ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುರಣನ: ರಾಜಕೀಯ ಮಾಡುತ್ತಾ ಪ್ರಶ್ನೆಗೆ ಅಂಜಿದರೆ?

ಧಾರ್ಮಿಕ ನಾಯಕರ ರಾಜಕೀಯ ನಡೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತದೇ ಇದ್ದರೆ ಅದು ಅಕ್ಷಮ್ಯ
Last Updated 3 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ರಾಜಕೀಯ ಅಂದಮೇಲೆ ಅದು ರಾಜಕೀಯವೇ. ವೃತ್ತಿಪರ ರಾಜಕಾರಣಿಗಳು ಮಾಡುವ ರಾಜಕೀಯವೂ ರಾಜಕೀಯವೇ, ಕ್ರಿಮಿನಲ್‌ಗಳು ರಾಜಕಾರಣಕ್ಕಿಳಿದು ಮಾಡುವ ರಾಜಕೀಯವೂ ರಾಜಕೀಯವೇ. ಅದೇ ರೀತಿ ಗುರುಗಳೆಂದೋ ಯತಿಗಳೆಂದೋ ಸಂತರೆಂದೋ ಸ್ವಾಮೀಜಿಗಳೆಂದೋ ಅವರವರ ಭಕ್ತಾದಿಗಳಿಂದ ಕರೆಸಿಕೊಳ್ಳುವ ಧರ್ಮಕಾರಣಿಗಳು ಅರೆಕಾಲಿಕ ರಾಜಕಾರಣಕ್ಕೆ ಇಳಿದರೆ ಅದು ಕೂಡಾ ರಾಜಕೀಯವೇ ಆಗಿರುತ್ತದೆ.

ಧಾರ್ಮಿಕ ವ್ಯವಹಾರಗಳಿಗೆಂದೇ ತಮ್ಮ ಜೀವನವನ್ನು ಮೀಸಲಿಟ್ಟವರು ಕೂಡಾ ಈ ದೇಶದ ಪ್ರಜೆಗಳೇ ಆಗಿರುವುದರಿಂದ ಮತ್ತು ಅವರಿಗೆ ಕೂಡ ಸಂವಿಧಾನ ದತ್ತವಾದ ಆಯ್ಕೆಯ ಸ್ವಾತಂತ್ರ್ಯ ಇರುವುದರಿಂದ ಅವರೆಲ್ಲಾ ಅರೆಕಾಲಿಕವಾಗಿಯೋ ಪೂರ್ಣಕಾಲಿಕವಾಗಿಯೋ ರಾಜಕೀಯ ಮಾಡಬಾರದೆಂದೇನೂ ನಿಯಮವಿಲ್ಲ. ಇಲ್ಲಿ ಕೆಲವು ನೈತಿಕ ಪ್ರಶ್ನೆಗಳಿವೆ. ಆದರೆ ಅಂತಹ ಪ್ರಶ್ನೆಗಳು ನೈತಿಕತೆಯ ಬಗ್ಗೆ ತಲೆಕೆಡಿಸಿಕೊಳ್ಳುವವರಿಗೆ ಮಾತ್ರ ಅನ್ವಯವಾಗುವಂತಹವು.

ಏನೇ ಇರಲಿ, ಈ ಧಾರ್ಮಿಕ ವ್ಯಕ್ತಿಗಳೆಲ್ಲಾ ಒಮ್ಮೆ ರಾಜಕೀಯದಲ್ಲಿ ತೊಡಗಿದ ನಂತರ ಅವರ ರಾಜಕೀಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಜನರು ಅವರನ್ನು ಇತರ ರಾಜಕಾರಣಿಗಳಂತೆಯೇ ಪರಿಗಣಿಸುತ್ತಾರೆ. ಅವರ ಇನ್ನರ್ಧ ವ್ಯವಹಾರ ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದ ಕಾರಣ ಅಲ್ಲಿ ಸಲ್ಲುವ ಶಿಷ್ಟಾಚಾರ, ಮರ್ಯಾದೆ, ಪ್ರಶ್ನಾತೀತತೆ ಇತ್ಯಾದಿಗಳೆಲ್ಲಾ ಅವರು ಮಾಡುವ ರಾಜಕೀಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕೂಡಾ ಸಲ್ಲಬೇಕು ಅಂತ ಅವರಾಗಲೀ ಅವರ ಭಕ್ತವೃಂದವಾಗಲೀ ಭಾವಿಸಿದರೆ ವಿವಾದಗಳು ಹುಟ್ಟಿಕೊಳ್ಳುತ್ತವೆ.

ಅರ್ಧ ರಾಜಕಾರಣ ಅರ್ಧ ಧರ್ಮಕಾರಣ ಮಾಡುವವರನ್ನು ಅವರವರ ಧರ್ಮಕ್ಕೆ (ಅರ್ಥಾತ್ ಜಾತಿ, ಉಪಜಾತಿ, ಪಂಗಡ, ಒಳಪಂಗಡ ಇತ್ಯಾದಿಗಳಿಗೆ) ಸಂಬಂಧಿಸಿದಂತೆ ತೊಡಗುವ ಆಚಾರ ವಿಚಾರಗಳ ಬಗ್ಗೆ, ಕಟ್ಟು-ಕಟ್ಟಲೆಗಳ ಬಗ್ಗೆ, ವಿಧಿ– ನಿಷೇಧಗಳ ಬಗ್ಗೆ ಯಾರೂ ಪ್ರಶ್ನಿಸಲು ಹೋಗುವುದಿಲ್ಲ. ಯಾರಾದರೂ ಸ್ವಲ್ಪ ಅತಿರೇಕಕ್ಕೆ ಹೋಗಿ ಅವುಗಳನ್ನೆಲ್ಲ ಗೇಲಿ ಮಾಡುವುದೋ ಕೀಳು ನುಡಿಗಳಲ್ಲಿ ಟೀಕಿಸುವುದೋ ಮಾಡಿದರೆ ಆಗ ಸಂಬಂಧಪಟ್ಟವರು ಪ್ರತಿಭಟಿಸುವುದಕ್ಕೆ ಅರ್ಥವಿದೆ. ಧಾರ್ಮಿಕ ಆಚಾರ ವಿಚಾರಗಳನ್ನು ಕೂಡಾ ಪ್ರಶ್ನೆಗಳಿಗೆ ತೆರೆದಿಡಬೇಕು ಅಂತ ಒಂದು ಪ್ರಜ್ಞಾವಂತ ವರ್ಗ ವಾದಿಸುತ್ತದೆ. ಅದು ಪ್ರಜ್ಞಾವಂತರಿಗೆ ಮಾತ್ರ ಅರ್ಥವಾಗಬಹುದಾದ ವಾದ. ಅದೇನಾದರೂ ಇರಲಿ. ನಮ್ಮ ಆಚಾರ ವಿಚಾರಗಳನ್ನು ಪ್ರಶ್ನಿಸಬೇಡಿ ಅಂತ ಹೇಳಿದ ಅದೇ ಧಾಟಿಯಲ್ಲಿ ನಮ್ಮ ರಾಜಕೀಯ ವ್ಯವಹಾರಗಳನ್ನು ಪ್ರಶ್ನಿಸಬೇಡಿ ಅಂತ ಈ ಧಾರ್ಮಿಕ ವ್ಯಕ್ತಿಗಳು, ಅವರ ಭಕ್ತಸಂಕುಲ ವಾದ ಮಾಡಲು ತೊಡಗಿದಾಗ ಅನವಶ್ಯಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅದರಲ್ಲೂ ಇಂತಹ ಪ್ರಶ್ನೆ ಎತ್ತಿದವರ ಮೇಲೆ ದೇಶದ್ರೋಹಿಗಳು, ಸಮಾಜದ್ರೋಹಿಗಳು, ಧರ್ಮ ಒಡೆಯುವವರು ಅಂತ ಮೇಲೇರಿ ಹೋದರೆ ಒಟ್ಟು ಸಾಮರಸ್ಯ ಕೆಟ್ಟುಹೋಗುತ್ತದೆ.

ರಾಜಕಾರಣದ ಪ್ರಶ್ನೆಗಳು ಸತ್ತವರನ್ನೂ ಕಾಡುತ್ತವೆ. ಎಂದೋ ಹತ್ಯೆಗೀಡಾದ ಮಹಾತ್ಮ ಗಾಂಧಿ, ಎಂದೋ ವಿಧಿವಶರಾದ ಜವಾಹರಲಾಲ್ ನೆಹರೂ ಮುಂತಾದವರು ಈಗಲೂ ಕೆಲವರಿಂದ ಎಂತೆಂತಹ ಪ್ರಶ್ನೆಗಳನ್ನೆಲ್ಲಾ ಎದುರಿಸುತ್ತಿದ್ದಾರೆ. ಹಾಗಾಗಿ ತಮ್ಮ ಗುರುಗಳ ಬಗ್ಗೆ, ತಮ್ಮ ಸ್ವಾಮೀಜಿಗಳ ಬಗ್ಗೆ, ತಮ್ಮ ಧರ್ಮಬೋಧಕರ ಬಗ್ಗೆ ಬರುವ ಟೀಕೆಗಳ ಬಗ್ಗೆ ವಿಪರೀತ ತಲೆಕೆಡಿಸಿಕೊಳ್ಳುವ ವರ್ಗ ಮಾಡಬಹುದಾದ ಒಂದೇ ಒಂದು ಕೆಲಸ ಅಂದರೆ ಅವರವರ ಗುರು/ ಸ್ವಾಮೀಜಿ/ ಯತಿ/ ಧರ್ಮ ಬೋಧಕರಿಗೆ ‘ನೀವು ನಿಮ್ಮ ವ್ಯಾಪ್ತಿಯಲ್ಲೇ ಇರಿ. ಒಂದು ವೇಳೆ ವ್ಯಾಪ್ತಿ ದಾಟಿದರೂ ರಾಜಕೀಯದ ವ್ಯಾಪ್ತಿಗೆ ಕಾಲಿಡಬೇಡಿ’ ಎಂದು ಮನ ಒಲಿಸುವುದು. ಹಾಗೆ ಮಾಡುವುದರಿಂದ ನೀತಿ ಕೆಡುತ್ತದೆ, ಧರ್ಮವೂ ಕೆಡುತ್ತದೆ ಅಂತ ಎಚ್ಚರಿಸುವುದು. ಹಾಗೆ ಹೇಳಲು ಸಾಧ್ಯವಾಗದೇ ಹೋದರೆ ಅಥವಾ ಹೇಳಿದ್ದನ್ನು ಗುರುಗಳು ಕೇಳಿಸಿಕೊಳ್ಳದೇ ಹೋದರೆ, ಗುರುಗಳ ರಾಜಕೀಯದ ಬಗ್ಗೆ ಬರುವ ಟೀಕೆಗಳನ್ನು ಇತರ ರಾಜಕಾರಣಿಗಳ ವಿಚಾರದಲ್ಲಿ ಬರುವ ಟೀಕೆಗಳಂತೆ ಭಕ್ತರು ಸ್ವೀಕರಿಸಬೇಕಾಗುತ್ತದೆ. ಒಂದು ಪ್ರಶ್ನೆ ಕೇಳಿದವರನ್ನು ತಮಗಿರುವ ರಾಜಕೀಯ- ಆರ್ಥಿಕ ಏಕಸ್ವಾಮ್ಯವನ್ನು ಬಳಸಿಕೊಂಡು ಕ್ಷಮೆ ಯಾಚಿಸುವಂತೆ ಮಾಡಬಹುದು. ಆದರೆ ಸಾವಿರ ಸಾವಿರ ಮಂದಿ ಸಾವಿರ ಸತ್ಯಾಧಾರಿತ ಪ್ರಶ್ನೆಗಳನ್ನು ಕೇಳಲು ತೊಡಗಿದರೆ ಸಂವಾದದ ಜಾಗದಲ್ಲಿ ಸಂಘರ್ಷ ತಲೆದೋರುತ್ತದೆ.

ನಾರಾಯಣ ಎ
ನಾರಾಯಣ ಎ

ಹಾಗೆ ನೋಡಿದರೆ ಈ ದೇಶದಲ್ಲಿ ರಾಜಕೀಯಕ್ಕೆ ಅಧ್ಯಾತ್ಮದ ಸಿಂಚನ ಮಾಡುವ ಧಾರ್ಮಿಕ ವ್ಯಕ್ತಿಗಳ ಅಗತ್ಯವಿದೆ. ಆದರೆ, ದೇಶದ ತುಂಬಾ ತುಂಬಿರುವುದು ರಾಜಕೀಯಕ್ಕೊಂದು ಅಧ್ಯಾತ್ಮದ ಪ್ರೇರಣೆ ನೀಡುವ ಧಾರ್ಮಿಕ ವ್ಯಕ್ತಿಗಳಲ್ಲ. ಬದಲಿಗೆ ಸಾಂಸ್ಥಿಕ ಧರ್ಮವನ್ನು ರಾಜಕಾರಣಕ್ಕೆ ಎಳೆದು ತರುವ ಕೆಲಸವನ್ನು ಯಥೇಚ್ಛವಾಗಿ ಮಾಡುವ ಧರ್ಮಕಾರಣಿಗಳು. ಸಾಂಸ್ಥಿಕ ಧರ್ಮವನ್ನು ರಾಜಕಾರಣಕ್ಕೆ ಎಳೆದು ತರುವುದು ಎಂದರೆ ತಾನು ಪ್ರತಿನಿಧಿಸುವ ಧರ್ಮ, ತಾನು ಪ್ರತಿನಿಧಿಸುವ ಜಾತಿ, ತಾನು ಪ್ರತಿನಿಧಿಸುವ ಉಪಜಾತಿ, ತಾನು ಪ್ರತಿನಿಧಿಸುವ ಪಂಗಡದವರು ರಾಜಕೀಯ ಅಧಿಕಾರದಲ್ಲಿ ಇತರರಿಗಿಂತ ಹೆಚ್ಚು ಪಾಲು ಪಡೆದುಕೊಳ್ಳಲು ನೆರವಾಗುವುದು. ತನ್ನ ಧರ್ಮದ, ತನ್ನ ಜಾತಿಯ, ತನ್ನ ಪಂಗಡದ, ತನ್ನ ಉಪಪಂಗಡದ ಹಿತವನ್ನು ಇತರರ ಹಿತಕ್ಕಿಂತ ಹೆಚ್ಚಾಗಿ ಕಾಯುವ ಪಕ್ಷವನ್ನು ಬಲಪಡಿಸುವುದಕ್ಕಾಗಿ ತನ್ನ ಧಾರ್ಮಿಕ ಸ್ಥಾನಮಾನವನ್ನು (ಅಪ)ಬಳಕೆ ಮಾಡಿಕೊಳ್ಳುವುದು. ಅಂತಹ ಪಕ್ಷಗಳು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಹಮ್ಮಿಕೊಳ್ಳುವ ಕೆಡವುವ-ಕಟ್ಟುವ ಚಳವಳಿಗಳಿಗೆ ಮುಂದಾಳತ್ವ ನೀಡುವುದು. ಅಂತಹ ಪಕ್ಷಗಳು, ಅವುಗಳ ಬೆಂಬಲಕ್ಕೆ ನಿಲ್ಲುವ ಸಂಘಟನೆಗಳು ಏರ್ಪಡಿಸುವ ಸಮಾಜೋತ್ಸವ, ಜಾತಿ-ಉತ್ಸವ, ಉಪಜಾತಿ-ಉತ್ಸವಗಳಲ್ಲಿ ಭಾಗಿಯಾಗಿ ಅದು ಬದಲಾಗಬೇಕು, ಇದು ಬದಲಾಗಬೇಕು, ಕೊನೆಗೆ ಸಂವಿಧಾನ ಬದಲಾಗಬೇಕು ಅಂತ ಮಾತನಾಡುವುದು.

ಹೀಗೆ ಧರ್ಮದ ಗುರಾಣಿ ಹಿಡಿದು ಒಂದು ಪಕ್ಷದ ಪರವಾಗಿ ಕೆಲಸ ಮಾಡಲು ಹಿಂಜರಿಯದ ಧಾರ್ಮಿಕ ವ್ಯಕ್ತಿಗಳು ಸಮಾಜಕ್ಕೆ ಒಳ್ಳೆಯದು ಮಾಡುತ್ತೇವೆ ಅಂತ ಏನೋ ಮಾಡಲು ಹೊರಟಾಗ ಸಹಜವಾಗಿಯೇ ಅವರ ಉದ್ದೇಶದ ಬಗ್ಗೆ ಜನ ಪ್ರಶ್ನೆಗಳನ್ನು ಕೇಳುತ್ತಾರೆ. ಆ ಪ್ರಶ್ನೆಗಳು ರಾಜಕೀಯದ ಪ್ರಶ್ನೆಗಳಾಗಿರುತ್ತವೆ. ರಾಜಕೀಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ನಯನಾಜೂಕಿನಿಂದ ಕೂಡಿರಬೇಕೆಂದೇನೂ ಇಲ್ಲ. ಬಳಸಲಾಗುವ ಪದಗಳೂ ಅಷ್ಟೇ. ಅವು ಕಾನೂನು ಮತ್ತು ಸಭ್ಯತೆಯ ಪರಿಧಿಯೊಳಗೆ ಇರಬೇಕೆಂದು ಬಿಟ್ಟರೆ, ಎದುರಿಗಿರುವ ವ್ಯಕ್ತಿಯ ಜಾತಿ- ಉಪಜಾತಿ- ಸ್ಥಾನ- ಮಾನ- ಮರ್ಯಾದೆಯ ಆಧಾರದಲ್ಲಿ ನಿರ್ಧರಿತವಾಗಬೇಕೆಂದೇನೂ ಇಲ್ಲ.

ಪದಗಳು, ಪ್ರತಿಮೆಗಳು, ಉಪಮೆಗಳು, ದೃಷ್ಟಾಂತಗಳೆಲ್ಲಾ ಏನೇ ಇರಲಿ ಇಂತಹ ಪ್ರಶ್ನೆಗಳ ಅಗತ್ಯ ತುಂಬಾ ಇದೆ. ಇಂತಹ ಪ್ರಶ್ನೆಗಳನ್ನು ಜನ ಇನ್ನೂ ಸಾಕಷ್ಟು ಕೇಳಿಲ್ಲ ಎನ್ನುವುದು ಈ ದೇಶದ ಸಮಸ್ಯೆ. ಕೇಳಬೇಕಾದ ಕಡೆ ಕೇಳಬೇಕಾದ ಪ್ರಶ್ನೆಗಳನ್ನು ರಾಜಕೀಯದ ಭಾಷೆಯಲ್ಲಿ ಕೇಳದ ಕಾರಣವೇ ಇಂದು ಅರ್ಧರಾಜಕಾರಣ- ಅರ್ಧಧರ್ಮಕಾರಣ ಮಾಡುವ ವ್ಯಕ್ತಿಗಳು ಚುನಾಯಿತ ಸರ್ಕಾರಗಳನ್ನೇ ಹೊರಗುತ್ತಿಗೆ ಪಡೆದುಕೊಂಡವರಂತೆ ವರ್ತಿಸುತ್ತಿರುವುದು. ಶಾಲಾ ಪಠ್ಯಗಳಲ್ಲಿ ಏನಿರಬೇಕು ಏನಿರಬಾರದು ಎನ್ನುವುದರಿಂದ ತೊಡಗಿ, ಶಾಲಾ ಮಕ್ಕಳ ಊಟದಲ್ಲಿ ಏನಿರಬೇಕು ಏನಿರಬಾರದು ಎನ್ನುವುದರಿಂದ ತೊಡಗಿ, ಯಾರು ಮಂತ್ರಿಯಾಗಬೇಕು ಎನ್ನುವುದರಿಂದ ಹಿಡಿದು, ಯಾರು ಮುಖ್ಯಮಂತ್ರಿಯಾಗಬೇಕು ಎನ್ನುವವರೆಗೆ ಚುನಾಯಿತ ಸರ್ಕಾರಗಳು ಮಾಡಬೇಕಾದ ಎಲ್ಲವನ್ನೂ ಹೀಗೆ ಹೊರಗುತ್ತಿಗೆ ಪಡೆದವರೇ ನಿರ್ವಹಿಸುತ್ತಿರುವುದು.

ರಾಜಕೀಯಕ್ಕೆ ಪೂರ್ತಿಯಾಗಿ ಇಳಿಯುವುದು ಎಂದರೆ ತನ್ನನ್ನು ತಾನು ಪ್ರಶ್ನೆಗಳಿಗೆ ಒಡ್ಡಿಕೊಳ್ಳುವುದು ಎಂದು ಅರ್ಥ. ಈ ದೇಶದಲ್ಲಿ ಅರ್ಧ ಧರ್ಮಕಾರಣ ಅರ್ಧ ರಾಜಕಾರಣ ಮಾಡುವ ವ್ಯಕ್ತಿಗಳಿಗೆ ಹೋಲಿಸಿದರೆ ಪೂರ್ತಿ ರಾಜಕಾರಣ ಮಾಡುವ, ನಿರಂತರವಾಗಿ ತಮ್ಮನ್ನು ತಾವು ಪ್ರಶ್ನೆಗಳಿಗೆ ಒಡ್ಡಿಕೊಳ್ಳುವ ವೃತ್ತಿ ರಾಜಕಾರಣಿಗಳ ನಡವಳಿಕೆಯಲ್ಲಿ ಅಷ್ಟರಮಟ್ಟಿಗಾದರೂ ಧರ್ಮವೂ ಇದೆ, ಅಧ್ಯಾತ್ಮವೂ ಇದೆ. ಅಂತೆಯೇ, ಧಾರ್ಮಿಕ ವ್ಯಕ್ತಿಗಳ ರಾಜಕೀಯ ನಡೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ನಿರ್ಭೀತಿಯಿಂದ ಎತ್ತುವ ಲೌಕಿಕ ವ್ಯಕ್ತಿಗಳೇ ಹೆಚ್ಚು ಧಾರ್ಮಿಕರು, ಹೆಚ್ಚು ಆಧ್ಯಾತ್ಮಿಕರು ಎಂದು ಪರಿಗಣಿಸಬೇಕಾಗುತ್ತದೆ. ಮಾತ್ರವಲ್ಲ, ದೇವರು ಅಂತ ಒಬ್ಬ ಇದ್ದರೆ ಆತನಿಗೆ ಹೆಚ್ಚು ಪ್ರಿಯರಾಗಬಹುದಾದವರು ಕೂಡಾ ಇಂತಹವರೇ ಆಗಿರುತ್ತಾರೆ ಎಂದು ಭಾವಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT