ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಸಕ್ಕೆ ಪ್ರತಿಮೋಸ

Last Updated 22 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಹಿಂದೆ ತಂಬರಾಜನೆಂಬುವನು ವಾರಾಣಸಿಯನ್ನು ಆಳುತ್ತಿದ್ದ. ಅವನ ಹೆಂಡತಿಯ ಹೆಸರು ಸುಗಂಧಿ. ಆಕೆ ತುಂಬ ಚೆಲುವೆ. ಆ ಸಮಯದಲ್ಲಿ ಬೋಧಿಸತ್ವ ಗರುಡವಂಶದಲ್ಲಿ ಹುಟ್ಟಿದ್ದ. ಆತ ವಾರಾಣಸಿಯಿಂದ ಬಹಳ ದೂರದಲ್ಲಿ ಸೆರುಮ ದ್ವೀಪವೆಂಬ ಪ್ರದೇಶದಲ್ಲಿ ವಾಸವಾಗಿದ್ದ. ಆತನ ಮನೆ ಗರುಡಭವನ. ಆತ ತನ್ನ ಮಾಯಾಶಕ್ತಿಯಿಂದ ವಾರಾಣಸಿಗೆ ಆಗಾಗ ಹಾರಿಬಂದು ತರುಣನ ವೇಷದಲ್ಲಿ ತಂಬರಾಜನ ಸ್ನೇಹಮಾಡಿಕೊಂಡು ಜೂಜಾಟ ಆಡುತ್ತಿದ್ದ. ಈ ಸುಂದರ ತರುಣನ ಆಟ ನೋಡಲು ಬಂದ ಸುಗಂಧಿ ಅವನ ರೂಪಕ್ಕೆ ಮರುಳಾದಳು. ಆತನೂ ಆಕೆಯ ಕಣ್ಣಂಚಿನ ಸೆಳೆತಕ್ಕೆ ಸಿಕ್ಕಿಬಿದ್ದ. ಒಂದು ದಿನ ತನ್ನ ಮಾಯೆಯಿಂದ ನಗರದಲ್ಲಿ ಕತ್ತಲೆಯನ್ನು ಕವಿಸಿಬಿಟ್ಟು ಆಕೆಯನ್ನು ಎತ್ತಿಕೊಂಡು ಆಕಾಶಮಾರ್ಗವಾಗಿ ಗರುಡಭವನಕ್ಕೆ ಬಂದು ಬಿಟ್ಟ. ರಾಣಿ ಎಲ್ಲಿಗೆ ಹೋದಳೆಂಬುದು ಯಾರಿಗೂ ತಿಳಿಯಲಿಲ್ಲ. ರಾಜನ ಆಸ್ಥಾನದಲ್ಲಿ ಗಂಧರ್ವನೊಬ್ಬನಿದ್ದ. ರಾಣಿಯನ್ನು ಹುಡುಕುವ ಕೆಲಸವನ್ನು ರಾಜ ಅವನಿಗೆ ಒಪ್ಪಿಸಿದ.

ಗರುಡರಾಜ ಸುಗಂಧಿಯನ್ನು ರಮಿಸಿ, ವಾರಾಣಸಿಗೆ ಬಂದು ತಂಬರಾಜನ ಜೊತೆಗೆ ಜೂಜಾಟವನ್ನು ಮುಂದುವರೆಸಿದ. ರಾಜನಿಂದ ಅಪ್ಪಣೆ ಪಡೆದು ಗಂಧರ್ವ ರಾಣಿಯನ್ನು ಹುಡುಕುತ್ತ ಭರೂಚಕ್ಕೆ ಬಂದ. ಅಲ್ಲಿಂದ ನಾವೆಗಳು, ಹಡಗುಗಳು ಸ್ವರ್ಣಭೂಮಿಗೆ ಹೋಗುತ್ತಿದ್ದವು. ರಾಣಿಯನ್ನು ಅಲ್ಲಿ ಹುಡುಕಬೇಕೆಂದು ಆತ ನಾವೆಯೊಂದನ್ನು ಏರಿದ. ಅವನು ಗಂಧರ್ವನೆಂದು ತಿಳಿದಾಗ ನಾವೆಯ ಯಜಮಾನ ಅವನಿಗೆ ಹಾಡಲು ಒತ್ತಾಯಿಸಿದ. ಗಂಧರ್ವ ಹೇಳಿದ, “ಬೇಡ, ನಾನು ನೌಕೆಯಲ್ಲಿದ್ದಾಗ ಹಾಡಿದರೆ ಸಮುದ್ರದ ಜಲಚರಗಳು ತುಂಬ ಉತ್ಸಾಹದಿಂದ ಹಾರಾಡತೊಡಗುತ್ತವೆ. ನೌಕೆಗೆ ತೊಂದರೆಯಾದರೂ ಆಗಬಹುದು”. “ಏನಾದರೂ ಸರಿ, ನೀನು ಹಾಡಲೇಬೇಕು” ಎಂದು ಎಲ್ಲರೂ ಒತ್ತಾಯಿಸಿದರು. ಸರಿ, ಗಂಧರ್ವ ಹಾಡತೊಡಗಿದ. ಸ್ವಲ್ಪ ಹೊತ್ತಿಗೆ ಸಮುದ್ರದ ಮೀನುಗಳು, ತಿಮಿಂಗಲಗಳು ಉತ್ಸಾಹದಿಂದ ಚಂಚಲವಾದವು. ಒಂದು ತಿಮಿಂಗಲ ಹಾರಿ ನೌಕೆಯ ಮಧ್ಯದಲ್ಲಿ ಬಿತ್ತು. ಆಗ ನೌಕೆ ಮುರಿದು ಜನರೆಲ್ಲ ನೀರಿಗೆ ಬಿದ್ದರು. ಗಂಧರ್ವನ ಕೈಗೆ ಒಂದು ದೊಡ್ಡ ಹಲಗೆ ಸಿಕ್ಕಿತು. ಗಾಳಿಗೆ ಅದು ತೇಲುತ್ತ ಸೆರುಮ ದ್ವೀಪವನ್ನು ಸೇರಿತು. ಅಲ್ಲಿ ಆತ ಗರುಡಭವನವನ್ನು ಪ್ರವೇಶಿಸಿದಾಗ ಸುಗಂಧಿಯನ್ನು ಕಂಡ. ಆಗ ಗರುಡರಾಜ ಮನೆಯಲ್ಲಿ ಇರಲಿಲ್ಲ. ಆಕೆ ಗಂಧರ್ವನಿಗೆ ಅತ್ಯಂತ ಪ್ರೀತಿಯಿಂದ ಸೇವೆ ಮಾಡಿದಳು. ಆಕೆ ಗಂಧರ್ವನನ್ನು ಸೇವಿಸುತ್ತ ಗರುಡರಾಜ ಬರುವಾಗ ಅವನನ್ನು ಮುಚ್ಚಿ ಇಡುತ್ತಿದ್ದಳು. ಒಂದು ದಿನ ಸಮುದ್ರ ತೀರದಲ್ಲಿ ಗರುಡರಾಜ ಈ ಗಂಧರ್ವನನ್ನು ಕಂಡ. ಇಲ್ಲಿಗೇಕೆ ಬಂದೆ ಎಂದು ಕೇಳಿದ. ಅದಕ್ಕೆ ಪ್ರತಿಯಾಗಿ ಗಂಧರ್ವ ಒಂದು ಹಾಡನ್ನು ಹಾಡಿ ಅವರಲ್ಲಿ ಆದದ್ದನ್ನು ತಿಳಿಸಿದ, “ಗರುಡರಾಜ, ನಾನು ಬಂದದ್ದು ಸುಗಂಧಿಯನ್ನು ಹುಡುಕಿಕೊಂಡು. ಆಕೆಯನ್ನು ಗರುಡಭವನದಲ್ಲಿ ಕಂಡೆ. ಆಕೆ ನನಗೆ ಪ್ರೇಮದಿಂದ ಸುಗಂಧ ಲೇಪನ ಮಾಡಿ ಅನ್ನ, ವಸ್ತ್ರ, ಅಲಂಕಾರಗಳನ್ನು ಕೊಡುವುದಲ್ಲದೆ ತನ್ನನ್ನೇ ಅರ್ಪಿಸಿಕೊಂಡು ಸೇವೆ ಮಾಡಿದಳು” ಎಂದ. ಗರುಡರಾಜನಿಗೆ ಕೆನ್ನೆಗೆ ಹೊಡೆದಂತಾಯಿತು. ಮೋಸದಿಂದ ಎತ್ತಿಕೊಂಡು ಬಂದ ಹೆಣ್ಣು ತನಗೂ ಮೋಸ ಮಾಡಿದಳು ಎಂಬುದು ತಿಳಿದು ಅಕೆಯನ್ನು ಮತ್ತೆ ತಂಬರಾಜನಿಗೆ ಒಪ್ಪಿಸಿ ಅಲ್ಲಿಂದ ಹೊರಟುಹೋದ.

ಮೋಸ ಮಾಡಿದಾಗ ಸಂತೋಷವೆನ್ನಿಸಬಹುದು, ಲಾಭವೂ ಅಗಬಹುದು. ಆದರೆ ಅದು ಮುಂದೆ ಬಡ್ಡಿಸಹಿತವಾಗಿ ನಿಮಗೆ ಮೋಸವನ್ನು ಮಾಡದೇ ಬಿಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT