ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಷ್ಟಿಯಾಚೆಯ ಅನಂತಸತ್ವ

Last Updated 12 ಫೆಬ್ರುವರಿ 2019, 6:43 IST
ಅಕ್ಷರ ಗಾತ್ರ

ಎತ್ತಣಿನೊ ದೃಕ್ಪರಿಧಿಯಾಚೆಯಿಂದಲನಂತ |
ಸತ್ತ್ವ ತೆರೆತೆರೆಯಾಗಿ ಬೀಸಿ ಗೂಢದಲಿ ||
ಬಿತ್ತರಿಸುತಿಹುದು ಹೊಸಹೊಸತನವನೆಡೆಬಿಡದೆ |
ನಿತ್ಯನಿತ್ಯವು ಜಗದಿ - ಮಂಕುತಿಮ್ಮ || 92 ||

ಪದ-ಅರ್ಥ: ದೃಕ್ಪರಿಧಿಯಾಚೆಯಿಂದಲನಂತ=ದೃಕ್‍ಪರಿಧಿ (ದೃಷ್ಟಿಯ ಮೇರೆ)+ಆಚೆಯಿಂದ+ಅನಂತ, ಹೊಸಹೊಸತನವನೆದೆಬಿಡದೆ=ಹೊಸಹೊಸತನವನು+ಎಡೆಬಿಡದೆ.

ವಾಚ್ಯಾರ್ಥ: ನಮ್ಮ ದೃಷ್ಟಿಯ ಮೇರೆಯಾಚೆಯಿಂದ ಎತ್ತಲಿಂದಲೋ ಅನಂತವಾದ ಸತ್ವ ಗೂಢವಾಗಿ, ತೆರೆತೆರೆಯಾಗಿ ಬೀಸಿ, ಹೊಸ ಹೊಸತನವನ್ನು ಎಡೆಬಿಡದೆ, ಪ್ರತಿನಿತ್ಯವೂ, ಜಗತ್ತಿನಲ್ಲಿ ವಿಸ್ತರಿಸುತ್ತಿದೆ.

ವಿವರಣೆ: ಯಾವುದೋ ಕಾರಣಕ್ಕೆ ಮನುಷ್ಯ ರಾಕ್ಷಸನಾಗುತ್ತಾನೆ. ಸಾಮಾನ್ಯ ಮನುಷ್ಯ ಅಂಗುಲಿಮಾಲನಾಗಿ ರಾಕ್ಷಸನಾದ, ಕಂಡಕಂಡವರನ್ನು ಕೊಂದು ಅವರ ಬೆರಳಿನ ಮಾಲೆಯನ್ನು ಕೊರಳಿಗೆ ಹಾಕಿಕೊಂಡ. ಆದರೆ ಕ್ರೂರತೆಗೂ ಒಂದು ಕೊನೆ ಇದೆಯಲ್ಲ? ಕರುಣೆಯ ಸಾಗರ ಬುದ್ಧ ಬಂದ. ಖಡ್ಗ ಹಿರಿದು ನಿಂತಿದ್ದ ಅಂಗುಲಿಮಾಲನನ್ನು ಪ್ರೀತಿಯಿಂದ ಗೆದ್ದ. ರಾಕ್ಷಸ ಕರುಣಾಮೂರ್ತಿಯ ದಾಸನಾದ. ಇದು ಆದದ್ದು ಹೇಗೆ? ಅದೇ ಅಂಗುಲಿಮಾಲ, ಅದೇ ದೇಹ. ಅವನಲ್ಲಿ ಕ್ರೂರತೆ ಬಂದದ್ದು ಎಲ್ಲಿಂದ? ಕ್ರೂರತೆ ಕರಗಿ ಕರುಣೆ ಬಂದದ್ದು ಎಲ್ಲಿಂದ? ನಮ್ಮ ಕಣ್ಣಿಗೆ ಕಾಣದ ಯಾವುದೋ ಸತ್ವ ಅವನ ಮನದೊಳಗಿಳಿದು ಪರಿವರ್ತನೆ ತಂದಿತ್ತು. ಇದು ಒಬ್ಬ ವ್ಯಕ್ತಿಗೆ ಆದದ್ದು. ಇಂಥ ಸಾವಿರ ಘಟನೆಗಳು ನಮ್ಮ ಕಣ್ಣ ಮುಂದಿವೆ.

ಇನ್ನು ನಿಸರ್ಗವನ್ನು ಗಮನಿಸಿ. ಖಂಡಗಳೇ ತೇಲುತ್ತ, ಮತ್ತೊಂದಕ್ಕೆ ಢಿಕ್ಕಿ ಹೊಡೆಯುತ್ತ ಭೂಪ್ರದೇಶವನ್ನೇ ಬದಲಿಸುತ್ತಿವೆ. ಶತಮಾನಗಳ ಹಿಂದಿದ್ದ ನಡುಗಡ್ಡೆಗಳು, ಭೂಪ್ರದೇಶಗಳು ಮಾಯವಾಗಿವೆ. ಹೊಸ ಭೂಪ್ರದೇಶಗಳು ಮೇಲೆದ್ದು ನಿಂತಿವೆ. ಸಮುದ್ರಗಳು ಒಣಗಿ ಮರುಭೂಮಿಗಳಾಗಿವೆ. ನೆಲವನ್ನು ನುಂಗಿ ಸಮುದ್ರ ಆಕ್ರಮಿಸಿಕೊಂಡಿದೆ. ಜಗತ್ತನ್ನು ಹೊಸಹೊಸದನ್ನಾಗಿ ಮಾಡುತ್ತಿದೆ. ಇದನ್ನೇ ಭಗವದ್ಗೀತೆ ಹೇಳುತ್ತವೆ –

ಪ್ರಕೃತಿಂ ಸ್ವಾಮವಷ್ಟಭ್ಯ ವಿಸ್ರಜಾಮಿ ಪುನ:ಪುನ: |

ಬ್ರಹ್ಮವು ಈಶ್ವರಭಾವವನ್ನು ತಾಳಿ ತನ್ನ ಪ್ರಕೃತಿ ಶಕ್ತಿಯಿಂದಲೇ ಜಗತ್ತನ್ನು ಪುನ: ಪುನ: ಸೃಷ್ಟಿ ಮಾಡುತ್ತದೆ. ಇದು ಬ್ರಹ್ಮ ಮತ್ತು ಜಗತ್ತಿನ ಸಂಬಂಧ. ಸಮಸ್ತ ಜಗತ್ತನ್ನು ನಿಗ್ರಹಿಸಿ, ನಿರ್ವಹಿಸಿ ಬದಲಾಯಿಸುವುದು ಈ ಪರಸತ್ವ. ಅದಷ್ಟೇ ಅಲ್ಲ, ಈ ಸತ್ವ ಮೃತ್ಯುವೂ ಹೌದು. ಇದನ್ನೇ ಕಠೋಪನಿಷತ್ತು ಹೇಳುತ್ತದೆ. ‘ಬ್ರಹ್ಮಸತ್ವದ ಬಾಯಿಗೆ ವಿದ್ವಾಂಸರೂ, ಶೂರರೂ ತುತ್ತಾಗುತ್ತಾರೆ. ಇತರ ಜೀವಿಗಳು ಊರುಗಾಯಿಗಳಂತೆ’.

ಹೀಗೆಂದರೆ ಏನಾಯಿತು? ಲೋಕವನ್ನು ನಡೆಸುವವರು ಯಾರು? ಪ್ರಕೃತಿಯೇ ಲೋಕ ಚಾಲಕಳು. ಆಕೆಗೆ ಎರಡು ರೂಪಗಳು. ಒಂದು ದೈವೀರೂಪ, ಇನ್ನೊಂದು ಆಸುರೀರೂಪ. ದೈವೀರೂಪವನ್ನು ಆಶ್ರಯಿಸಿದವರು ಭಕ್ತರಾಗುತ್ತಾರೆ, ಇನ್ನೊಂದನ್ನು ನಂಬಿ ನಡೆದವರು ಕ್ರೂರಿಗಳಾಗುತ್ತಾರೆ, ಸಮಾಜ ಕಂಟಕರಾಗುತ್ತಾರೆ.

ಕಗ್ಗದ ಮಾತು ಇದೇ. ನಮ್ಮ ಕಣ್ಣಿನ ಮಿತಿಗಳನ್ನು ದಾಟಿದಂತಹ ಒಂದು ಅಗಾಧವಾದ, ಅನಂತವಾದ ಶಕ್ತಿ ನಮಗರಿವಿಲ್ಲದಂತೆ ಅಲೆಅಲೆಯಾಗಿ ಜಗತ್ತನ್ನು ತುಂಬಿಕೊಂಡು ಹೊಸತನವನ್ನು ತರುತ್ತದೆ. ಆ ಶಕ್ತಿಯನ್ನೇ ನಮ್ಮ ದೃಷ್ಟಾರರು ಬ್ರಹ್ಮ, ದೈವ, ಭಗವಂತ, ಪ್ರಕೃತಿ ಎಂಬ ಹೆಸರುಗಳಿಂದ ಕರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT