ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮತ್ತೊಂದು ಪರೀಕ್ಷೆ

Last Updated 28 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಈಗ ರಾಜ ವಿದೇಹನಿಗೆ ತಡೆಯಲಾಗಲಿಲ್ಲ. ಎಷ್ಟು ಪರೀಕ್ಷೆಗಳನ್ನು ಮಾಡಿದರೂ ಮಹೋಷಧಕುಮಾರನಾದ ಬೋಧಿಸತ್ವ ಗೆಲ್ಲುತ್ತಲೇ ಇದ್ದಾನೆ. ಆದರೆ ಈ ಮಂತ್ರಿಗಳು ಅವನ ಬಗ್ಗೆ ಅಸಹನೆಯನ್ನು ಹೊಂದಿದ್ದಾರೆ ಮತ್ತು ಅವನು ಬಂದರೆ ತಮಗೆ ತೊಂದರೆಯಾದೀತು ಎಂಬ ಭಯಪಡುತ್ತಾರೆ ಎಂಬುದನ್ನು ತಿಳಿದ ರಾಜ, ತಾನೇ ಹೋಗಿ ಮಹೋಷಧಕುಮಾರನನ್ನು ಕರೆದು ತರಬೇಕು ಎಂದು ಮಿತವಾದ ಸೈನಿಕಪಡೆಯನ್ನು ಜೊತೆಮಾಡಿಕೊಂಡು ಮಂಗಲಾಶ್ವವನ್ನೇರಿ ಹೊರಟುಬಿಟ್ಟ. ಇದನ್ನು ಮಂತ್ರಿಗಳಿಗೆ ಹೇಳಲಿಲ್ಲ. ಆದರೆ ದಾರಿಯಲ್ಲಿ ಸೀಳಿದ ಭೂಮಿಯಲ್ಲಿ ಕುದುರೆಯ ಕಾಲು ಸಿಕ್ಕಿ ಮುರಿದು ಹೋಯಿತು. ಅದು ಅಪಶಕುನವಾಯಿತೆಂದು ಮರಳಿ ಮಿಥಿಲೆಗೆ ಬಂದ. ಮಂತ್ರಿಗಳು ಬಂದು, ‘ಮಹಾರಾಜ, ದಯವಿಟ್ಟು ನಮ್ಮನ್ನು ತಪ್ಪು ತಿಳಿಯುವುದು ಬೇಡ. ನಾವು ತಮ್ಮ ಹಿತಚಿಂತಕರು. ತಾವು ನಂಬಿರುವ ಮಹೋಷಧಕುಮಾರನನ್ನು ಸರಿಯಾಗಿ ಪರೀಕ್ಷಿಸದೆ ಒಪ್ಪಿದರೆ ಮುಂದೆ ದೇಶಕ್ಕೆ ಅನ್ಯಾಯವಾಗುವುದು’ ಎಂದು ಹೇಳಿದರು. ‘ಪ್ರಭೂ, ದಯವಿಟ್ಟು ಒಂದು ಸಂದೇಶವನ್ನು ಕಳುಹಿಸಿ. ನಾವು ನಿನ್ನೆಡೆಗೆ ಬರುವಾಗ ಕುದುರೆಯ ಗೊರಸು ಮುರಿಯಿತು. ಆದ್ದರಿಂದ ನೀನೇ ಇಲ್ಲಿಗೆ ಬಾ. ಹೆಸರಗತ್ತೆಯನ್ನೋ, ಹಿರಿಯದಾದದ್ದನ್ನೋ ಏರಿ ಬಾ’. ರಾಜ ಅದರಂತೆಯೇ ಸಂದೇಶ ಕಳುಹಿಸಿದ.

ಮಹೋಷಧಕುಮಾರ ತನ್ನ ತಂದೆಯ ಬಳಿಗೆ ಹೋಗಿ, ‘ಅಪ್ಪಾ, ರಾಜ ನಮ್ಮನ್ನು ಬರಹೇಳಿದ್ದಾನೆ. ಅಲ್ಲೊಂದು ಪರೀಕ್ಷೆ ಇದೆ. ತಾವು ತಪ್ಪು ತಿಳಿಯಬಾರದು. ತಾವು ಸಾವಿರ ಜನ ಶ್ರೇಷ್ಠಿಯರನ್ನು ಕರೆದುಕೊಂಡು, ಚಂದನದ ಪಾತ್ರೆಗಳಲ್ಲಿ ಹೊಸ ತುಪ್ಪವನ್ನು ತುಂಬಿಸಿಕೊಂಡು ಹೋಗಿ. ದರಬಾರಿನಲ್ಲಿ ಒಂದು ಉಚಿತಸ್ಥಾನದಲ್ಲಿ ಕುಳಿತುಕೊಳ್ಳಿ. ನಾನು ನಂತರ ಬಂದಾಗ ರಾಜ ನನಗೆ ಕುಳಿತುಕೊಳ್ಳಲು ಒಂದು ಸ್ಥಾನವನ್ನು ಹೇಳುತ್ತಾನೆ. ಆಗ ತಾವು ದಯವಿಟ್ಟು ಮೇಲೆದ್ದು ತಮ್ಮ ಆಸನವನ್ನು ನನಗೆ ಬಿಟ್ಟುಕೊಡಬೇಕು’ ಎಂದು ಬೇಡಿದ. ಅದರಂತೆಯೇ ತಂದೆ ರಾಜಭವನಕ್ಕೆ ಹೋದರು. ಮಹೋಷಧಕುಮಾರ ತನ್ನ ಸಾವಿರ ಜನ ಸ್ನೇಹಿತ, ತರುಣರನ್ನು ಜೊತೆಮಾಡಿಕೊಂಡು ಅರಮನೆಗೆ ಬಂದ. ದಾರಿಯಲ್ಲಿ ಒಂದು ಕತ್ತೆಯನ್ನು ಹಿಡಿದು, ಬಾಯಿಕಟ್ಟಿ ಅದನ್ನೆತ್ತಿಕೊಂಡು ಬಂದರು.

ಅರಮನೆಯಲ್ಲಿ ಮಹೋಷಧಕುಮಾರನನ್ನು ಕಂಡು ರಾಜನಿಗೆ ಬಹಳ ಸಂತೋಷವಾಯಿತು. ಒಂದು ಒಳ್ಳೆಯ ಆಸನದಲ್ಲಿ ಕುಳಿತುಕೋ ಎಂದು ಹೇಳಿದ. ಮೊದಲು ಯೋಜಿಸಿದಂತೆ ತಂದೆ ಥಟ್ಟನೇ ಮೇಲೆದ್ದು ಬೇರೆ ಆಸನದಲ್ಲಿ ಕುಳಿತುಕೊಂಡ. ಕುಮಾರ ತಂದೆ ಕುಳಿತಿದ್ದ ಆಸನದಲ್ಲಿ ಕುಳಿತ. ಮಂತ್ರಿಗಳು ಇದನ್ನು ಕಂಡು ಕೈತಟ್ಟಿ ನಕ್ಕರು. ಈತ ತಂದೆಯನ್ನು ಮೇಲೆ ಎಬ್ಬಿಸಿ ತಾನು ಕುಳಿತು ಅಪಮಾನ ಮಾಡಿದ್ದಾನೆ. ಇವನೆಂಥ ಪಂಡಿತ ಎಂದು ಹೀಯಾಳಿಸಿದರು. ಆಗ ಕುಮಾರ ತಾನು ತಂದಿದ್ದ ಕತ್ತೆಯನ್ನು ಎಲ್ಲರ ಮುಂದೆ ನಿಲ್ಲಿಸಿ, ‘ರಾಜಾ ಇದರ ಬೆಲೆ ಎಷ್ಟು?’ ಎಂದು ಕೇಳಿದ. ‘ಬಹುಶಃ ಏಳೆಂಟು ಕಹಾಪಣಗಳಾಗಬಹುದು’ ಎಂದ ರಾಜ. ‘ಇದರ ಸಂಪರ್ಕದಿಂದ ಶ್ರೇಷ್ಠ ಕುದುರೆಯ ಗರ್ಭದಿಂದ ಜನಿಸಿದ ಹೇಸರಗತ್ತೆಯ ಬೆಲೆ ಎಷ್ಟಾಗಬಹುದು?’ ಎಂದು ಕೇಳಿದ. ‘ಅದು ಅಮೂಲ್ಯವಾದದ್ದು’ ಎಂದ ರಾಜ. ‘ಕತ್ತೆ ವಯಸ್ಸಿನಲ್ಲಿ ಹಿರಿಯದು, ಹೇಸರಗತ್ತೆ ಕಿರಿಯದು. ಆದರೆ ಹೇಸರಗತ್ತೆಯ ಬೆಲೆ ಹೆಚ್ಚು. ಯಾವಾಗಲೂ ಹಿರಿತನವೇ ಬುದ್ಧಿವಂತಿಕೆಗೆ ಮಾನದಂಡವಾಗುವುದಿಲ್ಲ. ನನ್ನ ತಂದೆ ನನಗೆ ದೇವರ ಸಮಾನ. ಆದರೆ ಹಿರಿತನವೇ ಸದಾಕಾಲ ಶ್ರೇಷ್ಠವಲ್ಲನೆಂಬುದನ್ನು ತೋರಲು ಮೊದಲು ಅವರ ಅಪ್ಪಣೆ ಪಡೆದೇ ಹೀಗೆ ಮಾಡಿದೆ. ಆದರೆ ನಿಮ್ಮ ಅಮಾತ್ಯರಿಗೆ ಅದೂ ತಿಳಿಯದೆ ಚಪ್ಪಾಳೆ ತಟ್ಟಿದರು. ಇವರು ಬರೀ ವಯಸ್ಸಾದವರು, ಬುದ್ಧಿಯಲ್ಲಿ ಹಿರಿಯರಲ್ಲ’ ಎಂದು ಚೆನ್ನಾಗಿ ಛೀಮಾರಿ ಹಾಕಿದ. ಮಹಾರಾಜನಿಗೆ ಬೋಧಿಸತ್ವ, ಮಹೋಷಧಕುಮಾರನ ಬಗ್ಗೆ ಅಭಿಮಾನ ಹೆಚ್ಚಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT