ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರವೀಂದ್ರ ಭಟ್ಟ ಅಂಕಣ - ಅನುಸಂಧಾನ| ಕುಚೇಲರ ಕನಸುಗಳು ಹೆಚ್ಚೇನಿಲ್ಲ!

ಮತಭಿಕ್ಷೆಗೆ ಹೊರಟುನಿಂತ ರಾಜಕೀಯ ಪಕ್ಷಗಳ ಮುಖಂಡರಿಗೊಂದು ಪತ್ರ
Last Updated 28 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಪ್ರಿಯ ರಾಜಕಾರಣಿಗಳೇ,

ನನಗೆ ಗೊತ್ತು. ಇನ್ನೇನು ವಿಧಾನಸಭೆ ಚುನಾವಣೆ ಬಂದೇ ಬಿಡ್ತು. ನೀವು ನಮ್ಮ ಮನೆಯ ಬಾಗಿಲಿಗೆ ಬರ್ತೀರಿ. ಭೂಮಿ ಉದ್ದಕ್ಕೂ ಮೈ ಬಗ್ಗಿಸುತ್ತೀರಿ. ಅಂಗೈಯಲ್ಲಿ ಆಕಾಶ ತೋರಿಸ್ತೀರಿ. ಮುಂಗೈಯಲ್ಲಿ ಮ್ಯಾಜಿಕ್

ರವೀಂದ್ರ ಭಟ್ಟ
ರವೀಂದ್ರ ಭಟ್ಟ

ಮಾಡ್ತೀರಿ. ಚಿಟಿಕೆ ಹೊಡೆಯುವುದರಲ್ಲಿ ನಮ್ಮ ಕನಸು ನನಸು ಮಾಡುವ ಭರವಸೆ ಕೊಡ್ತೀರಿ. ಸಾಲ ಕೊಡ್ತೀವಿ ಅಂತೀರಿ. ಸಬ್ಸಿಡಿ ಕೊಡ್ತೀವಿ ಅಂತೀರಿ. ಮನೆ ಕಟ್ಟಿಸಿಕೊಡ್ತೀವಿ ಅಂತೀರಿ. ನಮ್ಮ ಒಂದು ಮತಕ್ಕಾಗಿ ಮನಸೋ ಇಚ್ಛೆ ಮಾತನಾಡುತ್ತೀರಿ. ಮತ ಕೊಟ್ಟಾದ ಮೇಲೆ ಕೊಟ್ಟವ ಕೋಡಂಗಿ ಅಂತೀರಿ. ಬೆಲೆ ಏರಿಸಲ್ಲ ಅಂತೀರಿ. ಉಚಿತವಾಗಿಯೇ ಏನೇನೋ ಕೊಡ್ತೀವಿ ಅಂತೀರಿ. ಆಮೇಲೆ ನಾವು ತಿನ್ನುವ ಅನ್ನದ ಬಟ್ಟಲಿಗೆ ಬೆಲೆ ಏರಿಕೆಯ ಬಿಸಿ ತಾಗಿದರೆ ‘ಡಾಲರ್ ಬಲಗೊಳ್ಳುತ್ತಿದೆ ಏನ್ ಮಾಡ್ಲಿ’ ಅಂತೀರಿ. ಅದೆಲ್ಲ ಬಿಟ್ಟುಬಿಡಿ. ನಮ್ಮ ಕನಸುಗಳಿಗೂ ಕೊಂಚ ಬೆಲೆ ಕೊಡಿ ಪ್ಲೀಸ್.

ನೀವು ಈಗಾಗಲೇ ನಮ್ಮ ಮನೆಯ ಕಡೆಗೆ ಹೊರಟು ನಿಂತಿದ್ದೀರಿ ಅಂತಲೂ ಗೊತ್ತು. ಅದು ಭಾರತ ಜೋಡೊ ಯಾತ್ರೆ ನೆಪದಲ್ಲಿ, ಜನಸಂಕಲ್ಪ ಯಾತ್ರೆ ಹೆಸರಿನಲ್ಲಿ, ಪಂಚರತ್ನದ ವರಸೆಯಲ್ಲಿ ಬರ್ತಾ ಇದ್ದೀರಿ. ಬನ್ನಿ, ಬನ್ನಿ. ನಿಮ್ಮ ಮಾತುಗಳನ್ನು ನಾವು ಕೇಳ್ತೀವಿ. ಆದರೆ ನಿಮ್ಮ ಭಾಷಣಗಳಲ್ಲಿ ಬರೀ ನಿಮ್ಮ ಕನಸುಗಳೇ ತುಂಬಿವೆ. ಬಣ್ಣ ಬಣ್ಣದ ಮಾತಲ್ಲಿ ನಿಮ್ಮ ಸಾಧನೆ ವರ್ಣಿಸ್ತೀರಿ. ನಮಗಾಗಿ ಸ್ವರ್ಗ ಧರೆಗಿಳಿಸುತ್ತೀವಿ ಎನ್ನುತ್ತೀರಿ. ಆದರೆ ಅದರಲ್ಲಿ ನಮಗೆ ಜಾಗವೇ ಇಲ್ಲವಲ್ಲ. ನೀವು ವೇದಿಕೆಯಲ್ಲಿ ಹರಿಸುವ ಕಣ್ಣೀರು, ಮಾತಿನಲ್ಲಿ ಕಾರುವ ಗೊಬ್ಬರ ನಿಮಗೆ ಮತದ ಫಸಲನ್ನು ಕೊಡಬಹುದು. ನಿಮ್ಮ ಕನಸುಗಳೂ ನನಸಾಗಬಹುದು. ಆದರೆ ನಮ್ಮ ಕಣ್ಣೀರು ನಿಮ್ಮ ಕಣ್ಣಿಗೆ ಕಾಣುವುದಿಲ್ಲ. ನಮ್ಮ ಕಣ್ಣೀರು ಭೂಮಿಗೆ ಸೇರಿದರೂ ಫಸಲು ಸಿಗುವುದಿಲ್ಲ. ಸಾಗರವನ್ನೂ ತಲುಪುವುದಿಲ್ಲ. ಈಗಲಾದರೂ ನಮ್ಮ ಅಹವಾಲನ್ನು ಒಂದಿಷ್ಟು ಕೇಳಿ. ನಾವು ಕುಚೇಲರು. ನಮ್ಮ ಕನಸುಗಳು ಹೆಚ್ಚೇನಿಲ್ಲ.

ನೀವು, ಇತಿಹಾಸ ಬದಲಿಸುತ್ತೀವಿ ಎನ್ನುತ್ತೀರಿ. ಸಂವಿಧಾನದ ತಪ್ಪುಗಳನ್ನು ಸರಿಪಡಿಸುತ್ತೀವಿ ಎನ್ನುತ್ತೀರಿ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುತ್ತೀವಿ ಎನ್ನುತ್ತೀರಿ. ಶಾಲಾ ಪಠ್ಯದಲ್ಲಿ ಭಾರತೀಯ ಸಂಸ್ಕೃತಿ ಬಿಂಬಿಸುತ್ತೇವೆ ಎನ್ನುತ್ತೀರಿ. ಟಿಪ್ಪುವಿನ ನಿಜಕನಸುಗಳನ್ನು ಬಯಲು ಮಾಡುವುದಾಗಿ ಹೇಳುತ್ತೀರಿ. ರಾಮಮಂದಿರ ಕಟ್ಟುತ್ತೀವಿ ಎನ್ನುತ್ತೀರಿ. ಕಾಶ್ಮೀರ ವಿಮೋಚನೆ ಮಾಡುತ್ತೀವಿ ಎನ್ನುತ್ತೀರಿ. ಭಯೋತ್ಪಾದನೆ ನಿಗ್ರಹಿಸುತ್ತೀವಿ ಎನ್ನುತ್ತೀರಿ. ಸತ್ಯ ಹೇಳಲಾ, ನೀವೇ ಭಯೋತ್ಪಾದಕರಂತೆ ಕಾಣಿಸುತ್ತೀರಿ.

ಮಕ್ಕಳ ತಲೆಯ ಮೇಲಿರುವ ಹಿಜಾಬ್ ತೆಗೆಸುತ್ತೇವೆ ಎನ್ನುತ್ತೀರಿ. ಒಂದು ದೇಶ ಒಂದು ಕಾರ್ಡ್, ಒಂದು ದೇಶ ಒಂದು ಚುನಾವಣೆ, ಒಂದು ದೇಶ ಒಂದು ಸಮವಸ್ತ್ರ ಎಂದೆಲ್ಲಾ ಡಂಗುರ ಸಾರುತ್ತೀರಿ. ಇತಿಹಾಸ ಮರುಸೃಷ್ಟಿ ಮಾಡುತ್ತೀವಿ ಎನ್ನುತ್ತೀರಿ. ಮೀಸಲಾತಿ ಹೆಚ್ಚಿಸುತ್ತೀವಿ ಎನ್ನುತ್ತೀರಿ. ಈ ಹೊತ್ತಲ್ಲೇ ಕುಕ್ಕರ್ ಸ್ಫೋಟ ಆಗುತ್ತದೆ. ಎಲ್ಲಾ ಓಕೆ. ನಮ್ಮದೊಂದು ಕೋರಿಕೆ. ಕನಿಷ್ಠ ಮುಂದಿನ ಐದು ವರ್ಷ ನೀವು ಏನೂ ಮಾಡದೆ ಸುಮ್ಮನಿದ್ದುಬಿಡಿ. ಯಾವುದನ್ನೂ ಬದಲಿಸಬೇಡಿ. ಯಾರನ್ನೂ ಬದಲಿಸಬೇಡಿ. ಎಲ್ಲದೂ ಅದರಷ್ಟಕ್ಕೆ ಅದು ನಡೆದುಕೊಂಡು ಹೋಗುವುದಕ್ಕೆ ವ್ಯವಸ್ಥೆ ಮಾಡಿ. ನೀವು ಇಷ್ಟು ಮಾಡಿದರೆ ಸಾಕು. ನೀವು ಮಾತನಾಡದಿದ್ದರೆ, ನೀವು ತೆರೆಮರೆಯಲ್ಲಿ ತಯಾರಿ ನಡೆಸದಿದ್ದರೆ, ನೀವು ತ್ರಿಶೂಲ ತಿರುಗಿಸದೇ ಇದ್ದರೆ, ನೀವು ಪರಸ್ಪರ ಕಚ್ಚಾಡ ದಿದ್ದರೆ, ನೀವು ಎಲ್ಲರೊಳಗೆ ಒಂದಾಗುವಂತಿದ್ದರೆ ಅದೇ ಒಂದು ಇತಿಹಾಸ ಸೃಷ್ಟಿಸುತ್ತದೆ.
ಸುಮ್ಮನಿರುವುದಕ್ಕೂ ಸಂಯಮ ಬೇಕು. ಸುಮ್ಮನಿದ್ದರೆ ಸಾಕು. ಇತಿಹಾಸ ತನ್ನಿಂದತಾನೆ ಬದಲಾಗುತ್ತದೆ. ಕೈಮುಗಿತೀನಿ, ನಿಮ್ಮ ಬಡಾಯಿ ಬದಿಗಿಡಿ. ನಮ್ಮನ್ನು ನಮ್ಮಷ್ಟಕ್ಕೆ ಬದುಕಲು ಬಿಡಿ.

ನೀವು ಬಂದು ದೊಡ್ಡ ದೊಡ್ಡ ಯೋಜನೆಗಳನ್ನು ಹಾಕಿಕೊಳ್ಳುವುದೂ ಬೇಡ. ಶೇ 40ರಷ್ಟು ಲಂಚ ಪಡೆಯುವುದೂ ಬೇಡ. ನಮ್ಮ ಹೆಸರಿನಲ್ಲಿ ಲಕ್ಷ ಲಕ್ಷ ಮನೆ ಕಟ್ಟಿಕೊಡುವುದೂ ಬೇಡ. ನಿಮ್ಮ ಮೊಗಸಾಲೆಗಳು ದೊಡ್ಡದಾಗುವುದೂ ಬೇಡ. ಶಾಲೆಗಳಿಗೆ ಹೊಸ ಬಣ್ಣ ಬಳಿಯುವುದೂ ಬೇಡ. ನಮಗೆ ಬುಲೆಟ್ ಟ್ರೈನೂ ಬೇಡ, ಆಕಾಶಕ್ಕೆ ಏಣಿಯೂ ಬೇಡ. ಶಾಲೆಗಳಿಗೆ ಪಾಠಕ್ಕೆ ಸಲಕರಣೆ, ಆಟೋಟಕ್ಕೆ ಸೌಲಭ್ಯ ಕೊಡಿ ಸಾಕು. ನಮ್ಮ ತಾಯಿ ನುಡಿಯನ್ನು ಸರಿಯಾಗಿ ಕಲಿಸಿಕೊಡಿ. ಎಲ್ಲ ವಿಷಯ ಕಲಿಸಲು ಮೇಷ್ಟ್ರ ನೇಮಕ ಮಾಡಿಬಿಡಿ. ಖಾಸಗಿ ಶಾಲೆಗಳ ಸುಲಿಗೆಯನ್ನು ತಡೆದುಬಿಡಿ. ಕಂದಮ್ಮಗಳ ಮೇಲೆ ಅತ್ಯಾಚಾರವಾಗುವುದನ್ನು ತಪ್ಪಿಸಿ. ನಮ್ಮ ಮಕ್ಕಳಿಗೆ ಶೌರ್ಯದ ಪಾಠಗಳು ಬೇಡ. ಕೌಶಲದ ಪಾಠಗಳನ್ನು ಕೊಡಿ. ದುಡಿದು ತಿನ್ನುವ ಕೈಗಳಿಗೆ ಕೆಲಸ ಕೊಡಿ. ಹೆರಿಗೆ ಮಾಡಿಸಿದ್ದಕ್ಕೆ ಲಂಚ ಕೇಳುವ ವೈದ್ಯರನ್ನು ತಯಾರು ಮಾಡಬೇಡಿ. ನಮ್ಮ ಮಕ್ಕಳು ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗ ಲಂಚಕ್ಕೆ ಅದನ್ನು ಮಾರಿಕೊಳ್ಳಬೇಡಿ. ಕೊನೆಗೆ ಸಿಕ್ಕಿಬಿದ್ದಾಗ ಒಬ್ಬರನ್ನೊಬ್ಬರು ಬೈದಾಡಬೇಡಿ. ‘ಅವರು ಮಾಡಲಿಲ್ವೆ, ಇವರು ಮಾಡಲಿಲ್ವೆ’ ಎಂದು ಕೇಳಿ ನಮ್ಮನ್ನು ಕನ್‌ಫ್ಯೂಸ್ ಮಾಡಬೇಡಿ. ನಮಗೆ ಗೊತ್ತು ಎಲ್ಲರೂ ಮಾಡಿದ್ದು ಇದನ್ನೇ ಅಂತ. ಅದಕ್ಕೇ ನಾವೀಗ ನಿಮಗೆ ಎಲ್ಲರಿಗೂ ಸೇರಿ ಪತ್ರ ಬರೆಯುತ್ತಿರುವುದು. ನಮ್ಮ ಕನಸುಗಳು ಹೆಚ್ಚೇನಿಲ್ಲ.

ಕುಸಿಯುವ ಸೇತುವೆ ಕಟ್ಟುವ ಪಾಠ ಹೇಳಿಕೊಡಬೇಡಿ. ನಮ್ಮ ಮಕ್ಕಳಿಗೆ ಸಂಪರ್ಕದ ಸೇತುವೆ ಕಲಿಸಿ. ಸೌಹಾರ್ದದ ಸೇತುವೆ ಕಟ್ಟುವುದನ್ನು ಕಲಿಸಿ. ಎಲ್ಲ ಮತಗಳ ಎಲ್ಲೆ ಮೀರಿ ಬದುಕುವುದನ್ನು ಕಲಿಸಿ. ವಿಶ್ವಮಾನವರನ್ನು ಕುಬ್ಜ ಮಾನವರನ್ನಾಗಿ ಮಾಡಬೇಡಿ. ಅಷ್ಟಪಥ, ದಶಪಥ ಎಂದು ವಿಶ್ವಪಥವನ್ನು ಹಾಳುಮಾಡಬೇಡಿ. ಮನುಜಮತಕ್ಕೆ ನೆರವಾಗಿ. ಇಷ್ಟೇ ಇಷ್ಟು ಮಾಡಿದರೆ ಸಾಕು. ನೀವು ವಿಶ್ವ ಗುರು ಆಗ್ತೀರಿ. ನಾವೂ ವಿಶ್ವಮಾನವ
ರಾಗಿಯೇ ಇರ್ತೇವೆ.

ನಾವು ಹಂಚಿಕೊಂಡು ಉಣ್ಣುತ್ತೇವೆ. ನೀವು ಕಿತ್ತುಕೊಂಡು ಉಣ್ಣುವ ಕಲೆ ಕಲಿಸಬೇಡಿ. ನಾವು ದುಡಿದು ತಿನ್ನುತ್ತೇವೆ. ನಿಮ್ಮ ಮೋಜಿಗೂ ಮಸ್ತಿಗೂ ನಾವೇ ದುಡಿದುಕೊಡ್ತೇವೆ. ಆದರೆ ನಮ್ಮ ಊಟದ ತಟ್ಟೆಗೆ ನೀವು ಕೈಹಾಕಬೇಡಿ. ನಮ್ಮದೊಂದೇ ಬೇಡಿಕೆ, ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟುಬಿಡಿ. ಆ ಪಕ್ಷ ಗೆದ್ದು ಬಂತು ಅಂತ ಆ ಪಕ್ಷದ ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡಬೇಡಿ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹಾರಬೇಕು ಅಂತಿದ್ದರೆ ಈಗಲೇ ಹಾರಿ ಹೋಗಿ. ಚುನಾವಣೆ ನಂತರ ಹಾರಿ ನಮ್ಮನ್ನು ಹಾದಿ ತಪ್ಪಿಸಬೇಡಿ. ನೀವೂ ತಪ್ಪಬೇಡಿ. ನಮ್ಮ ಹೆಸರಿನಲ್ಲಿ ನೀವು ಹಾರುಗುಪ್ಪೆ ಆಟ ಆಡೋದನ್ನು ಬಿಟ್ಟುಬಿಡಿ.

ನೀವು ಹೆಚ್ಚೇನೂ ಮಾಡಬೇಕಾಗಿಲ್ಲ. ಅಂಬೇಡ್ಕರ್ ಅವರು ನಮಗೆ ಅತ್ಯಂತ ಸೂಕ್ತವಾದ ಸಂವಿಧಾನವನ್ನು ಕೊಟ್ಟಿದ್ದಾರೆ. ಅದರಲ್ಲಿ ಎಲ್ಲವೂ ಇವೆ. ನಮ್ಮ ನೆಮ್ಮದಿಯೂ ಅದರಲ್ಲಿಯೇ ಅಡಗಿದೆ. ಅದರಂತೆ ನಡೆದುಕೊಂಡರೆ ಸಾಕು. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕೆ ಕುಂಟು ನೆಪಗಳನ್ನು ಹೇಳಲು ತಡಕಾಡಬೇಡಿ. ಇಷ್ಟೇ ನಮ್ಮ ಪ್ರಾರ್ಥನೆ.

ನಮಗೆ ಗೊತ್ತು. ನಿನ್ನೆ ಚೆನ್ನಾಗಿರಲಿಲ್ಲ. ಏನೇನೋ ಆಗಿಹೋಯ್ತು. ಅದೊಂದು ಕೆಟ್ಟ ಕನಸು. ಥಟ್ಟಂತ ಅದನ್ನು ಮರೆಯುವುದಕ್ಕೂ ಆಗಲ್ಲ. ಆದರೂ ಬಲವಂತವಾಗಿ ಅದನ್ನು ಮರೆತುಬಿಡೋಣ. ಗಾಯವನ್ನು ಕೆರೆದುಕೊಳ್ಳುವುದು ಬೇಡ. ಕೆರೆದಷ್ಟೂ ಗಾಯ ಹೆಚ್ಚಾಗುತ್ತದೆ. ಕೀವಾಗುತ್ತದೆ. ಕೊಳೆಯುತ್ತದೆ. ನಂತರ ಗಾಯವಾದ ಅಂಗವನ್ನು ಕತ್ತರಿಸಿ ಹಾಕಬೇಕಾಗುತ್ತದೆ. ಕೆರೆದುಕೊಳ್ಳುವ ಬಯಕೆಯನ್ನು ನಿಯಂತ್ರಿಸುವುದು ಕಷ್ಟ. ಆದರೆ ನಮಗಾಗಿ, ನಮ್ಮ ಮಕ್ಕಳಿಗಾಗಿ, ಮೊಮ್ಮಕ್ಕಳ ಭವಿಷ್ಯಕ್ಕಾಗಿ ಕೆರೆಯುವುದನ್ನು ಕೊಂಚ ನಿಲ್ಲಿಸಿಬಿಡೋಣ. ಗಾಯಕ್ಕೆ ಮುಲಾಮು ಹಚ್ಚಿ ಗಾಯ ಮಾಯುವಂತೆ ಮಾಡೋಣ. ಮತ್ತೆ ಮತ್ತೆ ಕೈಮುಗಿದು ಕೇಳಿಕೊಳ್ತೀನಿ. ನಿನ್ನೆಯ ನೆಪದಿಂದ ನಮ್ಮ ಇಂದನ್ನು ಕಸಿಯಬೇಡಿ. ನಾಳೆಯನ್ನು ನಮಗಾಗಿ ಉಳಿಸಿಕೊಡಿ. ನಾವು ಕುಚೇಲರು. ನಮ್ಮ ಬಯಕೆ ಹೆಚ್ಚೇನಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT