ಗುರುವಾರ , ಜೂನ್ 24, 2021
27 °C

ಹೊಸ ಬಜೆಟ್ ಮತ್ತು ಮಹಿಳಾ ಅಭಿವೃದ್ಧಿ

ಆರ್. ಇಂದಿರಾ Updated:

ಅಕ್ಷರ ಗಾತ್ರ : | |

ಬಹುನಿರೀಕ್ಷಿತ ರಾಜ್ಯ ಬಜೆಟ್ ಕಳೆದ ವಾರ ಮಂಡನೆಯಾಗಿದೆ. ಹಿಂದಿನಂತೆ ಈ ಬಾರಿಯೂ ಪರ-ವಿರೋಧ, ಆಶೆ-ನಿರಾಶೆಗಳ ಪ್ರತಿಕ್ರಿಯೆಗಳು ವಿವಿಧ ವಲಯಗಳಿಂದ ವ್ಯಕ್ತವಾಗುತ್ತಿವೆ.ಜನ ಸಾಮಾನ್ಯರ ಪರ ಎಂದು ಹೇಳಿಕೊಳ್ಳುತ್ತಲೇ ಈ ವರ್ಗದ ಜನರ ಬದುಕಿನಲ್ಲಿ ಗುಣಮಟ್ಟದ ಬದಲಾವಣೆಗಳನ್ನು ತರುವಲ್ಲಿ ವಿಫಲವಾಗುತ್ತಿರುವ ಸರ್ಕಾರಿ ಕಾರ್ಯಕ್ರಮಗಳ ಸಾಲಿಗೆ 2012-13 ಬಜೆಟ್ಟಿನಲ್ಲಿ ಮೂಡಿ ಬಂದಿರುವ ಅನೇಕ ಪ್ರಸ್ತಾವನೆಗಳೂ ಸೇರುವಂತಹ ಸೂಚನೆಗಳು ಸ್ಪಷ್ಟವಾಗಿ ಗೋಚರವಾಗುತ್ತಿವೆ.ಸರ್ವಜನರಿಗೆ ಒಳಿತನ್ನು ತರುವ ಸುಸ್ಥಿರ ಅಭಿವೃದ್ಧಿ ಸೂತ್ರಗಳಿಗಿಂತ ಕೆಲ ಕ್ಷೇತ್ರಗಳಲ್ಲಿ ಮಾತ್ರ ಬೆಳವಣಿಗೆಗಳು ಸಂಭವಿಸಬಹುದಾದ ಸೂಚನೆಗಳು ರಾಜ್ಯದ ಈ ಸಾಲಿನ ಬಜೆಟ್‌ನಲ್ಲೂ ಹೊರಬಿದ್ದಿವೆ. ಹೊಸ ಮುಂಗಡ ಪತ್ರವೊಂದು ತರಬಹುದಾದ ಕಾತುರವಾಗಲಿ, ಹರ್ಷವಾಗಲಿ ಈ ಸಲ ಬಹುಜನರಲ್ಲಿ ಕಾಣುತ್ತಿಲ್ಲ. ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಅರ್ಧ ಭಾಗದಷ್ಟಿರುವ ಮಹಿಳೆಯರ ಪಾಲಿಗಂತೂ ಇದು ಬಹುಮಟ್ಟಿಗೆ ಸತ್ಯ. ರಾಜ್ಯದ ಈ ಸಾಲಿನ ಬಜೆಟ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ 38,845 ಕೋಟಿ ರೂಗಳನ್ನು ನಿಗದಿಪಡಿಸಲಾಗಿದೆ. ಹೊರ ನೋಟಕ್ಕೆ ಇದು ಭಾರಿ ಮೊತ್ತದಂತೆ ಕಾಣುತ್ತದೆ. ಆದರೆ ಯಾವುದೋ ಕೆಲ ಕ್ಷೇತ್ರಗಳನ್ನು ಹೊರತು ಪಡಿಸಿದರೆ ಈ ಮೊತ್ತದ ಹಂಚಿಕೆಯನ್ನು ಕುರಿತಂತೆ ಸ್ಷಷ್ಟವಾದ ವಿವರಣೆಗಳಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ  ಮಹಿಳಾ ಅಭಿವೃದ್ಧಿ  ಎಂಬ ಪ್ರಕ್ರಿಯೆಯನ್ನು ಈ ಬಜೆಟ್ ಅರ್ಥೈಸುವುದಾದರೂ ಹೇಗೆ ಎಂಬುದರ ಬಗ್ಗೆಯೂ ಒಂದು ನಿಖರವಾದ ಚಿತ್ರ ಹೊರಹೊಮ್ಮಿಲ್ಲ.ಅಭಿವೃದ್ಧಿಯನ್ನು ಮಹಿಳಾ ದೃಷ್ಟಿಕೋನದಿಂದ ವಿಮರ್ಶಿಸಿ ಸಾರ್ವಜನಿಕ ಸಂಪನ್ಮೂಲಗಳ ಹಂಚಿಕೆಯಲ್ಲಿ ಮಹಿಳೆಯರ ಅಗತ್ಯಗಳಿಗೆ ವಿಶೇಷವಾದ ಗಮನವನ್ನು ಹರಿಸಬೇಕೆಂಬ ಉದ್ದೇಶದಿಂದಲೇ  `ಜೆಂಡರ್ ಬಜೆಟಿಂಗ್~ ಎಂಬ ಪರಿಕಲ್ಪನೆ ಅಸ್ತಿತ್ವಕ್ಕೆ ಬಂದದ್ದು. ಕರ್ನಾಟಕದಲ್ಲಿ 2006-07ನೇ ಸಾಲಿನಿಂದಲೇ ಲಿಂಗ ಸೂಕ್ಷ್ಮ ಮುಂಗಡ ಪತ್ರವನ್ನು ತಯಾರಿಸಬೇಕೆಂಬ ಪ್ರಯತ್ನಕ್ಕೆ ಇಂಬು ದೊರೆತಿತ್ತು. ರಾಜ್ಯ ಬಜೆಟ್‌ಗಳಲ್ಲಿ ಮಹಿಳಾ ದೃಷ್ಟಿಕೋನವನ್ನು ಅಳವಡಿಸಿದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂಬ ಹೆಗ್ಗಳಿಕೆಗೂ ನಾವು ಪಾತ್ರರಾಗಿದ್ದೇವೆ.

ಆದರೆ ವಾಸ್ತವದಲ್ಲಿ ನಮ್ಮ ಬಜೆಟ್‌ಗಳು ಮಹಿಳಾ ಅಭಿವೃದ್ಧಿಯೆಂದರೆ  ಕೆಲವು ಮಹಿಳಾ ಕೇಂದ್ರಿತ ಯೋಜನೆಗಳಿಗೆ ಸಾರ್ವಜನಿಕ ಹಣವನ್ನು ಹಂಚಿ ಬಿಡುವುದು ಎಂಬ ಧೋರಣೆಗೆ ಅಂಟಿಕೊಂಡಂತೆ ಕಾಣುತ್ತಿದೆ.

 

ಮಹಿಳೋದ್ಧಾರಕ್ಕೆ ಪ್ರವೇಶ ದ್ವಾರಗಳೆಂದೇ ಭಾವಿಸಲಾಗಿರುವ ಭಾಗ್ಯಲಕ್ಷ್ಮಿ ಮತ್ತು ಸ್ತ್ರೀಶಕ್ತಿ ಯೋಜನೆಗಳಿಗೆ ಈ ಬಾರಿಯ ಬಜೆಟ್ಟಿನಲ್ಲಿ ಮಂಜೂರಾಗಿರುವ ಮೊತ್ತಗಳೇ ಇದಕ್ಕೆ ಸಾಕ್ಷಿ.ಕಳೆದ ಸಾಲಿನ ಬಜೆಟ್‌ನಲ್ಲಿ ಭಾಗ್ಯಲಕ್ಷ್ಮಿ ಯೋಜನೆಗೆ ಮಂಜೂರಾದ ಹಣ 400 ಕೋಟಿ ರೂಗಳಾದರೆ ಈ ಬಾರಿ ಅದು 500 ಕೋಟಿಗೆ ಏರಿದೆ. 2006-07ನೇ ಸಾಲಿನಲ್ಲಿ ಅಸ್ತಿತ್ವಕ್ಕೆ ಬಂದ ಭಾಗ್ಯಲಕ್ಷ್ಮಿ ಯೋಜನೆಯಡಿ ಬಡತನದ ರೇಖೆಯ ಕೆಳಗಿರುವ ಕುಟುಂಬಗಳಲ್ಲಿ 2008ರ ಆಗಸ್ಟ್ 1ರಂದು ಹಾಗೂ ಆನಂತರದಲ್ಲಿ ಜನಿಸಿದ/ಜನಿಸಲಿರುವ ಮೊದಲನೇ ಹೆಣ್ಣು ಮಗುವಿನ ಹೆಸರಿನಲ್ಲಿ 19,300 ರೂ ಮತ್ತು ಎರಡನೆಯ ಹೆಣ್ಣು ಮಗುವಿನ ಹೆಸರಿನಲ್ಲಿ 18,350 ರೂ ಠೇವಣಿ ಇಡುವ ಒಂದು ವ್ಯವಸ್ಥೆ ಇದೆ.ಈ ಮಕ್ಕಳು ತಮ್ಮ 18ನೇ ವಯಸ್ಸು ತಲುಪಿದಾಗ ಕ್ರಮವಾಗಿ 1,00,097 ಹಾಗೂ 1,00,052 ರೂಗಳನ್ನು ಪಡೆಯುತ್ತಾರೆ.ಭಾಗ್ಯಲಕ್ಷ್ಮಿ ಯೋಜನೆಯ ಆಶಯ ಪ್ರಗತಿಗೆ ಪೂರಕವಾಗಿವೆ. ಬಾಲ್ಯ ವಿವಾಹ, ಹೆಣ್ಣು ಮಕ್ಕಳು ಶಾಲೆ ಬಿಡುವಿಕೆ, ಬಾಲ ಕಾರ್ಮಿಕ ವ್ಯವಸ್ಥೆ ಇವೇ ಮುಂತಾದ ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟಿ ಹೆಣ್ಣು ಮಕ್ಕಳು ಸ್ವಾಸ್ಥ ಬದುಕನ್ನು ನಡೆಸಲು ಈ ಯೋಜನೆ ಅವಕಾಶಗಳನ್ನು ಕಲ್ಪಿಸುವ ಸಾಧ್ಯತೆಗಳಿವೆ ಎಂಬುದು ನಿಜ.

 

ಆದರೆ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಕುಟುಂಬಗಳ ವಾಸ್ತವ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಹಾಗೂ 18 ವರ್ಷಗಳ ನಂತರ ಕೈ ಸೇರಲಿರುವ ಹಣದ ಸದ್ಬಳಕೆ ಮಾಡಿಕೊಳ್ಳಲು ಅಗತ್ಯವಾದ ಮಾನಸಿಕ ತಯಾರಿ ಮತ್ತು ಆರ್ಥಿಕ ಸಧೃಢತೆ-ಈ ಎರಡು ಪ್ರಮುಖ ವಿಚಾರಗಳತ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಗೆ ಗಮನ ಹರಿಸುತ್ತಿದೆ ಎಂಬುದನ್ನು ಗಮನಿಸುವವರು ಯಾರು?ಹೆಣ್ಣು ಮಕ್ಕಳ ಭವಿಷ್ಯವನ್ನು ರೂಪಿಸುವ ದಿಕ್ಸೂಚಿ ಕಾರ್ಯಕ್ರಮ ಎಂದು ಬಿಂಬಿಸಲಾಗುತ್ತಿರುವ ಭಾಗ್ಯಲಕ್ಷ್ಮಿ ಯೋಜನೆಯ ನಿರ್ವಹಣೆ,ನಿಯಂತ್ರಣಗಳ ಜವಾಬ್ದಾರಿಯನ್ನು ಹೊರಬಹುದಾದ ಸಾರ್ವಜನಿಕ ಪಾರದರ್ಶಕತೆ ಇರುವ ತನಿಖಾ ಸಂಸ್ಥೆಯೊಂದಕ್ಕೆ ಬಜೆಟ್‌ನಲ್ಲಿ ಮಂಜೂರಾತಿ ಇರಬೇಕಿತ್ತು.ಕಳೆದ ವರ್ಷ ಭಾಗ್ಯಲಕ್ಷ್ಮಿ ಯೋಜನೆಯ  ಫಲಾನುಭವಿ ತಾಯಂದಿರಿಗೆ ಸೀರೆ ಹಂಚುವಂತಹ ಅಸೂಕ್ಷ್ಮ ಕಾರ್ಯಕ್ರಮವೊಂದನ್ನು ಹಾಕಿಕೊಂಡು ಅಪಾರ ಹಣ ಹಾಗೂ ಮಾನವ ಸಂಪನ್ಮೂಲಗಳನ್ನು ವ್ಯರ್ಥ ಮಾಡಿದ್ದು ಈ ಯೋಜನೆ ದಿಕ್ಕು ತಪ್ಪಬಹುದಾದ ಸೂಚನೆಯನ್ನು ನೀಡಿದೆ. ಪ್ರತಿ ವರ್ಷವೂ ಈ ಸೀರೆ ಹಂಚಿಕೆ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುವ ಆಶ್ವಾಸನೆಯನ್ನು ಸರ್ಕಾರ ನೀಡಿದ್ದರಿಂದ, ಭಾಗ್ಯಲಕ್ಷ್ಮಿ ಯೋಜನೆಗೆ ಮಂಜೂರಾಗಿರುವ ಹಣದ ಸೋರಿಕೆಯನ್ನು ತಡೆಗಟ್ಟುವಂಥ ವ್ಯವಸ್ಥೆಯೊಂದರ ಅಗತ್ಯ ಎದ್ದು ಕಾಣುತ್ತಿದೆ.ಇನ್ನು  ಸ್ತ್ರೀಶಕ್ತಿ  ಸಂಘಗಳ ವಿಚಾರ, ಈ ಬಾರಿಯ ಬಜೆಟ್‌ನಲ್ಲಿ ಸ್ತ್ರೀಶಕ್ತಿ ಗುಂಪುಗಳ ಬಲವರ್ಧನೆಗೆಂದು 12.5 ಕೋಟಿ ರೂಗಳು ಮಂಜೂರಾಗಿವೆ. ಆದರೆ ಹಣ ಬಳಕೆ ಬಗ್ಗೆ ಮತ್ತದೇ ಅಸ್ಪಷ್ಟತೆ ಇದೆ. ಕರ್ನಾಟಕದಲ್ಲಿ 2000ದಲ್ಲಿ ಆರಂಭವಾದ ಸ್ತ್ರೀಶಕ್ತಿ ಯೋಜನೆಯ ಮುಖ್ಯ ಉದ್ದೇಶ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ತಯಾರು ಮಾಡುವುದೇ ಆಗಿದೆ.ರಾಜ್ಯದಲ್ಲಿ ಈ ಯೋಜನೆ ಅಸ್ತಿತ್ವಕ್ಕೆ ಬಂದಾಗಿನಿಂದ ಇದುವರೆಗೂ 1,30,000 ಗ್ರಾಮೀಣ ಸ್ತ್ರೀಶಕ್ತಿ ಸಂಘಗಳ ಸ್ಥಾಪನೆಯಾಗಿವೆ. ಸುಮಾರು 20 ಲಕ್ಷ ಮಹಿಳೆಯರು ಈ ಸಂಘಗಳಲ್ಲಿ ಸದಸ್ಯತ್ವ ಹೊಂದಿದ್ದಾರೆ. ಲಭ್ಯ ಅಂಕಿ-ಅಂಶಗಳ ಪ್ರಕಾರ ಇಂದಿನವರೆಗೆ ಸ್ತ್ರೀಶಕ್ತಿ ಗುಂಪುಗಳು 972 ಕೋಟಿ ರೂಗಳನ್ನು ಉಳಿತಾಯ ಮಾಡಿವೆ.ಸದಸ್ಯರಿಗೆ ನೀಡಿರುವ ಆಂತರಿಕ ಸಾಲದ ಮೊತ್ತ 2,835,94 ಕೋಟಿ ರೂಗಳು. ಈಗ ಕಾರ್ಯ ನಿರ್ವಹಿಸುತ್ತಿರುವ ಸ್ತ್ರೀಶಕ್ತಿ ವ್ಯವಸ್ಥೆಯಲ್ಲಿ 1,21,347 ಸಂಘಗಳು ಬ್ಯಾಂಕುಗಳಿಂದ 1200 ಕೋಟಿ ರೂ ಸಾಲ ಪಡೆದಿವೆ.ಈ ಅಂಕಿ ಅಂಶಗಳನ್ನು ಆಧಾರವನ್ನಾಗಿಟ್ಟುಕೊಂಡು ಸ್ತ್ರೀಶಕ್ತಿ ಯೋಜನೆಯ ವೈಭವೀಕರಣದಲ್ಲಿ ಆಡಳಿತಾರೂಢ ವ್ಯವಸ್ಥೆ ತೊಡಗಿದೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಹೆಚ್ಚು ಹೆಚ್ಚು ಹಣವನ್ನು ಮಂಜೂರಾತಿ ಮಾಡುವ ಮುನ್ನ ಕೆಲ ಮೂಲಭೂತ ಪ್ರಶ್ನೆಗಳನ್ನು ಕೇಳುವ ಅಗತ್ಯವಿದೆ.ಸ್ತ್ರೀಶಕ್ತಿ ಸಂಘಗಳನ್ನು ಮಹಿಳಾ ಸಬಲೀಕರಣದ ಸರ್ವೋತೃಷ್ಟ ಸಾಧನವೆಂಬಂತೆ ಬಿಂಬಿಸುತ್ತಿರುವುದು ಎಷ್ಟು ಸೂಕ್ತ ಎಂಬ ಪ್ರಶ್ನೆಯನ್ನು ಮೊದಲು ಕೇಳಬೇಕು. ಎರಡನೆಯ ಪ್ರಶ್ನೆ ರಾಜ್ಯದ ವಿವಿಧ ಭಾಗಗಳಲ್ಲಿ ಸ್ತ್ರೀಶಕ್ತಿ ಸಂಘಗಳ ಕಾರ್ಯ ಚಟವಟಿಕೆಗಳು, ಅವು ರೂಪಿಸಿಕೊಂಡಿರುವ ಆದಾಯ ಗಳಿಕೆ ಮಾರ್ಗಗಳು, ಸದಸ್ಯರ ಅನುಭವಗಳು ಮತ್ತು ಈ ಯೋಜನೆಯ ಗುರಿಗಳ ನಡುವೆ ಇರುವ ಸಮನ್ವಯ ಹಾಗೂ ಈ ಸಂಘಗಳು ಎದುರಿಸುತ್ತಿರುವ ಸಮಸ್ಯೆಗಳು-ಇವುಗಳನ್ನು ಕುರಿತಂತೆ ಒಂದು ಸಮಗ್ರ ಅಧ್ಯಯನವನ್ನು ಕೈಗೊಳ್ಳಲಾಗಿದೆಯೇ ಎಂಬುದು.ಸ್ತ್ರೀಶಕ್ತಿ ಸಂಘಗಳನ್ನು ರಾಜಕೀಯ ದಾಳಗಳಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ಸತ್ಯಾಸತ್ಯತೆಗಳೇನು ಎಂಬುದನ್ನು ಪರಿಶೀಲಿಸಲಾಗಿದೆಯೇ ಎಂಬ ಪ್ರಶ್ನೆಯೂ ಮುಖ್ಯ. ಈಗಾಗಲೇ ಸ್ತ್ರೀಶಕ್ತಿ ಯೋಜನೆಯಡಿ ಲಕ್ಷ-ಕೋಟಿ ರೂಗಳು ಮಂಜೂರಾಗಿರುವ ತಾಲೂಕು ಮಾರುಕಟ್ಟೆ ಸಂಕೀರ್ಣಗಳು, ವಲಯ ಮಟ್ಟದ ತರಬೇತಿ ಕೇಂದ್ರಗಳು ಹಾಗೂ ಈ ಸಂಘಗಳ ಉತ್ಪಾದನಾ ಚಟವಟಿಕೆಗಳಿಗೆ ಉತ್ತೇಜನ ನೀಡಲು ಆಯೋಜಿಸಲಾಗಿರುವ ಸೊಸೈಟಿಗಳು ಕೆಲಸ ನಿರ್ವಹಿಸುತ್ತಿವೆಯೇ?ಅವುಗಳ ಲೆಕ್ಕಪತ್ರಗಳು ಹಾಗೂ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವವರು ಯಾರು? ಮುಂತಾದ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ಹುಡುಕಿ ನಂತರ ಬಜೆಟ್‌ನಲ್ಲಿ ಹಣ ನಿಗದಿ ಮಾಡಬೇಕಿತ್ತು.ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಸಂಚಾರಿ ವಾಹನಗಳನ್ನು ಒದಗಿಸುವುದಾಗಿ ಬಜೆಟ್‌ನಲ್ಲಿ ಸೂಚಿಸಲಾಗಿದೆ. ಆದರೆ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ವಾಹನ ಚಾಲನೆಯ ತರಬೇತಿ ನೀಡಲಾಗಿದೆಯೇ?ಈ ವಾಹನಗಳಿಗೆ ಇಂಧನ ಒದಗಿಸುವವರು ಯಾರು? ವಾಹನದ ಓಡಾಟದ ದಾಖಲೆಗಳನ್ನು ನಿರ್ವಹಿಸುವ ಜವಾಬ್ದಾರಿ ಯಾರದು? ಸಂಘಗಳ ಮಾರುಕಟ್ಟೆಗಳ ಭೌಗೋಳಿಕ ವ್ಯಾಪ್ತಿಯನ್ನು ನಿರ್ಧರಿಸುವ ವ್ಯವಸ್ಥೆ ಯಾವುದು? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕದೆ ಕೋಟಿಗಟ್ಟಲೆ ಹಣವನ್ನು ವಾಹನ ಖರೀದಿಗೆ ವ್ಯಯಮಾಡಿದರೆ ಮಹಿಳಾ ಸಬಲೀಕರಣದ ಬದಲು ಮಹಿಳಾ ಪರಾವಲಂಬನೆಗೆ ಮತ್ತೊಂದು ಮಾರ್ಗವನ್ನು ತೆರೆದ ಹಾಗಾಗುತ್ತದೆ.ಈ ಬಾರಿಯ ಬಜೆಟ್‌ನ ಮತ್ತೊಂದು ಪ್ರಸ್ತಾವನೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರನ್ನು ರಾಷ್ಟ್ರೀಯ ನಿವೃತ್ತಿ ವೇತನ ಯೋಜನೆಯಡಿ ತಂದು ಅವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು.ರಾಜ್ಯದ ಅಂಗನವಾಡಿ ಸಿಬ್ಬಂದಿಗೆ ಗೌರವ ಧನದ ರೂಪದಲ್ಲಿ ಸಂದಾಯವಾಗಬೇಕಾಗಿದ್ದ 1.53 ಬಿಲಿಯನ್ ರೂಗಳು ಇದುವರೆಗೂ ಬಾಕಿ ಉಳಿದಿವೆ ಎಂದು ತಿಳಿದು ಬಂದಿದೆ. ಇದನ್ನು ಪ್ರಶ್ನಿಸಿ ಇತ್ತೀಚೆಗೆ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.ಅವರ ಸೇವಾ ಅವಧಿಯಲ್ಲಿಯೇ ಕೊಡಬೇಕಾದ ಹಣವನ್ನು ಸಕಾಲಿಕವಾಗಿ ಪಾವತಿಸದ ಈ ಸರ್ಕಾರಿ ವ್ಯವಸ್ಥೆ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರಿಗೆ ನಿವೃತ್ತಿ ವೇತನವನ್ನು ನೀಡುತ್ತದೆ ಎಂಬುದನ್ನು ನಂಬಬಹುದೇ? ಬಜೆಟ್ ಎಂಬುದು ಮುಂಗಡ ಪತ್ರವೇನೋ ಸರಿ. ಆದರೆ ಜೀವನ ನಿರ್ವಹಣೆಗೇ  ಕಷ್ಟ ಪಡುತ್ತಿರುವ ಅಂಗನವಾಡಿ ಸಿಬ್ಬಂದಿಯ ಇಂದಿನ ಊಟದ ಬಗ್ಗೆ ಚಿಂತಿಸುವುದು, ಭವಿಷ್ಯದಲ್ಲಿ ಅವರಿಗೆ ಭೂರಿ ಬೋಜನದ ಭರವಸೆಯನ್ನು ನೀಡುವುದಕ್ಕಿಂತ ಮುಖ್ಯ ಎನ್ನುವುದನ್ನು ಸಂಬಂಧಿಸಿದ ಸರ್ಕಾರಿ ಇಲಾಖೆಗಳು ಮನಗಾಣಲಿ.ಮಹಿಳೆ ಎನ್ನುವುದು ಒಂದು ಸಮರೂಪವಾದ ವರ್ಗವಲ್ಲ, ರಾಜ್ಯದ ಮಹಿಳೆಯರ ಸ್ಥಿತಿ-ಗತಿಗಳಲ್ಲಿ, ಸಂಕಷ್ಟಗಳಲ್ಲಿ ಹೇಗೆ ಪ್ರಾದೇಶಿಕ ಭಿನ್ನತೆ ಇದೆಯೋ ಹಾಗೆಯೇ ವಿವಿಧ ಸಾಮಾಜಿಕ-ಆರ್ಥಿಕ ವರ್ಗಗಳು ಹಾಗೂ ವಯೋ ಗುಂಪುಗಳಿಗೆ ಸೇರಿದ ಮಹಿಳೆಯರ ನಡುವೆ ವ್ಯತ್ಯಾಸಗಳಿವೆ. ಒಂದೋ ಎರಡೋ ಯೋಜನೆಗಳಿಗೆ ಅಥವಾ ಒಂದು ಸ್ವಯಂಸೇವಾ ಸಂಸ್ಥೆಗೆ ಹಣ ಮಂಜೂರು ಮಾಡುವುದರಿಂದ ರಾಜ್ಯದ ಎಲ್ಲ ವರ್ಗಗಳ ಮಹಿಳೆಯರ ಬವಣೆಗಳು ದೂರವಾಗುವುದಿಲ್ಲ. ಬಜೆಟ್‌ನಲ್ಲಿ ಮಂಜೂರಾಗುವ ವಿವಿಧ ಯೋಜನೆಗಳನ್ನು ಮಹಿಳಾ ದೃಷ್ಟಿಕೋನದಿಂದ ಪರಿಶೋಧನೆಗೆ ಒಳಪಡಿಸಿ, ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಬದುಕಿನ ಮೇಲಾಗುವ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳ ವಿಶ್ಲೇಷಣೆ ಮಾಡುವ ಅಗತ್ಯವಿದೆ.ಬಜೆಟ್ ಲಿಂಗಾಧಾರಿತ ಆದ್ಯತೆಗಳು ಹಾಗೂ ಪರಿಣಾಮಗಳನ್ನು ಕುರಿತ ವೈಜ್ಞಾನಿಕ ಅಧ್ಯಯನಗಳನ್ನು ಎಲ್ಲ ಸರ್ಕಾರಗಳೂ ಕೈಗೊಳ್ಳಬೇಕೆಂದು  ಜೆಂಡರ್ ಬಜೆಟ್ ಕೈಪಿಡಿ  ಸೂಚಿಸಿದೆ. ಈ ಜವಾಬ್ದಾರಿಯನ್ನು ನಿರ್ವಹಿಸಬಲ್ಲ ಒಂದು ಘಟಕವನ್ನು ಪ್ರತಿ ಇಲಾಖೆಯಲ್ಲೂ ತೆರೆದು ಬಜೆಟ್ ಪ್ರಸ್ತಾವನೆಗಳು ಹಾಗೂ ಫಲಿತಾಂಶಗಳನ್ನು ಕುರಿತಂತೆ ಗಂಭೀರವಾದ ಸಂಶೋಧನೆ ಹಾಗೂ ಸಮಾಲೋಚನೆಗಳನ್ನು ನಡೆಸಬೇಕು. ಹೀಗೆ ಮಾಡದಿದ್ದಲ್ಲಿ  ಲಿಂಗಸೂಕ್ಷ್ಮ ಮುಂಗಡ ಪತ್ರ  ಎನ್ನುವುದು ಕೇವಲ ಒಂದು ಸಿದ್ಧಾಂತವಾಗಿಯೇ ಉಳಿಯುತ್ತದೆ.(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.