ಶುಕ್ರವಾರ, ಮಾರ್ಚ್ 5, 2021
29 °C
333

ವಿಶ್ವದ ನಿತ್ಯತೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹುಳು ಹುಟ್ಟಿ ಸಾಯುತಿರೆ, ನೆಲ ಸವೆದುಕರಗುತಿರೆ |
ಕಡಲೊಳೆತ್ತಲೊ ಹೊಸದ್ವೀಪವೇಳುವುದು ||
ಕಳೆಯುತೊಂದಿರಲಿಲ್ಲಿ, ಬೆಳೆವುದಿನ್ನೊಂದೆಲ್ಲೊ |
ಅಳಿವಿಲ್ಲ ವಿಶ್ವಕ್ಕೆ–ಮಂಕುತಿಮ್ಮ || 166 ||

ಪದ-ಅರ್ಥ: ಕಡಲೊಳೆತ್ತಲೊ=ಕಡಲೊಳು+ಎತ್ತಲೊ, ಕಳೆಯು|ತೊಂದಿರಲಿಲ್ಲ=ಕಳೆಯುತೊಂದಿರಲು+ಇಲ್ಲಿ ಬೆಳೆವುದಿನ್ನೊಂದೆಲ್ಲೊ=ಬೆಳೆವುದು+ಇನ್ನೊಂದು+ಎಲ್ಲೊ

ವಾಚ್ಯಾರ್ಥ: ಹುಳುಗಳು ಹುಟ್ಟಿ ಸಾಯುತ್ತವೆ, ನೆಲ ಸವೆದು ಕರಗುತ್ತದೆ, ಸಮುದ್ರದಲ್ಲಿ ಎಲ್ಲೋ ಹೊಸದ್ವೀಪ ಎದ್ದು ಬರುತ್ತದೆ. ಒಂದು ಕಡೆ ನಾಶವಾಗುತ್ತ ಮತ್ತೊಂದೆಡೆಗೆ ಸೃಷ್ಟಿಯಾಗುತ್ತಿರುವ ಈ ವಿಶ್ವಕ್ಕೆ ಎಂದಿಗೂ ಸಾವಿಲ್ಲ.

ವಿವರಣೆ: ಎಂದಿನಿಂದಲೂ ಇರುವ ಈ ವಿಶ್ವದಲ್ಲಿ ಅದೆಷ್ಟು ಜೀವರಾಶಿ ಗಳು ಹುಟ್ಟಿ ಬಂದು ಮರೆಯಾದವೋ? ಕೆಲವು ಜೀವಗಳು ನಿಧಾನಕ್ಕೆ, ಶತಮಾನಗಳ ಕಾಲ ಬದಲಾಗುತ್ತ ಬೇರೆ ಜೀವಿಗಳೇ ಆದವು. ವಾತಾವರಣಕ್ಕೆ ಹೊಂದಿಕೊಳ್ಳದ ಪ್ರಾಣಿಗಳ ಸಂತತಿಯೇ ನಿಂತು ಹೋಗಿದೆ. ಹೀಗೆ ಸತತವಾದ ಬದಲಾವಣೆ ನಡೆದೇ ಇದೆ. ಅದೇ ರೀತಿ ಭೂಪ್ರದೇಶದಲ್ಲೂ ಬದಲಾವಣೆಕಂಡಿದೆ. ಹಿಂದಿದ್ದ ಕೆಲವು ಭೂಪ್ರದೇಶಗಳು ಕರಗಿಯೇ ಹೋಗಿವೆ.

ಭೂಖಂಡಗಳೇ ತೇಲುತ್ತ ತಮ್ಮ ಮೂಲಸ್ಥಳಗಳನ್ನು ಬಿಟ್ಟು ಬೇರೆಲ್ಲಿಯೋ ಅಲೆಯುತ್ತ ಬಂದಿವೆ. ಆಫ್ರಿಕಾದ ಹತ್ತಿರವಿದ್ದ ಭೂಪ್ರದೇಶ ತೇಲುತ್ತ ಬಂದು ಏಶಿಯಾದ ನೆಲಕ್ಕೆ ಡಿಕ್ಕಿ ಹೊಡೆದಾಗ ಸೃಷ್ಟಿಯಾದದ್ದು ಹಿಮಾಲಯ. ಆ ಡಿಕ್ಕಿ ಹೊಡೆಯುವಿಕೆ ಇನ್ನೂ ನಡೆದೇ ಇದೆ. ಅದಕ್ಕೇ ಹಿಮಾಲಯ ಪ್ರತಿವರ್ಷ ಒಂದಿಷ್ಟು ಬೆಳೆಯುತ್ತಲೇ ಇದೆಯಂತೆ.

ನನ್ನಜ್ಜ ತೀರ್ಥಯಾತ್ರೆಗೆ ಹೋದಾಗ ರಾಮೇಶ್ವರ ನೋಡುವುದು ಮಾತ್ರವಲ್ಲ, ಇನ್ನೂ ಮುಂದೆ ಹೋಗಿ ಧನುಷ್ಕೋಟಿಗೆ ಕೂಡ ಹೋಗಿ ಬಂದಿದ್ದ. ಇದು ಬಹಳ ಹಿಂದಿನ ಕಥೆಯಲ್ಲ. ಇದು ಆದದ್ದು ಸುಮಾರು ಅರವತ್ತು ವರ್ಷಗಳ ಹಿಂದೆ. ಆದರೆ ಇಂದು ಧನುಷ್ಕೋಟಿ ಇಲ್ಲ, ನೀರಿನಲ್ಲಿ ಮುಳುಗಿ ಹೋಗಿದೆ. ಆದರೆ ಸುಂದರವಾದ ಮಾರಿಷಿಯಸ್ ಹತ್ತಿರ ಸಣ್ಣ ಸಣ್ಣ ದ್ವೀಪಗಳು ಸಮುದ್ರದಲ್ಲಿ ಮೇಲೆದ್ದು ನಿಂತಿವೆಯಂತೆ.

ಇದೊಂದು ಪ್ರಕೃತಿ ವೈಚಿತ್ರ್ಯ ಹಾಗೂ ವಿಶೇಷ. ಪ್ರಪಂಚ ಪ್ರಾರಂಭವಾದಂದಿನಿಂದ ಪ್ರಾಣಿಗಳ ಸೃಷ್ಟಿ ಹಾಗೂ ನಾಶ ಸತತವಾಗಿ ನಡೆದಿದೆ. ಅದೇ ರೀತಿ ಭೂಮಿಯಲ್ಲಿ ಅನೇಕ ಸ್ಥಿತ್ಯಂತರಗಳು ನಡೆದಿವೆ. ಆದರೆ ವಿಶ್ವ ಮಾತ್ರ ಹಾಗೆಯೇ ಉಳಿದಿದೆ.

ಇದು ಡಿ.ವಿ.ಜಿ.ಯವರ ಪ್ರತಿಯೊಂದು ಕಗ್ಗದಲ್ಲಿ ಕಂಡುಬರುವ ಮೂಲಗುಣ. ಅದು ಆಶಾವಾದ. ಅಲ್ಲಿ ನಿರಾಸೆಗೆ ಎಡೆಯಿಲ್ಲ. ಮೊದಲಿನ ಮೂರು ಸಾಲಿನಲ್ಲಿ ವಾಸ್ತವವನ್ನು ತಿಳಿಸಿ ಕೊನೆಯ ಪುಟ್ಟ ಅರ್ಧ ಸಾಲಿನಲ್ಲಿ ಆಶಾವಾದವನ್ನು ತುಂಬಿ ಬಿಡುತ್ತಾರೆ.

ಹಿಂದಿದ್ದ ಮನುಷ್ಯರು, ಪ್ರಾಣಿಗಳು ಇಂದು ಜೀವಿಸಿಲ್ಲ. ಆದರೆ ಜೀವರಾಶಿ ಇನ್ನೂ ಬದುಕಿಯೇ ಇದೆ. ಅವುಗಳ ರೂಪದಲ್ಲಿ, ಗುಣಗಳಲ್ಲಿ ಬದಲಾವಣೆಯಾಗಿರಬಹುದು. ಡೈನೊಸಾರಸ್ ಪ್ರಪಂಚದಿಂದ ಮರೆಯಾಗಿರಬಹುದು, ಆದರೆ ಅದರ ಅಂಶಗಳನ್ನು ಹೊಂದಿದ ಬೇರೊಂದು ರೀತಿಯ ಪ್ರಾಣಿಗಳು ಹುಟ್ಟಿ ಬಂದಿವೆ. ಕೋತಿ ನಿಧಾನವಾಗಿ ರೂಪದಲ್ಲಿ, ಸ್ವಭಾವದಲ್ಲಿ ಬದಲಾಗುತ್ತ ಮನುಷ್ಯನಾಗಿರಬಹುದು. ಪ್ರಕೃತಿ ವಿಕೋಪಗಳಿಂದ ಭೂ ಪ್ರದೇಶದಲ್ಲಿ ಬದಲಾವಣೆಗಳಾದರೂ ವಿಶ್ವದ ಮೂಲರೂಪ ಹಾಗೆಯೇ ಇದೆ. ಈ ವಿಶ್ವ ನಶಿಸಿ ಹೋಗುವುದಲ್ಲ, ಕೇವಲ ಬದಲಾವಣೆಯನ್ನು ಕಾಣುವಂತಹದು. ವಿಶ್ವದ ನಿತ್ಯತೆ ನಮಗೆ ಭದ್ರತೆಯನ್ನು ನೀಡುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು