ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಿನ ಬೆಳಕು: ಕ್ಷಣ ಅಮೃತಕ್ಷಣವಾಗುವ ಬಗೆ

Last Updated 9 ಸೆಪ್ಟೆಂಬರ್ 2021, 23:37 IST
ಅಕ್ಷರ ಗಾತ್ರ

ಹಿಂದಣದರುಳಿವಿರದು, ಮುಂದಣದರುಸಿರಿರದು |
ಒಂದರೆಕ್ಷಣ ತುಂಬಿ ತೋರುವುದನಂತ ||
ಒಂದೆ ಕಣ್ಣೊಂದೆ ಗುರಿಯೊಂದೆ ಮೈ ಮನಮರೆತ |
ಸುಂದರದ ಲೋಕವದು – ಮಂಕುತಿಮ್ಮ || 458 ||

ಪದ-ಅರ್ಥ: ಹಿಂದಣದರುಳಿವಿರದು= ಹಿಂದಣದರ (ಹಿಂದಾದ್ದರ)+ ಉಳಿವಿರದು, ಮುಂದಣದದುಸಿರಿರದು= ಮುಂದಣದರ (ಮುಂದಾಗುವುದರ)+ ಉಸಿರು+ ಇರದು, ತೋರುವುದನಂತ= ತೋರುವುದು+ ಅನಂತ.

ವಾಚ್ಯಾರ್ಥ: ಅನನ್ಯ ಸೌಂದರ್ಯದ ಅನುಭವದಲ್ಲಿ ಹಿಂದಿನ ಯಾವುದರ ಉಳಿವಿಲ್ಲ, ಮುಂದಾಗುವುದರ ಉಸಿರಿಲ್ಲ, ಆ ಒಂದು ಅರೆಕ್ಷಣ ಮನತುಂಬಿ ಅನಂತವಾಗುತ್ತದೆ. ಆಗ ಕಣ್ಣು, ಗುರಿಗಳೆಲ್ಲ ಒಂದಾಗಿ ಮೈಮನಗಳು ಮರೆತು ಹೋಗುತ್ತವೆ. ಆ ಲೋಕವೆ ಸುಂದರವಾದದ್ದು.

ವಿವರಣೆ: ನಮ್ಮೆಲ್ಲರ ಬದುಕಿನಲ್ಲಿ ಒಂದೆರಡು ಬಾರಿಯಾದರೂ ಅಂತಹ ಅತ್ಯಂತ ಸುಂದರ ಘಟನೆಗಳು ಬಂದೇ ಇರುತ್ತವೆ. ನನಗೊಮ್ಮೆ ಹಾಗೆ ಆಗಿತ್ತು. ನಾನು ಕಲಿತ ರಸಾಯನಶಾಸ್ತ್ರದ ಮೇರು ಶಿಖರ ಎನ್ನಿಸಿದ್ದ, ಎರಡು ಬಾರಿ ನೋಬೆಲ್ ಪಾರಿತೋಷಕ ಪಡೆದಿದ್ದ, ಡಾ. ಲೀನಸ್ ಪೌಲಿಂಗ್ ನನಗೊಂದು ದೂರದ ನಕ್ಷತ್ರ. ಅವರ ಬಗ್ಗೆ, ಅವರ ಸಂಶೋಧನೆಗಳನ್ನು ಓದಿದ್ದ ನನಗೆ ಅವರು ಅಂದು ದೈವಸ್ವರೂಪ. ಅಂಥವರನ್ನು ಒಮ್ಮೆ ಬೆಟ್ಟಿಯಾಗುವ, ಮಾತನಾಡುವ ಅವಕಾಶ ದೊರೆತಾಗ, ನಾನು ನನ್ನ ಕೈಯನ್ನೇ ಜಿಗುಟಿಕೊಂಡು, ಅದು ಸತ್ಯವೇ ಎಂದು ನೋಡಿಕೊಂಡೆ. ಅವರೊಂದಿಗೆ ಮಾತನಾಡಿದ್ದು ಕೇವಲ ಐದು ನಿಮಿಷವಿದ್ದಿರಬೇಕು. ಆದರೆ ಇಂದಿಗೂ ಅದು ನಿನ್ನೆಯೇ ಆದಂತಿದೆ. ಐದು ನಿಮಿಷ ಬದುಕಿನುದ್ದಕ್ಕೂ ಹರಡಿ ನಿಂತಿದೆ, ಅನಂತವಾಗಿದೆ. ಆ ಘಟನೆ ನಡೆದ ಕ್ಷಣದಲ್ಲಿ ನನಗೆ ಹಿಂದಿನದೆಲ್ಲ ಮರೆತು ಹೋಗಿ, ಭವಿಷ್ಯ ಕಣ್ಮರೆಯಾಗಿ, ವರ್ತಮಾನವೊಂದೇ ಯುಗವಾಗಿತ್ತು. ಅದನ್ನೇ ಕಗ್ಗ ಹೇಳುತ್ತದೆ. ಆ ಮಧುರ ಕ್ಷಣದಲ್ಲಿ ಭೂತ, ಭವಿಷ್ಯಗಳು ಮರೆಯಾಗಿ ವರ್ತಮಾನದ ಕ್ಷಣ ಮಾತ್ರ ಅಮೃತವಾಗುತ್ತದೆ, ಮೈಮನಗಳನ್ನು ಮರೆಸಿಬಿಡುತ್ತದೆ. ಅದೊಂದು ಸುಂದರ ಪ್ರಪಂಚ. ಅದರ ಸುಂದರತೆಯೇ ಬೇರೆ. ಆ ಕ್ಷಣದ ಪುನರಾವರ್ತನೆಯಾಗುವುದು ಅಪರೂಪ.

ನಾನೊಮ್ಮೆ, ನಮ್ಮ ನೆಚ್ಚಿನ ಕವಿಗಳಾದ ಕೆ.ಎಸ್. ನರಸಿಂಹಸ್ವಾಮಿಯವರ ಜೊತೆಗೆ ಮಾತನಾಡುವಾಗ, ನನಗೆ ಅವರದೊಂದು ಸುಂದರ ಹಾಡು ನೆನಪಿಗೆ ಬಂತು. ಅದೊಂದು ಜೋಗುಳದ ಹಾಡು.

“ಅತಿತ್ತ ನೋಡದಿರು, ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೆ.
ಜೋ ಜೋಜೋ ಜೋಜೋ ಜೋಜೋಜೋ.

ಬಣ್ಣ ಬಣ್ಣದ ಕನಸು ಕರಗುವುದು ಬಲುಬೇಗ;
ಹಗಲು ಬರುವನು ಬೆಳ್ಳಿ ಮುಗಿಲ ನಡುವೆ.
ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ
ಪಟ್ಟದಾನೆಯ ಮೇಲೆ ಪುಟ್ಟ ಮಗುವೆ”.

ಆ ರೂಪಕವೇ ಅದ್ಭುತವಾದದ್ದು. ಪಟ್ಟದಾನೆ ತುಂಬ ದೊಡ್ಡದು, ಅದರ ಮೇಲೆ ಚಿನ್ನದ ಅಂಬಾರಿ. ಅದರೊಳಗೆ ಕುಳಿತದ್ದು ಪುಟ್ಟ ಮಗು! ‘ಸರ್, ಪಟ್ಟದಾನೆಯ ಮೇಲೆ ಪುಟ್ಟ ಮಗು! ಇದು ಹೇಗೆ ಹೊಳೆಯಿತು?’ ಎಂದು ಕೇಳಿದೆ. ಅದಕ್ಕವರು, ‘ಮೇಷ್ಟ್ರೇ ಅದೊಂದು ಅಮೃತ ಕ್ಷಣ. ಮರುದಿನ ಅಲ್ಲ, ಇನ್ನೊಂದು ತಾಸು ಬಿಟ್ಟು ಬರೆದಿದ್ದರೂ ಅದೇ ಮಾತು ಬರುತ್ತಿತ್ತೋ ಇಲ್ಲವೋ ಗೊತ್ತಿಲ್ಲ’ ಎಂದರು! ಇದೇ, ಕ್ಷಣ, ಅಮೃತಕ್ಷಣವಾಗುವ ಬಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT