ಹಾಂಗ್‌ಝೌ (ಪಿಟಿಐ): ಭಾರತದ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಅವರು ಏಷ್ಯನ್ ಕ್ರೀಡಾಕೂಟದ ಕೆನೊಯಿಂಗ್‌ನಲ್ಲಿ ಪುರುಷರ ಡಬಲ್ 1000 ಮೀ. ಸ್ಪರ್ಧೆಯಲ್ಲಿ ಕಂಚು ಗೆದ್ದುಕೊಂಡರು.
ಮಂಗಳವಾರ ನಡೆದ ಸ್ಪರ್ಧೆಯನ್ನು ಭಾರತದ ಜೋಡಿ 3 ನಿ. 53.329 ಸೆ.ಗಳಲ್ಲಿ ಪೂರೈಸಿತು. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಕೆನೊಯಿಂಗ್‌ನಲ್ಲಿ ಭಾರತಕ್ಕೆ ದೊರೆತ ಎರಡನೇ ಪದಕ ಇದು. 1994 ರಲ್ಲಿ ಹಿರೋಷಿಮಾದಲ್ಲಿ ನಡೆದಿದ್ದ ಕೂಟದಲ್ಲಿ ಇದೇ ವಿಭಾಗದಲ್ಲಿ ಸಿಜಿ ಸದಾನಂದನ್ ಮತ್ತು ಜಾನಿ ರೊಮೆಲ್ ಜೋಡಿ ಕಂಚು ಜಯಿಸಿತ್ತು.
ಉಜ್ಬೆಕಿಸ್ತಾನದ ಶೊಕ್‌ಮುರಾದ್ ಖೊಲ್‌ಮುರದೊವ್ ಮತ್ತು ನೂರಿಸ್ಲೊಮ್ ತುಖ್ತಾಸಿನ್ ಅವರು 3 ನಿ. 43.796 ಸೆ.ಗಳೊಂದಿಗೆ ಚಿನ್ನ ಗೆದ್ದರು. ಕಜಕಸ್ತಾನದ ತಿಮೊಫೆಯ್ ಯೆಮೆಲ್‌ಯನೊವ್ ಮತ್ತು ಸೆರ್ಜಿ ಯೆಮೆಲ್‌ಯನೊವ್ ಜೋಡಿಗೆ ಬೆಳ್ಳಿ ಲಭಿಸಿತು.
24 ವರ್ಷದ ಸುನಿಲ್ ಅವರು 2018ರ ಕೂಟದಲ್ಲೂ ಪಾಲ್ಗೊಂಡಿದ್ದರು. 16 ವರ್ಷದ ಅರ್ಜುನ್‌ಗೆ ಇದು ಮೊದಲ ಕೂಟ. ‘ಕಳೆದ ಬಾರಿಯ ಕೂಟದಲ್ಲಿ ಪದಕ ಗೆಲ್ಲಬಹುದಿತ್ತು. ಆದರೆ ಸ್ಪರ್ಧೆಯ ದಿನ ನನ್ನ ಜತೆಗಾರ ಅನಾರೋಗ್ಯಕ್ಕೆ ಒಳಗಾದ್ದರಿಂದ ಪೂರ್ಣ ಸಾಮರ್ಥ್ಯ ತೋರಲು ಸಾಧ್ಯವಾಗಿರಲಿಲ್ಲ. ಎರಡನೇ ಪ್ರಯತ್ನದಲ್ಲಿ ಪದಕ ಗೆದ್ದಿರುವುದು ಸಂತಸ ಉಂಟುಮಾಡಿದೆ’ ಎಂದು ಸುನಿಲ್ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.