ಮಹಾನ್ ನಾಯಕರೊಂದಿಗೆ ತಮ್ಮ ಇಷ್ಟದ ಮುಖಂಡರನ್ನು ಹೋಲಿಸಿ ಹೊಗಳುವುದು ನಮ್ಮ ರಾಜಕೀಯ ವ್ಯಕ್ತಿಗಳಿಗೆ ಚಾಳಿಯೇ ಆಗಿಬಿಟ್ಟಿದೆ. ತಮ್ಮ ನಾಯಕರು ಇಂದ್ರ, ಚಂದ್ರ, ಮಹೇಂದ್ರ ಎಂದೆಲ್ಲ ಹೊಗಳುವುದು, ಚಾಣಕ್ಯ ಎಂದೆಲ್ಲ ಅಟ್ಟಕ್ಕೇರಿಸಿ ಆ ಮಹಾತ್ಮರಿಗೆ ಇರುವ ಘನತೆ, ಗೌರವ ಕಡಿಮೆ ಮಾಡುವವರಿಗೆ ಏನನ್ನೋಣ? ಇದನ್ನು ತಡೆಯಲು ಏನು ಮಾಡೋಣ?

ಈ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಪತ್ನಿ ಅಮೃತಾ ಫಡಣವೀಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ರಾಷ್ಟ್ರಪಿತ’ ಎಂದು ಕರೆದಿದ್ದರು. ಕವಿ ಸಿದ್ಧಲಿಂಗಯ್ಯ ಅವರು ಯಡಿಯೂರಪ್ಪ ಅವರನ್ನು ‘ಅಭಿನವ ಬಸವಣ್ಣ’ ಎಂದು ಬಣ್ಣಿಸಿದ್ದರು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತ ತಮ್ಮ ತಂದೆ ಮಿಗಿಲು ಎಂದು ಹೇಳುವ ಮೂಲಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿಗೆ ಮಾಡಿದ ಕೆಲಸಗಳಿಗಿಂತ ಹೆಚ್ಚು ಕೆಲಸಗಳನ್ನು ನನ್ನ ತಂದೆ ಸಿದ್ದರಾಮಯ್ಯ ಅವರು ಮೈಸೂರಿಗೆ ಮಾಡಿದ್ದಾರೆ’ ಎಂದು ಹೇಳುವ ಮೂಲಕ ಯತೀಂದ್ರ ವಿವಾದದ ಕಿಚ್ಚು ಹೊತ್ತಿಸಿದ್ದಾರೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ‘ನಾಲ್ವಡಿ ಅವರು ಬರೀ ಮೈಸೂರಿಗಷ್ಟೇ ಒಳ್ಳೆಯದು ಮಾಡಿದ್ದರು. ಸಿದ್ದರಾಮಯ್ಯ ಇಡೀ ಕರ್ನಾಟಕಕ್ಕೆ ಒಳ್ಳೆಯದು ಮಾಡಿದ್ದಾರೆ’ ಎಂದು ಮತ್ತಷ್ಟು ನಗೆಪಾಟಲಿಗೆ ಈಡಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ದೇವರಾಜ ಅರಸು ಅವರಿಗೆ ಹೋಲಿಸುವ ಕೆಲಸವನ್ನು ಅವರ ಹಿಂಬಾಲಕರು ಬಹಳ ಕಾಲದಿಂದಲೂ ಮಾಡುತ್ತಿದ್ದರು. ಈಗ ಅವರ ಪುತ್ರ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತ ತಮ್ಮ ತಂದೆ ಮೇಲು ಎಂದು ಹೇಳಿಕೊಂಡಿದ್ದಾರೆ.

ಈ ನೆಲದ ಯಾವುದೇ ಮಹಾತ್ಮರೊಂದಿಗೆ ಯಾರನ್ನೂ ಹೋಲಿಸುವುದು ತರವಲ್ಲ. ಸಿನಿಮಾ ಕ್ಷೇತ್ರದಲ್ಲಿ ಜೂನಿಯರ್ ರಾಜ್ಕುಮಾರ್, ಜೂನಿಯರ್ ವಿಷ್ಣುವರ್ಧನ್ ಇದ್ದ ಹಾಗೆ ರಾಜಕೀಯದಲ್ಲಿಯೂ ಯಾರನ್ನೇ ಆಗಲಿ ಮಹಾತ್ಮರೊಂದಿಗೆ ಹೋಲಿಸಿದರೆ ಅವರು ಜೂನಿಯರ್ ಆಗಿರುತ್ತಾರೆಯೇ ವಿನಾ ಒರಿಜಿನಲ್ ಆಗುವುದಿಲ್ಲ.

ಒಂದು ಕಾಲೇಜಿನಲ್ಲಿ ಒಬ್ಬ ಹುಡುಗ ಕಿಶೋರ್ ಕುಮಾರ್ ತರಹವೇ ಹಾಡುತ್ತಿದ್ದ. ಅವನನ್ನು ಎಲ್ಲರೂ ‘ಜೂನಿಯರ್ ಕಿಶೋರ್ ಕುಮಾರ್’ ಎಂದೇ ಕರೆಯುತ್ತಿದ್ದರು. ಒಮ್ಮೆ ಆ ಕಾಲೇಜಿನ ವಾರ್ಷಿಕೋತ್ಸವಕ್ಕೆ ಸ್ವತಃ ಕಿಶೋರ್ ಕುಮಾರ್ ಅವರೇ ಬಂದರು. ಅವರ ಮುಂದೆ ಈತ ಹಾಡಿದ. ಅವನ ಹಾಡನ್ನು ಮೆಚ್ಚಿದ ಕಿಶೋರ್ ಕುಮಾರ್ ‘ನೀನು ನನ್ನ ಹಾಗೆ ಚೆನ್ನಾಗಿ ಹಾಡುತ್ತೀಯ. ನೀನು ನನ್ನ ಹಾಗೆ ಹಾಡುವುದು ಮುಖ್ಯವಲ್ಲ. ನೀನು ನಿನ್ನ ಹಾಗೆ ನಿನ್ನದೇ ಶೈಲಿಯಲ್ಲಿ ಹಾಡಿದರೆ ಸಂಗೀತ ಕ್ಷೇತ್ರದಲ್ಲಿ ಉಳಿಯುತ್ತೀಯ. ಇಲ್ಲವಾದರೆ ಇತಿಹಾಸ ನಿನ್ನನ್ನು ಮರೆತು ಬಿಡುತ್ತದೆ. ನೀನು ಯಾವಾಗಲೂ ಜೂನಿಯರ್ ಕಿಶೋರ್ ಕುಮಾರ್ ಆಗಿಯೇ ಇರುತ್ತೀಯ. ಅನುಕರಣೆ ಬಿಡು. ಸ್ವಂತಿಕೆ ಬೆಳೆಸಿಕೊ’ ಎಂದು ಹೇಳಿದ್ದರು. ಅದೇ ಮಾತನ್ನು ರಾಜಕಾರಣಿಗಳಿಗೂ ಹೇಳಬೇಕು. ಸಿದ್ದರಾಮಯ್ಯ ಸಿದ್ದರಾಮಯ್ಯ ಆಗಿರಬೇಕೇ ವಿನಾ ಅವರು ದೇವರಾಜ ಅರಸರೂ ಆಗಬೇಕಿಲ್ಲ, ನಾಲ್ವಡಿ ಕೃಷ್ಣರಾಜ ಒಡೆಯರ್ ಕೂಡ ಆಗಬೇಕಿಲ್ಲ. ಬಸವಣ್ಣ, ಬುದ್ಧ, ಅಂಬೇಡ್ಕರ್, ಗಾಂಧೀಜಿ ಮುಂತಾದ ಮಹಾತ್ಮರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಾ ಈಗಿನ ಕಾಲದ ಅಗತ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಿ ತಮ್ಮದೇ ಛಾಪು ಮೂಡಿಸಬೇಕೇ ವಿನಾ ಡೂಪ್ಲಿಕೇಟ್ ಆಗಬಾರದು. ಇನ್ನು ಸಿದ್ದರಾಮಯ್ಯ ಅವರನ್ನು ನಾಲ್ವಡಿ ಅವರಿಗೆ ಹೋಲಿಸುವುದಂತೂ ಹುಚ್ಚುತನದ ಪರಮಾವಧಿ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ‘ಗೃಹಜ್ಯೋತಿ’ ಯೋಜನೆಯನ್ನು ಜಾರಿ ಮಾಡಿರಬಹುದು. 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಿರಬಹುದು. ಅವೆಲ್ಲ ಸರ್ಕಾರದ ಯೋಜನೆಗಳೇ ವಿನಾ ಸಿದ್ದರಾಮಯ್ಯ ಅವರ ವೈಯಕ್ತಿಕ ಯೋಜನೆಗಳಲ್ಲ. ಗೃಹಜ್ಯೋತಿ ಜಾರಿಗೊಳಿಸಿದ್ದಕ್ಕೆ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸೋಣ. ಏನೆಲ್ಲಾ ಟೀಕೆ ಟಿಪ್ಪಣಿ ಜೊತೆಗೆ, ಸಂಕಷ್ಟಗಳ ನಡುವೆ ಈ ಯೋಜನೆ ಮುಂದುವರಿಸುತ್ತಿರುವುದಕ್ಕೆ ಶಹಬ್ಬಾಸ್ ಎನ್ನೋಣ. ಹಾಗಂತ ಅವರನ್ನು ‘ಮನೆ ಮನೆ ದೀಪ, ಕೃಷ್ಣರಾಜ ಭೂಪ’ ಎಂದು ಕರೆಸಿಕೊಂಡ ನಾಲ್ವಡಿ ಅವರ ಜೊತೆಗೆ ಹೋಲಿಸುವುದು ತರವಲ್ಲ.

ಇಡೀ ಏಷ್ಯಾದಲ್ಲಿಯೇ ಮೊಟ್ಟಮೊದಲ ಬಾರಿಗೆ ವಿದ್ಯುತ್ ಉತ್ಪಾದನೆ ಆರಂಭವಾಗಿದ್ದು 1902ರಲ್ಲಿ, ಶಿವನಸಮುದ್ರದಲ್ಲಿ. ನಾಲ್ವಡಿ ಅವರು ತಮ್ಮ ಹನ್ನೊಂದನೇ ವರ್ಷದಲ್ಲಿ ಮೈಸೂರು ಮಹಾರಾಜರಾಗಿ ಪಟ್ಟಕ್ಕೆ ಬಂದಿದ್ದರೂ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದು 1902ರ ಆಗಸ್ಟ್ 8ರಂದು. ಅದೇ ವರ್ಷ ವಿದ್ಯುತ್ ಉತ್ಪಾದನೆಯೂ ಆರಂಭವಾಯಿತು. ಹೀಗೆ ಉತ್ಪಾದನೆಯಾದ ವಿದ್ಯುತ್ ಅನ್ನು ಅವರು ತಮ್ಮ ಮನೆಗೆ ಹಾಕಿಕೊಳ್ಳಲಿಲ್ಲ. ರಾಜ್ಯದಲ್ಲಿ ಪ್ರಥಮ ಬಾರಿಗೆ ಉತ್ಪಾದನೆಯಾದ ವಿದ್ಯುತ್ ಮೈಸೂರು ಅರಮನೆ ಬೆಳಗಿಸಲು ಬಳಕೆಯಾಗಲಿಲ್ಲ. ಬೆಂಗಳೂರು ಅರಮನೆಯೂ ಝಗಮಗಿಸಲಿಲ್ಲ. ಮೊದಲು ವಿದ್ಯುತ್ ಸರಬರಾಜಾಗಿದ್ದು ಕೋಲಾರದ ಚಿನ್ನದ ಗಣಿಗೆ. ಚಿನ್ನದ ಅದಿರು ತೆಗೆಯುವುದಕ್ಕೆ ಬಳಸಲಾಯಿತು. ನಂತರ ವಿದ್ಯುತ್ ಬೆಂಗಳೂರು ನಗರಕ್ಕೆ ಬಂತು. ಆಮೇಲಷ್ಟೆ ಅದು ಮೈಸೂರು ಅರಮನೆಗೆ ಬಂದಿದ್ದು. ಆ ನಂತರ ಹಳ್ಳಿ ಹಳ್ಳಿಗೂ ವಿದ್ಯುತ್ ದೀಪ ಬಂತು. ಅದಕ್ಕೇ ಮೈಸೂರು ರಾಜ್ಯದ ಜನರು ಕೃಷ್ಣರಾಜ ಒಡೆಯರ್ ಅವರನ್ನು ‘ಮನೆ ಮನೆ ದೀಪ ಕೃಷ್ಣರಾಜ ಭೂಪ’ ಎಂದು ಕರೆದರು. ಆಗಷ್ಟೇ ಪಟ್ಟಕ್ಕೆ ಏರಿ ಯೌವನದ ಹುರುಪಿನಲ್ಲಿದ್ದ ಮಹಾರಾಜ, ತನ್ನ ಅರಮನೆಗೆ ವಿದ್ಯುತ್ ದೀಪವನ್ನು ಮೊದಲು ಹಾಕಿಸಿಕೊಂಡಿದ್ದರೆ ಆಕ್ಷೇಪಿಸುವವರು ಯಾರೂ ಇರಲಿಲ್ಲ. ಆದರೆ, ನಾಲ್ವಡಿ ಅವರು ಹಾಗೆ ಮಾಡಲಿಲ್ಲ.

ಕನ್ನಂಬಾಡಿ ಕಟ್ಟೆಯ ನಿರ್ಮಾಣ ಕಾರ್ಯ ಆರಂಭವಾಗಿದ್ದು 1911ರಲ್ಲಿ. ಕಾಮಗಾರಿ ಪೂರ್ಣವಾಗಿದ್ದು 1931ರಲ್ಲಿ. 124 ಅಡಿ ನೀರು ಶೇಖರಿಸಿಕೊಳ್ಳಲು 130 ಅಡಿ ಎತ್ತರದ ಅಣೆಕಟ್ಟು ನಿರ್ಮಾಣ ಮಾಡಬೇಕಿತ್ತು. ಅದರ ಅಂದಾಜು ವೆಚ್ಚ ಆಗಿನ ಕಾಲಕ್ಕೆ ₹2.75 ಕೋಟಿ. ಆಗ ಮೈಸೂರು ಸಂಸ್ಥಾನದ ವಾರ್ಷಿಕ ಆದಾಯ ಇದ್ದಿದ್ದು ₹2.32 ಕೋಟಿ. ಅಂದರೆ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣಕ್ಕೆ ಮೈಸೂರು ಮಹಾರಾಜರ ಬಳಿ ಹಣ ಇರಲಿಲ್ಲ. ಹಾಗಂತ ರಾಜ್ಯದ ಜನರಿಗೆ ಒಳ್ಳೆಯದಾಗುವ ಅಣೆಕಟ್ಟು ಯೋಜನೆಯನ್ನು ಕೈಬಿಡುವುದೂ ಸಾಧ್ಯ ಇರಲಿಲ್ಲ. ಅದಕ್ಕೆ ನಾಲ್ವಡಿ ಅವರು ಅರಮನೆಯ ರಾಜರ ಖಾಸಗಿ ಭಂಡಾರದಲ್ಲಿ ಇದ್ದ ವಜ್ರ ವೈಢೂರ್ಯ, ಚಿನ್ನದ ಆಭರಣ ಮತ್ತು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡು ಮುಂಬೈಗೆ ಹೋಗಿ ಅವನ್ನು ಮಾರಾಟ ಮಾಡಿ, ಬಂದ ಹಣವನ್ನು ಅಣೆಕಟ್ಟು ನಿರ್ಮಾಣಕ್ಕೆ ನೀಡಿದರು. ಅರಮನೆಯ ಖಾಸಗಿ ಭಂಡಾರದಲ್ಲಿ ಸುಮಾರು ನಾಲ್ಕು ಮೂಟೆ ಆಭರಣಗಳು ಇದ್ದವು. ಅದೆಲ್ಲವನ್ನೂ ಅಣೆಕಟ್ಟೆ ನಿರ್ಮಾಣಕ್ಕೆ ನೀಡಲಾಯಿತು. ರಾಜ್ಯದ ಒಳಿತಿನ ಯೋಜನೆಗೆ ಸ್ವಂತ ಹಣವನ್ನು ಹೀಗೆ ಉಪಯೋಗಿಸುವ ರಾಜಕಾರಣಿಗಳನ್ನು ಈಗ ಊಹಿಸಲು ಸಾಧ್ಯವಿದೆಯೇ? ರಾಜ್ಯದ ಬಜೆಟ್ ಗಾತ್ರಕ್ಕಿಂತ ಹೆಚ್ಚಿನ ಹಣವನ್ನು ಒಂದು ಯೋಜನೆಗೆ ವೆಚ್ಚ ಮಾಡುವ ದುಸ್ಸಾಹಸಕ್ಕೆ ಈಗ ಯಾರಾದರೂ ಇಳಿಯಬಹುದೇ?

2013ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ಮೊಟ್ಟಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ‘ಅನ್ನಭಾಗ್ಯ’ ಯೋಜನೆಯನ್ನು ಪ್ರಕಟಿಸಿದರು. ಆ ಯೋಜನೆ ಈಗಲೂ ಚಾಲ್ತಿಯಲ್ಲಿದೆ. ಆದರೆ, ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣ ಮಾಡಿ ಲಕ್ಷಾಂತರ ರೈತರ ಬಾಳಿನಲ್ಲಿ ಬೆಳಕು ಮೂಡಿಸಿದ ನಾಲ್ವಡಿ ಅವರ ಜೊತೆಗೆ ಇದನ್ನು ಹೋಲಿಸಲು ಸಾಧ್ಯವಿಲ್ಲ.

ಮೈಸೂರಿಗೆ ಹಲವಾರು ಐಡೆಂಟಿಟಿಗಳಿವೆ. ಅವುಗಳಲ್ಲಿ ಮೈಸೂರು ಮಹಾರಾಜರ ಆಡಳಿತ ಕೂಡಾ ಒಂದು. ಅದಕ್ಕಾಗಿಯೇ ಮಹಾತ್ಮ ಗಾಂಧೀಜಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ‘ರಾಜ ಋಷಿ’ ಎಂದು ಕರೆದಿದ್ದರು. ಮೈಸೂರು ರಾಜ್ಯವನ್ನೇ ಅವರು ರಾಮರಾಜ್ಯ ಎಂದು ಹೆಸರಿಸಿದ್ದರು. ‘ಭಾರತದ ಎಲ್ಲ ರಾಜಮಹಾರಾಜರು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತೆಯೇ ಆಡಳಿತ ನಡೆಸಿದ್ದರೆ ಭಾರತಕ್ಕೆ ಸ್ವಾತಂತ್ರ್ಯವೇ ಬೇಕಾಗಿರಲಿಲ್ಲ’ ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಹೇಳಿದ್ದರು. ಅಂತಹ ಅಪರೂಪದ ಆದರ್ಶ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಮೈಸೂರಿನ ರಾಜರು ಯುದ್ಧಕ್ಕೆ ಪ್ರಸಿದ್ಧರಲ್ಲ. ಅವರು ಯುದ್ಧ ಮಾಡಿದ್ದು ಕಡಿಮೆ. ಅವರ ಗಮನ ಏನಿದ್ದರೂ ಒಳ್ಳೆಯ ಆಡಳಿತ ನೀಡುವುದಕ್ಕಷ್ಟೇ ಸೀಮಿತವಾಗಿತ್ತು. ಆಗ ಇದ್ದಿದ್ದು ಪ್ರಜಾಪ್ರಭುತ್ವ ಅಲ್ಲ. ರಾಜಪ್ರಭುತ್ವ. ಆದರೆ, ಅವರು ಪ್ರಜೆಗಳ ಹಿತಕ್ಕಾಗಿ ಆಡಳಿತ ನಡೆಸಿದರು. ಈಗ ಪ್ರಜಾಪ್ರಭುತ್ವ ಎಂದು ಹೇಳುವ ಆಡಳಿತ ವ್ಯವಸ್ಥೆ ಇದೆ. ಆದರೆ, ಪ್ರಜೆಗಳಿಗೆ ಅನುಕೂಲವಾಗುವ ಆಡಳಿತ ಮಾಡಲಾಗುತ್ತಿದೆಯೇ ಎನ್ನುವುದು ನಾವೆಲ್ಲರೂ ಕೇಳಿಕೊಳ್ಳಬೇಕಾದ ಪ್ರಶ್ನೆಯಾಗಿದೆ.

1881ರಲ್ಲಿ ಚಾಮರಾಜೇಂದ್ರ ಒಡೆಯರ್ ಕಾಲದಲ್ಲಿಯೇ ‘ಪ್ರಜಾಪ್ರತಿನಿಧಿ ಸಭೆ’ ಆರಂಭವಾಗಿತ್ತು. 1907ರಲ್ಲಿ ಕೃಷ್ಣರಾಜ ಒಡೆಯರ್ ಅವರು ನ್ಯಾಯವಿಧಾಯಕ ಸಭೆಯನ್ನು ಆರಂಭಿಸಿ, ಜನಸಾಮಾನ್ಯರೂ ಆಡಳಿತದಲ್ಲಿ ಭಾಗಿಯಾಗುವಂತೆ ಮಾಡಿದರು. ‘ಪ್ರಜಾಪ್ರತಿನಿಧಿ ಸಭೆ’ ಆರಂಭವಾದಾಗಿನಿಂದಲೂ ಅದರ ಕಲಾಪಗಳು ಇಂಗ್ಲಿಷ್ನಲ್ಲಿಯೇ ನಡೆಯುತ್ತಿದ್ದವು. ನಾಲ್ವಡಿ ಅವರು ಕಲಾಪವನ್ನು ಕನ್ನಡದಲ್ಲಿ ನಡೆಯುವಂತೆ ಮಾಡಿದರು. ಪ್ರಪಂಚದ ಮುಂದುವರಿದ ದೇಶಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಬೇಕು ಎಂಬ ಚಳವಳಿ ನಡೆಯುತ್ತಿದ್ದ ಕಾಲದಲ್ಲಿ, 1923ರಲ್ಲಿಯೇ ಮೈಸೂರು ರಾಜ್ಯದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಗಿತ್ತು. ಎಲ್ಲ ರಂಗದಲ್ಲಿಯೂ ಎಲ್ಲ ಜನಾಂಗದ ಜನರು ಇರಬೇಕು ಎಂದು ಪ್ರತಿಪಾದಿಸುತ್ತಿದ್ದ ಕೃಷ್ಣರಾಜ ಒಡೆಯರ್ ಅವರು ಹಿಂದುಳಿದ ವರ್ಗ, ದಲಿತರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಇಡೀ ಭಾರತದಲ್ಲಿಯೇ ಮೊದಲ ಬಾರಿಗೆ ಹಿಂದುಳಿದ ವರ್ಗಗಳ ಆಯೋಗ (ಮಿಲ್ಲರ್ ಆಯೋಗ) ರಚಿಸಿದವರು ಅವರು. ಪರಿಶಿಷ್ಟರ ವಿದ್ಯಾಭ್ಯಾಸಕ್ಕೆ ಉಚಿತ ಶಿಕ್ಷಣ ವ್ಯವಸ್ಥೆ ಮಾಡಿದ್ದ ಅವರು ಪರಿಶಿಷ್ಟರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಪ್ರೋತ್ಸಾಹಧನವನ್ನೂ ನೀಡುತ್ತಿದ್ದರು. ಗಾಂಧೀಜಿ ಅವರು ಹರಿಜನೋದ್ಧಾರ ಕಾರ್ಯಕ್ರಮ ಆರಂಭಿಸುವುದಕ್ಕೆ ಮೊದಲೇ ಮೈಸೂರಿನಲ್ಲಿ ಅದು ಆರಂಭವಾಗಿತ್ತು. ಇತಿಹಾಸವನ್ನು ಅರಿತು ಮಾತನಾಡಿದರೆ, ಹೋಲಿಕೆ ಮಾಡುವಾಗ ವಿವೇಕವನ್ನು ಬಳಸಿದರೆ, ಯತೀಂದ್ರ ಮತೀಂದ್ರ ಕೂಡ ಆಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.