ವಿಧಾನಸಭೆ ಕದನ ಮುಗಿದಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾರೆ. ಪೂರ್ಣ ಪ್ರಮಾಣದ ಸಚಿವ ಸಂಪುಟವೂ ಅಸ್ತಿತ್ವಕ್ಕೆ ಬಂದಿದೆ. ಅಸಮಾಧಾನ ವ್ಯಕ್ತಪಡಿಸಿದವರಿಗೆ ಚೌಕಾಶಿ ಮಾಡುವುದಕ್ಕೂ ಅವಕಾಶ ಇಲ್ಲದಂತೆ ಎಲ್ಲ 34 ಸ್ಥಾನಗಳನ್ನೂ ಭರ್ತಿ ಮಾಡಲಾಗಿದೆ. ಸಂಪೂರ್ಣ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿರುವುದು ಕಳೆದ ಕೆಲವು ದಶಕಗಳಲ್ಲಿ ಇದೇ ಮೊದಲು. ಆದರೂ ಮುಖ್ಯಮಂತ್ರಿ ಪೂರ್ಣಾವಧಿ ಇರ್ತಾರೋ ಇಲ್ಲವೋ ಎಂಬ ಚರ್ಚೆ ಮಾತ್ರ ನಿಂತಿಲ್ಲ.
ಸಂಪೂರ್ಣ ಮಂತ್ರಿಮಂಡಲ ಅಸ್ತಿತ್ವಕ್ಕೆ ಬಂದಿದ್ದೇ ಅಧಿಕಾರ ಹಂಚಿಕೆಯ ಸೂತ್ರದ ಆಧಾರದಲ್ಲಿ ಎಂದೇ ವಿಶ್ಲೇಷಿಸಲಾಗುತ್ತಿದೆ. ಈಗಿನ ಸಂಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಮೇಲಾಗಿದೆ. ಇದಕ್ಕೆ ಕಾರಣ ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಬಯಸಿದವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ಎರಡನೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಆಯ್ಕೆಗೆ ಆದ್ಯತೆ ಸಿಗುತ್ತದೆ ಎಂದೇ ಭಾವಿಸಲಾಗಿದೆ. ಆದರೆ ಕಾಂಗ್ರೆಸ್‌ನ ಕೆಲವು ಮೂಲಗಳು ಮಾತ್ರ ಇದನ್ನು ಒಪ್ಪುತ್ತಿಲ್ಲ. ‘ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿರ್ತಾರೆ. ಮಂತ್ರಿಗಳ ಆಯ್ಕೆ ಅವರದ್ದೇ ಪರಮಾಧಿಕಾರ. ಅದರಂತೆ ಅವರು ತಮ್ಮ ಮಂತ್ರಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಹೇಳುತ್ತವೆ. ಈ ಮಾತನ್ನು ಡಿ.ಕೆ.ಶಿವಕುಮಾರ್ ಬಣ ಒಪ್ಪುತ್ತಿಲ್ಲ. ‘ಅಧಿಕಾರ ಹಂಚಿಕೆ ಸೂತ್ರ ಈಗಾಗಲೇ ನಿಗದಿಯಾಗಿದೆ. ಅದರಂತೆಯೇ ಎಲ್ಲವೂ ನಡೆಯುತ್ತಿದೆ’ ಎಂದು ಹೇಳುತ್ತಿದೆ ಈ ಬಣ. ಈ ಬಣಗಳ ಗುದ್ದಾಟದಲ್ಲಿ ಮುಖ್ಯಮಂತ್ರಿ ಕುರ್ಚಿ ಅಲುಗಾಟದಲ್ಲಿಯೇ ಇದೆ.
ವಿಧಾನಸಭೆ ಚುನಾವಣೆ ಘೋಷಣೆಯಾಗುವುದಕ್ಕೆ ಮೊದಲಿನಿಂದಲೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಅಧಿಕಾರಕ್ಕಾಗಿ ಕಿತ್ತಾಡುತ್ತಾರೆ ಎಂಬ ಸಂಶಯ ಜನರ ಮನದಲ್ಲಿ ಇತ್ತು. ವಿರೋಧ ಪಕ್ಷಗಳೂ ಇದನ್ನೇ ಹೇಳುತ್ತಿದ್ದವು. ಆದರೆ ಚುನಾವಣೆ ಹೊತ್ತಿನಲ್ಲಿ ಇಬ್ಬರೂ ಒಂದಾದರು. ಅದು ಬಲವಂತದ ಮಾಘಸ್ನಾನವಾಗಿದ್ದರೂ ಬಹಿರಂಗದಲ್ಲಿ ಏನೂ ಗೊತ್ತಾಗದಂತೆ ನಡೆದುಕೊಂಡರು. ಅಲ್ಲಲ್ಲಿ ಇಬ್ಬರೂ ಮುಖ್ಯಮಂತ್ರಿ ಆಸೆಯನ್ನು ಬಹಿರಂಗವಾಗಿ ಪ್ರಕಟಿಸಿದ್ದರೂ ಮುಖ್ಯಮಂತ್ರಿಯಾಗುವ ಕನಸು ಕಾಣುವ ಹಕ್ಕು ಎಲ್ಲರಿಗೂ ಇದೆ ಎಂದು ಅದನ್ನು ತೇಲಿಸಲಾಗಿತ್ತು. ಚುನಾವಣೆ ಫಲಿತಾಂಶ ಪ್ರಕಟವಾಗಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಯುವಾಗ ಬಣ್ಣ ಬಯಲಾಯಿತು. ಅಂತೂ ಇಂತೂ ಅಳೆದು ತೂಗಿ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಎಂದು ಘೋಷಿಸಲಾಯಿತು. ಸಿದ್ದರಾಮಯ್ಯ ಪ್ರಮಾಣವಚನವನ್ನೂ ಸ್ವೀಕರಿಸಿದರು. ಅಲ್ಲಿಗೆ ಒಂದು ಅಧ್ಯಾಯ ಮುಗಿಯಿತು. ಆದರೆ ಸಿದ್ದರಾಮಯ್ಯ ಎಷ್ಟು ದಿನಗಳ ಮುಖ್ಯಮಂತ್ರಿ ಎಂಬ ಪ್ರಶ್ನೆ ಹಾಗೆಯೇ ಉಳಿಯಿತು.
2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಇಂತಹ ಪ್ರಶ್ನೆ ಉದ್ಭವಿಸಿರಲಿಲ್ಲ. ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿದ್ದರು. ಆದರೆ 2018ರಲ್ಲಿ ಜೆಡಿಎಸ್–ಕಾಂಗ್ರೆಸ್ ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದಾಗಲೂ ಇಂತಹದೇ ಪ್ರಶ್ನೆ ಇತ್ತು. ಮೊದಲ ಮೂರು ತಿಂಗಳು ಹನಿಮೂನ್ ಪೀರಿಯಡ್ ಮುಗಿದ ನಂತರ ಮುಖ್ಯಮಂತ್ರಿ ಬದಲಾವಣೆಯ ಮಾತುಗಳು ಶುರುವಾದವು. ಅಂತೂ ಇಂತೂ ಒಂದು ವರ್ಷದಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನಗೊಂಡು ಯಡಿಯೂರಪ್ಪ ನೇತೃತ್ವದ ಸರ್ಕಾರ ಬಂದಾಗಲೂ ಮುಖ್ಯಮಂತ್ರಿ ಸ್ಥಾನದ ಸ್ಥಿರತೆ ಬಗ್ಗೆ ಪ್ರಶ್ನೆಗಳು ಇದ್ದವು. ಯಡಿಯೂರಪ್ಪ ಕೂಡ ಬಹಳ ದಿನ ಮುಖ್ಯಮಂತ್ರಿ ಹುದ್ದೆಯಲ್ಲಿ ಇರುವುದಿಲ್ಲ ಎಂದೇ ಹೇಳಲಾಗುತ್ತಿತ್ತು. ಅದು ನಿಜವೂ ಆಯಿತು. ಯಡಿಯೂರಪ್ಪ ಹೋಗಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದರು. ಆಗಲೂ ಈ ಚರ್ಚೆ ನಿಲ್ಲಲಿಲ್ಲ. ಬೊಮ್ಮಾಯಿ ಕೂಡ ಬಹಳ ದಿನ ಇರುವುದಿಲ್ಲ. ಮತ್ತೊಬ್ಬರು ಬರುತ್ತಾರೆ ಎಂಬ ಗುಸುಗುಸು ಕೊನೆಯ ಕಾಲದವರೆಗೂ ಇತ್ತು. ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಕುರ್ಚಿ ಎನ್ನುವುದು ಮ್ಯುಜಿಕಲ್ ಚೇರ್ ತರಹ ಆಗಿಬಿಟ್ಟಿದೆ.
2013ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ಇತ್ತು. 2018ರಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣ ಆಗಿತ್ತು. ಬಿಜೆಪಿ ಅತಿ ದೊಡ್ಡ ಪಕ್ಷವಾಗಿತ್ತು. 2023ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಜೀರ್ಣವಾಗುವಷ್ಟು ಬಹುಮತ ಇದೆ. ಇಷ್ಟೊಂದು ಬಹುಮತ ಇದ್ದರೂ ಮುಖ್ಯಮಂತ್ರಿ ಸ್ಥಾನದ ಹಂಚಿಕೆಯ ಪ್ರಶ್ನೆ ಬಗೆಹರಿದಿಲ್ಲ. ಮತದಾರರಲ್ಲಿ ಶಂಕೆ ಇದ್ದೇ ಇದೆ. ಸಿದ್ದರಾಮಯ್ಯ, ಶಿವಕುಮಾರ್ ಇಬ್ಬರೂ ಒಂದಾಗಿ ಇದನ್ನು ಬಗೆಹರಿಸದಿದ್ದರೆ ಮತದಾರ ಮತ್ತೆ ಪೆಟ್ಟು ಕೊಡಲು ಸಿದ್ಧನಾಗಿಯೇ ಇರುತ್ತಾನೆ.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಶಿವಕುಮಾರ್ ಹಾಗೂ ಎಂಟು ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಸಚಿವ ಎಂ.ಬಿ.ಪಾಟೀಲ ಅವರು ‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿಯಾಗಿರ್ತಾರೆ’ ಎಂಬ ಹೇಳಿಕೆಯನ್ನು ನೀಡುವ ಮೂಲಕ ಕಿಡಿ ಹೊತ್ತಿಸಿದರು. ಇದಕ್ಕೆ ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಬಿಜೆಪಿ ಮುಖಂಡರೂ ಇದಕ್ಕೆ ಸಾಕಷ್ಟು ತುಪ್ಪ ಸುರಿದರು. ಮಾರನೇ ದಿನ ಕೂಡ ಎಂ.ಬಿ.ಪಾಟೀಲ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ‘ಹೈಕಮಾಂಡ್ ಹೇಳಿದ್ದನ್ನೇ ನಾನು ಹೇಳ್ತಿದೀನಿ’ ಎಂದು ಹೇಳಿದರು. ಇದು ಎಷ್ಟು ತೀವ್ರವಾಯಿತು ಎಂದರೆ ಹೈಕಮಾಂಡ್ ಮಧ್ಯಪ್ರವೇಶಿಸಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಯಾರೂ ಮಾತನಾಡಬಾರದು ಎಂದು ಕಟ್ಟೆಚ್ಚರ ನೀಡಿತು.
ಈಗ ಇತಿಹಾಸ ಬೇಗ ಬೇಗ ಮರುಕಳಿಸುತ್ತದೆ. ಬಸವರಾಜ ಬೊಮ್ಮಾಯಿ ಕಾಲದಲ್ಲಿಯೂ ಹೀಗೆಯೇ ಆಗಿತ್ತು. ಬೊಮ್ಮಾಯಿ ಸಂಪುಟದಲ್ಲಿದ್ದ ಕೆಲವರು ಬೇಕಾಬಿಟ್ಟಿ ಮಾತನಾಡುತ್ತಿದ್ದರು. ಕೂಗುಮಾರಿಯಂತೆ ಇದ್ದ ಕೆಲವು ಶಾಸಕರಂತೂ ಲಂಗುಲಗಾಮು ಇಲ್ಲದೆ ಹೇಳಿಕೆ ನೀಡುತ್ತಿದ್ದರು. ತಮ್ಮ ಹೇಳಿಕೆಯ ಮೂಲಕ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿದ್ದರು. ಭ್ರಮೆಯಲ್ಲಿಯೇ ಇದ್ದ ಬಿಜೆಪಿ ಮುಖಂಡರಿಗೆ ಅದರ ಅರಿವು ಆಗ ಆಗಿರಲಿಲ್ಲ. ವಿಧಾನಸಭೆ ಫಲಿತಾಂಶ ಬಹುಶಃ ಅರಿವು ಮೂಡಿಸಿರಬಹುದು. ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇವರನ್ನೆಲ್ಲಾ ನಿಯಂತ್ರಣದಲ್ಲಿ ಇಡಲು ಸಾಧ್ಯವೂ ಆಗಿರಲಿಲ್ಲ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದು ಇನ್ನೂ ಎರಡು ವಾರ ಕಳೆದಿಲ್ಲ. ಆಗಲೇ ಕೆಲವು ಸಚಿವರು ಅನಗತ್ಯ ಮಾತುಗಳನ್ನು ಬಿಡುಬೀಸಾಗಿ ನೀಡತೊಡಗಿದ್ದಾರೆ. ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿಯಾಗಿರ್ತಾರೆ ಎಂದು ಹೇಳುವುದು ಅನಗತ್ಯವಾಗಿತ್ತು. ಅದೇ ರೀತಿ ಪ್ರಿಯಾಂಕ್ ಖರ್ಗೆ ಅವರು ‘ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಎಲ್ಲ ವಿವಾದಾತ್ಮಕ ಕಾಯ್ದೆಗಳನ್ನು ವಾಪಸು ಪಡೆಯುತ್ತೇವೆ. ಸಂವಿಧಾನ ವಿರೋಧಿ, ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸುವ ಯಾವುದೇ ಸಂಘಟನೆ, ಅದು ಆರ್‌ಎಸ್ಎಸ್ ಆಗಿದ್ದರೂ ಕೂಡ ನಿಷೇಧಿಸುತ್ತೇವೆ’ ಎಂಬ ಹೇಳಿಕೆಯನ್ನು ನೀಡಿದರು. ಇದೂ ಕೂಡ ಅನಗತ್ಯವಾಗಿತ್ತು.
ತಾನು ನೀಡಿದ್ದ ಗ್ಯಾರಂಟಿಗಳನ್ನು ಎರಡನೇ ಸಚಿವ ಸಂಪುಟ ಸಭೆಯಲ್ಲಿಯೂ ಜಾರಿಗೆ ತರಲು ಸಾಧ್ಯವಾಗದೆ ಮತದಾರರ ಕೆಂಗಣ್ಣಿಗೆ ಗುರಿಯಾಗಿರುವ ಮತ್ತು ವಿರೋಧ ಪಕ್ಷವಾದ ಬಿಜೆಪಿಗೆ ಬಲವಾದ ಅಸ್ತ್ರವನ್ನು ನೀಡಿರುವಾಗ ಆರ್‌ಎಸ್ಎಸ್, ಬಜರಂಗದಳದ ವಿಷಯವನ್ನೂ ಪ್ರಸ್ತಾಪಿಸಿ ಇನ್ನಷ್ಟು ಅಸ್ತ್ರಗಳನ್ನು ಕೊಡುವುದು ನಿಜ ರಾಜಕಾರಣಿಗಳ ಲಕ್ಷಣವಲ್ಲ. ತಪ್ಪಾಗಿದ್ದನ್ನು ಸರಿ ಮಾಡಬೇಕು. ಅದನ್ನು ಟಾಂ ಟಾಂ ಮಾಡುತ್ತಾ ಹೋಗಬೇಕಿಲ್ಲ. ಇದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮಂತ್ರಿಗಳಿಗೆ ಅರ್ಥವಾದರೆ ಅವರಿಗೂ ಕ್ಷೇಮ. ಜನರಿಗೂ ಕ್ಷೇಮ.
ಕರ್ನಾಟಕದ ಜನರು ಈಗಾಗಲೇ ಹಿಜಾಬ್, ಆಜಾನ್, ಹಲಾಲ್, ಮುಸ್ಲಿಂ ವ್ಯಾಪಾರಿಗಳಿಗೆ ವಿರೋಧ, ಕೋಮು ಆಧಾರಿತ ಹತ್ಯೆ ಮುಂತಾದ ಕಾರಣಗಳಿಂದ ಬಹಳಷ್ಟು ನೊಂದಿದ್ದಾರೆ. ‘ಸರ್ವ ಜನಾಂಗದ ಶಾಂತಿಯ ತೋಟ’ ನಿರ್ಮಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಕಾಂಗ್ರೆಸ್ ಪಕ್ಷ ಆ ನಿಟ್ಟಿನತ್ತ ಹೆಜ್ಜೆ ಇಡಬೇಕೇ ವಿನಾ ಬಾಯಿ ಬಡಾಯಿ ಸಲ್ಲ. ಮತದಾರರಿಗೆ ಎಲ್ಲರ ಬಾಯಿ ಮುಚ್ಚಿಸುವ ಕಲೆ ಗೊತ್ತು. ಸಚಿವರು ಅಷ್ಟು ತಿಳಿದುಕೊಂಡರೆ ಸಾಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.