ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಯಮನಿಗೆ ಬೇಡದ ಅಪಕೀರ್ತಿ

Last Updated 18 ಏಪ್ರಿಲ್ 2020, 0:46 IST
ಅಕ್ಷರ ಗಾತ್ರ

ಯಮನಿಗೇಪಕೀರ್ತಿ? ನರರು ಬಲು ಕರುಣಿಗಳೆ? |
ಮಮತೆಯಿನೊ ರೋಷದಿನೊ ಹಾಸ್ಯದಿನೊ ಹೇಗೋ ||
ನಿಮಿಷನಿಮಿಷಮುಮೊರ್ವನಿನ್ನೊರ್ವನನು ತಿಕ್ಕಿ |
ಸಮೆಯಿಸುವನಾಯುವನು – ಮಂಕುತಿಮ್ಮ|| 279 ||

ಪದ-ಅರ್ಥ: ಯಮನಿಗೇಪಕೀರ್ತಿ=ಯಮನಿಗೆ+ಏಕೆ+ಅಪಕೀರ್ತಿ, ನಿಮಿಷನಿಮಿಷಮುಮೊರ್ವನಿನ್ನೊರ್ವನನು=ನಿಮಿಷನಿಮಿಷಮು+ಒರ್ವನು+ಇನ್ನೋರ್ವನನು, ಸಮೆಯಿಸುವನಾಯುವನು=ಸಮೆಯಿಸುವನು (ಸವೆಸುವನು)+ಆಯುವನು(ಆಯುಷ್ಯವನ್ನು).

ವಾಚ್ಯಾರ್ಥ: ಯಮನಿಗೇಕೆ ಅಪಕೀರ್ತಿ? ಮನುಷ್ಯರು ಬಹಳ ಕರುಣಿಗಳೆ? ಮಮತೆಯಿಂದಲೋ, ಸಿಟ್ಟಿನಿಂದಲೋ, ತಮಾಷೆಯಾಗಿಯೋ, ಹೇಗೋ ಪ್ರತಿನಿಮಿಷ ಒಬ್ಬರು ಮತ್ತೊಬ್ಬರೊಂದಿಗೆ ಉಜ್ಜಿ ಅವರ ಆಯುಷ್ಯವನ್ನು ಸವೆಸುವರು.

ವಿವರಣೆ: ನಮ್ಮ ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ಯುಮಧರ್ಮನನ್ನು ಬಹುತೇಕ ಒಬ್ಬ ಖಳನಾಯಕನಂತೆ ತೋರಿಸಲಾಗುತ್ತದೆ. ಕಪ್ಪು, ಭಾರೀಮೈ, ಭಯಂಕರ ಮೀಸೆ, ಪಕ್ಕದಲ್ಲೊಂದು ದೊಡ್ಡ ಕೋಣ, ಅವನ ಕೈಯಲ್ಲಿ ಪಾಶ. ಅವನು ಮಾತನಾಡುವುದು ಭಯವನ್ನುಂಟು ಮಾಡುವಂತಿರುತ್ತದೆ. ನಾನು ಅವನನ್ನು ಕಂಡಿಲ್ಲ, ಆದರೂ ಅವನು ಹಾಗಿರುವುದು ಸಾಧ್ಯವಿಲ್ಲ. ಉಪನಿಷತ್ತುಗಳಲ್ಲಿ ಅವನ ಬಗ್ಗೆ ಬರುವ ವಿವರಣೆ ಅದ್ಭುತವಾದದ್ದು. ಅವನ ಹೆಸರೇ ಯಮಧರ್ಮ. ಯಮ ಎಂದರೆ ಬಿಗಿ. ಯಾರು ಧರ್ಮವನ್ನು ಬಿಗಿಯಾಗಿ ಪಾಲಿಸುತ್ತಾನೋ ಅವನು ಯಮಧರ್ಮ. ಯಮ ಜನರ ಪ್ರಾಣಗಳನ್ನು ಕಿತ್ತುಕೊಂಡು ಹೋಗುತ್ತಾನೆ, ಅವನಿಗೆ ಕರುಣೆ ಎಂಬುದೇ ಇಲ್ಲ. ಅವನು ಕೊಡುವ ಶಿಕ್ಷೆಗಳು ಮತ್ತ್ತೂ ಭಯಂಕರವಾದವುಗಳು ಎಂದು ಏನೇನೋ ಕಥೆಗಳನ್ನು ಕಟ್ಟಿಕೊಂಡು ನಿಷ್ಕರುಣಿ ಪಟ್ಟವನ್ನು ಯಮನಿಗೆ ಕಟ್ಟಿಬಿಟ್ಟಿದ್ದೇವೆ.

ಆದರೆ ಕಗ್ಗ ಹೇಳುತ್ತದೆ, ಯಮನಿಗೇಕೆ ನಿಷ್ಕರುಣಿ ಎಂಬ ಅಪಕೀರ್ತಿ? ನಮ್ಮ ಸುತ್ತಮುತ್ತಲೂ ಇರುವ ಮನುಷ್ಯರು ಬಹಳ ಕರುಣಿಗಳೇ? ಅವರು ಪ್ರಾಣವನ್ನು ಹೀರುವ ಕ್ರೂರತೆಯನ್ನು ಯಮನೂ ತೋರಿಸಲಾರ. ಇವರು ಬೀಸುವ ಯಮಪಾಶ ಬೇರೆ ರೀತಿಯದು. ಕೆಲವರದು ಕ್ರೌರ್ಯದ ಯಮಪಾಶ. ವ್ಯಕ್ತಿಯ ಮೇಲೋ, ಸಮುದಾಯದ ಮೇಲೋ, ದೇಶದ ಮೇಲೋ ಇದ್ದ ಕೋಪ, ಅದೆಂಥ ಭಯಂಕರ ಯಮಪಾಶವನ್ನು ಸೃಷ್ಟಿಸುತ್ತದೆ. ಮಹಾಯುದ್ಧಗಳು, ಜಾತೀಯ ಸಂಘರ್ಷಗಳು ಏನನ್ನು ಹೇಳುತ್ತವೆ? ಅವೆಲ್ಲ ರೋಷದ, ದ್ವೇಷದ, ಅಸಹನೆಯ ಯಮಪಾಶಗಳು. ಇಪ್ಪತ್ತನೆಯ ಶತಮಾನದಲ್ಲಿ ನಡೆದ ಎರಡು ಮಹಾಯುದ್ಧಗಳಲ್ಲಿ ಎಷ್ಟು ಮಂದಿ ಹತರಾದರೋ ಅದರ ಮೂರು ಪಟ್ಟಿನಷ್ಟು ಜನ ಮತೀಯ ಹಿಂಸೆಗೆ ಬಲಿಯಾದರು. ಇದೆಲ್ಲ ಮನುಷ್ಯ-ಮನುಷ್ಯರ ನಡುವಿನ ಘರ್ಷಣೆಯ ಫಲ.

ಮಮತೆಯೂ ಬಂಧನವೇ. ಮಕ್ಕಳಿಗೋಸ್ಕರ ತಂದೆ-ತಾಯಿಯರು ಪಡುವ ಕಷ್ಟ ಸ್ವಲ್ಪವೇ? ಬೆಳೆಯುವಾಗ ಅವರ ರಕ್ಷ್ಷಣೆಯ, ಬೆಳವಣಿಗೆಯ ಆತಂಕ. ಕೊನೆಯವರೆಗೂ ನನ್ನ ಮಕ್ಕಳು, ಅವರಿಗೇನೂ ಆಗಬಾರದು ಎಂಬ ಭಯ ಪ್ರಾಣ ಹಿಂಡುತ್ತದೆ. ಇತ್ತೀಚಿಗೆ ಆಸ್ಟ್ರೇಲಿಯದ ಕಾಡಿನಲ್ಲಿ ಹೊತ್ತಿಕೊಂಡ ಬೆಂಕಿ ಆರಿಸಲು ನೀರು ಸಿಂಪಡಿಸುತ್ತಿದ್ದಾಗ ಒಂದು ದೊಡ್ಡ ಪಕ್ಷಿ ಮರದ ಕೆಳಗೆ ಬಿದ್ದಿದ್ದನ್ನು ಕಂಡರು. ಪಕ್ಷಿ ಸುಟ್ಟುಹೋಗಿದೆ. ಅದರ ರೆಕ್ಕೆಗಳನ್ನು ಅಗಲಿಸಿದಾಗ ಅದರಲ್ಲಿ ಎರಡು ಪುಟ್ಟ ಮರಿಗಳನ್ನು ಕಂಡರು. ಅವು ಬದುಕಿದ್ದವು. ತಾಯಿ ಪಕ್ಷಿ ಮರಿಗಳನ್ನು ರಕ್ಷಿಸಲು ಅವುಗಳನ್ನು ತನ್ನ ರೆಕ್ಕೆಯ ಒಳಗೆ ಭದ್ರಪಡಿಸಿ, ತಾನು ಸುಟ್ಟುಕೊಂಡರೂ, ಮರಿಗಳಿಗೆ ಬೆಂಕಿ ತಾಗದಂತೆ ನೋಡಿಕೊಂಡಿತ್ತು. ಮಮತೆ ಯಮಪಾಶವಾಗಿತ್ತು.

ರೋಷ, ಮಮತೆ, ಹಾಸ್ಯ ಹೀಗೆಲ್ಲ ಮನಸ್ಸಿನ ಭಾವನೆಗಳು ಮನುಷ್ಯರನ್ನು ಕ್ಷಣ, ಪ್ರತಿಕ್ಷಣ ಸಂಘರ್ಷಿಸುವಂತೆ ಮಾಡಿ ಆಯುಷ್ಯವನ್ನು ಕಳೆಯುತ್ತವೆ. ಪಾಪ! ಬರೀ ಯಮನಿಗೆ ಅಪಕೀರ್ತಿಕೊಡುವುದೇಕೆ?.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT