ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2019ರಲ್ಲಿ ಬಿಜೆಪಿಯ ವೈರಿ ‘2014’

ಮೋದಿ: ವರ್ಚಸ್ಸು ಹೆಚ್ಚಿದ್ದು ಸ್ಪಷ್ಟವಿಲ್ಲ; ಸೋಲಬೇಕೆನ್ನುವ ವಾದ ಗಟ್ಟಿಯಿಲ್ಲ
Last Updated 8 ಏಪ್ರಿಲ್ 2019, 19:36 IST
ಅಕ್ಷರ ಗಾತ್ರ

ಮೊದಲಿಗೆ ಒಂದಷ್ಟು ಹಳೆ ವಿಚಾರಗಳನ್ನು ಮೆಲುಕು ಹಾಕೋಣ. ವಿವಿಧ ಪಕ್ಷಗಳ ಒಕ್ಕೂಟ (ಎನ್‌ಡಿಎ) ರಚಿಸಿಕೊಂಡು ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಬಿಜೆಪಿ, 282 ಸ್ಥಾನಗಳನ್ನು ಗೆದ್ದುಕೊಂಡಿದೆ ಅಂತ 2014ರ ಚುನಾವಣೆಯ ಫಲಿತಾಂಶ ಜಗತ್ತಿಗೆ ಸಾರಿದಾಗ ಕೆಲವರು ‘ಇದು, ಭಾರತದ ಮತದಾರ ಸಾರಾಸಗಟಾಗಿ ಬಲಪಂಥೀಯತೆಯತ್ತ ತಿರುಗಿದ ಲಕ್ಷಣ’ ಎಂದರು. ಇನ್ನು ಕೆಲವರು ‘ಭಾರತದ ಮತದಾರ ಜಾತಿ-ಮತ-ಉಪಜಾತಿ ಎಲ್ಲವನ್ನೂ ಮೀರಿ ಅಭಿವೃದ್ಧಿಯತ್ತ ಚಿತ್ತ ನೆಟ್ಟು ಪ್ರಬುದ್ಧನಾಗುತ್ತಿರುವ ಸೂಚನೆ’ ಎಂದರು. ಮತ್ತೂ ಕೆಲವರು ‘ಮುಂದಿನ ಎರಡು ಲೋಕಸಭಾ ಚುನಾವಣೆಗಳನ್ನು ನಡೆಸುವ ಅಗತ್ಯವೇ ಇಲ್ಲ. ಏಕೆಂದರೆ ಕನಿಷ್ಠ 15 ವರ್ಷಗಳ ಕಾಲ ಮೋದಿಯನ್ನು ಅಲುಗಾಡಿಸಲು ಪರಮಾತ್ಮನಿಗೂ ಸಾಧ್ಯವಿಲ್ಲ’ ಎಂದು ಕಣಿ ಹೇಳಿದರು.

ಐದು ವರ್ಷಗಳು ಕಳೆದು ಮತ್ತೊಂದು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವಾಗ ಈ ಹೇಳಿಕೆಗಳಲ್ಲಿ ಯಾವುದು ಎಷ್ಟು ಸರಿ ಎಂದು ಕೇಳಿದರೆ ಯಾರ ಬಳಿಯಾದರೂ ಸ್ಪಷ್ಟ ಉತ್ತರಗಳಿವೆ ಅಂತ ಅನ್ನಿಸುವುದಿಲ್ಲ. ಭಾರತದ ಚುನಾವಣೆಗಳೇ ಹಾಗೆ. ಅವುಗಳು ಯಾವ ಪ್ರಶ್ನೆಗಳಿಗೂ ಅಂತಿಮ ಉತ್ತರ ನೀಡುವುದಿಲ್ಲ. ಹೊಸ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತವೆ. ಭಾರತದ ರಾಜಕೀಯವೇ ಹಾಗೆ. ಅದರಲ್ಲಿ ಬದಲಾಗುತ್ತಿರುವಂತೆ ಕಾಣಿಸುವುದೆಲ್ಲಾ ಬದಲಾಗುವುದಿಲ್ಲ. ಶಾಶ್ವತ ಅಂತ ಅಂದುಕೊಂಡದ್ದು ಶಾಶ್ವತವಾಗಿ ಉಳಿಯುವುದೂ ಇಲ್ಲ.

ಹಾಗೆ ನೋಡಿದರೆ, ಇತ್ತೀಚಿನ ವರ್ಷಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತದಾರರ ಒಲವು ನಿಲುವು ಹೇಗೆ, ಎಷ್ಟು ಎನ್ನುವುದು ನಿರೀಕ್ಷಿಸಲಾಗದಷ್ಟು ಸಂಕೀರ್ಣವಾಗಿ ಹೋಗಿದೆ. 2004ರಲ್ಲಿ ವಾಜಪೇಯಿ ನೇತೃತ್ವದ ಸರ್ಕಾರ ಸೋಲುತ್ತದೆ ಅಂತ ಯಾರೂ ನಿರೀಕ್ಷಿಸಿರಲಿಲ್ಲ. 2009ರಲ್ಲಿ ಮನಮೋಹನ್ ಸಿಂಗ್ ನೇತೃತ್ವದಸರ್ಕಾರ ಮತ್ತೊಂದು ಅವಧಿಗೆ ಗೆಲ್ಲುತ್ತದೆ ಅಂತ ಯಾರೂ ನಿರೀಕ್ಷಿಸಿರಲಿಲ್ಲ. 2014ರ ಚುನಾವಣೆಯಲ್ಲಿ ಎನ್‌ಡಿಎ ಗೆದ್ದು ನರೇಂದ್ರ ಮೋದಿ ಪ್ರಧಾನಿ ಆಗುತ್ತಾರೆ ಎನ್ನುವುದನ್ನು ನಿರೀಕ್ಷಿಸಲಾಗಿತ್ತಾದರೂ ಏಕಾಕಿಯಾಗಿ ಸರ್ಕಾರ ನಡೆಸಲು ಬೇಕಾಗುವಷ್ಟು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಳ್ಳುತ್ತದೆ ಎನ್ನುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ.

2019ರ ಚುನಾವಣೆಯಲ್ಲಿ ಏನಾಗಬಹುದು ಎಂದು ಊಹಿಸುವ ಉದ್ಯಮದಲ್ಲಿ ಈಚೆಗಿನ ಈ ಚರಿತ್ರೆನಮ್ಮನ್ನು ಎಚ್ಚರಿಸುತ್ತಿರಬೇಕು. ಈ ಚುನಾವಣೆಯಲ್ಲಿ ಏನೇನಾಗಬಹುದು ಎಂದು ಊಹಿಸುವಲ್ಲಿ ಮುಖ್ಯವಾಗುವ ಎರಡು ವಿಚಾರಗಳಿವೆ. ಹೋದ ಚುನಾವಣೆಯಲ್ಲಿ ಆದಂತೆ ಮೋದಿಯವರನ್ನೇ ಬಂಡವಾಳವಾಗಿಸಿಕೊಂಡು ಬಿಜೆಪಿ ಈ ಚುನಾವಣೆಯನ್ನು ಕೂಡಾಎದುರಿಸುತ್ತಿದೆ. ಆದರೆ 2014ರ ಸಂದರ್ಭಕ್ಕೆ ಹೋಲಿಸಿದರೆ ಮೋದಿ ವರ್ಚಸ್ಸು ಈ ಬಾರಿ ಹೆಚ್ಚಾಗಿದೆಯೋ ಅಥವಾ ಕಡಿಮೆಯಾಗಿದೆಯೋ ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಸ್ಪಷ್ಟವಾದ ಉತ್ತರವಿಲ್ಲ.

ಅದೇ ವೇಳೆ, ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಈ ಬಾರಿ ಹೆಚ್ಚು ಯುದ್ಧಸನ್ನದ್ಧವಾಗಿರಬಹುದು. ಆದರೆ ಅವರಲ್ಲಿ ಯಾರ ಬಳಿ ಕೂಡ ಈ ಚುನಾವಣೆಯಲ್ಲಿ ಮೋದಿಯವರನ್ನು ಜನ ಯಾಕೆ ಸೋಲಿಸಬೇಕು ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಆಶ್ವಾಸನೆಗಳನ್ನು ಈಡೇರಿಸಿಲ್ಲ, ಕಪ್ಪುಹಣ ವಾಪಸ್ ತಂದಿಲ್ಲ, 15 ಲಕ್ಷ ರೂಪಾಯಿ ಜೇಬಿಗೆ ಹಾಕಿಲ್ಲ ಇತ್ಯಾದಿ ವಿರೋಧ ಪಕ್ಷಗಳ ಮಾಮೂಲಿ ಮಂತ್ರಕ್ಕೆ ಭಾರತದ ಚುನಾವಣೆಯಲ್ಲಿ ಮಾವಿನಕಾಯಿ ಉದುರುವುದಿಲ್ಲ. ‘ಚೌಕೀದಾರ್ ಚೋರ್ ಹೈ’ ಅಂತ ರಾಹುಲ್ ಗಾಂಧಿ ಬಾರಿ ಬಾರಿ ಹೇಳುತ್ತಿದ್ದರೂ ಮೋದಿಯವರ ‘ಶುದ್ಧ ಚಾರಿತ್ರ್ಯ’ದಲ್ಲಿ ಜನ ಕಳಂಕ ಗುರುತಿಸುವಂತೆ ಆಗಿಲ್ಲ. ಮೋದಿ ಮತ್ತವರ ಭಕ್ತರು ದೇಶವನ್ನು ಸಾಮಾಜಿಕವಾಗಿ ಒಡೆಯುತ್ತಿದ್ದಾರೆ ಎನ್ನುವ ಅಂಶವನ್ನು ವಿರೋಧ ಪಕ್ಷಗಳು ಜನರ ಮುಂದಿಡಬಹುದು. ಆದರೆ ಜನಾಂಗೀಯ ದ್ವೇಷ, ರಾಷ್ಟ್ರಪ್ರೇಮ, ಶ್ರೀರಾಮ, ಪಾಕಿಸ್ತಾನ, ಅಯ್ಯಪ್ಪ, ಧರ್ಮರಕ್ಷಣೆ ಇತ್ಯಾದಿಗಳನ್ನೆಲ್ಲಾ ಪರಸ್ಪರಪ್ರತ್ಯೇಕಿಸಲಾರದಂತೆ ಬೆರೆಸಿ ಪಾಕ ಮಾಡಿ ಹಂಚುವ ಮೂಲಕ ವೋಟು ಗಿಟ್ಟಿಸುವ ಬಿಜೆಪಿಯ ಹೊಸ ರಾಜಕೀಯವು ಇನ್ನಿಲ್ಲ ಎಂಬಂತೆ ಜನಮನವನ್ನು ಆವರಿಸಿರುವ ಈ ಕಾಲದಲ್ಲಿ ಸಾಮಾಜಿಕ ಸೌಹಾರ್ದದ ಪಾಠ ಎಷ್ಟು ಮಂದಿಯನ್ನು ತಟ್ಟಿದೆ ಅಂತ ಸ್ಪಷ್ಟವಾಗುತ್ತಿಲ್ಲ.

ಆದುದರಿಂದ ಮೋದಿಯವರಿಗೆ ವಿರೋಧ ಪಕ್ಷಗಳು ಸವಾಲು ಅಂತ ಕಾಣಿಸುವುದಿಲ್ಲ. ಮೋದಿಯವರಿಗೆ ಅವರ ಸಾಲು ಸಾಲು ಸೋಲುಗಳು ಸವಾಲು ಅಂತ ಅನ್ನಿಸುವುದಿಲ್ಲ. ಅವರಿಗಿರುವ ಏಕೈಕ ಸವಾಲು, ಅವರ ಏಕೈಕ ಪ್ರತಿಸ್ಪರ್ಧಿ ಅಥವಾ ಅವರ ಏಕೈಕ ವೈರಿ ಅಂತ ಈ ಚುನಾವಣೆಯಲ್ಲಿ ಏನಾದರೂ ಒಂದು ಇದ್ದರೆ ಅದು ಒಂದೇ: ಅದು 2014ರ ಅವರ ಪಕ್ಷದ ಸಾಧನೆ. ಅಂದರೆ ಹೋದ ಚುನಾವಣೆಯಲ್ಲಿ ಸ್ಥಾನ ಗಳಿಕೆಯ ದೃಷ್ಟಿಯಿಂದ ಬಿಜೆಪಿ ಎಲ್ಲೆಲ್ಲಿ ಎಷ್ಟು ಎತ್ತರಕ್ಕೆ ಏರಲು ಸಾಧ್ಯವೋ ಅಷ್ಟು ಎತ್ತರಕ್ಕೆ ಏರಿ ಆಗಿದೆ. ಅದಕ್ಕಿಂತ ಮೇಲೇರಲು ಸಾಧ್ಯವಿಲ್ಲ. ಅಲ್ಲಿಂದ ಏನಿದ್ದರೂ ಕೆಳಗಿಳಿಯಬೇಕು.

ಕಳೆದ ಚುನಾವಣೆಯಲ್ಲಿ ಬಿಜೆಪಿ ಪಡೆದ 282 ಸ್ಥಾನಗಳಲ್ಲಿ, 239 ಸ್ಥಾನಗಳನ್ನು ಅದು ಪಡೆದುಕೊಂಡದ್ದು ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್, ಛತ್ತೀಸಗಡ, ಜಾರ್ಖಂಡ್, ಹರಿಯಾಣ, ದೆಹಲಿ, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಂದ. ಈ 12 ರಾಜ್ಯಗಳಲ್ಲಿ 299 ಲೋಕಸಭಾ ಸ್ಥಾನಗಳಿವೆ. ಅಂದರೆ ಈ ರಾಜ್ಯಗಳಲ್ಲಿ ಇರುವ ಶೇಕಡ 80ರಷ್ಟು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಅದರಲ್ಲೂ ರಾಜಸ್ಥಾನ, ಗುಜರಾತ್, ಉತ್ತರಾಖಂಡ ಮತ್ತು ಹಿಮಾಚಲಪ್ರದೇಶ ರಾಜ್ಯಗಳಲ್ಲಿ ಎಲ್ಲಾ ಸ್ಥಾನಗಳು ಬಿಜೆಪಿಯ ಪಾಲಾಗಿದ್ದವು. ದೇಶದ ಉತ್ತರ ಮತ್ತು ಪಶ್ಚಿಮ ಭಾಗದ ಈ 12 ರಾಜ್ಯಗಳಲ್ಲಿ ಬದಲಾದ ಈಗಿನ ರಾಜಕೀಯ, ಜಾತೀಯ, ಸ್ಥಳೀಯ ಲೆಕ್ಕಾಚಾರಗಳನ್ನು ಪರಿಗಣಿಸಿದರೆ ಬಿಜೆಪಿ ಈ ಬಾರಿ ತನ್ನ ಸಾಧನೆಯನ್ನು ಹೆಚ್ಚಿಸಿಕೊಳ್ಳುವುದಾಗಲೀ ಅಥವಾ ಹಿಂದಿನ ಸಾಧನೆಯನ್ನು ಉಳಿಸಿಕೊಳ್ಳುವುದಾಗಲೀ ತೀರಾ ಕಷ್ಟದ ಮಾತು.

ಉಳಿದ ರಾಜ್ಯಗಳಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಿ ಆ ರಾಜ್ಯಗಳಲ್ಲಿ ಕಳೆದುಕೊಳ್ಳಲಿರುವ ಸ್ಥಾನಗಳನ್ನು ಸರಿದೂಗಿಸಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ಬರುತ್ತದೆ. ಈಗ ಉಳಿದ ರಾಜ್ಯಗಳ ವಿಚಾರಕ್ಕೆ ಬರೋಣ. ಈ ರಾಜ್ಯಗಳಲ್ಲಿ (ಪೂರ್ವ, ದಕ್ಷಿಣ ರಾಜ್ಯಗಳು ಮತ್ತು ಜಮ್ಮು–ಕಾಶ್ಮೀರ) ಇರುವ ಒಟ್ಟು 244 ಸ್ಥಾನಗಳ ಪೈಕಿ ಬಿಜೆಪಿ ಹೋದ ಬಾರಿ ಪಡೆದುಕೊಂಡದ್ದು ಬರೀ 43 ಸ್ಥಾನಗಳನ್ನು (ಶೇ 17). ಈ ಬಾರಿ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆದುಕೊಳ್ಳಬಹುದು ಎನ್ನುವ ನಿರೀಕ್ಷೆ ಇದೆ. ಉಳಿದಂತೆ ಪರಿಸ್ಥಿತಿಎಲ್ಲಿಯೂ ನಿರ್ಣಾಯಕ ಎನಿಸುವಷ್ಟು ಬದಲಾಗಿಲ್ಲ.

ಕೇರಳದಲ್ಲಿ ಶಬರಿಮಲೆಯ ಅಯ್ಯಪ್ಪನನ್ನೇ ಮುಂದಿಟ್ಟುಕೊಂಡು ಮಾಡಿದ ರಾಜಕೀಯದ ಹೊರತಾಗಿಯೂ ಅಲ್ಲಿ ಒಂದೋ ಎರಡೋ ಸ್ಥಾನ ಗೆದ್ದುಕೊಂಡರೆ ಅದೇ ಪವಾಡ. ಅಂದರೆ, ಬಿಜೆಪಿ ಈ ಬಾರಿ ಉತ್ತರ ಮತ್ತು ಪಶ್ಚಿಮದ ರಾಜ್ಯಗಳಲ್ಲಿ ಕಳೆದುಕೊಳ್ಳಲಿರುವ ಸ್ಥಾನಗಳನ್ನು ಇತರ ರಾಜ್ಯಗಳಲ್ಲಿ ಅದು ಪಡೆಯಲಿರುವ ಹೆಚ್ಚುವರಿ ಸ್ಥಾನಗಳು ಸರಿದೂಗಲಾರವು ಎನ್ನುವುದು ಸದ್ಯದ ಲೆಕ್ಕಾಚಾರ. ಈ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತ ಪಡೆಯುವ ಸಾಧ್ಯತೆ ದೂರ. ಒಂದುವೇಳೆ ಅದು ಸರ್ಕಾರ ರಚಿಸಿದರೆ ಮಿತ್ರಪಕ್ಷಗಳ ಬೆಂಬಲದಿಂದ ಮಾತ್ರ ಸಾಧ್ಯ ಎನ್ನುವ ಅಭಿಪ್ರಾಯ ತಲೆದೋರಿರುವುದು ಈ ಕಾರಣಕ್ಕಾಗಿ. ಎಂಬಲ್ಲಿಗೆ ಭಾರತದಲ್ಲಿ ಮತ್ತೆ ಏಕಪಕ್ಷದ ಆಡಳಿತ ಬರಲಿದೆ ಎಂದು ಹೋದ ಚುನಾವಣೆ ನೀಡಿದ ಸಣ್ಣಗಿನ ಸೂಚನೆಯೊಂದು ಹಾಗೇ ತೇಲಿಹೋಗುವ ಹಂತದಲ್ಲಿದೆ. ಆದರೆ ಭಾರತದ ಚುನಾವಣೆಗಳಲ್ಲಿ ಕೆಲವೊಮ್ಮೆ ಪವಾಡಗಳು ನಡೆಯುತ್ತವೆ. ಹೋದ ಬಾರಿ ಆದದ್ದು ಪವಾಡ. ಈ ಬಾರಿ ಮೇಲಿನ ಎಲ್ಲಾ ಲೆಕ್ಕಾಚಾರಗಳು ಅಸ್ತವ್ಯಸ್ತವಾದರೆ ಭಾರತದ ಚುನಾವಣೆಯಲ್ಲಿ ಪವಾಡಗಳು ಘಟಿಸುವುದು ಮಾತ್ರವಲ್ಲ, ಮರುಕಳಿಸುತ್ತವೆ ಕೂಡಾ ಅಂತ ಮುಂದೆ ಚರಿತ್ರಕಾರರು ದಾಖಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT