ಗುರುವಾರ, 5 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುರಣನ: ಅಲ್ಲಿನವರಿಲ್ಲಿ ಬೇಡವೆನ್ನುತ್ತಾ ಬಂದ ಕನ್ನಡಿಗರು

ರಾಜ್ಯದ ಮೇಲೆ ಕೇಂದ್ರದ ದಬ್ಬಾಳಿಕೆಗೆ ಡಬಲ್‌ ಎಂಜಿನ್‌ ಸರ್ಕಾರ ಎಂದು ಹೆಸರು
Published 2 ಮೇ 2023, 18:45 IST
Last Updated 2 ಮೇ 2023, 18:45 IST
ಅಕ್ಷರ ಗಾತ್ರ

ನಾರಾಯಣ ಎ.

ಚುನಾವಣಾ ಪ್ರಚಾರದಲ್ಲಿ ಭರವಸೆಗಳನ್ನು ಉಪಮೆಗಳ ಮೂಲಕ, ರೂಪಕಗಳ ಮೂಲಕ ನೀಡುವುದಿದೆ. ಆದರೆ ‘ಡಬಲ್ ಎಂಜಿನ್’ ಎನ್ನುವ ಈ ಇಂಗ್ಲಿಷ್ ಪದಪುಂಜ ಚುನಾವಣಾ ಸಂವಹನವನ್ನೇ ಯಾಂತ್ರೀಕರಿಸುತ್ತಿರುವಂತೆ ಕಾಣಿಸುತ್ತದೆ. ‘ಡಬಲ್ ಎಂಜಿನ್ ಸರ್ಕಾರ’ವನ್ನು ಕಷ್ಟಪಟ್ಟು ಕನ್ನಡಕ್ಕೆ ಭಾಷಾಂತರಿಸಿಕೊಂಡರೆ ‘ಎರಡು ಯಂತ್ರಗಳ ಸರ್ಕಾರ’ ಅಂತ ಹೇಳಬಹುದೋ ಏನೋ?

ನಾರಾಯಣ ಎ.
ನಾರಾಯಣ ಎ.

ಸರ್ಕಾರವೇ ಒಂದು ಯಂತ್ರ. ಆ ಯಂತ್ರಕ್ಕೆ ಇನ್ನೆರಡು ಯಂತ್ರಗಳಂತೆ. ಎಲ್ಲಾ ಯಂತ್ರ. ಎಲ್ಲಾ ಯಾಂತ್ರಿಕ. ಚುನಾವಣೆಯ ಭಾಷೆ ನೆಲದ ಭಾಷೆಯಾಗಿರಬಾರದೇ? ಚುನಾವಣೆಯ ಭರವಸೆಗಳನ್ನು ಯಂತ್ರದ ವರಸೆಯ ಬದಲು ಮನುಷ್ಯ- ಮನುಷ್ಯತ್ವದ ನುಡಿಗಟ್ಟುಗಳಲ್ಲಿ ಹೆಣೆಯಬಾರದೇ?

ಭಾಷೆಯ, ಅಲಂಕಾರಗಳ ಮಾತು ಹಾಗಿರಲಿ. ಮುಖ್ಯ ವಿಷಯಕ್ಕೆ ಬರೋಣ. ಈ ಡಬಲ್ ಎಂಜಿನ್ ಅನ್ನುವ ಪರಿಕಲ್ಪನೆಯನ್ನು ದೇಶದ ಸಂವಿಧಾನದ ಚೌಕಟ್ಟಿನಲ್ಲಿ ಅರ್ಥ ಮಾಡಿಕೊಳ್ಳಲು ಹೊರಟರೆ, ಹಳೆಯ ಚಂದಮಾಮ ಕತೆಗಳ ನೆನಪಾಗುತ್ತದೆ. ಒಬ್ಬ ದೊಡ್ಡ ರಾಜ ಮತ್ತೊಬ್ಬ ರಾಜನಿಗೆ ಹೇಳುತ್ತಾನೆ: ‘ನೀನು ನನ್ನ ಸಾಮಂತನಾಗು. ನಾನು ನಿನ್ನ, ನಿನ್ನ ರಾಜ್ಯದ, ನಿನ್ನ ಪ್ರಜೆಗಳ ಸಕಲ ಇಷ್ಟಾನಿಷ್ಟಗಳನ್ನೂ ಪೂರೈಸುತ್ತೇನೆ. ಇಲ್ಲದೇಹೋದರೆ ಪರಿಣಾಮ ಎದುರಿಸಲು ಸಿದ್ಧನಾಗು’. ಈಗ ಈ ‘ಡಬಲ್ ಎಂಜಿನ್’ ಎನ್ನುವ ಇಂಗ್ಲಿಷ್‌ನ ಯಾಂತ್ರಿಕ ಪದಪುಂಜವನ್ನು ಅನಾವರಣಗೊಳಿಸಿದಾಗ, ಅಲ್ಲಿರುವುದು ಕೂಡಾ ಇಂತಹದ್ದೊಂದು ಸಾಮಂತೀಕರಣದ ಮಾದರಿ. ಅದು ಭರವಸೆಯಲ್ಲ. ಅದು ಬೆದರಿಕೆ. ಈ ದೇಶದ ಮಹಾನ್ ಸಂವಿಧಾನ ಒದಗಿಸಿಕೊಟ್ಟಿರುವ ರಾಜ್ಯಗಳ ಸ್ವಾಯತ್ತತೆಯ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಕೇಂದ್ರೀಕರಣದ ರಾಜಕೀಯ.

‘ಇಲ್ಲೂ ನಮ್ಮದೇ ಸರ್ಕಾರ ಇಲ್ಲದೇಹೋದರೆ ಗಲಭೆಗಳಾಗುತ್ತವೆ’ ಅಂತ ದೆಹಲಿಯಿಂದ ಬಂದ ದೊಡ್ಡ ನಾಯಕರೊಬ್ಬರು ಕನ್ನಡಿಗರಿಗೆ ಎಚ್ಚರಿಕೆ ನೀಡಿರುವುದು ಕೂಡ ‘ಡಬಲ್ ಎಂಜಿನ್’ನ ವೇಗಕ್ಕೆ ಕರ್ನಾಟಕದ ರಾಜಕೀಯ ಎತ್ತ ಸಾಗಬಹುದು ಎನ್ನುವುದಕ್ಕೊಂದು ಸಿಗ್ನಲ್.
ಡಬಲ್ ಎಂಜಿನ್ ಸರ್ಕಾರ ಇದ್ದರೆ ಮಾತ್ರ ಅಭಿವೃದ್ಧಿ, ಕರ್ನಾಟಕದಲ್ಲೊಂದು ಎಂಜಿನ್, ದೆಹಲಿಯಲ್ಲಿ ಇನ್ನೊಂದು ಎಂಜಿನ್ ಇದ್ದರೆ ಕರ್ನಾಟಕದ ಅಭಿವೃದ್ಧಿ ಆಗುವುದಿಲ್ಲ ಎಂದೂ, ಕರ್ನಾಟಕದಲ್ಲಿ ಬೇರೊಂದು ಪಕ್ಷದ ನೇತೃತ್ವದ ಸರ್ಕಾರ ಇದ್ದರೆ ಕೇಂದ್ರದ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಲು ತೊಡಕಾಗುತ್ತದೆ ಎಂಬಿತ್ಯಾದಿ ಆಧಾರರಹಿತ ಆತಂಕಗಳಿಗೆ ಕರ್ನಾಟಕ ಎಂದೋ ಉತ್ತರ ನೀಡಿ ಆಗಿದೆ. ಚರಿತ್ರೆಯನ್ನು ಮರೆತವರು ಅಥವಾ ಮರೆತಂತೆ ನಟಿಸುವವರು ಮಾತ್ರ ಈಗಾಗಲೇ ನಿವಾರಣೆಯಾದ ಆತಂಕಗಳನ್ನು ಕೂಡಾ ಮತ್ತೆ ಮತ್ತೆ ಜನರ ಮುಂದಿಡುವ ಪ್ರಯತ್ನ ಮಾಡುವುದು.

1983ರ ನಂತರ ಈ ರಾಜ್ಯದಲ್ಲಿ ಕಾಂಗ್ರೆಸ್ಸಿನ ಏಕಸ್ವಾಮ್ಯ ರಾಜಕೀಯ ಕೊನೆಗೊಂಡ ನಂತರ ರಾಜ್ಯದ ಮತದಾರರು ಯಾವತ್ತೂ ದೆಹಲಿಯಲ್ಲಿ ಒಂದು ಪಕ್ಷದ ನೇತೃತ್ವದ ಸರ್ಕಾರ ಇದ್ದಾಗ, ಕರ್ನಾಟಕದಲ್ಲಿ ಇನ್ನೊಂದು ಪಕ್ಷದ ನೇತೃತ್ವದ ಸರ್ಕಾರ ಇರುವ ಹಾಗೆ ನೋಡಿಕೊಂಡಿದ್ದಾರೆ. ಅಂದರೆ, ಸ್ವಂತ ವಿವೇಚನೆಯನ್ನು ಬಳಸಿ ಕರ್ನಾಟಕದ ಮತದಾರರು ಈ ಡಬಲ್ ಎಂಜಿನ್ ಸರ್ಕಾರದ ಪರಿಕಲ್ಪನೆಯನ್ನು ಎಂದೋ ತಿರಸ್ಕರಿಸಿದ್ದಾರೆ.

1983ರಲ್ಲಿ ಕರ್ನಾಟಕದಲ್ಲಿ ಜನತಾ ಪಕ್ಷದ ನೇತೃತ್ವದ ಸರ್ಕಾರ ಬಂದಾಗ ಕೇಂದ್ರದಲ್ಲಿ ಇದ್ದದ್ದು ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ. 1985ರಲ್ಲಿ ಮತ್ತೆ ಕರ್ನಾಟಕದಲ್ಲಿ ಜನತಾ ಪಕ್ಷದ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಕೇಂದ್ರದಲ್ಲಿ ಇದ್ದದ್ದು ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ. 1989ರಲ್ಲಿ ಇಲ್ಲಿ ಭಾರಿ ಬಹುಮತದೊಂದಿಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಾಗ, ಕೇಂದ್ರದಲ್ಲಿ ಇದ್ದದ್ದು ವಿ.ಪಿ.ಸಿಂಗ್ ನೇತೃತ್ವದ ಜನತಾದಳ ಸರ್ಕಾರ. 1994ರಲ್ಲಿ ಇಲ್ಲಿ ದೇವೇಗೌಡರ ನೇತೃತ್ವದ ಜನತಾದಳ ಗೆದ್ದು ಸರ್ಕಾರ ರಚಿಸಿದಾಗ ಕೇಂದ್ರದಲ್ಲಿ ಇದ್ದದ್ದು ಪಿ.ವಿ.ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ. 1999ರಲ್ಲಿ ಕರ್ನಾಟಕದಲ್ಲಿ ಎಸ್‌.ಎಂ.ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕೇಂದ್ರದಲ್ಲಿ ಇದ್ದದ್ದು ವಾಜಪೇಯಿ ಅವರ ಬಿಜೆಪಿ ನೇತೃತ್ವದ ಸರ್ಕಾರ. 2006ರಲ್ಲಿ ಇಲ್ಲಿ ಜನತಾದಳ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ಅಧಿಕಾರ ಹಿಡಿದಾಗ ಕೇಂದ್ರದಲ್ಲಿ ಇದ್ದದ್ದು ಕಾಂಗ್ರೆಸ್ ನೇತೃತ್ವದ ಸರ್ಕಾರ.

2008ರಲ್ಲಿ ಮೊದಲ ಬಾರಿಗೆ ಬಿಜೆಪಿ ಇಲ್ಲಿ ಸರ್ಕಾರ ರಚಿಸಿದಾಗ ಕೇಂದ್ರದಲ್ಲಿ ಅಧಿಕಾರ ಹೊಂದಿದ್ದದ್ದು ಕಾಂಗ್ರೆಸ್‌. 2013ರಲ್ಲಿ ಇಲ್ಲಿ ಕಾಂಗ್ರೆಸ್‌ ಗೆದ್ದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮೊದಲ ಒಂದು ವರ್ಷ ಬಿಟ್ಟರೆ ನಂತರ ಕೇಂದ್ರದಲ್ಲಿ ಇದ್ದದ್ದು ಬಿಜೆಪಿಯ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ. ಮಧ್ಯೆ ಅಲ್ಲೊಮ್ಮೆ ಇಲ್ಲೊಮ್ಮೆ ಸಣ್ಣ ಅವಧಿಗಳಿಗೆ ಕೇಂದ್ರದಲ್ಲಿ ಮತ್ತು ಕರ್ನಾಟಕದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿ ಇದ್ದದ್ದು ಬಿಟ್ಟರೆ ನಾಲ್ಕು ವರ್ಷಗಳ ಕಾಲ ಸುದೀರ್ಘ ಅವಧಿಗೆ ಕೇಂದ್ರದಲ್ಲಿ ಮತ್ತು ಕರ್ನಾಟಕದಲ್ಲಿ ಒಂದೇ ಪಕ್ಷ ಅಧಿಕಾರ ಹಿಡಿದದ್ದು ಈಗ 2019 ಮತ್ತು 2023ರ ನಡುವೆ ಮಾತ್ರ. ಕರ್ನಾಟಕದಲ್ಲೊಂದು ಪ್ರಾದೇಶಿಕ ಪಕ್ಷ ಇಲ್ಲದೇ ಇರಬಹುದು. ಆದರೆ ಇಲ್ಲೊಂದು ಪ್ರಾದೇಶಿಕ ಪ್ರಜ್ಞೆ ಇದೆ ಎನ್ನುವುದಕ್ಕೆ ಇದುವೇ ಸಾಕ್ಷಿ.

ಹೀಗೆ ಕರ್ನಾಟಕದ ಮತದಾರರು ಕೇಂದ್ರದಲ್ಲಿ ಒಂದು ಪಕ್ಷ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಇನ್ನೊಂದು ಪಕ್ಷಕ್ಕೆ ಮನ್ನಣೆ ನೀಡುತ್ತಾ ಬಂದದ್ದು ಸರಿಯಾಗಿಯೇ ಇತ್ತು ಎನ್ನುವುದನ್ನು ಆ ಅವಧಿಯಲ್ಲಿ ಈ ರಾಜ್ಯ ಕಂಡ ಅಭಿವೃದ್ಧಿಯೇ ಹೇಳುತ್ತದೆ. ದೇಶದಲ್ಲಿ ಹತ್ತರ ಜತೆ ಹನ್ನೊಂದು ಎನ್ನುವಂತಿದ್ದ ಕರ್ನಾಟಕ ಆ ಅವಧಿಯಲ್ಲಿ ರಾಷ್ಟ್ರದ ಗಮನ ಸೆಳೆಯಿತು. ದೇಶದ ಎಲ್ಲೆಡೆಗಳಿಂದ ಉದ್ಯೋಗ ಅರಸಿ ಜನ ಕರ್ನಾಟಕಕ್ಕೆ ಬರುವ ಹಾಗಾಯಿತು. ಅದಾಗಲೇ ಚೆನ್ನೈ, ಹೈದರಾಬಾದ್‌ನಂತಹ ಮೆಟ್ರೊ ನಗರಗಳನ್ನು ಹೊಂದಿದ್ದ ಕಾರಣಕ್ಕೆ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳು ಪಡೆದ ಖ್ಯಾತಿಗೆ ಸಮದಂಡಿಯಾಗಿ ಕರ್ನಾಟಕ ಕೂಡ ಬೆಂಗಳೂರನ್ನು ಬೆಳೆಸಿ, ದೇಶದ ಆರ್ಥಿಕ ನಕ್ಷೆಯಲ್ಲಿ ಪುಟಿದೆದ್ದದ್ದು ಆಗಲೇ. ಬೇರೆ ಪಕ್ಷದ ನೇತೃತ್ವದ ಸರ್ಕಾರ ಇದ್ದ ಕಾರಣ ಕೇಂದ್ರದ ಯೋಜನೆಗಳಿಗೆ ಇಲ್ಲಿ ತೊಂದರೆ ಆದ ಕತೆ ಯಾರೂ ಕೇಳಿಲ್ಲ. ಈ ಕಾರಣಕ್ಕೆ ಅಭಿವೃದ್ಧಿ ಕುಂಠಿತಗೊಂಡಿತ್ತು ಅಂತ ಯಾವ ವರದಿಯೂ ಹೇಳಿಲ್ಲ.

ಡಬಲ್ ಎಂಜಿನ್ ಸರ್ಕಾರ ಇಲ್ಲದೆಯೇ ಕರ್ನಾಟಕ ಬೆಳೆದಿದೆ ಎನ್ನುವುದಕ್ಕೆ ಕಣ್ಣಿಗೆ ರಾಚುವಂತಹ ರೀತಿಯ ಪುರಾವೆಗಳಿವೆ. ತದ್ವಿರುದ್ಧವಾಗಿ, ಕೇಂದ್ರದಿಂದ ಅನ್ಯಾಯ ಆಗುತ್ತಿದೆ, ಕರ್ನಾಟಕಕ್ಕೆ ಸಿಗಬೇಕಿರುವ ತೆರಿಗೆ ಪಾಲು ಸಿಗುತ್ತಿಲ್ಲ, ಕರ್ನಾಟಕದ ರಾಜಕೀಯ ನಾಯಕರು ಸ್ವಯಂ ಶಕ್ತಿಯಿಂದ ವಿಜೃಂಭಿಸುವುದನ್ನು ಕೇಂದ್ರದಲ್ಲಿರುವ ನಾಯಕರು ಸಹಿಸುವುದಿಲ್ಲ ಎಂಬಂತಹ ಆಪಾದನೆಗಳೆಲ್ಲಾ ಕೇಳಿಬಂದದ್ದು ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಇದ್ದ ಅವಧಿಯಲ್ಲಿ. ‘ಡಬಲ್ ಎಂಜಿನ್ ಸರ್ಕಾರ’ ಎಂದರೆ ಕರ್ನಾಟಕವನ್ನು ದೆಹಲಿಯಲ್ಲಿ ಕುಳಿತವರೇ ಕೈಗೊಂಬೆಗಳ ಮೂಲಕ ಆಳುವುದು, ಅವರೇ ಬಂದು ಚುನಾವಣೆ ನಡೆಸುವುದು, ರಾಜ್ಯ ಸರ್ಕಾರ ನಿಮಿತ್ತ ಮಾತ್ರ, ರಾಜ್ಯ ನಾಯಕರು ನೆಪ ಮಾತ್ರ ಎನ್ನುವುದು 2023ರ ಚುನಾವಣಾ ಕಣದಲ್ಲಿ ಎದ್ದು ಕಾಣಿಸುತ್ತಿದೆ.

ಹಾಗಾಗಿ ‘ಡಬಲ್ ಎಂಜಿನ್’ ಸರ್ಕಾರದ ಪ್ರತಿಪಾದನೆ ಏನಿದೆ ಅದು ಕರ್ನಾಟಕದ ರಾಜಕೀಯ ವಿವೇಚನೆಯ ಮೇಲೆ ನಡೆಯುತ್ತಿರುವ ಪ್ರಹಾರ. ಸಂವಿಧಾನದ ಪ್ರಕಾರ, ರಾಜ್ಯದ ಅಭಿವೃದ್ಧಿಯ ಹೊಣೆಗಾರಿಕೆಯು ರಾಜ್ಯಗಳ ಪ್ರಾಥಮಿಕ ಜವಾಬ್ದಾರಿ. ಕೇಂದ್ರ ಸರ್ಕಾರಕ್ಕೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಇಲ್ಲಿ ಬೇರೊಂದು ಪಕ್ಷದ ನೇತೃತ್ವದ ಸರ್ಕಾರ ಇದ್ದರೆ ಅಡ್ಡಿಯಾಗುತ್ತದೆ  ಎಂದು ಹೇಳುವುದೇ ಅಸಂಬದ್ಧ. ಹಾಗೊಂದು ವೇಳೆ ತೊಡಕುಗಳೇನಾದರೂ ಆಗಿದ್ದಿದ್ದರೆ ಅವುಗಳನ್ನು ಜನರ ಮುಂದೆ ಬಿಡಿಸಿಟ್ಟರೆ ಯಾವ ಪಕ್ಷವನ್ನು ಆಯ್ದುಕೊಳ್ಳಬೇಕು ಎಂದು ಅವರೇ ನಿರ್ಣಯಿಸುತ್ತಾರೆ. ಅದಕ್ಕಾಗಿ ‘ಡಬಲ್ ಎಂಜಿನ್’ ಸರ್ಕಾರ ಎಂಬ ಅಸಹಜ ಮಾದರಿಯೊಂದನ್ನು ತೋರಿಸಿ ಜನರನ್ನು ಮರುಳು ಮಾಡಬೇಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT