ಶನಿವಾರ, ಜೂನ್ 6, 2020
27 °C
ದ್ವೇಷ- ಸುಳ್ಳುಗಳ ವಿರುದ್ಧ ಸಮರ ಸಾರಿದ್ದ ‘ನಮ್ಮ ಧ್ವನಿ’ಯ ಅಕಾಲಿಕ ಅಂತ್ಯ

‘ನಮ್ಮ ಧ್ವನಿ’ ಮಹೇಂದ್ರ ಕುಮಾರ್: ಪ್ರಶ್ನಾತೀತರನ್ನು ಪ್ರಶ್ನಿಸಿದ ಪ್ರಯತ್ನ

ನಾರಾಯಣ ಎ. Updated:

ಅಕ್ಷರ ಗಾತ್ರ : | |

‘ಸ್ಪೀಕಿಂಗ್‌ ಟ್ರೂತ್‌ ಟು ಪವರ್‌’ ಅಂತ ಒಂದು ಪರಿಕಲ್ಪನೆ ಇದೆ. ಅಂದರೆ, ಅಧಿಕಾರದಲ್ಲಿದ್ದವರು ಮತ್ತು ಅವರ ಸುತ್ತಲಿನವರು ಹೇಳುವುದೆಲ್ಲಾ ಸತ್ಯವೆಂದೂ ಮಾಡುವುದೆಲ್ಲವೂ ಸರಿಯೆಂದೂ ಜನ ವಿಪರೀತವಾಗಿ ನಂಬುವ ಕಾಲಘಟ್ಟದಲ್ಲಿ, ಯಾರೂ ಕೇಳಿಸಿಕೊಳ್ಳಲು ಇಷ್ಟಪಡದ ಕೆಲವು ಸತ್ಯಗಳನ್ನು ಬಹಿರಂಗವಾಗಿ ಹೇಳುವುದು. ಇದು ತೀರಾ ಅಪಾಯಕಾರಿ ಕೆಲಸ. ಈ ಅಪಾಯವನ್ನು ಮೀರಿ, ಒಂದು ಸಮಾಜದಲ್ಲಿ ಅಧಿಕಾರಸ್ಥರಿಗೆ ಅಪ್ರಿಯವಾದ ಸತ್ಯಗಳನ್ನು ಎಷ್ಟು ಹೇಳಲಾಗುತ್ತದೆ ಎನ್ನುವುದು, ಆ ಸಮಾಜದ ಸ್ವಾಸ್ಥ್ಯವನ್ನು ಮತ್ತು ಪ್ರಬುದ್ಧತೆಯನ್ನು ನಿರ್ಣಯಿಸುತ್ತದೆ.

ಈ ಕಷ್ಟಕರ ಕೆಲಸವನ್ನು ಕರ್ನಾಟಕದಲ್ಲಿ ಒಂದು ವ್ರತದಂತೆ ಕೈಗೊಂಡಿದ್ದ ಮಹೇಂದ್ರ ಕುಮಾರ್ (47) ದಿಢೀರನೆ ಶನಿವಾರ (ಏ. 25) ಬೆಳಿಗ್ಗೆ ತೀರಿಕೊಂಡರು. ‘ನಮ್ಮ ಧ್ವನಿ’ ಎಂಬ ಯುಟ್ಯೂಬ್ ಚಾನೆಲ್ ಮೂಲಕ ತಮ್ಮ ಅಭಿಯಾನ ಕೈಗೊಂಡಿದ್ದ ಮಹೇಂದ್ರ ಅವರದ್ದು ವೈಯಕ್ತಿಕ ನೆಲೆಯ ಪ್ರಯತ್ನ. ಅವರು ರಾಜಕೀಯದಲ್ಲಿದ್ದರೂ ಅದರ ಅಂಚಿನಲ್ಲೇ ವ್ಯವಹರಿಸುತ್ತಿದ್ದವರು.

ಹೀಗಾಗಿ ಪತ್ರಿಕೆಗಳಲ್ಲಿ ಅವರ ಸಾವು ದೊಡ್ಡ ಸುದ್ದಿಯಾಗಲಿಲ್ಲ. ಆದರೆ, ಅವರು ಕೈಗೊಂಡಿದ್ದ ಅಭಿಯಾನದಲ್ಲಿ ಮಾಧ್ಯಮಗಳು ಗುರುತಿಸದ ಅಥವಾ ಉದ್ದೇಶಪೂರ್ವಕವಾಗಿ ಕಡೆಗಣಿಸಿದ ಕೆಲ ವಿಚಾರಗಳಿವೆ. ಅವುಗಳ ಬಗ್ಗೆ ಹೇಳುವುದು ಒಂದು ರಾಷ್ಟ್ರೀಯ ಮತ್ತು ಮಾನವೀಯ ಅಗತ್ಯ. ಹಾಗಾಗಿ ಈ ಲೇಖನ.

ಭಾರತದಲ್ಲೀಗ ವಿಚಿತ್ರವಾದ ಪರಿಸ್ಥಿತಿ ಇದೆ. ಇಲ್ಲಿ ಅಧಿಕಾರಸ್ಥರಿಗೆ ಅಪ್ರಿಯವಾಗಬಹುದಾದ ಸತ್ಯಗಳನ್ನು ಹೇಳುವ ನಾಲಿಗೆಗಳ ತೀವ್ರವಾದ ಕ್ಷಾಮವಿದೆ. ಅಕಸ್ಮಾತ್ತಾಗಿ ಯಾರಾದರೂ ಪ್ರಶ್ನೆಗಳನ್ನು ಎತ್ತಿದರೆ, ಅಂತಹವರನ್ನು ಕೋಡಂಗಿಗಳಂತೆ ಅಥವಾ ಖಳನಾಯಕರಂತೆ ಚಿತ್ರಿಸುವ ವ್ಯವಸ್ಥಿತ ಜಾಲಗಳನ್ನು ಹುಟ್ಟುಹಾಕಲಾಗಿದೆ. ಅಷ್ಟೇ ಅಲ್ಲ, ಸತ್ಯ ಎನ್ನುವುದು ಸಂಪೂರ್ಣವಾಗಿ ಅಪ್ರಸ್ತುತ ಎನ್ನುವಂತೆ ಈ ದೇಶದ ರಾಜಕೀಯವನ್ನು ಕಟ್ಟಲಾಗುತ್ತಿದೆ.

ಇದನ್ನೂ ಓದಿ: ಹೋರಾಟಗಾರ ಮಹೇಂದ್ರ ಕುಮಾರ್‌ ನಿಧನ


ಮಹೇಂದ್ರ ಕುಮಾರ್ ಆರಂಭಿಸಿದ್ದ ‘ನಮ್ಮ ಧ್ವನಿ’ ಯುಟ್ಯೂಬ್ ಚಾನೆಲ್‌ನ ವಿಡಿಯೊಗಳು

ಕೊರೊನಾದಂತಹ ಮಹಾದುರಂತವೊಂದು ಎರಗಿರುವ ಈ ಹೊತ್ತಲ್ಲಾದರೂ ಇಂತಹ ಚಾಳಿಗಳೆಲ್ಲ ನಿಲ್ಲಬೇಕಾಗಿತ್ತು, ಹಾಗಾಗಿಲ್ಲ. ಬದಲಿಗೆ, ದುರಂತದ ನಡುವೆಯೂ ಸುಳ್ಳುಗಳನ್ನು ಸೃಷ್ಟಿಸಿ, ದ್ವೇಷ ಹರಡಿ ರಾಜಕೀಯದ ಕೊತ್ತಲಗಳನ್ನು ಗಟ್ಟಿಗೊಳಿಸುವ ಉದ್ಯಮ ಯಥೇಚ್ಛವಾಗಿ ಮುಂದುವರಿದಿದೆ.

ಇಂತಹ ಬೆಳವಣಿಗೆಗಳ ವಿರುದ್ಧ ನಡೆಯಬೇಕಿದ್ದ ಸಾಮೂಹಿಕ ಪ್ರತಿಭಟನೆಯ ಧ್ವನಿ ಎಲ್ಲೂ ಕಾಣಿಸುತ್ತಿಲ್ಲ. ಇವೆಲ್ಲವುಗಳ ಮೇಲೆ ಕಣ್ಣಿಡಲೆಂದೇ ಸಂವಿಧಾನ ಸೃಷ್ಟಿಸಿದ ಸಂಸ್ಥೆಗಳೆಲ್ಲಾ ಗರ ಬಡಿದಂತೆ ವರ್ತಿಸುತ್ತಿವೆ. ನ್ಯಾಯಾಂಗ ನಿಸ್ತೇಜವಾಗಿಬಿಟ್ಟಿದೆ. ಮಾಧ್ಯಮರಂಗ ಆಳುವವರ ಜತೆ ಕೈಜೋಡಿಸಿ ಕಲುಷಿತವಾಗಿದೆ. ನಾಗರಿಕ ಸಂಘಟನೆಗಳು ಹೆದರಿ ತೆಪ್ಪಗಿವೆ. ಅಧಿಕಾರಸ್ಥರ ಸಂಪೂರ್ಣ ಬೆಂಬಲದೊಂದಿಗೆ ನಡೆಯುತ್ತಿರುವ ಸುಳ್ಳುಗಳ ವಿತರಣೆ ಮತ್ತು ಅದು ಸಮಾಜದಲ್ಲಿ ಸೃಷ್ಟಿಸುತ್ತಿರುವ ಅನಾಹುತಗಳ ವಿರುದ್ಧ ಧ್ವನಿ ಏನಾದರೂ ಕೇಳಿಸುತ್ತಿದ್ದರೆ ಅದು ಕೇವಲ ವ್ಯಕ್ತಿಗತ ಪ್ರಯತ್ನ. ಇಂತಹದ್ದೊಂದು ಪ್ರಯತ್ನವಾಗಿತ್ತು ಮಹೇಂದ್ರರ ‘ನಮ್ಮ ಧ್ವನಿ’. ಇದನ್ನವರು ಉಳಿದೆಲ್ಲರಿಗಿಂತ ಹೆಚ್ಚು ವ್ಯವಸ್ಥಿತವಾಗಿಯೂ ಸಂಪೂರ್ಣ ಬದ್ಧತೆಯಿಂದಲೂ ಮಾಡಿದರು.

ಸರ್ಕಾರದ ನೀತಿಗಳನ್ನು ಪ್ರಶ್ನಿಸಿದರೆ ಅದು ದೇಶದ್ರೋಹವೆಂದೂ ಧರ್ಮರಕ್ಷಣೆಯ ಹೆಸರಲ್ಲಿ ಮಾಡುವ ನೀಚ ಕೆಲಸಗಳನ್ನು ಆಕ್ಷೇಪಿಸಿದರೆ ಅದನ್ನು ಧರ್ಮದ್ರೋಹ ಎಂದೂ ಜನರನ್ನು ನಂಬಿಸುವ ರಾಜಕಾರಣಕ್ಕೆ ಪರ್ಯಾಯವಾದ ಮಾನವೀಯ ಸಂಕಥನವೊಂದನ್ನು ‘ನಮ್ಮ ಧ್ವನಿ’ ವಿಡಿಯೊ ಭಾಷಣಗಳಲ್ಲಿ ಕಾಣಬಹುದಾಗಿತ್ತು. ಸೈದ್ಧಾಂತಿಕವಾಗಿ ಎಡ ಮತ್ತು ಬಲ ಎರಡೂ ಕಡೆ ಇರುವವರ ಅತಿರೇಕಗಳು ಇಲ್ಲಿ ಕಟು ಟೀಕೆಗಳಿಗೆ ಗುರಿಯಾಗುತ್ತಿದ್ದವು. ಲವಲೇಶ ಮನುಷ್ಯತ್ವ ಇರುವ ಯಾರಿಗೇ ಆದರೂ ಅರ್ಥವಾಗುವ ರೀತಿಯಲ್ಲಿ, ಎಲ್ಲರೂ ಎತ್ತಬೇಕಾಗಿದ್ದ, ಆದರೆ ಯಾರೂ ಎತ್ತಲು ಧೈರ್ಯ ತೋರದ ಸೂಕ್ಷ್ಮ ವಿಚಾರಗಳನ್ನು ಜನರ ಮುಂದಿಡುವ ಪ್ರಯತ್ನವನ್ನು ಮಹೇಂದ್ರ ಮಾಡುತ್ತಿದ್ದರು. ಮಾತು ಸೋತು ಮೂಕತನದತ್ತ ಮುಖ ಮಾಡಿರುವ ಭಾರತದಲ್ಲಿ ಇಂತಹದ್ದೊಂದು ಪ್ರಯತ್ನ ಅಗತ್ಯವಾಗಿತ್ತು.


ಮಹೇಂದ್ರ ಕುಮಾರ್

ಪ್ರಮುಖವಾಗಿ, ಮುಖ್ಯವಾಹಿನಿ ಮಾಧ್ಯಮಗಳೇ ಎಗ್ಗಿಲ್ಲದೆ ಹೇಳುವ ಸುಳ್ಳುಗಳ ಮೂಲಕ ಮತ್ತು ಆಯ್ದು ಪ್ರಕಟಿಸುವ ಸತ್ಯಗಳ ಮೂಲಕ ಜನಮನದಲ್ಲಿ ವಿಷ ತುಂಬುತ್ತಿರುವ ಈ ಕಾಲಕ್ಕೆ ಇಂತಹ ಪರ್ಯಾಯಗಳಲ್ಲವೇ ಸಂಜೀವಿನಿಯಾಗಿ ಕಾಣಿಸುವುದು. ಸೂಕ್ಷ್ಮವೂ, ಜಟಿಲವೂ ಆದ ವಿಚಾರಗಳ ಬಗ್ಗೆ ಇಂತಹ ಪರ್ಯಾಯ ವೇದಿಕೆಗಳು ಕೆಲವೊಮ್ಮೆ ಅಪ್ರಬುದ್ಧ ವಿಶ್ಲೇಷಣೆಗಳನ್ನು ಮಂಡಿಸಿ, ಆತುರದ ತೀರ್ಪುಗಳನ್ನು ನೀಡಿಬಿಡುತ್ತವೇನೋ ಎನ್ನುವ ಸಂಶಯ ಕಾಡುವುದುಂಟು. ‘ನಮ್ಮ ಧ್ವನಿ’ಯ ಕೆಲ ಮಂಡನೆ– ಖಂಡನೆಗಳೂ ಇಂತಹ ಸಂಶಯಗಳನ್ನು ಹುಟ್ಟಿಸುವುದಿತ್ತು. ಆದರೆ ಇಂತಹ ಸಣ್ಣಪುಟ್ಟ ಎಡವಟ್ಟುಗಳ ಹಿಂದೆ ಅಲ್ಲಿ ಇದ್ದದ್ದು ಸತ್ಯವನ್ನು ‘ಎಲ್ಲ ತತ್ವಗಳ ಎಲ್ಲೆ ಮೀರಿ’ ಹೇಳುವ ಧಾವಂತ ಮಾತ್ರ ಅಂತ ಅನ್ನಿಸುತ್ತದೆ.

ಸತ್ಯ-ಸುಳ್ಳುಗಳ ಪರಾಮರ್ಶೆಯಲ್ಲಿ ಆಗಬಹುದಾದ ಉದ್ದೇಶಪೂರ್ವಕವಲ್ಲದ ತಪ್ಪುಗಳು ಬೇರೆ, ಉದ್ದೇಶಪೂರ್ವಕವಾಗಿ ಹೇಳುವ ಸುಳ್ಳುಗಳು ಬೇರೆ. ಸಾಮಾಜಿಕ ಹೋರಾಟಗಳು ವಿಧಿಬದ್ಧವಾಗಿ ಪ್ರಯೋಗಶಾಲೆಯಲ್ಲಿ ರೂಪುಗೊಂಡು ಸಾರ್ವಜನಿಕ ವೇದಿಕೆಗಳಲ್ಲಿ ಅಚ್ಚುಕಟ್ಟಾಗಿ ಅನಾವರಣಗೊಳ್ಳುವ ಪ್ರದರ್ಶನಗಳಲ್ಲ. ಹೋರಾಟಗಳು ಎಡವುತ್ತಾ ತಡವುತ್ತಾ ಬೀಳುತ್ತಾ ಏಳುತ್ತಾ ಸ್ಪಷ್ಟತೆಯನ್ನು ಪಡೆದುಕೊಳ್ಳುವ ಸಾಮಾಜಿಕ ಆವಿಷ್ಕಾರಗಳು.

ಮಹೇಂದ್ರ ಅವರ ವಿವಾದಾಸ್ಪದ ಹಿನ್ನೆಲೆ ಕೆಲವೊಮ್ಮೆ ‘ನಮ್ಮ ಧ್ವನಿ’ಯ ವಿಚಾರವಾಗಿ ಮುನ್ನೆಲೆಗೆ ಬರುವುದುಂಟು. ಅವರು ಯಾವ ಶಕ್ತಿಗಳ ವಿರುದ್ಧ ಸಮರ ಸಾರಿದ್ದರೋ ಅವೇ ಶಕ್ತಿಗಳ ಭಾಗವಾಗಿ ಕೆಲಸ ಮಾಡಿದ ಇತಿಹಾಸ ಅವರಿಗಿತ್ತು. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳನ್ನು ಧರ್ಮಾಂಧ ರಾಜಕಾರಣದ ರಫ್ತು ಕೇಂದ್ರಗಳನ್ನಾಗಿ ರೂಪಿಸುವಲ್ಲಿ ಅವರೂ ಯಥಾಶಕ್ತಿ ದೇಣಿಗೆ ನೀಡಿ ಜೈಲುವಾಸ ಅನುಭವಿಸಿದವರು. ಬಹುಶಃ ಇಂತಹ ಹಿನ್ನೆಲೆಯಿಂದ ಬಂದ ಕಾರಣವೇ ಸುಳ್ಳು ಮತ್ತು ದ್ವೇಷ ಹರಡುವವರ ಜಾಲದ ಆಳ– ಅಗಲ ಆ ವ್ಯಕ್ತಿಗೆ ತಿಳಿದಿದ್ದದ್ದು ಮತ್ತು ಅವರ ಕಣ್ಣಲ್ಲಿ ಕಣ್ಣಿಟ್ಟು ‘ಯಾಕ್ರೀ ಹೀಗೆ ಮಾಡುತ್ತೀರಿ?’ ಅಂತ ಕೇಳಿ ಅವರನ್ನು ನಿರುತ್ತರಗೊಳಿಸಲು ಸಾಧ್ಯವಾಗುತ್ತಿದ್ದದ್ದು. ಆಸ್ಕರ್ ವೈಲ್ಡ್‌ನ ‘ಎವೆರಿ ಸೇಂಟ್‌ ಹ್ಯಾಸ್‌ ಎ ಪಾಸ್ಟ್‌’ ಎಂಬ ಮಾತು ನೆನಪಾಗುತ್ತದೆ. ಅಂದರೆ, ಕೆದಕುತ್ತಾ ಹೋದರೆ ಎಲ್ಲಾ ಸಂತರಿಗೂ ಒಂದು ಚರಿತ್ರೆ (ಕರಾಳ ಚರಿತ್ರೆ ಅಂತ ಓದಿಕೊಳ್ಳಿ) ಇರುತ್ತದೆ. ಹೃದಯಪೂರ್ವಕವಾಗಿ ತ್ಯಜಿಸಿದ ಪೂರ್ವಾಶ್ರಮ ಇಲ್ಲಿ ಪ್ರಸ್ತುತವಲ್ಲ. ಒಂದುವೇಳೆ ಪೂರ್ವಾಶ್ರಮದ ವಾಸನೆ ಶಾಶ್ವತ ಅಂತ ಭಾವಿಸಿದರೂ ಅವರು ಕೈಗೊಂಡಿದ್ದ ಅಭಿಯಾನದ ಪ್ರಾಮುಖ್ಯವೇನೂ ಕಡಿಮೆಯಾಗುವುದಿಲ್ಲ.

ಸುಳ್ಳುಗಳ ಗಾಡಾಂಧಕಾರ ದೇಶದಲ್ಲಿ ಎಲ್ಲೆಡೆ ಆವರಿಸಿಕೊಳ್ಳುತ್ತಿರುವ ಪರಿ ನೋಡಿದರೆ, ಇಲ್ಲಿ ತಮಾಷೆಗಾಗಿಯೋ ನಟನೆಗಾಗಿಯೋ ಯಾರಾದರೂ ಸುಳ್ಳನ್ನು ಸುಳ್ಳು ಅಂತ ಹೇಳುವ ಧೈರ್ಯ ತೋರಿದರೂ ಸರಿ, ಆ ವ್ಯಕ್ತಿಯನ್ನು ನಿಜವಾದ ಸಂತನೆಂದು ಆರಾಧಿಸಬೇಕಾಗುತ್ತದೆ. ಅಷ್ಟರಮಟ್ಟಿಗಿದೆ ಭಾರತದಲ್ಲಿ ಸುಳ್ಳುಗಳ ಅಬ್ಬರ ಮತ್ತು ಸಾತ್ವಿಕ ಧೈರ್ಯದ ಬರ.

ಇದು ದೊಡ್ಡ ಮಟ್ಟದ ಆದರ್ಶ ನಾಯಕತ್ವ ಇಲ್ಲದ ಕಾಲ. ರಾಜಕೀಯವಿರಲಿ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರಂಗಗಳೇ ಇರಲಿ, ಎಳೆಯ ತಲೆಮಾರಿನವರಿಗೆ ಆದರ್ಶ ಅಂತ ತೋರಿಸಲು ಯಾರೂ ಉಳಿದಿಲ್ಲ, ಅಂತಹವರು ಹುಟ್ಟುತ್ತಲೂ ಇಲ್ಲ. ಮಿಥ್ಯೆಗಳ ಇಟ್ಟಿಗೆಗಳನ್ನು ಬಳಸಿ ನಿರ್ಮಾಣವಾದ ನಾಯಕತ್ವದ ಪ್ರತಿಮೆಗಳೇ ಈಗ ವಿಜೃಂಭಿಸುತ್ತಿರುವುದು. ನಾಯಕತ್ವದ ವರ್ಚಸ್ಸು, ಸುಳ್ಳು ಮತ್ತು ದ್ವೇಷಗಳ ಪ್ರಸಾರವನ್ನು ಆಶ್ರಯಿಸಿರುವುದರಿಂದಲೇ ಇರಬೇಕು, ಅವುಗಳ ಸೃಷ್ಟಿ ದೇಶದಲ್ಲಿ ಉದ್ಯಮೋಪಾದಿಯಲ್ಲಿ ಆಗುತ್ತಿರುವುದು. ಹೀಗಾಗಿ, ನಾವೀಗ ಸುಳ್ಳು ಹರಡುವವರ- ದ್ವೇಷ ಕಾರುವವರ ವಿರುದ್ಧ ತಲೆಯೆತ್ತುತ್ತಿರುವ ಸಣ್ಣ ಪ್ರಮಾಣದ ಸಾತ್ವಿಕ ಧೈರ್ಯಗಳನ್ನು ಕೊಂಡಾಡಬೇಕಾಗುತ್ತದೆ. ಈ ಕಾರಣಕ್ಕಾಗಿ, ವೈಯಕ್ತಿಕವಾಗಿ ಪರಿಚಯವಿಲ್ಲದಿದ್ದ, ಎಂದೂ ಮಾತನಾಡಿಸದಿದ್ದ ಮಹೇಂದ್ರ ಕುಮಾರ್ ಅವರ ಸಾವಿನ ಹಿನ್ನೆಲೆಯಲ್ಲಿ ಇಷ್ಟು ಬರೆಯಬೇಕೆನಿಸಿದ್ದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು