ಬುಧವಾರ, ಏಪ್ರಿಲ್ 14, 2021
25 °C

ಬೆರಗಿನ ಬೆಳಕು: ತೋರಿಕೆಗಳ ಸತ್ಯತೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹುರಿಯುರುಳೆ ಹಾವಲ್ಲವಾದೊಡಂ ಮಬ್ಬಿನಲಿ|
ಹರಿದಾಡಿದಂತಾಗೆ ನೋಳ್ಪವಂ ಬೆದರಿ||
ಸುರಿಸುವಾ ಬೆವರು ದಿಟ; ಜಗವುಮಂತುಟೆ ದಿಟವು|
ಜರೆಯದಿರು ತೋರ್ಕೆಗಳ – ಮಂಕುತಿಮ್ಮ || 391||

ಪದ-ಅರ್ಥ: ಹುರಿಯುರುಳೆ= ಹುರಿಯ+ಉರುಳೆ (ಸುರಳಿ), ಹಾವಲ್ಲವಾದೊಡಂ= ಹಾವಲ್ಲ+ಆದೊಡಂ (ಆದರೂ), ನೋಳ್ಪವಂ=ನೋಡುವವ, ಜಗವುಮಂತುಟೆ= ಜಗವು+ಅಂತುಟೆ (ಹಾಗೆಯೇ), ಜರೆಯದಿರು= ತಿರಸ್ಕರಿಸದಿರು, ತೋರ್ಕೆಗಳ= ತೋರಿಕೆಗಳ.

ವಾಚ್ಯಾರ್ಥ: ಹಗ್ಗದ ಸುರುಳಿ ಹಾವಲ್ಲ. ಆದರೂ ನಸುಕತ್ತಲೆಯಲ್ಲಿ ಅದು ಹರಿದಾಡಿದಂತೆ ಕಂಡಾಗ ಬೆದರಿ, ಸುರಿಸುವ ಬೆವರು ಸತ್ಯವೆ. ಅಂತೆಯೇ ಜಗತ್ತು ಸತ್ಯ. ಕಣ್ಣಿಗೆ ಕಾಣುವ ತೋರಿಕೆಗಳನ್ನು ತಿರಸ್ಕರಿಸಬೇಡ.

ವಿವರಣೆ: ಅಧ್ಯಾತ್ಮ ಚಿಂತನೆಯಲ್ಲಿ ಇದನ್ನು ‘ಸರ್ಪ-ರಜ್ಜು ನ್ಯಾಯ’ ಎನ್ನುತ್ತಾರೆ. ರಜ್ಜು ಎಂದರೆ ಹಗ್ಗ. ಹಗ್ಗಕ್ಕೂ-ಸರ್ಪಕ್ಕೂ ಕೇವಲ ಆಕಾರದಲ್ಲಿ ಸ್ವಲ್ಪ ಸಾಮ್ಯತೆ ಇದೆ. ಸಂಜೆ ನಸುಕತ್ತಲಿನ ಸಮಯದಲ್ಲಿ ದಾರಿಯಲ್ಲಿ ನಡೆದು ಹೋಗುವವನೊಬ್ಬ ಯಾವುದರ ಮೇಲೋ ಕಾಲಿಟ್ಟು, ಬೆದರಿ, ಹಾರಿ ದೂರ ನಿಂತು ಹಗ್ಗವನ್ನು ನೋಡಿ ಹಾವು ಎಂದು ಭ್ರಮಿತನಾಗುತ್ತಾನೆ. ಅಯ್ಯೋ ಅಯ್ಯೋ ಹಾವು ಎಂದು ಕೂಗುತ್ತಾನೆ. ನಾಲಿಗೆಯ ದ್ರವ ಒಣಗಿದೆ, ಮೈ ಬೆವರಿ ನಡುಗುತ್ತದೆ. ಹಾವು ತನಗೆ ಕಚ್ಚೇ ಬಿಟ್ಟಿತು ಎಂದು ಭಾವಿಸಿದ್ದಾನೆ. ಹತ್ತಿರದ ಮನೆಗಳಿಂದ ಜನ ಓಡಿ ಬಂದರು. ಕೆಲವರು ಬ್ಯಾಟರಿ ತಂದಿದ್ದರು. ‘ಏನಾಯಿತು?’ ಎಂದು ಕೇಳಿದರೆ ಆತ ರಸ್ತೆಯ ಬದಿಗೆ ಬೆರಳು ತೋರಿಸಿ, ‘ಹಾವು, ಹಾವು’ ಎನ್ನುತ್ತಿದ್ದಾನೆ. ಅವನು ಶಕ್ತಿಹೀನನಾಗಿ ಕುಸಿದು ನೆಲದ ಮೇಲೆ ಕುಳಿತಿದ್ದಾನೆ. ಜನ ಬ್ಯಾಟರಿ ಬೆಳಕಿನಿಂದ ಅತ್ತ ನೋಡಿದರೆ ಅದೊಂದು ಹಗ್ಗದ ಸುರುಳಿ. ಅವರು ಜೋರಾಗಿ ನಕ್ಕುಬಿಟ್ಟು. ‘ಸ್ವಾಮಿ ಅದಾವುದೂ ಕೃಷ್ಣಸರ್ಪವಲ್ಲ, ಹಳೆಯ, ಕತ್ತರಿಸಿದ ಹಗ್ಗ’ ಎಂದು ತೋರಿಸಿದಾಗ ಅವನ ಭ್ರಾಂತಿ ಕರಗಿ, ಪೆಚ್ಚಾಗಿ ನಕ್ಕ.

ಶ್ರೀಮದ್ ಭಾಗವತದ 11ನೇ ಸ್ಕಂಧದ, 26ನೇ ಅಧ್ಯಾಯದಲ್ಲಿ ಈ ಸರ್ಪ-ರಜ್ಜುವಿನ ಮಾತು ಸುಂದರವಾಗಿ ಬರುತ್ತದೆ.

ಕಿಮೇತಯಾ ನೋsಪಕೃತಂ ರಜ್ಜ್ಪಾವಾ ಸರ್ಪಚೇತಸ: |
ರಜ್ಜ್ಪರೂಪಾವಿದುಷೋ ಯೋsಹಂ ಯದಜಿತೇಂದ್ರಿಯ || 17 ||

‘ಹಗ್ಗವನ್ನು ಸರ್ಪವೆಂದು ತಿಳಿದು ಅದರಲ್ಲಿ ಸರ್ಪದ ಕಲ್ಪನೆಮಾಡಿ, ದು:ಖಿತನಾದವನಿಗೆ, ಆ ಹಗ್ಗ ಏನು ಮಾಡೀತು? ಸ್ವತ: ನಾನೇ ಅಜಿತೇಂದ್ರಿಯನಾದದ್ದರಿಂದ ಅಪರಾಧಿಯಾಗಿದ್ದೇನೆ’.

ಕಂಡದ್ದು ಸರ್ಪವಲ್ಲ ನಿಜ, ಆದರೆ ಬೆವೆತದ್ದು, ಹೆದರಿ ನಡುಗಿದ್ದು, ಸಂಕಟಪಟ್ಟದ್ದು ಸುಳ್ಳೇ? ಕಗ್ಗ ಅದನ್ನು ಹೇಳುತ್ತದೆ. ನಮ್ಮ ಅನುಭವ ಸತ್ಯ. ಅದನ್ನು ಮರೆಯುವುದು, ತಿರಸ್ಕರಿಸುವುದು ಸರಿಯಲ್ಲ. ಪ್ರಪಂಚ ಮಾಯೆಯೇ ಇದ್ದೀತು, ಅಧ್ಯಾತ್ಮದ ಉತ್ತುಂಗದಲ್ಲಿ. ಆದರೆ ಅನುಭವ ಪ್ರಪಂಚದಲ್ಲಿಯೇ ಬದುಕಿರುವ ಬಹುಪಾಲು ಜನರಿಗೆ ಅದು ಮಾಯೆಯಲ್ಲ. ಒಬ್ಬ ತರುಣ ಸನ್ಯಾಸಿಗೆ ಜಗತ್ತೆಲ್ಲ ಮಾಯೆ, ತನ್ನ ದೇಹವೂ ಒಂದು ಮಾಯೆ ಎಂದು ಖಚಿತವಾಗಿತ್ತಂತೆ. ಅವನಿಗೊಂದು ಶಸ್ತ್ರಚಿಕಿತ್ಸೆ ಮಾಡುವಾಗ ವೈದ್ಯರು ಅರವಳಿಕೆ ಕೊಡದೇ ದೇಹವನ್ನು ಕುಯ್ಯಲು ಹೋದಾಗ ಆತ ಹೌಹಾರಿ ನೋವು ತಡೆದುಕೊಳ್ಳಲು ಅಸಾಧ್ಯ, ಅರವಳಿಕೆ ಕೊಡಿ ಎಂದರಂತೆ. ಆಗ ವೈದ್ಯರು, ‘ಸ್ವಾಮಿ, ದೇಹ ಮಾಯೆಯಲ್ಲವೆ? ಅದಕ್ಕೇಕೆ ಚಿಂತೆ?’ ಎಂದಾಗ ಆತನಿಗೆ ದೇಹ ಸತ್ಯವೆಂದು ನಂಬಿಕೆಯಾಯಿತು.

ದೃಶ್ಯಪ್ರಪಂಚದ ಅನುಭವವನ್ನು
ತಿರಸ್ಕರಿಸುವುದು ಸಾಧ್ಯವಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.