡಿಕೊಳ್ಳುವ ಅನೇಕ ತರುಣರಿಗೆ ಮಾರ್ಗದರ್ಶಿಯಾಗುತ್ತಾನೆ, ಬಹಳ ಜನರಿಗೆ ಆದರ್ಶವಾಗುತ್ತಾನೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.