ಬುಧವಾರ, ಏಪ್ರಿಲ್ 8, 2020
19 °C
ದೇವರ ವಿರುದ್ಧದ ಪ್ರತಿಭಟನಾ ಮಾದರಿಗಳನ್ನು ಪ್ರಭುತ್ವದ ವಿಚಾರದಲ್ಲೂ ಅನುಸರಿಸಬಹುದೇ?

ಹೋಯ್, ಸುಖಾಂತ್ಯದ ಕತೆಗಳಿದ್ದರೆ ಹೇಳಿ!

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

prajavani

‘ನಂತರ ಅವರು ಸಂತೋಷದಿಂದ ರಾಜ್ಯವಾಳಿದರು’. ನಾವು ಸಣ್ಣವರಿದ್ದಾಗ ಕೇಳುತ್ತಿದ್ದ ಬಹುತೇಕ ಕತೆಗಳ ಅಂತಿಮ ವಾಕ್ಯ ಇದು. ರಾಜರ ಕತೆಯಾದರೆ ಈ ಅಂತ್ಯ. ಅದು ರಾಮನ ಕತೆಯಾದರೂ ಅಷ್ಟೆ, ಸತ್ಯ ಹರಿಶ್ಚಂದ್ರನ ಕತೆಯಾದರೂ ಅಷ್ಟೆ. ಜನಸಾಮಾನ್ಯರ ಕತೆಯಾದರೆ ‘ಅವರು ನಂತರ ಸುಖವಾಗಿದ್ದರು’ ಎಂದು ಅಂತ್ಯವಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಅದಕ್ಕೇ ಕತೆಗಳೂ ಬದಲಾಗಿವೆ. ಈಗ ಸುಖವಾಗಿ ಬಾಳಿದರು ಎಂದು ಅಂತ್ಯ ಕಾಣುವ ಕತೆಗಳೇ ಇಲ್ಲ. ಜನಸಾಮಾನ್ಯರದ್ದು ಕೂಡ, ಪ್ರಭುಗಳದ್ದು ಕೂಡ.

ಉದಾಹರಣೆಗೆ, ನಮ್ಮ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕತೆಯನ್ನೇ ತೆಗೆದುಕೊಳ್ಳಿ. ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯ ನೇತೃತ್ವ ವಹಿಸಿದ ಅವರು ಮುಖ್ಯಮಂತ್ರಿಯಾಗಿಯೂ ಪ್ರಮಾಣ ವಚನ ಸ್ವೀಕರಿಸಿ
ದರು. ನಂತರ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಕುರ್ಚಿಯಿಂದ ಕೆಳಕ್ಕೆ ಇಳಿದು ವಿರೋಧ ಪಕ್ಷದ ನಾಯಕರಾದರು. ಆದರೂ ಮುಖ್ಯಮಂತ್ರಿಯ ಕನಸು ಬಿಡಲಿಲ್ಲ. ಪ್ರಯತ್ನ ಮುಂದುವರಿಸಿಯೇ ಇದ್ದರು. ಕೆಲವು ಅಡೆತಡೆಗಳು ಬಂದರೂ ಅಪವಾದ ಬಂದರೂ ಜಗ್ಗಲಿಲ್ಲ. ಅಂತೂ ಇಂತೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ 17 ಶಾಸಕರು ರಾಜೀನಾಮೆ ನೀಡಿ ಅನರ್ಹರಾದ ನಂತರ ಇವರು ಮುಖ್ಯಮಂತ್ರಿಯಾದರು. ಅನರ್ಹರಲ್ಲಿ ಬಹಳಷ್ಟು ಮಂದಿ ಚುನಾವಣೆಯಲ್ಲಿ ಗೆದ್ದು ಸಚಿವರೂ ಆದರು. ಅಲ್ಲಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ಕತೆ ಮುಗಿಯಬೇಕಿತ್ತು. ನಂತರ ಅವರು ಸಂತೋಷದಿಂದ ಆಡಳಿತ ನಡೆಸಿದರು ಎಂಬ ಅಂತಿಮ ವಾಕ್ಯ ಬರಬೇಕಿತ್ತು. ಆದರೆ ಈ ಕತೆ ಇನ್ನೂ ಟಿ.ವಿ ಧಾರಾವಾಹಿಯಂತೆ ಪ್ರತೀ ದಿನ ಒಂದೊಂದು ತಿರುವು ಪಡೆದುಕೊಳ್ಳುತ್ತಾ ಕುತೂಹಲಕಾರಿಯಾಗಿಯೇ ಸಾಗಿದೆ. ಕತೆ ಮುಗಿಯುತ್ತಲೇ ಇಲ್ಲ.

ಈ ನಡುವೆ ಏನಾಗಿದೆ ಎಂದರೆ, ಜನರಿಗೆ ರಾಜ್ಯದಲ್ಲಿ ಒಂದು ಸರ್ಕಾರ ಇದೆ ಎಂದು ಅನ್ನಿಸುತ್ತಲೇ ಇಲ್ಲ.
ಮೊನ್ನೆ ಮೊನ್ನೆ ಸರ್ಕಾರಿ ಬಸ್ ಪ್ರಯಾಣ ದರವನ್ನು ಹೆಚ್ಚಿಸಿದಾಗಲೇ ಜನರಿಗೆ ‘ಹೌದಪ್ಪಾ ಹೌದು, ರಾಜ್ಯದಲ್ಲಿಯೂ ಒಂದು ಸರ್ಕಾರ ಇದೆ’ ಎಂಬ ಸೂಚನೆ ಸಿಕ್ಕಿರಬೇಕು ಅಷ್ಟೆ. ಮಾರ್ಚ್ 5ಕ್ಕೆ ರಾಜ್ಯ ಬಜೆಟ್ ಮಂಡನೆಯಾದ ನಂತರವಾದರೂ ಸರ್ಕಾರ ಟೇಕ್ ಆಫ್ ಆಗಬಹುದೇ ಎಂಬ ನಿರೀಕ್ಷೆಯಲ್ಲಿಯೇ ಜನರಿದ್ದಾರೆ. ನೆರೆ ಹಾವಳಿ ಸಂತ್ರಸ್ತರು, ರೈತರು ಸರ್ಕಾರದ ಜೀವಂತಿಕೆಗೆ ಕಾಯುತ್ತಿ
ದ್ದಾರೆ. ಆಡಳಿತ ಪಕ್ಷದ ಕತೆ ಹೀಗಾದರೆ ಅಧಿಕೃತ ವಿರೋಧ ಪಕ್ಷ ಕಾಂಗ್ರೆಸ್ ಕತೆಯೂ ಬೇರೆಯಾಗೇನೂ ಇಲ್ಲ. ಅಲ್ಲಿಯೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ರಾಜೀನಾಮೆ ಕೊಟ್ಟಿದ್ದಾರೆ. ಶಾಸಕಾಂಗ ಪಕ್ಷದ ನಾಯಕರೂ ರಾಜೀನಾಮೆ ಕೊಟ್ಟಿದ್ದಾರೆ. ಅವರ ಸ್ಥಾನ
ಗಳಿಗೆ ಇನ್ನೂ ಯಾರೂ ಬಂದಿಲ್ಲ. ರಾಜ್ಯದಲ್ಲಿ ಒಂದು ವಿರೋಧ ಪಕ್ಷ ಇದೆ ಎಂದೂ ಜನರಿಗೆ ಅನ್ನಿಸುತ್ತಿಲ್ಲ.
ಈಗ ಸದ್ಯಕ್ಕೆ ರಾಜ್ಯದಲ್ಲಿ ಬಾಯಿಬಡುಕರು ಮಾತ್ರ ಇದ್ದಾರೆ ಅಷ್ಟೆ.

ರಾಜ್ಯದ ಕತೆಯಂತೂ ಹೀಗಾಯ್ತು. ಕೇಂದ್ರದಲ್ಲಿ ಏನಾಗಿದೆ ಎಂದು ನೋಡಿದರೆ, ಅಲ್ಲಿ ಕೊಂಚ ಭಿನ್ನ ಕತೆ ಇದೆ. ಕೇಂದ್ರದಲ್ಲಿ ಇರುವವರೆಲ್ಲಾ ಸಿಎಎ, ಎನ್ಆರ್‌ಸಿ ಮುಂತಾದ ಭಾನಗಡಿಯಲ್ಲಿದ್ದಾರೆ. ಆರ್ಥಿಕ ಹಿಂಜರಿತ, ನಿರುದ್ಯೋಗ, ಉದ್ಯೋಗ ಕಡಿತ, ಬೆಲೆ ಏರಿಕೆ, ಬಡತನ ಮುಂತಾದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು ಯಾರಿಗೂ ಪುರಸತ್ತು ಇಲ್ಲ. ‘ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ’ ಎಂಬ ಘೋಷಣೆಯ ಮೇಲೆ ಗಾಂಧಿ ತಾತನ ಕನ್ನಡಕದ ಫ್ರೇಮ್ ಕಾಣಿಸುತ್ತಿದೆ. ಅದರ ಮೂಲಕ ನೋಡಿದರೆ ದೇಶದ ಎಲ್ಲೆಡೆ ಪ್ರತಿಭಟನೆ, ಹಿಂಸಾಚಾರ ಕಾಣುತ್ತಿದೆ. ದೇಶದ ರಾಜಧಾನಿಯಲ್ಲಿಯೇ ಹಿಂಸಾಚಾರಕ್ಕೆ 30ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಪ್ರತಿಭಟನಕಾರರೂ ಪಿಸ್ತೂಲ್ ಹಿಡಿದುಕೊಂಡಿದ್ದಾರೆ, ಪೊಲೀಸರೂ ಬಂದೂಕು ಹಿಡಿದು ಹೋರಾಟ ನಡೆಸಿರುವ ಬೀಭತ್ಸ ದೃಶ್ಯಗಳೇ ಕಾಣುತ್ತಿವೆ. ಈ ಕತೆಗೂ ಅಂತ್ಯ ಇಲ್ಲ.

ಸತ್ಯ, ಸತ್ಯಾಗ್ರಹ, ಅಹಿಂಸೆ ಮುಂತಾದ ಪ್ರಬಲ ಪ್ರತಿಭಟನಾ ಅಸ್ತ್ರಗಳನ್ನು ಕೊಟ್ಟವರು ಮಹಾತ್ಮ ಗಾಂಧಿ. ಅವರ ಅಸ್ತ್ರಗಳು ಈಗ ಮರೆಯಾಗಿವೆ. ಡಾ. ಎಚ್.ಎಸ್.ಅನುಪಮಾ ಅವರು ಬರೆದಿರುವ ಕಸ್ತೂರಬಾ ಗಾಂಧಿ ಜೀವನ ಚರಿತ್ರೆಯಲ್ಲಿ ಪ್ರತಿಭಟನೆಯ ಇನ್ನೊಂದಿಷ್ಟು ಮಾದರಿಗಳು ನಮಗೆ
ಲಭ್ಯವಾಗುತ್ತವೆ. ನಮ್ಮ ಜನಪದರಂತೂ ಪ್ರತಿಭಟನೆಗೆ ವಿನೂತನ ಮಾದರಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಅಲ್ಲಿ ಹಿಂಸೆಗೆ ಜಾಗ ಇರಲಿಲ್ಲ.

‘ನಾನು... ಕಸ್ತೂರ್’ ಪುಸ್ತಕದಲ್ಲಿ ಡಾ. ಅನುಪಮಾ ಅವರು ಪ್ರಸ್ತಾಪಿಸಿರುವ ಕೆಲ ಪ್ರತಿಭಟನಾ ಮಾದರಿಗಳನ್ನು ನೋಡೋಣ. ಇವೆಲ್ಲ ದೇವರಿಗೆ ಸಂಬಂಧಿಸಿದ್ದು. ಅದೂ ಕಸ್ತೂರಬಾ ಹೇಳಿಕೊಂಡಿದ್ದು. ‘ಎಷ್ಟು ದಿನ ಆದರೂ ಮಳೆಯೇ ಬರಲಿಲ್ಲ ಅಂತ ಇಟ್ಕಳಿ. ಆಗ ಮಳೆ ದೇವರನ್ನು ಬಿಸಿಲಲ್ಲಿ ಇಟ್ಟು ಸೆಕೆ ಬರಿಸ್ತಾ ಇದ್ವಿ. ಸೆಕೆ ತಾಳಕ್ಕಾಗದೆ ದೇವರು ಮಳೆ ಸುರಿಸ್ತಾನೆ ಅಂತ. ಭೋಲೇನಾಥ ಶಿವ ಇದ್ದಾನಲ್ಲ ಅವನಿಗೆ ಖಾರದಪುಡಿ ಕಲಸಿ ಹಚ್ಚತಾ ಇದ್ವಿ. ಮಳೆ ದೇವರನ್ನು ಮುಳ್ಳು ಕಂಟಿಯಲ್ಲಿ ಬಿಸಾಡೋದೂ ಇತ್ತು. ಸಮುದ್ರ ದೇವತೆಗೆ ಕಲ್ಲು ಹೊಡೆಯುತ್ತಿದ್ದೆವು, ಕಪ್ಪೆ ಹುಡುಕಿಕೊಂಡು ಬಂದು ಊರ ಮುಂದೆ ನೇತು ಹಾಕು
ತ್ತಿದ್ದೆವು, ಸಣ್ಣಪುಟ್ಟ ಗುಡಿಗಳ ದೇವರ ಮೂರ್ತಿ ಹತ್ರ ಹಾವು, ಚೇಳು ಬಿಡೋದು, ದೇವರು ಬರೋರ ಮನೆಯ ಮುಂದೆ ಅಥವಾ ಪುರೋಹಿತರ ಮನೆಯ ಮುಂದೆ ಕಲ್ಲು ರಾಶಿ ಹಾಕೋದು, ಹೀಗೆ ಭಕ್ತರಿಗೆ ಸಿಟ್ಟು ಬಂದಿದೆ ಎಂದು ದೇವರಿಗೆ ಗೊತ್ತಾಗುವ ಹಾಗೆ ಮಾಡುತಿದ್ವಿ’. ಇದು ಬರ ಬಂದಾಗ ಮಾಡುವ ಪ್ರತಿಭಟನೆಯಾದರೆ, ಮಳೆ ಹೆಚ್ಚಾದಾಗ ‘ಮಳೆಯೇ ಹೋಗು ಹೋಗು ಎಂದು ಕೆಂಡನ ಮೇಲಕ್ಕೆ ಎಸಿತಾ ಇದ್ದರು. ಸಣ್ಣ ಹುಡುಗರನ್ನ
ಬಟ್ಟೆ ಬಿಚ್ಚಿ ಹೊರಗೆ ಜಗಲಿಯಲ್ಲಿ ನಿಲ್ಲಿಸಿ ಬೆಂಕಿ ಕೊಳ್ಳಿಯನ್ನು ಹೊರಕ್ಕೆ ಬಿಸಾಡಕ್ಕೆ ಹೇಳುತ್ತಿದ್ದರು. ಕುಡುಗೋಲನ್ನು ಬೆಂಕಿಗೆ ಹಿಡಿದು ಕೆಂಪಗೆ ಕಾಯ್ಸಿ ಹೊರಗೆ ಮಳೆಗೆ ಹಿಡಿಯೋದು, ಮಳೆ ದೇವರಿಗೆ ಕೆಟ್ಟದಾಗಿ ಬೈಯ್ಯೋದು ಮಾಡುತ್ತಿದ್ದರು’. ದೇವರ ವಿರುದ್ಧ ನಾವು ಎಷ್ಟು ಸಲೀಸಾಗಿ ಪ್ರತಿಭಟನೆ ಮಾಡುತ್ತಿದ್ದೆವು ನೋಡಿ.

ಇವೆಲ್ಲ ದೇವರ ಕತೆ. ಆದರೆ ಪ್ರಭುತ್ವಕ್ಕೆ ಬುದ್ಧಿ ಹೇಳೋರು ಯಾರು? ಅದಕ್ಕೂ ಮಾದರಿಗಳನ್ನು ಗಾಂಧೀಜಿ ಅವರು ಸೃಷ್ಟಿಸಿದರು. ಆದರೆ ಅವೆಲ್ಲ ಈಗ ಅಪ್ರಸ್ತುತವಾಗಿಬಿಟ್ಟಿವೆ. ಗಾಂಧೀಜಿ ನಮಗೆ ಕೊಟ್ಟ ಅತ್ಯಂತ ದೊಡ್ಡ ಸಂದೇಶ ಎಂದರೆ ಯಾರನ್ನೂ ದ್ವೇಷ ಮಾಡಬಾರದು ಎನ್ನುವುದು. ನೂರಾರು ವರ್ಷ ನಮ್ಮನ್ನು ಶೋಷಣೆ ಮಾಡಿದ ಬ್ರಿಟಿಷರನ್ನು ದೇಶದಿಂದ ಹೊರಕ್ಕೆ ಹಾಕುವಾಗ ಮತ್ತು ನಂತರ ಕೂಡ ಅವರು ಬ್ರಿಟಿಷರನ್ನು ದ್ವೇಷಿಸಲಿಲ್ಲ. ಸ್ನೇಹಹಸ್ತ ಚಾಚಿದರು. ಈ ಮನೋಧರ್ಮವನ್ನು ನಮ್ಮ ಈಗಿನ ಪ್ರಭುಗಳಿಗೆ ಹೇಳಿಕೊಡುವವರು ಯಾರು?

ಮತ್ತೆ ಕಸ್ತೂರಬಾ ನೆನಪಾಗುತ್ತಾರೆ. ವಿಪರೀತ ಮಳೆ ಸುರಿಯುತ್ತಿದ್ದಾಗ ಮಳೆಯನ್ನು ಓಡಿಸಲು ಅವರು ಚಿಕ್ಕ ಮಕ್ಕಳನ್ನು ಬೆತ್ತಲಾಗಿಸಿ ಅವರ ಅಂಡನ್ನು ಆಕಾಶಕ್ಕೆ ಹಿಡಿಯುತ್ತಿದ್ದರಂತೆ. ಅಂಡನ್ನು ನೋಡಿ ವರುಣ ದೇವನಿಗೆ ನಾಚಿಕೆಯಾಗಿ ಮಳೆ ನಿಲ್ಲಿಸುತ್ತಾನೆ ಎನ್ನುವುದು ಆಗಿನ ಕಾಲದವರ ನಂಬಿಕೆ. ಈಗಲೂ ಪ್ರಭುತ್ವದ ಬಗ್ಗೆ ಇಂತಹುದೇ ಪ್ರತಿಭಟನೆಯನ್ನು ಮಾಡಬಹುದೇ? ನನಗೇಕೋ ಅನುಮಾನ, ವರುಣನಿಗೆ ನಾಚಿಕೆಯಾದ ಹಾಗೆ ನಮ್ಮ ಪ್ರಭುಗಳಿಗೆ ನಾಚಿಕೆಯಾಗುತ್ತದೆ ಎಂಬ ವಿಶ್ವಾಸವಿಲ್ಲ. ಅವರು ನಮಗೇ ಅಂಡು ತೋರಿಸಿ ಹೋದಾರು. ಕರ್ಮ ಕರ್ಮ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು