ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ.ನಾರಾಯಣ ಬರಹ: ನ್ಯಾಯ, ಅನ್ಯಾಯ ಮತ್ತು ದೈವ

ಸೌಜನ್ಯಾಪರ ಹೋರಾಟ: ಕಾನೂನಿನ ಮಿತಿ ಹಾಗೂ ಸಾಂಸ್ಕೃತಿಕ ಸಾಧ್ಯತೆ
Published 8 ಆಗಸ್ಟ್ 2023, 18:57 IST
Last Updated 8 ಆಗಸ್ಟ್ 2023, 18:57 IST
ಅಕ್ಷರ ಗಾತ್ರ

ಜಗತ್ಪ್ರಸಿದ್ಧ ರಷ್ಯನ್ ಕಾದಂಬರಿಕಾರ ಲಿಯೊ ಟಾಲ್‌ ಸ್ಟಾಯ್‌ ಅವರ ಕತೆಯೊಂದರಲ್ಲಿ, ಓರ್ವ ವ್ಯಕ್ತಿಗೆ ಆತನಿಗೆ ಸಂಬಂಧವೇ ಇಲ್ಲದ ಕೊಲೆ ಪ್ರಕರಣವೊಂದ
ರಲ್ಲಿ ಶಿಕ್ಷೆಯಾಗುತ್ತದೆ. ಇಪ್ಪತ್ತಾರು ವರ್ಷಗಳ ನಂತರ ಆತ ನಿರಪರಾಧಿ ಎಂಬುದು ಸರ್ಕಾರಕ್ಕೆ ತಿಳಿಯುತ್ತದೆ. ಆತನ ಬಿಡುಗಡೆಗೆಂದು ದಿನ ನಿಗದಿಯಾಗುತ್ತದೆ. ಆದರೆ ಆ ದಿನದಂದೇ ಮುಂಜಾನೆ ಆತ ಕುಸಿದು ಸಾಯುತ್ತಾನೆ.

ಈ ಕತೆಗಿಂತಲೂ ಕುತೂಹಲಕಾರಿಯಾಗಿರುವುದು ಅದರ ಶೀರ್ಷಿಕೆ. ಅದು ಹೀಗಿದೆ: ‘ಗಾಡ್ ಸೀಸ್ ದ ಟ್ರೂತ್‌ ಬಟ್ ವೇಟ್ಸ್‌’. ಅದರ ಅರ್ಥ ‘ದೈವ ಕಾದೂ ಕಾದೂ ಕೊನೆಗೆ ನ್ಯಾಯ ನೀಡುತ್ತದೆ’ ಅಂತ.

ಟಾಲ್‌ಸ್ಟಾಯ್ ಈ ಶೀರ್ಷಿಕೆಯಲ್ಲಿ ದೈವ ಕಾರುಣ್ಯದ ಬಗ್ಗೆ ಸಮಾಧಾನ ಪಟ್ಟುಕೊಳ್ಳುತ್ತಿರುವುದೋ ಅಥವಾ ದೈವವನ್ನು ಅಣಕಿಸುತ್ತಿರುವುದೋ ತಿಳಿಯುವುದಿಲ್ಲ. ಮನುಷ್ಯನ ಯೋಚನಾ ಲಹರಿಯೇ ವಿಚಿತ್ರವಾಗಿದೆ. ಕೊಲೆಗೀಡಾಗುವವನ ನೆರವಿಗೆ ಬರುವುದಿಲ್ಲ ದೈವ. ನಿರಪರಾಧಿಗೆ ಶಿಕ್ಷೆ ಆಗುವಾಗ ನೆರವಿಗೆ ಬರುವುದಿಲ್ಲ ದೈವ. ಆದರೂ, ಎಂದೋ ಒಂದು ದಿನ ನಿಜವಾದ ಅಪರಾಧಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುವ ಮೂಲಕ ದೈವ ನ್ಯಾಯ ನೀಡುತ್ತದೆ ಅಂತ ಮನುಷ್ಯರು ಭಾವಿಸುತ್ತಾರೆ. ಇಲ್ಲಿ ಯಾವ ನ್ಯಾಯ ಯಾರಿಗೆ ದೊರೆತದ್ದು ಅಂತ ಅರ್ಥ
ಆಗುವುದಿಲ್ಲ. ಮನುಷ್ಯರು ದೈವದ ವಿಚಾರದಲ್ಲಿ ಬಹಳ ಧಾರಾಳಿಗಳು ಅನ್ನಿಸುತ್ತದೆ. ಅಸಹಾಯಕ ಮನುಷ್ಯನ ಮನಸ್ಸೇ ಹಾಗೆ ಅಂತ ಮನಃಶಾಸ್ತ್ರ ಹೇಳಬಹುದು.

ಮೇಲಿನ ಕತೆ ನೆನಪಾಗಲು ಕಾರಣ, ಉಜಿರೆಯ ಸೌಜನ್ಯಾ ಪ್ರಕರಣ. ಹನ್ನೊಂದು ವರ್ಷಗಳ ಹಿಂದೆ ನಡೆದ ಹದಿನೇಳರ ಹರೆಯದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾಳ ಅಪಹರಣ, ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ನ್ಯಾಯ ಸಿಗಬೇಕು ಎಂದು ಕರ್ನಾಟಕದಾದ್ಯಂತ ಹೋರಾಟ ನಡೆಯುತ್ತಿದೆ. ಸೌಜನ್ಯಾ ಪ್ರಕರಣದಲ್ಲಿ ಎರಡು ಕುಟುಂಬಗಳ ಕಣ್ಣೀರ ಕತೆ ಇದೆ. ಒಂದೆಡೆ, ಮನೆಮಗಳ ಭೀಕರ ಹತ್ಯೆಯನ್ನು ನೆನೆನೆನೆದು ಮರುಗುವ ಸೌಜನ್ಯಾ ಕುಟುಂಬದ ದುರಂತ ಕತೆ. ಅಪರಾಧಿಗಳು ಕಾನೂನಿನ ಕಣ್ಣಿಂದ ಯಶಸ್ವಿಯಾಗಿ ತಪ್ಪಿಸಿಕೊಂಡಿರುವುದು ಈ ಕತೆಯ ದುರಂತವನ್ನು ಇಮ್ಮಡಿಗೊಳಿಸಿದೆ. ಇನ್ನೊಂದೆಡೆ, ಪ್ರಕರಣದಲ್ಲಿ ಅಪರಾಧಿ ಎಂದು ಸುಳ್ಳು ಆರೋಪ ಹೊತ್ತು ಪೊಲೀಸರ ಹಿಂಸೆಯಿಂದ ಅಕ್ಷರಶಃ ಅರೆಜೀವವಾಗಿ ಹೋಗಿರುವ ಸಂತೋಷ್ ರಾವ್ ಎಂಬ ಅಮಾಯಕ ಮತ್ತು ಅವರ ಕುಟುಂಬದ ದಾರುಣ ಕತೆ.

ಸೌಜನ್ಯಾಳನ್ನು ಹೊಸಕಿಹಾಕಿದ್ದು ಯಾರು ಎನ್ನುವುದು ನಿಗೂಢವಾಗಿಯೇ ಉಳಿದಿದೆ. ಒಪ್ಪಿಕೊಳ್ಳೋಣ. ಆದರೆ ಸಂತೋಷ್ ಅವರಿಗಾದ ನರಕಯಾತನೆಗೆ ಸಿಬಿಐ ಸೇರಿದಂತೆ ಪೊಲೀಸ್ ವ್ಯವಸ್ಥೆಯೇ ನೇರವಾಗಿ ಹೊಣೆಯಾಗುತ್ತದೆ. ಕೋರ್ಟ್ ತೀರ್ಪು ಓದಿದರೆ, ಸಂತೋಷ್ ಅವರು ಸಾಕ್ಷ್ಯ ಇಲ್ಲದೆ ತಪ್ಪಿಸಿಕೊಂಡದ್ದಲ್ಲ, ಸಂಪೂರ್ಣ ನಿರಪರಾಧಿಯಾಗಿದ್ದಾರೆ ಅಂತಲೇ ಭಾವಿಸಬೇಕಾಗುತ್ತದೆ. ತನಿಖೆ ನಡೆಸಿದ ಅಧಿಕಾರಿಗಳನ್ನೇ ವಿಚಾರಣೆಗೆ ಗುರಿಪಡಿಸಬೇಕು ಎನ್ನುವ ಅರ್ಥದ ವಾಕ್ಯವನ್ನು
ನ್ಯಾಯಾಲಯವೇ ತೀರ್ಪಿನಲ್ಲಿ ಹೇಳಿದೆ ಎಂದರೆ ಊಹಿಸಿ
ಕೊಳ್ಳಿ. ಪೊಲೀಸರು ಹೀಗೇಕೆ ನಡೆದುಕೊಂಡದ್ದು?

ಭಾರತದ ಪೊಲೀಸ್ ವ್ಯವಸ್ಥೆಯಲ್ಲಿ ಹೈ ಪ್ರೊಫೈಲ್ ಪ್ರಕರಣಗಳು ಬಂದಾಗ, ಯಾವುದೋ ಬಡ ತಾಯಿ ಮಕ್ಕಳನ್ನು ಹಿಡಿದು ಅಪರಾಧಿಗಳೆಂದು ಕತೆ ಕಟ್ಟುವ ವರದಿಗಳು ಆಗಾಗ ಬರುತ್ತಲೇ ಇರುತ್ತವೆ. ಅದುವೇ ಈ ಪ್ರಕರಣದಲ್ಲೂ ನಡೆಯಿತೇ? ಅಥವಾ ಯಾರನ್ನಾದರೂ ರಕ್ಷಿಸಲೆಂದೇ ಯಾವುದೋ ಒತ್ತಡಕ್ಕೆ ಮಣಿದು ಸಂತೋಷ್ ಅವರನ್ನು ಬಲಿಪಶು ಮಾಡಿದ್ದೇ? ಕೃತ್ಯ ನಡೆದು, ತನಿಖೆ ಮುಗಿದು ಬಹುಕಾಲ ಕಳೆದಿದೆ. ಸಾಕ್ಷ್ಯಗಳು ನಾಶವಾಗಿವೆ ಅಥವಾ ಸಾಕ್ಷ್ಯಗಳನ್ನು ನಾಶಗೊಳಿಸ
ಲಾಗಿದೆ. ಕಾನೂನು ಪರಿಣತರೇ ಹೇಳುವಂತೆ, ಮರು ತನಿಖೆಗೆ ಆದೇಶಿಸುವುದು ಸರ್ಕಾರಕ್ಕೆ ಸುಲಭಸಾಧ್ಯವಲ್ಲ. ಸಾಧ್ಯವಾದರೂ ತನಿಖೆ ಗುರಿ ಮುಟ್ಟುವ ಖಾತರಿಯಿಲ್ಲ.

ಕಾನೂನು ಪ್ರಕಾರ ಏನೆಲ್ಲಾ ಸಾಧ್ಯವೋ ಅದೆಲ್ಲಾ ಹೋರಾಟದ ಮೂಲಕವಾದರೂ ಆಗಲಿ. ಅದರ ಜತೆಗೆ ಸೌಜನ್ಯಾಪರ ಹೋರಾಟ ಇನ್ನೊಂದು ರೀತಿಯಲ್ಲಿ ನ್ಯಾಯ ಪಡೆಯುವ ಹೊಸ ಮಾರ್ಗವೊಂದರ ಸೂಚನೆ ನೀಡಿದೆ. ನ್ಯಾಯಕ್ಕಾಗಿ ಹೋರಾಡುತ್ತಿರುವವರು ಹೇಳುತ್ತಿರುವ ಪ್ರಕಾರ, ಸೌಜನ್ಯಾ ಎನ್ನುವುದು ಈಗ ಸಂತ್ರಸ್ತೆಯ ಹೆಸರಾಗಿ ಮಾತ್ರ ಉಳಿದಿಲ್ಲ, ಅದೊಂದು ಶಕ್ತಿಯಾಗಿದೆ. ಸಾಂಸ್ಥಿಕ ನ್ಯಾಯದ ಬಾಗಿಲು ಮುಚ್ಚಿಹೋದ ಕಾಲಕ್ಕೆ ಈ ಶಕ್ತಿಯೇ ವಿಜೃಂಭಿಸುತ್ತದೆ. ಅದು ಕೊಲೆಗಾರರನ್ನು ಜನತಾ ನ್ಯಾಯಾಲಯದ ಎದುರು ತಂದು ನಿಲ್ಲಿಸುತ್ತದೆ ಎಂದು ಹೋರಾಟಗಾರರು ಹೇಳುತ್ತಿದ್ದಾರೆ.

ಈ ಮಾತನ್ನು ಬರೀ ಭಾವಾವೇಶದ ಅಭಿವ್ಯಕ್ತಿ ಅಂತ ಕಡೆಗಣಿಸಬಾರದು. ಬದಲಿಗೆ ತುಳುನಾಡಿನ ಸಾಂಸ್ಕೃತಿಕ ಆವರಣದಲ್ಲಿ ಅದನ್ನು ಪರಿಶೀಲಿಸಬೇಕು. ತುಳುನಾಡಿನಲ್ಲಿ ಭೂತಗಳೆಂಬ ಅಲೌಕಿಕ ಶಕ್ತಿಗಳನ್ನು ಜನ ಆರಾಧಿಸುತ್ತಾರೆ. ಅಲ್ಲಿ ಭೂತಗಳಿಗಿಂತ ಮಿಗಿಲಾದ ಶಕ್ತಿಯಿಲ್ಲ. ಅಂತಹ ‘ಭೂತಶಕ್ತಿ’ಗಳು ಹುಟ್ಟಿಕೊಂಡ ಹಿನ್ನೆಲೆಯನ್ನು ಹುಡುಕಿದರೆ ಸಿಗುವುದು ಸೌಜನ್ಯಾ ಪ್ರಕರಣದಲ್ಲಿ ಕಾಣುವಂತಹದ್ದೇ ರೀತಿಯ ಅನ್ಯಾಯದ ಕತೆಗಳು. ಅಮಾಯಕರನ್ನು ಅಮಾನುಷವಾಗಿ ಹಿಂಸಿಸಿದ ಕತೆಗಳು. ಸಮಾಜದ ಕ್ರೌರ್ಯಗಳಿಗೆ ಬಲಿಯಾದ ಮುಗ್ಧ ಜೀವಿಗಳು ‘ಕಾಯ ಬಿಟ್ಟು ಮಾಯಕ’ದ ರೂಪ ತಳೆದು ತಮಗಾದ ಅನ್ಯಾಯದ ವಿರುದ್ಧ ಹೋರಾಡುವ ಕತೆಗಳು. ಈ ಕತೆಗಳೇ ತುಳುನಾಡಿನ ಪುರಾಣಗಳು.

ಹೋರಾಡುವುದು ಎಂದರೆ ಕೊಲೆಗೆ ಕೊಲೆ, ಕಣ್ಣಿಗೆ ಕಣ್ಣು ಅಲ್ಲ. ‘ಕಾಂತಾರ’ ಸಿನಿಮಾ ಕತೆಯಂತೆ ರಕ್ತ ಕಾರಿಸಿಸಾಯಿಸುವುದಲ್ಲ. ಭೂತಗಳ ಕತೆಯಲ್ಲಿ, ಅನ್ಯಾಯಕ್ಕೆ ಒಳ
ಗಾದವರು ‘ಮಾಯಕದ ರೂಪ’ ಪಡೆಯುತ್ತಾರೆ. ಅನ್ಯಾಯ ಎಸಗಿದವರಲ್ಲಿ ಭಯ ಮತ್ತು ಪಾಪಪ್ರಜ್ಞೆ ಹುಟ್ಟಿಸಿ ಅವರೇ ತಮ್ಮನ್ನು ಆರಾಧಿಸುವಂತೆ ಮಾಡುತ್ತಾರೆ. ಹೀಗೆ, ಟಾಲ್‌ಸ್ಟಾಯ್ ಹೇಳುವ ರೀತಿಯ ‘ಕೋಟೆ ಸೂರೆ ಹೋದ ಮೇಲೆ ಊರಿಗೆ ಬೇಲಿ ಹಾಕುವ’ ದೈವೀ ನ್ಯಾಯಕ್ಕೆ ಕಾಯದೆ, ಅನ್ಯಾಯಕ್ಕೆ ಒಳಗಾದವರೇ ಅತಿಮಾನುಷ ಶಕ್ತಿಗಳಾಗಿ ಉದಯಿಸಿ ನ್ಯಾಯ ಪಡೆಯುವ ಪರ್ಯಾಯ ಮಾರ್ಗದ ಪರಂಪರೆಯೊಂದು ತುಳುನಾಡಿನಲ್ಲಿದೆ.

ಅಂತಹ ಒಂದು ಕತೆ ಬಹುಪ್ರಸಿದ್ಧ ಕಲ್ಕುಡ-‌ಕಲ್ಲುರ್ಟಿ ಭೂತಗಳದ್ದು. ಅದರಲ್ಲಿ ಕಾರ್ಕಳದ ಭೈರವಸೂಡ ಅರಸ, ಬೀರ ಕಲ್ಕುಡ ಎಂಬ ಶಿಲ್ಪಿಯನ್ನು ಕರೆಸಿಕೊಂಡು ಭಾರಿ ಗಾತ್ರದ ಸುಂದರ ಶಿಲ್ಪವೊಂದನ್ನು ಕೆತ್ತಿಸುತ್ತಾನೆ. ಮುಂದೆ ಕಲ್ಕುಡ ಇನ್ನೊಂದು ರಾಜ್ಯಕ್ಕೆ ಹೋಗಿ ಇಂತಹದ್ದೇ ಶಿಲ್ಪ ಕೆತ್ತಿದರೆ ತನ್ನ ಕೀರ್ತಿ ಮಂಕಾದೀತು ಎಂದು ತರ್ಕಿಸಿ, ಕಲ್ಕುಡನ ಎಡಗೈ ಮತ್ತು ಬಲ ಕಾಲು ಕತ್ತರಿಸುತ್ತಾನೆ. ಅಣ್ಣನನ್ನು ಕಾಣಲು ಬಂದ ತಂಗಿ ಕಾಳಮ್ಮಳಿಗೆ ಕಲ್ಕುಡ ತನ್ನ ದಾರುಣಾವಸ್ಥೆಯನ್ನು ವಿವರಿಸುವ ಹಾಡು ಯಕ್ಷಗಾನ ಕವಿ ಅಮೃತ ಸೋಮೇಶ್ವರರ ‘ಅಮರಶಿಲ್ಪಿ ವೀರ ಕಲ್ಕುಡ’ ಪ್ರಸಂಗ ಪಠ್ಯದಲ್ಲಿ ಈ ರೀತಿ ಇದೆ:

‘ಪೇಳಲೇನಿದ ತಂಗೀ,ಕಳವು ಹಾದರ ಕೊಲೇ
ಖೂಳಕೃತ್ಯವ ಗೈದುದಿಲ್ಲಾ
ಮೇಲಾದ ಶಿಲ್ಪವ ಮೆರೆಸಿದೇನದಕಾಗಿ
ನೋವು ಉಣ್ಣುವ ಕಾಲ ಬಂತೂ
(ಮೂಲ ಪಠ್ಯ: ತುಳು ಪಾಡ್ದನ ಸಂಪುಟ, ಮಂಗಳೂರು ವಿ.ವಿ., ಪುಟ 143)

ಅನ್ಯಾಯ ಕಂಡ ಕಾಳಮ್ಮ ವ್ಯಗ್ರಳಾಗುತ್ತಾಳೆ. ಅಣ್ಣ-ತಂಗಿ ‘ಮಾದೇವರ ಅಂಗಳದಲ್ಲಿ ಮಾಯಕ’ವಾಗಿ ಕಲ್ಲುರ್ಟಿ- ಕಲ್ಕುಡ ಎಂಬ ಹೆಸರಿನ ಭೂತಗಳಾಗಿ ಉದಯಿ
ಸುತ್ತಾರೆ. ಭೈರವರಸನನ್ನು ಭಯಾನಕವಾಗಿ ಕಾಡುತ್ತಾರೆ, ಆದರೆ ಕೊಲ್ಲುವುದಿಲ್ಲ. ಅರಸ ಭೀತಿಯಿಂದಲೂ ಪಾಪಪ್ರಜ್ಞೆಯಿಂದಲೂ ತೊಳಲಾಡುವಂತೆ ಮಾಡುತ್ತಾರೆ.

ಸೌಜನ್ಯಾ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುವವರು ಆಕೆಯ ದೇಹ ಸಿಕ್ಕ ಜಾಗದಲ್ಲಿ ಆಕೆಯದ್ದೊಂದು ಪ್ರತಿಮೆ ಸ್ಥಾಪಿಸುತ್ತೇವೆ ಎನ್ನುತ್ತಿದ್ದಾರೆ. ಅದು ಅದ್ಭುತ ಯೋಚನೆ. ಕಾನೂನು ಹೋರಾಟ ಏನಾದರೂ ಆಗಲಿ, ಸೌಜನ್ಯಾಳ ಪ್ರತಿಮೆಯೊಂದು ಬಾನೆತ್ತರಕ್ಕೆ ನಿಂತು ಆ ದಾರಿಯಲ್ಲಿ ಬರುವವರಿಗೆಲ್ಲಾ ಘೋರ ಮರಣಕ್ಕೀಡಾದ ಮುಗ್ಧ ಸೌಜನ್ಯಾಳ ಮತ್ತು ಅಮಾನುಷ ಹಿಂಸೆ ಅನುಭವಿಸಿದ ಅಮಾಯಕ ಸಂತೋಷ್ ಅವರ ಕತೆಯನ್ನು ನೆನಪಿಸಿದರೆ, ಅದು ನ್ಯಾಯ ಪಡೆದುಕೊಳ್ಳುವ ಇನ್ನೊಂದು ಮಾರ್ಗವಾಗುತ್ತದೆ.

ಪ್ರತಿಮೆ ಮಾತ್ರವಲ್ಲ, ತುಳುನಾಡ ಭೂತಗಳ ಪರಂಪರೆಯಲ್ಲಿ ಸೌಜನ್ಯಾ ಕೂಡ ನ್ಯಾಯ, ನೀತಿ ಮೂರ್ತಿವೆತ್ತ ಹೊಸದೊಂದು ಕಾರಣೀಕ ಶಕ್ತಿಯಾಗಿ ಜನಮನದಲ್ಲಿ ಸ್ಥಾಪನೆಗೊಂಡು, ಆ ಶಕ್ತಿಯೇ ಮುಂದೆ ಅತ್ಯಾಚಾರ-ಕೊಲೆಗೈಯ್ಯುವವರ ಎದೆಯಲ್ಲೊಂದು ಭಯ, ಹಿಂದೆ ಅಂತಹ ಕೃತ್ಯದಲ್ಲಿ ಭಾಗಿಯಾದವರ ಮನಸ್ಸಲ್ಲೊಂದು ಪಾಪಪ್ರಜ್ಞೆ ಹುಟ್ಟುವಂತೆ ಮಾಡಿದರೂ ಸಾಕು. ಇನ್ನೇನು ಮಾಡುವುದು ಬೇಲಿಗಳೆಲ್ಲಾ ಎದ್ದು ಹೊಲ ಮೇಯುವ ಕಾಲದಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT