ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸೇ ಇಲ್ಲದ ಕ್ಷಣಗಳ ಕ್ಷಣಿಕ ಸುಖದುಃಖ

Last Updated 20 ಅಕ್ಟೋಬರ್ 2018, 20:01 IST
ಅಕ್ಷರ ಗಾತ್ರ

ಸ್ವಲ್ಪ ಹಣದ ತೊಂದರೆಯಲ್ಲಿದ್ದೆ. ಒಂದು ಚಿತ್ರ ನಿರ್ಮಾಣದ ಹಂತದಲ್ಲಿದ್ದು, ಇನ್ನೊಂದು ಬಿಡುಗಡೆಗೆ ಸಿದ್ಧವಾಗಿತ್ತು. ಎಂದಿನಂತೆ ಸದಭಿರುಚಿಯ ಚಿತ್ರಗಳಾದ್ದರಿಂದ ಬಿಡುಗಡೆಗೆ ಮುನ್ನ ವ್ಯಾಪಾರವಾಗುವ ಸಾಧ್ಯತೆ ಇರಲಿಲ್ಲ. ಸ್ವಲ್ಪ ಹಣ ಹೊಂದಿಸಲೇಬೇಕು.

ಸಿನಿಮಾ ಭಾಷೆಯಲ್ಲಿ ಸ್ವಲ್ಪ ಹಣ ಎಂದರೆ ಕೋಟಿಗಿಂತ ಕಡಿಮೆ ಏನಲ್ಲ. ಬಡ್ಡಿಗೆ ಸಾಲ ಕೇಳಬೇಕಾದ ಪರಿಸ್ಥಿತಿ. ಮನುಷ್ಯರ ವಿಧವಿಧವಾದ ಮುಖಗಳನ್ನು ನಾವು ಕಷ್ಟದಲ್ಲಿರುವಾಗಲೇ ದರ್ಶಿಸಲು ಸಾಧ್ಯ. ಸಾಲ ಕೊಡುವವರನ್ನು ಹುಡುಕುವ ಪ್ರಯತ್ನದಲ್ಲಿದ್ದಾಗ ನನ್ನ ಗೆಳೆಯನೊಬ್ಬ ನನ್ನ ಬಳಿ ಒಂದು ಲಕ್ಷ ರೂಪಾಯಿ ಸಾಲ ಕೇಳಿದ. ಅವನ ತಂಗಿಗೆ ಮದುವೆ ನಿಶ್ಚಯವಾಗಿತ್ತು.

ನನ್ನ ಮ್ಯಾನೇಜರ್‌ಗೆ ಹಣ ತಲುಪಿಸಲು ಹೇಳಿದೆ. ಈ ಸುದ್ದಿ ಹೇಗೋ ತಿಳಿದ ಹಲವು ಗೆಳೆಯರು ‘ಹಣದ ಬೆಲೆ ನಿನಗೆ ಏನು ಗೊತ್ತೋ ಪ್ರಕಾಶ? ಯಾವಾಗ ಗೊತ್ತಾಗತ್ತೆ? ಎಲ್ಲರಿಗೂ ಕೊಟ್ಟೂ ಕೊಟ್ಟು ಈಗ ನೀನೇ ಸಾಲ ಕೇಳುವ ಪರಿಸ್ಥಿತಿಯಲ್ಲಿ ನಿಂತಿದ್ದೀಯಾ. ಇನ್ನು ಮೇಲೂ ನೀನು ಬದಲಾಗದೇ ಇದ್ದರೆ ನೀನೊಬ್ಬ ಶತಮೂರ್ಖ’ ಎಂದು ಒಬ್ಬರ ಮೇಲೊಬ್ಬರು ಸಲಹೆಯ ಮಳೆ ಸುರಿಸಿದರು. ಎಲ್ಲರೂ ನನ್ನ ಮೇಲೆ ಪ್ರೀತಿ ಅಕ್ಕರೆ
ಯುಳ್ಳವರೇ. ಅವರು ಹೇಳಿದ್ದು ನಿಜ ಕೂಡ ಆಗಿರಬಹುದು.

ಇಂದಿಗೂ ನನ್ನ ಬಳಿ ಸ್ವಂತ ಪರ್ಸ್ ಇಲ್ಲ ಎಂದರೆ ನಂಬುವಿರಾ? ಸಿಗರೇಟ್ ಬೇಕೆಂದರೂ ನನ್ನ ಡ್ರೈವರ್ ಕೊಂಡು ತಂದು ಕೊಡಬೇಕು.

ಮುಂದಿನ ವಾರವೇ ನನ್ನ ಮಗಳ ಹುಟ್ಟುಹಬ್ಬ. ಆ ಒಂದು ಹಗಲು ರಾತ್ರಿ ನಾನು ಶೂಟಿಂಗ್ ಮಾಡಿದರೆ ₹ 4-5 ಲಕ್ಷ ವರೆಗೆ ಸಂಭಾವನೆ. ಆದರೆ ನಾನು ನನ್ನ ಮಗಳ ಸಹಪಾಠಿಗಳನ್ನೆಲ್ಲಾ ಮನೆಗೆ ಆಹ್ವಾನಿಸಿ ವಿವಿಧ ಆಟದ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ಕೊಟ್ಟೆ. ರಾತ್ರಿಯಿಡೀ ಅವರೊಡನೆ ಕೇರಂ ಆಡಿ ಸೋತೆ. ‘ಹುಚ್ಚಾ ನಿನಗೆ’ ಎಂದು ಗೆಳೆಯನೊಬ್ಬ ಕೇಳಿದ. ಅವನು ಬದುಕಿನ ಬೆಲೆಯನ್ನು ಹಣದಲ್ಲಿ ಹುಡುಕುತ್ತಾನೆ. ನಾನು ಬದುಕುವ ಕ್ಷಣಗಳಲ್ಲಿ ಹುಡುಕುತ್ತೇನೆ. ಇಷ್ಟೇ ವ್ಯತ್ಯಾಸ.

ನನ್ನ ತಂದೆಯ ಮರಣವೂ ನನ್ನ ತಂಗಿಯ ಮದುವೆಯೂ ನನ್ನ ಜೀವನದ ತುಂಬಾ ಮುಖ್ಯವಾದ ಒಂದು ದುಃಖ ಮತ್ತು ಒಂದು ಸಂತೋಷ. ಇವೆರಡಕ್ಕೂ ನನ್ನ ಬಳಿ ಹಣವಿರಲಿಲ್ಲ. ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಸಮಯವದು. ಅಪ್ಪನ ಸಾವಿನ ಕಾರ್ಯಗಳನ್ನು ಮಾಡಲು ಒಬ್ಬನ ಬಳಿ ಹಣವಿಲ್ಲವೆಂದರೂ ಪರವಾಗಿಲ್ಲ. ಸಾವಿಗೆ ಹೋಗಲು ಕೂಡ ಕಾಸಿಲ್ಲವೆಂದರೆ ಏನು ಮಾಡುವುದು? ಬದುಕಿನುದ್ದಕ್ಕೂ ಬೇಜವಾಬ್ದಾರಿತನದಿಂದ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಾ ಕೊನೆಯ ಹಲವು ಕ್ಷಣಗಳಲ್ಲಿ ಒಳ್ಳೆಯವನಾಗಿ ತೀರಿ ಹೋದವನು ನನ್ನ ತಂದೆ.

ಯಾವಾಗ ಮನೆಗೆ ಬರುವನೋ ಯಾವಾಗ ಕಾಣೆಯಾಗುವನೋ ಎಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ರಾತ್ರಿ ಹತ್ತರ ಮೇಲೆ ಯಾವುದೋ ಸಾರಾಯಿ ಅಂಗಡಿಯ ಜಗುಲಿಯ ಮೇಲೆ ಬಿದ್ದುಕೊಂಡಿದ್ದಾನೆಂದು ಸುದ್ದಿ ಮುಟ್ಟುತ್ತಿತ್ತು. ತಂಗಿಯೂ ತಮ್ಮನೂ ಇನ್ನೂ ಚಿಕ್ಕ ಮಕ್ಕಳು. ಅಸಹ್ಯವನ್ನು ಅರ್ಥ ಮಾಡಿಕೊಳ್ಳುವಷ್ಟು ವಯಸ್ಸು ಅವರದಲ್ಲ ಎಂದು ನನ್ನನ್ನು ಜೊತೆಗೆ ಕರೆದುಕೊಂಡು ಹೋಗುವಳು ಅಮ್ಮ. ರಾತ್ರಿ ಅಪ್ಪನನ್ನು ಆಟೊದಲ್ಲಿ ಹತ್ತಿಸಿ ಮನೆಗೆ ಕರೆದುಕೊಂಡು ಬರುವೆವು.

ಸುಂದರಿಯಾದ ನನ್ನ ಅಮ್ಮನ ಮೇಲೆ ಆಟೊದವನ ಕೆಟ್ಟ ದೃಷ್ಟಿ ಹಾಯ್ದದ್ದು ಈಗ ನನಗೆ ಅರ್ಥವಾಗುತ್ತದೆ. ಆದರೆ ಇದು ಯಾವುದನ್ನೂ ಅರಿಯದೆ ಬಿದ್ದುಕೊಂಡಿದ್ದು ಮರುದಿನ ಬೆಳಿಗ್ಗೆ ಏನು ಗೊತ್ತಿಲ್ಲದವನಂತೆ ಎದ್ದು ಕುಳಿತಿರುತ್ತಿದ್ದ ನನ್ನ ಅಪ್ಪ. ‘ನಿನಗೆ ದಿನವೂ ಒಂದು ಕ್ವಾರ್ಟರ್ ಸಾರಾಯಿ ಒಂದು ಕಟ್ಟು ಬೀಡಿ ತಂದು ಕೊಡುತ್ತೇನೆ, ನೀನು ಎಲ್ಲಿಗೂ ಕೆಲಸಕ್ಕೆ ಹೋಗುವ ಅವಶ್ಯಕತೆ ಇಲ್ಲ. ನನಗೆ ಗಂಡನಾಗಿ ಕೂಡ ಇರಬೇಕಾದ್ದಿಲ್ಲ. ಮನೆಯಲ್ಲಿ ಮಕ್ಕಳಿಗೆ ತಂದೆಯಾಗಿ ಇರು’ ಎಂದು ಬೇಡಿಕೊಳ್ಳುತ್ತಿದ್ದಳು ಅಮ್ಮ. ಆತ ಅದ್ಭುತವಾದ ನಟ.

ಪ್ರೀತಿಯಿಂದ ಮಾತನಾಡಿಯೇ ತಾನು ಯೋಗ್ಯನೆಂದು ನಂಬಿಸಿಬಿಡುವನು. ಇದ್ದಕ್ಕಿದ್ದಂತೆ ಕಾಣೆಯಾಗುವನು. ನಿನ್ನ ಗಂಡ ಐನೂರು ರೂಪಾಯಿ ಸಾಲ ಪಡೆದು ಓಡಿ ಹೋದ ಎನ್ನುತ್ತಾ ಯಾರೋ ಒಬ್ಬನು ಮನೆಯ ಹೊಸ್ತಿಲಿಗೆ ಬಂದು ನಿಲ್ಲುವನು. ಬೈದುಕೊಂಡೇ ಅವನಿಗೆ ಹಣ ಕೊಟ್ಟು ಕಳುಹಿಸುವಳು. ಕಳುಹಿಸಿ ಅಸಹಾಯಕ ಕೋಪದಲ್ಲಿ ಅಪ್ಪನ ಬನಿಯನ್ನುಗಳನ್ನು ಹರಿದು ಹಾಕುವಳು ಅಮ್ಮ.

ಎರಡು ಮೂರು ತಿಂಗಳ ನಂತರ ದಿಢೀರೆಂದು ಬಂದು ನಿಲ್ಲುವನು ಅಪ್ಪ. ಅತ್ತು ಜಗಳವಾಡಿಕೊಳ್ಳುತ್ತಾ ಮತ್ತೆ ಹೊಸ ಬನಿಯನ್ನುಗಳೊಂದಿಗೆ ಅವನನ್ನು ಬರ ಮಾಡಿಕೊಳ್ಳುವಳು ಅಮ್ಮ. ಅವಳ ಪ್ರೀತಿಯನ್ನು ನನ್ನ ತಂದೆ ತಮ್ಮ ಜೀವನದಲ್ಲಿ ಅರ್ಥ ಮಾಡಿಕೊಳ್ಳಲಿಲ್ಲವಲ್ಲ ಎನ್ನುವುದೇ ನನಗೆ ಅವನ ಮೇಲಿನ ಗೌರವ ಕಡಿಮೆಯಾಗುವುದಕ್ಕೆ ಕಾರಣವಾಯಿತು.

ಅಪ್ಪ ಸತ್ತ ಮೇಲೂ ಅವನ ಮೇಲಿನ ಪ್ರೀತಿ ಕಡಿಮೆಯಾಗಲೇ ಇಲ್ಲ ಅವಳಿಗೆ. ‘ಒಂದು ಹತ್ತು ಸಾವಿರ ರೂಪಾಯಿ ಬೇಕು’ ಎಂದು ಅವನ ಸಾವಿನ ಸುದ್ದಿಯೊಡನೆ ಕೇಳಿ ಕಳುಹಿಸಿದಳು. ಅಪ್ಪನ ಕೊನೆಯ ದಿನಗಳಲ್ಲಿ ಆತ ಅಮ್ಮನನ್ನು ಕರೆದು ಪಶ್ಚಾತ್ತಾಪ ಪಟ್ಟನಂತೆ. ‘ನೀನು ತುಂಬಾ ಒಳ್ಳೆಯವಳು, ನಿನ್ನನ್ನು ನಿನ್ನ ಮಗ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ. ನಿನಗೆ ಬಹಳ ಕಷ್ಟ ಕೊಟ್ಟಿದ್ದೇನೆ. ನನ್ನನ್ನು ಕ್ಷಮಿಸು’ ಎಂದು ಬಹಳ ದೀನನಾಗಿ ಕಣ್ಣೀರಿಟ್ಟನಂತೆ. ಅಮ್ಮ ಹೇಳಿದಳು. ನನಗೆ ಗೊತ್ತಿದ್ದಂತೆ ಅವನು ನೂರಾರು ಬಾರಿ ಹೀಗೆ ಕಣ್ಣೀರಿಟ್ಟು ಬದಲಾಗುತ್ತೇನೆ ಎಂದಿದ್ದಾನೆ. ಆದರೆ ಈ ಬಾರಿ ಮತ್ತೆ ತಪ್ಪು ಮಾಡುವ ಅವಕಾಶವನ್ನು ಮರಣ ಅವನಿಗೆ ಕೊಡಲಿಲ್ಲ.

ಇಂತಹ ಅಪ್ಪನ ಸಾವಿಗೆ ಹೋಗಲೂ ಕಾಸಿಲ್ಲದೆ ತಲೆ ಮೇಲೆ ಕೈಯಿಟ್ಟು ಕುಳಿತಿದ್ದೆ. ‘ರಾಮಾಚಾರಿ’ ಸಿನಿಮಾದ ಚಿತ್ರೀಕರಣದಲ್ಲಿ ನಟಿಸುತ್ತಿದ್ದ ದಿನಗಳವು. ನಟ, ನಿರ್ದೇಶಕ ರವಿಚಂದ್ರನ್ ಅವರು ವಿಷಯ ತಿಳಿದು ನಾನು ಕೇಳದೆಯೇ ಐದು ಸಾವಿರ ರೂಪಾಯಿ ಕಳುಹಿಸಿಕೊಟ್ಟರು. ಆ ಕ್ಷಣಗಳಲ್ಲಿ ಅಂತಹ ಒಬ್ಬರು ಕಾಸು
ಕೊಟ್ಟಿರದಿದ್ದರೆ ನನ್ನ ತಂದೆಯ ಸಾವು ಇಂದಿಗೂ ನನ್ನ ಕುಟುಂಬದ ನೋವಾಗಿ ಉಳಿದುಬಿಡುತ್ತಿತ್ತು.

ನನ್ನ ತಂಗಿಯ ಮದುವೆ. ನನ್ನ ಗೆಳೆಯನೇ ಪ್ರೇಮಿಸಿದ್ದ. ನನ್ನ ಕುಟುಂಬದ ಪರಿಸ್ಥಿತಿ ಅವನಿಗೆ ಗೊತ್ತಿತ್ತು. ಚರ್ಚ್‌ನಲ್ಲಿ ತುಂಬಾ ಸರಳ ಮದುವೆ. ಎಲ್ಲಾ ಖರ್ಚಿಗೂ ಅಮ್ಮ ಕೂಡಿಟ್ಟ ಹಣವೇ. ನಮ್ಮ ಮನೆಯಲ್ಲಿ ನಾನೇ ಹಿರಿಯ ಮಗನಾದರೂ ಸಂಪಾದನೆಯಿಲ್ಲ. ಕೈಯಲ್ಲಿ ಬಿಡಿಕಾಸೂ ಇಲ್ಲ. ಹೀಗಿದ್ದರೂ ಯಾವುದೋ ಹುಂಬ ಧೈರ್ಯದಿಂದ ತಂಗಿಯ ಮದುವೆಗೆ ತಾಳಿಯನ್ನು ನಾನೇ ತಂದುಕೊಡುತ್ತೇನೆಂದು ಮನೆಯಲ್ಲಿ ಹೇಳಿಬಿಟ್ಟಿದ್ದೆ. ಎಷ್ಟೇ ಅಲೆದಾಡಿದರೂ ಕಾಸಿಗೆ ದಾರಿ ಕಾಣುತ್ತಿಲ್ಲ.

ಮದುವೆಯ ದಿನವೂ ಬಂತು. ಸಂಜೆ ನಾಲ್ಕು ಗಂಟೆಗೆ ಮದುವೆ. ಆದಿನ ಬೆಳಗ್ಗಿನವರೆಗೂ ನಾನು ಸಾಲ ಕೇಳಿದ ಎಲ್ಲರೂ ಕೈಕೊಡವಿ ನಿಂತರು. ಇಂದು ನನ್ನನ್ನು ನಂಬಿ ಕೋಟಿಗಟ್ಟಲೆ ಕಾಸು ನೀಡಲು ಜನ ತಯಾರಿದ್ದಾರೆ. ಆದರೆ ನನ್ನ ತಂಗಿಯ ಮದುವೆಗೆ ನಾಲ್ಕು ಸಾವಿರ ಕೊಡಲು ಯಾರೂ ಇರಲಿಲ್ಲ. ತಾಳಿ ಕೊಂಡುಕೊಳ್ಳಲು ಸಾಧ್ಯವಾಗದೆ ಬದುಕಿನುದ್ದಕ್ಕೂ ಈ ಅವಮಾನವನ್ನು ಸಂಧಿಸಬೇಕಲ್ಲ ಎಂಬ ಭಯ ಹುಟ್ಟುತ್ತಿದ್ದಂತೆಯೇ ನನ್ನ ಬಳಿ ಇದ್ದ ಟಿವಿಎಸ್-50 ಬೈಕನ್ನು ಮಾರಲು ನಿರ್ಧರಿಸಿ ಒಬ್ಬ ದೊಡ್ಡ ಮನುಷ್ಯನ ಬಳಿ ಹೋಗಿ ನಿಂತೆ. ಅವನೋ ನೂರು ಷರತ್ತುಗಳನ್ನು ಹಾಕುತ್ತಿದ್ದಾನೆ. ನನ್ನ ಬಳಿ ಕಾರಿದೆ. ನನ್ನ ಹೆಂಡತಿಗೆ ಟೂ ವೀಲರ್ ಬೇಕು. ಆದರೆ ಅವಳಿಗೆ ಬೈಕ್ ಓಡಿಸಲು ಗೊತ್ತಿಲ್ಲ.

ನೀನು ಅವಳಿಗೆ ಕಲಿಸು. ಅವಳು ಒಪ್ಪಿಕೊಂಡರೆ ನಾನು ಕೊಂಡುಕೊಳ್ಳುತ್ತೇನೆ ಎಂದ. ಆಕೆಗೆ ನನ್ನ ಪರಿಸ್ಥಿತಿಯನ್ನು ವಿವರಿಸುತ್ತಾ ಒಂದೆರಡು ತಾಸು ಟೂ ವೀಲರ್ ಕಲಿಸಿ ಹೆಂಡತಿಗೆ ಒಪ್ಪಿಕೊಳ್ಳಲು ಬೇಡಿಕೊಂಡೆ. ಮಧ್ಯಾಹ್ನ ಕೈಯಲ್ಲಿ ಕಾಸು ತೆಗೆದುಕೊಂಡು ಆ ದೊಡ್ಡ ಮನುಷ್ಯನ ಹತ್ತಿರವಿದ್ದ ಆಭರಣದ ಅಂಗಡಿಯಲ್ಲಿ ರೆಡಿಮೇಡ್ ತಾಳಿ ಕೊಂಡುಕೊಂಡೆ. ಮದುವೆ ನಡೆಯುವ ಚರ್ಚ್‌ಗೆ ಹೋಗಲು ಆಟೊಗೆ ಕಾಸಿಲ್ಲ. ತಾಳಿ ಇನ್ನೂ ಬಂದಿಲ್ಲವೆಂದು ಆತಂಕದಲ್ಲಿರುತ್ತಾರೆ.

ಆ ದೊಡ್ಡ ಮನುಷ್ಯನಲ್ಲಿ ಮತ್ತೆ ಬೇಡಿಕೊಂಡೆ. ಆಗ ಅವನು ತನ್ನ ಕಾರಿನಲ್ಲಿ ಆ ದೆಸೆಯಲ್ಲೇ ಹೋಗುತ್ತಿದ್ದುದರಿಂದ ದೊಡ್ಡ ಮನಸ್ಸು ಮಾಡಿ ಚರ್ಚ್ ಬಳಿ ನಿಲ್ಲಿಸದೆ ತಾನು ತಿರುಗುವ ರಸ್ತೆ ಬಂತೆಂದು ಒಂದು ಕಿಮೀ ದೂರದಲ್ಲೇ ನಿಲ್ಲಿಸಿ ಇಳಿಸಿ ಹಾಗೇ ಬಿಟ್ಟುಹೋದ. ಓಡುತ್ತಾ ಅಲ್ಲಿಗೆ ಸೇರಿ ತಾಳಿಯನ್ನು ತಲುಪಿಸಿ ಏದುಸಿರು ಬಿಟ್ಟೆ. ತಾಳಿ ಕಟ್ಟಿದ ನಂತರವೇ ನೆಮ್ಮದಿ ಎನಿಸಿತು. ಇನ್ನೂರು ಜನಕ್ಕಿಂತ ಸ್ವಲ್ಪ ಕಡಿಮೆ ಬಂಧುಗಳು ಭಾಗವಹಿಸಿದ ನನ್ನ ತಂಗಿಯ ಮದುವೆಯ ಊಟದಲ್ಲಿ ಒಬ್ಬರ ಊಟದ ಖರ್ಚಿನ ಕಾಸು ಕೂಡ ನನ್ನದಲ್ಲ. ಯಾರ್‍ಯಾರೋ ಹೊಸಬಟ್ಟೆಯನ್ನುಟ್ಟು ಫೋಟೊಗೆ ಪೋಸ್ ಕೊಡುವಾಗ ನಾನು ನನ್ನ ಹಳೆಯ ಜುಬ್ಬಾದಲ್ಲೇ ನಿಂತು ತಂಗಿಯನ್ನು ಆಶೀರ್ವದಿಸಿದೆ. ತುಂಬಾ ವ್ಯಥೆಪಟ್ಟ ದಿನವದು.

ಅಪ್ಪನ ಸಾವಿಗೆ ಹಣ ಕೊಡಲು ಒಬ್ಬರಿದ್ದರು. ತಂಗಿಯ ಮದುವೆಗೆ ಸಾಲ ಕೊಡಲು ಯಾರೂ ಇರಲಿಲ್ಲ. ಒಂದು ದುಃಖಕ್ಕೆ ಹಣ ಸಿಕ್ಕ ಸಂತೋಷ, ಒಂದು ಸಂತೋಷಕ್ಕೆ ಹಣ ಸಿಗಲಿಲ್ಲವಲ್ಲ ಎನ್ನುವ ದುಃಖ. ಬದುಕೇ ತುಂಬಾ ವಿಚಿತ್ರವಲ್ಲವೇ. ಆ ಕ್ಷಣಗಳನ್ನು ನನ್ನಿಂದ ಮರೆಯಲು ಸಾಧ್ಯವೇ ಇಲ್ಲ. ಆದ್ದರಿಂದಲೇ ನನ್ನ ಸುತ್ತಲಿನವರ ಬದುಕಿನಲ್ಲಿ ಕಷ್ಟವೋ ಸುಖವೋ ಏನೇ ನಡೆದರೂ ನಾನು ಎಷ್ಟೇ ಕಷ್ಟದಲ್ಲಿದ್ದರೂ ನನ್ನಿಂದಾದ ಸಹಾಯವನ್ನು ಮಾಡುತ್ತೇನೆ.

ನನಗೆ ಕಾಸಿನ ಬೆಲೆ ಗೊತ್ತಿಲ್ಲದೇ ಇರಬಹುದು. ಆದರೆ ಕಾಸಿಲ್ಲದ ದಿನಗಳ ವೇದನೆ ಅರ್ಥವಾಗುತ್ತದೆ. ಕುರುಡು ಕಾಂಚಾಣ ಕುಣಿಯುತಲಿತ್ತೋ, ಕಾಲಿಗೆ ಬಿದ್ದವರ ತುಳಿಯುತಲಿತ್ತೋ ಎಂಬ ಸಾಲು ಕಣ್ಮುಂದೆ ಸುಳಿಯುತ್ತದೆ. ಜೊತೆಗೇ ನನ್ನ ಮೆಚ್ಚಿನ ಬಿ. ವಿ. ಕಾರಂತರು ಹಾಡಿರುವ ಮುತ್ತು ಮಾಣಿಕ್ಯ ಲೊಳಲೊಟ್ಟೆ, ಮತ್ತೆ ಛತ್ರ ಚಾಮರ ಧ್ವಜ ಲೊಳಲೊಟ್ಟೆ, ಸುತ್ತಗಲ ಕೋಟೆ ಲೊಳಲೊಟ್ಟೆ, ಮತ್ತೆ ಉತ್ತಮ ಪ್ರಭುತ್ವ ಲೊಳಲೊಟ್ಟೆ... ಎಂಬ ದಾಸರ ಸಾಲುಗಳೂ ಕಾಡುತ್ತಿವೆ. ಮುತ್ತು ಮಾಣಿಕ್ಯದ ಜೊತೆ ಉತ್ತಮ ಪ್ರಭುತ್ವ ಕೂಡ ಲೊಳಲೊಟ್ಟೆ ಅಂದಿರುವುದು ಎಷ್ಟು ಮಾರ್ಮಿಕ ಸತ್ಯ ಎಂದು ನೆನೆಯುತ್ತಾ ಬೆರಗಾಗುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT