ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯ ಹೆಗ್ಗಳಿಕೆ

ಬೆರಗಿನ ಬೆಳಕು
Last Updated 19 ಡಿಸೆಂಬರ್ 2019, 18:46 IST
ಅಕ್ಷರ ಗಾತ್ರ

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ಬಂಗಾರದ ಜಿಂಕೆಯಾಗಿ ಹುಟ್ಟಿದ್ದ. ಆ ಜಿಂಕೆ ಅತ್ಯಂತ ಸುಂದರವಾಗಿತ್ತು. ಅದರ ಕಾಲುಗಳು ಅರಗಿನಿಂದ ಮಾಡಿದಂತೆ ಹೊಳೆಯುತ್ತಿದ್ದವು. ಕೊಂಬುಗಳು ಬೆಳ್ಳಿಯ ಕಹಳೆಗಳಂತೆ ಮಿನುಗುತ್ತಿದ್ದವು. ಕಣ್ಣುಗಳು ದೀಪಗಳಂತೆ ಹೊಳೆಯುತ್ತಿದ್ದವು. ಅದರ ಮುಖ ಮುಳುಗುವ ಸೂರ್ಯಬಿಂಬದ ಅಂಚಿನಂತೆ ಪ್ರಕಾಶಮಾನವಾಗಿತ್ತು. ಬೋಧಿಸತ್ವ ಜಿಂಕೆಯ ಹೆಂಡತಿಯೂ ಅತ್ಯಂತ ಸುಂದರಳಾಗಿದ್ದಳು. ಎರಡೂ ಜಿಂಕೆಗಳು ತುಂಬ ಅನ್ಯೋನ್ಯವಾಗಿದ್ದವು. ಬೋಧಿಸತ್ವ ಜಿಂಕೆ ಎಂಬತ್ತು ಸಾವಿರ ಜಿಂಕೆಗಳಿಗೆ ನಾಯಕನಾಗಿತ್ತು.

ಒಂದು ದಿನ ಬೋಧಿಸತ್ವ ಜಿಂಕೆ ಪರಿವಾರದೊಂದಿಗೆ ಕಾಡಿನಲ್ಲಿ ಹೊರಟಿತ್ತು. ಮುಂದೆ ಬೇಡರವನು ಚರ್ಮದ ಬಲೆಯನ್ನು ಹರಡಿ ಕಾಯುತ್ತಿದ್ದ. ಬೋಧಿಸತ್ವ ಜಿಂಕೆ ಅದನ್ನು ತಿಳಿಯದೆ ಕಾಲಿಟ್ಟಾಗ ಅದರ ಕಾಲು ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿತು. ಬಲೆಯಿಂದ ಕಾಲನ್ನು ಬಿಡಿಸಿಕೊಳ್ಳಲು ಶಕ್ತಿ ಹಾಕಿ ಎಳೆಯಿತು. ಅದು ಬಹಳ ಬಲವಾದ ಬಲೆಯಾದ್ದರಿಂದ ಕಾಲು ಹೊರ ಬರದೆ ಕಾಲಿನ ಚರ್ಮ ಕಿತ್ತು ಬಂದಿತು. ಮತ್ತಷ್ಟು ಎಳೆದಾಗ ನರಗಳು ಹರಿದು ಬಲೆಯ ಚರ್ಮ ಎಲುಬಿಗೆ ಸಿಕ್ಕಿಹಾಕಿಕೊಂಡಿತು. ಅಸಾಧ್ಯವಾದ ನೋವಿನಿಂದ ಬೋಧಿಸತ್ವ ಜಿಂಕೆ ಕೂಗಿಕೊಂಡಿತು. ಅದರ ಆರ್ತನಾದವನ್ನು ಕೇಳಿ ಹಿಂದೆ ಗುಂಪಾಗಿ ಬರುತ್ತಿದ್ದ ಜಿಂಕೆಗಳು ಏನೋ ಆಪತ್ತು ಬಂದಿರಬೇಕೆಂದು ಕಾಡಿನೆಡೆಗೆ ಓಡತೊಡಗಿದವು.

ಬಹಳ ಮುಂದೆ ಹೋದ ಮೇಲೆ ರಾಣಿ ಜಿಂಕೆ ತನ್ನ ಪಕ್ಕದಲ್ಲಿ ಬೋಧಿಸತ್ವ ಜಿಂಕೆ ಇಲ್ಲದಿದ್ದುದನ್ನು ಕಂಡು ಅದಕ್ಕೇ ಏನಾದರೂ ಆಪತ್ತು ಬಂದಿರಬೇಕೆಂದು ಮರಳಿ ಓಡಿತು. ಬಲೆಯಲ್ಲಿ ಸಿಕ್ಕ ಗಂಡನನ್ನು ನೋಡಿ ಆತಂಕವಾಯಿತು. ಗಂಡನಿಗೆ ಹೇಳಿತು, “ನೀನು ಅತ್ಯಂತ ಬಲಶಾಲಿ. ನಿನ್ನ ಬಲವನ್ನೆಲ್ಲ ಹಾಕಿ ಎಳೆ, ಹಲ್ಲಿನಿಂದ ಬಲೆಯನ್ನು ಕಚ್ಚಿ ಹಾಕು. ನಾನು ನಿನ್ನನ್ನು ಬಿಟ್ಟು ಹೋಗಲಾರೆ”. ಬೋಧಿಸತ್ವ ಜಿಂಕೆ ಹೇಳಿತು, “ಪ್ರಿಯೆ, ನಾನು ಇದುವರೆಗೂ ಇಷ್ಟು ಬಲಶಾಲಿಯಾದ ಬಲೆಯನ್ನು ಕಂಡಿಲ್ಲ. ಈಗಾಗಲೇ ನನ್ನ ಕಾಲಿನ ಚರ್ಮ, ಮಾಂಸ, ನರಗಳು ಕತ್ತರಿಸಿ ಹೋಗಿ ಅಶಕ್ತನಾಗಿದ್ದೇನೆ. ನಾನು ಇದರಿಂದ ಪಾರಾಗಲಾರೆ”. ಆಗ ಆತನ ಮುದ್ದಿನ ಹೆಂಡತಿ. “ಭಯಪಡಬೇಡಿ. ನನ್ನ ಪ್ರಾಣವನ್ನು ಕೊಟ್ಟಾದರೂ ನಿಮ್ಮ ಪ್ರಾಣವನ್ನು ಉಳಿಸುತ್ತೇನೆ. ತಾವು ರಾಜರು, ಯಾವಾಗಲೂ ಚೆನ್ನಾಗಿರಬೇಕು” ಎಂದಿತು. ಆಗ ಕೈಯಲ್ಲಿ ಖಡ್ಗ ಹಿಡಿದುಕೊಂಡು ಬೋಧಿಸತ್ವ ಜಿಂಕೆಯ ಕಡೆಗೆ ಧಾವಿಸುತ್ತಿರುವ ಬೇಡ ಯಮಧರ್ಮನಂತೆ ಬರುತ್ತಿದ್ದ. ಹೆಂಡತಿ ಜಿಂಕೆ ಓಡಿಹೋಗಿ ಅವನ ಮುಂದೆ ನಿಂತಿತು. “ಅಣ್ಣ, ನಿನಗೆ ಜಿಂಕೆಯ ಮಾಂಸ ಬೇಕು ತಾನೇ? ದಯವಿಟ್ಟು ಎಲೆಗಳನ್ನು ಹಾಸು. ನಾನು ಸಿದ್ಧಳಾಗಿ ನಿಂತಿದ್ದೇನೆ. ನನ್ನನ್ನು ಕೊಂದು ಮಾಂಸವನ್ನು ಮನೆಗೆ ತೆಗೆದುಕೊಂಡು ಹೋಗು. ನನ್ನ ಗಂಡನನ್ನು ಬಿಟ್ಟು ಬಿಡು. ಆತ ನಮಗೆ ರಾಜಮಾತ್ರನಲ್ಲ, ನಮಗೆಲ್ಲ ದೇವರಿದ್ದಂತೆ” ಎಂದು ಅವನ ಮುಂದೆ ನಿಂತು ಕಣ್ಣೀರು ಸುರಿಸಿತು. ಅದನ್ನು ಕಂಡು ಬೇಡ ಬೆರಗಾದ. ಮನುಷ್ಯರಲ್ಲೂ ಕಾಣದ ಅಂತ:ಕರಣ, ಪ್ರೀತಿಯನ್ನು ಪ್ರಾಣಿಗಳಲ್ಲಿ ನೋಡಿದಾಗ ಅವನ ಮನಸ್ಸು ಕರಗಿತು. “ತಂಗೀ, ನಿನ್ನ ನಿವ್ರ್ಯಾಜ ಅಂತ:ಕರಣವನ್ನು ಕಂಡು ನನಗೆ ನಿನ್ನ ಬಗ್ಗೆ ಗೌರವ ಬಂದಿದೆ. ನಿನ್ನ ಗಂಡನಿಗೆ ಏನನ್ನು ಮಾಡದೆ ಬಿಟ್ಟುಬಿಡುತ್ತೇನೆ. ಬಹುಕಾಲ ಸಂತೋಷವಾಗಿ ಬಾಳಿ ಬದುಕಿ”. ಹೀಗೆ ಹೇಳಿ ತನ್ನ ಬಲೆಯನ್ನು ತಾನೇ ಕತ್ತರಿಸಿ, ಜಿಂಕೆಯ ಕಾಲಿಗೆ ಔಷಧಿ ಹಾಕಿ ಕಳುಹಿಸಿದ.

ಅಂತ:ಕರಣ, ಪ್ರೀತಿಗಳು ಕ್ರೌರ್ಯ, ದುಷ್ಟತನಕ್ಕಿಂತ ಹೆಚ್ಚು ಪ್ರಭಾವಶಾಲಿಯಾದ ಉಪಕರಣಗಳು. ಬಲದಿಂದ ಆಗದ್ದು ಪ್ರೀತಿಯಿಂದ ಸಾಧಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT