ರಾಷ್ಟ್ರದ ಗಮನ ಸೆಳೆದಿರುವ ಸೌಜನ್ಯಾ ಎನ್ನುವ ಯುವತಿಯ ಅತ್ಯಾಚಾರ ಮತ್ತು ಕೊಲೆಯ ಪ್ರಕರಣದಲ್ಲಿ ಕರ್ನಾಟಕ ರಾಜ್ಯದ ಗೃಹ ಇಲಾಖೆಯ ಅರ್ಥಾತ್ ಪೊಲೀಸ್ ವ್ಯವಸ್ಥೆಯ ಮಾನ ಅಕ್ಷರಶಃ ಹರಾಜಾಗಿತ್ತು. ಸೌಜನ್ಯಾ ಪ್ರಕರಣದ ಮುಂದುವರಿದ ಭಾಗವೋ ಎಂಬಂತೆ ಅದೇ ಪ್ರದೇಶದಲ್ಲಿ ಹಲವಾರು ಜನರನ್ನು, ಮುಖ್ಯವಾಗಿ ಮಹಿಳೆಯರನ್ನು ಮತ್ತು ಮಕ್ಕಳನ್ನು, ಕೊಲೆ ಮಾಡಿ ರಹಸ್ಯವಾಗಿ ಹೂತು ಹಾಕಲಾಗಿದೆ ಎನ್ನುವ ಬೆಚ್ಚಿಬೀಳಿಸುವ ಆಪಾದನೆಯೊಂದರ ಸುತ್ತ ಈಗ ಏನೇನೋ ಬೆಳವಣಿಗೆಗಳು ಆಗುತ್ತಿವೆ. ಈ ಆಪಾದನೆಯನ್ನು ನಿಭಾಯಿಸುವಲ್ಲಿ ಕೂಡ, ಗೃಹ ಇಲಾಖೆ ಅರ್ಥಾತ್ ಪೊಲೀಸ್ ವ್ಯವಸ್ಥೆ ಆರಂಭದಲ್ಲಿ ಎಡವಿತು.

ಆಪಾದನೆಯನ್ನು ಮಾಡಿದ ವ್ಯಕ್ತಿ ಹೂತ ಶವಗಳ ಅವಶೇಷಗಳನ್ನು ಅಗೆದು ತೋರಿಸುತ್ತೇನೆ ಎಂದು ಅಧಿಕೃತವಾಗಿ ನಿವೇದಿಸಿಕೊಂಡು ಬರೋಬ್ಬರಿ ಮೂರು ವಾರಗಳಾದ ನಂತರ, ಸರ್ಕಾರ ‘ವಿಶೇಷ ತನಿಖಾ ತಂಡ’ (ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ – ಎಸ್ಐಟಿ) ರಚಿಸಿದೆ. ಆಪಾದನೆಯ ಕುರಿತು ಗಂಭೀರವಾಗಿ ತನಿಖೆ ನಡೆಸುವ ಕನಿಷ್ಠ ಇರಾದೆ ಮತ್ತು ಪ್ರಾಮಾಣಿಕತೆಯನ್ನು ಪೊಲೀಸ್ ಇಲಾಖೆ ತೋರುತ್ತಿಲ್ಲವಲ್ಲ ಎಂದು ಜನ ಬೀದಿ ಬೀದಿಗಳಲ್ಲಿ ಮಾತಿಗಿಳಿದ ನಂತರವೇ– ಈ ವಿಷಯ ನೆರೆ ರಾಜ್ಯಗಳಲ್ಲೂ ಅನುರಣಿಸಿದ ನಂತರವೇ– ಸರ್ಕಾರ ಎಚ್ಚೆತ್ತುಕೊಂಡದ್ದು.

ದೂರು ಸಲ್ಲಿಕೆಯಾದ ಮರು ನಿಮಿಷದಿಂದಲೇ ಕಾರ್ಯಾಚರಣೆ ನಡೆಸಬೇಕಿರುವಷ್ಟು ಗಂಭೀರವಾದ ಪ್ರಕರಣವೊಂದರಲ್ಲಿ ಈ ವಿಳಂಬ ಗತಿಯನ್ನು ಗೃಹ ಇಲಾಖೆ ತೋರಿಸಿದ್ದೇಕೆ ಎನ್ನುವ ಪ್ರಶ್ನೆ ಈಗಲೂ ಇದೆ. ದೂರು ಸಲ್ಲಿಕೆ ಮತ್ತು ಎಸ್ಐಟಿ ರಚನೆಯ ನಡುವಣ ಸುದೀರ್ಘ ಅವಧಿಯುದ್ದಕ್ಕೂ ನೇತ್ರಾವತಿ ನದಿಯಲ್ಲಿ ಬಹಳಷ್ಟು ನೀರು ಹರಿದಿದೆ. ಹರಿದ ಆ ನೀರಲ್ಲಿ ಏನೇನು ಕೊಚ್ಚಿಕೊಂಡು ಹೋಗಿದೆಯೋ ನೋಡಿದವರು ಯಾರು?

ಸೌಜನ್ಯಾ ಪ್ರಕರಣದ ತನಿಖೆಯಲ್ಲಿ ನಿಜವಾದ ಅಪರಾಧಿಗಳು ಸಿಗದೇ ಹೋಗಲು ಕಾರಣ, ಆರಂಭದ ಅಮೂಲ್ಯ ಕ್ಷಣಗಳಲ್ಲಿ (ಗೋಲ್ಡನ್ ಅವರ್) ಏನೇನು ಮಾಡಬೇಕಿತ್ತೋ ಅವುಗಳನ್ನೆಲ್ಲಾ ಪೊಲೀಸರು ಉದ್ದೇಶಪೂರ್ವಕವಾಗಿಯೇ ಮಾಡದೇ ಹೋಗಿದ್ದು ಎನ್ನುವುದು ಜಗಜ್ಜಾಹೀರು ಆಗಿರುವ ಸತ್ಯ. ಸೌಜನ್ಯಾ ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಾಲಯ ಇದನ್ನು ಒತ್ತಿ ಹೇಳಿದೆ, ಎತ್ತಿ ತೋರಿಸಿದೆ. ಈಗ ಈ ತನಿಖೆಯಲ್ಲೂ ಅದೇ ತಾನೇ ಆಗಿರುವುದು. ಅವಶೇಷಗಳನ್ನು ಹುಡುಕಿ ತೆಗೆಯುವ ಕೆಲಸವನ್ನು ಕಾಯ್ದಿರಿಸುವ ಮೂಲಕ ‘ಗೋಲ್ಡನ್ ಅವರ್’ನಲ್ಲಿ ಮಾಡಬೇಕಾಗಿದ್ದುದನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುವ ಕೆಲಸ ನಡೆದೇ ಹೋಯಿತಲ್ಲ. ಪ್ರಕರಣದ ಸತ್ಯಾಸತ್ಯ ಏನೆಂದು ಪ್ರಪಂಚಕ್ಕೆ ತಿಳಿಸಿಯೇ ತೀರಬೇಕೆಂದು ಅದರ ಹಿಂದೆ ಬಿದ್ದಿರುವ ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಕೆ.ವಿ. ಧನಂಜಯ ಅವರು, ಈ ವಿಳಂಬದ ಕುರಿತು ಮಾಧ್ಯಮಗಳಿಗೆ ನೀಡಿದ ಸಂದರ್ಶನಗಳನ್ನೊಮ್ಮೆ ಕಣ್ಣಾರೆ ಕಾಣಬೇಕು, ಕಿವಿಯಾರೆ ಆಲಿಸಬೇಕು. ಆ ಮಾತುಗಳು ಇಡೀ ಪೊಲೀಸ್ ಇಲಾಖೆಗೆ ಮತ್ತು ಮುಂದೆ ಆ ಇಲಾಖೆಗೆ ಆಯ್ಕೆ ಆಗಲಿರುವವರಿಗೆ ಬೋಧಿಸಬೇಕಿರುವ ಅಗತ್ಯ ಪಠ್ಯದಂತಿದೆ.

ನ್ಯಾಯದ ನಿರೀಕ್ಷೆಯಲ್ಲಿರುವ ರಾಜ್ಯದ ಜನರಿಗೆ ಈ ವಿಳಂಬದ ಹೊರತಾಗಿಯೂ ಏನೋ ಒಂದು ಭರವಸೆ ಉಳಿದಿದೆ. ಆ ಭರವಸೆಗೆ ಕಾರಣ ಸರ್ಕಾರವಲ್ಲ, ಗೃಹ ಮಂತ್ರಿಗಳಲ್ಲ, ಗೃಹ ಕಾರ್ಯದರ್ಶಿಗಳಲ್ಲ. ಯಾವ ಅಲೌಕಿಕ ಶಕ್ತಿಯೂ ಅಲ್ಲ. ಆ ಭರವಸೆಗೆ ಕಾರಣ ಎಸ್ಐಟಿಗೆ ಸರ್ಕಾರ ನೇಮಿಸಿರುವ ಭಾರತೀಯ ಪೊಲೀಸ್ ಸೇವೆಗೆ ಸೇರಿದ ನಾಲ್ಕು ಮುಖಗಳು– ವಿಶೇಷವಾಗಿ, ಎಸ್ಐಟಿ ಮುಖ್ಯಸ್ಥರಾಗಿ ನೇಮಕಗೊಂಡಿರುವ ಒಡಿಶಾ ಮೂಲದ ಅಧಿಕಾರಿಯ ಚಾರಿತ್ರ್ಯ. ಹಾಗೆ ನೋಡಿದರೆ, ಎಸ್ಐಟಿಯಲ್ಲಿ ಇರುವ ನಾಲ್ವರೂ ರಾಜ್ಯದ ಹೊರಗಿನವರೇ ಆಗಿದ್ದರೆ ಭರವಸೆ ಇನ್ನೂ ಹೆಚ್ಚುತ್ತಿತ್ತು. ಇರಲಿ. ಈಗೊಂದು ಪ್ರಶ್ನೆ. ಇಷ್ಟೆಲ್ಲಾ ಆಗಿ, ಆಪಾದನೆ ಮಾಡಿದ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಅಲ್ಲಿ ಹುಡುಕಿದಾಗ ಎಲುಬುಗಳು ಸಿಗದೇ ಹೋದರೆ ಏನಾಗುತ್ತದೆ?

ರಾಜ್ಯದ ಮುಂದೆ ಇರುವ ಪ್ರಶ್ನೆ, ಅನಾಮಿಕ ವ್ಯಕ್ತಿ ಹೇಳಿದಂತೆ ಅಲ್ಲಿ ಅಕ್ರಮವಾಗಿ ಹೂತು ಹಾಕಿದ ಮಾನವ ದೇಹಗಳ ಅವಶೇಷಗಳು ಸಿಗುತ್ತವೆಯೋ ಇಲ್ಲವೋ ಎನ್ನುವುದಷ್ಟೇ ಅಲ್ಲ. ಆ ಪ್ರದೇಶಗಳಲ್ಲಿ ಬೆಳಕಿಗೆ ಬಂದ ಮತ್ತು ಬಾರದ ಅಷ್ಟೂ ಕೊಲೆಗಳಲ್ಲಿ ಈ ತನಕ ಒಂದೇ ಒಂದು ಪ್ರಕರಣದಲ್ಲಿಯೂ ಅಪರಾಧಿಗಳು ಯಾರು ಎಂದು ಕಂಡುಕೊಳ್ಳಲು ಪೊಲೀಸರು ವಿಫಲರಾಗಿರುವ ಮಹಾಒಗಟನ್ನು ಎಸ್ಐಟಿ ಭೇದಿಸುವುದೇ? ಇದು ರಾಜ್ಯದ ಮುಂದಿರುವ ನಿಜವಾದ ಪ್ರಶ್ನೆ.

ಸೌಜನ್ಯಾಳ ಅಪಹರಣ ನಡೆದದ್ದು ಹಾಡಹಗಲಲ್ಲಿ. ಜನಸಂಚಾರ, ವಾಹನ ಸಂಚಾರ, ಸಿ.ಸಿ.ಟಿ.ವಿ. ಕ್ಯಾಮೆರಾ ಇತ್ಯಾದಿಗಳೆಲ್ಲಾ ಇದ್ದ ಪ್ರದೇಶದಲ್ಲಿ. ಆದರೂ ಅದು ನಿಗೂಢ ಪ್ರಕರಣವಾಗಿ ಉಳಿದಿದೆ ಎನ್ನುವುದೇ ಕರ್ನಾಟಕ ಗೃಹ ಇಲಾಖೆಗೆ ಒಂದು ಶಾಶ್ವತ ಕಳಂಕ. ಸೌಜನ್ಯಾ ಪ್ರಕರಣವನ್ನು ಎಸ್ಐಟಿ ತನಿಖೆಯ ವ್ಯಾಪ್ತಿಗೆ ಸೇರಿಸಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ. ಅದು ಕಾನೂನಾತ್ಮಕವಾಗಿ ಮುಗಿದ ಅಧ್ಯಾಯವೆಂದೂ, ಅದು ಜನಮನದಲ್ಲಿ ಮಾತ್ರ ಮುಂದುವರಿಯುತ್ತಿರುವ ಪ್ರಕರಣವೆಂದೂ ಅವರು ಹಿಂದೊಮ್ಮೆ ಹೇಳಿದ್ದುಂಟು. ಕಾನೂನಾತ್ಮಕವಾಗಿ ಮುಗಿದುಹೋದ ನಂತರವೂ ಜನಮಾನಸವನ್ನು ಒಂದು ಕೊಲೆ ಪ್ರಕರಣ ಒಗಟಾಗಿ ಕಾಡುತ್ತಿದೆ ಎಂದಾದರೆ, ಅದಕ್ಕೆ ಪರಿಹಾರ ಒದಗಿಸುವುದು ಚುನಾಯಿತ ಸರ್ಕಾರಗಳ ಹೊಣೆ. ಕಾನೂನಾತ್ಮಕವಾಗಿ ಮುಗಿದುಹೋದ ಪ್ರಕರಣಗಳಿಗೂ ನಮಗೂ ಸಂಬಂಧ ಇಲ್ಲ ಎಂದು ಪೊಲೀಸ್ ಇಲಾಖೆಯವರೋ ನ್ಯಾಯಾಂಗ ಇಲಾಖೆಯವರೋ ಹೇಳಿದರೆ ಅದನ್ನು ಒಪ್ಪಿಕೊಳ್ಳಬಹುದು. ರಾಜಕೀಯ ನಾಯಕರು ಅಂತಹ ಮಾತುಗಳನ್ನು ಹೇಳಬಾರದು.

ಅಷ್ಟೇ ಅಲ್ಲ. ಸೌಜನ್ಯಾ ಪ್ರಕರಣ ಕಾನೂನಾತ್ಮಕವಾಗಿ ಮುಗಿದೇ ಹೋಗಿದೆ ಎನ್ನುವ ಹಾಗೂ ಇಲ್ಲ. ಯಾಕೆಂದರೆ, ಆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ನಿಜವಾದ ಅಪರಾಧಿ ತಪ್ಪಿಸಿಕೊಳ್ಳುವಂತೆ ಸಾಕ್ಷ್ಯ ನಾಶ ಮಾಡಿ, ಪ್ರಕರಣಕ್ಕೆ ಸಂಬಂಧವೇ ಇಲ್ಲದ ಅಮಾಯಾಕನೊಬ್ಬನನ್ನು ಹಿಡಿದು ಚಿತ್ರಹಿಂಸೆ ನೀಡಿ ಆರು ವರ್ಷ ಜೈಲಿಗಟ್ಟಿ ಘೋರ ತಪ್ಪೆಸಗಿದ್ದರು. ವಿಚಾರಣೆ ನಡೆಸಿದ ಸಿಬಿಐ ನ್ಯಾಯಾಲಯ ಇದನ್ನು ಎತ್ತಿತೋರಿಸಿದೆ ಹಾಗೂ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ. ನ್ಯಾಯಾಲಯದ ಆ ಆದೇಶದನ್ವಯ ತಪ್ಪಿತಸ್ಥ ಪೊಲೀಸರ ವಿರುದ್ಧ ‘ಘನ’ ಕರ್ನಾಟಕ ಸರ್ಕಾರದ ಗೃಹ ಇಲಾಖೆ ಯಾಕೆ ಕ್ರಮ ಕೈಗೊಂಡಿಲ್ಲ? ಇದೇನೂ ಕಾನೂನಾತ್ಮಕವಾಗಿ ಮುಗಿದುಹೋದ ಅಧ್ಯಾಯ ಅಲ್ಲವಲ್ಲ?

ವಿನಾಕಾರಣ ಪ್ರಕರಣದಲ್ಲಿ ಸಿಲುಕಿಸಿ, ಜೈಲು ವಾಸ ಅನುಭವಿಸಿ, ಬದುಕನ್ನೇ ಕಳೆದುಕೊಂಡ ಆ ಅಮಾಯಕ ವ್ಯಕ್ತಿಯ ಬಗ್ಗೆ ನ್ಯಾಯಾಲಯದ ತೀರ್ಪಿನಲ್ಲಿ ಹೇಳಲಾದ ಒಂದು ವಾಕ್ಯವನ್ನು ಫಲಕವೊಂದರಲ್ಲಿ ಬರೆದು ರಾಜ್ಯದ ಪ್ರತಿ ಪೊಲೀಸ್ ಠಾಣೆಯಲ್ಲಿ ತೂಗು ಹಾಕಬೇಕು. ಆ ವಾಕ್ಯ ಹೀಗಿದೆ: ‘ಆ ವ್ಯಕ್ತಿಯನ್ನು ಆಪಾದಿತ ಎಂಬುದಾಗಿ ಪರಿಗಣಿಸುವುದು ಬಿಡಿ, ಅವರಿಗೂ ಈ ಪ್ರಕರಣಕ್ಕೂ ಒಂದು ದೂರದ ಅಸ್ಪಷ್ಟ ಸಂಬಂಧವೂ ಇಲ್ಲ. ಹಾಗಾಗಿ ಅವರನ್ನು ಗೌರವಪೂರ್ವಕವಾಗಿ ಖುಲಾಸೆಗೊಳಿಸಲಾಗಿದೆ.’

ಸೌಜನ್ಯಾ ಪ್ರಕರಣದಲ್ಲಿ ಪೊಲೀಸರು ಹೀಗೇಕೆ ಮಾಡಿದರು? ಈ ಪ್ರಶ್ನೆಯನ್ನು ಎತ್ತಿಕೊಂಡರೆ ಸ್ಪಷ್ಟವಾಗಿ ಹೇಳಬಹುದಾದುದು ಇಷ್ಟು: ಒಂದೋ, ಪೊಲೀಸರು ಹಾಗೆ ಮಾಡಲು ಕಾರಣ ಅವರ ಅದಕ್ಷತೆ. ಇಲ್ಲವೇ ಅವರು ಯಾರದೋ ಒತ್ತಡಕ್ಕೋ ಆಮಿಷಕ್ಕೋ ಬಲಿಯಾಗಿ ಉದ್ದೇಶಪೂರ್ವಕವಾಗಿ ಹಾಗೆ ಮಾಡಿದ್ದಾರೆ. ಇವೆರಡರ ಹೊರತಾಗಿ, ಮೂರನೆಯ ಒಂದು ಕಾರಣ ಇರಲು ಸಾಧ್ಯವೇ ಇಲ್ಲ. ಇವೆರಡರಲ್ಲಿ ನಿಜವಾದ ಕಾರಣ ಏನೇ ಇರಲಿ, ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿ,
ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿತ್ತು.

ಪೊಲೀಸರು ಯಾರದೋ ಒತ್ತಡದಿಂದ ತನಿಖೆ ಹಳ್ಳ ಹಿಡಿಯುವಂತೆ ಮಾಡಿದ್ದರು ಎನ್ನುವುದಾಗಿದ್ದರೆ, ಯಾರ ಒತ್ತಡದಿಂದ ಅವರು ಹಾಗೆ ಮಾಡಿದ್ದು ಎಂಬ ಒಂದು ಪ್ರಶ್ನೆಗೆ ಉತ್ತರ ಕಂಡುಕೊಂಡಿದ್ದರೆ, ಈ ವೇಳೆಗೆ ರಹಸ್ಯ ಬಯಲಾಗುತ್ತಿತ್ತು. ‘ಸೌಜನ್ಯಾಳಿಗೆ ನ್ಯಾಯ ಒದಗಿಸಿ’ ಎಂಬ ಹೋರಾಟ ದಶಕವನ್ನು ಮೀರಿ ಮುಂದುವರಿದಿದೆ. ಒಂದು ಕೊಲೆ ಪ್ರಕರಣದ ಸುತ್ತ ಇಷ್ಟೊಂದು ಸುದೀರ್ಘವಾದ ಇನ್ನೊಂದು ಹೋರಾಟ ನಡೆದದ್ದಿಲ್ಲ. ಆ ಹೋರಾಟಗಾರರು ಮತ್ತೆ ಮತ್ತೆ ಮುಂದಿಡುತ್ತಿದ್ದ ಒಂದು ಬೇಡಿಕೆ ವಿಲಕ್ಷಣವಾಗಿದ್ದರೂ, ಅದು ಇಡೀ ಪ್ರಕರಣದ ದಾರುಣತೆಯನ್ನು ಸಾರುತ್ತದೆ. ಆ ಅಮಾಯಕನಿಗೆ ಉದ್ದೇಶಪೂರ್ವಕಾಗಿಯೇ ಪೊಲೀಸರು ಹಿಂಸಿಸಿ
ದ್ದರಲ್ಲ, ಅದೇ ರೀತಿಯಲ್ಲಿ ತಪ್ಪಿತಸ್ಥ ಪೊಲೀಸರನ್ನೂ ಬಾಯಿ ಬಿಡಿಸಿ, ಅವರ ಮೇಲೆ ಯಾರು ಒತ್ತಡ ತಂದರು ಎಂದು ತಿಳಿದುಕೊಳ್ಳಬೇಕು ಎನ್ನುವ ಆಗ್ರಹವದು. ಇಂಥ ಆಗ್ರಹಗಳು ಪ್ರಾಯೋಗಿಕವೂ ಅಲ್ಲ, ಕಾನೂನಾತ್ಮಕವೂ ಅಲ್ಲ ಎಂದು ನಿರ್ಲಕ್ಷಿಸಿ ಬಿಡಬಹುದು. ಆದರೆ, ಪೊಲೀಸ್ ವ್ಯವಸ್ಥೆಯ ವಿಚಾರದಲ್ಲಿ ಸಾರ್ವಜನಿಕರ ತಾಳ್ಮೆ ಕುಸಿಯುತ್ತಿದೆ ಎನ್ನುವುದಕ್ಕೆ ಇದೊಂದು ಸಂಕೇತವಾಗುತ್ತದೆ.

ಸೌಜನ್ಯಾ ಕೊಲೆ ನಡೆದದ್ದು ಮತ್ತು ಪೊಲೀಸರು ತನಿಖೆಯನ್ನು ಹಳ್ಳ ಹಿಡಿಸಿದ್ದು ಬಿಜೆಪಿ ಅಧಿಕಾರದಲ್ಲಿದ್ದಾಗ. ಆ ಪಾಪವನ್ನು ಬಿಜೆಪಿ ಹೊತ್ತುಕೊಳ್ಳಬೇಕು. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಕ್ಕೆ ನ್ಯಾಯಾಲಯ ಆದೇಶಿಸಿದ್ದು, 2023ರಲ್ಲಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ. ಬಿಜೆಪಿಯ ಕಾಲದ ಪಾಪವನ್ನು ಮುಚ್ಚಿಡುವ ಇರಾದೆ ಕಾಂಗ್ರೆಸ್ಸಿಗೆ ಇಲ್ಲದೆ ಹೋಗಿದ್ದರೆ, ತಪ್ಪಿತಸ್ಥ ಪೊಲೀಸರ ವಿಚಾರಣೆ ನಡೆಯಬೇಕಿತ್ತು. ಇಡೀ ರಾಜ್ಯಕ್ಕೆ ರಾಜ್ಯವೇ ಕಂಬನಿ ಮಿಡಿದ ಪ್ರಕರಣವೊಂದರಲ್ಲೂ ಕನಿಷ್ಠ ಸಂವೇದನೆಯಿಂದ ನಡೆದುಕೊಳ್ಳದ ಪಕ್ಷಾತೀತ ರಾಜಕೀಯ ಮನೋಧರ್ಮವನ್ನು ವಿವರಿಸುವ ಪದಗಳನ್ನು ನಾವೀಗ ಆವಿಷ್ಕರಿಸಿಕೊಳ್ಳಬೇಕಿದೆ.

ಕೊನೆಗೂ, ಸಾರ್ವಜನಿಕ ಒತ್ತಡಕ್ಕೆ ಮಣಿದು ಎಸ್ಐಟಿ ರಚನೆಯಾಗಿದೆ. ಸೌಜನ್ಯಾ ಪ್ರಕರಣವನ್ನೂ ಒಳಗೊಂಡು ತನಿಖೆ ನಡೆಯಬೇಕೆಂಬ ಆಗ್ರಹ ರೂಪುಗೊಂಡಿದೆ. ಆ ಆಗ್ರಹ ಸಮರ್ಪಕವಾಗಿದೆ. ಏನೇ ಇರಲಿ, ಈ ಎಸ್ಐಟಿ ಸತ್ಯವನ್ನು ಸ್ವಲ್ಪ ಮಟ್ಟಿಗಾದರೂ ಬಯಲಿಗೆ ಎಳೆದದ್ದೇ ಆದರೆ, ಅನ್ಯಾಯವಾಗಿ ಅಳಿದುಹೋದ ಜೀವಗಳಿಗೆ ನ್ಯಾಯ ಒದಗಿದಂತಾಗುವುದಷ್ಟೇ ಅಲ್ಲ, ಸೌಜನ್ಯಾ ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಕಳೆದುಕೊಂಡ ಮಾನವನ್ನು ಸ್ವಲ್ಪ ಮಟ್ಟಿಗೆ ಮರಳಿ ಗಳಿಸಿದಂತೆಯೂ ಆಗುತ್ತದೆ.

ಎಲ್ಲದಕ್ಕಿಂತಲೂ ಮುಖ್ಯವಾಗಿ ಆ ಸ್ಥಳದಿಂದ ವರದಿಯಾದ ಪ್ರಕರಣಗಳಲ್ಲಿ ಕೊಲೆಗಾರರ ಕ್ರೌರ್ಯಕ್ಕಿಂತ ಹೆಚ್ಚಾಗಿ ಬೆಚ್ಚಿಬೀಳಿಸುವುದು ಪೊಲೀಸರ ರಾಕ್ಷಸೀ ಪ್ರವೃತ್ತಿ. ವಿಧಾನಸಭೆ ನಡಾವಳಿಯೂ ಸೇರಿದಂತೆ ಅಧಿಕೃತವಾಗಿಯೇ ದಾಖಲಾಗಿರುವ ಅಲ್ಲಿನ ಪೋಲೀಸರ ಪೈಶಾಚಿಕ ನಡವಳಿಕೆಗಳ ಕುರಿತ ವಿವರಗಳು ಹೊರಬರುತ್ತಿವೆ. ಆದುದರಿಂದ ಪೋಲೀಸರ ನಡುವೆ ಮನುಷ್ಯರಿದ್ದಾರೆ ಎಂದು ಸಾಧಿಸಿ ತೋರಿಸುವ ರೀತಿಯಲ್ಲಿ ಕೆಲಸ ಮಾಡಬೇಕಿರುವ ಜವಾಬ್ದಾರಿಯೂ ಎಸ್ಐಟಿ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.