ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಹಕ್ಕಿಯ ಬದುಕು

Last Updated 7 ಅಕ್ಟೋಬರ್ 2022, 0:00 IST
ಅಕ್ಷರ ಗಾತ್ರ

ಹಕ್ಕಿ ಮುನ್ನರಿಯುವುದೆ ತನ್ನ ಪಯಣದ ತೆರನ? |
ಇಕ್ಕುವರದಾರದನು ಕರೆದು ತಿರುಪೆಯನು? ||
ರೆಕ್ಕೆ ಪೋದಂತಲೆದು, ಸಿಕ್ಕಿದುದನುಣ್ಣುವುದು |
ತಕ್ಕುದಾವ್ರತ ನಿನಗೆ- ಮಂಕುತಿಮ್ಮ || 730 ||

ಪದ-ಅರ್ಥ: ಮುನ್ನರಿಯುವುದೆ=ಮುನ್ನ+ಅರಿಯುವುದೆ, ತೆರನ=ರೀತಿ, ಗತಿ, ಇಕ್ಕುವರದಾರದನು= ಇಕ್ಕುವರು(ನೀಡುವರು)+ಅದಾರು+ಅದನ ತಿರುಪೆಯನು=ಭಿಕ್ಷೆಯನ್ನು, ಪೋದಂತಲೆದು=ಪೋದಂತೆ(ಹೋದಂತೆ) + ಅಲೆದು, ಸಿಕ್ಕಿದುದನುಣ್ಣುವುದು = ಸಿಕ್ಕಿದುದನು+ಉಣ್ಣುವುದು.

ವಾಚ್ಯಾರ್ಥ: ಹಕ್ಕಿಗೆ ತಾನು ಮುಂದೆ ಹೀಗೆಯೇ ಹಾರಿ ಹೋಗುತ್ತೇನೆ ಎಂದು ಮೊದಲೇ ಗೊತ್ತಿದೆಯೆ? ಅದನ್ನು ಕರೆದು ಭಿಕ್ಷೆಯನ್ನು, ಆಹಾರವನ್ನು ಹಾಕುವರು ಯಾರು? ಅದು ತನ್ನ ರೆಕ್ಕೆಗಳು ಬಡಿದ ದಿಕ್ಕಿಗೆ ಹಾರಿ, ಸಿಕ್ಕಿದ್ದನ್ನು ಉಣ್ಣುವುದು. ಆ ವ್ರತ ನಿನಗೆ ತಕ್ಕದ್ದು.

ವಿವರಣೆ: ಇಲ್ಲಿ ಮತ್ತೊಂದು ಸುಂದರ ರೂಪಕವಿದೆ. ಹಗುರಾದ ಬಾಳು ಹಕ್ಕಿಯ ಬಾಳಿನಂತಿರಬೇಕು ಎನ್ನುತ್ತದೆ ಕಗ್ಗ. ಹಕ್ಕಿಗೂಡಿನಿಂದ ಹಾರುತ್ತದೆ. ಇಲ್ಲಿಗೇ ಹೋಗಬೇಕೆಂಬ ತೀರ್ಮಾನವನ್ನೇನೂ ಅದು ತೆಗೆದುಕೊಂಡಿಲ್ಲ. ಅದಕ್ಕೆ ಯಾರಾದರೂ ಕರೆದು ಆಹಾರವನ್ನು ನೀಡುತ್ತಾರೆಯೇ? ಅದಕ್ಕೇ ಅದು ತನ್ನ ರೆಕ್ಕೆಗಳನ್ನು ಬಡಿಯುತ್ತ ತೋಚಿದ ದಿಕ್ಕಿಗೆ ಸಾಗುತ್ತದೆ. ದಾರಿಯಲ್ಲಿ ಏನು ಸಿಕ್ಕಿದರೆ ಅದನ್ನು ತಿನ್ನುತ್ತದೆ. ಆದರೆ ಅದು ಸದಾ ಕಾಲ ಆನಂದವಾಗಿರುತ್ತದೆ. ಅದರ ನಿರಾಭಾರಿತ್ವವೇ ಸಂತಸದ ಮೂಲ. ಅದಕ್ಕೆ ಯಾವ ಅಪೇಕ್ಷೆಯೂ ಇಲ್ಲ, ಬಂಧವೂ ಇಲ್ಲ. ಯಾವ ಚಿಂತೆಯ, ಉದ್ದೇಶದ ಭಾರವಿಲ್ಲದೆ, ತನಗೆ ಮನಬಂದಲ್ಲಿ, ಮನಬಂದಂತೆ ಹಾರುತ್ತ ಹಗುರಾಗಿ ಬದುಕುತ್ತದೆ. ಇಂಥ ವೃತ ಮನುಷ್ಯರಿಗೂ ಒಳ್ಳೆಯದು.

ಇದು ಆಸೆ, ನಿರಾಸೆಗಳಿಲ್ಲದ, ಯಥಾರ್ಥಜೀವನದ ಬಗೆ. ಇದೊಂದು ಸಂತತ್ವದ ರೀತಿ. ಸಂತತ್ವವೆಂದರೆ ಜೀವನಕ್ಕೆ ವಿಮುಖವಾಗುವುದಲ್ಲ. ಜೀವನದಿಂದ ಅತಿಯಾಗಿ ಅಪೇಕ್ಷಿಸದೆ, ದೊರೆತದ್ದನ್ನು ಸಂತೋಷದಿಂದ ಸ್ವೀಕರಿಸುವ ಮನಸ್ಥಿತಿ. ಕೆಲವರು ಸಂಸಾರದಲ್ಲಿದ್ದು ಸನ್ಯಾಸಿಯಂತಿರುತ್ತಾರೆ ಮತ್ತೆ ಕೆಲವರು ಸನ್ಯಾಸಿಯಾಗಿದ್ದು ಸಂಸಾರಿಯಂತೆ ವ್ಯವಹರಿಸುತ್ತಾರೆ. ನಿಜವಾದ ಸಂತರು ಜ್ಞಾನಕಾರ್ಯ, ಶಕ್ತಿಕಾರ್ಯಗಳೆರಡನ್ನು ನಡೆಸಿದವರು. ವಿದ್ಯಾರಣ್ಯರು ತಪಸ್ವಿಗಳು. ಆದರೆ ಪರಿಸ್ಥಿತಿ ಬಂದಾಗ, “ಏಳು ನಾರಾಯಣ, ಕಟ್ಟು ಗ್ರಂಥವ, ಏಳು ಪಂಪಾಕ್ಷೇತ್ರಕೆ” ಎಂದು ಹೇಳಿ ಸಾಮ್ರಾಜ್ಯ ಸ್ಥಾಪನೆ ಮಾಡಿದರು. ಅದರಲ್ಲಿ ಅವರ ಅಪೇಕ್ಷೆ ಏನೂ ಇಲ್ಲ. ಅಕ್ಕ ಮಹಾದೇವಿ ಈ ಹಕ್ಕಿಯ ತರಹದ ನಿರಾಳವಾದ ಬದುಕನ್ನು ನಡೆಸುವುದು ಹೇಗೆಂದು ತಿಳಿಸುತ್ತಾಳೆ. ಹಸಿವಾದೊಡೆ ಭಿಕ್ಷಾನ್ನಗಳುಂಟು, ತೃಷೆಯಾದರೆ ಕೆರೆ ಹಳ್ಳ ಬಾವಿಗಳುಂಟು, ಶಯನಕ್ಕೆ ಹಾಳು ದೇಗುಲಗಳುಂಟು, ಚೆನ್ನಮಲ್ಲಿಕಾರ್ಜುನ ಆತ್ಮಸಂಗಾತಕ್ಕೆ ನೀನೆನಗುಂಟು. ಇದು ಹಕ್ಕಿಯ ತೆರದ ಬಿಡುಗಡೆಯಾದ ಜೀವನ. ಈ ವ್ರತ ನಮಗೆ ಒಳ್ಳೆಯದು ಎನ್ನುತ್ತದೆ ಕಗ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT