ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನುರಣನ | ಉತ್ತರ ಸಿಗದ ಐದು ನಿರ್ಣಾಯಕ ಪ್ರಶ್ನೆ

ಕರ್ನಾಟಕ ಚುನಾವಣಾ ಕಣದಲ್ಲಿ ಮತೀಯ ಧ್ರುವೀಕರಣ ಮತ್ತು ಜಾತಿ ಸಮೀಕರಣ
Last Updated 13 ಫೆಬ್ರುವರಿ 2023, 3:54 IST
ಅಕ್ಷರ ಗಾತ್ರ

ಪ್ರತಿಯೊಂದು ಚುನಾವಣೆಗೂ ಒಂದು ಸಾಮಾಜಿಕ ಮುಖ ಇರುತ್ತದೆ. ಅಂದರೆ, ಉಳಿದೆಲ್ಲ ವಿಚಾರಗಳ ಆಚೆಗೆ ಆಯಾ ರಾಜ್ಯದ ವಿವಿಧ ಜಾತಿ ಮತ್ತು ಮತಧರ್ಮಗಳ ಮತದಾರರು ವಿವಿಧ ಪಕ್ಷಗಳ ಕುರಿತಾಗಿ ಯಾವ ರೀತಿಯ ಒಲವು ನಿಲುವುಗಳನ್ನು ಹೊಂದಿರುತ್ತಾರೆ ಎನ್ನುವುದು ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಈ ದಿಸೆಯಲ್ಲಿ, ಇನ್ನೇನು ಬಂದೇಬಿಟ್ಟಿರುವ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಐದು ಪ್ರಶ್ನೆಗಳು ಮುಖ್ಯವಾಗುತ್ತವೆ.

ಮೊದಲ ಪ್ರಶ್ನೆ ಹಿಂದುತ್ವಕ್ಕೆ ಸಂಬಂಧಿಸಿದ್ದು. 2018ರ ಚುನಾವಣೆಗೆ ಹೋಲಿಸಿದರೆ ಮತದಾರರು ಇನ್ನಷ್ಟು ಹೆಚ್ಚು ಹಿಂದುತ್ವ-ರಾಜಕಾರಣದ ಪ್ರಭಾವಕ್ಕೆ ಒಳಗಾಗಿದ್ದಾರೆಯೇ? ಕರಾವಳಿ ಕರ್ನಾಟಕದ ವ್ಯಾಪ್ತಿಯಲ್ಲಿ ಬಿಜೆಪಿಗೆ ಹಿಂದುತ್ವದ ಅಜೆಂಡಾವನ್ನು ಈತನಕ ಯಶಸ್ವಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿತ್ತು. ಈ ಬಾರಿ ಹಿಂದುತ್ವದ ಹೆಸರಿನಲ್ಲಿ ಮತಬೇಟೆ ನಡೆಸುವ ಬಿಜೆಪಿಯ ತಂತ್ರ ಕರಾವಳಿಯಾಚೆಗೂ ಮತದಾರರನ್ನು ಮರುಳುಗೊಳಿಸುತ್ತಿದೆಯೇ? ಈ ಪ್ರಶ್ನೆಗೆ ಉತ್ತರ ‘ಹೌದು’ ಎಂದಾದರೆ, ಮತದಾರರು ಭ್ರಷ್ಟಾಚಾರ, ಭಿನ್ನಮತ, ಆಡಳಿತ ವೈಫಲ್ಯ, ಬೆಲೆ ಏರಿಕೆಯಂತಹ ಎಲ್ಲ ವಿಚಾರಗಳನ್ನು ಮರೆತು ಆಡಳಿತ ಪಕ್ಷಕ್ಕೆ ಮತ್ತೊಮ್ಮೆ ಮನ್ನಣೆ ನೀಡುವ ಸಾಧ್ಯತೆ ಇದೆ.

ನಿಜ, ಕರ್ನಾಟಕದ ಮತದಾರರು ಹಿಂದಿನ ನಾಲ್ಕೂವರೆ ದಶಕಗಳಿಂದ ಆಡಳಿತ ಪಕ್ಷಗಳನ್ನು ಚುನಾವಣೆಯಲ್ಲಿ ತಿರಸ್ಕರಿಸುತ್ತಾ ಬಂದಿದ್ದಾರೆ. ಇದು ಮತದಾರರ ರಾಜಕೀಯ ಪ್ರಜ್ಞಾವಂತಿಕೆಯೂ ಹೌದು. ಆದರೆ ಯಾವುದೇ ರೀತಿಯ ಧಾರ್ಮಿಕ ಅಮಲಿನ ರಾಜಕಾರಣದ ಮುಂದೆ ರಾಜಕೀಯ ಪ್ರಜ್ಞಾವಂತಿಕೆ ಮಂಕಾಗಿಬಿಡುತ್ತದೆ. ಇದನ್ನರಿತೇ ಬಿಜೆಪಿಯು ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಮತ್ತು ಬಿಜೆಪಿ ಇಲ್ಲದೇಹೋದರೆ ಹಿಂದೂ ಧರ್ಮ ನಾಶವಾಗುತ್ತದೆ ಎನ್ನುವ ಹುಸಿ ಆತಂಕ ಸೃಷ್ಟಿಸುವ ಹಿಂದುತ್ವದ ರಾಜಕಾರಣವನ್ನು ವಿಸ್ತರಿಸುವ ಎಲ್ಲ ರೀತಿಯ ಪ್ರಯತ್ನಗಳನ್ನೂ ಇತ್ತೀಚೆಗೆ ತೀವ್ರಗೊಳಿಸಿರುವುದು.

ಹಿಂದುತ್ವದ ಪ್ರಭಾವ ಕರಾವಳಿಯಾಚೆಗೂ ಪಸರಿಸಿದ ಹಾಗೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಎಷ್ಟರ ಮಟ್ಟಿಗೆ ಹೀಗಾಗಿದೆ ಮತ್ತು ಇದರಿಂದಾಗಿ ಬಿಜೆಪಿಗೆ ಹೆಚ್ಚುವರಿಯಾಗಿ ಎಷ್ಟು ಮತಗಳು ಬೀಳಬಹುದು ಅಂತ ಹೇಳಲಾಗದೆ ಹೋದರೂ, ಬಿಜೆಪಿಯ ಪರಿವಾರ ಸೃಷ್ಟಿಸಿರುವ ದ್ವೇಷ ರಾಜಕಾರಣದ ಭೂತ ಈಗ ತುಳುನಾಡಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಈ ಹಿಂದುತ್ವ ರಾಜಕಾರಣವನ್ನು ಹಿಮ್ಮೆಟ್ಟಿಸುವ ದಿಸೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಡೆಯಿಂದ ಆಗುತ್ತಿರುವ ಪ್ರಯತ್ನಗಳಲ್ಲಿ ಒಂದು ಕಾರ್ಯತಂತ್ರವಾಗಲೀ ಒಂದು ನಿರಂತರತೆಯಾಗಲೀ ಕಾಣಿಸುತ್ತಿಲ್ಲ. ಹಿಂದುತ್ವ ರಾಜಕಾರಣದ ವಿರುದ್ಧ ಕಾಂಗ್ರೆಸ್ಸಿನ ಕೆಲವು ನಾಯಕರು ಆಗಾಗ ನೀಡುವ ಬಿಡಿ ಹೇಳಿಕೆಗಳಾಗಲೀ ಜೆಡಿಎಸ್‌ನವರು ಆಗೊಮ್ಮೆ ಈಗೊಮ್ಮೆ ನೀಡುವ ಎಚ್ಚರಿಕೆಯಾಗಲೀ ಬಿಜೆಪಿಯ ಕಡೆಯಿಂದ ಹಿಂದುತ್ವವನ್ನು ದೊಡ್ಡ ಮಟ್ಟದಲ್ಲಿ ಬಳಸಿಕೊಳ್ಳಲು ನಡೆಯುತ್ತಿರುವ ಪ್ರತ್ಯಕ್ಷ ಹಾಗೂ ಪರೋಕ್ಷ (ಇದೇ ಹೆಚ್ಚು) ಪ್ರಯತ್ನಗಳ ಮುಂದೆ ಪೇಲವವಾಗಿ ಕಾಣಿಸುತ್ತಿವೆ.

ಎರಡನೆಯ ಪ್ರಮುಖ ಪ್ರಶ್ನೆ, ಪ್ರಬಲ ಲಿಂಗಾಯತ ಮತ್ತು ಒಕ್ಕಲಿಗ ಮತದಾರರ ರಾಜಕೀಯ ಒಲವು ಹೋದ ಚುನಾವಣೆಯ ವೇಳೆಗಿಂತ ಈಗ ಯಾವ ರೀತಿ ಮತ್ತು ಎಷ್ಟರಮಟ್ಟಿಗೆ ಬದಲಾಗಿದೆ ಎನ್ನುವುದು. ಹೋದ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್ಸಿಗೆ ವಿರುದ್ಧವಾಗಿದ್ದರು ಎನ್ನುವ ಅಭಿಪ್ರಾಯವಿದೆ. ತಮಗೆ ಪ್ರತ್ಯೇಕ ಧರ್ಮದ ಮನ್ನಣೆ ಬೇಕೆಂಬ ಕೆಲ ಲಿಂಗಾಯತರ ಬೇಡಿಕೆಗೆ ಅಂದಿನ ಮುಖ್ಯಮಂತ್ರಿ, ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಬೆಂಬಲ ನೀಡಿದ್ದರಿಂದ ಸಾಮಾನ್ಯ ಲಿಂಗಾಯತ ಮತದಾರರು ಅವರ ಮೇಲೆ
ಕೋಪಗೊಂಡದ್ದಕ್ಕೆ ಹೀಗಾಯಿತು ಎನ್ನಲಾಗುತ್ತಿದೆ. ಇದು ಪೂರ್ತಿ ಸತ್ಯವಲ್ಲ. ಯಾಕೆಂದರೆ 2018ರ ಫಲಿತಾಂಶ ನೋಡಿದರೆ, ಲಿಂಗಾಯತರ ಪ್ರಾಬಲ್ಯ ಇರುವ ಪ್ರದೇಶ ಗಳಲ್ಲಿ ಕಾಂಗ್ರೆಸ್ಸಿನ ಸಾಧನೆ ಅಷ್ಟೇನೂ ಕಳಪೆಯಾಗಿರಲಿಲ್ಲ.
ಹಾಗಂತ, ಬಿಜೆಪಿಗೆ ನೀಡಿದಷ್ಟು ಬೆಂಬಲವನ್ನು ಲಿಂಗಾಯತ ಸಮುದಾಯವು ಕಾಂಗ್ರೆಸ್ಸಿಗೆ ನೀಡಿಲ್ಲ ಎನ್ನುವುದನ್ನು ಮಾತ್ರ ಅಲ್ಲಗಳೆಯಲಾಗದು.

ಹಾಗಾಗಿ ಈಗ ಇರುವ ಪ್ರಶ್ನೆ ಏನೆಂದರೆ, ಈ ಬಾರಿ ಲಿಂಗಾಯತರು ಬಿಜೆಪಿಯ ಜತೆಯೇ ಮತ್ತೆ ಗಟ್ಟಿಯಾಗಿ ನಿಲ್ಲುತ್ತಾರೆಯೇ ಅಥವಾ ಹೋದ ಸಲಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ಸಿನತ್ತ ಒಲವು ತೋರುತ್ತಾರೆಯೇ ಎನ್ನುವುದು. ಪಂಚಮಸಾಲಿ ಲಿಂಗಾಯತರ ಮೀಸಲಾತಿ ಬೇಡಿಕೆಯನ್ನು ಬಿಜೆಪಿ ನೇತೃತ್ವದ ಸರ್ಕಾರ ನಿರ್ವಹಿಸಿದ ರೀತಿ, ಬಿ.ಎಸ್‌.ಯಡಿಯೂರಪ್ಪ ಅವರ ಸ್ಥಾನಮಾನದ ಪ್ರಶ್ನೆಯಂತಹವುಗಳಿಂದಾಗಿ ಬಿಜೆಪಿಯ ಬಗ್ಗೆ ಲಿಂಗಾಯತರಿಗೆ ಹೋದ ಬಾರಿ ಇದ್ದಷ್ಟು ಮಮತೆ ಇಲ್ಲದೇ ಇರಬಹುದು. ಈ ಅಸಮಾಧಾನ ಬಿಜೆಪಿ ವಿರುದ್ಧ ಮತಗಳಾಗಿ ಎಷ್ಟರಮಟ್ಟಿಗೆ ಪರಿವರ್ತನೆ ಆಗಬಹುದು ಎನ್ನುವ ಬಗ್ಗೆ ಸ್ಪಷ್ಟತೆ ಗೋಚರಿಸುತ್ತಿಲ್ಲ.

ಒಕ್ಕಲಿಗ ಸಮುದಾಯದ ವಿಚಾರವೂ ಅಷ್ಟೆ. ಬರಬರುತ್ತಾ ಜೆಡಿಎಸ್ ಪಕ್ಷವು ಕೌಟುಂಬಿಕ ಪಕ್ಷವಾಗಿ ಬಿಟ್ಟಿದೆ ಎನ್ನುವ ಅಸಮಾಧಾನ ಒಕ್ಕಲಿಗರಲ್ಲಿ ಇರುವುದು ಕಾಣಿಸುತ್ತದೆ. ಅದನ್ನು ಶಮನಗೊಳಿಸಿ ಅವರ ಬೆಂಬಲ ಉಳಿಸಿಕೊಳ್ಳುವ ಪ್ರಯತ್ನವನ್ನು ಆ ಪಕ್ಷ ಮಾಡುತ್ತಿದೆ.

ಬಿಜೆಪಿಯಂತೂ ಈ ಅವಕಾಶವನ್ನು ಮತಗಳಾಗಿ ಪರಿವರ್ತಿಸಲು ‘ಒಕ್ಕಲಿಗ ಪ್ಯಾಕೇಜ್’ ಒಂದನ್ನು ಅನುಷ್ಠಾನ ಗೊಳಿಸುತ್ತಿದೆ. ಹೋದ ಚುನಾವಣೆಯ ವೇಳೆಗೆ ಸಿದ್ದರಾಮಯ್ಯ ಅವರ ವಿರುದ್ಧದ ಒಕ್ಕಲಿಗ ಮತದಾರರ ಸಿಟ್ಟು ಹಳೆ ಮೈಸೂರು ಪ್ರದೇಶಗಳಲ್ಲಿ ಕಾಂಗ್ರೆಸ್ಸಿಗೆ ದೊಡ್ಡ ನಷ್ಟ ತಂದಿತು. ಆ ಸಿಟ್ಟು ಈಗ ಕಡಿಮೆಯಾಗಿದೆಯೇ? ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಎನ್ನುವ ಅಂಶ ಕಾಂಗ್ರೆಸ್ಸಿಗೆ ಎಷ್ಟರಮಟ್ಟಿಗೆ ಇಲ್ಲಿ ನೆರವಾದೀತು? ಇವು ಕೂಡಾ ಸದ್ಯಕ್ಕೆ ಸ್ಪಷ್ಟ ಉತ್ತರ ಗಳಿಲ್ಲದ ನಿರ್ಣಾಯಕ ಪ್ರಶ್ನೆಗಳು.

ಮೂರನೆಯ ಪ್ರಶ್ನೆ, ಕುರುಬರ ಹೊರತಾದ ಹಿಂದುಳಿದ ಜಾತಿಗಳದ್ದು. ಮೂಲತಃ ಕಾಂಗ್ರೆಸ್ಸಿನ ವೋಟ್‌ಬ್ಯಾಂಕುಗಳಾಗಿದ್ದ ಈ ಸಮೂಹ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯತ್ತ ಮುಖ ಮಾಡಿತ್ತು. ಇವರನ್ನು ತನ್ನತ್ತ ಇನ್ನಷ್ಟು ಸೆಳೆದುಕೊಳ್ಳುವ ಪ್ರಯತ್ನಕ್ಕೆ ಈ ಬಾರಿ ಒಂದು ಅಡ್ಡಿ ಕಾಣಿಸುತ್ತದೆ. ಬಿಜೆಪಿಯು ಒಬಿಸಿ ಸಮುದಾಯಗಳ ಯುವಕರನ್ನು ‘ಬಳಸಿ ಎಸೆಯುವ’ ರಾಜಕೀಯ ಮಾಡುತ್ತಿದೆ ಎನ್ನುವ ಅಸಮಾಧಾನ ವೊಂದು ಅಲ್ಲಲ್ಲಿ ಗೋಚರಿಸುತ್ತದೆ. ಬಹಳ ಕಾಲದ ನಂತರ ಹಿಂದುಳಿದವರ ನಡುವೆ ಹುಟ್ಟಿಕೊಂಡಿರುವ ಒಂದು ರಾಜಕೀಯ ಜಾಗೃತಿಯಂತೆ ಕಾಣಿಸುತ್ತಿರುವ ಈ ಬೆಳವಣಿಗೆಯು ಬಿಜೆಪಿಯತ್ತ ವಾಲುತ್ತಿರುವ ನೂರಾರು ಸಂಖ್ಯೆಯ ಸಣ್ಣಪುಟ್ಟ ಹಿಂದುಳಿದ ಸಮುದಾಯಗಳನ್ನು ತಡೆದು ನಿಲ್ಲಿಸೀತೆ? ನಿಲ್ಲಿಸಿದರೆ ಅಷ್ಟರಮಟ್ಟಿಗೆ ಹಿಂದುತ್ವ ರಾಜಕೀಯಕ್ಕೆ ಅದೊಂದು ಸ್ಪಷ್ಟ ಪ್ರತಿರೋಧ ಎನ್ನಬಹುದು.

ಇನ್ನೊಂದು ಪ್ರಶ್ನೆ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮತದಾರರಿಗೆ ಸಂಬಂಧಿಸಿದ್ದು. ಹಿಂದುಳಿದ ವರ್ಗಗಳಂತೆಯೇ ಗಣನೀಯ ಪ್ರಮಾಣದ ಎಸ್‌ಸಿ, ಎಸ್‌ಟಿ ಮತದಾರರೂ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯತ್ತ ವಾಲಿದ್ದು ಸತ್ಯ. ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ ಕಾರಣಕ್ಕೆ ಬಿಜೆಪಿ ಬಗೆಗಿನ ಈ ಸಮುದಾಯಗಳ ಪ್ರೀತಿ ಇನ್ನಷ್ಟು ಹೆಚ್ಚಾಗಿದೆಯೇ? ಮೀಸಲಾತಿಯ ವಿಚಾರವನ್ನು ಬಳಸಿಕೊಳ್ಳಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ. ಆದರೆ ಮೀಸಲಾತಿಯ ಕುರಿತಾದ ಗೊಂದಲಗಳೂ ಹೆಚ್ಚುತ್ತಿವೆ.

ಕೊನೆಯದಾಗಿ, ಮುಸ್ಲಿಂ ಮತಗಳು. ಬಿಜೆಪಿಯ ಉಗ್ರಸ್ವರೂಪಿ ಹಿಂದುತ್ವ ರಾಜಕಾರಣವು ಮುಸ್ಲಿಮರಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಅಭದ್ರತೆಯನ್ನು ಉಂಟುಮಾಡಿದೆ. ಈ ಅಭದ್ರತೆಯಿಂದ ಅವರು ಎಲ್ಲೆಡೆ ಒಟ್ಟಾಗಿ ಕಾಂಗ್ರೆಸ್ಸಿಗೆ ಮತ ನೀಡಬಹುದೇ? ಕಾಂಗ್ರೆಸ್ ಹಾಗೆ ಭಾವಿಸಿರಬಹುದು. ಆದರೆ ಮುಸ್ಲಿಂ ಸಮುದಾಯದಲ್ಲಿ ಎಲ್ಲರೂ ಒಂದೇ ರೀತಿ ಯೋಚಿಸುವ ಅಥವಾ ಅವರನ್ನು ಒಂದೇ ರೀತಿಯಲ್ಲಿ ಯೋಚಿಸುವಂತೆ ಮಾಡಬಹುದಾದ ಕಾಲ ಕಳೆದುಹೋಗಿದೆ. ಸಾಲದು ಎಂಬಂತೆ ಮುಸ್ಲಿಂ ಮತಗಳ ವಿಭಜನೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಭರ್ಜರಿ ಪ್ರಯತ್ನ ನಡೆಸುತ್ತಿವೆ.

ಉತ್ತರ ಸ್ಪಷ್ಟವಿಲ್ಲದೆ ಹೋದರೂ ಈ ಐದು ಪ್ರಶ್ನೆಗಳು 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಕಣದ ಜಾತೀಯ- ಮತೀಯ ಸ್ಥೂಲ ಚಿತ್ರಣವೊಂದನ್ನು ಒದಗಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT