ಸೋಮವಾರ, ಸೆಪ್ಟೆಂಬರ್ 21, 2020
26 °C
ಮತದಾರ ಕೇಳಬಯಸುವ ಭಾಷೆಯನ್ನು ನಾಯಕರು ಬಳಸಿದ್ದಾರೆ!

ಚುನಾವಣೆ ಸಾರಿದ ಚಾರಿತ್ರ್ಯದ ಕಥೆ

ನಾರಾಯಣ ಎ. Updated:

ಅಕ್ಷರ ಗಾತ್ರ : | |

Prajavani

ಮತ್ತೊಂದು ಸಾರ್ವತ್ರಿಕ ಚುನಾವಣೆಯ ಮತದಾನ ಪೂರ್ಣಗೊಂಡಿದೆ. ಗುರುವಾರ ಫಲಿತಾಂಶವೂ ದೇಶದ ಮುಂದಿರುತ್ತದೆ. ಪ್ರತೀ ಚುನಾವಣೆಯೂ ಚರಿತ್ರೆಗೊಂದು ತಿರುವು ನೀಡುವ ವಿದ್ಯಮಾನ. ಅಂತೆಯೇ ಆಯಾ ದೇಶದ ಚಾರಿತ್ರ್ಯವನ್ನು ಜಗತ್ತಿಗೆ ಸಾರುವ ವಿದ್ಯಮಾನವೂ ಆಗಿರುತ್ತದೆ. 17ನೇ ಲೋಕಸಭಾ ಚುನಾವಣೆಯು ಆಧುನಿಕ ಭಾರತದ ಚರಿತ್ರೆಗೆ ಎಷ್ಟರಮಟ್ಟಿಗೆ ಮತ್ತು ಯಾವ ರೀತಿಯ ತಿರುವು ನೀಡಲಿದೆ ಎನ್ನುವ ಸಂಗತಿ ಇಂದಿಗೆ ಅಸ್ಪಷ್ಟ. ಆದರೆ ಈ ಇಡೀ ಚುನಾವಣೆ ಪ್ರಕ್ರಿಯೆ ಮತ್ತು ಚುನಾವಣೆಗೆ ಸಂಬಂಧಿಸಿದ ಬೆಳವಣಿಗೆಗಳು ಈ ದೇಶದ ರಾಜಕೀಯ ಚಾರಿತ್ರ್ಯ ಎಂತಹದ್ದು ಎಂದು ಮತ್ತೊಮ್ಮೆ ಜಗತ್ತಿಗೆ ಸಾರಿವೆ.

ಚುನಾವಣೆಯಲ್ಲಿ ಸೆಣಸುವ ರಾಜಕೀಯ ನಾಯಕರು ಪ್ರತಿನಿಧಿಸುವುದು ಮತ್ತು ಪ್ರತಿಫಲಿಸುವುದು ಆಯಾ ದೇಶದ ಜನತೆಯ ಚಾರಿತ್ರ್ಯವನ್ನೇ. ಅಷ್ಟಕ್ಕೂ ಈ ರಾಜಕೀಯ ನಾಯಕರೆಲ್ಲಾ ಯಾರು? ಅವರೆಲ್ಲಾ ನಮ್ಮ ನಡುವೆ ಸೃಷ್ಟಿಯಾದವರೇ ಅಲ್ಲವೇ? ಆದುದರಿಂದ ಈ ಚುನಾವಣೆಯ ಪೂರ್ವತಯಾರಿ, ಪ್ರಚಾರ ಮತ್ತು ಮತದಾನದ ಸಂದರ್ಭದಲ್ಲಿ ಆಗಿಹೋಗಿರುವ ವಿದ್ಯಮಾನ ಗಳಿಗೆಲ್ಲಾ ಕೇವಲ ರಾಜಕೀಯ ನಾಯಕರನ್ನು ಬೊಟ್ಟು ಮಾಡಿ ತೋರಿಸುವುದರಲ್ಲಿ ಅರ್ಥವಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಭಾರತೀಯ ಮತದಾರರು ಪ್ರಜ್ಞಾವಂತರು, ಪ್ರಬುದ್ಧರು ಎಂಬಿತ್ಯಾದಿ ಹೇಳಿಕೆಗಳೆಲ್ಲಾ ಬರೀ ಬೊಗಳೆ. ಮತದಾರರು ಪ್ರಜ್ಞಾವಂತರೂ ಪ್ರಬುದ್ಧರೂ ಆಗಿದ್ದರೆ ಚುನಾವಣೆಯಲ್ಲಿ ಜಾತಿ ವಿಜೃಂಭಿಸುತ್ತಿರಲಿಲ್ಲ, ಹಣದ ಹುಚ್ಚುಹೊಳೆ ಹರಿಯುತ್ತಿರಲಿಲ್ಲ, ಚುನಾವಣಾ ಪ್ರಚಾರದ ಭಾಷೆ ಗಟಾರಕ್ಕೆ ಇಳಿಯುತ್ತಿರಲಿಲ್ಲ. ಚುನಾವಣೆಯಿಂದ ಚುನಾವಣೆಗೆ ಮತದಾರರ ಪ್ರಜ್ಞಾವಂತಿಕೆ ಬೆಳೆಯುತ್ತಿದ್ದರೆ, ಚುನಾವಣೆಯಿಂದ ಚುನಾವಣೆಗೆ ಚುನಾವಣಾ ಪ್ರಕ್ರಿಯೆ ಮತ್ತಷ್ಟು ಮಗದಷ್ಟು ಹದಗೆಡುತ್ತಾ ಸಾಗುತ್ತಿರಲಿಲ್ಲ.

ಈ ಚುನಾವಣೆಯಲ್ಲೂ ಮತ್ತೊಮ್ಮೆ ನಾಯಕರು ತಮ್ಮ ತಮ್ಮ ಬೆಂಬಲಿಗ ಮತದಾರರಿಗೆ ಏನು ಇಷ್ಟವಾಗುತ್ತದೋ ಆ ಸರಕುಗಳನ್ನು ಮಾರಿದ್ದಾರೆ. ಈ ಬಾರಿಯ ಒಂದೇ ಒಂದು ವಿಶೇಷ ಏನು ಎಂದರೆ, ಈ ಅಧಃಪತನದ ವ್ಯವಹಾರಕ್ಕೆ ಸ್ವತಃ ಪ್ರಧಾನಮಂತ್ರಿಯ ಸ್ಥಾನದಲ್ಲಿದ್ದ ನಾಯಕ ನಿರ್ಭಿಡೆಯಿಂದ ಪೌರೋಹಿತ್ಯ ವಹಿಸಿದ್ದು. ಹೋದ ಚುನಾವಣೆಯಲ್ಲಿ ನರೇಂದ್ರ ಮೋದಿ ಒಬ್ಬ ಅಭ್ಯರ್ಥಿ ಮಾತ್ರ. ಈ ಬಾರಿ ಅವರು ಅಭ್ಯರ್ಥಿಯಾಗಿರುವುದರ ಜತೆಗೆ ದೇಶದ ಪ್ರಧಾನಿ. ಆದರೂ ಚುನಾವಣಾ ಪ್ರಚಾರದ ಉದ್ದಕ್ಕೂ ಮೋದಿ ಯಾಕೆ ಕೆಟ್ಟದಾಗಿಯೂ ಬಾಲಿಶವಾಗಿಯೂ ಅಪ್ರಬುದ್ಧವಾಗಿಯೂ ಕೆಲವೊಮ್ಮೆ ಹಸಿ ಸುಳ್ಳುಗಳನ್ನು ಬಳಸಿಯೂ ಮಾತನಾಡುತ್ತಿದ್ದುದು ಅಂದರೆ, ಅವರಿಗೆ ತಮ್ಮನ್ನು ಬೆಂಬಲಿಸುವ ಮತದಾರ ಮಂದಿ ಎಂತಹವರು ಎನ್ನುವ ಸರಿಯಾದ ಪರಿಕಲ್ಪನೆ ಇದ್ದಿರುವುದರಿಂದ. ಅವರನ್ನು ಬೆಂಬಲಿಸುವವರು ಈ ಬಾಲಿಶ, ಅಪ್ರಬುದ್ಧ ಮತ್ತು ಕೆಟ್ಟ ಮಾತುಗಳಲ್ಲೇ ನಾಯಕತ್ವವನ್ನು ಗುರುತಿಸುವವರು ಅಂತಲೇ ಅವರು ಭಾವಿಸಿರಬೇಕು. ಅಂತಹ ಮಾತುಗಳಲ್ಲೇ ‘ಕಾಂಗ್ರೆಸ್ಸಿಗರಿಗೆ ಮತ್ತು ಮುಸ್ಲಿಮರಿಗೆ’ ಪಾಠ ಕಲಿಸಬಲ್ಲ ತನ್ನ ಶೌರ್ಯವನ್ನು ಮತದಾರರು ಗುರುತಿಸುವುದು ಎಂದು ಅವರು ಅಂದುಕೊಂಡಿರಬೇಕು. ಇಲ್ಲದೇ ಹೋದರೆ ಕಾಂಗೆಸ್ಸನ್ನು ಮತ್ತು ಇತರ ಪ್ರತಿಪಕ್ಷಗಳನ್ನು ಸಭ್ಯತೆಯಿಂದ ಟೀಕಿಸಲು ಬೇಕಾದಷ್ಟು ಸರಕು ಇರುವಾಗ ಮತ್ತೆ ಮತ್ತೆ ಅವರು ತಮ್ಮ ಸ್ಥಾನ ಗೌರವ ಮರೆತು ಪರಮ ಬಾಲಿಶತನದ ಪ್ರದರ್ಶನ ಮಾಡುತ್ತಿರಲಿಲ್ಲ.

ಕಾಂಗ್ರೆಸ್ಸಿನ ವಿಷಯಕ್ಕೆ ಬಂದರೆ ರಾಹುಲ್ ಗಾಂಧಿ ಮತ್ತೆ ಮತ್ತೆ ಬಳಸುತ್ತಿದ್ದ ‘ಚೌಕೀದಾರ್ ಚೋರ್ ಹೈ’ ಎನ್ನುವ ನುಡಿಗಟ್ಟು ನೈತಿಕವಾಗಿ ಅಪಕ್ವವೂ ರಾಜಕೀಯವಾಗಿ ಅಪ್ರಬುದ್ಧವೂ ಆಗಿತ್ತು. ರಫೇಲ್ ವ್ಯವಹಾರದಲ್ಲಿ ಮೋದಿ ನೇತೃತ್ವದ ಸರ್ಕಾರ ಉತ್ತರಿಸಬೇಕಾದ ಹಲವಾರು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿರಬಹುದು. ಈ ಪ್ರಶ್ನೆಗಳು ಹುಟ್ಟುಹಾಕಿದ್ದ ಅನುಮಾನದ ಹುತ್ತದೊಳಗೆ ದೊಡ್ಡದೊಂದು ಹಾವು ಇದ್ದರೂ ಇದ್ದೀತು. ಆದರೆ ಈ ತನಕ ಯಾವುದೂ ಸ್ಪಷ್ಟವಿಲ್ಲದೆ ಇರುವಾಗ ಏಕಾಏಕಿ ‘ಚೋರ್ ಹೈ’ ಅಂದರೆ ಅದನ್ನು ಜನ ನಂಬುವ ರಾಜಕೀಯ ಪರಿಸರ ಈ ಚುನಾವಣೆಯ ವೇಳೆ ಇರಲಿಲ್ಲ. ಜನರನ್ನು ನಂಬಿಸಲು ಬೇಕಾದಷ್ಟು ಪುರಾವೆ ರಾಹುಲ್ ಬಳಿ ಇರಲಿಲ್ಲ. ಆದರೂ, ಹೀಗೆ ಆಡಿದರೆ ಮಾತ್ರ ತನ್ನ ಮತದಾರ ಬೆಂಬಲಿಗರನ್ನು ಮುಟ್ಟಲು ಸಾಧ್ಯ ಎಂದು ಅವರು ಭಾವಿಸಿರಬೇಕು.

ಅದೇನೇ ಇರಲಿ, ಇಷ್ಟನ್ನೇ ನೆಪವಾಗಿಸಿಕೊಂಡು ಮೋದಿ ‘ನಿನ್ನಪ್ಪ ಸತ್ತಾಗ ಆತ ಭ್ರಷ್ಟಾಚಾರಿ ನಂಬರ್ ಒನ್ ಆಗಿದ್ದ’ ಎಂದು ಬೀದಿಜಗಳದ ಭಾಷೆಯಲ್ಲಿ ಪ್ರತ್ಯುತ್ತರ ನೀಡುವುದಕ್ಕೆ ಬದಲು ‘ಒಂದು ಕಾಲದಲ್ಲಿ ರಾಜೀವ್ ಗಾಂಧಿಯವರನ್ನೂ ಇದೇ ರೀತಿಯ ಆಪಾದನೆಯೊಂದು ಸುತ್ತಿಕೊಂಡಿತ್ತು’ ಎಂದು ಮರ್ಯಾದೆಯಿಂದ ಹೇಳಬಾರದಿತ್ತೇ ಅಂತ ದೇಶದ ಸಜ್ಜನರು ಅಪೇಕ್ಷಿಸಬಹುದು. ಆದರೆ ತಮ್ಮ ಭಕ್ತರು ಮತ್ತು ಬಂಟರಿಗೆ ಮರ್ಯಾದೆಯ ಭಾಷೆ ಸಪ್ಪೆ ಎನಿಸುತ್ತದೆ ಎಂದು ಮೋದಿ ಅವರಿಗೆ ಗೊತ್ತು. ಈ ಎಪ್ಪತ್ತು ವರ್ಷಗಳಲ್ಲಿ, ಕಾಂಗ್ರೆಸ್ ವಿರುದ್ಧದ ಸಾಧಾರಣ ಭಾಷೆಯ ಟೀಕೆಗಳಿಗೆ ಅವರ ಮನಸ್ಸು ಒಗ್ಗಿಹೋಗಿದೆ. ಈಗ ಅವರನ್ನು ತಟ್ಟಬೇಕು ಎಂದಾದರೆ ಕೆಟ್ಟ ಭಾಷೆಯೇ ಆಗಬೇಕು. ಒಮ್ಮೆ ಕೆಟ್ಟ ಭಾಷೆಗೆ ಒಗ್ಗಿಕೊಂಡವರನ್ನು ತಟ್ಟಬೇಕಾದರೆ ಇನ್ನೂ ಕೆಟ್ಟ ಭಾಷೆ ಬಳಸಬೇಕು. ಆದಕಾರಣ ಈ ಕಾಲಕ್ಕೆ ‘ನಿನ್ನ ಅಪ್ಪ’… ಇತ್ಯಾದಿ ಗಟಾರದ ನುಡಿಗಟ್ಟುಗಳನ್ನು ಅವರು ಬಳಸುತ್ತಿರುವುದು. ಆದಕಾರಣವೇ ‘ಸಾವು’ ‘ರಕ್ತ’ ‘ಕೊಲೆ’ಯಂತಹ ಬೆಚ್ಚಿಬೀಳಿಸುವ ಪ್ರತಿಮೆಗಳನ್ನು ಅವರು ಯಥೇಚ್ಛವಾಗಿ ಪ್ರಯೋಗಿಸುತ್ತಿರುವುದು. ಆದಕಾರಣವೇ ‘ನೀನು ಹೈಬ್ರಿಡ್ ತಳಿ’, ‘ಪ್ರಾಯ ತುಂಬಿದ ಡಿಸ್ಲೆಕ್ಸಿಕ್’ ಅಂತ ನೇರಾನೇರ ಚಾರಿತ್ರ್ಯವಧೆಯ ಪ್ರಯತ್ನಕ್ಕೂ ಅವರು ಹೇಸದೇ ಇರುವುದು. ಈ ಬಾರಿ ಸ್ವತಃ ಮಹಾತ್ಮ ಗಾಂಧಿಯವರನ್ನೇ ಚುನಾವಣಾ ರಂಗಕ್ಕೆ ಎಳೆದು ತಂದದ್ದನ್ನೂ ಈ ಸರಣಿಯ ಮುಂದುವರಿದ ಭಾಗವಾಗಿಯೇ ಕಾಣಬೇಕು. ಈ ಐದು ವರ್ಷಗಳಲ್ಲಿ ಜವಾಹರಲಾಲ್ ನೆಹರೂ ಅವರನ್ನು ಎಷ್ಟು ಕೀಳುಮಟ್ಟಕ್ಕಿಳಿದು ಜರೆಯಲು ಸಾಧ್ಯವೋ ಅಷ್ಟೂ ಮಾಡಿ ಆಗಿದೆ. ಇನ್ನು ಅವರನ್ನು ಎಷ್ಟು ಕೆಟ್ಟದಾಗಿ ಬೈದರೂ ಅದು ಸಪ್ಪೆ. ಉಳಿದದ್ದು ಗಾಂಧೀಜಿ ಮಾತ್ರ. ಅವರಿಗೂ ಈ ಬಾರಿ ಒಂದೆರಡು ಪ್ರಯೋಗಾತ್ಮಕ ಬಾಣ ಬಿಟ್ಟಾಯಿತು. ಇನ್ನು ಮುಂದೆ ಇನ್ನೂ ಪರಿಣಾಮಕಾರಿಯಾಗಬೇಕು ಎಂದರೆ ಇನ್ನೂ ಕೆಳಗಿಳಿಯಬೇಕು. ಆದುದರಿಂದ ಈ ಅಧೋಮುಖಿ ಸಂವಹನಾ ತಂತ್ರಗಾರಿಕೆಯ ಮುಂದಣ ಆವಿಷ್ಕಾರಗಳು ಹೇಗಿರಬಹುದು ಎನ್ನುವುದನ್ನು ಊಹಿಸಿದರೆ ಭಯವಾಗುತ್ತದೆ.

ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸಿ ಎಚ್ಚರಿಸ ಬೇಕಿದ್ದ ಚುನಾವಣಾ ಆಯೋಗವು ನಿಸ್ತೇಜವಾಗಿಬಿಟ್ಟದ್ದು ಮಾತ್ರವಲ್ಲ, ಆಳುವ ಪಕ್ಷಕ್ಕೆ ಸಹಕಾರಿಯಾಗಿ ನಡೆದುಕೊಳ್ಳುತ್ತಿದೆ ಎಂಬ ಅನುಮಾನ ಹುಟ್ಟುಹಾಕಿದ್ದು ಈ ಚುನಾವಣೆ ಕಂಡ ಇನ್ನೊಂದು ದುರಂತ. ಆಯೋಗದ ಬಗ್ಗೆ ಹುಟ್ಟಿಕೊಂಡ ಇಂತಹ ಅನುಮಾನಗಳು ಓರ್ವ ಚುನಾವಣಾ ಆಯುಕ್ತರ ಬಹಿರಂಗ ಪ್ರತಿಭಟನೆಯಿಂದಾಗಿ ಇನ್ನಷ್ಟು ಬಲಗೊಳ್ಳುತ್ತಿವೆ. ಒಂದು ಕೆಟ್ಟ ಸಂವಹನ ಪರಂಪರೆಯು ಮತ್ತೂ ಮತ್ತೂ ಹೊಸ ಹೊಸ ರೀತಿಯ ಕೆಟ್ಟ ಸಂವಹನ ಪರಂಪರೆಗೆ ಕಾರಣವಾಗುವ ಹಾಗೆ, ಒಮ್ಮೆ ಚುನಾವಣಾ ಆಯೋಗದಂತಹ ಸಾಂವಿಧಾನಿಕ ಮೇಲುಸ್ತುವಾರಿ ಸಂಸ್ಥೆಗಳು ಪತನದ ಹಾದಿ ಹಿಡಿದರೆ ಅದನ್ನು ತಡೆಯುವುದು ಕಷ್ಟವಾಗುತ್ತದೆ. ಈವರೆಗೆ ಚುನಾವಣಾ ಆಯೋಗದ ತಂಟೆಗೆ ಆಳುವ ಪಕ್ಷಗಳು ಬರುತ್ತಿರಲಿಲ್ಲ. ಯಾವುದೇ ಹಸ್ತಕ್ಷೇಪಕ್ಕೆ ಅತೀತ ಎನ್ನುವ ವರ್ಚಸ್ಸನ್ನು ಆ ಸಂಸ್ಥೆ ಉಳಿಸಿಕೊಂಡದ್ದು ಅದಕ್ಕೆ ಕಾರಣವಾಗಿತ್ತು. ಯಾವತ್ತು ಈ ವರ್ಚಸ್ಸು ಮುರಿದುಬಿತ್ತೋ ಅಂದಿಗೆ, ಆಳುವ ಪಕ್ಷಗಳಿಗೆ ಬೇಕಾದಂತೆ ಈ ಸಂಸ್ಥೆಯನ್ನು ಬಳಸಿಕೊಳ್ಳಬಹುದು ಎನ್ನುವ ಸಂದೇಶ ರವಾನೆಯಾಗಿ ಆಗಿದೆ. ಮುಂದಿನ ಚುನಾವಣೆಗಳ ಸ್ವರೂಪವನ್ನು ಈ ವಿದ್ಯಮಾನ ಕೂಡಾ ನಿರ್ಣಯಿಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು