ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಅಂಬೇಡ್ಕರ್ ಯುಗದ ನಿರಂತರ ಪಾಠ

ದೇಶದ ಎಲ್ಲ ಕಾಲದ ಬಿಕ್ಕಟ್ಟುಗಳಿಗೂ ಅಂಬೇಡ್ಕರ್ ಚಿಂತನೆಯಲ್ಲಿ ಉತ್ತರಗಳಿವೆ
Last Updated 13 ಏಪ್ರಿಲ್ 2020, 21:22 IST
ಅಕ್ಷರ ಗಾತ್ರ

ಬಾಬಾಸಾಹೇಬ್‌ ಅಂಬೇಡ್ಕರ್ ಅವರ ಬರಹ, ಭಾಷಣ, ಪ್ರತಿಕ್ರಿಯೆಗಳನ್ನು ಇವತ್ತು ನೋಡುತ್ತಿದ್ದರೆ, ಅವುಗಳ ವ್ಯಾಪ್ತಿ, ಆಳ, ಸಮಕಾಲೀನತೆ ಅಚ್ಚರಿ ಹುಟ್ಟಿಸುತ್ತವೆ. ಅವತ್ತಿನ ಅನೇಕ ರಾಷ್ಷ್ರನಾಯಕರಿಗೆ ಇದ್ದ ಸಾಮಾಜಿಕ ಹಿನ್ನೆಲೆ, ಸವಲತ್ತುಗಳಿಲ್ಲದೆಯೂ ಅಂಬೇಡ್ಕರ್ ಮಾಡಿದ ಚಿಂತನೆಗಳು ಇಂಗ್ಲಿಷಿನಲ್ಲೇ ಹದಿನೈದು ಸಾವಿರ ಪುಟಗಳಷ್ಟು ಹಬ್ಬಿಕೊಂಡಿವೆ; ಮರಾಠಿ ಬರಹಗಳೂ ಜೊತೆ ಸೇರಿದರೆ ಇನ್ನಷ್ಟು ಸಾವಿರ ಪುಟಗಳಾಗುತ್ತವೆ.

ಸ್ವಾತಂತ್ರ್ಯಾನಂತರ ಇಂಡಿಯಾದ ಪ್ರಜಾಪ್ರಭುತ್ವದ ಆಯ್ಕೆ ಮುಕ್ತವಾಗಿದ್ದರೆ, ದೇಶದ ಎಲ್ಲ ಸಮಸ್ಯೆಗಳ ಬಗ್ಗೆ ಆಳವಾಗಿ ಚಿಂತಿಸಿದ್ದ ನಾಯಕನನ್ನೇ ಪ್ರಧಾನಿಯನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಅವತ್ತು ಇದ್ದಿದ್ದರೆ ಖಂಡಿತವಾಗಿ ಅಂಬೇಡ್ಕರ್ ಅತ್ಯಂತ ಸಮರ್ಥ ಆಯ್ಕೆಯಾಗಿರುತ್ತಿದ್ದರು. ನೆಹರೂ ಮೊದಲ ಅವಧಿ ಮುಗಿಸಿದ ಮೇಲಾದರೂ ದೇಶ ಈ ದಿಕ್ಕಿನಲ್ಲಿ ಯೋಚಿಸಬೇಕಾಗಿತ್ತು.

ಹೀಗೆನ್ನಲು ಕಾರಣವಿದೆ: ಅಂಬೇಡ್ಕರ್ ಚಿಂತನೆಯಲ್ಲಿ ಏಕಕಾಲಕ್ಕೆ ದೇಶದ ಹಲವು ಸಮಸ್ಯೆಗಳ ಚರಿತ್ರೆ, ಸಮಸ್ಯೆಗಳ ಬೆಳವಣಿಗೆ, ಅವಕ್ಕೆ ಪರಿಹಾರ- ಮೂರೂ ಬೆರೆತಿವೆ. ಹಲವು ಸಂಸ್ಥಾನಗಳನ್ನು, ಭಾಷಾಪ್ರಾಂತಗಳನ್ನು ವಿಂಗಡಿಸುವ, ರಾಷ್ಟ್ರವಾಗಿ ಒಗ್ಗೂಡಿಸುವ ರೀತಿ ಯಾವುದು? ಜಾತಿಪೀಡಿತ ದೇಶಕ್ಕೆ ಮದ್ದು ಯಾವುದು? ಕೇಂದ್ರ-ರಾಜ್ಯಗಳ ಸಂಬಂಧ ಹೇಗಿರಬೇಕು? ಅಲ್ಪಸಂಖ್ಯಾತರ ಬಗ್ಗೆ ಸರ್ಕಾರದ ಧೋರಣೆ ಏನಾಗಿರಬೇಕು? ನದಿಗಳ ನೀರಿನ ಹಂಚಿಕೆಯನ್ನು ರಾಜ್ಯಗಳು ಹೇಗೆ ಬಗೆಹರಿಸಿಕೊಳ್ಳಬೇಕು... ಹೀಗೆ ಭೂಹಂಚಿಕೆಯಿಂದ ಹಿಡಿದು ಹಲ ಬಗೆಯ ನ್ಯಾಯಗಳನ್ನು ಹೇಗೆ ಒದಗಿಸಬೇಕು ಎಂಬುದಕ್ಕೂ ಅಂಬೇಡ್ಕರ್ ಚಿಂತನೆಯಲ್ಲಿ ಉತ್ತರಗಳಿವೆ.

ಅಂಬೇಡ್ಕರ್ ಮಾಡಿರುವ ಜಾತಿಪದ್ಧತಿಯ ವಿಶ್ಲೇಷಣೆಯನ್ನು ಬಲ್ಲವರಿಗಂತೂ ಇವತ್ತು ಕೊರೊನಾ ಕಾಲದಲ್ಲಿ ಬಳಸಲಾಗುತ್ತಿರುವ ‘ಸೋಷಿಯಲ್ ಡಿಸ್ಟೆನ್ಸಿಂಗ್‌’ ಪದವನ್ನು ಪ್ರಧಾನಿಯಿಂದ ಹಿಡಿದು ಅನೇಕರು ಬಳಸುತ್ತಿರುವ ರೀತಿ ಎಷ್ಟು ಅಪಾಯಕರವೆಂಬುದು ಹೊಳೆಯುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯೇ ‘ಈ ಪದವನ್ನು ಬಳಸಬಾರದು; ದೈಹಿಕ ಅಂತರ ಕಾಯ್ದುಕೊಳ್ಳಬೇಕು; ಆದರೆ ಸಾಮಾಜಿಕ ಸಂಪರ್ಕ ಇಟ್ಟುಕೊಂಡಿರಬೇಕು’ ಎಂದು ಸ್ಪಷ್ಟವಾಗಿ ಹೇಳಿದೆ. ಈ ಪದ ಪಶ್ಚಿಮದಲ್ಲಿ ಹೊರಡಿಸುವ ಅರ್ಥವೇ ಬೇರೆ; ಜಾತಿಪೀಡಿತ ಇಂಡಿಯಾದಲ್ಲಿ ಹೊರಡಿಸುವ ಅರ್ಥವೇ ಬೇರೆ! ಹೀಗಾಗಿ, ಸಾಂಕ್ರಾಮಿಕ ವೈರಸ್ಸಿನ ಜೊತೆಗೆ ಜಾತಿ ಭಾರತದ ಹಲ್ಲುಉಗುರುಗಳು ಮತ್ತೆ ಮೊನಚಾಗುತ್ತಿವೆ. ವರ್ಗಭೇದದ ಕಾಯಿಲೆ ಹೆಚ್ಚುತ್ತಿದೆ. ಬಡವರನ್ನು ಕಂಡು ಚೀರುವ ಹೀನತನ ಹೆಚ್ಚುತ್ತಿದೆ.

ಕಳೆದ ಫೆಬ್ರುವರಿಯಿಂದ ವಿದೇಶದಿಂದ ವಾಪಸಾದ ಯಾತ್ರಿಕರನ್ನು ಸರಿಯಾಗಿ ತಪಾಸಣೆ ಮಾಡದೆ ಬಿಟ್ಟುಕೊಂಡಿದ್ದರಿಂದ ಹಬ್ಬಿರುವ ರೋಗದ ಕಾರಣವನ್ನೇ ಮರೆಮಾಚಿ, ನಗರಗಳಿಂದ ವಾಪಸ್ ಬಂದ ಅಸಹಾಯಕ ಕಾರ್ಮಿಕರ ಮೇಲೆ ಕ್ರಿಮಿನಾಶಕ ಸಿಂಪಡಿಸಿದ ಸರ್ಕಾರವಿದೆ. ಕಡಿಮೆ ಕೂಲಿ ಪಡೆದು ವರ್ಷಗಟ್ಟಲೆ ನಗರಗಳ ಸೇವೆ ಮಾಡಿದ ಬಡವರನ್ನು ನಿರ್ದಯವಾಗಿ ಅಲ್ಲಿಂದ ಓಡಿಸುತ್ತಿರುವ ಜನರ ಹಾಗೂ ಸರ್ಕಾರಗಳ ಕ್ರೌರ್ಯ ಒಂದೆಡೆ; ಮತ್ತೊಂದೆಡೆ, ಈ ವಲಸೆ ಕಾರ್ಮಿಕರನ್ನು ತಮ್ಮ ಊರಿನೊಳಗೇ ಬಿಟ್ಟುಕೊಳ್ಳದ ಹೊಸ ಅಸ್ಪೃಶ್ಯತೆ. ಇಂಥ ಹೀನ ಮನಃಸ್ಥಿತಿಗೆ ಕಾರಣ ಹಾಗೂ ಆಡಳಿತಾತ್ಮಕ ಪರಿಹಾರ ಹುಡುಕಲು ಅಂಬೇಡ್ಕರರ ಜಾತಿ ವಿಶ್ಲೇಷಣೆಗೇ ಹೋಗಬೇಕಾಗಿದೆ.

ಯಾಕೆಂದರೆ, ಅಸ್ಪೃಶ್ಯತೆಯನ್ನು ಆಚರಿಸುತ್ತಿರುವ ಹೀನ ಮನಸ್ಸುಗಳೇ ಕೊರೊನಾ ಪ್ರಸಾರವನ್ನು ಮುಸ್ಲಿಮರ ತಲೆಗೆ ಕಟ್ಟಿ ಹೊಸ ಅಸ್ಪೃಶ್ಯತೆಯನ್ನು ಹುಟ್ಟು ಹಾಕುತ್ತಿವೆ. ಹರಿದ್ವಾರದಲ್ಲಿ ಸಿಕ್ಕಿಕೊಂಡ ಭಕ್ತರು, ದಿಲ್ಲಿಯ ಮಸೀದಿಯಲ್ಲಿ ಸಿಕ್ಕಿಕೊಂಡವರು, ವೈರಸ್ಸಿಗೆ ತುತ್ತಾಗಿ ಪ್ರತ್ಯೇಕವಾಸ ಮಾಡಬೇಕೆಂದು ಹೇಳಿದ್ದರೂ ಧರ್ಮಪ್ರಸಾರಕ್ಕೆ ಹೋದ ಸಿಖ್ ಗುರು, ಮತ್ತವರ ಅನುಯಾಯಿಗಳು- ಈ ಮೂವರೂ ಒಂದೇ ಬಗೆಯ ಅಜ್ಞಾನದ ಬಲಿಪಶುಗಳು. ಈ ಮೂರೂ ಧರ್ಮಗಳ ಅನುಯಾಯಿಗಳ ಅವಿವೇಕವು ಧಾರ್ಮಿಕ ವಲಯದ ಮೂಲದಿಂದ ಬಂದಿರುವುದನ್ನು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದಲೇ ಆಧುನಿಕ ಕಾಲದಲ್ಲಿ ಧರ್ಮ ಹೇಗಿರಬೇಕೆಂಬುದನ್ನು ಬೌದ್ಧ ಧರ್ಮದ ಹೊಸ ವ್ಯಾಖ್ಯಾನದ ಮೂಲಕ ತೋರಿಸಿದ ಅಂಬೇಡ್ಕರ್, ಮೂಢನಂಬಿಕೆಗಳನ್ನು ಕೈಬಿಟ್ಟ ಧರ್ಮ ಮಾತ್ರ ಅನುಸರಿಸಲು ಯೋಗ್ಯ ಎಂದು ಹೇಳಿಕೊಟ್ಟರು.

ಅಮೆರಿಕದಲ್ಲಿ ಕರಿಯರ ಮೇಲೆ ಬಹುಸಂಖ್ಯಾತ ಬಿಳಿಯರ ದಬ್ಬಾಳಿಕೆಯನ್ನು ತಪ್ಪಿಸಲು ರಚಿತವಾದ ‘ನಾಗರಿಕ ರಕ್ಷಣಾ ಮಸೂದೆ’ಯನ್ನು ಗಮನಿಸಿ, ಇಲ್ಲೂ ಅಂಥ ಕಾನೂನೊಂದನ್ನು ಅಂಬೇಡ್ಕರ್‌ ರೂಪಿಸಿದರು. ಈ ಕಾನೂನೇ ಇರದಿದ್ದರೆ ದುರ್ಬಲ ವರ್ಗಗಳು, ಮಹಿಳೆಯರು ಭೂಮಿಯನ್ನಾಗಲೀ ತಮ್ಮ ಹಕ್ಕುಗಳನ್ನಾಗಲೀ ಪಡೆಯುವುದು ಕಷ್ಟವಿತ್ತು. ಮಹಿಳೆಯರಿಗೆ ಆಸ್ತಿಯ ಹಕ್ಕನ್ನು ಕೊಡಲೆತ್ನಿಸಿದ ಅವರ ಹಿಂದೂ ಕೋಡ್ ಬಿಲ್ಲಿಗೆ ಹಿನ್ನಡೆಯಾಗಿರಬಹುದು; ಆದರೆ ಹಲವರ್ಷಗಳ ನಂತರ ಕರ್ನಾಟಕದಲ್ಲಿ ವೀರಪ್ಪ ಮೊಯಿಲಿ ನೇತೃತ್ವದ ಸರ್ಕಾರ, ಮನಮೋಹನ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರಿಗೆ ಆಸ್ತಿಯ ಸಮಾನ ಹಕ್ಕನ್ನು ಕೊಡಮಾಡಿದ್ದು ಅಂಬೇಡ್ಕರ್ ಚಿಂತನೆಗೆ ಸಂದ ಗೌರವ. ಅಸ್ಪೃಶ್ಯರು ಎಂದು ಕರೆಸಿಕೊಳ್ಳುವವರ ವಿಚಾರದಲ್ಲಿ ಕಾಂಗ್ರೆಸ್ ಮಾಡಿದ್ದ ತಪ್ಪುಗಳನ್ನು ಅಂಬೇಡ್ಕರ್ ಕಟುವಾಗಿ ಟೀಕಿಸಿದ್ದರು. ಅಂಬೇಡ್ಕರರಂತೆ ರಾಜಕೀಯ ಪಕ್ಷಗಳನ್ನು, ಸರ್ಕಾರಗಳನ್ನು, ಯೋಜನೆಗಳನ್ನು ವಿಮರ್ಶಿಸುವ ಹಕ್ಕನ್ನು ನಾವೆಂದೂ ಬಿಟ್ಟುಕೊಡಬಾರದು.

ಈಚಿನ ವರ್ಷಗಳ ಆರ್ಥಿಕ ಕುಸಿತದ ಪರಿಣಾಮಗಳನ್ನು ಬಹುತೇಕ ಮಾಧ್ಯಮಗಳು ವಿಮರ್ಶಿಸದಿರುವುದು ದೇಶದ ಹಿನ್ನಡೆಯ ಕಾರಣಗಳಲ್ಲೊಂದು. ಜೊತೆಗೆ, ಆಳುವವರ ಗಿಳಿಪಾಠ ಒಪ್ಪಿಸುವವರು, ವಿಕೃತ ಸುದ್ದಿಗಳನ್ನು ಹಂಚಿ ಜನರ ಮನಸ್ಸಿನ ಆರೋಗ್ಯ ನಾಶ ಮಾಡುವ ದುರುಳರೂ ಸೇರಿಕೊಂಡಿದ್ದಾರೆ. ಅಂಬೇಡ್ಕರ್ ಪ್ರತಿಪಾದಿಸಿದ ರೀತಿಯ ಪ್ರಜಾಪ್ರಭುತ್ವವು ಸರ್ಕಾರಸಮಾಜ-ವ್ಯಕ್ತಿ ಈ ಮೂರೂ ಹಂತಗಳಲ್ಲಿ ಇರದಿದ್ದರೆ ದೇಶವೇ ನಾಶವಾಗುತ್ತದೆ. ಸರ್ಕಾರಗಳ ಯೋಜನೆಗಳನ್ನು ಅಂಬೇಡ್ಕರ್ ಹೇಳಿಕೊಟ್ಟಂತೆ ಕಟ್ಟಕಡೆಯ ಮನುಷ್ಯನ ದೃಷ್ಟಿಯಿಂದ ನೋಡಿ ರೂಪಿಸದಿದ್ದರೆ, ಅಂಬೇಡ್ಕರ್ ಆರ್ಥಿಕ ಚಿಂತನೆಗಳನ್ನು ವಿಸ್ತರಿಸಬಲ್ಲ ಅಮರ್ತ್ಯ ಸೇನ್ ಥರದವರ ಆರ್ಥಿಕ ಚಿಂತನೆಗಳನ್ನು ಅರಿಯದಿದ್ದರೆ, ಕೋಟ್ಯಂತರ ಬಡವರಿಗೆ ಅಭಿವೃದ್ಧಿಯ ಫಲವೇ ದಕ್ಕದಂತಾಗುತ್ತದೆ. ಆದ್ದರಿಂದ ಅಂಬೇಡ್ಕರ್ ಬದುಕಿನ ಅಪೂರ್ವ ಸಂದೇಶಗಳನ್ನು ಸದಾ ಅರಿಯುತ್ತಿರಬೇಕು: ಅಂಬೇಡ್ಕರ್ ಎಂದರೆ ಪ್ರತಿಕೂಲ ಸನ್ನಿವೇಶಗಳ ವಿರುದ್ಧ ಸದಾ ಹೋರಾಡುವ ಛಲ; ಹ್ಞೂಂಕರಿಸುವ ಮೆಜಾರಿಟೇರಿಯನಿಸಮ್ಮನ್ನು ಏಕವ್ಯಕ್ತಿಯ ಬೌದ್ಧಿಕ ಶಕ್ತಿ ಹಿಮ್ಮೆಟ್ಟಿಸಬಲ್ಲದು ಎಂಬ ಆತ್ಮವಿಶ್ವಾಸ; ಆಳವಾದ ತರ್ಕಬದ್ಧ ಚಿಂತನೆಯು ಸಾವಿರಾರು ವರ್ಷಗಳ ಪೂರ್ವಗ್ರಹಪೀಡಿತ ವ್ಯವಸ್ಥೆಗಳನ್ನು, ಚಿಂತನೆಗಳ ಸರ್ವಾಧಿಕಾರವನ್ನು ಹಿಮ್ಮೆಟ್ಟಿಸಬಲ್ಲದೆಂಬ ಸಂಶೋಧನಾ ಬರವಣಿಗೆಯ ಬದ್ಧತೆ; ಜಡ ಜಗತ್ತನ್ನು ಬದಲಿಸುವುದೇ ಸಾಮಾಜಿಕ ಚಿಂತನೆಯ ಗುರಿ ಎಂಬ ಸ್ಪಷ್ಟತೆ; ಹಲವು ಧರ್ಮ, ಭಾಷೆ, ಜಾತಿಗಳಿರುವ ದೇಶವನ್ನು ಜಾತ್ಯತೀತತೆ, ಸಮಾನತೆ ಮಾತ್ರ ಉಳಿಸಬಲ್ಲವೆಂಬ ನಂಬಿಕೆ; ಜನನಾಯಕನ ಅಂತಿಮ ಬದ್ಧತೆಯು ಮೂಕ ಜನಕೋಟಿಯ ಹಿತಾಸಕ್ತಿಗೆ ಮಾತ್ರ ಎಂಬ ಜವಾಬ್ದಾರಿ...

ಅಂಬೇಡ್ಕರ್ ಯುಗದ ಇಂಥ ಪಾಠಗಳನ್ನು ಸಾರ್ವಜನಿಕ ಜೀವನದಲ್ಲಿ ಇರುವವರೆಲ್ಲ ಅರಿಯುವ ಅಗತ್ಯವಿದೆ. ತನ್ನನ್ನು ನಂಬಿದ ಜನಸಮುದಾಯವನ್ನು ಎಂದೆಂದಿಗೂ ದಿಕ್ಕು ತಪ್ಪಿಸದಂಥ ಚಿಂತನೆ, ಕ್ರಿಯೆಗಳಲ್ಲಿ ತೊಡಗಬೇಕೆಂಬ ಅಂಬೇಡ್ಕರ್ ಜವಾಬ್ದಾರಿಯು ದೇಶದ ಪ್ರಧಾನಿಯಿಂದ ಹಿಡಿದು ಪಂಚಾಯತ್ ಅಧ್ಯಕ್ಷನವರೆಗೂ ಇರಲಿ. ವ್ಯಕ್ತಿಯ ಒಳಲೋಕಕ್ಕೆ ಧರ್ಮದ ಅಗತ್ಯವಿದೆಯೆಂದಾದರೆ, ಆ ಧರ್ಮವು ಅಂಬೇಡ್ಕರ್ ವಿವರಿಸಿದ ಧರ್ಮದಂತಿರಬೇಕು ಎಂಬ ಪ್ರಜ್ಞೆ ಎಲ್ಲರಲ್ಲೂ ಬೆಳೆಯಲಿ. ಹಾಗೆಯೇ, ಚಿಂತಕನೊಬ್ಬ ಸಾವಿರಾರು ಪುಟಗಳಷ್ಟು ಬರವಣಿಗೆ ಮಾಡಿದಾಗ, ಅಲ್ಲಿ ಅರೆಕೊರೆಗಳಿದ್ದರೂ ಅಪ್ರಾಮಾಣಿಕತೆ ಮಾತ್ರ ಇರಬಾರದು ಎಂಬುದನ್ನು ಎಲ್ಲ ಕಾಲದ ಚಿಂತಕರೂ ಬಾಬಾಸಾಹೇಬರಿಂದ ಕಲಿಯಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT