ಗುರುವಾರ , ಏಪ್ರಿಲ್ 22, 2021
28 °C

ಹೆಂಡತಿಯ ಶಕ್ತಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

Prajavani

ಒಂದು ಬಾರಿ ಬುದ್ಧ ತನ್ನ ಐದುನೂರು ಶಿಷ್ಯರೊಡನೆ ಅನಾಥಪಿಂಡಕನ ಮನೆಗೆ ಬಂದ. ಹಿರಿಯ ಶ್ರೇಷ್ಠಿ ಬುದ್ಧನ ಮಾತುಗಳನ್ನು ಕೇಳುತ್ತಿದ್ದಾಗ ಮನೆಯಲ್ಲಿ ಯಾರೋ ಜೋರಾಗಿ ಮಾತನಾಡುವ, ಜಗಳವಾಡುವ ಧ್ವನಿ ಕೇಳಿಸಿತು. ಉಪದೇಶಗಳನ್ನು ಕೇಳಲಾಗದಷ್ಟು ಪ್ರಬಲವಾಗಿತ್ತು ಒಳಗಿನ ಧ್ವನಿ. “ಏನದು ಸದ್ದು?” ಎಂದು ಬುದ್ಧ ಕೇಳಿದಾಗ, ಮಹಾಶ್ರೇಷ್ಠಿ ಅನಾಥಪಿಂಡಕ ತಲೆತಗ್ಗಿಸಿ, “ಅದು ನನ್ನ ಸೊಸೆ ಸುಜಾತಾ ಜಗಳವಾಡುವ ಸದ್ದು” ಎಂದ.

ಸುಜಾತಾ ತುಂಬ ದೊಡ್ಡ ಮನೆತನದಿಂದ ಬಂದವಳು. ಈ ಕಾರಣದಿಂದ ಆಕೆಗೆ ಅತೀವ ಅಭಿಮಾನ, ಗರ್ವ, ಅಹಂಕಾರ. ಆಕೆ ಯಾವಾಗಲೂ ಎಲ್ಲರಲ್ಲೂ ತಪ್ಪು ಕಂಡುಹಿಡಿದು ಎತ್ತರದ ಧ್ವನಿಯಲ್ಲಿ ಜಗಳವಾಡುವಳು. ಆಕೆಗೆ ಅತ್ತೆ- ಮಾವಂದಿರ ಬಗೆಗಾಗಲೀ, ಗಂಡನ ಬಗೆಗಾಗಲೀ, ಪರಿವಾರದವರ ಬಗ್ಗೆಯಾಗಲೀ ಯಾವ ಗೌರವವೂ ಇರಲಿಲ್ಲ. ಮನೆಯ ಆಳುಗಳನ್ನು ಹೆದರಿಸಿ, ಹೊಡೆದು ಶಿಕ್ಷಿಸುತ್ತಿದ್ದಳು. ಶ್ರೇಷ್ಠಿಯ ಮಾತನ್ನು ಕೇಳಿ ಬುದ್ಧ, “ಆಕೆಯನ್ನು ಕರೆಯಿರಿ” ಎಂದ. ಆಕೆ ಹೊರಗೆ ಬಂದಾಗ, “ತಾಯಿ, ಸುಜಾತಾ, ಪ್ರಪಂಚದಲ್ಲಿ ಏಳು ತರಹದ ಹೆಂಡತಿಯರಿರುತ್ತಾರೆ. ನೀನು ಅದರಲ್ಲಿ ಯಾವ ರೀತಿಯವಳು?” ಎಂದು ಕೇಳಿದ. ಆಕೆ, “ಸ್ವಾಮೀ, ಆ ಏಳು ರೀತಿಗಳು ಯಾವವೆಂಬುದು ನನಗೆ ತಿಳಿಯದು” ಎಂದಳು. ಆಗ ಬುದ್ಧ ಏಳು ರೀತಿಯ ಹೆಂಡತಿಯರ ಬಗ್ಗೆ ಹೇಳಿದ.

“ಮೊದಲನೆಯವಳು ವಿಪರೀತ ಕೋಪಿಷ್ಠೆ, ಪರಪುರುಷನನ್ನು ಬಯಸುವವಳು, ಗಂಡನ ಬಗ್ಗೆ ತಿರಸ್ಕಾರ ಹೊಂದಿದವಳು, ದಾಸ-ದಾಸಿಯರನ್ನು ಹೊಡೆಯುವವಳು. ಅವಳನ್ನು “ವಧಕ ಭಾರ್ಯೆ” ಎನ್ನುತ್ತಾರೆ.’
ಎರಡನೆಯವಳು ಗಂಡ ಸಂಪಾದಿಸಿದ ಹಣದಲ್ಲಿ ಸ್ವಲ್ಪವಾದರೂ ಕದಿಯುವವಳು ಅವಳನ್ನು “ಚೋರಭಾರ್ಯೆ” ಎನ್ನುತ್ತಾರೆ.

ಮೂರನೆಯವಳು ಸೋಮಾರಿ, ಸದಾ ಕಾಲ ತಿಂದು ಬೊಜ್ಜು ಬೆಳೆಸಿಕೊಳ್ಳುತ್ತಾಳೆ, ಅವಳು ಕ್ರೂರಿ, ಕೆಟ್ಟ ಮಾತುಗಳನ್ನಾಡುವವಳು. ಅವಳು “ಆರ್ಯಾ ಭಾರ್ಯೆ ಎನ್ನಿಸಿಕೊಳ್ಳುತ್ತಾಳೆ.

ನಾಲ್ಕನೆಯವಳು ಸದಾ ಬೇರೆಯವರ ಒಳಿತನ್ನೇ ಬಯಸುವವಳು. ತಾಯಿ ತನ್ನ ಮಗುವನ್ನು ಕಾಪಾಡುವಂತೆ ಗಂಡನನ್ನು ಕಾಪಾಡುತ್ತಾಳೆ. ಅವಳು “ಮಾತಾ ಭಾರ್ಯೆ”.

ಐದನೆಯವಳು ಮನೆಯಲ್ಲಿ ತಂಗಿ ತನ್ನ ಹಿರಿಯಕ್ಕನನ್ನು ಯಾವ ಪ್ರೀತಿಯಿಂದ ನೋಡಿಕೊಳ್ಳುತ್ತಾಳೋ ಅದೇ ಪ್ರೀತಿಯಿಂದ, ಗೌರವದಿಂದ ಗಂಡನನ್ನು ನೋಡಿಕೊಳ್ಳುವವಳು. ಅವಳನ್ನು“ಭಗಿನೀ ಭಾರ್ಯೆ” ಎನ್ನುತ್ತಾರೆ.
ಆರನೆಯವಳು, ಒಬ್ಬ ಪ್ರಿಯಳಾದ ಸ್ನೇಹಿತೆ, ಬಹುಕಾಲದ ನಂತರ ಅಕಸ್ಮಾತ್ತಾಗಿ ದೊರೆತ ಆತ್ಮೀಯ ಗೆಳತಿಯನ್ನು ಯಾವ ಪ್ರಸನ್ನತೆಯಿಂದ ಕಾಣುತ್ತಾಳೋ ಅದೇ ಸುಖದಿಂದ ಗಂಡನನ್ನು ನೋಡಿಕೊಳ್ಳುವವಳು “ಸುಖೀ ಭಾರ್ಯೆ”.

ಏಳನೆಯವಳು ತುಂಬ ಶಾಂತವಾಗಿರುವವಳು. ಎಂಥ ಪ್ರಚೋದನೆ ಬಂದರೂ ತಾಳ್ಮೆಯನ್ನು ಕಳೆದುಕೊಳ್ಳದವಳು, ಯಾರನ್ನೂ ಸಿಟ್ಟಿನಿಂದ ಶಿಕ್ಷಿಸದವಳು, ಎಲ್ಲರನ್ನೂ ನಗುನಗುತ್ತ ಮುನ್ನಡೆಸಿಕೊಂಡು ಹೋಗುವವಳು. ಇವಳು “ದಾಸಿ ಭಾರ್ಯೆ”.

ಈ ಏಳು ರೀತಿಯ ಹೆಂಡತಿಯರಲ್ಲಿ “ವಧಕಾ’, “ಚೋರ” ಮತ್ತು “ಆರ್ಯ” ಭಾರ್ಯೆಯರು ನರಕದಲ್ಲೇ ನರಳುತ್ತಾರೆ. ಉಳಿದ ನಾಲ್ಕು ಭಾರ್ಯೆಯರು ಸ್ವರ್ಗದಲ್ಲಿ ಹುಟ್ಟಿಬಂದು ಆಯುಷ್ಯ ಕಳೆದ ಮೇಲೆ ಸ್ವರ್ಗದಲ್ಲೇ ನೆಲೆಸುತ್ತಾರೆ”. “ಈ ರೀತಿಯ ಭಾರ್ಯೆಯರಲ್ಲಿ ನೀನು ಯಾವುದನ್ನು ಆರಿಸಿಕೊಳ್ಳುತ್ತೀ?” ಎಂದು ಬುದ್ಧ ಕೇಳಿದಾಗ ಆಕೆ ಮೃದುವಾಗಿ “ದಾಸಿ ಭಾರ್ಯೆ” ಎಂದಳು. ಮುಂದೆ ಹಾಗೆಯೇ ಬದುಕಿ ಮನೆತನದ ಸಂಸ್ಕೃತಿಯ ಕಲಶವಾದಳು.

ಬುದ್ಧ ಹೇಳಿದ, “ಮನೆಗೆ ಶ್ರೀಮಂತಿಕೆಯನ್ನು, ಅಧಿಕಾರವನ್ನು ಗಂಡಸು ತರಬಹುದು.ಆದರೆ ಸಂಸ್ಕೃತಿಯನ್ನು, ಗಂಡನಲ್ಲಿ ಮನುಷ್ಯತ್ವವನ್ನು ತರುವವಳು ಹೆಂಡತಿ”.‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.