ಶನಿವಾರ, ಏಪ್ರಿಲ್ 17, 2021
23 °C

ತಾಳ್ಮೆ, ಮೌನದಿಂದ ಭಾರಹೊರುವ ಕತ್ತೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ವಿಧಿಯ ಹೊರೆಗಳನು ತಪ್ಪಿಸಿಕೊಳುವನೆಲ್ಲಿಹನು? |
ಬೆದರಿಕೆಯನದರಿಂದ ನೀಗಿಪನು ಸಖನು ||
ಎದೆಯನುಕ್ಕಾಗಿಸಾನಿಸು ಬೆನ್ನ, ತುಟಿಯ ಬಿಗಿ |
ವಿಧಿಯಗಸ, ನೀಂ ಕತ್ತೆ – ಮಂಕುತಿಮ್ಮ || 161 ||

ಪದ-ಅರ್ಥ: ಬೆದರಿಕೆಯನದರಿಂದ=ಬೆದರಿಕೆಯನು+ಅದರಿಂದ, ನೀಗಿಪನು=ಕಳೆದುಕೊಳ್ಳುವನು, ಎದೆಯನುಕ್ಕಾಗಿಸಾನಿಸು=ಎದೆಯನು+ಉಕ್ಕಾಗಿಸು(ಬಲಪಡಿಸಿಕೊ)+ಆನಿಸು(ಆನಿಸಿಕೊ, ಹೊಂದಿಸಿಕೊ), ವಿಧಿಯಗಸ=ವಿಧಿ+ಅಗಸ

ವಾಚ್ಯಾರ್ಥ: ವಿಧಿ ನಮ್ಮ ಮೇಲೆ ಹೊರಿಸುವ ಭಾರಗಳನ್ನು ಯಾರು ತಪ್ಪಿಸಿಕೊಳ್ಳಬಲ್ಲರು? ಯಾವನು ನಮ್ಮನ್ನು ಆ ಬೆದರಿಕೆಯಿಂದ ಪಾರುಮಾಡುತ್ತಾನೋ ಅವನೇ ನಿಜವಾದ ಸ್ನೇಹಿತ. ವಿಧಿಯ ಭಾರಗಳನ್ನು ಹೊರಲು ಎದೆಯನ್ನು ಗಟ್ಟಿ
ಮಾಡಿಕೊ, ಅದಕ್ಕೆ ಬೆನ್ನನ್ನು ಭದ್ರವಾಗಿ ಆನಿಸು, ತುಟಿಯನ್ನು ಬಿಗಿ, ಯಾಕೆಂ
ದರೆ ವಿಧಿ ಅಗಸನಾದರೆ ನಾವು ಅದು ಹೊರಿಸುವ ಭಾರವನ್ನು ಹೊರುವ ಕತ್ತೆ ಇದ್ದಂತೆ.

ವಿವರಣೆ: ಇದುವರೆಗೂ ಮನುಷ್ಯನ ಇತಿಹಾಸದಲ್ಲಿ ಯಾರಾದರೂ ವಿಧಿ ನಿಯಮಿಸಿದ ವಿಧಿಗಳನ್ನು ಮೀರಿದ್ದುಂಟೇ? ಎಂತೆಂತಹ ಮಹಾನುಭಾವರು, ಸಾಧಕರು ವಿಧಿಯ ಆಜ್ಞೆಯಂತೆ ಒದ್ದಾಡಿಹೋದರು. ಕರ್ಣ, ಕುರುಕುಲಕ್ಕೆ ಚಕ್ರವರ್ತಿಯಾಗಬಹುದಾಗಿದ್ದವನು ವಿಧಿಯಾಟಕ್ಕೆ ನುಗ್ಗಾಗಿ, ಒದ್ದಾಡಿ ರಣರಂಗದಲ್ಲಿ ಸತ್ತು ಹೋದ. ಅಹಲ್ಯೆ ಕಲ್ಲಾಗಿ ಶತಮಾನಗಳ ಕಾಲ ಬೀಳಬೇಕಾಯಿತು. ಕ್ಷತ್ರಿಯನಾದ ಕೌಶಿಕ, ತನ್ನ ಛಲದಿಂದ, ಸಾಧನೆಯಿಂದ ಬ್ರಹ್ಮರ್ಷಿಯಾಗಲು ಪಟ್ಟ ಕಷ್ಟಗಳು, ನಡುವೆ ಜಾರಿದ ಹಾದಿಗಳು ವಿಧಿಯ ಆಟವನ್ನು ಸಾರುತ್ತವೆ. ವಚನಕಾರ ಅಖಂಡೇಶ್ವರರು ಹೇಳುತ್ತಾರೆ,

“ಕಾಷ್ಠದಲ್ಲಿ ಬೊಂಬೆಯ ಮಾಡಿ,
ಪಟ್ಟುನೂಲ ಸೂತ್ರವ ಹೂಡಿ,
ತೆರೆಯಮರೆಯಲ್ಲಿ ನಿಂದು,
ಸೂತ್ರಿಕನು ಕುಣಿಸಿದಂತೆ ಕುಣಿಯತಿರ್ಪುದಲ್ಲದೆ
ಆ ಅಚೇತನ ಬೊಂಬೆ ತನ್ನ ತಾನೆ ಕುಣಿವುದೆ ಅಯ್ಯಾ?”

ಹೀಗೆ ನಮ್ಮನ್ನು ಸೂತ್ರದ ಬೊಂಬೆಯಂತೆ ಆಡಿಸುತ್ತದೆ ವಿಧಿ. ಈ ಭಯದಿಂದ ನಮ್ಮನ್ನು ಯಾರು ಪಾರುಮಾಡುತ್ತಾರೋ ಅವನೇ ನಮ್ಮ ನಿಜವಾದ ಸ್ನೇಹಿತ. ಆ ಸ್ನೇಹಿತ ಯಾರು ಗೊತ್ತೇ? ಅವನನ್ನು ಹೊರಗೆ ಹುಡುಕುವುದು ಬೇಡ. ಅವನಿರುವುದು ನಮ್ಮಲ್ಲೇ, ನಮ್ಮ ಆತ್ಮವಿಶ್ವಾಸದಲ್ಲೇ. ಅದಕ್ಕೇ ಕಗ್ಗ ಹೇಳುತ್ತದೆ, ಎದೆಯನ್ನು ಉಕ್ಕಿನಂತೆ ಗಟ್ಟಿ ಮಾಡಿಕೋ, ಆ ಗಟ್ಟಿಯಾದ ಎದೆಗೆ ಬೆನ್ನನ್ನು ಭದ್ರವಾಗಿ ಆನಿಸಿ ಸ್ಥಿರತೆಯನ್ನು ಪಡೆ. ಎಲ್ಲಕ್ಕಿಂತ ಮುಖ್ಯವಾದದ್ದೆಂದರೆ ನಿನ್ನ ತುಟಿಯನ್ನು ಬಿಗಿ. ನಾವು ಸಾಮಾನ್ಯವಾಗಿ ತೊಂದರೆ ಬಂದರೆ ಪ್ರಪಂಚ ಕೇವಲ ನಮ್ಮ ತಲೆಯ ಮೇಲೆಯೇ ಬಿದ್ದಂತೆ ಜಗತ್ತಿಗೆಲ್ಲ ನಮ್ಮ ಕಷ್ಟವನ್ನು ಸಾರುತ್ತ, ಗೋಳಾಡುತ್ತ, ಗೊಣಗುತ್ತ ಬರುತ್ತೇವಲ್ಲ. ಅದನ್ನು ನಿಲ್ಲಿಸು ಎನ್ನುತ್ತದೆ ಕಗ್ಗ. ಕಷ್ಟ ಬಂದಾಗ ದೀನತೆಯಿಂದ ಮತ್ತೊಬ್ಬರ ಮುಂದೆ ಯಾಚನೆಯ ಧ್ವನಿ ಬೇಡ. ಹೇಗೂ ಎದೆ, ಬೆನ್ನು ಗಟ್ಟಿ ಮಾಡಿದ್ದಿದೆ, ಮಾತು ನಿಲ್ಲಿಸಿ ಕೃತಿಗೆ ಮನಸ್ಸು ಮಾಡಿದ್ದಿದೆ. ಬರುವುದೆಲ್ಲ ಬರಲಿ. ವಿಧಿ ಎಂಬ ಅಗಸ ಅದೆಷ್ಟು ಹೊರಿಸುತ್ತಾನೋ ಹೊರಿಸಲಿ. ನಾವು ಕತ್ತೆಯಂತೆ ತಾಳ್ಮೆಯಿಂದ, ಮೌನವಾಗಿ ಅದನ್ನು ಹೊತ್ತು ಅವನ ಮೆಚ್ಚುಗೆಯನ್ನು ಪಡೆಯೋಣ.
ಇದು ಕಗ್ಗದ ಮರ್ಮ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.